ಆಲದ ಮರದಂತೆ
ಕ್ರಿಯಾಶೀಲ ಬಾಹುಗಳ
ಆಕಾಶದೆತ್ತರಕೆ ಭೂಮಿಯುದ್ದಗಲಕೆ ಬೀಸಿದ ಸಿದ್ಧಪ್ಪ
ಹೊಲ, ಮನೆ ಸಂಪಾದಿಸಿ
ಒಪ್ಪವಾಗಿ ಸಂಸಾರ ನಡೆಸಿ
ಹೆಂಡತಿ ಮಕ್ಕಳನ್ನು ತುಪ್ಪದಲಿ ಕೈಯ ತೊಳೆಸಿದನು.

ಅಪ್ಪಿಕೊಳ್ಳುವ ಭಾವದಲಿ ನಿಲುವಿನಲಿ
ಊರಲಿ, ನೆರೆಯಲಿ, ಬಂಧು ಮಿತ್ರರು, ಬಲ್ಲವರೆಲ್ಲರಲಿ
ಗೌರವದಿ ಬಾಳಿದನು.
ಕಾಲವೆಂತು ನಿಂತೀತು
ಜೀವನದಿ ಪಾತ್ರದಲ್ಲಿ ನಿಂತವರ
ಕಾಲಡಿಯ ಮರಳಂತೆ ಸರಿಯುತ್ತ ಹೋಯಿತು.

ಬಾಳೆಂಬ ಕಾಳಗದ ಉರುಬೆ
ವಯೋಭಾರ ಸೇರಿ ದೇಹ ಬಲ ಕುಗ್ಗಿ
ಮುರುಕಲು ಸರಕಾಗಿ ಮೂಲೆ ಹಿಡಿದ
ಅಪ್ಪಿದ್ದ ಮರವು ಉರುಳಿ ಬಿದ್ದಂತಾಗಿ
ಸತಿ ಲತೆ ಕೆಂಚಮ್ಮನ ಬೆಲೆ ತೂಕವು ಹೋಯಿತು
ನೋಡು ನೋಡುತ್ತಿದ್ದಂತೆ ಮನೆ ಮನದ
ಬಣ್ಣವೇ ಬದಲಾಯಿತು.

ಅಕ್ಕರೆಯ ಕುಲಪುತ್ರ ಯಜಮಾನನಾದ
ಮುದ್ದಿನ ಸೊಸೆ ಮನೆಯೊಡತಿಯಾದಳು
ಒಡೆದ ಜಲಾಶಯದ ನೀರಂತೆ
ಮಾತು, ಕೃತಿ ಯೋಜನೆಯು ಕ್ರಮ ತಪ್ಪಿತು

ಭ್ರಮ ನಿರಸನಗೊಂಡ ಜೀವಗಳು ಸಹಿಸದಾಗಿ
ತಪ್ಪನ್ನು ತಪ್ಪೆಂದು ಹೇಳುವುದು ತಪ್ಪೆಂದು ತಿಳಿಯಲಿಲ್ಲ
ಖಾಳಜಿಯಲಿ ಸಲುಗೆಯಲಿ ಎತ್ತಿ ಆಡಿದವು
ತಿದ್ದಿಕೊಳ್ಳಲು ಹೇಳಿದವು
ದಂಡನೆಯಾಗಿ ತುತ್ತು ಕೂಳಿಗೂ ತತ್ವಾರ ಬಂತು.

ತತ್ತರಿಸಿದವು ಜೀವಗಳು
ಕಳೆದು ಹೋದವು
ಮುಳುಗಿ
ಕಳೆದ ಬಾಳಿನ ಮೆಲುಕು ಹಾಕುವುದರಲಿ.

ನಂಬಿ ನಡೆದೆವು
ಅರಿವು ಆನಂದ ನೀಡುವುದು
ಹೊಣೆಯರಿತ ನಡೆ ತರುವುದು ಸಮಾಧಾನ
ಆತ್ಮಕ್ಕೆ
ಮಿಕ್ಕು ನಮಗೆ ಸಿಕ್ಕಿದುದೇನು ಅಂತ್ಯಕ್ಕೆ !

ಹಿಂದಿರಲಿಲ್ಲ. ಮುಂದಿರಲಿಲ್ಲ
ನಮಗೆ ನಾವೇ ಮಹಾ ಗುರುಗಳು
ಬದುಕು ನಮ್ಮದು ಕೆಟ್ಟಿತು ಕಳೆದೀತು
ದುಡಿಮೆ ಅವಮಾನವಲ್ಲ !
ಮಳೆ, ಗಾಳಿ ಬಿಸಿಲು-ಬೇಗೆ, ಬೇನೆ-ಬೇಸರಿಕೆ ಸಾಮಾನ್ಯ
ಹೊಟ್ಟೆ ಸಣ್ಣದು ಮಾಡಿ ಕಣ್ಣು ದೊಡ್ಡದು ಮಾಡಿ
ಹೊಲ ಮನೆಗಳಲಿ ಬೇಧವೆಣಿಸದೆ
ಬುದ್ದಿಯನು ಲದ್ದಿ ತಿನ್ನಲು ಬಿಡದೆ
ಹೊಟ್ಟೆ ತೋರಿಸುವವರಿಗೆ ಹೊಟ್ಟೆ,
ಬೆನ್ನು ತೋರಿಸುವವರಿಗೆ ಬೆನ್ನು ತೋರಿಸಿ
ತಲೆಯೆತ್ತಿ ಬಾಳಿದೆವು ಸರೀಕರಲಿ.

ಮಕ್ಕಳನ್ನು ಹೆತ್ತು
ಮಂಗಗಳಂತೆ ಎದೆಗೆ ಹೊಟ್ಟೆಗೆ ಅಂಟಿಸಿಕೊಂಡು
ತಿದ್ದಿ-ತೀಡಿ, ನಡೆ-ನುಡಿ ಕಲಿಸಿ, ಶಿಕ್ಷಣ ಕೊಡಿಸಿ
ಬೇಕು-ಬೇಡ ನೋಡಿ, ಜೋಡಿ ಕೂಡ ಮಾಡಿ
ಹಣತೆಯಂತೆ ಬಾಳು, ಬೆಳಕು ನೀಡಿ
ಬಾಳ ಸಂಜೆಯನು ಸೇರಿದೆವು.

ಪ್ರತಿಫಲ ನಿರೀಕ್ಷಿಸಿ ಮಾಡಲಿಲ್ಲ
ಕರ್ತವ್ಯವೆಂದೆವು
ಸಂತೋಷಕ್ಕಾಗಿ ಮಾಡಿದೆವು
ಅವರಲ್ಲಿ ನಮ್ಮನ್ನು ಕಾಣುತ್ತ ಬಾಳಿದೆವು.

ನಾಚಿಕೆಯಾಗುವುದು
ಏನು ಮಾಡುವುದು ನಿರ್ವಾಹವಿಲ್ಲ !
ಬೇಡುವೆವು
ಬರಲಿ ಬೇಗ ಅವನ ಕರೆ
ಅದುವರೆವಿಗೆ ನೀಡಿರಿ
ಸಾಕು ! ಒಂದು ಮಾತು, ಒಂದು ತುತ್ತು; ಭಿಕ್ಷೆಯಾಗಿ
ತೀರಿಸುವೆವು ಋಣ, ಗುಲಾಮರಾಗಿ ಮುಂದಿನ ಜನ್ಮದಲಿ.

ಒಂದೊಮ್ಮೆ ಸಂಕಟಕೆ ರೋಸಿ ಹೋಗಿ
ನಾವು.. ಬೇಕಿಲ್ಲ, ನಮ್ಮ ಗಳಿಕೆ ಬೇಕಲ್ಲವೇ !
ನ್ಯಾಯವಿದೇನೆಂದಿರಿ
ನಾವೇನು ನಿಮ್ಮನು ಜನುಮ ಕೊಡಿರಿ
ಬವಣೆ ಪಡಿರೆಂದು ಕೇಳಿದ್ದೆವೇನು ?
ಬಿಡಿ ! ಬಿಡಿ ! ಅದು ಲೋಕಾರೂಢಿ ಎಂದಾರು ಎದುರು.

ಕೇಳಿದವರು
ಹೇಗೆ ಬೆಳೆಸಿದಿರಿ ಹಾಗಾದರೆ ನೀವವರ
ಎನ್ನುವರು; ಗೇಲಿ ಮಾಡುವರು
ನೀರು, ಗೊಬ್ಬರ ನೀಡಿ
ಮರವ ಹುಲುಸಾಗಿ ಬೆಳೆಸಬಹುದು
ಫಲವು ಬೀಜದ ಗುಣಕ್ಕನುಗುಣವಾಗಿ ತಾನೇ ಇರುವುದು.

ನಾವು
ಯಥಾ ರೀತಿಯ ಜನ
ಎಂದಿನಂತೆ ಇಂದೂ ನಡೆವುದು
ನಮ್ಮ ಮಕ್ಕಳು ನಮ್ಮನ್ನು ಬಿಸಾಕಿ ನಡೆವರೆ
ಯಾಕೆ ? ನಮಗಿನ್ನೇನು ಬೇಕಾಗಬಹುದು ?
ತಪ್ಪಾಗುವುದೆನ್ನಲಿಲ್ಲ; ಯೋಜಿಸಲಿಲ್ಲ.

ದೂರದಿರಿ ಸುಖಾಸುಮ್ಮನೆ
ನಾವು ಎಂದೆಂದಿಗೂ ನಿಮ್ಮ ಸಂತಸವ ಬಯಸಿದವರು
ಅದಕ್ಕಾಗಿ ಸದಾ ದುಡಿದವರು
ಪ್ರೇಮದಿಂದಿರಿ
ಅಸಹನೆಯಿಲ್ಲ
ಒಂದೇ ! ನಮಗಿನ್ನಾರಿಹರು ನಿಮ್ಮಷ್ಟು ಹತ್ತಿರ.

ಛೇ ! ಯಾವ ಗರ ಬಡಿಯಿತೆಂದೆನಗೆ ?
ಸುಂಟರ ಗಾಳಿಗೆ ಸಿಕ್ಕ ತರಗಲೆಯಾಗಿ
ಕಳೆದು ಹೋಗಿ… ಮರೆತೆನೆ ? ಬಂದ ಫಲವೇನು ?
ಅಜ್ಜಾ! ಅಜ್ಜಾ! ಎಂದಲುಗಿಸಿ ಎಚ್ಚರಿಸಿದಳು
ನಿಶ್ಚೇಷ್ಠಿತನಾಗಿ ಬಿದ್ದಿದ್ದವನ.

ಮಾತು ಹೊಟ್ಟೆಯೊಳಗೆ ಸಿಲುಕಿಕೊಂಡಿತ್ತು
ಸಂಜ್ಞೆಯಲಿ ಹಸಿವು ತಿನ್ನಲೇನಾದರೂ ಕೊಡೆಂದನು
ಅಯ್ಯೋ! ಎಂದು ಚೀರಿದಳು
ಮರದಿಂದ ಬಿದ್ದವರ ಮಟ್ಟೆಯಲ್ಲಿ ಹೊಡೆದಂತೆ
ನೋವಿನಲಿ, ಅಸಹಾಯಕತೆಯಲಿ
ಕೊಡಲೇನಿದೆಯಜ್ಜಾ ! ಎಂದ್ಹಲುಬಿದಳು.

ಏಕೆ ಉಳಿಸಿದೆ ?
ಯಾವ ಪಾಪಕಿದು ಶಿಕ್ಷೆ ?
ನೀಡಿ, ನೀಡಿಸಿದವನಿಂದು ಬೇಡುತಿಹನು
ಏನು ನೀಡಲಿ ? ಶಿವನೆ !
ಧಿಕ್ಕಾರವಿರಲೀ ಬಾಳಿಗೆನುತ ಹಳಹಳಿಸಿದಳು ಗಟ್ಟಿಗಿತ್ತಿ
ಮೊದಲ ಬಾರಿಗೆ ಸೋತಂತೆ.

ಹಸಿದ ಅಗಸ್ತ್ಯ ನಾಯಿ ಮಾಂಸವ ತಿಂದಂತೆ ನಾನು
ಬಾಳಿ ಬದುಕಿದ ಊರಿನಲಿ
ಬೇಡಿದರೆ ನೀಡದವರಾರಿಹರು ? ನೋಡೋಣ !
ಮಾನಾಪಮಾನಕಿದು ಸಂದರ್ಭವಲ್ಲ
ಜೀವವುಳಿದ ನಂತರದ್ದು ಎಲ್ಲಾ ಎಂದಳು
ಸೆರಗಿನ ಮರೆಯಲಿ ಇಸಿದು ತಂದುಣಿಸಿ ಸುಯ್ಯೆಂದಳು.

ಗಮನಿಸಿದಳು ಸೊಸೆ
ಹದ್ದಿನಂತೆರಗಿದಳು ಅತ್ತೆ ಮಾವನ ಮೇಲೆ
ಕೋಳಿ ಪಿಳ್ಳೆಗಳ ಮಾಡಿ
ಭಾರಿ ಅಪಚಾರವಾದಂತೆ ಹಿಡಿಯಲಿಲ್ಲವೇನೂ….
ಮಾತಿನ ಕೊಕ್ಕಿನಲಿ ಹರಿದು ಹರಿದು ಮುಕ್ಕಿದಳು
ತಣಿವವರೆಗೆ.

ಮಗನು ಬರುವನು
ವಿಚಾರಿಸುವನು, ಸಾಂತ್ವನವ ಮಾಡುವನು
ಆಸೆಯು ಹುಸಿಯಾಯಿತು
ಬಂದವನು ಹೆಂಡತಿಗೆ ಮತವನು ಹಾಕಿದನು
ಮಹಿಷಾಸುರನ ಅವತಾರವ ತಾಳಿದನು
ನುಗ್ಗಿ ಬಂದು ಎತ್ತಿ ಕುಕ್ಕಿದನು; ಸ್ಮೃತಿಯಳಿಯಿತು.

ಬಿದ್ದಲ್ಲಿ ಬಿದ್ದಿತ್ತು ಜೀವ
ಅಜ್ಜನಿಗೆ ಪರಿವೆಯಿರಲಿಲ್ಲ
ಆರೈಕೆ, ಉಪಚಾರ, ಪ್ರೇಮವಿದ್ದಲ್ಲಿ ತಾನೆ ?
ಎಚ್ಚರಗೊಂಡಾಗ ಬಹಳ ಹೊತ್ತಾಗಿತ್ತು
ಬಾಧೆ ಕಲಕಿತ್ತು
ಸಾಕೆಂದು ನಿರ್ಧರಿಸಿ ಬಿಟ್ಟು ಹೊರಟಿತು.

ಎಂದೂ ಬರದವಳು ಇಂದೇನು ಬಂದಳು
ಭಿನ್ನವಾಗಿದ್ದಳು; ಹರಸಿ ಹಾರಿ ಹೋದಳು
ಕಾರಣವೇನೆಂದು ಮಿಕ್ಕ ಮಕ್ಕಳು, ತಮ್ಮನು ಕೂಡಿ
ವ್ಯಾಕುಲಗೊಂಡರು ಬಹಳ; ಬೆನ್ನಾಡಿ ಬರಲಿಲ್ಲ,
ಹೊರಳಿ ಬಂದಳು ಅಜ್ಜನನು ಕಂಡಳು
ಎದೆ ಹಿಂಡಿತು ಸೋಲಲಿಲ್ಲ
ಅಜ್ಜಾ ! ಕ್ಷಮಿಸು ನಿನಗಿನ್ನು ದೇವನಿಹನು
ನಾನು ಹೊರಡುವೆನೆಂದಳು ಸಾಧ್ವಿ.

ದೇವಾ ! ಪಾಪವೋ… ಪಲಾಯನವೋ.. ತಿಳಿಯೆ
ಇರಲಾರೆ ಇನ್ನು ಇಲ್ಲಿ ನಾನು
ಭಾಗ್ಯವೆನ್ನುವೆ ಕೊನೆಯಲ್ಲಿ ನಿನ್ನ ನೆನೆವೆ… ಕರೆದುಕೋ ಸ್ವಾಮಿ!
ಆಂ! ಅಲ್ಲಿ ಇಲ್ಲಿ ಸತ್ತರೊಂದು ಮಾತು ಯಾಕೆ ಬೇಕು?
ಬಾಳು ಕೊಟ್ಟ ತಮ್ಮದೇ ಬಾವಿಯಿದೆ
ಅಲ್ಲಿಯೇ ಪ್ರಾಣ ವಿಡುವೆನೆಂದಳು
ಸಾರಿ, ಸೀತೆಯಂತೆ ಕೈಯೆತ್ತಿ ಸುತ್ತ ಮುಗಿದಳು;
ಹಾರಿ ಆತ್ಮಾರ್ಪಣೆ ಮಾಡಿಕೊಂಡಳು; ಮುಗಿಸಿಕೊಂಡಳು.

ಜೀವ ಕೊಡುವ ನಾನು ಜೀವ ತೆಗೆಯಲಾರೆ
ಬೇಡ… ಬೇಡವೆಂದು ಮೇಲಕ್ಕೆ ಚಿಮ್ಮಿದಳು
ಓಲುಗುಡಿಸಿದಳು ಕ್ಷಣ !
ಮೂರು ಬಾರಿ ತೇಲಿಸಿದಳು ಕರುಣಿ
ಕೊನೆಗೆ ನಿರ್ವಿಣ್ಣಳಾಗಿ ಮಡಿಲಿಗಿಟ್ಟುಕೊಂಡಳು
ನೋಯುತ್ತ ಗಂಗೆ.

ಅಜ್ಜಿ ಸಾವಿತ್ರಿಯಂತೆ
ಆರೈಕೆಯಲ್ಲಿ ಉಳಿಸಿಕೊಳ್ಳುವ ಛಲದ ಯತ್ನದಿ
ಮುಂದ ಮುಂದಕೊತ್ತುತ್ತಿದ್ದಳು ಸಂಗಾತಿ ಜೀವ.
ಅವಳ ಚರಮ ನುಡಿ
ಅಂತರಂಗಕ್ಕೆ ತಟ್ಟಿ
ನಿಶ್ಚಯಿಸಿದ್ದನು ಅಜ್ಜ ಆ ಕ್ಷಣವೇ !

ತಪ್ಪಲಿಲ್ಲ
ಅಜ್ಜಿ ಬಾವಿಯಲಿ, ಅಜ್ಜ ಮನೆಯಲಿ
ಏಕ ಕಾಲದಿ ಇಹಯಾತ್ರೆ ಮುಗಿಸಿದರು
ಸಾವಿನಲ್ಲೂ ಒಂದಾಗಿ ಸಾಗಿದರು; ಕಥೆಯಾದರು.

ದಿವ್ಯಮೌನಿ ದಿನಕರನು
ಮಂಕಾಗುತ್ತ ಸಾಗಿದನು; ಮುಳುಗಿ ಹೋದನು
ವಿಷಾದದಲಿ.
ನಡೆಯಬಾರದದು ನಡೆದು
ಮುಖವ ಮುಚ್ಚಿಕೊಂಡಿತು ಲೋಕ
ಕತ್ತಲೆಯ ಕರಿ ಕಂಬಳಿಯಲಿ.
*****