ಮುಸ್ಸಂಜೆಯ ಮಿಂಚು – ೨೪

ಮುಸ್ಸಂಜೆಯ ಮಿಂಚು – ೨೪

ಅಧ್ಯಾಯ ೨೪ ರಿತುವಿನ ಪ್ರೇಮಋತು

ಆಶ್ರಮದಲ್ಲೀಗ ಅಲ್ಲೋಲಕಲ್ಲೋಲ, ಈ ವಯಸ್ಸಿನಲ್ಲಿ ಇವರಿಗೇನು ಬಂದಿತು? ಸಾಯುವ ವಯಸ್ಸಿನಲ್ಲಿ ಮದುವೆಯೇ ಎಂದು ‘ನಮ್ಮ ಮನೆ’ಯಲ್ಲಿ ಚರ್ಚೆಯೇ ಚರ್ಚೆ. ರಿತುವಿಗೂ ಇದು ಅನಿರೀಕ್ಷಿತವೇ. ಆದರೆ ಇದು ಅಸಹಜವೆಂದು ಅನ್ನಿಸದೆ, ಅವರಿಬ್ಬರಿಗೂ ಅಭಿನಂದನೆ ಹೇಳಿದಳು.

ಆರೇ! ಈ ಪಾಂಡುರಂಗ ಅದೆಷ್ಟು ಫಾಸ್ಟ್, ನಾನಿನ್ನೂ ನನ್ನ ಹುಡುಗಿಯ ಮುಂದೆ ಮನದಾಳದ ಭಾವವನ್ನು ಬಿಚ್ಚಿಡಲೇ ಮೀನ-ಮೇಷ ಎಣಿಸುತ್ತಿರುವಾಗ, ಈ ವಯಸ್ಸಿನಲ್ಲಿ ಅದೇನು ಉತ್ಸಾಹ ಈ ಪ್ರೇಮಿಗೆ, ತನ್ನ ಪ್ರೇಮವನ್ನು ಅದೆಷ್ಟು ಧೈರ್ಯವಾಗಿ ಹೇಳಿ, ಮದುವೆಗೂ ಒಪಿಸಿಬಿಟ್ಟಿದಾರೆ, ಭೇಷ್ ಎಂದುಕೊಂಡ ಸೂರಜ್ ಮನಃಪೂರ್ವಕವಾಗಿ ಈ ಮದುವೆಗೆ ಒಪ್ಪಿದ.

ಯಾರ ಒಪ್ಪಿಗೆಗಾಗಿಯೂ ಕಾಯದೆ, ಯಾರ ಅಭಿಪ್ರಾಯಕ್ಕೂ ಮನ್ನಣೆ ನೀಡದೆ ಮದುವೆಯಾಗಿ, ಬದುಕಿನ ಅಂತ್ಯದ ದಿನಗಳನ್ನು ಹಾಯಾಗಿ ಕಳೆಯಿರಿ ಎಂದು ವೆಂಕಟೇಶ್ ಆಶೀರ್ವಾದ ಮಾಡಿದರು.

ಮುದುಕರಿಬ್ಬರ ಮದುವೆಗೆ ಸಿದ್ಧತೆ ನಡೆಸುತ್ತಲೇ ಇಡೀ ‘ನಮ್ಮ ಮನೆ’ಯ ಸದಸ್ಯರೂ ತಮಾಷೆ ಮಾಡುತ್ತ, ಇಬ್ಬರನ್ನೂ ಛೇಡಿಸುತ್ತ ಕಾಲ ಕಳೆದರು. ಕೆಲವರಂತೂ ಈ ಜೋಡಿ ನೋಡುತ್ತ ನಕ್ಕುನಕ್ಕು ಸಾಕಾದರು. ಮುದುಕ-ಮುದುಕಿ ಹಾರ ಬದಲಾಯಿಸಿಕೊಳ್ಳುತ್ತಿದ್ದರೆ ಕುಹಕವಾಗಿ ನಕ್ಕವರು ಅದೆಷ್ಟು ಜನವೋ? ತಮಗಿಲ್ಲದ ಭಾಗ್ಯಕ್ಕೆ ಕರುಬಿದವರೆಷ್ಟು ಜನವೋ? ವ್ಯಂಗ್ಯವಾಗಿ ಇರಿದು ತಮ್ಮ ಮನಸ್ಸಿನ ಸಣ್ಣತನವನ್ನು ತೋರಿದ ಜನರೂ ಇದ್ದರು ಅಲ್ಲಿ.

ಯಾರು ಏನೇ ಹೇಳಿಕೊಳ್ಳಲಿ, ಜಗ್ಗದ ಹೆಬ್ಬಂಡೆಯಂತಿದ್ದ ಯಶೋದಾ ಪಾಂಡುರಂಗರವರು ಮದುವೆಯುದ್ದಕ್ಕೂ ಹಸನ್ಮುಖರಾಗಿಯೇ ಇದ್ದು, ಎಲ್ಲವನ್ನೂ ಹಗುರವಾಗಿ ತೆಗೆದುಕೊಂಡರು. ವೆಂಕಟೇಶ್ ಅವರ ಖರ್ಚಿನಲ್ಲಿಯೇ ಈ ಮದುವೆ ನಡೆದಿತ್ತು. ತಾವೇ ಆಶೀರ್ವದಿಸಿ, ಮಾಂಗಲ್ಯ ಮಾಡಿಸಿಕೊಟ್ಟಿದ್ದರು. ಅಂದು ಆಶ್ರಮಕ್ಕೆ ಸಿಹಿ ಊಟ, ಮನದೊಳಗಿನ ಭಾವನೆ ಏನೇ ಇದ್ದರೂ ಸಿಹಿ ಉಂಡು, ಸಿಹಿಯಾಗಿಯೇ ಹರಸಿದರು.

ಮದುವೆಯಾದ ಮೇಲೆ ಆಶ್ರಮದಲ್ಲಿರಬೇಕೋ ಬೇಡವೋ ಎಂಬ ಜಿಜ್ಞಾಸೆ ಪ್ರಾರಂಭವಾಯಿತು. ಆಶ್ರಮದ ರೂಲ್ಸ್ ಪ್ರಕಾರ ಗಂಡ-ಹೆಂಡತಿಯ ಸಂಬಂಧದ ಮೇಲೆ ಒಟ್ಟಾಗಿ ವಾಸಿಸುವಂತಿರಲಿಲ್ಲ. ಗಂಡ-ಹೆಂಡತಿ ಆಶ್ರಮದಲ್ಲಿ ಇರಬಹುದಾಗಿದ್ದರೂ ಗಂಡಸರ ವಿಭಾಗದಲ್ಲಿ ಗಂಡ, ಹೆಂಗಸರ ವಿಭಾಗದಲ್ಲಿ ಹೆಂಡತಿ ಇರಬೇಕಿತ್ತು. ಯಾವ ಕಾರಣಕ್ಕೂ ಒಟ್ಟಿಗೆ ಇರುವಂತಿರಲಿಲ್ಲ.

ಹಾಗಾಗಿ ಯಶೋಧಾ ಮತ್ತು ಪಾಂಡುರಂಗರವರು ಇದೇ ಆಶ್ರಮದಲ್ಲಿ ಇದ್ದರೆ ಅಲ್ಲೊಬ್ಬರು-ಇಲ್ಲೊಬ್ಬರು ಇರಬೇಕಿತ್ತು. ದಂಪತಿಯನ್ನು ಆಗಲಿಸುವ ಮನಸ್ಸು ಅಲ್ಲಿ ಯಾರಿಗೂ ಇರಲಿಲ್ಲ. ಹಾಗಾಗಿ ಇವರಿಬ್ಬರೂ ಆಶ್ರಮವನ್ನು ಬಿಡಲೇಬೇಕಿತ್ತು. ಆದರೆ ಆಶ್ರಮ ಬಿಟ್ಟು ದೂರ ಹೋಗುವ ಮನಸ್ಸು ಇವರಿಬ್ಬರಿಗೂ ಇರಲಿಲ್ಲ. ಇಲ್ಲಿನವರ ಒಡನಾಟ, ಸ್ನೇಹದಿಂದಾಗಿ ಅವರೆಲ್ಲರನ್ನೂ ತಮ್ಮ ಬಂಧುಗಳನ್ನಾಗಿಯೇ ಮಾಡಿಕೊಂಡಿದ್ದರು. ಅದೂ ಅಲ್ಲದೆ, ಈ ವಯಸ್ಸಿನಲ್ಲಿ ಹೊಸ ಸಂಸಾರ ಹೂಡುವ ಚೈತನ್ಯವೂ ಅವರಲ್ಲಿ ಇರಲಿಲ್ಲ. ಹಾಗಾಗಿ ಏನು ಮಾಡಲು ತೋಚದೆ ಇರುವಾಗ ಸೂರಜ್ ಒಂದು ಪರಿಹಾರ ಕಂಡುಹಿಡಿದ. ಪಾಂಡುರಂಗರವರು ಆಶ್ರಮದ ಆಡಳಿತದಲ್ಲಿ ಬಹಳಷ್ಟು ಸಹಾಯ ಮಾಡುತ್ತಿದ್ದರು. ಅನುಭವಿಯಾದ ಅವರು ತಮ್ಮ ಅನುಭವವನ್ನು ಸಂತೋಷದಿಂದಲೇ ಯಾವುದೇ ಫಲಾಪೇಕ್ಷೆ ಇಲ್ಲದೆ ಆಶ್ರಮಕ್ಕಾಗಿ ವಿನಿಯೋಗಿಸುತ್ತಿದ್ದರು. ಪ್ರತಿಯೊಂದರಲ್ಲೂ ಅವರ ಸಲಹೆ, ಸಹಕಾರ ಇದ್ದೇ ಇರುತ್ತಿತ್ತು. ಇನ್ನು ಯಶೋದಾ ಬಂದ ಮೇಲಂತೂ ರಿತುವಿಗೆ ಸಹಾಯಕಳಾಗಿ ನಿಂತಿದ್ದಳು. ಅವಳ ಬರವಣಿಗೆಯಲ್ಲಿ ನೆರವಾಗುತ್ತ ರಿತುವಿನ ಹೊರೆಯನ್ನು ಕಡಿಮೆ ಮಾಡಿದ್ದಳು. ಇವರಿಬ್ಬರ ಅಗತ್ಯ ಆಶ್ರಮಕ್ಕೆ ಆವಶ್ಯಕವಾಗಿತ್ತು. ಹಾಗಾಗಿ ಇದಕ್ಕೊಂದು ಪರಿಹಾರವಾಗಿ ಆಶ್ರಮಕ್ಕೆ ಹೊಂದಿಕೊಂಡಂತೆ, ಆಶ್ರಮದ ನೌಕರರಿಗೆಂದೆ ಕಟ್ಟಿದ್ದ ವಸತಿಗೃಹದಲ್ಲಿ ಅವರಿಬ್ಬರು ತಮ್ಮ ನೂತನ ಸಂಸಾರವನ್ನು ಆರಂಭಿಸಲು ಎಲ್ಲಾ ಅನುಕೂಲವನ್ನೂ ಒದಗಿಸಿಕೊಟ್ಟ. ಅವರಿಬ್ಬರೂ ಆಶ್ರಮದಲ್ಲಿ ಉಳಿಯುವಂತಾಗಿದ್ದು ರಿತುವಿಗೆ ಹೆಚ್ಚಿನ ಸಂತಸ ನೀಡಿತ್ತು. ಈ ಏರ್‍ಪಾಡಿನಿಂದ ವೆಂಕಟೇಶರವರಿಗೂ ಮೆಚ್ಚುಗೆ ತರಿಸಿತ್ತು.

ಇಳಿವಯಸ್ಸಿನ ಕುಹಕವಾಡಿದವರೆಲ್ಲ ಬಾಯಿ ಮುಚ್ಚಿಕೊಂಡು ಈ ದಾಂಪತ್ಯದ ಯಶಸ್ಸನ್ನು ಕಂಡು ಕರುಬಿದರು. ದಾಂಪತ್ಯ ಸುಖಕರವಾಗಿಯೇ ನಡೆಯುತ್ತಿತ್ತು.

ಪರದೇಶಗಳಲ್ಲಿ ಇಂಥ ಮದುವೆ, ಸಂಸಾರ ಸರ್ವಸಾಮಾನ್ಯ. ಆದರೆ ಭಾರತದಂಥ ದೇಶಗಳಿಗೆ ಇದು ಹೊಸದು. ಇಲ್ಲಿನ ಸಂಸ್ಕೃತಿ, ಆಚಾರ-ವಿಚಾರಗಳಿಗೆ ಒಗ್ಗದ ವಿಷಯವಾದರೂ ಸಂಪ್ರದಾಯಸ್ಥ ಮನಸ್ಸುಗಳಿಗೆ ತಡೆಯಲಾರದ ಆಘಾತವಾದರೂ ಕಾಲಕ್ರಮೇಣ ಎಲ್ಲವನ್ನೂ ಸ್ವೀಕರಿಸುವ ಸಮಾಜದಲ್ಲಿ ಹೊಸಹೊಸದನ್ನು ಸ್ವಾಗತಿಸುತ್ತ, ಹೊಸ ಹೊಸ ಪದ್ಧತಿಗಳನ್ನು ತನ್ನೊಳಗೆ ಸೇರಿಸಿಕೊಳ್ಳುವ, ಹಳೇ ನೀರು ಹೊಸ ನೀರನ್ನು ಕೊಚ್ಚಿಕೊಂಡು ಹೋಗುವಂತೆ, ‘ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಗಸು’ ಎಂಬ ಕವಿವಾಣಿಯಂತೆ ಹೊಸ ವಿಚಾರಗಳು ಸಮಾಜದಲ್ಲಿ ಐಕ್ಯವಾಗುತ್ತವೆ. ನಮ್ಮ ಸಂಸ್ಕೃತಿ ನಿಂತ ನೀರಾಗದೆ ಹರಿಯುವ ನದಿಯಾಗಿದೆ. ಇದು ಅನಾದಿಕಾಲದಿಂದಲೂ ನಡೆದುಕೊಂಡು ಬಂದಂಥ, ನಡೆಯುತ್ತಲೇ ಇರುವ ಪರಂಪರೆಯಾಗಿದೆ. ಯಾವುದನ್ನು ಸಮಾಜ ಒಪ್ಪಿಕೊಂಡು, ಸ್ವೀಕರಿಸುತ್ತದೆಯೋ ಅದು ಪರಂಪರೆಯಾಗುತ್ತದೆ. ಅಂಥ ಪರಂಪರೆಗಳು ಇತಿಹಾಸದ ಗರ್ಭದೊಳಗೆ ಸೇರಿಹೋಗುತ್ತವೆ.

ಇದೇ ವಿಚಾರವಾಗಿ ಮಾತನಾಡುತ್ತ ಕುಳಿತಿದ್ದ ರಿತು ಸೂರಜ್‌ಗೆ,

“ಸೂರಜ್, ಯಾರ್ಯಾರ ಬದುಕಿನಲ್ಲಿ ಏನೇನು ನಡೆಯುತ್ತದೆಯೋ ಬಲ್ಲವರು ಯಾರು ಅಲ್ವಾ? ಯಶೋದಾ-ಪಾಂಡುರಂಗರವರು ಇಲ್ಲಿಗೆ ಬರುವಾಗ ತಾವಿಬ್ಬರೂ ಮದುವೆಯಾಗಿ, ಸಂಸಾರ ನಡೆಸುತ್ತೇವೆ ಎಂಬ ಕಲ್ಪನೆಯನ್ನು ಕನಸು-ಮನಸಿನಲ್ಲಿಯೂ ಮಾಡಿರಲಿಲ್ಲ. ಇಲ್ಲಿಗೆ ಬಂದ ಮೇಲೆ ಅದು ಹೇಗೆ ಅವರಿಬ್ಬರನ್ನು ವಿಧಿ ಒಂದು ಮಾಡಿತೋ ಆಲ್ವಾ ಸೂರಜ್?”

“ಹೌದು ರಿತು, ಈ ಬದುಕೇ ಅನಿರೀಕ್ಷಿತಗಳ ಕಡಲು, ಯಾವ ಸಮಯದಲ್ಲಿ, ಯಾವ ಸಂದರ್ಭದಲ್ಲಿ ಏನೇನು ತಿರುವುಗಳು ಕಾಣಿಸಿಕೊಳ್ಳುತ್ತವೋ? ಇದನ್ನೇ ಬದುಕು ಎನ್ನುವುದು. ನಾವು ಅಂದುಕೊಂಡದ್ದೆಲ್ಲ ಆಗಿಯೇಬಿಟ್ಟರೆ ನಮ್ಮನ್ನು ಹಿಡಿಯುವವರು ಯಾರು?” ವೇದಾಂತಿಯಂತೆ ನುಡಿದ.

“ನಿಜ ಸೂರಜ್, ನಾವು ಅಂದುಕೊಳ್ಳುವುದೇ ಒಂದು, ಅದು ಆಗುವುದೇ ಒಂದು. ನಾನು-ಜಸ್ಸು ಕಾಲೇಜಿನ ದಿನಗಳಿಂದಲೂ ಫ್ರೆಂಡ್ಸ್. ಒಬ್ಬರನ್ನೊಬ್ಬರು ಮೆಚ್ಚಿದ್ದೀವಿ, ಮದ್ದೆ ಆಗ್ತಿವಿ ಅಂತ ಅಂದ್ಕೊಂಡೇ ದಿನ ಕಳೆದವು. ಆದರೆ ಮುಂದೊಂದು ದಿನ ನಮ್ಮಿಬ್ಬರ ದಾರಿ ಕವಲೊಡೆಯಬಹುದು ಎಂಬ ಕಲ್ಪನೆ ಕೂಡ ನಮಗಿರಲಿಲ್ಲ” ಮನದೊಳಗಿನದ್ದನ್ನೆಲ್ಲ ಪದರಪದರವಾಗಿ ಬಿಡಿಸುವ ಯತ್ನ ನಡೆಸಿದಳು.

ರಿತುವಿನ ಭೂತಕಾಲದಲ್ಲೊಂದು ಪ್ರೇಮ ಪ್ರಕರಣ ನಡೆದಿದೆ ಎಂಬುದನ್ನು ತಿಳಿದ ಸೂರಜ್ ಕಳವಳಗೊಂಡ.

ಸೂರಜ್‌ನ ಪ್ರತಿಕ್ರಿಯೆಗೆ ಕಾಯದೆ ರಿತು ಹೇಳುತ್ತ ಹೋದಳು. “ಜಸ್ಸು ನನ್ನನ್ನು ಪ್ರೀತಿಸುತ್ತಿದ್ದಾನೆಂದೇ ತಿಳಿದಿದ್ದೆ. ನಾನು ಕೂಡ ಅವನನ್ನು ಪ್ರೀತಿ ಮಾಡುತ್ತಿದ್ದೆ. ಆದರೆ ದಿನಗಳು ಕಳೆದಂತೆ ನಮ್ಮಿಬ್ಬರಲ್ಲೂ ಪರಸ್ಪರ ಸ್ನೇಹ, ಹುಡುಗಾಟ, ಆಕರ್ಷಣೆ ಎಂಬುದಷ್ಟೇ ಅರಿವಾಗತೊಡಗಿತ್ತು. ಆದರೆ ನಾವಿಬ್ಬರೂ ಒಬ್ಬರಿಗೊಬ್ಬರು ಬದ್ದರಾಗಿಬಿಟ್ಟಿದ್ದೆವು. ಮದುವೆ ಆಗಲೇಬೇಕೆಂಬ ನಿರ್ಬಂಧಕ್ಕೆ ನಮ್ಮಷ್ಟಕ್ಕೆ ನಾವೇ ಒಳಪಟ್ಟಿದ್ದೆವು. ಇಬ್ಬರ ಮನೆಗಳಲ್ಲೂ ಇದಕ್ಕೆ ಪ್ರೋತ್ಸಾಹವಿತ್ತು. ಎರಡೂ ಮನೆಗಳಲ್ಲಿಯೂ ನಮ್ಮಿಬ್ಬರ ಅನುಬಂಧವನ್ನು ಒಪ್ಪಿಕೊಂಡು ಬಿಟ್ಟಿದ್ದರು. ಇದು ಕೂಡ ನಮ್ಮ ಸ್ನೇಹ, ಸಂಬಂಧವನ್ನಾಗಿಸಲು ಸಹಕಾರಿಯಾಗಿತ್ತು.

“ಒಟ್ಟಿಗೆ ಓಡಾಡುತ್ತಿದ್ದೆವು, ಶಾಪಿಂಗ್ ಮಾಡುತ್ತಿದ್ದೆವು, ಸದಾ ಒಟ್ಟಿಗೆ ಇರುತ್ತಿದ್ದವು. ಒಂದು ದಿನ ನೋಡದಿದ್ದರೂ ಏನೋ ಕಳೆದುಕೊಂಡವರಂತೆ ಆಡುತ್ತಿದ್ದೆವು. ಆದರೆ, ಒಂದೇ ಒಂದು ದಿನವೂ ನಮಗೆ ಹೆಣ್ಣು-ಗಂಡು ಎಂಬ ಇವನೆಯ ಕಾಡಿರಲಿಲ್ಲ ಅನ್ನುವುದು ಸತ್ಯವಾಗಿತ್ತು. ಹದಿಹರೆಯದ ಆ ದಿನಗಳಲ್ಲಿ ಸ್ನೇಹವನ್ನು ಪ್ರೇಮವೆಂದು ತಪ್ಪರ್ಥಮಾಡಿಕೊಂಡಿದ್ದೆವು. ಅದು ಎಂದೂ ಪ್ರೇಮವಾಗಿರಲೇ ಇಲ್ಲ ಅನ್ನುವುದು ನಿಧಾನವಾಗಿ ಅರ್ಥವಾಗತೊಡಗಿತ್ತು. ನಮ್ಮಿಬ್ಬರ ಗುರಿ, ಸಾಧನೆಗಳು ಬೇರೆ ಬೇರೆಯದೆಂದು ತಿಳಿದಾಗ ಯಾರೊಬ್ಬರೂ ರಾಜಿಯಾಗಲು ಸಿದ್ದರಾಗಲಿಲ್ಲ. ನಮ್ಮಿಬ್ಬರಿಗೂ ನಮ್ಮ ಸಾಧನೆಗಳೆ ದೊಡ್ಡದಾದವೇ ವಿನಾ, ನಮ್ಮ ಪ್ರೇಮವಲ್ಲ. ಪ್ರೇಮ ತ್ಯಾಗವನ್ನು ಬಯಸುತ್ತದೆ ನಿಜ, ಆದರೆ ನಾವು ಪರಸ್ಪರರನ್ನೆ ತ್ಯಾಗ ಮಾಡಿಕೊಳ್ಳಲು ಸಿದ್ದರಾದೆವು. ಒಂದು ವೇಳೆ ನಾನೋ, ಅವನೂ ಪ್ರೀತಿ ಮಾಡಿದ್ದೆವೆಂಬ ಕಟ್ಟುಪಾಡಿಗೆ ಒಳಗಾಗಿ, ರಾಜಿಯಾಗಿದ್ದರೆ ಅನಿವಾರ್ಯವಾಗಿ ಮದುವೆಯಾಗಲೇ ಬೇಕಿತ್ತು. ಮುಂದಿನ ಬದುಕಿನಲ್ಲಿ ಏನೆಲ್ಲ ಏರುಪೇರುಗಳಾಗುತ್ತಿದ್ದವೋ ಎಂದು ನೆನೆಸಿಕೊಂಡರೆ ಭಯವಾಗುತ್ತದೆ.”

“ಅಂದ್ರೆ ನೀವಿಬ್ಬರೂ ಪ್ರೀತಿಸಲೇ ಇಲ್ಲವೇ?” ಏಕೋ ಹಗುರವೆನಿಸಿತ್ತು ಸೂರಜ್ನ ಹೃದಯ.

“ನಿಜವಾದ ಪ್ರೀತಿಯೇ ಆಗಿದ್ದರೆ ಅದು ಹೇಗೆ ದೂರವಾಗಲು ಸಾಧ್ಯ? ದೂರವಾದ ಮೇಲೂ ಒಬ್ಬರಿಗೊಬ್ಬರು ಕೊರಗಬೇಕಾಗಿತ್ತು ಅಲ್ಲವೇ? ಒಲಿದ ಜೀವಗಳನ್ನು ಬೇರ್ಪಡಿಸಲು ಸಾಧ್ಯವೇ ಸೂರಜ್? ನನ್ನ ಭಾವನೆಗಳಿಗೆ ಬೆಲೆ ಕೊಡದೆ, ನನ್ನ ಧೈಯ-ಧೋರಣೆಗಳನ್ನು ಬೆಂಬಲಿಸದ, ಗೌರವಿಸದ, ನನ್ನ ಗುರಿಗಳನ್ನು ಅಲಕ್ಷ್ಯ ಮಾಡಿ, ಲೇವಡಿ ಮಾಡುವವನು ನನ್ನ ಪ್ರೇಮಿ ಹೇಗೆ ಆಗಿದ್ದಾನು? ನಾನು ಕೂಡ ನಿಜವಾಗಿಯೂ ಅವನನ್ನು ಪ್ರೇಮಿಸಿದ್ದರೆ, ಅವನ ಎಲ್ಲಾ ಆಸೆಗಳಿಗೆ ಸ್ಪಂದಿಸಬೇಕಿತ್ತು. ಅವನು ಹೇಗಿರುವನೋ ಹಾಗೆ ನಾನು ಒಪ್ಪಿಕೊಳ್ಳಬೇಕಿತ್ತು. ಇದಾವುದೂ ಆಗದಿದ್ದ ಮೇಲೆ ನಾವು ಪ್ರೀತಿಸಿದ್ದೆವು ಎಂದರೆ ಅದು ಸುಳ್ಳು ತಾನೆ?” ಸ್ವಲ್ಪ ಹೊತ್ತು ಮಾತು ನಿಲ್ಲಿಸಿದಳು. ವಿಷಾದ ಭಾವ ಆವರಿಸಿತ್ತು.

“ಅಂದ್ರೆ, ಜಸ್ವಂತ್ ಅಮೆರಿಕಾಕ್ಕೆ ಹೋಗಲು ನೀನು ಒಪ್ಪಿರಲಿಲ್ಲವೇ?” ಸಂದೇಹದಿಂದ ಕೇಳಿದ.

“ಆದರ ಕಲ್ಪನೆ ಕೂಡ ನನ್ನಲ್ಲಿ ಇರಲಿಲ್ಲ. ನಾನು ಜಸ್ವಂತನ ಮದ್ವೆ ಆದ ಮೇಲೆ ಅಪ್ಪ-ಅಮ್ಮನ್ನ ಬಿಟ್ಟು ಹೋಗಬೇಕಲ್ಲ ಅನ್ನೋ ಚಿಂತೆ ಇದ್ರೂ ಒಂದೇ ಊರಿನಲ್ಲಿ ಇರುತ್ತೇವೆ, ಬೇಕಾದಾಗ ನೋಡಬಹುದು, ಅವರ ಯೋಗಕ್ಷೇಮ ವಿಚಾರಿಸಬಹುದು ಎಂಬ ಧೈರ್ಯವಿತ್ತು. ಆದರೆ ಜಸ್ಸು ಇದ್ದಕ್ಕಿದ್ದಂತೆ ಅಮೆರಿಕಾ ಅಂದ ಕೂಡಲೇ ನಂಗೆ ಶಾಕ್ ಆಗಿತ್ತು. ಯಾವ ಕಾರಣಕ್ಕೂ ನನ್ನವರನ್ನು, ನನ್ನ ದೇಶವನ್ನು ಬಿಟ್ಟು ಹೋಗೋ ಮನಸ್ಥಿತೀಲಿ ನಾನಿರಲೇ ಇಲ್ಲ. ಅಮೆರಿಕಾದ ಆಕರ್ಷಣೆ ಏನೂ ನನಗಿರಲಿಲ್ಲ. ಅಲ್ಲಿಯೇ ನೆಲಸುವುದಂತೂ ಸಾಧ್ಯವೇ ಇರಲಿಲ್ಲ, ಹಾಗಾಗಿ ನನ್ನಿಂದ ಅಸಾಧ್ಯ ಎಂದೆ, ಅವನಿಗೆ ಅಮೆರಿಕಕ್ಕೆ ಹೋಗುವುದು ಬಹುದೊಡ್ಡ ಕನಸಾಗಿತ್ತು. ಹಾಗೆಂದು ಒಮ್ಮೆಯೂ ನನ್ನಲ್ಲಿ ಹೇಳಿರಲಿಲ್ಲ. ನನಗಾಗಿ ಆತ ಅಮೆರಿಕಾದ ಕನಸು ನನಸಾಗುವುದನ್ನು ಬಿಡಲು ತಯಾರಿರಲಿಲ್ಲ. ಅವನಿಗಾಗಿ ನಾನು ನನ್ನವರನ್ನು ಬಿಟ್ಟು ಹೋಗಲು ಸಿದ್ಧಳಿರಲಿಲ್ಲ. ಅದಕ್ಕೇ ನಮ್ಮ‌ಅಷ್ಟು ವರ್ಷಗಳ ಸಂಬಂಧಕ್ಕೆ ಕೊನೆ ಹಾಡಿದೆವು.

“ಅವನು ನನ್ನಿಂದ ದೂರ ಎಂದು ತಿಳಿದಾಗ ಮನಸ್ಸಿಗೆ ನೋವಾಯ್ತು, ಬೇಸರವಾಯ್ತು. ಆದರೆ ಅದು ಕೆಲವು ದಿನಗಳು ಮಾತ್ರ ಆತ್ಮೀಯ ಗೆಳೆಯನೊಬ್ಬ ದೂರವಾದಾಗ ಆಗುವ ನೋವಿನಂತೆ, ನನ್ನ ಪ್ರಪಂಚದಲ್ಲಿ ಮುಳುಗಿ ಹೋಗಿ ಅವನನ್ನು ಮರೆತೇ ಬಿಟ್ಟಿದ್ದೆ. ಮೊನ್ನೆ ಪ್ರತ್ಯಕ್ಷವಾಗುವ ತನಕ ಅವನ ನೆನಪು ಒಮ್ಮೆಯೂ ಕಾಡಿರಲಿಲ್ಲ. ನಿಜವಾದ ಪ್ರೇಮವೇ ಆಗಿದ್ದಿದ್ದರೆ ಅವನ ಅಗಲುವಿಕೆಯ ಕಾವಿನಿಂದ ನಾನು ಸುಟ್ಟು ಹೋಗಬೇಕಿತ್ತು. ವಿರಹ ವೇದನೆಯಿಂದ ತತ್ತರಿಸಬೇಕಿತ್ತು. ಅದ್ಯಾವುದೂ ನನ್ನಲ್ಲಿ ಆಗಲಿಲ್ಲ ಎಂದ ಮೇಲೆ ಅದು ಪ್ರೇಮವೇ ಆಗಿರಲಿಲ್ಲ ಅನ್ನುವ ನಿರ್ಧಾರಕ್ಕೆ ಬಂದುಬಿಟ್ಟೆ.”

ದೀರ್ಘವಾಗಿ ನುಡಿದು ಎದೆಯಾಳದಲ್ಲಿ ಅಡಗಿ ಕುಳಿತು ಕೊರೆಯುತ್ತಿದ್ದದ್ದನ್ನೆಲ್ಲ ಬಿಚ್ಚಿಟ್ಟಳು.

“ಮುಂದೆ ಏನು ಮಾಡಬೇಕು ಅಂತ ಇದ್ದಿಯಾ ರಿತು?” ಯಾವುದಕ್ಕೋ ಪೀಠಿಕೆ ಹಾಕಿದ.

“ಮುಂದೆ ಏನು ಅಂದರೆ, ಹೀಗೆ ಬದುಕಿನ ಬಂಡಿ ಹೋಗುತ್ತ ಇರುತ್ತೆ. ಆಶ್ರಮದಲ್ಲಿಯೇ ಕೊನೆವರೆಗೂ ಕೆಲಸ ಮಾಡಿಕೊಂಡು ಮಿಂಚುವಿಗೆ ಅಮ್ಮನಾಗಿ ಇದ್ದುಬಿಡಬೇಕು ಎಂಬ ನಿರ್ಧಾರ ಮಾಡಿದ್ದೇನೆ.”

ಅಪ್ರತಿಭನಾಗಿ ಕ್ಷಣ ಅವಳನ್ನೇ ನೋಡಿ, ಮರುಕ್ಷಣವೇ ಸಾವರಿಸಿಕೊಂಡು, “ಏನಿದು ರಿತು, ಅಮ್ಮ-ಅಪ್ಪನಿಗೆ ನೀನೊಬ್ಬಳೇ ಮಗಳು. ನಿಂಗೆ ಮದ್ವೆ ಮಾಡಿ ಅಳಿಯನನ್ನು ನೋಡಬೇಕು, ಮೊಮ್ಮಕ್ಕಳನ್ನು
ಆಡಿಸಬೇಕು ಅನ್ನೋ ಆಸೆ ಇರಲ್ವೆ ಅವರಿಗೆ?” ಎಂದು ಕೇಳಿದನು.

“ಆಸೆಗಳೆಲ್ಲ ನೆರವೇರಲೇಬೇಕು ಅಂತ ಎಲ್ಲಿದೆ ಸೂರಜ್? ನಂಗ್ಯಾಕೋ ಈ ಮದ್ವೆ, ಸಂಸಾರ ಅಂದ್ರೇನೇ ಭಯ ಆಗುತ್ತೆ. ನನ್ನ ಎಷ್ಟು ದಿನಗಳಿಂದ ಅರ್ಥಮಾಡಿಕೊಂಡಿದ್ದಾನೆ ಅಂತ ಅಂದುಕೊಂಡವನೇ ನನ್ನ ನಿಲುವುಗಳನ್ನು ಗೇಲಿ ಮಾಡಿದ, ನನ್ನ ಭಾವನೆಗಳನ್ನು ಕಡೆಗಣಿಸಿದ. ಇನ್ನು ಮುಂದೆ ನನ್ನ ಮದುವೆಯಾದಾತ ನನ್ನ ಅರ್ಥಮಾಡಿಕೊಂಡಾನೇ? ನಾನು ಆಶ್ರಮದಲ್ಲಿ ಕೆಲಸ ಮಾಡಲು ಬಿಟ್ಟಾನೆಯೇ? ನನಗೆ ನನ್ನ ಗಂಡ, ಸಂಸಾರಕ್ಕಿಂತ ನನ್ನ ಕೆಲಸವೇ ಮುಖ್ಯ. ಸಂಸಾರವನ್ನಾದರೂ ಕಡೆಗಣಿಸುತ್ತೇನೆ. ಆದರೆ, ನನ್ನ ಆದರ್ಶವನ್ನು ಬಿಡಲಾರೆ. ಇದೆಲ್ಲ ಗೊತ್ತಿದ್ದೂ ಗೊತ್ತಿದ್ದು ಬದುಕಿನೊಂದಿಗೆ ರಾಜಿಯಾಗಲಾರದ ನಾನು ಯಾರನ್ನೋ ಮದುವೆ ಆಗಿ, ಆತನಿಗೇಕೆ ತೊಂದರೆ ಕೊಡಬೇಕು? ಅಪ್ಪ-ಅಮ್ಮನಿಗೆ ಬೇಸರವಾಗುತ್ತದೆ, ನೋವು-ನಿರಾಸೆ ಆಗುತ್ತದೆ. ದಿನ ಕಳೆದಂತೆ ಆ ನೋವನ್ನು ಮರೆಯುತ್ತಾರೆ ಎಂಬ ನಂಬಿಕೆ ನನಗಿದೆ” ಎಂದಳು.

“ರಿತು, ನಿನ್ನ ವಿಚಾರಧಾರೆಯೇ ಸರಿ ಇಲ್ಲ. ಮದುವೆ ಆದ ಮಾತ್ರಕ್ಕೆ ನಿನ್ನ ಸಮಾಜ ಸೇವೆಗೇನೂ ಅಡ್ಡಿ ಆಗದು. ಎಷ್ಟೋ ಜನ ಸಂಸಾರದಲ್ಲಿದ್ದು ತಮ್ಮ ಕಾಯಕ ಮುಂದುವರಿಸಿಲ್ಲವೇ? ಹುಚ್ಚುಹುಡುಗಿ, ನಿನ್ನ ಧೋರಣೆಗಳನ್ನು ಒಪ್ಪುವ, ನಿನ್ನ ಆದರ್ಶವನ್ನು ಮೆಚ್ಚುವ, ನಿನ್ನ ಗುರಿಗಳನ್ನು ಗೌರವಿಸುವ ಹುಡುಗ ಸಿಕ್ಕರೆ ಮದುವೆ ಆಗುತ್ತೀಯಾ? ಮಿಂಚುವಿಗೆ ಒಬ್ಬ ಅಪ್ಪ ಸಿಕ್ಕರೆ ಬೇಡವೆನ್ನುವೆಯಾ?”

“ಅಯ್ಯೋ ಅಂಥವರು ಎಲ್ಲಿದ್ದಾರೆ ಅಂತ ಹುಡುಕಿಕೊಂಡು ಹೋಗಲಿ” ಉದಾಸಭಾವ ತೋರಿದಳು.

“ಅವನೇ ನಿನ್ನ ಹುಡುಕಿಕೊಂಡು ಬಂದರೆ?”

“ಬಂದರೆ? ಬಂದಾಗ ನೋಡೋಣ ಬಿಡಿ. ಈಗ ಯಾಕ ಆ ಮಾತು” ಅವಳಿಗೆ ಆ ನಂಬಿಕೆ ಇರಲಿಲ್ಲ. ಜತೆಗೆ ಆಸಕ್ತಿಯೂ ಇರಲಿಲ್ಲ. ಎಲ್ಲೋ ಇರುವ ಆತನನ್ನು ಹುಡುಕಿ ತಾನು ಮದುವೆಯಾಗಿ, ಆ ಮದುವೆ ಯಶಸ್ವಿಯಾಗದಿದ್ದರೆ, ಮತ್ತೆ ಏನು ನೋವು ತಿನ್ನುವಂತಾದರೆ, ಬೇಡಪ್ಪಾ ಬೇಡ, ಒಂದು ಬಾರಿ ಆಗಿರುವ ಆಘಾತದ ಗಾಯವೇ ನನ್ನಲ್ಲಿ ಇನ್ನೂ ಮಾಸಿಲ್ಲ, ಇನ್ನು ಮತ್ತೊಮ್ಮೆ ಪ್ರಯತ್ನಿಸಿ, ಸೋಲು ಉಣ್ಣುವುದು ಬೇಡವೇ ಬೇಡ. ಅಂಥ ರಿಸ್ಕ್ ತೆಗೆದುಕೊಳ್ಳುವ ಉಸಾಬರಿಯೇ ಬೇಡ ಎನಿಸಿಬಿಟ್ಟಿತ್ತು. ತಾನೀಗ ಅದೆಷ್ಟು ಸುಖಿಯಾಗಿದ್ದೇನೆ, ಈ ಆಶ್ರಮದ ಕೆಲಸ, ಹಿರಿಯರೊಡನೆಯ ಸಹವಾಸ, ಮಿಂಚುವಿನ ಒಡನಾಟದಲ್ಲಿ ತಾನು ನೆಮ್ಮದಿಯಾಗಿದ್ದೇನೆ. ಹಾಗೆಯೇ ಇದ್ದುಬಿಡೋಣ. ಹುಟ್ಟಿದವರೆಲ್ಲ ಮದುವೆ ಆಗಲೇಬೇಕೇ? ಮದುವೆ ಇಲ್ಲದೆಯೂ ಬಾಳಲು ಅಸಾಧ್ಯವೇನಲ್ಲ. ಅವಳಿನ್ನೂ ಆಲೋಚನೆಯಲ್ಲಿ ಮುಳುಗಿ, ಏಳುತ್ತಿದ್ದಳು.

“ರಿತು, ಸುತ್ತಿ ಬಳಸಿ ಮಾತನಾಡಲಾರೆ. ನೇರವಾಗಿ ವಿಷಯಕ್ಕೆ ಬಂದುಬಿಡುತ್ತೇನೆ. ನೀನ್ಯಾಕೆ ಮದುವೆ ವಿಷಯಕ್ಕೆ ಉದಾಸಳಾಗಿದ್ದೀಯಾ ಅಂತ ಗೊತ್ತಾಯಿತು. ಯಾವುದೋ ಅವ್ಯಕ್ತ ಭಯ ನಿನ್ನನ್ನು ಕಾಡುತ್ತಿದೆ. ಮದುವೆಯಾಗಿಬಿಟ್ಟರೆ ಅಪ್ಪ-ಅಮ್ಮನಿಂದ ಎಲ್ಲಿ ದೂರಾಗಬೇಕೋ ಅನ್ನೋ ಆತಂಕ, ಜತೆಗೆ ನಿನ್ನ ಕೆಲಸಕ್ಕೆಲ್ಲಿ ನಿನ್ನ ಕೈಹಿಡಿದಾತ ಅಡ್ಡಿ ಮಾಡುವನೋ ಅನ್ನುವ ಭಯ ನಿನ್ನ ಕಾಡುತ್ತಿದೆ. ನಿನ್ನ ಗೌರವಿಸುವ, ನೀನು ಆಶ್ರಮದಲ್ಲಿ ಸಂತೋಷವಾಗಿ, ಶಾಶ್ವತವಾಗಿ ಕೆಲಸ ಮಾಡಲು ಒಪ್ಪುವಂಥ, ಎಲ್ಲದಕ್ಕಿಂತ ಹೆಚ್ಚಾಗಿ ಮಿಂಚುವನ್ನು ಒಪ್ಪಿಕೊಳ್ಳುವಂಥವನು ಸಿಕ್ಕರೆ ಮದುವೆ ಆಗುವೆಯಾ?” ಅವಳನ್ನೇ ನೋಡುತ್ತ ಕೇಳಿದ.

ತಮಾಷೆ ಮಾಡುತ್ತಿರುವನೇ ಎಂದು ಅವನತ್ತ ನೋಡಿದಳು. ಅವನ ಕಂಗಳು ಮಿಂಚುತ್ತಿವೆ, ಮೊಗ ಪ್ರಕಾಶಮಾನವಾಗಿದೆ, ಬಹಳ ಗಂಭೀರವಾಗಿದ್ದಾನೆ.

“ಹೇಳು ರಿತು. ಅಂಥ ಹುಡುಗ ನಿನ್ನ ಮುಂದೆಯೇ ಕುಳಿತಿದ್ದಾನೆ. ನಾನು ಬಯಸುತ್ತಿದ್ದ ಎಲ್ಲಾ ಗುಣಗಳು ನಿನ್ನಲ್ಲಿವೆ. ನೀನು ಬಯಸುವ ಎಲ್ಲಾ ಅರ್ಹತೆಗಳು ನನ್ನಲ್ಲಿವೆ ಅಂತ ಅಂದುಕೊಂಡಿದ್ದೇನೆ. ನಾವಿಬ್ಬರೂ ಮದುವೆ ಆಗುವುದರಿಂದ ಒಂದೇ ಮನಸ್ಸಿರುವ, ಒಂದೇ ಗುರಿ ಇರುವ, ಒಂದೇ ಮನೋಭಾವನೆ ಹೊಂದಿರುವ ನಾವು
ಆದರ್ಶವಾಗಿ ಬದುಕಿ, ಮಾದರಿಯಾಗಿರಲು ಸಾಧ್ಯ ಎಂದುಕೊಂಡಿದ್ದೇನೆ. ನಮ್ಮಿಬ್ಬರ ಮದುವೆಗೆ ನಮ್ಮ ತಾತ, ನಿಮ್ಮ ತಂದೆ-ತಾಯಿ ಸಂತೋಷವಾಗಿ ಒಪ್ಪಿಕೊಳ್ಳುತ್ತಾರೆ. ನನ್ನ ತಂದೆ-ತಾಯಿ ಒಪ್ಪಿಯಾರು ಎಂಬ ನಿರೀಕ್ಷೆ ನನ್ನಲ್ಲಿ ಇಲ್ಲ. ಅದು ನಮ್ಮ ಮದುವೆಗೆ ಅಡ್ಡಿ ಮಾಡದು. ಈ ಮದುವೆಯಿಂದ ನೀನು ಶಾಶ್ವತವಾಗಿ ಆಶ್ರಮದಲ್ಲಿದ್ದು ಕೆಲಸ ಮಾಡಬಹುದು. ನಿನ್ನ ಯಾವ ನಿರ್ಧಾರಗಳಿಗೂ ನಾನು ಅಡ್ಡಿ ಬರಲಾರೆ. ಇನ್ನು ಮಿಂಚುವಿಗೆ ನೀನು ಅಮ್ಮನಾದರೆ, ನಾನು ಅಪ್ಪನಾಗಲು ಮನಃಪೂರ್ವಕವಾಗಿ ಒಪ್ಪಿದ್ದೇನೆ. ಅವಳನ್ನು ದತ್ತು ತೆಗೆದುಕೊಳ್ಳೋಣ. ನಮ್ಮ ಮಗುವಿನಂತೆ ಪ್ರೀತಿಯಿಂದ ಸಾಕಿ, ಬೆಳಸೋಣ. ಏನಂತೀಯಾ?”

ಅವಳಿಗೆಲ್ಲ ಅಯೋಮಯವೆನಿಸಿತು. ಏನಿದು ಕನಸೋ ನನಸೋ? ಅಂಬರದ ತಾರೆ ಕೈಗೆಟುಕುವುದೆಂದರೇನು? ಇಂಥ ಸಹೃದಯಿ, ಇಂಥ ಗುಣವಂತ ತನ್ನ ಮುಂದೆ ನಿಂತು ನನ್ನನ್ನು ಮದುವೆಯಾಗೆಂದು ಕೇಳುತ್ತಿದ್ದಾನೆಯೇ? ಸೂರಜ್ ಬಯಸಿದರೆ ಎಂಥ ಹೆಣ್ಣೂ ಸಿಗಬಹುದು. ಅಂಥದ್ದರಲ್ಲಿ ಈತ ನನ್ನನ್ನು ಬಯಸಿದ್ದಾನೆಂದರೆ, ಕೆನ್ನೆ ರಂಗೇರಿತು. ತನ್ನ ಉತ್ತರವನ್ನೇ ಆತಂಕ, ನಿರೀಕ್ಷೆಯಿಂದ ಎದುರು ನೋಡುತ್ತಿರುವ ಸೂರಜ್‌ನನ್ನು ಕ್ಷಣ ದಿಟ್ಟಿಸಿದಳು.

ಅವನ ಪ್ರೇಮಪೂರಿತ ಕಂಗಳನ್ನು ಎದುರಿಸಲಾರದೆ ತಲೆತಗ್ಗಿಸಿದಳು.

“ರಿತು, ನನ್ನ ಸತಾಯಿಸಬೇಡ, ನಿನ್ನ ಉತ್ತರದಿಂದ ನನ್ನ ಬದುಕು ನಿಂತಿದೆ, ಪ್ಲೇಸ್ ರಿತು” ಪಿಸುನುಡಿದ.

“ಸೂರಜ್, ನಮ್ಮ ಮಗಳು ಅಳ್ತಾ ಇದ್ದಾಳೆ, ಕೇಳಿಸ್ತಾ? ಅವಳಿಗೆ ಅಪ್ಪ-ಅಮ್ಮ ಇಲ್ಲಿ ಕೂತ್ಕಂಡು ಮಾತಾಡ್ತಾ ಇದ್ದಾರೆ ಅಂತ ಗೊತ್ತಾಗಿಬಿಟ್ಟಿದೆ” ಮೆಲ್ಲನೆ ಅವನ ಕೈಹಿಡಿದು ಹೇಳಿದಳು.

“ಥ್ಯಾಂಕ್ಯೂ ರಿತು, ಥ್ಯಾಂಕ್ಯೂ” ಅವಳ ಹಸ್ತವನ್ನು ತುಟಿಗೆ ಒತ್ತಿಕೊಳ್ಳುತ್ತ ಇನ್ನೊಂದು ಕೈಯಿಂದ ಅವಳ ಬಳಸಿ, ಮೆಲ್ಲನೆ ನಕ್ಕನು.

“ರಿತು, ನನ್ನ ಪ್ರೀತಿನಾ ಒಪ್ಕೊಂಡು ನನ್ನ ಬದುಕಿಸಿಬಿಟ್ಟೆ. ನೀನೆಲ್ಲಿ ಒಪ್ಪುವುದಿಲ್ಲವೋ ಅನ್ನೋ ಆತಂಕ ನನಗಿತ್ತು. ತಾತ ಕೂಡ ರಿತುವಿನಂಥ ಹೆಣ್ಣು ನಮ್ಮ ಮನೆಯ ಸೊಸೆಯಾಗಬೇಕು ಎಂದು ಬಯಸಿದ್ದರು. ಆಗಲೇ ನನಗೆ ಅನ್ನಿಸಿತ್ತು, ನಿನ್ನಂಥ ಹೆಂಡತಿ ಬದಲು, ನೀನೇ ಏಕಾಗಬಾರದು ಅಂತ. ನಮ್ಮಿಬ್ಬರ ಮನಸ್ಸು ಒಂದೇ, ನಮ್ಮಿಬ್ಬರ ಧ್ಯೇಯ, ಗುರಿಗಳು ಒಂದೇ ಆಗಿವೆ. ನಾವಿಬ್ಬರೂ ಸೇರಿ ಈ ಆಶ್ರಮವನ್ನು ಇನ್ನಷ್ಟು ಚೆನ್ನಾಗಿ ನಡೆಸೋಣ. ಇಲ್ಲಿರುವವರಿಗೆ ನನ್ನವರಿಲ್ಲ ಅನ್ನೋ ಚಿಂತೆ ನೀಗಿಸೋಣ. ಜತೆಗೆ ಒಂದು ಅನಾಥಾಶ್ರಮ ಪ್ರಾರಂಭಿಸೋಣ. ಮಿಂಚುವಿನಂಥ ಮಕ್ಕಳಿಗೆ ನಾವಿಬ್ಬರೂ ಹೆತ್ತ ತಂದೆತಾಯಿಯಂತೆ ನಮ್ಮಲ್ಲಿ ಪ್ರೀತಿ-ವಾತ್ಸಲ್ಯವನ್ನು ಧಾರೆ ಎರೆಯೋಣ. ನಾನು ದುಡಿದದ್ದೆಲ್ಲವನ್ನೂ ಇಲ್ಲಿಗೆ ಹಾಕುತ್ತೇನೆ. ವಯಸ್ಸಾದ ಇಲ್ಲಿನವರೆಲ್ಲ ಆ ಕೂಸುಗಳಲ್ಲಿ ತಮ್ಮ ಮೊಮ್ಮಕ್ಕಳನ್ನು ಕಾಣಲಿ, ಪ್ರತಿಯೊಂದು ಅಜ್ಜ-ಅಜ್ಜಿಗೂ ಒಂದೊಂದು ಕೂಸನ್ನು, ಆ ಕೂಸಿಗೆ ಬೇಕಾದ ಪ್ರೀತಿಯನ್ನು ಕೊಡಲು ನೇಮಿಸಿಬಿಡೋಣ, ಆಗ ಅನಾಥ ಮಕ್ಕಳಿಗೆ ಅಜ್ಜ-ಅಜ್ಜಿಯ ಪ್ರೀತಿ ಸಿಕ್ಕ ಹಾಗೂ ಆಗುತ್ತದೆ. ಈ ಅಜ್ಜ-ಅಜ್ಜಿಯರಿಗೆ ಪ್ರೀತಿಸಲು ಒಂದು ಮಗು ಸಿಗುತ್ತದೆ. ಅವರಿಗಾಗಿಯೇ ಇವರು. ಇವರಿಗಾಗಿಯೇ ಅವರು ಎಂಬಂತಾಗಲಿ. ಅಪ್ಪ-ಅಮ್ಮ ಆಗಿ ನಾವಿಬ್ಬರೂ ಹೀಗಿದೆ ನನ್ನ ಕನಸು” ಯಾವುದೋ ಸ್ವಪ್ನಲೋಕದಲ್ಲಿ ತೇಲುತ್ತ ಹೇಳುತ್ತಿದ್ದರೆ, ರಿತುವಿಗೆ ಆ ಕನಸು ನನಸಾಗಿ ಕಣ್ಮುಂದೆ ಕಾಣತೊಡಗಿತು.

ಇಡೀ ಆಶ್ರಮದಲ್ಲೆಲ್ಲ ಮಕ್ಕಳ ಕಲರವ, ಆ ಮಕ್ಕಳನ್ನು ಹಿಡಿದು ಮುದ್ದಿಸುತ್ತಿರುವ ಅಜ್ಜಿ, ತಾತಂದಿರು, ವಾಹ್! ಎಷ್ಟು ಚೆನ್ನಾಗಿದೆ?

“ಸೂರಜ್, ನಿನ್ನ ಕನಸು ಅದೆಷ್ಟು ರಮ್ಯವಾಗಿದೆ? ಈ ಕನಸು ಸಾಕಾರವಾದರೆ ಅದೆಷ್ಟು ಚೆನ್ನ, ತನ್ನವರಾರೂ ಇಲ್ಲದ, ತನ್ನವರ ಪ್ರೀತಿ ಎಂದರೇನು ಎಂಬುದೇ ತಿಳಿಯದೆ ಬೆಳೆಯುವ ಅನಾಥ ಕಂದಮ್ಮಗಳು ಇಲ್ಲಿ ಅಜ್ಜ-ಅಜ್ಜಿಯ ಪ್ರೀತಿ ಪಡೆಯುತ್ತ ಬೆಳೆಯುತ್ತವೆ. ಬದುಕೇ ನೀರಸವಾಗಿರುವ ದಿನಗಳಲ್ಲಿ ಮುದ್ದು ಮಕ್ಕಳ ಸಹವಾಸ ಇಲ್ಲಿನವರಿಗೆ ಹೊಸ ಚೇತನ ನೀಡುತ್ತದೆ. ಬದುಕಿನಲ್ಲಿ ಆಸಕ್ತಿ ಹುಟ್ಟಿಸಿ, ಭರವಸೆ ತುಂಬುತ್ತದೆ. ನಿನ್ನ ಕಲ್ಪನೆಯೇ ಅದ್ಭುತ” ಎಂದು ರಿತು ಸೂರಜ್‌ನನ್ನು ಅತಿಯಾಗಿ ಪ್ರಶಂಸಿಸಿದಳು. ಇನ್ನು ತನ್ನ ಬದುಕು ನಂದನವನ, ಮದುವೆಯೇ ಬೇಡವೆಂದಿದ್ದೆ. ಸ್ವಂತ ಬದುಕು ಎಲ್ಲಿ ತನ್ನ ಸಾಮಾಜಿಕ ಬದುಕಿಗೆ ಧಕ್ಕೆ ಉಂಟು ಮಾಡುವುದೂ ಎಂದು ಹೆದರಿದ್ದೆ. ಆದರೆ ಸೂರಜ್ ಅಂಥ ಸಂಗಾತಿ ಸಿಕ್ಕು, ತನ್ನ ಆದರ್ಶಗಳಿಗೆ ಬೆನ್ನುಲುಬಾಗಿ ನಿಲ್ಲುತ್ತಾನೆ ಎಂಬ ಕಲ್ಪನೆ ಕೂಡ ತನಗಿರಲಿಲ್ಲ. ಎಂಥ ಅದೃಷ್ಟ ತನ್ನದು. ಎಲ್ಲಿ ಆಶ್ರಮದಿಂದ ದೂರವಾಗಬೇಕೊ, ಮಿಂಚುವನ್ನು ಎಲ್ಲಿ ಕಳೆದುಕೊಳ್ಳಬೇಕಾಗುವುದೋ ಎಂಬ ಆತಂಕ ದೂರವಾಗಿ ಈಗ ಮಿಂಚು ನನ್ನ ಮಗಳಾಗಿಯೇ ಬೆಳೆಯುತ್ತಾಳೆ. ಅಪ್ಪನ ಪ್ರೀತಿಯೂ ಸಿಗುತ್ತದೆ. ಇನ್ನು ಆಶ್ರಮವೇ ತನ್ನ ಮನೆಯಾಗುತ್ತದೆ. ಅಪ್ಪ-ಅಮ್ಮನೂ ಇದೇ ಊರಿನಲ್ಲಿಯೇ ಇರುತ್ತಾರೆ. ಅವರ ಯೋಗಕ್ಷೇಮ ವಿಚಾರಿಸಲು ನಾನಿಲ್ಲಿಯೇ ಇರುತ್ತೇನೆ. ಮುಂದೆ ಅವರನ್ನು ಇಲ್ಲಿಯೇ ಕರೆಸಿಕೊಂಡು ಮನೆಯಲ್ಲಿಟ್ಟುಕೊಳ್ಳಬಹುದು. ನಿಧಾನವಾಗಿ ಸೂರಜ್ ಅಪ್ಪ-ಅಮ್ಮನನ್ನು ಒಲಿಸಿಕೊಂಡು ಇಲ್ಲಿಯೇ ಕರೆಸಿಕೊಳ್ಳಬೇಕು. ಅದೆಷ್ಟು ದಿನ ಹೆತ್ತ ಕರುಳಿನಿಂದ ದೂರವಿದ್ದಾರು? ಕರುಳಿನ ಸಂಕಟ ಬಾಧಿಸದೇ ಇದ್ದೀತೇ? ಬರುವುದೇ ಇಲ್ಲವೆಂದು ಹಟ ಹಿಡಿದರೆ ತಾವೇ ಹೋಗಿ ನೋಡಿ ಅವರ ಕ್ಷೇಮ ಸಮಾಚಾರ ವಿಚಾರಿಸುತ್ತ ಇರುವುದು.

“ರಿತು, ಎಲ್ಲಿ ಕಳೆದುಹೋದೆ? ನನ್ನನ್ನು ಇಲ್ಲಿ ಒಂಟಿಯಾಗಿ ಬಿಟ್ಟು ಕನಸು ಕಾಣ್ತಾ ಇದ್ದಿಯಾ?” ಎಂದು ಸೂರಜ್ ರೇಗಿಸಿದ.

“ನನ್ನೆಲ್ಲ ಕನಸು ನನಸಾಗುತ್ತ ಇರುವಾಗ, ಮತ್ತೆ ಕನಸು ಕಾಣುವುದೇ? ಮೊದಲು ಅಪ್ಪ-ಅಮ್ಮನಿಗೆ ಈ ವಿಷಯ ತಿಳಿಸಬೇಕು. ನಾನು ಹೊರಡ್ತೀನಿ” ಎಂದವಳೇ ಎದ್ದು ನಿಂತಳು, ತಿರುಗಿ ನೋಡಿದರೆ ಇಡೀ ಆಶ್ರಮವೇ ಮುಸ್ಸಂಜೆಯ ಕೆಂಪಿನಲ್ಲಿ ಮುಳುಗಿ ಹೋಗಿದೆ. ಆ ಸಂಜೆಯಲ್ಲಿ ಮಿಂಚಿನಂತೆ ಸೂರಜ್‌ ಕಂಗೊಳಿಸುತ್ತ ಇದ್ದಾನೆ!
*****
ಮುಗಿಯಿತು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆತನ ಕದಪುಗಳ ತಟ್ಟಿ ಮುತ್ತಿಕ್ಕಿದಾಗಲೆಲ್ಲಾ
Next post ಸಮಯವಿದೆಯೆ ಪಪ್ಪಾ?

ಸಣ್ಣ ಕತೆ

 • ಬಲಿ

  ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

 • ಡಿಪೋದೊಳಗಣ ಕಿಚ್ಚು…

  ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

 • ಶಾಕಿಂಗ್ ಪ್ರೇಮ ಪ್ರಕರಣ

  ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

 • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

  ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

 • ವಾಮನ ಮಾಸ್ತರರ ಏಳು ಬೀಳು

  "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…