ಒಲವೇ… ಭಾಗ – ೧೨

ಆಕೆಯ ಪ್ರಶ್ನೆಯಿಂದ ತುಂಬಾ ಆಶ್ಚರ್ಯ ಹಾಗೂ ಕಳವಳಗೊಂಡ ನಿಖಿಲ್ ಇಲ್ಲ. ನಾನು ಯಾರನ್ನೂ ಪ್ರೀತಿ ಮಾಡ್ಲಿಲ್ಲ. ನೀನು ಯಾರನ್ನಾದರು ಪ್ರೀತಿ ಮಾಡಿದ್ದೀಯ? ಪ್ರತಿಯಾಗಿ ಕೇಳಿದ.

“ಹೌದು. ಪ್ರೀತಿ ಮಾಡಿದ್ದೆ”.

ಆಕೆಯ ಮಾತು ಕೇಳಿ ನಿಖಿಲ್‌ಗೆ ಒಂದುಕ್ಷಣ ಆಕಾಶವೇ ಕಳಚಿ ಬಿದ್ದಂತಾಯಿತಾದರೂ ಸುಧಾರಿಸಿಕೊಂಡು ಆ ಹುಡುಗ ಯಾರು? ಎಂದು ಕುತೂಹಲದಿಂದ ಕೇಳಿದ.

ಆ ಹುಡುಗನ ವಿಚಾರ ಇಲ್ಲಿ ಬೇಕಾಗಿಲ್ಲ. ಒಂದು ಹುಡುಗನನ್ನ ಪ್ರೀತಿ ಮಾಡಿದ್ದೆ ಅಷ್ಟೆ. ನೀನೇನು ಭಯ ಪಡ್ಬೇಡ. ನಡೆಯಬಾರದಂತದ್ದೇನು ನಡೆದಿಲ್ಲ. ಈ ವಿಚಾರ ಇವತ್ತಲ್ಲದಿದ್ದರೂ ನಾಳೆಯಾದರೂ ಬೆಳಕಿಗೆ ಬಂದೇ ಬತದೆ. ಮದ್ವೆಗೂ ಮುಂಚೆ ಎಲ್ಲವನ್ನು ಹೇಳಿಕೊಂಡ್ರೆ ಒಳ್ಳೆಯದ್ದು ಅಂತ ನಿನ್ಗೆ ಹೇಳ್ದೆ. ಒಂದ್ವೇಳೆ ನಿನ್ಗೆ ನನ್ನ ಇಷ್ಟ ಇಲ್ದೆ ಇದ್ರೆ ಈ ಕ್ಷಣದಲ್ಲಿಯೇ ಬಿಟ್ಟು ಹೋಗ್ಬೊಹುದು. ಅಂದಳು.

ಇಂತಹ ಸ್ಫುರದ್ರೂಪಿ ಹುಡುಗಿ ಮತ್ತೆಲ್ಲಿ ಸಿಗಲು ಸಾಧ್ಯ? ತಾನು ಕೂಡ ನಾಲ್ಕೈದು ಹುಡುಗಿಯರ ಪ್ರೀತಿಯಲ್ಲಿ ಮುಳುಗೆದ್ದು ಬಂದವನು. ಆದರೆ, ಆ ವಿಷಯವನ್ನು ಬಚ್ಚಿಟ್ಟಿದ್ದೇನೆ ಅಷ್ಟೆ. ಆದರೆ, ಅಕ್ಷರ ಎಲ್ಲವನ್ನು ಮುಕ್ತವಾಗಿ ಹೇಳಿಕೊಂಡಿದ್ದಾಳೆ. ಅವಳ ಮನಸ್ಸು ನಿರ್ಮಲವಾಗಿದೆ. ಇಲ್ಲದಿದ್ದರೆ ಇಂತಹ ವಿಷಯವನ್ನ ಯಾವುದೇ ಹುಡುಗಿಯೂ ಕೂಡ ತೆರೆದಿಡೋದಕ್ಕೆ ಹೋಗೋದಿಲ್ಲ. ಈಗಿನ ಕಾಲದಲ್ಲಿ ಲವ್ ಮಾಡದ ಹುಡುಗಿಯರು ಎಲ್ಲಿ ಸಿಗೋದಕ್ಕೆ ಸಾಧ್ಯ? ಅಂದುಕೊಂಡ ನಿಖಿಲ್ ಅಕ್ಷರಳ ಕಡೆಗೆ ನೋಟ ಬೀರಿದ.

ನೀನು ಈ ಹಿಂದೆ ಹೇಗೆ ಇದ್ದೆ ಅನ್ನೋದು ನನ್ಗೆ ಮುಖ್ಯ ಅಲ್ಲ. ಮುಂದೆ ನನ್ನೊಂದಿಗೆ ಹೇಗೆ ಇತಿಯ ಅನ್ನೋದು ಮುಖ್ಯ. ಈ ಹಿಂದೆ ನಡೆದ ಘಟನೆಯನ್ನೆಲ್ಲ ಮರೆತು ನನ್ನೊಂದಿಗೆ ಜೀವನ ನಡೆಸೋದಕ್ಕೆ ನಿನ್ಗೆ ಇಷ್ಟವಿದ್ರೆ ಮದ್ವೆಯಾಗ್ಬೊಹುದು ಅಂದ ನಿಖಿಲ್, ಮುಗುಳ್ನಗೆ ಬೀರಿದ.

ಆಯ್ತು, ಎಲ್ಲವನ್ನು ಮರೆಯೋದಕ್ಕೆ ಪ್ರಯತ್ನ ಪಡ್ತಾ ಇದ್ದೇನೆ. ಇನ್ನೊಂದು ಸ್ವಲ್ಪ ದಿನ ಅಷ್ಟೆ. ಎಲ್ಲವನ್ನೂ ಮರೆತು ಬಿಡ್ತೇನೆ ಅಂದ ಅಕ್ಷರ ನಿಖಿಲ್ ಮೊಗವನ್ನು ನೋಡಿ ಮುಗುಳ್ನಗೆ ಬೀರಿದಳು. ಇಬ್ಬರು ರಾಜಾಸೀಟ್‌ನಲ್ಲಿ ಒಂದಷ್ಟು ಹೊತ್ತು ಕಾಲ ಕಳೆದು ಮನೆಗೆ ಹಿಂತಿರುಗಿದರು.
* * *

ದಿನಗಳು ಕ್ಷಣಗಳಂತೆ ಉರುಳಲು ಪ್ರಾರಂಭಿಸಿತು. ಮದುವೆಯ ದಿನ ಸಮೀಪಿಸುತ್ತಿದ್ದಂತೆ ಅಕ್ಷರಳ ಮನದಲ್ಲಿ ತಳಮಳ ಪ್ರಾರಂಭವಾಯಿತು. ದಿನೇ ದಿನೇ ಅಭಿಮನ್ಯುವನ್ನು ಕಳೆದುಕೊಳ್ಳುತ್ತಿರುವ ಪಾಪ ಪ್ರಜ್ಞೆ ಹೆಚ್ಚಾಗತೊಡಗಿತು. ಮದುವೆ ದಿನ ಸಮೀಪಿಸುತ್ತಿದ್ದಂತೆ ಹಳೆಯ ಪ್ರೀತಿಯ ನೆನಪುಗಳೆಲ್ಲ ಹೆಚ್ಚಾಗಿ ಕಾಡಲು ಪ್ರಾರಂಭಿಸಿತು.

ಯಾವ ಸುಖಕೊಸ್ಕರ ನಿಖಿಲ್‌ನ ಮದ್ವೆಯಾಗಬೇಕು? ಶ್ರೀಮಂತಿಕೆ ಬಿಟ್ಟರೆ ಬೇರೆನಿದೆ ಅವನಲ್ಲಿ? ಒಂದು ಪ್ರೀತಿ ಮಾತು ಕೂಡ ನೆಟ್ಟಗೆ ಆಡೋದಕ್ಕೆ ಬಾರದ ಮನುಷ್ಯ ಜೀವನ ಪರ್ಯಂತ ನನ್ನ ಸುಖವಾಗಿ ನೋಡಿಕೊಳ್ತಾನಾ? ಅಭಿಮನ್ಯು ಅದೆಷ್ಟೊಂದು ಪ್ರೀತಿ ತೊರಿಸ್ತಾ ಇದ್ದ! ಅವನ ಪ್ರೀತಿಯ ಮುಂದೆ ಇವನೊಬ್ಬ ಹುಲ್ಲು ಕಡ್ಡಿ ಇದ್ದಂತೆ. ಅಭಿಮನ್ಯು ಮಾತ್ರ ತನ್ನ ಬಾಳ ಸಂಗಾತಿಯಾಗಲು ಯೋಗ್ಯನಾದ ವ್ಯಕ್ತಿ. ನನ್ನ ಅಭಿಯನ್ನು ಕಳೆದುಕೊಳ್ಳಲು ನನ್ನಿಂದ ಸಾಧ್ಯವಿಲ್ಲ ಅಂದುಕೊಂಡ ಅಕ್ಷರಳ ಹೃಯದಲ್ಲಿ ಅಭಿಮನ್ಯುವಿನ ಹೆಜ್ಜೆ ಗುರುತು ಕಾಣಿಸಿಕೊಂಡು ಅಭಿಮನ್ಯುವನ್ನು ಮತ್ತೆ ಪಡೆದುಕೊಳ್ಳಬೇಕೆಂಬ ಆಸೆ ಬಲವಾಗತೊಡಗಿತು.

ಒಂದು ಬಾರಿ ಈ ಪ್ರೀತಿನೇ ಬೇಡ ಬೇರೊಂದು ಬದುಕು ಕಟ್ಟಿಕೊಳ್ಳುತ್ತೇನೆಂದು ಹೊರಟವಳು ಎರಡನೇ ಬಾರಿ ಇಲ್ಲ, ಆ ಬದುಕು ನನಗೆ ಹಿಡಿಸುತ್ತಿಲ್ಲ.. ನಿನ್ನ ಪ್ರೀತಿ ನನಗೆ ಮತ್ತೆ ಬೇಕು ಎಂದು ಕೇಳುವುದಾದರೂ ಹೇಗೆ? ಎಂಬ ಚಿಂತೆಗೆ ಬಿದ್ದಳು. ಅಭಿಮನ್ಯು ಮೊದ್ಲೇ ಮುಂಗೋಪಿ. ಎರಡನೇ ಬಾರಿ ನನ್ನ ಪ್ರೀತಿಯನ್ನ ಸ್ವೀಕಾರ ಮಾಡು ಅಂತ ಕೇಳಿಕೊಂಡ್ರೆ ಅವನು ಸುಮ್ನೆ ಇತಾನಾ? ಮತ್ತೆ ತನ್ನ ಬದುಕು ಹಾಳು ಮಾಡೋದಕ್ಕೆ ಬಂದುಬಿಟ್ಟಿದ್ದೀಯ ಅಂತ ಮನಸೋ‌ಇಚ್ಚೆ ಬೈಯ್ದು ಬಿಡ್ತಾನೆ. ಮೊನ್ನೆ ತಾನೇ ಮದ್ವೆ ಕಾಗದ ಕೊಡಲು ಹೋದಾಗ ನನ್ಮೇಲೆ ಎಷ್ಟೊಂದು ಕೋಪಗೊಂಡಿಲ್ಲ? ಇದೀಗ ಯಾವ ಮುಖ ಹೊತ್ಕೊಂಡು ಅವನ ಬಳಿ ಹೋಗಲಿ? ಎಂಬ ಚಿಂತೆಗೆ ಬಿದ್ದಳು.

ಒಂದ್ವೇಳೆ ಅಭಿಮನ್ಯು ಪ್ರೀತಿಯನ್ನ ಸ್ವೀಕಾರ ಮಾಡದೆ ಹೋದರೆ? ಕಾಲು ಹಿಡ್ಕೊಂಡಾದ್ರೂ ಸರಿ ಅವನ ಒಪ್ಪಿಸ್ಬೇಕು. ಅವನಿಲ್ಲದೆ ತನ್ನಿಂದ ಬದುಕು ನಡೆಸೋದಕ್ಕೆ ಸಾಧ್ಯ ಇಲ್ಲ. ಹೇಗಾದ್ರೂ ಮಾಡಿ ತನ್ನ ಪ್ರೀತಿಯನ್ನು ಎರಡನೇ ಬಾರಿಗೆ ಸ್ವೀಕಾರ ಮಾಡುವ ಹಾಗೆ ಮಾಡ್ಬೇಕು. ಅವನು ತನ್ನ ಮೇಲೆ ಜೀವಕ್ಕಿಂತ ಹೆಚ್ಚಾಗಿ ಪ್ರೀತಿ ಇಟ್ಕೊಂಡಿದ್ದಾನೆ. ನನ್ನ ಅಭಿ ನನ್ನ ಖಂಡಿತ ವಾಗಿ ಸ್ವೀಕಾರ ಮಾಡಿಯೇ ಮಾಡ್ತಾನೆ. ಅಂದುಕೊಂಡು ಆಲೋಚನೆಯಲ್ಲಿ ಮುಳುಗಿದ ಅಕ್ಷರ ಈ ಹಿಂದೆ ಅಭಿಮನ್ಯು ಆಡಿದ ಮಾತನ್ನು ನೆನಪಿಗೆ ತಂದುಕೊಂಡು ನಿಂತಲ್ಲೇ ಕುಣಿದಾಡಿದಳು.

ಹೌದು. ನನ್ನ ಅಭಿ ನನ್ನ ಸ್ವೀಕಾರ ಮಾಡಿಯೇ ಮಾಡ್ತಾನೆ. ‘ನಾನು ನಿಖಿಲ್‌ನ ಮದ್ವೆಯಾದ ನಂತರ ನಮ್ಮಿಬ್ಬರ ಪ್ರೀತಿಯ ವಿಚಾರ ಗೊತ್ತಾಗಿ ನಿಖಿಲ್ ನನ್ನ ದೂರ ಮಾಡಿಬಿಟ್ಟರೆ ಏನು ಮಾಡೋದು? ಎಂದು ಅವತ್ತು ನಾನು ಕಣ್ಣೀರು ಸುರಿಸಿದಾಗ ಅವನೇ ಹೇಳಿಲ್ವ? ‘ಹಾಗೊಂದ್ವೇಳೆ ಏನಾದ್ರು ಆದ್ರೆ, ನೀನು ನಿನ್ನ ಮನೆಗೆ ಹೋಗ್ಬೇಡ, ನೇರವಾಗಿ ನನ್ನ ಬಳಿಗೆ ಬಾ ಅಂತ. ಇನ್ನು ನಾನೇಕೆ ಭಯ ಪಡ್ಬೇಕು. ಹಾಗೊಂದ್ವೇಳೆ ಏನಾದ್ರು ಸ್ವೀಕಾರ ಮಾಡ್ಲಿಕ್ಕೆ ಆಗೋದಿಲ್ಲ ಅಂದ್ರೆ ಅವನು ಆಡಿದ ಮಾತನ್ನೇ ಅವನಿಗೆ ನೆನಪು ಮಾಡಿಕೊಟ್ರೆ ಆಯ್ತು. ಛೇ. ಅಷ್ಟೆಲ್ಲ ಹೇಳೋ ಅವಶ್ಯಕತೆನೇ ಇಲ್ಲ. ನನ್ನ ಅಭಿ ನನ್ನ ಖಂಡಿತ ಸ್ವೀಕಾರ ಮಾಡಿಯೇ ಮಾಡ್ತಾನೆ. ನಾನು ನಿಖಿಲ್‌ನ ಮದುವೆಯಾದ ನಂತರ ನನ್ನ ಜೀವನದಲ್ಲಿ ನಡೆಯಬಾರದಂತದ್ದೇನಾದರು ನಡೆದು ಹೋಗಿ ನನ್ನ ಬದುಕು ನಾಶವಾದರೆ ಆ ಸಂದರ್ಭದಲ್ಲಿ ‘ನಿನ್ನ ಕೈ ಹಿಡಿದು ಮುನ್ನಡೆಸುತ್ತೇನೆ ಅಂತ ನನ್ನ ಅಭಿ ನನಗೆ ಮಾತು ಕೊಟ್ಟಿದ್ದಾನೆ. ಪ್ರೀತಿಗೆ ಬೆಲೆ ಕೊಟ್ಟು ‘ಶ್ರೀಮತಿ ಅಕ್ಷರಳನ್ನೇ ಸ್ವೀಕಾರ ಮಾಡ್ತೇನೆ ಅಂತ ಹೇಳಿದ ನನ್ನ ಅಭಿ, ಇನ್ನು ಮದ್ವೆನೇ ಆಗದೆ ಇರುವ ಈ ‘ಕುಮಾರಿ ಅಕ್ಷರಳನ್ನ ಸ್ವೀಕಾರ ಮಾಡಿಕೊಳ್ಳದೆ ಇತಾನಾ? ತನ್ನನ್ನು ತಾನೇ ಪ್ರಶ್ನಿಸಿಕೊಂಡು ತುಂಟನಗೆ ಬೀರಿದಳು. ಅದುವರೆಗೂ ಅವಳಲ್ಲಿ ಹುದುಗಿ ಹೋಗಿದ್ದ ನಗು, ಸಂತೋಷ ಮತ್ತೆ ಕಾರಂಜಿಯಂತೆ ಚಿಮ್ಮಲು ಪ್ರಾರಂಭಿಸಿತು.

ತುಂಬಾ ಸಂಭ್ರಮದಿಂದ ಕನ್ನಡಿ ಎದುರು ನಿಂತು ತನ್ನ ಸೌಂದರ್ಯವನ್ನು ನೋಡಿಕೊಂಡು ಮನದೊಳಗೆ ಏನೇನೋ ಕಲ್ಪನೆ ಮಾಡಿಕೊಂಡ ಅಕ್ಷರ ಬಾತ್‌ರೂಂ ಕಡೆಗೆ ತೆರಳಿ ಸ್ನಾನ ಮುಗಿಸಿಕೊಂಡು ಬಂದು ಅಭಿಮನ್ಯು ಕೊಡಿಸಿದ ಚೂಡಿದಾರ್ ತೊಟ್ಟು ಕನ್ನಡಿ ಎದುರು ನಿಂತು ಮತ್ತೆ ಸಿಂಗಾರ ಮಾಡಿಕೊಂಡಳು. ಅಗತ್ಯಕ್ಕಿಂತ ಹೆಚ್ಚು ಹೊತ್ತು ಕನ್ನಡಿ ಎದುರು ನಿಂತು ತನ್ನ ಸೌಂದರ್ಯವನ್ನು ತಾನೇ ನೋಡಿಕೊಂಡು ಸವಿದ ನಂತರ ಕೊಠಡಿಯಿಂದ ಹೊರ ಬಂದು ಅಕ್ಷರ ಯಾರಿಗೂ ಒಂದು ಮಾತು ಹೇಳದೆ ಶೆಡ್‌ವೊಳಗೆ ನಿಲ್ಲಿಸಿದ್ದ ಕಾರನ್ನು ಹೊರ ತೆಗೆದು ಅಭಿಮನ್ಯುವಿನ ಕಚೇರಿಯ ಕಡೆಗೆ ಪಯಣ ಬೆಳೆಸಿ ಅಭಿಮನ್ಯುವಿನ ಕಚೇರಿ ಒಳಗೆ ಕಾಲಿಟ್ಟಳು.

“ಅಭಿ…” ಪ್ರೀತಿಯಿಂದ ಕೂಗಿದಳು.

ಮಾತಾಡುವ ಉತ್ಸಾಹ ತೋರದೆ ಏನು? ಎಂದು ಕಣ್ಸನ್ನೆಯ ಮೂಲಕ ಆಕೆಯನ್ನು ಕೇಳಿದ.

ಏನಿಲ್ಲ ಕೋತಿ. ಸುಮ್ನೆ ಮಾತಾಡಿ ಹೋಗೋಣ ಅಂತ ಬಂದೆ. ನಿನ್ನ ನೋಡ್ಲಿಕ್ಕೆ ನಾನು ಬಬಾದ್ದೇನೋ ಕೋತಿ? ಎಂದು ಅಭಿಮನ್ಯುವಿನ ಬಳಿ ತೆರಳಿ ಎಂದಿನಂತೆ ಮುದ್ದಿಸುತ್ತಾ ಕೇಳಿದಳು.

ಅಕ್ಷರ, ಏನಿದು ನಿನ್ನ ಹುಚ್ಚಾಟ. ನಾಳೆ, ನಾಡಿದ್ದು ಮದ್ವೆ ಆಗುವವಳು. ಈ ರೀತಿ ನಡ್ಕೊಳ್ಳೋದು ಸರಿಯಾ? ಕೋಪದಿಂದ ಕೇಳಿದ.

ನಾನೇನು ಮಾಡ್ದೆ ಕೋತಿ? ಪಕ್ಕದಲ್ಲಿ ಬಂದು ಕೂತ್ಕೊಂಡಿದ್ದೇ ದೊಡ್ಡ ತಪ್ಪಾ? ಇದ್ಕೂ ಮೊದ್ಲು ಕೂತೇ ಇಲ್ವೇನೋ? ಇದೇ ನಿನ್ಗೆ ದೊಡ್ಡ ತಪ್ಪಾಯ್ತಾ? ಇದ್ಕಿಂತ ದೊಡ್ಡ ತಪ್ಪು ಮಾಡ್ತೇನೆ ನೋಡು ಅಂದವಳೇ ಅಭಿಮನ್ಯುವನ್ನು ಬರಸೆಳೆದುಕೊಂಡು ಚುಂಬಿಸಿ ಜೋರಾಗಿ ನಕ್ಕಳು. ಒಂದೆರಡು ಕ್ಷಣ ಕಳೆದ ಬಳಿಕ ಮತ್ತೆ ದುಃಖದ ಕಡೆಗೆ ಮುಖ ಮಾಡಿ ತಾನು ಬಂದ ಉದ್ದೇಶವನ್ನು ತೆರೆದಿಡಲು ಮುಂದಾದಳು.

ಅಭಿ, ನನ್ಗೇಕೋ ನಿನ್ನ ಮರೆಯೋದಕ್ಕೆ ಸಾಧ್ಯವಾಗ್ತಾ ಇಲ್ಲ ಕಣೋ. ನಿಖಿಲ್ ನನ್ಗೆ ಇಷ್ಟವಾಗ್ತಾನೇ ಇಲ್ಲ. ಅವನ ಮುಖ ನೋಡಿದ್ರೆ ಪ್ರೀತಿನೇ ಹುಟ್ಟೋದಿಲ್ಲ. ತುಂಬಾ ಅಸಹ್ಯ ಅನ್ನಿಸ್ತಾ ಇದೆ. ಅವನೊಂದಿಗೆ ಹೇಗೆ ಜೀವನ ನಡೆಸೋದು? ಒಂದೂ ತಿಳಿತಾ ಇಲ್ಲ. ನಿನ್ನ ದೂರ ಮಾಡಿ ಜೀವನದಲ್ಲಿ ತುಂಬಾ ದೊಡ್ಡ ತಪ್ಪು ಮಾಡ್ಬಿಟ್ಟೆ. ದಯವಿಟ್ಟು ಕ್ಷಮಿಸಿ ಬಿಡು ಅಭಿ. ನೀನು ಎಲ್ಲವನ್ನೂ ಸಹಿಸಿಕೊಳ್ಳುವುದಾದರೆ ನನ್ನದೊಂದು ಮನವಿ ಇದೆ ಅಂದಳು.

“ಏನು ಹೇಳು” ಎಂದು ನಿರುತ್ಸಾಹದಿಂದ ಆಕೆಯ ಮನವಿಯ ಆಲಿಕೆಗೆ ಮುಂದಾದ.

ಅಭಿ, ನೀನು ಹೇಳಿಲ್ವ ಅವತ್ತು: ‘ನಿನ್ನ ಜೀವನದಲ್ಲಿ ಆಗಬಾರದಂತದ್ದೇನಾದರು ಆದರೆ ಮತ್ತೆ ನಾನು ಸ್ವೀಕಾರ ಮಾಡ್ತೇನೆ ಅಂತ. ನನ್ಗೆ ನಿಖಿಲ್ ಜೊತೆ ಮದ್ವೆಯಾಗೋದಕ್ಕೆ ಒಂದು ಚೂರು ಕೂಡ ಇಷ್ಟ ಇಲ್ಲ. ಇನ್ನು ಅವನೊಂದಿಗೆ ಜೀವನ ನಡೆಸುವುದಾದರೂ ಹೇಗೆ? ದಯವಿಟ್ಟು ನನ್ನ ಮತ್ತೊಮ್ಮೆ ಸ್ವೀಕಾರ ಮಾಡ್ಕೋತ್ತಿಯಾ? ತಲೆತಗ್ಗಿಸಿ ಕೇಳಿದಳು.

ಅದೊಂದು ಮಾತು ಅಭಿಮನ್ಯುವಿಗೆ ತುಂಬಾ ಹಿಡಿಸಿತು. ಬಹುದಿನಗಳಿಂದ ಆ ಒಂದು ಮಾತಿಗೋಸ್ಕರ ಆತ ಕಾದು ಕುಳಿತ್ತಿದ್ದ. ಗುಬ್ಬಚ್ಚಿ ಮರಿಗಳು ತಾಯಿ ಆಹಾರವನ್ನು ಹೊತ್ತು ತರುವ ನಿರೀಕ್ಷೆಯೊಂದಿಗೆ ಕಾಯುವಂತೆ ಪ್ರೀತಿಗಾಗಿ ಕಾದು ಕುಳಿತ್ತಿದ್ದ. ಆದರೆ ಆ ಸಂತೋಷದ ವಿಚಾರವನ್ನು ಅನುಭವಿಸುವಷ್ಟು ಸಂತೋಷದ ವಾತಾವರಣ ಅದಾಗಿರಲಿಲ್ಲ. ಅಕ್ಷರ ಈಗಾಗಲೇ ವೈವಾಹಿಕ ಜೀವನದ ಒಂದು ಮೆಟ್ಟಿಲು ತುಳಿದಾಗಿದೆ. ಮತ್ತೊಬ್ಬನೊಂದಿಗೆ ಮದುವೆಯಾಗುವುದಕ್ಕೆ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿದೆ. ಈ ಪರಿಸ್ಥಿತಿಯಲ್ಲಿ ಆಕೆಯನ್ನ ಸ್ವೀಕಾರ ಮಾಡಲು ಮುಂದಾದರೆ ಸಮಾಜ ಏನಂದುಕೊಳ್ಳುವುದಿಲ್ಲ? ನಿಶ್ಚಿತಾರ್ಥ ನಡೆಯುವುದಕ್ಕಿಂತ ಮೊದಲಾಗಿದ್ದರೆ ನಮ್ಮಿಬ್ಬರ ಪ್ರೀತಿಗೆ ಕೇವಲ ಅಕ್ಷರಳ ಕುಟುಂಬದವರು ಮಾತ್ರ ವಿರೋಧ ವ್ಯಕ್ತಪಡಿಸುತ್ತಿದ್ದರು. ಆದರೆ ಇದೀಗ ಆಕೆಯನ್ನು ಮದುವೆಯಾಗಲು ಮುಂದಾಗಿರುವ ನಿಖಿಲ್‌ನ ಕುಟುಂಬ, ಆಹ್ವಾನ ಪತ್ರಿಕೆ ಸ್ವೀಕಾರ ಮಾಡಿರುವ ಜನರು ಕೂಡ ಪ್ರೀತಿಗೆ ವಿರೋಧ ಮಾಡದೆ ಇರೋದಿಲ್ಲ. ಆದರೆ, ಪ್ರೀತಿಯನ್ನು ತಿರಸ್ಕರಿಸಲು ಅಭಿಮನ್ಯುವಿನಿಂದ ಸಾಧ್ಯವಾಗುತ್ತಿಲ್ಲ. ಬಾಯಾರಿಕೆ ಎಂದು ಊರಿಡೀ ಅಲೆದು ದಣಿದ ವ್ಯಕ್ತಿಗೆ ನೀರು ದೊರೆತ್ತೊಡನೆ ಬೇಡ ಅನ್ನುವನೇ? ಅದೇ ಪರಿಸ್ಥಿತಿಯನ್ನು ಅಭಿಮನ್ಯು ಎದುರಿಸುತ್ತಿದ್ದ. ಪ್ರೀತಿಯನ್ನು ಕಳೆದುಕೊಂಡಾಗ ಆಗುವ ದುಃಖ ಅನುಭವಿಸಿ ದವರಿಗೆ ಮಾತ್ರ ಗೊತ್ತು. ಅಂಥಹ ದುಃಖದಲ್ಲಿ ಮುಳುಗಿರುವ ಅಭಿಮನ್ಯುವಿಗೆ ಪ್ರೀತಿಯನ್ನು ಮತ್ತೆ ಸ್ವೀಕಾರ ಮಾಡೋದಕ್ಕೆ ಸಾಧ್ಯವಿಲ್ಲವೆಂದು ಸಾರಾಸಗಟಾಗಿ ಹೇಳೋದಕ್ಕೆ ಸಾಧ್ಯವಾಗಲಿಲ್ಲ. ಆದರೆ ಈಗಿನ ಪರಿಸ್ಥಿತಿಯಲ್ಲಿ ಆಕೆಯನ್ನು ಮತ್ತೆ ಪ್ರೀತಿಸಲು ಪ್ರಾರಂಭಿಸಿ ಮದುವೆಯಾದರೆ ಈ ಸಮಾಜ ನಮ್ಮನ್ನು ನೆಮ್ಮದಿಯಾಗಿ ಇರೋದಕ್ಕೆ ಬಿಡುತ್ತದೆಯೇ ಎಂಬ ಪ್ರಶ್ನೆ ಅಭಿಮನ್ಯುವಿನಲ್ಲಿ ಕಾಡತೊಡಗಿತು.

ಅಕ್ಷರ…, ನನ್ಗೆ ತುಂಬಾ ಸಂತೋಷವಾಗ್ತಾ ಇದೆ, ಅಷ್ಟೇ ದುಃಖ ಕೂಡ ಆಗ್ತಾ ಇದೆ. ಈ ಮಾತನ್ನ ಒಂದೆರಡು ತಿಂಗಳ ಹಿಂದೆ ಹೇಳಿದ್ರೆ ತುಂಬಾ ಸಂತೋಷ ಪಡ್ತಾ ಇದ್ದೆ. ಆದ್ರೆ ಈಗ ಕಾಲ ಮಿಂಚಿ ಹೋಗಿದೆ. ಈಗ ಈ ಮಾತು ಹೇಳಿ ಏನು ಸುಖ? ನಿಶ್ಚಿತಾರ್ಥ ಮಾಡಿಕೊಳ್ಳುವ ಮುಂಚೆ ನನ್ನ ಪ್ರೀತಿಯ ಮಹತ್ವ ನಿನ್ಗೆ ಗೊತ್ತಾಗ್ಲಿಲ್ವ? ಮೊದಲಾಗಿದ್ದರೆ ಒಂದು ಕುಟುಂಬ.

ಮಾತ್ರ ದುಃಖದಲ್ಲಿ ಮುಳುಗುವ ಪರಿಸ್ಥಿತಿ ಇತ್ತು. ಆದರೆ, ಇದೀಗ ಎರಡು ಕುಟುಂಬಗಳು ದುಃಖದಲ್ಲಿ ಮುಳುಗುವ ಪರಿಸ್ಥಿತಿಯನ್ನ ನಿರ್ಮಾಣ ಮಾಡ್ತಾ ಇದ್ದೀಯ. ಈ ಸಂದರ್ಭದಲ್ಲಿ ನಿನ್ನ ನಾನು ಮದ್ವೆಯಾಗೋದು ಅಷ್ಟೊಂದು ಸರಿ ಕಾಣಿಸ್ತಾ ಇಲ್ಲ.

ಹಾಗಾದ್ರೆ ನನ್ನ ಸ್ವೀಕಾರ ಮಾಡೋದಕ್ಕೆ ಸಾಧ್ಯನೇ ಇಲ್ಲ ಅಂತಿಯಾ…!?

ನಮ್ಮಿಬ್ಬರ ಪ್ರೀತಿಯಲ್ಲಿ ಸ್ವೀಕಾರ ಅನ್ನೋ ಪದಕ್ಕೆ ಅರ್ಥನೇ ಇಲ್ಲ ಬಿಡು. ನೀನು ಯಾವತ್ತಿದ್ದರೂ ನನ್ನವಳೇ. ಅವತ್ತು ನೀನೇ ಹೇಳಿಲ್ವ: ‘ನಾನು ನಿನ್ನ ದೈಹಿಕವಾಗಿ ತೊರೆದು ಹೋಗ್ತಾ ಇಬೊಹುದು. ಆದರೆ, ಮಾನಸಿಕವಾಗಿ ಎಂದೆಂದಿಗೂ ನಿನ್ನವಳೇ ಅಂತ. ಇವತ್ತಿಗೂ ಕೂಡ ನಾನು ನಿನ್ನ ಪ್ರೀತಿ ಮಾಡ್ತಾನೇ ಇದ್ದೇನೆ ಅಕ್ಷರ. ಕಳೆದು ಹೋದ ಪ್ರೀತಿಯನ್ನ ಇಷ್ಟು ದಿನ ಹುಡುಕುತ್ತಾ ಇದ್ದೆ. ಈಗ ಅದು ಸಿಕ್ಕದೆ. ನನಗದಷ್ಟೇ ಸಾಕು. ನೀನು ತೆಗೆದುಕೊಳ್ಳುತ್ತಿರುವ ನಿರ್ಧಾರ ನಿನ್ಗೆ ಸರಿ ಅನ್ನಿಸಿದರೆ, ನಿಖಿಲ್‌ಗೆ ನೀನು ಮೋಸ ಮಾಡುತ್ತಿಲ್ಲ ಅಂತ ನಿನ್ಗೆ ಅನ್ನಿಸಿದರೆ ನನ್ನೊಂದಿಗೆ ಬಂದುಬಿಡು. ಈ ಹೃದಯ ಯಾವತ್ತಿದ್ರೂ ನಿನಗೊಬ್ಬಳಿಗೆ ಮಾತ್ರ ಮೀಸಲು ಅಂದ ಅಭಿಮನ್ಯು ಆಕೆಯೆಡೆಗೆ ನೋಡಿ ಮುಗುಳ್ನಗೆ ಬೀರಿದ.

ಕುಳಿತ್ತಿದ್ದ ಅಕ್ಷರ ಎದ್ದು ಹೊರಡುವವಳಂತೆ ಬಾಗಿಲ ಕಡೆ ಮುಖಮಾಡಿ ನಿಂತದ್ದನ್ನು ನೋಡಿ ಅಭಿಮನ್ಯು ಕೂಡ ಎದ್ದು ನಿಂತ.

ಯಾಕೆ ಹೊರಡ್ಬೇಕೂಂತ ಅನ್ನಿಸ್ತಾ ಇದೆಯಾ? ಕೇಳಿದ.

ಇಲ್ಲ, ತಬ್ಕೊಂಡು ಮುದ್ದಾಡ್ಬೇಕೂಂತ ಅನ್ನಿಸ್ತಾ ಇದೆ ಎಂದು ಅಭಿಮನ್ಯುವನ್ನು ಬಿಗಿದಪ್ಪಿಕೊಂಡು ಗಳಗಳನೆ ಅತ್ತುಬಿಟ್ಟಳು. ಇನ್ನೆಂದೂ ನಿನ್ನ ಬಿಟ್ಟು ಹೋಗುವ ಮನಸ್ಸು ಮಾಡೋದಿಲ್ಲ ಅಭಿ. ಜೀವದ ಕೊನೆಯುಸಿರು ನಿಲ್ಲುವ ತನಕ ನಿನ್ನೊಂದಿಗೇ ಇತೇನೆ. ಇದು ನಿನ್ನ ಮೇಲಾಣೆ. ನೀನು ನನ್ನೊಂದಿಗಿದ್ದರೆ ನನಗಷ್ಟೇ ಸಾಕು ಎಂದು ಕಣ್ಣೀರು ಸುರಿಸಿದಳು.

ಮನದೊಳಗೆ ಇಷ್ಟೊಂದು ಪ್ರೀತಿ ತುಂಬಿಟ್ಟುಕೊಂಡರೂ ಯಾಕೆ ನನ್ನಿಂದ ದೂರವಾಗುವ ಮನಸ್ಸು ಮಾಡಿದೆ? ಅಂದು ಕೇಳಿದಾಗ ಉತ್ತರ ನೀಡಲಿಲ್ಲ. ಬಹುಶಃ ಇಂದಾದರೂ ಉತ್ತರ ನೀಡಬಹುದೆಂಬ ನಿರೀಕ್ಷೆಯೊಂದಿಗೆ ಕೇಳಿದ.

ಅದನ್ನ ಹೇಗೆ ಹೇಳಲಿ? ಈ ಕ್ಷಣದಲ್ಲಿಯೂ ಕೂಡ ನಿನ್ನ ಮತ್ತೆ ಪ್ರೀತಿ ಮಾಡೋದಕ್ಕೆ, ಮದ್ವೆಯಾಗೋದಕ್ಕೆ ಭಯ ಆಗ್ತಾ ಇದೆ. ಆದರೆ, ನನ್ನಿಂದ ನಿನ್ನ ಬಿಟ್ಟು ಇರೋದಕ್ಕೆ ಸಾಧ್ಯವಿಲ್ಲ ಅಭಿ, ಒಂದ್ವೇಳೆ ನೀನು ಸತ್ತು ಹೋದರೆ ನಾನು ಸತ್ತು ಹೋಗ್ತೇನೆ. ನಮ್ಮಪ್ಪ ನೀನಂದುಕೊಂಡಷ್ಟು ಒಳ್ಳೆಯವನಲ್ಲ. ನಮ್ಮಿಬ್ಬರನ್ನ ಒಂದುಮಾಡುವ ನಾಟಕವಾಡಿ ಒಳಗಿಂದೊಳಗೆ ನಿನ್ನ ಮುಗಿಸೋದಕ್ಕೆ ನೋಡಿದ್ರು. ನಿನ್ನ ಅವತ್ತು ಕೊಲ್ಲೋದಕ್ಕೆ ನೋಡಿದ್ದು ಬೇರಾರು ಅಲ್ಲ. ನಮ್ಮ ಅಪ್ಪ, ಅಣ್ಣ ಇಬ್ರು ಸೇಕೊಂಡು ನಿನ್ನ ಕೊಲ್ಲೋದಕ್ಕೆ ಪ್ರಯತ್ನ ಪಟ್ರು. ದೇವರು ದೊಡ್ಡವನು ಜೀವ ಉಳಿಸಿದ. ಇಷ್ಟಾದ ಮೇಲೂ ನಮ್ಮಿಬ್ಬರ ಪ್ರೀತಿ ಮುಂದುವರೆದರೆ ಅಪ್ಪ ನಿನ್ನ ಜೀವಸಹಿತ ಉಳಿಸೋದಿಲ್ಲ ಅಂತ ನನ್ಗೆ ಭಯ ಆಯ್ತು. ಅದಕೋಸ್ಕರ ಅಪ್ಪ ಇಷ್ಟಪಟ್ಟ ಹುಡುಗನೊಂದಿಗೆ ಮದ್ವೆಯಾಗೋದಕ್ಕೆ ಮನಸ್ಸು ಮಾಡಿದೆ. ಆದರೆ, ನಿನ್ನ ಬಿಟ್ಟು ನನ್ನಿಂದ ಇರೋದಕ್ಕೆ ಸಾಧ್ಯವಾಗ್ತಾ ಇಲ್ಲ ಅಭಿ, ಅದಕೋಸ್ಕರ ಪುನಃ ಪ್ರೀತಿಯನ್ನ ಹುಡ್ಕೊಂಡು ಮತ್ತೆ ಬಂದ್ಬಿಟ್ಟೆ. ದಯವಿಟ್ಟು ಕ್ಷಮಿಸಿ ಬಿಡು. ಎಲ್ಲಾದ್ರು ದೂರ ಹೊರಟು ಹೋಗುವ. ಇಲ್ಲಿರೋದೇ ಬೇಡ ಕಣ್ಣೀರು ಒರೆಸಿಕೊಳ್ಳುತ್ತ ಮನದೊಳಗೆ ಹುದುಗಿದ್ದ ನೋವುಗಳನ್ನೆಲ್ಲ ಅಭಿಮನ್ಯುವಿನ ಎದುರು ತೆರೆದಿಟ್ಟಳು.
* * *

ಅಕ್ಷರ ಮನೆಗೆ ತೆರಳಿದ ನಂತರ ಅಭಿಮನ್ಯು ಮುಂದೇನು ಮಾಡಬೇಕೆಂಬ ಆಲೋಚನೆಯಲ್ಲಿ ಮುಳುಗಿದ ಅಭಿಮನ್ಯು. ಊರು ಬಿಟ್ಟು ಓಡಿ ಹೋಗುವುದು ಅಂದರೇನು ಸಣ್ಣ ಮಾತಲ್ಲ. ಇಲ್ಲಿದ್ದುಕೊಂಡು ಬದುಕು ನಡೆಸೋದು ಸಾಧ್ಯವಿಲ್ಲದ ಮಾತು. ಊರು ಬಿಟ್ಟು ಹೋಗಲೇ ಬೇಕು. ಆದರೆ, ಹೋಗುವುದಾದರೂ ಎಲ್ಲಿಗೆ? ದೂರದ ಊರಿಗೆ ಹೋಗಿ ಬದುಕು ನಡೆಸುವುದಾದರೂ ಹೇಗೆ? ಇಲ್ಲಿ ಬದುಕುವುದಕ್ಕೆ ಒಂದು ದಾರಿಯಿದೆ. ಹೊಸ ಊರಿಗೆ ಹೋದ ನಂತರ ಅಲ್ಲಿ ಬದುಕು ನಡೆಸುವುದು ಸ್ವಲ್ಪ ಕಷ್ಟದ ಮಾತೇ. ಶಾಶ್ವತವಾಗಿ ಊರು ಬಿಟ್ಟು ಹೋಗಬೇಕಾ ಅಥವಾ ಕೆಲವು ವರ್ಷಗಳ ಮಟ್ಟಿಗೆ ಮಾತ್ರ ದೂರದ ಊರಿನಲ್ಲಿ ಇರಬೇಕಾ? ಗೊಂದಲಕ್ಕೆ ಒಳಗಾದ.

ಒಂದೆರಡು ವರ್ಷಗಳ ಕಾಲ ಯಾರಿಗೂ ಗೊತ್ತಿಲ್ಲದ ದೂರದ ಊರಿಗೆ ಹೋಗಿ ನೆಲೆಸುವುದೇ ವಾಸಿ. ಇಲ್ಲಿದ್ದರೆ ಒಂದಲ್ಲಾ ಒಂದು ಕಲಹ ನಿಶ್ಚಿತ. ವಾತಾವಾರಣ ತಿಳಿಗೊಂಡ ನಂತರ ಹಿಂತಿರುಗಿದರೆ ಆಯಿತು. ಇಲ್ಲಿಂದ ಹೊರಟು ಹೋದ ನಂತರ ವ್ಯಾಪಾರ ವಹಿವಾಟನ್ನು ಯಾರಿಗೆ ವಹಿಸುವುದು? ಹೇಗಿದ್ದರೂ ಅಮ್ಮ ಇದ್ದಾರಲ್ಲ. ಅವರೇ ನೋಡಿಕೊಳ್ಳುತ್ತಾರೆ. ಅಮ್ಮನಿಗೆ ಸಹಕಾರ ಕೊಡೋದಕ್ಕೆ ಸ್ನೇಹಿತರು ಇದ್ದೇ ಇರುತ್ತಾರೆ. ಇನ್ಯಾಕೆ ಭಯ? ಅಂದುಕೊಂಡ. ಹಾಗೊಂದ್ವೇಳೆ ಸಾಕಷ್ಟು ಸಮಯ ಕಳೆದರೂ ಕೂಡ ಪರಿಸ್ಥಿತಿ ತಿಳಿಗೊಳ್ಳದೆ ಹೋದರೆ ಇಲ್ಲಿರುವ ಅಂಗಡಿಯನ್ನು ಮಾರಾಟ ಮಾಡಿ ಬೇರೊಂದು ಊರಿನಲ್ಲಿ ವ್ಯಾಪಾರ ವಹಿವಾಟು ಪ್ರಾರಂಭ ಮಾಡುವುದು ಒಳಿತೆಂದು ತೀರ್ಮಾನಿಸಿದ.

ಇನ್ನು ಅಕ್ಷರಳ ಮದುವೆಗೆ ಒಂದು ತಿಂಗಳು ಕೂಡ ಬಾಕಿ ಉಳಿದಿಲ್ಲ. ಮದುವೆ ದಿನ ಹತ್ತಿರ ಬಂದಷ್ಟು ಆತಂಕ ಜಾಸ್ತಿ. ಅಲ್ಲದೆ ಇಬ್ಬರಿಗೆ ಪಲಾಯನ ಮಾಡುವುದಕ್ಕೂ ಕಷ್ಟವಾಗಬಹುದು. ಸಾಧ್ಯವಾದಷ್ಟು ಬೇಗ ಇಲ್ಲಿಂದ ಇಬ್ಬರು ಜಾಗ ಖಾಲಿ ಮಾಡ ಬೇಕು. ಈಗಿನ ಪರಿಸ್ಥಿತಿಯಲ್ಲಿ ಸಬ್‌ರಿಜಿಸ್ಟ್ರಾರ್ ಕಚೇರಿಯಲ್ಲಿ ಮದ್ವೆಯಾಗೋದಕ್ಕಂತು ಸಾಧ್ಯ ಇಲ್ಲ, ಸಮಯವೂ ಇಲ್ಲ.

ದೂರದ ಯಾವುದಾದರೊಂದು ದೇವಾಲಯಕ್ಕೆ ತೆರಳಿ ಮದುವೆ ಮಾಡಿಕೊಂಡರಾಯಿತು. ಇಂದು ರಾತ್ರಿ ಸ್ನೇಹಿತರನ್ನೆಲ್ಲ ಭೇಟಿಯಾಗಿ ಈ ವಿಚಾರ ಅವರ ಮುಂದೆ ತೆರೆದಿಡಬೇಕು. ಅವರ ಸಹಕಾರ ಇಲ್ಲದೆ ನಮ್ಮಿಬ್ಬರ ಮದುವೆ ನಡೆಯೋದಕ್ಕೆ ಸಾಧ್ಯವಿಲ್ಲ ಅಂದುಕೊಂಡ ಅಭಿಮನ್ಯು ಸ್ನೇಹಿತರಿಗೆಲ್ಲ ಫೋನಾಯಿಸಿ ರಾತ್ರಿ ಕಚೇರಿಗೆ ಬರುವಂತೆ ಕೋರಿಕೊಂಡ.

ರಾತ್ರಿ ಅಭಿಮನ್ಯುವಿನ ಕಚೇರಿಗೆ ಆಗಮಿಸಿದ ಅವನ ಆಪ್ತ ಮಿತ್ರರಾದ ರಾಹುಲ್, ಸಂಜಯ್, ಅರುಣ, ಪುರುಷೋತ್ತಮ್ ಗೆಳೆಯ ಕೈಗೊಂಡ ನಿರ್ಧಾರ ಕೇಳಿ ಸಂತೋಷಗೊಂಡರು. ಗಂಡು ಮಕ್ಕಳಿಗೆ ಹೆಣ್ಣನ್ನು ಆರಿಸಿಕೊಂಡು ಹೋಗುವ ಕಾಯಕ ವೆಂದರೆ ಬಲು ಪ್ರೀತಿ. ಅದು ಸ್ವಲ್ಪ ಕಷ್ಟದ ಕೆಲಸ ಎಂಬ ಅರಿವಿದ್ದರೂ ಆ ಭಯ ಆ ಸಂದರ್ಭದಲ್ಲಿ ಅವರಲ್ಲಿ ಕಾಡುವುದಿಲ್ಲ. ಅದರಲ್ಲೂ ಆಪ್ತಮಿತ್ರನಿಗೆ ಸಹಕಾರ ನೀಡದೆ ಇರುವುದಕ್ಕೆ ಸಾಧ್ಯವೇ? ಅದೂ ಸಹಕಾರ ಕೋರಿದ ಮೇಲೆ. ಅಭಿಮನ್ಯುವಿನ ಕೋರಿಕೆಗೆ ಸ್ನೇಹಿತರೆಲ್ಲ ಸೈ ಅಂದರು.

ಅಕ್ಷರ ಪುನಃ ನನ್ನವಳಾಗುತ್ತಾಳೆಂಬ ಭರವಸೆ ನನ್ಗೆ ಇಲಿಲ್ಲ. ಆದರೆ, ಮತ್ತೆ ಬಂದಿದ್ದಾಳೆ. ಇನ್ನೊಂದು ಹತ್ತು ದಿನದೊಳಗೆ ಯಾವುದಾದರೊಂದು ದೇವಾಲಯದಲ್ಲಿ ಮದ್ವೆಯಾಗೋದಕ್ಕೆ ತೀರ್ಮಾನ ಮಾಡಿದ್ದೇನೆ. ಎಲ್ಲಾದ್ರು ಹೊರಗೆ ಹೋಗಿ ಒಂದಷ್ಟು.

ಸಮಯ ಉಳ್ಕೋ ಬೇಕು. ಇಲ್ಲಿ ಇರೋದಕ್ಕಂತೂ ಸಾಧ್ಯವೇ ಇಲ್ಲ. ನೀವೆಲ್ಲ ಮದ್ವೆಗೆ ಬಂದು ಸಹಕಾರ ನೀಡ್ಬೇಕು. ಗೆಳೆಯರಲ್ಲಿ ವಿನಂತಿಸಿಕೊಂಡ ಅಭಿಮನ್ಯು.

ಇವತ್ತಾದ್ರೆ ಇವತ್ತೇ ಕಕೊಂಡು ಹೋಗುವ. ನೀನ್ಯಾವುದಕ್ಕೂ ಭಯ ಪಡ್ಬೇಡ. ನಾವು ನಿನ್ನೊಂದಿಗೆ ಸದಾ ಇತೇವೆ. ಏನೇ ಆದ್ರೂ ನಿನ್ನ ಲವ್‌ಸ್ಟೋರಿ ಸುಖಾಂತ್ಯ ಕಾಣ್ತಲ್ಲ ಅದೇ ಸಂತೋಷ ತುಂಬಾ ಸಂತೋಷದಿಂದ ಹೇಳಿದ ಅರುಣ.

ಅಭಿಮನ್ಯು, ನೀನಂದಂತೆ ಇಲ್ಲಿ ಮದ್ವೆ ಮಾಡ್ಕೊಳ್ಳೋದಕ್ಕೆ ಸಾಧ್ಯ ಇಲ್ಲ. ಹೊರಗೆ ಯಾವುದಾದರೊಂದು ದೇವಾಲಯದಲ್ಲಿ ಮದ್ವೆ ಮಾಡಿ ಮುಗಿಸಿದರಾಯ್ತು. ಒಂದೆರಡು ತಿಂಗಳು ಊಟಿಯಲ್ಲಿ ಇದ್ದು ಬನ್ನಿ. ವರ್ಷಗಟ್ಟಲೇ ತಲೆಮರೆಸಿಕೊಂಡು ಇಬೇಕಾದ ಅವಶ್ಯಕತೆಯೇನು ಇಲ್ಲ. ನೀವು ವಾಪಾಸ್ ಬಂದ ನಂತರ ಅವಳಪ್ಪ ಏನಾದ್ರು ಗಲಾಟೆ ಮಾಡ್ಲಿಕ್ಕೆ ಮುಂದಾದರೆ ಪೊಲೀಸರಿಗೆ ದೂರು ಕೊಟ್ರಾಯ್ತು. ಊಟಿಗೆ ಹೋಗುವ ಮಾರ್ಗದ ಮಧ್ಯದಲ್ಲಿ ಸಿಗುವ ಯಾವುದಾದರೊಂದು ದೇವಾಲಯದಲ್ಲಿ ಮದ್ವೆ ಕಾರ್ಯ ಮುಗಿಸಿಕೊಳ್ಳುವ. ಒಂದೆರಡು ತಿಂಗಳು ಕಳೆದ ನಂತರ ಮಡಿಕೇರಿಗೆ ಬಂದು ರಿಜಿಸ್ಟ್ ಮ್ಯಾರೇಜ್ ಆದ್ರೆ ಆಯ್ತು. ನಾವೆಲ್ಲರು ಒಂದೆರಡು ದಿನ ನಿನ್ನ ಜೊತೆಗೆ ಇತೇವೆ. ಮನೆಯಲ್ಲಿ ಏನಾದರೊಂದು ಸುಳ್ಳು ಹೇಳಿ ಕಾರ್ ತಗೊಂಡು ಬತೇನೆ ಅಂದ ರಾಹುಲ್ ಮದುವೆಗೆ ಮುಹೂರ್ತ ನಿಗದಿ ಪಡಿಸಿದ.

ಅಭಿಮನ್ಯು ಮದುವೆಯಾಗ್ತಾ ಇರೋದು ನಮ್ಗೆಲ್ಲರಿಗೂ ಸಂತೋಷದ ವಿಚಾರ. ಆದರೆ, ಎಲ್ಲರ ಮುಂದೆ ಅದ್ಧೂರಿಯಾಗಿ ಮದ್ವೆ ಮಾಡೋದಕ್ಕೆ ಸಾಧ್ಯವಾಗ್ತಾ ಇಲ್ವಲ್ಲ? ಎಂಬ ಒಂದೇ ಒಂದು ಸಣ್ಣ ಬೇಸರ ಇದೆ ಅಷ್ಟೆ. ಮದ್ವೆಗೆ ಎಲ್ಲರೂ ಕೈಲಾದಷ್ಟು ಸಹಕಾರ ಕೊಡ್ಬೇಕು. ಎರಡು ತಿಂಗಳು ಹೊರಗೆ ಹೋಗಿ ಇರೋದು ಅಂದ್ರೆ ಸಣ್ಣ ಮಾತೇನು ಅಲ್ಲ. ಅಂದ ಪುರುಷೋತ್ತಮ್ ಅಭಿಮನ್ಯುವಿಗೆ ಎದುರಾಗುವ ಆರ್ಥಿಕ ಸಮಸ್ಯೆಯನ್ನು ಗೆಳೆಯರ ಎದುರು ತೆರೆದಿಟ್ಟ.

ಪುರುಷೋತ್ತಮ್, ನೀನು ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಮದ್ವೆಗೆ ಬೇಕಾದ ಖರ್ಚುವೆಚ್ಚ, ಅವರಿಬ್ಬರು ಊಟಿನಲ್ಲಿ ಎರಡು ತಿಂಗಳುಗಳ ಕಾಲ ಉಳಿದುಕೊಳ್ಳಲು ಬೇಕಾದಷ್ಟು ಹಣ ನಾನು ಹೊಂದಿಸಿಕೊಡ್ತೇನೆ. ಇನ್ನೊಂದಷ್ಟು ಹಣ ನೀವು ಕೊಟ್ರೆ ಅವನಿಗೆ ಇನ್ನೂ ಅನುಕೂಲ ಆಗ್ಬೊಹುದು. ಗೆಳೆಯನ ಕೋರಿಕೆಗೆ ಸಂಜಯ್ ಹೃದಯವೈಶಾಲ್ಯತೆ ತೋರಿದ.

ಊರು ಬಿಟ್ಟು ತೆರಳಿ ಯಾರ ಕಣ್ಣಿಗೂ ಕಾಣದ ಜಾಗದಲ್ಲಿ ಮದುವೆಯಾಗುವ ವಿಚಾರಕ್ಕೆ ಸಂಬಂಧಿಸಿದಂತೆ ಗೆಳೆಯರೆಲ್ಲರೂ ಸೇರಿ ಸುದೀರ್ಘ ಚರ್ಚೆಯಲ್ಲಿ ಮುಳುಗಿರುವಾಗ ನಗರಕ್ಕೆ ತೆರಳಿದ್ದ ರಾಹುಲ್ ಒಂದಷ್ಟು ಹೆಂಡದ ಬಾಟಲಿಯೊಂದಿಗೆ ಆಗಮಿಸಿದ.

ಮದುವೆಗೆ ಗೆಳೆಯರು ನೀಡುತ್ತಿರುವ ಸಹಕಾರ ನೋಡಿ ಅಭಿಮನ್ಯುವಿನ ಕಣ್ಗಳಿಂದ ಆನಂದಬಾಷ್ಪ ಸುರಿಯಿತು. ದೇವರು ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಕೊಟ್ಟರೂ ಸಹ ಎಂಥಾ ಒಳ್ಳೆಯ ಗೆಳೆಯರನ್ನ ಕೊಟ್ಟಿದ್ದಾನೆ. ಆ ದೇವರಿಗೆ ಎಷ್ಟು ಬಾರಿ ನಮಿಸಿದರೂ ಸಾಲದು ಅಂದುಕೊಂಡ. ಅಭಿಮನ್ಯುವಿನ ಕಣ್ಗಳಲ್ಲಿ ನೀರು ಕಂಡು ಅಭಿಮನ್ಯು, ಇಂತಹ ಸಂತೋಷದ ಸಮಯದಲ್ಲಿ ಕಣ್ಣೀರು ಸುರಿಸಿಕೊಂಡು ಕೂತಿದ್ದೀಯಲ್ಲ. ಇದು ಸಂತೋಷದ ಕ್ಷಣ ಕಣೋ. ಸಂತೋಷ ಪಡ್ಬೇಕು. ನೀನೇನು ಚಿಂತೆ ಮಾಡ್ಕೋ ಬೇಡ. ನಿನ್ನೊಂದಿಗೆ ನಾವಿದ್ದೇವೆ ಎಂದು ಅಭಿಮನ್ಯುವನ್ನು ಸಂತೈಸಿದ ರಾಹುಲ್, ಎಲ್ಲರ ಗ್ಲಾಸಿಗೆ ಒಂದೊಂದು ಪೆಗ್ ಸುರಿದ. ಅವರವರಿಗೆ ಬೇಕಾದಷ್ಟು ನೀರು ಬೆರೆಸಿಕೊಂಡ ಬಳಿಕ ಗೆಳೆಯರೆಲ್ಲರು ತಮ್ಮ ಗ್ಲಾಸುಗಳನ್ನು ಮುಟ್ಟಿಸಿ, ಮೇಲೆತ್ತಿ ಚೀಯಸ್ ಎಂದು ಒಟ್ಟಾಗಿ ಒಂದೇ ಧ್ವನಿಯಲ್ಲಿ ಹೇಳಿಕೊಂಡರು. ಆ ಧ್ವನಿ ಅವರಲ್ಲಿರುವ ಒಗ್ಗಟ್ಟನ್ನು ಎತ್ತಿ ತೋರಿಸಿದಂತಿತ್ತು.

ಒಂದು ಪೆಗ್ ಏರಿಸಿ ಬಾಯಿ ಒರೆಸಿಕೊಂಡ ಪುರುಷೋತ್ತಮ್, ಅಭಿಮನ್ಯು ಕಡೆಗೆ ನೋಡಿ ಮದ್ವೆಯಾದ ನಂತರ ನಮ್ಮನ್ನೆಲ ಮರೆತು ಬಿಡ್ಬೇಡ ಕಣೋ. ಪಾರ್ಟಿಗೆ ಕರೆದಾಗ ಬಲೇ ಬೇಕು. ಹೆಂಡ್ತಿ ಮನೆಯಲ್ಲಿ ಒಬ್ಳೇ ಇದ್ದಾಳೆ ಅಂತ ನೆಪಹೇಳಿ ಜಾರಿಕೊಳ್ಳೋದಕ್ಕೆ ನೊಡ್ಬೇಡ. ಅಂತಹ ಪರಿಸ್ಥಿತಿಯೇನಾದ್ರು ನಿರ್ಮಾಣವಾದ್ರೆ ನಿನ್ನ ಮನೆಯಿಂದಲೇ ಎತ್ತಾಕ್ಕೊಂಡು ಬಬೇಕಾಗುತ್ತೆ ನೋಡು ಎಂದು ಅಭಿಮನ್ಯುವಿನ ತೋಳಿಗೆ ತಿವಿದು ತಮಾಷೆ ಮಾಡಿದ.

ಮದ್ವೆಯಾದ ನಂತರ ಕೂಡ ಅಭಿಮನ್ಯುವನ್ನು ನೆಮ್ಮದಿಯಾಗಿ ಇರೋದಕ್ಕೆ ಬಿಡೋದಿಲ್ಲ ಕಾಣ್ತದೆ ಈ ದರಿದ್ರಕೆಟ್ಟೋನು ಎಂದು ಸಂಜಯ್, ಪುರುಷೋತ್ತಮ್‌ನ ತಲೆಗೊಂದು ಗುದ್ದು ಗುದ್ದಿ ಹೇಳಿದ.

ಅವನ ತಲೆಗೆ ಹೊಡ್ದು ಮೆಂಟಲ್ ಮಾಡ್ಬೇಡ ಕಣೋ. ಅಭಿಮನ್ಯು ಮದ್ವೆಯಾಗೋ ತನಕವಾದ್ರು ಚೆನ್ನಾಗಿಲಿ. ಅಭಿಮನ್ಯುವಿನ ಮದ್ವೆನ ಕಣ್ತುಂಬ ನೋಡ್ಕೊಂಡ ನಂತರ ಅವನನ್ನ ನೀನು ಮೆಂಟಲ್ ಮಾಡಿದ್ರೆ ನನ್ಗೇನು ಚಿಂತೆ ಇಲ್ಲ. ಅಂದ ಅರುಣ, ಗ್ಲಾಸಿನಲ್ಲಿ ಕೊನೆಯದಾಗಿ ಉಳಿದುಕೊಂಡಿದ್ದ ಒಂದು ಸಿಪ್ ಏರಿಸಿಕೊಂಡು ಮೂರನೇ ಪೆಗ್ಗಿನ ಕಡೆಗೆ ಕಾಲಿಟ್ಟ. ಸಾಕಷ್ಟು ಹೊತ್ತು ಮದುವೆಯ ವಿಚಾರದ ಬಗ್ಗೆ ಚರ್ಚೆ ನಡೆಸಿ, ಆ ನಂತರ ಒಂದಷ್ಟು ಹೊತ್ತು ಪಾನಗೋಷ್ಠಿಯಲ್ಲಿ ಪಾಲ್ಗೊಂಡು ಹರಟೆ ಹೊಡೆದಾದ ಬಳಿಕ ಎಲ್ಲರೂ ಮನೆಯ ಹಾದಿ ಹಿಡಿದರು.
* * *

ಅಕ್ಷರ ತನ್ನ ಬಾಳಿಗೆ ಮರಳಿ ಬಂದ ವಿಚಾರ ಅಭಿಮನ್ಯುವಿಗೆ ಸಾಕಷ್ಟು ಸಂತೋಷ ತರಿಸಿತಾದರೂ ಆಕೆಯನ್ನು ಯಾರ ಕಣ್ಣಿಗೂ ಕಾಣದ ಊರಿಗೆ ಕರೆದೊಯ್ಯುವ ಸಂದರ್ಭ ಅಮ್ಮನನ್ನು ತೊರೆದು ಹೋಗಬೇಕಲ್ಲ? ಎಂದು ನೆನೆದು ದುಃಖಿತನಾದ.

ಮಗನ ಮದುವೆಯನ್ನು ಕಣ್ತುಂಬ ನೋಡಬೇಕೆಂದು ಅಮ್ಮ ಎಷ್ಟೊಂದು ಕನಸು ಕಟ್ಟಿಕೊಂಡಿಲ್ಲ? ಆದರೆ, ತನ್ನ ಮದುವೆ ನೋಡುವ ಸೌಭಾಗ್ಯ ಅಮ್ಮನಿಗೆ ಇಲ್ಲವಾದಂತಾಯಿತ್ತಲ್ಲ? ಭಯದ ನೆರಳಿನಲ್ಲಿ ಒಂದರ್ಧ ಗಂಟೆಯಲ್ಲಿ ಯಾವುದೋ ದೇವಾಲಯದಲ್ಲಿ ಮುಗಿದು ಹೋಗುವ ಮದುವೆಗೆ ಅಮ್ಮನನ್ನು ಕರೆದೊಯ್ಯುವುದಾದರೂ ಹೇಗೆ?

ನಾವಿಬ್ಬರು ಓಡಿಹೋದ ಸುದ್ದಿ ತಿಳಿದು ರಾಜಶೇಖರ್ ಮನೆಗೆ ಬಂದು ಅಮ್ಮನೊಂದಿಗೆ ಜಗಳಕ್ಕೆ ನಿಂತರೆ ಏನು ಮಾಡೋದು? ಅಮ್ಮನಿಗೇನಾದ್ರು ಆದರೆ ಬದುಕಿರುವ ಶಕ್ತಿ ತನಗಿಲ್ಲ. ಒಂದೆರಡು ತಿಂಗಳ ಕಾಲ ವ್ಯಾಪಾರ ವಹಿವಾಟಿನ ಸಂಪೂರ್ಣ ಜವಾಬ್ದಾರಿಯನ್ನು ಸ್ನೇಹಿತರ ಕೈಗೆ ಒಪ್ಪಿಸಿ ಅಮ್ಮನನ್ನು ಜೊತೆಗೆ ಕರೆದೊಯ್ಯುವುದೇ ವಾಸಿ ಅಂದುಕೊಂಡ.

ದುಃಖದೊಂದಿಗೆ ಮನೆಗೆ ಕಾಲಿಟ್ಟ ಅಭಿಮನ್ಯುವಿಗೆ ಅಮ್ಮನ ಮುಗ್ಧ ಮುಖ ನೋಡಿ ಮತ್ತಷ್ಟು ದುಃಖ ಉಕ್ಕಿಬಂದಿತು. ಅಮ್ಮನ ಮಡಿಲಲ್ಲಿ ಮಲಗಿ ಗಳಗಳನೆ ಅತ್ತುಬಿಟ್ಟ.

ಮಗ ಕಣ್ಣೀರಿಡುತ್ತಿರುವುದನ್ನು ಕಂಡು ಕಂಗಾಲಾದ ವಾತ್ಸಲ್ಯ ಏನಾಯ್ತು ಮಗ? ಕಳವಳದಿಂದ ಕೇಳಿದರು.

“ಏನಿಲ್ಲಮ್ಮ. ಸಂತೋಷ ಆಗ್ತಾ ಇದೆ. ಅದ್ಕೆ ಅತ್ತುಬಿಟ್ಟೆ”

ನಿನ್ನ ಮುಖ ನೋಡಿದ್ರೆ ಗೊತ್ತಾಗೋದಿಲ್ವ? ನೀನು ಸಂತೋಷವಾಗಿಲ್ಲಾಂತ. ಅದೇನಾಯ್ತು ಅಂತ ಹೇಳು ದುಃಖಕ್ಕೆ ಕಾರಣ ತಿಳಿದುಕೊಳ್ಳಲು ಒತ್ತಾಯ ಪಡಿಸಿದರು.

ದುಃಖ ಪಡುವಂತ ವಿಚಾರವೇನು ಇಲ್ಲ ಅಮ್ಮ. ಇಂದಲ್ಲದಿದ್ದರೂ ನಾಳೆಯಾದರೂ ನಿನ್ಗೆ ಈ ವಿಷಯ ಗೊತ್ತಾಗ್ಲೇ ಬೇಕು. ಈಗ್ಲೇ ಎಲ್ಲಾ ಹೇಳಿ ಬಿಡ್ತೇನೆ. ನಾನು ಅಕ್ಷರಳನ್ನ ಮನಸಾರೆ ಪ್ರೀತಿಸ್ತಾ ಇದ್ದೇನೆ ಅಮ್ಮ. ಅವಳನ್ನೇ ಮದ್ವೆಯಾಗಬೇಕೂಂತ ತೀರ್ಮಾನ ಮಾಡಿದ್ದೇನೆ. ಇಲ್ಲಿದ್ದುಕೊಂಡು ಮದ್ವೆಯಾಗೊದಕ್ಕೆ ಸಾಧ್ಯ ಇಲ್ಲ. ಅದ್ಕೋಸ್ಕರ ಊರು ಬಿಟ್ಟು ಹೋಗುವ ಅಂತ ತೀರ್ಮಾನ ಮಾಡಿಯಾಗಿದೆ. ಒಂದೆರಡು ತಿಂಗಳು ದೂರದ ಊರಿನಲ್ಲಿ ಇದ್ದು ಇಲ್ಲಿ ವಾತಾವರಣ ತಿಳಿಗೊಂಡ ನಂತರ ಇತ್ತ
ಕಡೆ ಮುಖ ಹಾಕಿದ್ರೆ ಆಯ್ತು. ನೀನು ಕೂಡ ನನ್ನೊಟ್ಟಿಗೆ ಬತಿಯ ಅಲ್ವ? ಕೇಳಿದ.

ವಾತ್ಸಲ್ಯ ಮಂಕಾಗಿ ಹೋದರು. ಮಗನಿಗೆ ದೇವರು ಏತಕ್ಕಾಗಿ ಇಂತಹ ಬುದ್ಧಿ ಕೊಟ್ಟನೋ. ಹೋಗಿ, ಹೋಗಿ ಆ ದೊಡ್ಡವರ ಮನೆಯ ಸಹವಾಸವನ್ನೇ ಮತ್ತೆ, ಮತ್ತೆ ಬೆಳೆಸ್ತಿದ್ದಾನಲ್ಲ? ಎಷ್ಟು ಹೇಳಿದರೂ ಕೂಡ ಬುದ್ಧಿ ಬಂದಿಲ್ಲ. ಅಕ್ಷರಳನ್ನ ಮದುವೆ ಯಾಗುವ ವಿಚಾರ ಏನಾದರು ಅವಳಪ್ಪನ ಕಿವಿಗೆ ಬಿದ್ದರೆ ಮಗನನ್ನ ಜೀವ ಸಹಿತ ಉಳಿಸೋದಿಲ್ಲ ಎಂದು ತಿಳಿದು ಕಳವಳಗೊಂಡರು. ನೀನು ಆ ಹುಡುಗಿಯನ್ನ ಮದ್ವೆಯಾಗೋದು ನನ್ಗೆ ಇಷ್ಟ ಇಲ್ಲ. ಒಂದ್ವೇಳೆ ನಿನ್ಗೆ ಆ ಹುಡುಗಿನೇ ಬೇಕು ಅಂತಾದ್ರೆ ಈಗ್ಲೇ ಹೊರಟು ಹೋಗು. ನನ್ಗೆ ಯಾವುತ್ತೂ ನಿನ್ನ ಮುಖ ತೋರಿಸ್ಬೇಡ. ಹೊರಟು ಹೋಗು… ನಾನು ಹೇಗಾದ್ರು ಜೀವನ ನಡೆಸ್ತೇನೆ. ದೊಡ್ಡವರ ಸಹವಾಸ ಬೇಡ.. ಬೇಡ… ಅಂತ ಎಷ್ಟು ಹೇಳಿದ್ರೂ ನೀನು ಕೇಳೋದಕ್ಕೆ ತಯಾರಿಲ್ಲ ಅಂದ್ಮೇಲೆ ನಾನೇನು ಮಾಡ್ಲಿಕ್ಕೆ ಸಾಧ್ಯ ಹೇಳು? ನಿನ್ನ ತಲೆಗೆ ಹೊಡ್ದು ಕೊಲ್ಲೋದಕ್ಕೆ ನೋಡಿದ್ದು ಬಹುಶಃ ರಾಜಶೇಖರೇ ಇಬೇಕು. ಪುನಃ ಆ ಹುಡುಗಿಯನ್ನೇ ಮದ್ವೆಯಾಗೋ ಆಸೆ ಪಡ್ಬೇಡ. ದಯವಿಟ್ಟು ಬಿಟ್ಬಿಡು ಮಡಿಲ ಮೇಲೆ ಮಲಗಿದ್ದ ಮಗನನ್ನು ಎಬ್ಬಿಸಿ ಕೈ ಮುಗಿದು ಕೇಳಿಕೊಂಡರು.

ಅಭಿಮನ್ಯು ಉತ್ತರಿಸುವ ಸ್ಥಿತಿಯಲ್ಲಿ ಇರಲಿಲ್ಲ. ಅವನಿಗೆ ಅಕ್ಷರಳನ್ನು ಮದುವೆಯಾಗುವ ಯೋಚನೆ ಮಾತ್ರ ಕಣ್ಣ ಮುಂದೆ ಸುಳಿದಾಡುತಿತ್ತು. ಈ ಒಂದುಬಾರಿ ಇಂಥಹ ಅವಕಾಶ ತಪ್ಪಿಸಿಕೊಂಡರೆ ಜೀವನ ಪರ್ಯಂತ ಅಕ್ಷರಳಂಥಹ ಒಂದು ನಿರ್ಮಲ ಮನಸ್ಸಿನ ಹುಡುಗಿ ತನಗೆ ಸಿಗುವುದಿಲ್ಲ. ಏನೇ ಕಷ್ಟ ಎದುರಾದರೂ ಸರಿಯೇ ಅವಳನ್ನೇ ವಿವಾಹವಾಗುತ್ತೇನೆಂದು ಅಭಿಮನ್ಯು ನಿರ್ಧರಿಸಿಯಾಗಿತ್ತು. ಅಮ್ಮ ಕೂಡ ಈ ಪ್ರೀತಿಗೆ ಅಂಕಿತ ಹಾಕಬಹುದೆಂದು ನಿರೀಕ್ಷೆ ಮಾಡಿದ್ದ. ಆದರೆ, ಅಕ್ಷರಳನ್ನು ಮದುವೆಯಾಗುವುದಾದರೆ ಮನೆಬಿಟ್ಟು ತೆರಳುವಂತೆ ವಾತ್ಸಲ್ಯ ಸ್ಪಷ್ಟ ಸೂಚನೆ ನೀಡಿದಾಗ ದುಃಖದಲ್ಲಿ ಮುಳುಗಿಹೋದ. ಕಣ್ಣೀರು ಸುರಿಸಲು ಪ್ರಾರಂಭಿಸಿದ. ಪ್ರೀತಿಯನ್ನು ಕಳೆದುಕೊಳ್ಳುವ ಮನಸ್ಸು ಅವನಿಗೆ ಇರಲಿಲ್ಲ. ಹಾಗಂತ ಅಮ್ಮನಿಂದ ದೂರ ವಾಗುವ ಮನಸ್ಸು ಕೂಡ ಇರಲಿಲ್ಲ. ಅಮ್ಮನಿಗೆ ಈ ವಿಚಾರ ಹೇಳಿದ್ದೇ ದೊಡ್ಡ ತಪ್ಪಾಯ್ತು ಅಂದುಕೊಂಡ.

ಸಣ್ಣಪುಟ್ಟ ವಿಚಾರಕ್ಕೂ ಕೂಡ ನೀನು ಹೆಣ್ಮಕ್ಕಳ ಹಾಗೆ ಕಣ್ಣೀರು ಸುರಿಸಿಕೊಂಡು ಕೂತಿತಿಯ. ನಿಂದು ಮಗುವಿನಂತ ಮನುಸ್ಸು ಮಗ… ಈ ಕೆಟ್ಟ ಸಮಾಜವನ್ನ ಎದುರು ಹಾಕಿಕೊಂಡು ಬದುಕೋ ಶಕ್ತಿ ನಿನ್ಗೆ ಇಲ್ಲ. ದಯವಿಟ್ಟು ಆ ಹುಡುಗಿಯನ್ನ ಮರೆತು ಬಿಡು. ನೀವಿಬ್ರು ಬೇರೆಯಾದರೆ ಯಾರ ಬದುಕು ಕೂಡ ಹಾಳಾಗೋದಿಲ್ಲ. ಆದರೆ, ನೀವಿಬ್ರು ಒಂದಾಗೋದಕ್ಕೆ ನೋಡಿದ್ರೆ ದೊಡ್ಡ ರಾದ್ಧಾಂತವಾಗಿ ಎಲ್ಲರ ಬದುಕು ಕೂಡ ಹಾಳಾಗಿ ಹೋಗುವುದರಲ್ಲಿ ಸಂಶಯವಿಲ್ಲ. ನಿನ್ಗೆ ಅವಳನ್ನ ಮರೆತು ಬದುಕುವ ಶಕ್ತಿ ಇದೆ. ನೀನು ಅವಳನ್ನ ಮರೆತು ಸುಂದರವಾದ ಬದುಕು ಖಂಡಿತ ನಡೆಸಿಯೇ ನಡೆಸ್ತೀಯ ಅನ್ನುವ ಭರವಸೆ ನನ್ಗೆ ಇದೆ. ಹುಡುಗಿಯರು ಪ್ರೀತಿಯನ್ನ ಬೇಗ ಮರೆತು ಬಿಡ್ತಾರೆ. ಅವರಿಗೆ ಮರೆಯೋ ಶಕ್ತಿ ದೇವರು ಕೊಟ್ಟಿದ್ದಾನೆ. ಮದ್ವೆಯಾಗಿ ಮಗುವಾದ ನಂತರ ಎಲ್ಲವನ್ನೂ ಮರೆತು ಮಗುವಿನ ನಗೆಯಲ್ಲಿ ಲೀನವಾಗಿ ಬಿಡುತ್ತಾರೆ. ಆಗ ಅವರಿಗೆ ಅದೊಂದೇ ಪ್ರಪಂಚ. ನೀನು ಅವಳನ್ನ ಬಿಟ್ರೆ ಅವಳು ಒಂದಷ್ಟು ನೊಂದುಕೊಳ್ಳಬಹುದು ಅಷ್ಟೆ. ಅದಕ್ಕಿಂತ ದೊಡ್ಡದ್ದೇನು ನಡೆಯೋದಿಲ್ಲ. ಭವಿಷ್ಯದ ದೃಷ್ಟಿಯಿಂದ ನೀವಿಬ್ರು ಬೇರೆಯಾಗೋದೇ ಒಳ್ಳೆಯದ್ದು ಇರುವ ಒಬ್ಬನೇ ಮಗನನ್ನು ಕಳೆದುಕೊಳ್ಳುತ್ತೇನೆಂಬ ಭಯದಲ್ಲಿ ಮಗನ ಮನಸ್ಸು ಬದಲಾಯಿಸೋದಕ್ಕೆ ವಾತ್ಸಲ್ಯ ಪ್ರಯತ್ನಪಟ್ಟರು.

ಅಮ್ಮನೊಂದಿಗೆ ಇನ್ನು ಮಾತಾಡಿ ಪ್ರಯೋಜನವಿಲ್ಲ. ಮದುವೆಯಾಗೋ ಮನಸ್ಸು ಮಾಡಿ ಆಯಿತು. ಮನಸ್ಸು ಬದಲಾಯಿ ಸುವ ಪ್ರಶ್ನೆನೇ ಇಲ್ಲ. ಮದುವೆಯಾಗಿ ಒಂದೆರಡು ತಿಂಗಳು ಬಿಟ್ಟು ಬಂದ ನಂತರ ಅಮ್ಮ ನಮ್ಮಿಬ್ಬರನ್ನ ಖಂಡಿತ ಸ್ವೀಕಾರ ಮಾಡಿಯೇ ಮಾಡುತ್ತಾರೆ. ನನ್ನ ಬಿಟ್ಟು ಬದುಕಿರುವ ಶಕ್ತಿ ಅಮ್ಮನಿಗಿಲ್ಲ ಎಂಬ ಅರಿವು ಅಭಿಮನ್ಯುವಿಗೆ ಇತ್ತು. ಹಾಗಾಗಿ ಅಮ್ಮನ ಕಡೆಗೆ ನೋಡಿ ಮರೆಯೋದಕ್ಕೆ ಪ್ರಯತ್ನ ಪಡ್ತೇನೆ ಅಮ್ಮ. ನೀನು ತಲೆ ಕೆಡಿಸಿಕೊಳ್ಳೋದಕ್ಕೆ ಹೋಗ್ಬೇಡ ಎಂದು ಬೆಡ್‌ರೂಂ ಕಡೆಗೆ ನಡೆದ.
* * *

ಮರುದಿನ ಬೆಳಗ್ಗೆ ಅಭಿಮನ್ಯುವಿನ ಎದುರು ಹಾಜರಾದ ಅಕ್ಷರ ತುಂಬಾ ಉಲ್ಲಾಸಿತಳಾಗಿದ್ದಳು. ಆಕೆಯ ಎದುರು ಎರಡೆರಡು ಮದುವೆ ಬಂದು ನಿಂತರೂ ಭಯ ಎಂಬುದು ಮೊಗದಲ್ಲಿ ಕಾಣಲಿಲ್ಲ. ಮೊಗದಲ್ಲಿ ಸಂತೋಷ ತುಂಬಿ ತುಳುಕಾಡುತಿತ್ತು. ಅಭಿಮನ್ಯು ಮತ್ತೆ ಸಿಕ್ಕಿದನಲ್ಲ ಎಂಬ ಸಂತೃಪ್ತಿ ಆಕೆಯ ಮೊಗದಲ್ಲಿ ಎದ್ದು ಕಾಣುತಿತ್ತು. ಆಕೆಗೆ ಸಂತೋಷವಾಗಿರಲು ಅಷ್ಟೇ ಸಾಕಿತ್ತು. ಆದರೆ ಅಭಿಮನ್ಯು ಮಾತ್ರ ಚಿಂತೆಯಲ್ಲಿ ಮುಳುಗಿಹೋಗಿದ್ದ. ಗೆಳೆಯರೊಂದಿಗೆ ಚರ್ಚಿಸಿ ಕೈಗೊಂಡ ನಿರ್ಧಾರ ತಿಳಿಸಿ ಆಕೆಯ ಒಪ್ಪಿಗೆ ಪಡೆದುಕೊಂಡ.

ಅಕ್ಷರ, ನೀನು ಆಗಿಂದಾಗೆ ಇಲ್ಲಿಗೆ ಬರುವ ಅವಶ್ಯಕತೆ ಇಲ್ಲ. ಇನ್ನೇನಿದ್ದರು ಹೊರಡುವ ದಿನ ಬಂದರಾಯಿತು. ಹೊರಡುವು ದಕ್ಕಿಂತ ಒಂದು ದಿನ ಮುಂಚಿತವಾಗಿ ಬಟ್ಟೆ ಬರೆಗಳನ್ನು ಪೆಟ್ಟಿಗೆಯಲ್ಲಿ ತುಂಬಿಸಿಕೊಂಡು ರೆಡಿಯಾಗಿರು. ಕೋಳಿಕೂಗುವ ಮುಂಚೆ ಹೊರಟು ಬಿಡಬೇಕು. ಆ ಸಂದರ್ಭ ಜನ ಸಂಚಾರ ಇರೋದಿಲ್ಲ. ಬೆಳಗಾಗುವುದರೊಳಗೆ ಸಾಕಷ್ಟು ದೂರ ಕ್ರಮಿಸಿಬಿಡಬೇಕು. ಮುಂದಿನ ವಾರ ಹೊರಡ್ಬೇಕೂಂತ ನಿರ್ಧಾರ ಮಾಡಿದ್ವಿ. ನೀನು ತಯಾರಿದ್ದೀಯ ತಾನೆ? ಕೇಳಿದ.

ನೀನು ಯಾವಾಗ ಕರಿಯ್ತಿಯೋ ಆ ಕ್ಷಣದಲ್ಲಿಯೇ ಹೊರಟು ಬಂದು ಬಿಡ್ತೇನೆ. ನಿನ್ನೊಂದಿಗೆ ಹೆಜ್ಜೆ ಇಡುವ ಸಂಭ್ರಮದ ಹೊರತಾಗಿ ನನ್ನ ಮದಲ್ಲಿ ಬೇರೇನು ಆಲೋಚನೆಗಳಿಲ್ಲ. ಆದಷ್ಟು ಬೇಗ ಆ ಸಂಭ್ರಮದ ದಿನ ಎದುರು ಬರಲಿ ಅಂತ ದೇವರಲ್ಲಿ ಬೇಡಿಕೊಳ್ಳುತ್ತೇನೆ.

ಇಲ್ಲಿ ಆಕೆ ಹೆಚ್ಚು ಹೊತ್ತು ಕಳೆಯೋದು ಸರಿಯಲ್ಲ. ಯಾರಾದರು ನೋಡಿದವರು ಮನೆಗೆ ಸುದ್ದಿಮುಟ್ಟಿಸಿದರೆ ಅಂದುಕೊಂಡ ಕಾರ್ಯವೆಲ್ಲ ತಲೆಕೆಳಗಾಗಿ ಹೋಗುವುದರಲ್ಲಿ ಸಂಶಯವಿಲ್ಲ ಎಂದು ಭಯಗೊಂಡು ಅಕ್ಷರಳನ್ನು ಆಟೋ ಹತ್ತಿಸಿ ಮನೆಗೆ ಕಳುಹಿಸಿಕೊಟ್ಟ.

ಅಭಿಮನ್ಯುವಿನ ಕಚೇರಿಗೆ ಅಕ್ಷರ ಸತತ ಎರಡು ದಿನಗಳ ಕಾಲ ಭೇಟಿಕೊಟ್ಟ ವಿಚಾರ ಅದಾಗಲೇ ಮನೆಯವರೆಗೂ ತಲುಪಿತು. ವಿಷಯ ತಿಳಿದು ರಾಜಶೇಖರ್ ತಲ್ಲಣಗೊಂಡರು. ಇನ್ನು ಮದುವೆಗೆ ಉಳಿದಿರುವುದು ಕೇವಲ ಹದಿನಾಲ್ಕು ದಿನಗಳು ಮಾತ್ರ.

ಇಂತಹ ಸಂದರ್ಭದಲ್ಲಿ ಮತ್ತೆ ಮಗಳ ಮನಸ್ಸಿನಲ್ಲಿ ಪ್ರೀತಿ ಅರಳಿ ನಿಂತಿರುವುದನ್ನು ಕೇಳಿ ತೀವ್ರ ಆಕ್ರೋಶಗೊಂಡರು. ಮಗಳ ಮದುವೆ ವಿಚಾರ ಇಡೀ ಊರಿಗೆ ಗೊತ್ತಾಗಿದೆ. ಒಬ್ಬರಿಗೂ ಬಿಡದೆ ಮದುವೆ ಕಾಗದ ಕೊಟ್ಟಾಗಿದೆ. ಇಂತಹ ಸಂದರ್ಭದಲ್ಲಿ ಮಗಳು ಎಲ್ಲಾದರೂ ಕೈ ಕೊಟ್ಟು ಬಿಟ್ಟರೆ ಮಾನ, ಮರ್ಯಾದೆಯೆಲ್ಲ ಬೀದಿಪಾಲಾಗೋದು ಖಂಡಿತ. ಮಾನ, ಮರ್ಯಾದೆ ಯನ್ನೆಲ್ಲ ಕಳೆದುಕೊಂಡು ಬದುಕಿರುವುದಕ್ಕಿಂತ ಕೆರೆನೋ, ಬಾವಿನೋ ನೋಡಿಕೊಳ್ಳುವುದೇ ವಾಸಿ. ಅದಕ್ಕೆ ಕಾರಣಕರ್ತಳಾದ ಮಗಳನ್ನು ಮೊದಲು ಕೊಂದು ಆ ನಂತರ ತಾನು ಸಾಯಬೇಕು ಅಂದುಕೊಂಡ ರಾಜಶೇಖರ್ ಸಿಟ್ಟಿನಿಂದ ಕುದಿಯಲು ಪ್ರಾರಂಭಿಸಿದರು.

ಮನೆಗೆ ಕಾಲಿಟ್ಟ ಮಗಳನ್ನು ಎಳೆದೊಯ್ದು ಮನಸೋ‌ಇಚ್ಚೆ ಥಳಿಸಿದರು. ರಾಜಶೇಖರ್ ಅವರ ಬೂಟುಕಾಲಿನ ಒದೆತಕ್ಕೆ ಅಕ್ಷರ ಮೂಲೆಯಲ್ಲಿ ಮುದುರಿ ಕುಳಿತು ಕಣ್ಣೀರು ಸುರಿಸಲು ಪ್ರಾರಂಭಿಸಿದಳು. ನಾಚಿಕೆಯಾಗೋದಿಲ್ವ ನಿನ್ಗೆ. ಮದ್ವೆಗೆ ಇನ್ನು ಕೇವಲ ಹದಿನಾಲ್ಕು ದಿನಗಳು ಮಾತ್ರ ಬಾಕಿ ಉಳಿದಿರುವಾಗ ಇದೆಲ್ಲ ಬೇಕಿತ್ತಾ ನಿನ್ಗೆ? ದಿನಬೆಳಗಾದ್ರೆ ಅಭಿಮನ್ಯುವಿನ ಎದುರು ಹೋಗಿ ಕೂತ್ಕೊಂಡಿತಿಯಲ್ಲ…? ನಿನ್ಗೆ ಸ್ವಲ್ಪನೂ ನಾಚಿಕೆ, ಮಾನ, ಮರ್ಯಾದಿ ಅನ್ನೋದು ಇಲ್ವ? ನೋಡಿದ ಜನ ಏನಂದು ಕೊಳ್ಳೋದಿಲ್ಲ? ಅಭಿಮನ್ಯುವಿನೊಂದಿಗೆ ಮದ್ವೆ ಮಾಡಿಕೊಡ್ತೇನೆ ಅಂತ ಮಾತುಕೊಟ್ರೂ ಕೂಡ ನನ್ನ ಮಾತು ಕೇಳದೆ ಇನ್ನು ಮುಂದೆ ಅಭಿಮನ್ಯುವಿನ ಮುಖ ನೋಡೋದಿಲ್ಲ, ಅವನನ್ನ ಮರೆತು ಬಿಡ್ತೇನೆ. ನನ್ಗೆ ನಿಖಿಲ್‌ವೊಬ್ಬನೇ ಸಾಕು ಅಂತ ನೀನು ಹೇಳಿದ್ದಕ್ಕೆ ತಾನೇ ನಾನು ನಿಖಿಲ್‌ಗೆ ನಿನ್ನ ಕೊಟ್ಟು ಮದ್ವೆ ಮಾಡೋದಕ್ಕೆ ಮುಂದಾಗಿದ್ದು. ಇದೀಗ ಪುನಃ ಅಭಿಮನ್ಯು ಜೊತೆ ಚಕ್ಕಂದ ಆಡ್ಲಿಕ್ಕೆ ಹೋಗ್ತಾ ಇದ್ದೀಯ. ನಮ್ಮ ಮನೆತನದ ಗೌರವ ಹರಾಜು ಹಾಕದೆ ಇದ್ದರೆ ನಿನ್ಗೆ ನೆಮ್ಮದಿ ಎಂಬುದೇ ಇಲ್ಲ. ಅದ್ಕೋಸ್ಕರನೇ ಹುಟ್ಟಿದ್ದೀಯ, ಹಾಳಾದವಳು. ಮದ್ವೆಯಾಗುವ ತನಕ ನೀನು ನನ್ನ ಕೇಳದೆ ಎಲ್ಲಿಗೂ ಹೋಗೋದು ಬೇಡ. ಇಲ್ಲಿಯೇ ಬಿದ್ದಿರು ಗುಡುಗಿದರು ರಾಜಶೇಖರ್.

ಮಗಳಿಗೆ ಒದಗಿ ಬಂದಿರುವ ಸ್ಥಿತಿ ನೋಡಲಾರದೆ ಲೀಲಾವತಿ ಬೆಡ್‌ರೂಂ ಒಳಗೆ ಸೇರಿಕೊಂಡು ಕಣ್ಣೀರು ಸುರಿಸಲು ಪ್ರಾರಂಭಿಸಿದರು. ಎಷ್ಟೇ ಪ್ರಯತ್ನ ಪಟ್ಟರೂ ಮಗಳಿಂದ ಅಭಿಮನ್ಯುವನ್ನು ಮರೆಯೋದಕ್ಕೆ ಸಾಧ್ಯವಾಗುತ್ತಿಲ್ಲ. ಪ್ರೀತಿಸಿದವರನ್ನು ಮರೆಯೋದು ಅಂದರೇನು ಮಕ್ಕಳಾಟವಲ್ಲ. ಅಭಿಮನ್ಯುವನ್ನು ಅಗಲಿ ಅವಳಿಂದ ಬದುಕಿರೋದಕ್ಕೆ ಸಾಧ್ಯ ಇಲ್ಲ. ಮಗಳು ಕೂಡ ನನ್ನ ಮಾತಿಗೆ ಬೆಲೆಕೊಟ್ಟು ಅಭಿಮನ್ಯುವನ್ನು ಮರೆಯೋದಕ್ಕೆ ಸಾಕಷ್ಟು ಪ್ರಯತ್ನ ಪಟ್ಟಿದ್ದಾಳೆ. ಆದರೆ, ಅದು ಅವಳಿಂದ ಸಾಧ್ಯವಾಗುತ್ತಿಲ್ಲ. ಪಾಪ, ಅವಳಾದರೂ ಏನು ಮಾಡ್ತಾಳೆ? ಪ್ರೀತಿಸಿದವನನ್ನ ಬಿಟ್ಟು ಬೇರೊಬ್ಬನೊಂದಿಗೆ ಮದುವೆಯಾಗು ಅಂದರೆ ಎಲ್ಲವನ್ನೂ ಮರೆತು ಮದುವೆಯಾಗುವುದಾದರೂ ಹೇಗೆ? ನಾನೇ ತಪ್ಪು ಮಾಡಿಬಿಟ್ಟೆ. ಮಗಳ ಮನಸ್ಸನ್ನು ಬದಲಾಯಿಸಬಾರದಿತ್ತು. ಅವಳ ಪಾಡಿಗೆ ಅವಳನ್ನ ಬಿಟ್ಟುಬಿಡಬೇಕಾಗಿತ್ತು. ಏನೇ ಆದರೂ ಮಗಳು ಅಭಿಮನ್ಯುವನ್ನೇ ಮದುವೆಯಾಗುವುದು ಸೂಕ್ತ. ಅವನನ್ನ ಮದುವೆಯಾದರೆ ಮಾತ್ರ ಮಗಳು ನೆಮ್ಮದಿಯಿಂದ ಬದುಕು ನಡೆಸೋದಕ್ಕೆ ಸಾಧ್ಯ. ಒಂದ್ವೇಳೆ ಅಭಿಮನ್ಯುವನ್ನು ಮದುವೆಯಾದರೆ ಅವರಿಬ್ಬರನ್ನ ನೆಮ್ಮದಿಯಾಗಿ ಬದುಕೋದಕ್ಕೆ ಈ ಮನುಷ್ಯ ಬಿಡೋದಿಲ್ಲ. ಅಂತಹ ಒಂದು ಪ್ರಸಂಗವನ್ನು ನನ್ನ ಕಣ್ಗಳಿಂದ ನೋಡೋದಕ್ಕೆ ಸಾಧ್ಯವಿಲ್ಲ. ಮಗಳ ಬದುಕು ನನ್ನ ಕಣ್ಣಮುಂದೆಯೇ ಕರಗಿ ಹೋಗುವ ದೃಶ್ಯ ಕಲ್ಪಿಸಿಕೊಳ್ಳೋದಕ್ಕೂ ನನ್ನಿಂದ ಸಾಧ್ಯವಿಲ್ಲ. ಆಸ್ತಿ, ಅಂತಸ್ತಿಗೋಸ್ಕರ ಮಗಳ ಬದುಕನ್ನೇ ಬಲಿ ತೆಗೆದುಕೊಳ್ಳಲು ಮುಂದಾಗಿರುವವನೊಂದಿಗೆ ಇನ್ನು ಬದುಕು ನಡೆಸೋದಕ್ಕೆ ಸಾಧ್ಯವಿಲ್ಲ. ಬದುಕು ನಡೆಸಿದರೆ ಆ ಬದುಕಿಗೊಂದು ಅರ್ಥವೇ ಇರುವುದಿಲ್ಲ. ಈ ಜೀವನವನ್ನು ಇಲ್ಲಿಗೇ ಕೊನೆಗಾಣಿಸಬೇಕು ಎಂದು ಅಂತಿಮವಾಗಿ ಕೈಗೊಂಡ ತೀರ್ಮಾನವನ್ನು ಮತ್ತೆ ಮತ್ತೆ ನೆನಪಿಗೆ ತಂದುಕೊಂಡು ಮನಸ್ಸನ್ನು ಗಟ್ಟಿಮಾಡಿಕೊಳ್ಳಲು ಪ್ರಯತ್ನಿಸಿದರು.

ಒಂದಷ್ಟು ಹೊತ್ತು ಮಗಳನ್ನು ನೆನೆದು ಬಿಕ್ಕಳಿಸಿ ಅತ್ತುಬಿಟ್ಟರು. ಪಾಪದ ಹುಡುಗಿ, ಜೀವನದಲ್ಲಿ ಇನ್ನೆಷ್ಟು ಕಷ್ಟ ಅನುಭವಿಸೋದಕ್ಕೆ ಬಾಕಿ ಇದೆಯೋ ಏನೋ? ತನ್ನ ಸಾವಿನಿಂದಾದರೂ ಅವರು ಬುದ್ಧಿಕಲಿಯಲಿ. ಮಗಳಿಗೊಂದು ಉತ್ತಮ ಬದುಕು ಕಟ್ಟಿಕೊಡಲು ಮುಂದಾಗಲಿ ಎಂದು ತಿಳಿದು ಮಗಳಿಗೆ ತನ್ನ ಅಂತಿಮ ವಿದಾಯದ ಪತ್ರವನ್ನು ದುಃಖದಿಂದ ಬರೆದು ಮುಗಿಸಿ ತನ್ನ ಎದೆಯೊಳಗೆ ಬಚ್ಚಿಟ್ಟುಕೊಂಡ ಲೀಲಾವತಿ, ರಾತ್ರಿ ಎಂದಿನಂತೆ ಅಡುಗೆ ಮಾಡಿ ಅಪ್ಪ, ಮಗಳಿಗೆ ಪ್ರೀತಿಯಿಂದ ಉಣ ಬಡಿಸಿದರು. ಆತ್ಮಹತ್ಯೆಗೆ ಶರಣಾಗುವ ವ್ಯಕ್ತಿಯಲ್ಲಿ ಕಾಣುವ ದುಃಖ, ಆತಂಕ ಅವರ ಮೊಗದಲ್ಲಿ ಕಾಣಲಿಲ್ಲ. ಮನದೊಳಗೆ ದುಃಖ ತುಂಬಿಕೊಂಡಿದ್ದರೂ ತೋರ್ಪಡಿಸಿಕೊಳ್ಳಲು ಮುಂದಾಗಲಿಲ್ಲ. ಇನ್ನೆಂದೂ ಮಗಳ ಮೊಗವನ್ನು ನೋಡುವ ಸೌಭಾಗ್ಯ ತನಗಿಲ್ಲವೆಂದು ಸಾಕಷ್ಟು ಹೊತ್ತು ಮಗಳನ್ನು ನೋಡುತ್ತಾ ಕುಳಿತು ಬಿಟ್ಟರು.

ರಾತ್ರಿ ಅಪ್ಪ, ಮಗಳು ಇಬ್ಬರಿಗೆ ಬೇಗ ನಿದ್ರೆ ಬರಲಿ ಎಂದು ದೇವರಲ್ಲಿ ಪ್ರಾರ್ಥಿಸಿ ಮಲಗಿಕೊಂಡ ಲೀಲಾವತಿ, ಸಾವಿನ ಕದ ತಟ್ಟುವ ಕುತೂಹಲದಲ್ಲಿದ್ದರು. ದೇವರೇ, ಸಾಯಲು ಸಿದ್ಧವಾಗಿ ನಿಂತುಬಿಟ್ಟಿದ್ದೇನೆ. ಈ ಬದುಕು ಸಾಕಾಗಿ ಹೋಗಿದೆ. ನಿನ್ನಲ್ಲಿಗೆ ಬಂದು ಬಿಡುತ್ತೇನೆ. ನನ್ನ ಮಗಳು ಇನ್ನೂ ಸಣ್ಣವಳು. ಅವಳನ್ನ ಚೆನ್ನಾಗಿ ನೋಡಿಕೊಳ್ಳುವ ಜವಾಬ್ದಾರಿ ನಿನ್ನದು. ಅವಳ ಆಸೆಯಂತೆ ಅಭಿಮನ್ಯುವಿನೊಂದಿಗೆ ಮದುವೆ ಆಗುವಂತೆ ಮಾಡಿಬಿಡು. ಅದೊಂದೇ ನನ್ನ ಕಟ್ಟ ಕಡೆಯ ಬೇಡಿಕೆ. ಸಾಯೋ ವ್ಯಕ್ತಿಯ ಆಸೆಯನ್ನು ಎಲ್ಲರೂ ಈಡೇರಿಸೋದಕ್ಕೆ ಮುಂದಾಗುತ್ತಾರೆ ಎಂಬ ನಂಬಿಕೆ ನನಗಿದೆ. ನಾನು ಸಾಯುವ ಮನಸ್ಸು ಮಾಡಿದ್ದೇನೆ. ದಯವಿಟ್ಟು ನನ್ನ ಈ ಒಂದು ಕೊನೆಯ ಆಸೆ ಈಡೇರಿಸಿಕೊಡು. ನನ್ನ ಮಗಳು ಅಭಿಮನ್ಯುವಿನೊಂದಿಗೆ ಸುಂದರ ಬದುಕು ನಡೆಸಿದರೆ ಮಾತ್ರ ನನ್ನ ಆತ್ಮ ಸಂತೃಪ್ತಿಯಿಂದ ಇರಲು ಸಾಧ್ಯ ಎಂದು ಮನದಲ್ಲಿಯೇ ದೇವರನ್ನು ನೆನೆದುಕೊಂಡು ಪ್ರಾರ್ಥಿಸಿದರು.

ಪಕ್ಕದಲ್ಲಿಯೇ ಮಲಗಿದ್ದ ರಾಜಶೇಖರ್ ನಿದ್ರೆಗೆ ಜಾರಿರುವುದನ್ನು ಖಾತರಿ ಪಡಿಸಿಕೊಂಡು ಲೀಲಾವತಿ ಮೆಲ್ಲನೆ ಎದ್ದು ಮಗಳ ಬೆಡ್‌ರೂಂ ಕಡೆಗೆ ನಡೆದರು. ಅಪ್ಪನ ಕೈಯಿಂದ ಪೆಟ್ಟು ತಿಂದರೂ ಅಕ್ಷರ ಸುಖನಿದ್ರೆಯಲ್ಲಿದ್ದಳು. ಮಗಳ ಹಣೆಗೊಂದು ತಿಲಕವಿಟ್ಟು, ಸಿಹಿಮುತ್ತು ನೀಡಿದಾಗ ಲೀಲಾವತಿಯ ಕೈ ಕಾಲು ದುಃಖದಿಂದ ನಡುಗಲು ಪ್ರಾರಂಭಿಸಿತು. ಮಗಳನ್ನು ಕಟ್ಟಕಡೆಯದಾಗಿ ಬಾಚಿತಬ್ಬಿಕೊಂಡು ಅತ್ತುಬಿಡಬೇಕೆಂದು ಅನ್ನಿಸಿತು. ದುಃಖವನ್ನು ತಡೆದುಕೊಂಡು ತಾನು ಬರೆದಿದ್ದ ಪತ್ರವನ್ನು ಎದೆಯೊಳಗಿಂದ ತೆಗೆದು ಅಕ್ಷರ ಮಲಗಿದ್ದ ಮಂಚದ ತಲೆದಿಂಬಿನ ಪಕ್ಕದಲ್ಲಿ ಇಟ್ಟು ಕಟ್ಟ ಕಡೆಯದಾಗಿ ಮಗಳ ಮುಖವನ್ನು ನೋಡಿ ದುಃಖ ತಡೆದುಕೊಳ್ಳಲಾರದೆ ಕಣ್ಣೀರು ಸುರಿಸಿದರು. ತನ್ನ ನಿಯಂತ್ರಣ ತಪ್ಪಿ ಬಾಯಿಯಿಂದ ಎಲ್ಲಾದರು ಅಳುವ ಶಬ್ದ ಹೊರ ಬಿದ್ದುಬಿಟ್ಟರೆ ಕಷ್ಟವೆಂದು ತಿಳಿದು ಬಾಯಿಯನ್ನು ಗಟ್ಟಿಯಾಗಿ ಅದುಮಿ ಹಿಡಿದುಕೊಂಡು ಸದ್ದಾಗದಂತೆ ಬಾಗಿಲೆಳೆದು ಮನೆಯ ಮುಂಭಾಗಕ್ಕೆ ಬಂದು ನಿಂತರು.

ರಾಜಶೇಖರ್‌ನ ಪತ್ನಿಯಾಗಿ ಮನೆಯೊಳಗೆ ಕಾಲಿಟ್ಟ ಕ್ಷಣದಿಂದ ನೋವು-ನಲಿವುಗಳನ್ನು ಅನುಭವಿಸಿದ ಮನೆಯ ಕಡೆಗೊಮ್ಮೆ ಕಟ್ಟಕಡೆಯದಾಗಿ ನೋಡಿದ ಲೀಲಾವತಿ ಇನ್ನು ಈ ಮನೆಯ ಋಣ ಮುಗಿಯಿತು. ಅಂದುಕೊಂಡು ಮನೆಯ ಪಕ್ಕದ ಬಾವಿಯ ಕಡೆಗೆ ನಡಿಗೆ ಹಾಕಿದರು. ಬಾವಿಯ ಕಟ್ಟೆ ಮೇಲೆ ಏರಿ ಕುಳಿತು ಎಲ್ಲವನ್ನೂ ಒಂದುಕ್ಷಣ ಮರೆತು ಕಣ್ಣು ಮುಚ್ಚಿ ಬಾವಿಗೆ ಧುಮುಕಿದರು.
* * *

ಬೆಳಗ್ಗೆ ಬೇಗನೇ ಎಚ್ಚರವಾದ ರಾಜಶೇಖರ್‌ಗೆ ಪತ್ನಿ ಪಕ್ಕದಲ್ಲಿ ಇಲ್ಲದೆ ಇದ್ದದನ್ನು ಗಮನಿಸಿ ಮನೆಯೊಳಗೆಲ್ಲ ಹುಡು ಕಾಡಿದರು. ಕರೆದರೂ, ಕೂಗಿಕೊಂಡರೂ ಲೀಲಾವತಿಯ ಸುಳಿವೇ ಇಲ್ಲ. ಹೊರಗೆ ಎಲ್ಲಾದರು ಹೋಗಿರಬಹುದೆಂದು ಸುತ್ತಮುತ್ತಲೆಲ್ಲ ಹುಡುಕಾಡಿದರೂ ಪತ್ತೆ ಇಲ್ಲ. ಮನೆಯ ಆವರಣದಲ್ಲಿ ನಿಂತು ಜೋರಾಗಿ ಕೂಗಿ ಕೂಗಿ ಕರೆದರು. ಕರೆಗೆ ಉತ್ತರ ಬರಲಿಲ್ಲ.

ಅಪ್ಪ ಮನೆಯ ಹೊರಗೆ ನಿಂತು ಅಮ್ಮನನ್ನು ಕೂಗಿ ಕರೆಯುತ್ತಿರುವುದನ್ನು ಕೇಳಿ ಎಚ್ಚರಗೊಂಡ ಅಕ್ಷರ ಕಣ್ಣೊರೆಸಿಕೊಂಡು ಮನೆಯ ಹೊರಗೆ ಬಂದು ನೋಡಿದಳು. ಅಪ್ಪನೊಂದಿಗೆ ಅಕ್ಷರ ಕೂಡ ಅಮ್ಮನ ಹುಡುಕಾಟದಲ್ಲಿ ತೊಡಗಿದಳು. ಸಂಪೂರ್ಣ ಬೆಳಕು ಹರಿದರೂ ಲೀಲಾವತಿ ಪತ್ತೆಯಾಗದೆ ಇದ್ದಾಗ ರಾಜಶೇಖರ್ ಮೊಗದಲ್ಲಿ ಸಣ್ಣ ಆತಂಕ ಕವಿದು ಕೊಂಡಿತು. ಎಲ್ಲಾದ್ರು ಆತ್ಮಹತ್ಯೆ ಮಾಡ್ಕೊಂಬಿಟ್ಳೋ ಏನೋ? ಅಥವಾ ಮನೆ ಬಿಟ್ಟು ಹೋರಟು ಹೋದ್ಲಾ? ಎಂದು ಮನದೊಳಗೆ ಪ್ರಶ್ನೆ ಎದ್ದಾಗ ಛೇ, ಅಂಥಹ ಕೆಲಸ ನನ್ನಾಕೆ ಮಾಡೋದಿಲ್ಲ ತನಗೆ ತಾನೇ ಸಮಾಧಾನ ಹೇಳಿಕೊಂಡರು. ಸೂರ್ಯ ನೆತ್ತಿಯ ಮೇಲೆ ಬಂದು ನಿಂತರೂ ಲೀಲಾವತಿ ಸುಳಿವಿಲ್ಲ.

ರಾಜಶೇಖರ್ ಆತಂಕ ಮತ್ತಷ್ಟು ಹೆಚ್ಚಾಯಿತು. ಸಂಶಯಗೊಂಡ ರಾಜಶೇಖರ್ ನಿಧಾನವಾಗಿ ಬಾವಿಯ ಕಡೆಗೆ ನಡೆದರು. ಬಾವಿಯ ಬಳಿ ಒಡೆದ ಬಳೆಯ ಚೂರೊಂದು ಕಾಣಿಸಿತು. ಇದು ಲೀಲಾವತಿಯದ್ದೇ ಬಳಿ ಎಂದು ಖಚಿತಗೊಂಡೊಡನೆ ಕುಸಿದು ಬಿದ್ದರು. ರಾಜಶೇಖರ್ ಕುಸಿದು ಬಿದ್ದಿರುವುದನ್ನು ಕಂಡು ಆತಂಕಗೊಂಡ ಅಕ್ಷರ ಮನೆಯ ಒಳಗೆ ಓಡಿ ಹೋಗಿ ಒಂದು ಚೆಂಬಿನಲ್ಲಿ ನೀರು ತುಂಬಿಸಿಕೊಂಡು ಓಡಿ ಬಂದು ಕುಸಿದು ಬಿದ್ದಿದ್ದ ರಾಜಶೇಖರ್ ಮುಖಕ್ಕೆ ನೀರು ಚಿಮುಕಿಸಿ ಮೇಲೆಬ್ಬಿಸಿದಳು.

ಪ್ರಜ್ಞೆ ಕಳೆದುಕೊಂಡು ಬಿದ್ದಿದ್ದ ರಾಜಶೇಖರ್‌ಗೆ ಮಗಳ ಆರೈಕೆಯಿಂದ ಎಚ್ಚರಗೊಂಡಾಗ ದುಃಖದ ಕಟ್ಟೆಯೊಡೆದು ಪಕ್ಕದಲ್ಲಿಯೇ ಇದ್ದ ಮಗಳನ್ನು ಬಿಗಿದಪ್ಪಿಕೊಂಡು ಕಣ್ಣೀರಧಾರೆ ಸುರಿಸಿದರು. ಅಕ್ಷರ, ಅಮ್ಮ ನಮ್ಮನ್ನ ಬಿಟ್ಟು ಹೊರಟೋದ್ಲು… ಅಂದ ರಾಜಶೇಖರ್ ಗೊಳೋ ಎಂದು ಅಳಲು ಪ್ರಾರಂಭಿಸಿದರು.

ಅಪ್ಪನ ಮಾತುಕೇಳಿ ಅಕ್ಷರಳಿಗೆ ಮಾತೇ ಹೊರಡದೆ ಕಲ್ಲಾಗಿ ಹೋದಳು. ಸ್ವಲ್ಪ ಹೊತ್ತು ಕಳೆದ ನಂತರ ತನ್ನನ್ನು ತಾನೇ ಸಮಾಧಾನ ಪಡಿಸಿಕೊಂಡ
ರಾಜಶೇಖರ್ ಮಂಕಾಗಿ ಹೋಗಿದ್ದ ಮಗಳನ್ನು ಹೊತ್ತೊಯ್ದು ಮನೆಯಲ್ಲಿ ಮಲಗಿಸಿ ನೀರು ಚಿಮುಕಿಸಿ ಎಬ್ಬಿಸಿದರು.

ಏನ್ ಮಾಡೋದಕ್ಕೆ ಸಾಧ್ಯ ಹೇಳು? ಹೊರಟೋದ್ಲು. ನಾನೇನು ತಪ್ಪು ಮಾಡಿದೆ, ನಾನೇನು ಅವಳಿಗೆ ಕಷ್ಟಕೊಟ್ಟೆ ಅಂತ ಇಂಥ ನಿರ್ಧಾರ ಕೈಗೊಂಡಳು. ಏನೇ ನೋವುಗಳಿದ್ದರೂ ನಾನು ಬಗೆಹರಿಸುತ್ತಿದೆ. ಒಂದು ಮಾತು ಕೂಡ ಹೇಳದೆ ಹೊರಟು ಹೋಗಿಬಿಟ್ಟಳು. ಮಗಳ ಎದುರು ಗೋಳಾಡಿದರು.

ಅಕ್ಷರ ಹಾಸಿಗೆಯಿಂದ ಮೇಲೆದ್ದು ಅಳುತ್ತಾ ಕೂತಳು. ಮಗಳನ್ನು ಸಮಾಧಾನ ಪಡಿಸಿದ ರಾಜಶೇಖರ್, ಬಾವಿಯಲ್ಲಿ ಶವವಾಗಿ ಬಿದ್ದಿರುವ ಪತ್ನಿಯ ಮೃತದೇಹ ಹೊರ ತೆಗೆಯಲು ಕೆಲಸದವರನ್ನು ಕರೆ ತರಲು ಮನೆಯಿಂದ ಹೊರ ನಡೆದರು.

ಅಮ್ಮ ಏಕಾಗಿ ಇಂತಹ ನಿರ್ಧಾರ ಕೈಗೊಂಡರು ಎಂದು ಅಕ್ಷರ ಚಿಂತೆಯಲ್ಲಿ ಮುಳುಗಿ ಅಳುತ್ತಾ, ಹಾಸಿಗೆಗೆ ಹೊರಳಿಕೊಂ ಡಾಗ ಮಡಚಿಟ್ಟ ಬಿಳಿಹಾಳೆಯೊಂದು ಕಾಣಿಸಿತು. ಆಶ್ಚರ್ಯದಿಂದ ಆತುರ ಆತುರವಾಗಿ ಪತ್ರವನ್ನು ಬಿಚ್ಚಿ ಓದಲು ಪ್ರಾರಂಭಿಸಿದಳು.

ಪ್ರೀತಿಯ ನನ್ನ ಮುದ್ದಿನ ಮಗು ಅಕ್ಷರ; ಇದು ನಿನ್ನ ಅಮ್ಮ ನಿನ್ನೊಂದಿಗೆ ಆಡುತ್ತಿರುವ ಕಟ್ಟಕಡೆಯ ಮಾತು. ಇನ್ನೆಂದಿಗೂ ನಿನ್ನ ಅಮ್ಮ ನಿನ್ನೊಂದಿಗೆ ಮಾತಾಡೋದಕ್ಕೆ, ನಿನ್ನ ಮುದ್ದಾಡೋದಕ್ಕೆ ಬರುವುದಿಲ್ಲ. ತುಂಬಾ ದೂರ ಹೊರಟು ಹೋಗಲು ನಿರ್ಧಾರ ಮಾಡಿದ್ದೇನೆ ಅಕ್ಷರ, ಯಾರ ಕೈಗೂ ನಿಲುಕದಷ್ಟು ದೂರಕ್ಕೆ. ಎಲ್ಲರೂ ಮುಂದಿನ ಜೀವನ ಎದುರು ನೋಡುತ್ತಾ ಬದುಕು ಸಾಗಿಸುತ್ತಾರೆ. ಆದರೆ, ನಾನು ಮಾತ್ರ ಕಳೆದು ಹೋದ ಸುಂದರ ಬದುಕು ಇನ್ನೆಂದೂ ಮರಳಿ ಬರಲಾರದೆಂಬ ನಂಬಿಕೆಯೊಂದಿಗೆ ಜೀವನವನ್ನು ಕೊನೆಗಾಣಿಸಿ ಹೊರಡುವ ನಿರ್ಧಾರ ಕೈಗೊಂಡಾಗಿದೆ. ನಿನಗೊಬ್ಬಳಿಗೋಸ್ಕರ ಬದುಕಬೇಕೆಂದು ಅಂದುಕೊಂಡಿದ್ದೆ. ಆದರೆ, ನಿನಗೆ ಒದಗಿರುವ ಕಷ್ಟ ನನ್ನಿಂದ ನೋಡೋದಕ್ಕೆ ಸಾಧ್ಯವಾಗುತ್ತಿಲ್ಲ. ನಾನು ಹೊರಟು ಹೋದ ನಂತರ ನೀನು ಕಣ್ಣೀರು ಸುರಿಸಿ ದುಃಖದ ಮಡುವಿನಲ್ಲಿ ಮುಳುಗಿ ಹೋಗುತ್ತಿಯ ಎಂಬ ಭಯ ನನಗೆ ಕಾಡುತ್ತಿದೆ. ನನಗೆ ಸಾವಿನ ಭಯ ಕಾಡುತ್ತಿಲ್ಲ ಅಕ್ಷರ, ನಿನ್ನ ಮುಂದಿನ ಬದುಕಿನ ಬಗ್ಗೆ ಯೋಚನೆ ಮಾಡಿದಾಗ ಭಯ ಕಾಡುತ್ತಿದೆ. ಅಮ್ಮ ಸತ್ತು ಹೋದಳು ಅಂತ ಚಿಂತೆಯಲ್ಲಿ ಮುಳುಗಬೇಡ. ಏನೇ ಕಷ್ಟ ಎದುರಾದರೂ ನೀನು ಅಭಿಮನ್ಯುವನ್ನು ಕೈ ಬಿಡಬೇಡ. ಅವನು ನಿನಗೊಂದು ಸುಂದರವಾದ ಬದುಕು ಕಟ್ಟಿಕೊಡಲು ತುದಿಗಾಲಲ್ಲಿ ನಿಂತಿದ್ದಾನೆ. ನಾನು ಸತ್ತುಹೋದ ದುಃಖದಲ್ಲಿ ಅಭಿಮನ್ಯುವನ್ನು ಮದುವೆಯಾಗೋದಕ್ಕೆ ಮಾತ್ರ ಮರೆಯಬೇಡ. ನನ್ನ ಅಂತ್ಯಸಂಸ್ಕಾರ ಆದ ಮರುದಿನವೇ ನೀನು ಅಭಿಮನ್ಯುವಿನ ಬಳಿ ಹೊರಟು ಹೋಗು. ಅಪ್ಪ ನಿನಗೆಂದೂ ಸುಂದರವಾದ ಬದುಕು ಕಟ್ಟಿಕೊಡುವುದಿಲ್ಲ. ಅವರಿಗೆ ಏನಿದ್ದರೂ ಆಸ್ತಿ, ಅಂತಸ್ತು ಮಾತ್ರ ಮುಖ್ಯ. ಅವರ ಆಸೆ ಈಡೇರಿಸುವುದಕ್ಕೆ ಹೋಗಿ ನಿನ್ನ ಬದುಕನ್ನು ನೀನೇ ಕೈಯಾರೆ ಹಾಳು ಮಾಡಿಕೊಳ್ಳಬೇಡ. ನೀನು ಅಭಿಮನ್ಯುವನ್ನು ಮದುವೆಯಾದರೆ ಮಾತ್ರ ನನ್ನ ಆತ್ಮಕ್ಕೆ ಶಾಂತಿ ಸಿಗಲು ಸಾಧ್ಯ. ನೀನು ಈ ನಿನ್ನ ಅಮ್ಮನ ಮಾತನ್ನು ನೆರವೇರಿಸಿಕೊಡುತ್ತೀಯ ಎಂಬ ನಂಬಿಕೆ ನನಗಿದೆ. ನನಗಿನ್ನು ಇಲ್ಲಿ ಹೆಚ್ಚು ಹೊತ್ತು ಇರಲು ಆಸಕ್ತಿ ಇಲ್ಲ. ಇನ್ನೊಂದು ಜನ್ಮವೇನಾ ದರು ದೇವರು ಕೊಟ್ಟರೆ ಮತ್ತೆ ನಿನ್ನ ಅಮ್ಮನಾಗಿ ಬರುತ್ತೇನೆ.
ಇಂತಿ ನಿನ್ನ ಪ್ರೀತಿಯ ಅಮ್ಮ
ಲೀಲಾವತಿ.

ಪತ್ರವನ್ನು ಓದಿ ಮುಗಿಸಿದ ಅಕ್ಷರ ಕಣ್ಣೀರಿನ ಕಡಲಾದಳು. ನಮ್ಮಿಬ್ಬರ ಪ್ರೀತಿ ಚಿನ್ನದಂತಹ ಅಮ್ಮನನ್ನು ಬಲಿ ತೆಗೆದುಕೊಂಡು ಇಡ್ತಲ್ಲಾ!? ನಾನೇನು ಪಾಪ ಮಾಡಿದೆ ಅಂತ ದೇವರು ಪದೇ ಪದೆ ನನ್ಗೆ ಇಂತಹ ಕಷ್ಟ ಕೊಡುತ್ತಾ ಇದ್ದಾನೆ. ದೇವರಿಗೆ ಒಂದು ಚೂರು ಕೂಡ ಕರುಣೆ ಬೇಡವಾ? ಅಮ್ಮನನ್ನು ಕಳೆದುಕೊಂಡು ಈ ಭೂಮಿ ಮೇಲೆ ಇರಕೂಡದು. ನಾನೂ ಕೂಡ ಅಮ್ಮನ ಹಾದಿ ತುಳಿಯಬೇಕು ಅಂದುಕೊಂಡಳಾದರೂ ಅಮ್ಮ ಪತ್ರದಲ್ಲಿ ಬರೆದ ಪ್ರತಿಯೊಂದು ಅಕ್ಷರವೂ ಕೂಡ ಮತ್ತೆ ನೆನಪಿಗೆ ಬಂದು ಇಲ್ಲ, ನಾನು ಬದುಕಬೇಕು. ಅಮ್ಮನ ಆಸೆ ಈಡೇರಿಸುವುದಕ್ಕೋಸ್ಕರ. ಅಪ್ಪನ ಹಣದ ಅಹಂಕಾರ ಇಳಿಸುವುದಕೋಸ್ಕರ ಎಂದು ನಿರ್ಧರಿಸಿ ಕಣ್ಣೊರೆಸಿಕೊಂಡಳು.

ಅಪ್ಪನ ಕಿರುಕುಳದಿಂದಲೇ ಅಮ್ಮ ಇಂತಹ ನಿರ್ಧಾರ ಕೈಗೊಂಡಿದ್ದು. ನಾನಿಲ್ಲದಾಗ ಅಮ್ಮನಿಗೆ ಅಪ್ಪ ಎಷ್ಟೊಂದು ಕಿರುಕುಳ ಕೊಟ್ಟಿದ್ದಾರೋ ಏನೋ? ಕಿರುಕುಳ ಕೊಡದೆ ಇದ್ದಿದ್ದರೆ ಅಮ್ಮ ಇಂತಹ ತೀರ್ಮಾನ ಕೈಗೊಳ್ಳುತ್ತಿರಲಿಲ್ಲ. ಅಮ್ಮನ ಕೊನೆಯ ಆಸೆಯಂತೆ ನಾನು ಆದಷ್ಟು ಬೇಗ ಅಭಿಮನ್ಯುವಿನ ಬಳಿ ಸೇರಿಕೊಳ್ಳಬೇಕು ಎಂದು ನಿರ್ಧರಿಸಿದಳು.

ಬಾವಿಯಿಂದ ಮೃತದೇಹ ಮೇಲೆತ್ತಲು ಕೆಲಸದವರನ್ನು ಕರೆತರಲು ಹೋಗಿದ್ದ ರಾಜಶೇಖರ್, ಏನೋ ನೆನಪಿಗೆ ತಂದುಕೊಂಡು ಮತ್ತೆ ಮನೆಯ ಕಡೆಗೆ ತರಾತುರಿಯಲ್ಲಿ ಓಡಿ ಬಂದರು. ಮನೆಯಿಂದ ಖಾಲಿ ಬಿಂದಿಗೆಯೊಂದನ್ನು ಎತ್ತಿಕೊಂಡು ಬಾವಿಯ ಕಡೆಗೆ ನಡೆದರು. ಬಿಂದಿಗೆಯನ್ನು ಬಾವಿಯ ಹಗ್ಗಕ್ಕೆ ಬಿಗಿದು ಬಾವಿಗೆ ಇಳಿಬಿಟ್ಟರು.

ಲೀಲಾವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಸುದ್ದಿ ಊರಿಗೆ ಹರಡಿದರೆ ತನ್ನ ಮಾನ, ಮರ್ಯಾದೆಯೊಂದಿಗೆ ಕುಟುಂಬದ ಗೌರವವೂ ಕೂಡ ಮಣ್ಣು ಪಾಲಾಗುತ್ತದೆ ಎಂಬ ಭಯದಲ್ಲಿ ರಾಜಶೇಖರ್, ಬಿಂದಿಗೆಯನ್ನು ಹಗ್ಗಕ್ಕೆ ಬಿಗಿದು ಬಾವಿಗೆ ಇಳಿಬಿಟ್ಟರು. ನೀರು ಸೇದುವಾಗ ಬಾವಿಯೊಳಗೆ ಬಿದ್ದು ಮೃತಪಟ್ಟರು. ಎಂದು ಊರಿಗೆ ಸುದ್ದಿ ಹಬ್ಬಿಸಲು ತೀರ್ಮಾನಿಸಿದರು.

ಲೀಲಾವತಿ ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ತನಗೆ ಬಿಟ್ಟರೆ ಮಗಳಿಗೆ ಮಾತ್ರ ತಿಳಿದಿರೋದು. ಈ ವಿಚಾರ ನಮ್ಮಿಬ್ಬರ ಹೊರತಾಗಿ ಹೊರ ಪ್ರಪಂಚಕ್ಕೆ ತಿಳಿಯಕೂಡದೆಂದು ತೀರ್ಮಾನಿಸಿದ ರಾಜಶೇಖರ್ ಮನೆಯೊಳಗೆ ಧಾವಿಸಿ ಮಗಳ ಬಳಿ ಬಂದು ಕುಳಿತುಕೊಂಡರು.

ಅಕ್ಷರ, ಅಮ್ಮ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಅಂತ ಯಾರಿಗೂ ಹೇಳೋದಕ್ಕೆ ಹೋಗ್ಬೇಡ. ಅಮ್ಮ ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ಎಲ್ಲರಿಗೆ ಗೊತ್ತಾದ್ರೆ ನಿನ್ನಮ್ಮನ ಬಗ್ಗೆ ಜನರು ಇಲ್ಲಸಲ್ಲದ ಕಥೆ ಕಟ್ಟಿಬಿಡ್ತಾರೆ. ಅಲ್ಲದೆ ನಮ್ಮ ಮಾನ, ಮರ್ಯಾದೆ ಕೂಡ ಬೀದಿ ಪಾಲು ಮಾಡಿಬಿಡುತ್ತಾರೆ. ಅಪ್ಪಿತಪ್ಪಿಯೂ ಕೂಡ ನೀನು ಈ ಸತ್ಯದ ವಿಚಾರ ಯಾರಿಗೂ ಹೇಳೋದಕ್ಕೆ ಹೋಗ್ಬೇಡ. ರಾಜಶೇಖರ್ ಮಗಳಿಗೆ ವಿಷಯ ಮನದಟ್ಟುಮಾಡಿಕೊಟ್ಟು ಆಕೆಯಿಂದ ‘ಆತ್ಮಹತ್ಯೆ ವಿಚಾರ ಯಾರಿಗೂ
ತಿಳಿಸೋದಿಲ್ಲ ಎಂದು ಭಾಷೆ ಪಡೆದು ಮೃತದೇಹವನ್ನು ಬಾವಿಯಿಂದ ಮೇಲೆತ್ತಲು ಕೆಲಸದವರನ್ನು ಕರೆತರಲು ಹೊರ ನಡೆದರು.

ಕೆಲಸದವರು ಬಾವಿಯೊಳಗೆ ಹೆಣವಾಗಿ ಮಲಗಿದ್ದ ಲೀಲಾವತಿಯ ಮೃತದೇಹ ಮೇಲೆತ್ತಿದರು. ಕೆಲವು ಗಂಟೆಗಳು ಕಳೆಯುವುದರೊಳಗೆ ಸುದ್ದಿ ಎಲ್ಲಾ ಕಡೆ ಹಬ್ಬಿತು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ರಾಜಶೇಖರ್‌ನಿಂದ ಹೇಳಿಕೆ ಪಡೆದುಕೊಂಡು ಕೈ ಬೆಚ್ಚಗೆ ಮಾಡಿಕೊಂಡು ತೆರಳಿದರು.

ಅಂತ್ಯಸಂಸ್ಕಾರ ಮುಗಿಸಿ ಮನೆಯೊಳಗೆ ಕಾಲಿಟ್ಟ ರಾಜಶೇಖರ್‌ಗೆ ಮನೆಯೇ ಒಂದು ಸ್ಮಶಾನದಂತೆ ಗೋಚರಿಸಿತು. ಮನೆಯ ಸಂತೋಷದ ಕೇಂದ್ರಬಿಂದುವಾಗಿದ್ದ ಲೀಲಾವತಿ ಇನ್ನಿಲ್ಲ ಎಂಬ ಒಂದು ಮಾತನ್ನು ಅರಗಿಸಿಕೊಳ್ಳಲು ಸಾಧ್ಯವಾಗದೆ ದುಃಖದ ಮಡುವಿನಲ್ಲಿ ಮುಳುಗಿದರು. ಮನೆಯ ಪ್ರತಿಯೊಂದು ಮೂಲೆ ಮೂಲೆಗಳಲ್ಲೂ ಆಕೆಯ ನೆನಪುಗಳು ಇದ್ದವು. ಆಕೆಯ ಬಟ್ಟೆಬರೆಗಳನ್ನು ಮನೆಯ ಕೆಲಸದವರಿಗೆ ದಾನ ನೀಡಿದರು. ಮದುವೆಯಲ್ಲಿ ಲೀಲಾವತಿ ಹುಟ್ಟುಕೊಂಡಿದ್ದ ಸೀರೆಯೊಂದನ್ನು ಬಿಟ್ಟು. ಮದುವೆಯ ಸೀರೆಯನ್ನು ಸಾಕಷ್ಟು ವರ್ಷಗಳಿಂದ ತುಂಬಾ ಜೋಪಾನವಾಗಿ ಕಾಪಾಡಿಕೊಂಡು ಬಂದಿದ್ದಳು. ಆದರಿಂದು ಆಕೆಯೇ ಕಣ್ಣಮುಂದೆ ಇಲ್ಲ.

ಮನೆಯಲ್ಲಿ ಸಾವು ಸಂಭವಿಸಿದ್ದರಿಂದ ಅಕ್ಷರಳ ಮದುವೆ ಕೂಡ ಮುಂದೂಡಲ್ಪಟ್ಟಿತು. ಸ್ಥಳೀಯ ಪತ್ರಿಕೆಗಳಿಗೆ ಜಾಹೀರಾತು ನೀಡಿ ಮದುವೆ ಮುಂದೂಡಿರುವ ವಿಷಯವನ್ನು ಎಲ್ಲರಿಗೂ ತಿಳಿಸಲಾಯಿತು. ಅಷ್ಟಕ್ಕೂ ಮದುವೆ ಮುಂದೂಡಿರುವ ವಿಷಯ ಪತ್ರಿಕಾ ಜಾಹೀರಾತು ಮೂಲಕ ತಿಳಿಸುವ ಅವಶ್ಯಕತೆ ಇರಲಿಲ್ಲ. ಇಡೀ ಜಿಲ್ಲೆಯಾದ್ಯಂತ ಜನರ ಬಾಯಿಂದ ಬಾಯಿಗೆ ಸುದ್ದಿ ಹರಡಿಯಾಗಿತ್ತು. ಆದರೂ ಸಾವಿನ ಸುದ್ದಿ ತಿಳಿಯದೆ ಇರುವವರು ನಿಗದಿ ಪಡಿಸಿದ ದಿನದಂದು ಮದುವೆ ಛತ್ರಕ್ಕೆ ಬಂದುಬಿಟ್ಟರೆ ಕಷ್ಟ ಎಂದು ತಿಳಿದು ಜಾಹೀರಾತು ನೀಡಿದರು.
* * *

ದಿನಗಳು ಉರುಳಲು ಪ್ರಾರಂಭಿಸಿತು. ಲೀಲಾವತಿ ಆತ್ಮಹತ್ಯೆ ಮಾಡಿಕೊಂಡು ಸರಿಸುಮಾರು ಮೂರು ತಿಂಗಳು ಸರಿಯಿತು. ಮನೆಯಲ್ಲಿ ಯಾರಾದರು ಮೃತಪಟ್ಟರೆ ಮನೆಯಲ್ಲಿ ವಯಸ್ಸಿಗೆ ಬಂದವರಿಗೆ ಒಂದು ವರ್ಷದೊಳಗೆ ಮದುವೆ ಮಾಡಿ ಮುಗಿಸಬೇಕು. ಇಲ್ಲವಾದರೆ ಮೂರು ವರ್ಷಗಳ ಕಾಲ ಮನೆಯಲ್ಲಿ ಮದುವೆಯಂತಹ ಯಾವುದೇ ಶುಭ ಕಾರ್ಯ ನಡೆಸು ವಂತಿಲ್ಲ ಎಂದು ಹಿರಿಯರು ರಾಜಶೇಖರ್‌ಗೆ ಸಂಪ್ರದಾಯ ನೆನಪಿಸಿಕೊಟ್ಟು ಎಚ್ಚರಿಸಿ ಮಗಳ ಮದುವೆಯನ್ನು ವರ್ಷಾಂತ್ಯದೊಳಗೆ ಮುಗಿಸಿ ಬಿಡುವ ಒತ್ತಡ ಹೇರಿದರು.

ಹಿರಿಯರು ಹೇಳಿದಂತೆ ಆದಷ್ಟು ಬೇಗ ಮಗಳ ಮದುವೆ ಮಾಡಿ ಮುಗಿಸಿ ಬಿಡಬೇಕೆಂದು ನಿರ್ಧರಿಸಿದ ರಾಜಶೇಖರ್ ಮತ್ತೆ ಮಗಳ ಮದುವೆಯ ಓಡಾಟದಲ್ಲಿ ನಿರತರಾದರು. ಒಂದಷ್ಟು ಬಿಡುವು ಸಿಕ್ಕಾಗ ಲೀಲಾವತಿಯ ಆತ್ಮಹತ್ಯೆಗೆ ಕಾರಣವಾದರೂ ಏನು? ಎಂದು ಚಿಂತಿಸುತ್ತಾ ಕುಳಿತುಬಿಡುತ್ತಿದ್ದರು.
ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುಂಚೆ ಒಂದು ಪತ್ರ ಕೂಡ ಬರೆದಿಟ್ಟಿಲ್ಲ. ಆತ್ಮಹತ್ಯೆ ಮಾಡಿಕೊಳ್ಳುವಂತಹ ದೊಡ್ಡ ಸಮಸ್ಯೆಯೇನು ಮನೆಯಲ್ಲಿ ಇರಲಿಲ್ಲ. ಮಗಳ ವಿಷಯದಲ್ಲಿ ನೊಂದುಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದೋ ಏನೋ?

ಬಹುಶಃ ಇದ್ದರೂ ಇರಬಹುದು ಅಂದುಕೊಂಡರು. ಅವರಿಬ್ಬರ ಪ್ರೀತಿಯೇ ತನ್ನ ಪತ್ನಿಯ ಸಾವಿಗೆ ಕಾರಣ. ತನ್ನ ಜೀವ ಹೋದರೂ ಸರಿಯೇ ಅವರಿಬ್ಬರನ್ನ ಒಂದುಗೂಡಲು ಬಿಡೋದಿಲ್ಲ ಎಂದು ಶಪಥ ಕೈಗೊಂಡರು.

ದಿನಗಳು ಉರುಳಿದಂತೆ ಅಕ್ಷರಳಲ್ಲಿ ಅಮ್ಮನ ಅಗಲಿಕೆಯ ನೋವು ಮೆಲ್ಲನೆ ಮರೆಯಾಗ ತೊಡಗಿತು. ಅಮ್ಮನ ಕೊನೆಯ ಆಸೆ ಈಡೇರಿಸಬೇಕು ಎಂದು ನಿರ್ಧರಿಸಿ ಮತ್ತೆ ಅಭಿಮನ್ಯುವನ್ನು ಆಗಿಂದಾಗೆ ಭೇಟಿಯಾಗೋದಕ್ಕೆ ಪ್ರಾರಂಭ ಮಾಡಿದಳು. ಅಪ್ಪ, ಹೊಡೆದರೂ, ಬಡಿದರೂ, ಕೊಂದರೂ ಸರಿಯೇ ತಾನು ಅಭಿಮನ್ಯುವನ್ನು ಭೇಟಿ ಮಾಡುವ ಕಾಯಕ್ರಮ ಮಾತ್ರ ನಿಲ್ಲಿಸೋದಿಲ್ಲ. ಅಭಿಮನ್ಯುವನ್ನು ವಿವಾಹವಾಗುವ ವಿಚಾರದಲ್ಲಿ ಕೈಗೊಂಡ ತೀರ್ಮಾನದಿಂದ ಹಿಂದೆ ಸರಿಯುವುದಿಲ್ಲ ಎಂದು ಪ್ರತಿಜ್ಞೆ ಕೈಗೊಂಡಳು.

ಮಗಳು ತಾನು ಮನೆಯಲ್ಲಿ ಇಲ್ಲದ ಸಮಯ ನೋಡಿ ಮನೆಯಿಂದ ಹೊರ ಬಿದ್ದು ಅಭಿಮನ್ಯುವನ್ನು ಕದ್ದುಮುಚ್ಚಿ ಭೇಟಿ ಮಾಡುತ್ತಿರುವ ವಿಚಾರ ರಾಜಶೇಖರ್ ಕಿವಿಗೆ ಬಿದ್ದು ಕೆರಳಿದರು. ರಾಜಶೇಖರ್‌ಗೆ ಅದೊಂದು ವಿಚಾರ ಸಹಿಸಿಕೊಳ್ಳೋದಕ್ಕೆ ಸಾಧ್ಯವಾಗಲಿಲ್ಲ.

ಅದೊಂದು ದಿನ ಮಗಳನ್ನು ಕರೆದು ಅಮ್ಮ ಸತ್ತ ನಂತರ ಕೂಡ ನಿನ್ನ ಬುದ್ಧಿ ಬದಲಾಗ್ಲಿಲ್ವ್ವ? ನಿನ್ನ ಆಟ ನೋಡಿ ಸಹಿಸಿಕೊಳ್ಳೋದಕ್ಕೆ ಸಾಧ್ಯವಾಗದೆ ಅಮ್ಮ ಆತ್ಮಹತ್ಯೆ ಮಾಡಿಕೊಂಡಳು. ಇನ್ನಾದರೂ ಅಮ್ಮನ ಆಸೆಯಂತೆ ನಿಖಿಲ್‌ನೊಂದಿಗೆ ಮದ್ವೆಯಾಗೋದಕ್ಕೆ ನೋಡು. ಅಮ್ಮನ ಆತ್ಮಕ್ಕೆ ಶಾಂತಿ ಸಿಗಬಹುದು.

ಅಪ್ಪನ ಮಾತು ಕೇಳಿ ಆಕೆಗೆ ಕೋಪ ಉಕ್ಕಿ ಬಂತು. ಇಷ್ಟು ದಿನ ಸಹಿಸಿಕೊಂಡದ್ದು ಸಾಕು. ನನ್ನ ಕೊಂದರೂ ಸರಿಯೇ ಎಲ್ಲವನ್ನೂ ಬಿಡಿಸಿ ಹೇಳಲೇ ಬೇಕೆಂದು ನಿರ್ಧರಿಸಿದ ಆಕೆ ಅಪ್ಪನ ವಿರುದ್ಧ ಹರಿಹಾಯ್ದಳು.

“ಅಮ್ಮ ಸತ್ತಿದ್ದು ನನ್ನಿಂದಲ್ಲ. ನಿಮ್ಮಿಂದ” ಜೋರಾಗಿ ಅರಚಿಕೊಂಡಳು.

ಮಗಳ ಮಾತು ಕೇಳಿಬೆಚ್ಚಿ ಬಿದ್ದ ರಾಜಶೇಖರ್ ಅವಳು ಸಾಯೋದಕ್ಕೆ ನಾನು ಮಾಡಿದ ತಪ್ಪಾದ್ರು ಏನು? ಕುತೂಹಲ ದಿಂದ ಕೇಳಿದರು.

ನಿಮ್ಮನ್ನ ಅಪ್ಪ ಅಂತ ಕರೆಯೋದಕ್ಕೆ ನನ್ಗೆ ನಾಚಿಕೆ ಆಗ್ತ ಇದೆ. ಅಪ್ಪ ಅಂತ ಕರೆದರೆ ನೀವು ಮಾಡಿದ ಕರ್ಮಗಳ ಫಲ ನನ್ನ ಸುತ್ತಿಕೊಳ್ತದೆ. ನಿಮ್ಮ ಪಾಲಿಗೆ ಇನ್ನು ಮಗಳು ಸತ್ತು ಹೋದಳು ಅಂತ ತಿಳ್ಕೋಳ್ಳಿ. ನೀವು ನನ್ಗೆ ಕೊಡ್ತಾ ಇದ್ದ ಕಷ್ಟ ನೋಡ್ಕೊಂದು ಇರೋದಕ್ಕೆ ಆಗದೆ ಅಮ್ಮ ಆತ್ಮಹತ್ಯೆ ಮಾಡಿಕೊಂಡರು. ಅಭಿಮನ್ಯುವಿನೊಂದಿಗೆ ನಾನು ಮದ್ವೆಯಾಗೋದೇ ಅಮ್ಮನ ಆಸೆಯಾಗಿತ್ತು. ಆದರೆ, ಆ ಆಸೆಯನ್ನ ಈಡೇರಿಸುವುದಕ್ಕ್ಕೆ ನೀವು ಅವಕಾಶ ಕೊಡ್ಲಿಲ್ಲ. ಅಮ್ಮ ಅದಕ್ಕೆ ನೊಂದುಕೊಂಡು ಆತ್ಮಹತ್ಯೆ ಮಾಡಿಕೊಂಡರು ಎಂದು ಲೀಲಾವತಿ ಸಾಯುವ ಮುನ್ನ ಬರೆದಿಟ್ಟ ಪತ್ರವನ್ನು ತೋರಿಸಿ ಇನ್ನಾದರೂ ನಮ್ಮಿಬ್ಬರನ್ನ ನೆಮ್ಮದಿಯಾಗಿ ಇರೋದಕ್ಕೆ ಬಿಟ್ಟುಬಿಡಿ ಕೋಪದಿಂದ ನುಡಿದಳು.

ನೀನು ಹೇಳಿದ್ದನ್ನೆಲ್ಲ ನಂಬೋದಕ್ಕೆ ನಾನೇನು ಅಷ್ಟೊಂದು ಮುಠ್ಠಾಳ ಅಲ್ಲ. ನನ್ಗೂ ಕೂಡ ಸ್ವಲ್ಪ ಬುದ್ಧಿ ಇದೆ. ನೀವಿಬ್ಬರು ಒಂದಾಗೋದಕ್ಕೆ ಅಮ್ಮ ಬರೆದ ರೀತಿಯಲ್ಲಿ ನೀನೇ ಪತ್ರ ಬರೆದು ನನ್ನ ಮನಸ್ಸನ್ನ ಬದಲಾಯಿಸೋದಕ್ಕೆ ನೋಡ್ಬೇಡ. ನಿನ್ನ ಅಮ್ಮನ ಬಗ್ಗೆ ನಿನ್ಗಿಂತ ಚೆನ್ನಾಗಿ ನನ್ಗೆ ಗೊತ್ತು. ಅವಳ ಸಾವಿಗೆ ಕಾರಣಳಾದವಳಿಂದ ನಾನು ಯಾವುದೇ ವಿಚಾರ ಕೇಳಿ ತಿಳಿದುಕೊಳ್ಳುವ ಅವಶ್ಯಕತೆ ಇಲ್ಲ. ಕಡೆಯದಾಗಿ ಹೇಳ್ತಾ ಇದ್ದೇನೆ ಕೇಳು, ನಾನು ಹೇಳಿದಂಗೆ ಕೇಳ್ಕೊಂಡು ಬಿದ್ದಿರು. ಇಲ್ಲದಿದ್ರೆ ನಿನ್ಗೊಂದು ಗತಿ ಕಾಣಿಸದೆ ಬಿಡೋದಿಲ್ಲ. ಕೋಪದಿಂದ ಕುದಿಯುತ್ತಿದ್ದ ರಾಜಶೇಖರ್ ಮಗಳ ಕಡೆಗೆ ದುರುಗುಟ್ಟಿ ನೋಡುತ್ತಾ ಗದರಿಸಿದರು.

ಅಮ್ಮನ ಜೊತೆ ನಾನೂ ಕೂಡ ಸತ್ತು ಹೋಗಿದ್ರೆ ನಿಮ್ಗೆ ಸಮಾಧಾನವಾಗ್ತಾ ಇತ್ತು. ಯಾಕಪ್ಪ ನಿಮ್ಮಲ್ಲಿ ಇಂತಹ ಕಟುಕತನ ಹುಟ್ಟಿಕೊಳ್ತು? ಈಗಾಗಲೇ ಒಂದು ಜೀವ ಹೊರಟು ಹೋಗಿದೆ. ಇದಕ್ಕೂ ಮುನ್ನ ನೀವೇ ಕೈಯಾರೆ ಒಂದು ಜೀವವನ್ನು ಬಲಿ ತೆಗೆದುಕೊಳ್ಳೋದಕ್ಕೆ ನೋಡ್ಲಿಲ್ವ? ಕಣ್ಣೀರಿಡುತ್ತಾ ಕೇಳಿದರು.

“ಯಾರ ಜೀವ”? ಆತಂಕ, ಕುತೂಹಲದೊಂದಿಗೆ ಕೇಳಿದರು.

ಅಭಿಮನ್ಯುವಿನ ಜೀವ ತೆಗೆಯಲು ಹೊರಟ್ಟಿದ್ದು ನೀವೇ ತಾನೆ…? ದೇವರ ದಯೆಯಿಂದ ಬದುಕುಳಿದ. ಈ ವಿಚಾರ ಎಲ್ಲ ಅಮ್ಮ ನನ್ಗೆ ತಿಳಿಸಿದ್ದರು. ‘ಅಭಿಮನ್ಯುವನ್ನು ನೀನು ಮದ್ವೆಯಾಗೋದಕ್ಕೆ ಪ್ರಯತ್ನ ಪಟ್ಟರೆ ಅಭಿಮನ್ಯುವನ್ನು ಅಪ್ಪ ಜೀವ ಸಹಿತ ಉಳಿಸೋದಿಲ್ಲ ಅಂತ ಅಮ್ಮ ನನ್ಗೆ ಹೇಳಿದ ನಂತರವೇ ನಾನು ಅಭಿಮನ್ಯುವಿನ ಜೀವ ಉಳಿಸಲು ಅವನನ್ನ ತೊರೆದು ನಿಖಿಲ್ ಜೊತೆಗೆ ಮದ್ವೆಯಾಗೋದಕ್ಕೆ ನಿರ್ಧಾರ ಕೈಗೊಂಡದ್ದು. ನಿಖಿಲ್‌ನ ಮದ್ವೆಯಾಗೋ ಆಸೆ ನನ್ಗೆ ಯಾವತ್ತೂ ಹುಟ್ಟಿಕೊಳ್ಳಲಿಲ್ಲ. ಎಲ್ಲಿ ನೀವು ಅಭಿಮನ್ಯುವನ್ನು ಕೊಂದು ಬಿಡುತ್ತೀರೋ ಎಂಬ ಭಯದಲ್ಲಿ ಅವನಿಂದ ದೂರವಾಗೋದಕ್ಕೆ ನೋಡಿದೆ. ಆದರೆ ಅಮ್ಮ ಸತ್ತು ಹೋದ ನಂತರ ಆಕೆಯ ಆಸೆಯಂತೆ ನಾನು ಅಭಿಮನ್ಯುವನ್ನು ಮದ್ವೆಯಾಗೋದಕ್ಕ್ಕೆ ನಿರ್ಧಾರ ಮಾಡಿದ್ದೇನೆ. ಇನ್ನು ನನ್ನ ಹಾದಿ ನನಗೆ, ನಿಮ್ಮ ಹಾದಿ ನಿಮಗೆ. ಇನ್ನು ಹೆಚ್ಚು ದಿನ ಈ ಮನೆಯಲ್ಲಿ ಇರೋದಿಲ್ಲ ತನ್ನ ನಿರ್ಧಾರವನ್ನು ಯಾವುದೇ ಅಳುಕಿಲ್ಲದೆ ಹೇಳಿದಳು.

ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಪತ್ನಿಯೇ ಕಣ್ಣಮುಂದೆ ಇಲ್ಲ. ಇದ್ದ ಒಬ್ಬಳು ಮಗಳು ತನ್ನ ಮಾತು ಧಿಕ್ಕರಿಸಿ ಮನೆಯಿಂದ ಹೊರಡಲು ಅಣಿಯಾಗುತ್ತಿದ್ದಾಳೆ. ಜೀವನದಲ್ಲಿ ನಾನೆಂತ ಪಾಪ ಮಾಡಿದೆ ಅಂತ ದೇವರು ನನ್ಗೆ ಇಂತಹ ಒಂದು ಶಿಕ್ಷೆ ಕೊಡ್ತಾ ಇದ್ದಾನೆ. ಇನ್ನು ಯಾರಿಗೋಸ್ಕರ ತಾನು ಬದುಕಿರಬೇಕು ಅಂದುಕೊಂಡ ರಾಜಶೇಖರ್ ದುಃಖದ ಮಡುವಿನಲ್ಲಿ ಮುಳುಗಿದರು.
* * *

ಅಕ್ಷರ ಅಭಿಮನ್ಯುವಿನೊಂದಿಗೆ ದಾಂಪತ್ಯದ ಜೀವನಕ್ಕೆ ಕಾಲಿಡಲು ಕ್ಷಣಗಣನೆ ಆರಂಭಗೊಂಡಿತು. ನಾಳೆ ಬೆಳಗ್ಗೆ ಸೂರ್ಯನ ಹೊಂಗಿರಣ ಭುವಿಗೆ ಸೋಕುವ ಮುನ್ನ ಮನೆ ಬಿಟ್ಟು ತೆರಳಬೇಕೆಂದು ಇಬ್ಬರು ನಿರ್ಧರಿಸಿದರು. ಅದಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಕೈಗೊಂಡರು. ಮನೆಯಲ್ಲಿದ್ದ ಬಟ್ಟೆಬರೆಗಳನ್ನು ಪೆಟ್ಟಿಗೆಗೆ ತುಂಬಿಕೊಂಡ ಅಕ್ಷರ ಸಂತಸದ ಅಲೆಯಲ್ಲಿ ತೇಲತೊಡಗಿದಳು.

ಅಭಿಮನ್ಯುವಿನೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಡುವ ಸಂಭ್ರಮ ಆದಷ್ಟು ಬೇಗನೆ ಬರಲು ಈ ಒಂದು ದಿನವನ್ನು ದೇವರು ಆದಷ್ಟು ಬೇಗನೆ ಸರಿಸಿ ಬಿಡಲಿ ಎಂದು ಆಗಿಂದಾಗೆ ಮನದೊಳಗೆ ಪ್ರಾರ್ಥಿಸಿಕೊಳ್ಳತೊಡಗಿದಳು. ಆ ಒಂದು ಸಂಭ್ರಮಕ್ಕಾಗಿ ಎದುರು ನೋಡುತ್ತಿದ್ದ ಅಕ್ಷರಳಿಗೆ ಈ ಒಂದು ದಿನವನ್ನು ಕೂಡ ಕಳೆಯಲು ಸಾಧ್ಯವಾಗದೆ ಚಡಪಡಿಸತೊಡಗಿದಳು. ಮನೆಯಲ್ಲಿ ಅತ್ತಿಂದಿತ್ತ ಓಡಾಡಿಕೊಂಡು ಹೇಗೋ ಮಧ್ಯಾಹ್ನವನ್ನು ಕಳೆದಳು.

ಮಧ್ಯಾಹ್ನ ಕಳೆದು ಸಂಜೆ ಹತ್ತಿರವಾಗುತ್ತಿದ್ದರೂ ಅಪ್ಪ ಮನೆಗೆ ಊಟಕ್ಕೆ ಬಾರದೆ ಇರುವುದನ್ನು ಕಂಡ ಅಕ್ಷರ ಯಾವುದಕ್ಕೂ ಒಂದುಸಲ ಅಭಿಮನ್ಯುವನ್ನು ಭೇಟಿಯಾಗಿ ಬೆಳಗ್ಗೆ ಇಬ್ಬರು ಮನೆ ಬಿಟ್ಟು ಹೊರಡುವ ಸಂಭ್ರಮವನ್ನು ಹಂಚಿಕೊಳ್ಳಬೇಕೆಂಬ ಆಸೆಯೊಂದಿಗೆ ಶೆಡ್‌ವೊಳಗೆ ನಿಲ್ಲಿಸಿದ್ದ ಕಾರನ್ನು ಹೊರ ತೆಗೆದು ಅಭಿಮನ್ಯುವಿನ ಕಡೆಗೆ ಪಯಣ ಬೆಳೆಸಿದಳು. ಒಂದು ಮಾತು ಕೂಡ ಹೇಳದೆ ಎದುರಿಗೆ ಬಂದು ನಿಂತ ಅಕ್ಷರಳನ್ನು ಕಂಡು ಅಭಿಮನ್ಯುವಿಗೆ ಆಶ್ಚರ್ಯದ ಜೊತೆಗೆ ಆತಂಕ ಹುಟ್ಟಿಕೊಂಡಿತು.

ಯಾಕೆ ಈಗ ಬಲಿಕ್ಕೆ ಹೋದೆ!? ಬೆಳಗ್ಗೆ ಬಂದಿದ್ರೆ ಆಗ್ತಾ ಇಲಿಲ್ವ? ಕಳವಳದಿಂದ ಕೇಳಿದ.

ಯಾಕೋ ನಿನ್ನ ನೋಡ್ಬೇಕೂಂತ ಅನ್ನಿಸಿತು. ಅದ್ಕೋಸ್ಕರ ಬಂದುಬಿಟ್ಟೆ. ಇದು ಮಡಿಕೇರಿಯಲ್ಲಿ ನಮ್ಮಿಬ್ಬರ ಕೊನೆಯ ಭೇಟಿ ಕಣೋ. ಒಂದ್ಸಲ ರಾಜಾಸೀಟ್‌ಗೆ ಹೋಗಿ ಸ್ವಲ್ಪ ಕಾಲ ಕಳೆದು ಬಬೇಕೂಂತ ಅನ್ನಿಸ್ತಾ ಇದೆ. ಊರು ಬಿಟ್ಟು ಹೋದ ಮೇಲೆ ರಾಜಾಸೀಟ್ ನೋಡೋದಕ್ಕೆ ಸಾಧ್ಯವಾಗೋದಿಲ್ಲ. ದಯವಿಟ್ಟು ಕಕೊಂಡೋಗು ಹಟ ಹಿಡಿದಳು.

ಅಕ್ಷರ, ನಿನ್ಗೇನಾಗಿದೆ? ನಾವಿಬ್ರು ಯಾವ ಪರಿಸ್ಥಿತಿಯಲ್ಲಿ ಇದ್ದೇವೆ ಅಂತ ಸ್ವಲ್ಪನಾದ್ರೂ ಯೋಚ್ನೆ ಬೇಡ್ವ್ವ? ಒಂದ್ವೇಳೆ ರಾಜಾಸೀಟಲ್ಲಿ ನಾವಿಬ್ರು ಸುತ್ತಾಡೋದನ್ನ ಗೊತ್ತಿರುವವರು ಯಾರಾದ್ರು ನೋಡಿದ್ರೆ ತಕ್ಷಣ ಮನೆಗೆ ಸುದ್ದಿ ಹೋಗಿ ಮುಟ್ಟೋದ್ರಲ್ಲಿ ಸಂಶಯನೇ ಇಲ್ಲ. ಮತ್ತೆ ನಾಳೆ ಹೊರಡೋದಕ್ಕೆ ಕಷ್ಟ ಆಗ್ಬೊಹುದು. ದಯವಿಟ್ಟು ಹೊರಟು ಹೋಗು. ನಾಳೆ ಬೆಳಗ್ಗೆ ಬೇಗ ಬಂದು ಬಿಡು ಎಂದು ಆಕೆಯನ್ನು ಹೊರಡಿಸಲು ಮುಂದಾದ.

ಪ್ಲೀಸ್ ಕಣೋ ಅಭಿ, ನನ್ನ ಒಂದು ಸಣ್ಣ ಆಸೆ ಕೂಡ ನೆರವೇರಿಸಿಕೊಡೋದಿಲ್ವ? ಗೋಗರೆದಳು.

ದಯವಿಟ್ಟು ನನ್ನ ಅರ್ಥ ಮಾಡ್ಕೋ ಅಕ್ಷರ. ರಾಜಾಸೀಟ್‌ನಲ್ಲಿ ಜನ ತುಂಬಾ ಇತಾರೆ. ಯಾರೂ ಇಲ್ಲದ ಜಾಗಕ್ಕೆ ನಿನ್ನ ಕಕೊಂಡು ಹೋಗ್ತೇನೆ. ಅಲ್ಲಿ ನಿನ್ಗೆ ಇದಕ್ಕಿಂತ ಸಂತೋಷವಾಗ್ಬೊಹುದು. ಎಂದು ಆಕೆಯ ಕಾರನ್ನು ತಾನೇ ಚಾಲಿಸುತ್ತಾ ಕಾವೇರಿ ನದಿ ತೀರಕ್ಕೆ ಕರೆದೊಯ್ದ.

ಕಾವೇರಿ ಮೈದುಂಬಿ ಹರಿಯುತ್ತಿದ್ದಳು. ಸುತ್ತಮುತ್ತಲಿನ ಪರಿಸರ ಆಹ್ಲಾದಕರವಾಗಿತ್ತು. ನದಿ ದಂಡೆಯಲ್ಲಿ ಕುಳಿತು ಇಬ್ಬರು ಎಲ್ಲಾ ನೋವನ್ನು ಮರೆತು ಬಹುದಿನಗಳ ಬಳಿಕ ಹರಟೆಯಲ್ಲಿ ತೊಡಗಿದರು. ನಾಳೆ ನಡೆಯಲಿರುವ ಮದುವೆಯನ್ನು ಕಲ್ಪಿಸಿಕೊಂಡು ಇಬ್ಬರು ಪುಳಕಿತರಾದರು. ಬಾನಂಗಳದಲ್ಲಿ ಸೂರ್ಯ ತನ್ನ ಹೊನ್ನ ಕಿರಣ ಸೂಸುತ್ತಾ ಕಣ್ಮರೆಯಾಗಲು ಅಣಿಯಾಗುತ್ತಿದ್ದ. ಹಕ್ಕಿಗಳು ಚಿಲಿಪಿಲಿ ನಾದಗೈಯುತ್ತಾ ತಮ್ಮ ಗೂಡು ಸೇರಿಕೊಳ್ಳುವ ತವಕದಲ್ಲಿದ್ದವು. ಕೆಲವು ಹೊತ್ತು ಕಳೆದ ಬಳಿಕ ಹಕ್ಕಿಗಳ ಚಿಲಿಪಿಲಿ ಗಾನವೂ ವಿರಳವಾಗಿ ನಿಶಬ್ದತೆ ಆವರಿಸಿಕೊಳ್ಳಲು ಪ್ರಾರಂಭಿಸಿತು.

ಅಭಿ.., ಜಗತ್ತಿನಲ್ಲಿ ಈ ಕ್ಷಣದಲ್ಲಿ ನನ್ನಷ್ಟು ಸಂತೋಷವಾಗಿರುವ ಜೀವ ಮತ್ತೊಂದು ಇಲ್ಲ ಅಂತ ಕಾಣುತ್ತೆ. ಅಷ್ಟೊಂದು ಸಂತೋಷವಾಗಿದ್ದೇನೆ ಕಣೋ. ಊರು ಬಿಟ್ಟು ಹೊರಡುವ ಮುಂಚೆ ಇಷ್ಟೊಂದು ದೂರ ಕಕೊಂಡು ಬಂದು ಕಾವೇರಿ ಮಾತೆಯ ದರುಶನ ಮಾಡಿಸಿದ್ದಕ್ಕೆ ತುಂಬಾ ಥ್ಯಾಂಕ್ಸ್. ಎಂದು ಅಭಿಮನ್ಯುವನ್ನು ತಬ್ಬಿಕೊಂಡು ಮುದ್ದಾಡಿದ ಅಕ್ಷರ ಕಾವೇರಿ ನದಿ ತೀರದ ತುಂಬ ಓಡಾಡಿ ಅಭಿಮನ್ಯುವಿನಿಂದ ಸಾಕಷ್ಟು ದೂರದಲ್ಲಿ ನಿಂತು ಐ ಲವ್ ಯೂ ಅಭಿ… ಎಂದು ಆಗಿಂದಾಗೆ ಜೋರಾಗಿ ಕೂಗಿ ಹೇಳುತ್ತಿದ್ದಳು. ಆಕೆಯ ಹೃದಯದಿಂದ ಹೊರ ಹೊಮ್ಮುತ್ತಿದ್ದ ಮಾತುಗಳನ್ನು ಕೇಳಿಸಿಕೊಂಡು ಪುಳಕಿನಾಗಿ ಆ ಮಾತಿನ ಸವಿಯನ್ನು ಸವಿಯತ್ತಾ, ಬಾನಂಗಳದಲ್ಲಿ ಸಂಜೆಯ ಹೊತ್ತಿನಲ್ಲಿ ಆಗಿಂದಾಗೆ ಬದಲಾಗುತ್ತಿದ್ದ ಬೆಳಕಿನ ಚಿತ್ತಾರದ ವೈಭವವನ್ನು ನೋಡುತ್ತಾ ಕುಳಿತುಬಿಟ್ಟ.

ಕಾವೇರಿ ನದಿ ತೀರದಲ್ಲಿ ವಾತಾವರಣ ಆಹ್ಲಾದಕರವಾಗಿತ್ತು. ತಂಗಾಳಿ ಮೈಸೋಕಿ ಕಚಗುಳಿ ಇಡಲು ಪ್ರಾರಂಭಿಸಿತು. ಕಣ್ಮರೆ ಯಾಗುತ್ತಿದ್ದ ನೇಸರ ಹೊರಸೂಸುತ್ತಿದ್ದ ಹೊನ್ನಕಿರಣವನ್ನು ನೋಡುತ್ತಾ ಹಿಂಭಾಗಕ್ಕೆ ತನ್ನೆರಡು ಕೈಗಳನ್ನು ಊರಿ ಕುಳಿತು ಅಕ್ಷರಳನ್ನು ಮತ್ತೆ ಮತ್ತೆ ನೆನೆದು ಪುಳಕಿತನಾಗುತ್ತಿದ್ದ.

ವಿಧಿಯು ಆ ಸಂಭ್ರಮಕ್ಕೆ ತೆರೆ ಎಳೆಯಲು ತನ್ನ ಅಂತಿಮ ತೀರ್ಮಾನ ಕೈಗೊಂಡಿತು. ಆ ಆಹ್ಲಾದಕರ ವಾತಾವರಣದಲ್ಲಿ ಬಂದೂಕಿನಿಂದ ಸಿಡಿದ ಗುಂಡೊಂದು ತಂಗಾಳಿಯನ್ನು ಸೀಳಿಕೊಂಡು ಬಂದು ಅಭಿಮನ್ಯುವಿನ ಎದೆಗೆ ಹೊಕ್ಕಿತು. ಗುಂಡಿನ ಏಟಿಗೆ ಅಭಿಮನ್ಯು ಅಲ್ಲಿಯೇ ಕುಸಿದು ಬಿದ್ದ.

ದೂರದ ಪೊದೆಯಲ್ಲಿ ಅಡಗಿ ಕುಳಿತ್ತಿದ್ದ ರಾಜಶೇಖರ್ ತನ್ನ ಕಾರ್ಯ ಮುಗಿಸಿ ಬಂದೂಕನ್ನು ಹೆಗಲಮೆಲೇರಿಸಿಕೊಂಡು ನಡೆದರು. ಗುಂಡಿನ ಶಬ್ದ ಕೇಳಿ ಕುಸಿದು ಬಿದ್ದ ಅಕ್ಷರ ಸ್ವಲ್ಪ ಹೊತ್ತಿನ ಬಳಿಕ ಚೀತ್ಕರಿಸುತ್ತಾ ಮೇಲೆದ್ದು ಅಭಿಮನ್ಯುವಿನ ಕಡೆಗೆ ಓಡಿದಳು. ಅಭಿಮನ್ಯು ರಕ್ತದ ಮಡುವಿನಲ್ಲಿ ಬಿದ್ದು ನರಳಾಡುತ್ತಿರುವುದನ್ನು ಕಂಡು ಚೀರಿಕೊಂಡಳು. ಅವನ ಪ್ರಾಣ ಪಕ್ಷಿ ಹಾರಿ ಹೋಗಲು ಅಣಿಯಾಗಿ ನಿಂತಿತ್ತು. ಅಭಿಮನ್ಯುವಿನ ತಲೆಯನ್ನು ಎತ್ತಿ ಮಡಿಲಲ್ಲಿ ಮಲಗಿಸಿಕೊಂಡ ಅಕ್ಷರ ದುಃಖದ ಮಡುವಿನಲ್ಲಿ ಮುಳುಗಿ ಹೋದಳು. ಅಭಿಮನ್ಯುವಿನ ಹಣೆಗೊಮ್ಮೆ ಚುಂಬಿಸಿ ಅಭಿ, ನಿನ್ಗೆ ಏನೂ ಆಗೋದಿಲ್ಲ ಕಣೋ. ನಾನಿದ್ದೇನಲ್ಲ. ನೀನು ಭಯ ಪಡ್ಬೇಡ. ನಾನು ನಿನ್ನ ಬದುಕಿಸ್ತೇನೆ ಎಂದು ಅಭಿಮನ್ಯುವಿನಲ್ಲಿ ಧೈರ್ಯತುಂಬಿ ಆದಷ್ಟು ಬೇಗ ಆಸ್ಪತ್ರೆಗೆ ಕರೆದೊಯ್ಯಬೇಕೆಂದು ನಿರ್ಧರಿಸಿ ಮೇಲೇಳಲು ಯತ್ನಿಸಿದ ಅಕ್ಷರಳ ಕೈಯನ್ನು ಬಿಗಿಯಾಗಿ ಹಿಡಿದುಕೊಂಡ ಅಭಿಮನ್ಯು ಅವಳ ಕಣ್ಗಳನ್ನೇ ದುಃಖದಿಂದ ನೋಡಿದ.

“ಅ..ಕ್ಷ..ರ…” ಅಂದ ಅಭಿಮನ್ಯುವಿನಿಂದ ಮತ್ತೆ ಮಾತು ಹೊರಡಲಿಲ್ಲ. ಅವನ ಕಣ್ಗಳು ಇನ್ನೇನನ್ನೋ ಹೇಳಲು ಭಯಸುತಿತ್ತು. ದೇಹ ಸ್ಪಂದಿಸುತ್ತಿರಲಿಲ್ಲ. ನಿಧಾನವಾಗಿ ಕಣ್ಣರೆಪ್ಪೆಗಳು ಮುಚ್ಚಿಕೊಂಡವು. ಅಕ್ಷರ ಕಣ್ಣೀರಿನ ಕಡಲಾದಳು.

ಬಾಳಸಂಗಾತಿ ಇಲ್ಲದೆ ಬಾಳ್ವೆ ನಡೆಸಿ ಏನು ಪ್ರಯೋಜನ? ಇರುವಷ್ಟು ದಿನ ಇನಿಯನ ಹಿತಕೋಸ್ಕರ ತನ್ನದೆಲ್ಲವನ್ನೂ ಮುಡಿಪಾಗಿಟ್ಟು ಆಕೆ ಬದುಕು ನಡೆಸಿದಳು. ಆದರೆ, ಇಂದು ಅಭಿಮನ್ಯುವಿನ ಭೀಕರ ಕೊಲೆಯನ್ನು ಕಣ್ಣಾರೆ ಕಂಡು ನಡುಗಿಹೋದಳು. ಇನ್ನು ಬದುಕಿರುವುದರಲ್ಲಿ ಅರ್ಥವಿಲ್ಲ ಎಂದು ಮನವರಿಕೆಯಾದೊಡನೆ ಕ್ಷಮಿಸಿ ಬಿಡು ಅಭಿ, ಈ ಪಾಪಿನ ಕ್ಷಮಿಸಿ ಬಿಡು. ನಿನ್ನ ಪಡೆದುಕೊಳ್ಳುವಷ್ಟು ಭಾಗ್ಯ ನನಗಿಲ್ಲದೆ ಹೋಯಿತು. ಇನ್ನೊಂದು ಜನ್ಮವೇನಾದರು ಇದ್ದರೆ ಖಂಡಿತ ನಿನ್ನ ಪತ್ನಿಯಾಗುವ ಮೂಲಕ ನಿನ್ನ ಆಸೆ ಈಡೇರಿಸುತ್ತೇನೆ. ದಯವಿಟ್ಟು ಈ ಪಾಪಿಯನ್ನ ಕ್ಷಮಿಸಿಬಿಡು. ನಿನ್ಗೆ ನೆನಪಿದೆಯಾ ಅಭಿ, ನಾವಿಬ್ರು ಆವತ್ತು ದುಬಾರೆಗೆ ಭೇಟಿ ಕೊಟ್ಟಾಗ ನಾನು ಕೋಪಮಾಡ್ಕೊಂಡು ಕಾರ್ ಓಡಿಸ್ತಾ ಇದ್ದಾಗ ನೀನು ಹೇಳ್ದೆ: ‘ವೇಗವಾಗಿ ಕಾರ್ ಓಡಿಸ್ಬೇಡ. ಇಷ್ಟು ಬೇಗ ವೈಕುಂಠ ಸೇರಿಕೊಳ್ಳೋದಕ್ಕೆ ನನ್ಗೆ ಇಷ್ಟ ಇಲ್ಲ ಅಂತ. ಆಗ ನಾನು ಹೇಳಿದ್ದು ನಿನ್ಗೆ ನೆನಪಿದೆಯಾ?: ‘ಇಲ್ಲಂತೂ ನಾವಿಬ್ರು ಒಂದಾಗೋದಕ್ಕೆ ಸಾಧ್ಯ ಇಲ್ಲ. ವೈಕುಂಠದಲ್ಲಾದ್ರೂ ಒಂದಾಗುವ ಅಂತ ನಾನು ಹೇಳಿದ್ದೆ. ಆದರೆ, ಆ ಮಾತೆಲ್ಲ ನೀನು ಮರೆತು ನಿನ್ಗೆ ಇಷ್ಟ ಇಲ್ಲದ ಜಾಗಕ್ಕೆ ಹೋಗಿ ಸೆಕೊಂಡಿದ್ದೀಯ. ನಿನ್ಗೆ ಆ ಜಾಗ ಇಷ್ಟ ಇಲ್ಲ ಅಂತ ನನ್ಗೆ ಗೊತ್ತು. ಆದರೆ, ನನ್ಗೆ ಆ ಜಾಗ ಇಷ್ಟ ಇದೆ ಅಭಿ, ನಿನ್ನೊಂದಿಗೆ ನಾನು ಕೂಡ ಬಂದುಬಿಡ್ತೇನೆ ಎಂದು ಕಟ್ಟಕಡೆಯದಾಗಿ ಶವವಾಗಿ ಮಲಗಿದ್ದ ಅಭಿಮನ್ಯುವಿಗೆ ಚುಂಬಿಸಿ ಪಾದವನ್ನು ಮುಟ್ಟಿ ನಮಸ್ಕರಿಸಿದಳು.

“ಅಭಿ, ನನ್ನ ಕ್ಷಮಿಸಿ ಬಿಡು”. ಎಂದು ಹರಿದು ಬರುತ್ತಿದ್ದ ಕಣ್ಣೀರಧಾರೆಯನ್ನು ಒರೆಸಿಕೊಳ್ಳುತ್ತಾ ಪಕ್ಕದಲ್ಲಿಯೇ ಜುಳು ಜುಳು ನಿನಾದ ಗೈಯುತ್ತಾ ಹರಿಯುತ್ತಿದ್ದ ಕಾವೇರಿ ಮಾತೆಯ ಕಡೆಗೆ ನಡಿಗೆ ಹಾಕಿದಳು. ಕಾವೇರಿಮಾತೆಯ ಮಡಿಲಿನಲ್ಲಿ ಅಕ್ಷರ ಐಕ್ಯಳಾಗುತ್ತಿದ್ದ ದೃಶ್ಯವನ್ನು ನೋಡಲಾಗದೆ ನೇಸರ ಕಾರ್ಮೋಡದಲ್ಲಿ ಕಣ್ಮರೆಯಾಗಿಬಿಟ್ಟ.
*****

ಮುಕ್ತಾಯ

ಕಾದಂಬರಿ ಪುಟ ೧೯೧-೨೦೮

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕವಿ
Next post ಐಸುರ ಬಲು ಹಾನಿಯೇನಲೋ

ಸಣ್ಣ ಕತೆ

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…