ಒಲವಿನ ಬೇಗೆಯ ಬೀಸುಗೋಲಿನ ಬಾಸಾಳಗಳ ತಾಳಲಾರೆ ಬಾರೆ
ಮನ್ಮಥನ ಚೆಂದುಟಿ ನಿನ್ನ ಚೆನ್ನೈದಿಲೆ ಮೈಯನೆಲ್ಲ
ಮುದ್ದಿಟ್ಟು ರಂಗೇರಿಸಿದೆ
ಭಾವೋದ್ವೇಗದ ಸೆಳೆಮಿಂಚು
ಉಕ್ಕಿಹರಿದು ಬಾಯಿ ಕಣ್ಣುಗಳ ಮುದ್ರಿಸಿದೆ
ನರನರಗಳನುದ್ರೇಕಿಸಿದೆ
ಮದಿರೆಯ ಮತ್ತೊಂದು
ಮದನನ ಮುದವೊಂದು ಹದವಾಗಿದೆ ಬಾ
ರಸಜೇನುಂಡ ಎದೆವೊಲ
ಹಾಡಿ ಹಾಡಿ ಪ್ರೇಮಾಲಾಪವ
ದಣಿದು ಮಾತುಮೀರಿ ಮೂಕವಾಗಿ ನಿನಗೆ ಶರಣಾಗಿದೆ ವೀಣೆ
ಎನ್ನ ಹೃದಯಗಾನದೆದುರು ಅದು ಸಪ್ಪೆ ಕಣೇ,
ನಿನ್ನೆಯಳಿದು ಹೂಳಿಹೋಗಿದೆ
ನಾಳೆಯುದಿಸಿ ಬರುವುದೋ ಬಾರದೋ!
ನನ್ನ ನಿನ್ನ ಕೈಯೊಳಗಿದೆ ಇಂದಿನೀ ಚಣ
ಸುರಲೋಕವ ಮೀರಿಸುವ ಸುರೆಯಿದೆ
ಮೇದಿನಿಯ ಮೋದವನೊತ್ತೆಗೊಂಡ ಮಧುವಿದೆ ಇಲ್ಲೆ ಈಗನೀಂಟು ಬಾ
ಇದೆ ಇದೇ ಅಮರಸೊದೆ ಅಮರಲೋಕವೆಲ್ಲಿಹುದೋ?
ಅದರಾಸೆನೇಣಿಗೇಕೆ ಕೊರಳ ಕೊಡುವೆ
ನರಕವೂ ಅಷ್ಟೆ ಈಗನು ಕಳಕೊಂಡರೆ ನರಕವಷ್ಟೆ
ತೆರೆ ಬಾಯಿ ಮಧುವನೀಂಟುವೆ
ತೆರೆ ಕಣ್ಣು ಎದೆಗಿಳಿಯುವೆ ಜೇನಾಗಿ
ತೆರೆಯೆದೆಯ ಒಂದಾಗಿ ಕೂಡುವೆ ನಾನೀ ಭೇದ ನೀಗಿ
*****

Latest posts by ವೃಷಭೇಂದ್ರಾಚಾರ್‍ ಅರ್ಕಸಾಲಿ (see all)