ವಚನ ವಿಚಾರ – ನೀರಿನಂಥ ಮನಸ್ಸು

ವಚನ ವಿಚಾರ – ನೀರಿನಂಥ ಮನಸ್ಸು

ಅನೇಕ ತೆರದ ಯೋನಿಮುಖಂಗಳ ಪೊಕ್ಕು
ನೀರ್‍ಗುಡಿಯಲೆಂದು ಪೋದಡೆ
ಸುಡು ಪೋಗೆಂದು ನೂಂಕಿತ್ತೆ ಜಲ
ಅದರಂತಿರಬೇಡಾ ಹಿರಿಯರ ಮನ
ಮನವಿಚ್ಛಂದವಾಗದೊಂದೆಯಂದದಲಿಪ್ಪಂತಪ್ಪಾ
ನಿಮ್ಮದೊಂದು ಸಮತಾಗುಣವನ್ನನೆಂದು ಪೊದ್ದಿರ್ಪುದು ಹೇಳಾ
ಕಪಿಲಸಿದ್ಧಮಲ್ಲಿಕಾರ್ಜುನಾ

[೫ನೆಯ ಸಾಲು: ಓದಿನ ಅನುಕೂಲಕ್ಕೆ ಹೀಗೆ ಬಿಡಿಸಿಕೊಳ್ಳಿ: ಮನ-ಇಚ್ಛಂದ-ಆಗದೆ-ಒಂದೆ-ಅಂದದಲಿ-ಇಪ್ಪಂತೆ-ಅಪ್ಪ-ಆ; ಪೊದ್ದಿರ್ಪುದು-ಹೊಂದಿರುವುದು]

ಸಿದ್ಧರಾಮನ ವಚನ.
ಹಿಂದಿನ ಜನ್ಮದಲ್ಲಿ ಏನೇ ಆಗಿರಲಿ, ಅಥವಾ ಮಾಡಬಾರದ ಕೆಲಸಗಳನ್ನೇ ಮಾಡಿರಲಿ, ಅಂಥವನು ನೀರು ಕುಡಿಯಲೆಂದು ಹೋದರೆ ‘ನೀನು ಅಯೋಗ್ಯ’ ಎಂದು ಅವನ ದಾಹವನ್ನು ತಣಿಸಲು ನಿರಾಕರಿಸುತ್ತದೆಯೇ ನೀರು? ಇಲ್ಲವಲ್ಲಾ. ನಿಜವಾದ ಹಿರಿಯರ ಮನ ಹಾಗೆ ಇರಬೇಕಲ್ಲವೇ? ಯಾವುದರ ಬಗ್ಗೆಯೂ ತಿರಸ್ಕಾರದ ಲವಲೇಶವೂ ಇಲ್ಲದಂತಿರುವುದೇ ನಿಜವಾದ ಹಿರಿತನ. ಮನಸ್ಸು ಇಚ್ಛಂದವಾಗದೆ (ಇಬ್ಬಾಗವಾಗು) ಒಂದೇ ಅಂದದಲ್ಲಿ ಇರುವಂಥ ನಿಮ್ಮ ಸಮತಾಗುಣವನ್ನು ನನ್ನ ಮನಸ್ಸು ಎಂದು ಹೊಂದೀತು ಎಂದು ಸಿದ್ಧರಾಮ ಕೇಳುತ್ತಾನೆ.

ದೇವರು ಎಂಬುದಿದ್ದರೆ ಅದು ಸಮತಾಗುಣವೇ. ಸಿದ್ಧರಾಮನ ದೃಷ್ಟಿಯಲ್ಲಿ ಏನನ್ನೂ ತಿರಸ್ಕರಿಸಿದ ಗುಣವೇ, ಯಾವ ಗುಣದಿಂದಲೂ ಮನಸ್ಸು ಇಚ್ಚಂದವಾಗದೇ ಇರುವುದೇ, ದೇವರ ಗುಣ, ಅಂಥ ಗುಣ ಬೇಕು ಅನ್ನುವುದು ಬಯಕೆ.

ನಿಸರ್ಗಕ್ಕೆ ಇಂಥ ಸಮತಾಗುಣವಿರುವುದರಿಂದಲೇ ನಾವು ಬದುಕಿದ್ದೇವೆ. ಕೇವಲ ‘ಒಳ್ಳೆ’ಯವರಿಗೆ ಮಾತ್ರವೇ ಮಳೆ ಸುರಿಯುವುದು, ಸೂರ್ಯ ಹೊಳೆಯುವುದು, ನದಿ ಹರಿಯುವುದು, ಮರ ಹಣ್ಣು ಕೊಡುವುದು ಎಂದಾಗಿದ್ದರೆ ಲೋಕದಲ್ಲಿ ನೂರಕ್ಕೆ ತೊಂಬತ್ತೊಂಬತ್ತು ಜನ ಬದುಕುವುದಕ್ಕೇ ಆಗುತ್ತಿರಲಿಲ್ಲವೇನೋ! ಸೇಡಿಲ್ಲದ, ಅವಜ್ಞೆ ಇಲ್ಲದ, ತಿರಸ್ಕಾರವಿಲ್ಲದ ಗುಣ ಎಂದು ಸಮತೆಯನ್ನು ವರ್ಣಿಸಿರುವುದು ಹೊಸತೆಂಬಂತಿದೆ.

ಛಂದ ಮತ್ತು ಅಂದ ಪದಗಳನ್ನು ಒಟ್ಟುಗೂಡಿಸಿರುವ ರೀತಿಯೂ ಗಮನಾರ್ಹ. ಛಂದ ಅನ್ನುವುದು ಛಂದಸ್ಸನ್ನೂ ಚಂದವನ್ನೂ ಒಟ್ಟಿಗೆ ಸೂಚಿಸೀತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಓಡುತೆ ಬಾ! ಬಾ!
Next post ನಕ್ಕುಬಿಡು

ಸಣ್ಣ ಕತೆ

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಬೋರ್ಡು ಒರಸುವ ಬಟ್ಟೆ

    ಪ್ರಕರಣ ೬ ಸುತ್ತಮುತ್ತಲಿನ ಕೆಲವು ಪಾಠಶಾಲೆಗಳನ್ನು ನೋಡಿಕೊಂಡು ರಂಗಣ್ಣ ಜನಾರ್ದನಪುರಕ್ಕೆ ನಾಲ್ಕು ದಿನಗಳ ನಂತರ ಹಿಂದಿರುಗಿದನು. ರೇಂಜಿನಲ್ಲಿ ಹಲವು ಸುಧಾರಣೆಗಳಾಗಬೇಕೆಂಬುದು ಅವನ ಅನುಭವಕ್ಕೆ ಬಂದಿತು. ತನಗೆ ತೋರಿದ… Read more…

  • ತಿಮ್ಮರಾಯಪ್ಪನ ಬುದ್ಧಿವಾದ

    ಪ್ರಕರಣ ೧೧ ಮಾರನೆಯ ದಿನ ತನ್ನ ಮೀಟಂಗ್ ಕೆಲಸವನ್ನು ಮುಗಿಸಿಕೊಂಡು ತಂಗಿಯ ಮನೆಯಲ್ಲಿ ಊಟಮಾಡಿಕೊಂಡು ರಾತ್ರಿ ಎಂಟು ಗಂಟೆಗೆ ತಿಮ್ಮರಾಯಪ್ಪನ ಮನೆಗೆ ರಂಗಣ್ಣ ಹೊರಟನು. ಆ ದಿನ… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…