ನಕ್ಕು ಬಿಡು ಗೆಳತಿ
ಅಂಜದಿರು ಅಳುಕದಿರು
ನಿರಾಶೆಯಲಿ ಧೃತಿಗೆಡದಿರು
ಕಂಗೆಡದಿರು, ಕಷ್ಟಗಳೆದುರು.
ಜೀವನವಲ್ಲ ಹೂವಿನ ಹಾಸಿಗೆ
ನೋವು ನಲಿವುಗಳ ಒಸಗೆ
ತಾಳಿದವನು ಬಾಳಿಯಾನು
ಮನನವಾಗಲಿ ಮುತ್ತಿನಂತಹ ಮಾತು.
ತಾಳು ತಾಳು ಧೈರ್‍ಯ ತಾಳು
ಧೈರ್‍ಯವೇ ಸಂಜೀವಿನಿ ಕೇಳು
ತಾಳುವಿಕೆಯ ತಪದ ಫಲ
ಸಿಕ್ಕೀತು ಬಿಡದಿರು ಛಲ.
ಇದ್ದೀತು ಹಾದಿಯಲ್ಲಿ ಕಲ್ಲು ಮುಳ್ಳು
ಅಂಜಿಕೆ ಆತಂಕವ ದೂರ ತಳ್ಳು
ಇರುಳ ಹಿಂದೆಯೇ ಹಗಲು
ಬಂದಾಗ ಸಂತಸದ ಹೊನಲು.
ಗೆಳತಿ, ಚಿಂತೆಬಿಡು, ನಕ್ಕುಬಿಡು
ನಿನ್ನ ನಗುವಲ್ಲಿ ಕೊಚ್ಚಿ ಹೋಗಲಿ
ದುಃಖ ದುಮ್ಮಾನದ ದುಗುಡ.
*****