ಸೋಲು ಗೆಲುವು

ಸೋಲು ಗೆಲುವು

EXPECT THE BEST AND BE PREPARED FOR THE WORST! `ಜೀವನದಲ್ಲಿ ಒಳ್ಳೆಯದನ್ನೇ ನಿರೀಕ್ಷಿಸು ಆದರೆ ಕೆಟ್ಟದ್ದನ್ನು ಎದುರಿಸಲು ತಯಾರಾಗಿರು’ ಇದೊಂದು ಅನುಭವ ಸಾರ.

ಸೋಲು-ಗೆಲುವುಗಳು, ನೋವು-ನಲಿವುಗಳು ಜೀವನದ ಅವಿಭಾಜ್ಯ ಅಂಗವಾಗಿರುವಾಗ ನಮಗೆ ಬರೇ ಗೆಲುವುಗಳೇ ಬೇಕು ಎಂದು ಸೋಲುಗಳಿಂದ, ನೋವುಗಳಿಂದ ದೂರ ಓಡಲಾಗದು, ಸುಖವನ್ನಷ್ಟೇ ಅನುಭವಿಸಿ ದುಃಖ ಬಂದಾಗ ಅದನ್ನು ಬೇಡವೆನ್ನಲಾಗುವುದಿಲ್ಲ. ಬೇಡವೆಂದರೂ ಅದು ನಮ್ಮನ್ನು ಬಿಡುವುದೂ ಇಲ್ಲ. ಜೀವನದ ಸತ್ಯವೇ ಇದಾಗಿರುವಾಗ ಒಳ್ಳೆಯದನ್ನು ನಿರೀಕ್ಷಿಸುತ್ತಾ ಕೆಟ್ಟದ್ದನ್ನು ಎದುರಿಸಲು ತಯಾರಾಗಿರುವುದು ಬುದ್ಧಿವಂತಿಕೆಯ ಲಕ್ಷಣ. ನಮ್ಮ ಮನಃಶಾಂತಿಯನ್ನು ಕಾಯ್ದುಕೊಂಡು ಬದುಕುವ ಉಪಾಯ.

ಜೀವನವನ್ನು ಕುರುಕ್ಷೇತ್ರವೆನ್ನುತ್ತಾರೆ. ರಣರಂಗವೆನ್ನುತ್ತಾರೆ. ಹೋರಾಟವೆನ್ನುತ್ತಾರೆ. ಜೀವನವೊಂದು ವೈಚಿತ್ರ್ಯಗಳ, ಸವಾಲುಗಳ ಸರಮಾಲೆ ಎನ್ನುತ್ತಾರೆ. ಜೀವನವನ್ನು ಒಂದು ಸುಂದರ ಸ್ವಪ್ನಕ್ಕೂ, ಭ್ರಮಾಲೋಕಕ್ಕೂ ಹೋಲಿಸುತ್ತಾರೆ. ಒಟ್ಟಿನಲ್ಲಿ ಜೀವನದ ವಾಸ್ತವ್ಯಗಳು ನಮ್ಮ ನಿರೀಕ್ಷೆಗಳಿಗಿಂತ ಭಿನ್ನವಾಗಿರುವುದಂತೂ ಸತ್ಯ. ಇಂತಹ ಸಮ್ಮಿಶ್ರ ಅನುಭವಗಳ ಆಗರವಾಗಿರುವ ಜೀವನವನ್ನು ಜೀವಿಸುವ ಅವಕಾಶ ಮನುಷ್ಯರಾದ ನಮಗೆ ದೊರಕಿದೆ. ಅದನ್ನು ಸಂಪೂರ್ಣವಾಗಿ ಪರಿಪೂರ್ಣವಾಗಿ ಜೀವಿಸಿ ನಮ್ಮ ಅನುಭವ ಸಂಪತ್ತನ್ನು ವೃದ್ಧಿಸಿಕೊಂಡು ಜೀವಿಸಬೇಕಲ್ಲದೆ, ಜೀವನದ ಸವಾಲುಗಳಿಗೆ ಹೆದರಿ ಓಡುವ ಹೇಡಿತನ ಮಾಡಬಾರದು, ಜೀವನದಲ್ಲಿ ಯಾವೊಂದೂ ಸವಾಲುಗಳೇ ಇಲ್ಲದಿದ್ದರೆ ಅದೊಂದು ಉಪ್ಪು, ಖಾರಗಳಿಲ್ಲದ ಸಪ್ಪೆ ಊಟವಾದೀತು.

ಈ ಸವಾಲುಗಳಲ್ಲಿ ಎಷ್ಟೊಂದು ವೈವಿಧ್ಯತೆ ಸೋಲು-ಗೆಲುವುಗಳ ನಾಟಕ ಬೇರೆ.

ಜೀವನದಲ್ಲಿ ಯಾವ ಕಷ್ಟಗಳು ಬಂದರೂ ಹೆದರುವ, ಗಾಬರಿ ಪಡುವ, ಸೋತು ಕುಸಿಯುವ ಅವಶ್ಯಕತೆಯೇ ಇಲ್ಲ. ಆಕಾಶಕ್ಕೆ ಏಣಿ ಕಟ್ಟುವಂಥಾ ಮಹತ್ತರ ಆಸೆ ಆಕಾಂಕ್ಷೆಗಳು, ನಿರೀಕ್ಷೆಗಳು ಮಾನವ ಸಹಜವಾದ ಭಾವನೆಗಳು. ಎಲ್ಲಾ ಪರೀಕ್ಷೆಗಳಲ್ಲೂ ಗೆಲುವು ಸಿಗಬೇಕೆನ್ನುವ ಆಸೆ ಎಲ್ಲರಿಗೂ ಇರುವುದೇ. ಆ ಆಸೆ ದುರಾಸೆಯಾಗಬಾರದು. ಗೆಲ್ಲ ಬೇಕೆನ್ನುವ ಪ್ರಯತ್ನ ನಮ್ಮದು, ಆದರೆ ಪ್ರತಿಫಲದ ನಿರ್ಧಾರ ನಮ್ಮದಲ್ಲ.

ಸೂಕ್ಷ್ಮವಾಗಿ ಅವಲೋಕಿಸಿದರೆ, ಜೀವನದ ಪ್ರತಿ ಹೆಜ್ಜೆಯಲ್ಲೂ ಸವಾಲಿದೆ. ಸೋಲು ಗೆಲುವುಗಳಿವೆ. ನಮ್ಮ ಹಿಂದಿನ ಹೆಜ್ಜೆಗಳು ಮುಂದಿನ ಹೆಜ್ಜೆಗಳಿಗೆ ಒತ್ತುಕೊಟ್ಟು ಶಕ್ತಿಯುತ ಹೆಜ್ಜೆಗಳನ್ನಾಗಿ ಮಾಡುತ್ತವೆ. ಜೀವನದ ಹೆಚ್ಚಿನ ಸವಾಲುಗಳನ್ನು ನಾವು ನಿರ್‍ಯೋಚನೆಯಿಂದ ಗೆಲ್ಲುತ್ತ ಬರುತ್ತೇವೆ. ಯಾಕೆಂದರೆ ಅವುಗಳನ್ನು ಎದುರಿಸಲು ನಾವು ಸದಾ ಸಿದ್ಧರಾಗಿಯೇ ಇರುತ್ತೇವೆ. ನಮ್ಮನ್ನು ಕಂಗೆಡಿಸುವುದು ಕೆಲವೇ ಸವಾಲುಗಳು, ಅವುಗಳು ಅಸಾಮಾನ್ಯ ಸವಾಲುಗಳು. ನಮ್ಮ ಮನದಾಸೆಗಳ ಪೂರೈಕೆಗೆ ಅಡ್ಡವಾಗಿ ಎದ್ದು ಬರುವ ಸವಾಲುಗಳು, ಎಲ್ಲಿ ಆಸೆ ತೀವ್ರವಾಗಿರುವುದೋ ಅಲ್ಲಿ ಸವಾಲುಗಳೂ ತೀವ್ರವಾಗಿರುತ್ತವೆ. ಉದಾಹರಣೆಗೆ ಹೆತ್ತವರಿಗೆ ಮಕ್ಕಳ ಮೇಲಿರುವ ಅತಿಯಾದ ಆಸೆ. ಅವರು ನಮ್ಮ ನಿರೀಕ್ಷೆಗಳನ್ನು ಮೀರಿ ನಡೆದರೆ ನೋವಾಗುತ್ತದೆ. ಆ ನೋವನ್ನು ತಡೆಯಲು ನಾವು ತಯಾರಾಗಿರದಿದ್ದರೆ ಆಘಾತವಾಗುತ್ತದೆ. ನಿರೀಕ್ಷೆಗಳು ಸುಳ್ಳಾದಾಗ ಅವುಗಳನ್ನೂ ಸ್ವೀಕರಿಸಿ ಜೀರ್‍ಣಿಸಿಕೊಳ್ಳುವ ಆತ್ಮವಿಶ್ವಾಸ ಅತೀ ಅಗತ್ಯ.

ಇಲ್ಲಿ ಇನ್ನೊಂದು ಉದಾಹರಣೆಯನ್ನೂ ಕೊಡಬಹುದು. ಉದ್ಯೋಗ ದಲ್ಲಿರುವವರೆಗೆ ಎಲ್ಲರಿಗೂ ಬಡ್ತಿ ಸಿಗಬೇಕೆನ್ನುವ ಹಂಬಲ ಸಹಜ. ಸಿಗಲೇ ಬೇಕೆನ್ನುವ ಮಹಾತ್ವಾಕಾಂಕ್ಷೆಯಿಂದ ಎಲ್ಲರೂ ಅದಕ್ಕಾಗಿ ಪ್ರಯತ್ನಿಸುತ್ತಾರೆ. ಪರೀಕ್ಷೆಗೆ ಕುಳಿತುಕೊಳ್ಳುತ್ತಾರೆ. ಸಂದರ್ಶನಗಳಿಗೆ ಹೋಗುತ್ತಾರೆ. ಚೆನ್ನಾಗಿ ಕೆಲಸಮಾಡುತ್ತಾರೆ. ಬಡ್ತಿ ಸಿಗುವ ಕನಸು ಕಾಣುತ್ತಾರೆ. ಎಲ್ಲಾ ವಿಧದಲ್ಲೂ ಪರಿಪೂರ್ಣರಾಗಿರುವ ತಮಗೆ ಬಡ್ತಿ ಸಿಗದಿದ್ದರೆ ಮತ್ಯಾರಿಗೆ ಸಿಗಬೇಕು ಎನ್ನುವ ಭ್ರಮೆಗೊಳಗಾಗುತ್ತಾರೆ. ತಮ್ಮ ಪ್ರತಿಸ್ಪರ್ಧಿಗಳು ಯಾರಾದರೂ ಇದ್ದರೆ ಅವರೊಡನೆ ತಮ್ಮನ್ನು ತೂಗಿ ನೋಡುತ್ತಾರೆ. ಆ ತೂಗಾಟದಲ್ಲೂ ತಮ್ಮ ತಕ್ಕಡಿಯೇ ಮೇಲೆಂದು ಅವರಿಗನಿಸುತ್ತದೆ. ಯಾಕೆಂದರೆ ಅವರ ಆಸೆ ಅಷ್ಟು ಹೆಚ್ಚಿನದ್ದು. ಆದರೆ ಕಾರಣಾಂತರಗಳಿಂದ ಅವರಿಗೆ ಬಡ್ತಿ ಸಿಗದೆಯೂ ಇರಬಹುದು.

ಇಂತಹ ಸಂದರ್ಭಗಳನ್ನು ಎದುರಿಸಲು ನಾವು ತಯಾರಾಗಿರದಿದ್ದ ಪಕ್ಷದಲ್ಲಿ ನಮಗೆ ವಿಪರೀತ ನಿರಾಸೆಯಾಗುತ್ತದೆ. ಆಸೆ, ಪ್ರಯತ್ನ ಇರಲೇ ಬೇಕು. ಆದರೆ ಪ್ರತಿ ಆಸೆಯ ಹಿಂದೆ ನಿರಾಸೆಯ ಒಂದು ಎಳೆ ಅಡಗಿದೆಯೆನ್ನುವುದನ್ನು ಮರೆಯಬಾರದು. ಈ ನಿರಾಸೆಯನ್ನು ಎದುರಿಸಲು ಮಾನಸಿಕ ತಯಾರಿ ಅತಿ ಅಗತ್ಯ ತಯಾರಿ ಮಾಡಿಕೊಳ್ಳದಿದ್ದ ಪಕ್ಷದಲ್ಲಿ ನಾವು ಸೋತರೆ ಪಾತಾಳಕ್ಕೆ ಕುಸಿಯುತ್ತೇವೆ. ಮೇಲೇರಲು ಕಷ್ಟವಾಗುವಷ್ಟು ಕೆಳಕ್ಕೆ ಕುಸಿಯುತ್ತೇವೆ. ಅಂತಹ ಮಹಾ ಕುಸಿತಕ್ಕೆ ಅವಕಾಶ ಕೊಡಬಾರದು. ಸೋಲು ಗೆಲವುಗಳು ಆಸೆ, ನಿರಾಸೆಗಳು ಜೀವನದಲ್ಲಿ ಹಾಸುಹೊಕ್ಕಾಗಿವೆ. ಅದೇ ಜೀವನದ ಚೈತನ್ಯ ಎನ್ನುವ ಅರಿವು ಬಹಳ ಮುಖ್ಯ. ಗೆಲುವಿನಲ್ಲಿ ಸಂತೋಷ ಸಿಗುವಂತೆ ಸೋಲಿನಲ್ಲಿ ನೋವಾಗುತ್ತದೆ. ಈ ಕ್ಷಣಿಕ ನೋವು-ನಲಿವುಗಳಲ್ಲಿಯೇ ಜೀವನದ ಕೊನೆಯಾಗದು. ಸೋಲುಗಳು ಗೆಲುವಿನಡೆಗೆ ಸೋಪಾನಗಳು ನಿಜ. ಈ ಸತ್ಯ ದರ್ಶನದಿಂದಲೇ ಮನುಷ್ಯ ಒಂದು ಸೋಲಿನಿಂದ ಎದ್ದು ಮೇಲಿನ ಮೆಟ್ಟಲುಗಳನ್ನು ಏರುತ್ತಾನೆ.

ಈ ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವ ಅಂತಃಶಕ್ತಿ ಬೆಳೆಸಿಕೊಳ್ಳಲು ಮಾನಸಿಕ ಸಿದ್ಧತೆ ಅತೀ ಅಗತ್ಯ. ನೋವು ನಲಿವುಗಳು ನಮ್ಮ ಉಸಿರಾಟದಷ್ಟೇ ಸತ್ಯ. ನಲಿವುಗಳನ್ನು ಒಪ್ಪಿಕೊಂಡಷ್ಟೇ ಸಹಜವಾಗಿ ನೋವುಗಳನ್ನೂ ಸ್ವೀಕರಿಸಿ ಅದನ್ನು ಮರೆತು ಮುಂದೆ ಹೋಗಲು ಕಲಿಯಬೇಕು. ನಡೆಯಲು ಕಲಿಯುವ ಮಗು ಒಮ್ಮೆ ಬಿದ್ದೆನೆಂದು ನಡೆಯುವುದನ್ನು ನಿಲ್ಲಿಸುವುದಿಲ್ಲ. ಹಾಗೇ ನೋವುಗಳನ್ನು ಮರೆತು ಮುನ್ನುಗ್ಗುವುದೇ ಒಂದು ಮಹತ್ತರ ಸಾಧನೆ. ಈ ರೀತಿಯಲ್ಲಿ ಮನಸ್ಸನ್ನು ರೂಪಿಸಿಕೊಂಡವನು ಯಾವ ಬಿರುಗಾಳಿಗೂ ಕೊಚ್ಚಿಕೊಂಡು ಹೋಗುವವನಲ್ಲ. ಕಲ್ಲುಬಂಡೆಯಂತೆ ಭದ್ರವಾಗಿ ನಿಲ್ಲಬಲ್ಲವನಾಗುತ್ತಾನೆ. ಯಾವ ಉದ್ವೇಗಕ್ಕೂ ಎಡೆ ಇಲ್ಲವಾಗುತ್ತದೆ.

ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವ ಎದೆಗಾರಿಕೆಗೆ ಮುಖ್ಯವಾಗಿ ಬೇಕಾಗಿರುವುದು ನಮ್ಮಲ್ಲಿ ನಮಗೆ ನಂಬುಗೆ. ನಮ್ಮ ಪ್ರಯತ್ನಗಳಲ್ಲಿ ನಮಗೆ ತೃಪ್ತಿ. ನಮ್ಮ ಕರ್ತವ್ಯವನ್ನು ನಾವು ಚೆನ್ನಾಗಿಯೇ ನಿಭಾಯಿಸಿದ್ದೇವೆ ಎನ್ನುವ ಆತ್ಮವಿಶ್ವಾಸ. ಆಗ ಸೋಲು ಗೆಲುವುಗಳನ್ನು ಸಮಾನವಾದ ಮಾನಸಿಕ ಸ್ತರದಲ್ಲಿ ಸ್ವೀಕರಿಸುವ ಸ್ಥಿತಪ್ರಜ್ಞತೆ ಬೆಳೆಯುತ್ತದೆ. ಗೆಲುವುಗಳು ಬೇಕೆಂದಷ್ಟೇ ಸಹಜವಾಗಿ ಸೋಲುಗಳನ್ನೂ, ನೋವುಗಳನ್ನೂ ನಾವು ಸ್ವೀಕರಿಸಲೇಬೇಕು. ಇಂಥಾ ಸಮ್ಮಿಶ್ರ ಅನುಭವಗಳಿಂದಲೇ ಜೀವನ ಫಲವತ್ತಾಗುವುದು. ನಮ್ಮ ವರ್ಚಸ್ಸು ಹೆಚ್ಚುವುದು. ನಾವು ಹೆಚ್ಚಿನ ಜ್ಞಾನಿಗಳಾಗುವುದು. ಅನುಭವಿಗಳಾಗುವುದು ಎನ್ನುವುದನ್ನು ಮರೆಯಲಾಗದು. ಹೇಗೆ? ಹಾಗಿರುವಾಗ ನಿರಾಸೆ, ನೋವು ಬೇಡವೆಂದರೆ ಹೇಗೆ?

‘ಮುಳುಗದಿರು; ಜೀವನದ ತೆರೆಯ ಮೇಲೀಜುತಿರು; ಒಳಿತನಾಗಿಸು, ಕೊಡುತ ಕೊಳುತ ಸಂತಸವ;

ಕಳವಳಂ ಪಡದೆ ನಡೆ ಕಡೆಯ ಕರೆ ಬಂದಂದು, ಮಿಳಿತನಿರು ವಿಶ್ವದಲಿ ಮಂಕುತಿಮ್ಮ’

ಜೀವನದಲ್ಲಿ ಒಳ್ಳೆಯದನ್ನು ನಿರೀಕ್ಷಿಸುತ್ತಾ ಕೆಟ್ಟದ್ದು ಬಂದರೆ ಅದನ್ನು ಎದುರಿಸಲು ನಾವು ತಯಾರಾಗಿದ್ದರೆ ಜೀವನ ರಣರಂಗವೂ ಅಲ್ಲ ಕುರುಕ್ಷೇತ್ರವೂ ಅಲ್ಲ. ಅದೊಂದು ತೃಪ್ತಿಕರ, ಅಹ್ಲಾದಕರ ಅನುಭವವಾಗುತ್ತದೆ. ಸೋಲು-ಗೆಲುವು ಎರಡೂ ನಮಗೆ ಪ್ರಿಯವಾಗುತ್ತದೆ.
*****
(ಮುಂಗಾರು- ೦೧.೦೨.೧೯೯೪)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಒದೆ ಬಿತ್ತು
Next post ಹಕ್ಕಿನ ಹಾಡು

ಸಣ್ಣ ಕತೆ

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…