ಅಮ್ಮ ಎಂಬ ಮಾತಿಗಿಂತ
ಬೇರೆ ಮಂತ್ರ ಎಲ್ಲಿದೆ?
ಅದು ನೀಡುವ ಶಾಂತಿ ಕಾಂತಿ
ಯಾವ ತಾರೆ ರವಿಗಿದೆ?
ಹಾಲು ಕುಡಿಸಿ ಹೃದಯ ಬಿಡಿಸಿ
ಪ್ರೀತಿ ಉಣಿಸಿ ಮನಸಿಗೆ
ಬಾಳ ತೇದು ಮಕ್ಕಳಿಗೆ
ಬೆರೆದಳಲ್ಲ ಕನಸಿಗೆ!
ಗಾಳಿಯಲ್ಲಿ ನೀರಿನಲ್ಲಿ
ಮಣ್ಣು ಹೂವು ಹಸಿರಲಿ
ಕಾಣದೇನು ಕಾಯ್ವ ಬಿಂಬ
ಆಡುತಿರುವ ಉಸಿರಲಿ?
ಮರೆವೆ ಹೇಗೆ ಹೇಳೆ ತಾಯೆ
ನಿನ್ನೀ ವಾತ್ಸಲ್ಯವ?
ಅರಿವೆ ಹೇಗೆ ಹೇಳೆ ತಾಯೆ
ನಿನ್ನ ಪ್ರೀತಿ ಎಲ್ಲೆಯ?
*****
ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.