ಸುಂದರತೆಯಾನಂದ ಅಮರವೆಂದನು ಅಂದು
ಕವಿ ಕೀಟ್ಸು ಕಲ್ಪನೆಯ ಕನಸಿನಲಿ ಮೈಮರೆತು;
ನನಸಿನಲಿ ತಾನೊಲಿದ ಸೌಂದರ್ಯದಲಿ ಬೆಂದು,
ಅದು ತನಗೆ ದೊರಕದೆಯೆ ಸಾಗಿಹೋಗುವುದರಿತು
ಸಾವ ಸುಖ ಬಯಸಿದನು ! ತಂಗಾಳಿ ಬೀಸುತಲಿ
ಹೊತ್ತು ತರುವಂದದಲಿ ಹೊಸ ಹೂವ ಪರಿಮಳವ,
ಸೌಂದರ್ಯ ಕಂಡೊಡನೆ ಆನಂದ ಸೂಸುತಲಿ
ಹುದುಗಿಸುತ ತನ್ನೊಳಗೆ ತಹುದು ದುಗುಡದ ನೋವ!
ಮೊದಲ ಪರಿಚಯವಾಗಿ ನಿನ್ನ ನೋಡುತಲಂದು,
ಇನಿತು ದಿನವೂ ಬಯಸಿ, ಯುಗ ಯುಗದ ಕನಸಿನಲಿ
ನೆನೆದ ಸೌಂದರ್ಯವೇ ನನಗೆ ದೊರಕಿಹುದೆಂದು
ಹಿಗ್ಗಿದೆನು ಸಂತಸದಿ!- ಅಂದಿನಾನಂದದಲಿ
ಮುಚ್ಚಿತ್ತು ಈ ನೋವು! ನೀನೆಲ್ಲೋ, ನಾನೆಲ್ಲೊ
ಇಂದು! ಅದಕ್ಕಾಗಿಯೇ ಅಂದು ಕೂಡಿದೆವೆಲ್ಲೊ!
*****