ಸೂರ್ಯ ಮುಳುಗಿದ ತುಸು ಹೊತ್ತಿನ ಮೇಲೆ ನಗರಸಭಾ ಆಯುಕ್ತರು ಮನೆಗೆ ಹೊರಟರು.  ಜವಾನ ವಾಹನದ ಬಾಗಿಲು ತೆರೆದು ನಿಂತ.  ಸಾಹೇಬರು ಒಳಗೆ ತೂರಿಕೊಳ್ಳಬೇಕೆನ್ನುವಷ್ಟರಲ್ಲಿ “ನಮಸ್ಕಾರ ಸಾಹೇಬರೆ…” ಎಂಬ ಕರ್ಕಶ ಧ್ವನಿಯೊಂದು ಕೇಳಿತು.

ಅಲ್ಲಿ ಜವಾನ ಬಿಟ್ಟರೆ ಬೇರೆ ಯಾರೂ ಇರಲಿಲ್ಲ.  ಅದರೆ ಧ್ವನಿ ಬಂದದ್ದು ಎಲ್ಲಿಂದ?

“ನಾನೇ ಸಾಹೇಬರೆ, ನಿಮಗೆ ನಮಸ್ಕಾರ ಹೇಳಿದ್ದು” ಮತ್ತೆ ಕೇಳಿಸಿತು ಧ್ವನಿ.  ಅದರ ಜಾಡು ಹಿಡಿದು ದೃಷ್ಟಿ ಹರಿಸಿದರು ಸಾಹೇಬರು.  ತುಸು ದೂರವಿದ್ದ ಮರವೊಂದರ ಕೆಳಗೆ ಕತ್ತೆಯೊಂದು ನಿಂತಿದ್ದು ಕಂಡಿತು.  ಕೆಂಡಾಮಂಡಲವಾದರು ಸಾಹೇಬರು.

“ಈ ಕತ್ತೆಗಳನ್ನು ಕಂಪೌಂಡಿನೊಳಗೆ ಬಿಡಬೇಡ ಎಂದು ಎಷ್ಟು ಸಲ ಹೇಳಿದ್ದೇನೆ ನಿನಗೆ.  ಇವತ್ತು ಮೀಟಿಂಗಿನಲ್ಲಿ ಈ ಕತ್ತೆಗಳ ಬಗ್ಗೆಯೇ ಬಹಳಷ್ಟು ಚರ್ಚೆಯಾಯಿತು.  ಅಧ್ಯಕ್ಷರು, ಸದಸ್ಯರು ನನ್ನ ಮೇಲೆ ಸಿಟ್ಟು ಮಾಡಿಕೊಂಡರು.  ನೀನು ಕತ್ತೆಗಳನ್ನು ಒಳಗೆ ಬಿಟ್ಟುಕೊಂಡಿದ್ದಕ್ಕೆ ನಾನು ಅವಮಾನ ಅನುಭವಿಸಬೇಕಾಯಿತು”  ಪಟಪಟನೆ ಮಾತು ಸಿಡಿಸಿದರು ಸಾಹೇಬರು.

ಜವಾನ ದಿಕ್ಕೆಟ್ಟವನಂತೆ ನಿಂತ.  ಮತ್ತೆ ಮೆತ್ತಗಿನ ದನಿಯಲ್ಲಿ.

“ಸಾಹೇಬರೆ, ನಾನು ಎಷ್ಟು ಸಲ ಓಡಿಸಿದ್ದೇನೆ ಈ ಕತ್ತೆಯನ್ನು.  ಆದರೂ ಕಣ್ಣು ತಪ್ಪಿಸಿ ಮತ್ತೆ ಒಳಗೆ ನುಗ್ಗುತ್ತದೆ” ಎಂದ.

“ಹೌದು ಸಾಹೇಬರೆ, ನಿಮ್ಮ ಜವಾನ ಹೇಳುವುದು ಸತ್ಯ” ಎಂದಿತು ಕತ್ತೆ.

“ಎಂಥ ಆಶ್ಚರ್ಯ ಇದು.  ಇದುವರೆಗೂ ನಾನು ಕತ್ತೆ ಮಾತನಾಡಿದ್ದನ್ನು ಕೇಳಿರಲಿಲ್ಲ!”  ಹುಬ್ಬೇರಿಸಿದ್ದರು ಸಾಹೇಬರು.

“ನಾನೂ ಇವತ್ತೆ ಕತ್ತೆ ಮಾತನಾಡುವುದನ್ನು ಕೇಳಿದ್ದು ಸಾಹೇಬರೆ” ಎಂದ ಜವಾನ.

“ಪ್ರಪಂಚದಲ್ಲಿ ಏನೆಲ್ಲ ಅಧ್ಬುತಗಳು ಜರುಗುತ್ತವೆ.  ನಾನು ಮಾತನಾಡಿದ್ದರಲ್ಲಿ ಅಚ್ಚರಿಯೇನಿದೆ ಸಾಹೇಬರೆ?” ಕತ್ತೆ ಕೇಳಿತು.

“ಅದೇನೇ ಇರಲಿ ನಿನಗೆ ಇಲ್ಲಿ ಪ್ರವೇಶವಿಲ್ಲ.  ನಿನಗಿದು ತಕ್ಕ ಜಾಗಾ ಅಲ್ಲ” ಸೆಟೆದು ಹೇಳಿದರು ಸಾಹೇಬರು.

“ನನಗೆ ಈ ಆವರಣ ಒಗ್ಗಿಹೋಗಿದೆ ಸಾಹೇಬರೆ.”

“ಇದು ಮನುಷ್ಯರು ಓಡಾಡುವ ಜಾಗ.”

“ಕಾರ್ಯವಾಸಿ ಕತ್ತೆಯ ಕಾಲು ಹಿಡಿಯಬೇಕಂತೆ.  ಇಲ್ಲಿದ್ದವರೆಲ್ಲ ನನ್ನ ಕುಲ ಬಾಂಧವರೇ ಆಗಿದ್ದಾರೆ.  ಅವರೊಂದಿಗೆ ನಾನಿದ್ದರೆ ನಿಮಗೇನು ಆತಂಕ?”

“ಅಂದರೇ….?”

“ಇಲ್ಲಿ ಕೆಲಸವಾಗಬೇಕಾದರೆ ನಿಮ್ಮೆಲ್ಲರ ಕಾಲು ಹಿಡಿಯಬೇಕಲ್ಲ.”

“ಏಽಽ ಕತ್ತೆ.  ನಾವೆಲ್ಲ ನಿನ್ನ ಹಾಗೆ ಅಂದುಕೊಂಡಿದ್ದೀಯೇನು?”

“ಆಕಾರದಲ್ಲಿ ಇಲ್ಲ;  ಸ್ವಭಾವದಲ್ಲಿ ಮಾತ್ರ”

“ಎಷ್ಟು ಸೊಕ್ಕು ನಿನಗೆ ಕತ್ತೆ ಬಡವ ತಂದು.  ನಮ್ಮ ಆವರಣದಲ್ಲಿ ಬಂದು, ಇದ್ದುಬಿದ್ದುದ್ದೆಲ್ಲ ತಿಂದು ಮತ್ತೆ ನಮ್ಮನ್ನು ಅವಮಾನಿಸುತ್ತಿ”

“ಸಾಹೇಬರೆ ಸಿಟ್ಟಿಗೇಳಬೇಡಿರಿ.  ನಿಮ್ಮ ಕೈಯೊಳಗಿನ ನೌಕರರನ್ನು ದಿನಕ್ಕೆ ನೂರಾರು ಸಲ ಕತ್ತೆ… ಕತ್ತೆಯೆಂದು ಬೈದು ಅಪಮಾನಿಸುವರು ನೀವು.  ತಪ್ಪು ಮಾಡುವವರು ಅವರು.  ಬೈಗುಳ ತಿನ್ನುವುದು ನಾನು.  ಬಡವನೆಂದು ಸಹಿಸಿಕೊಂಡು ಸುಮ್ಮನಿದ್ದರೂ ಈ ಆವರಣದಿಂದ ಹೊರಗೆ ಕಳಿಸಿ, ನನ್ನ ಪಾಲಿನ ಅನ್ನ ಕಸಿದುಕೊಳ್ಳುತ್ತಿದ್ದೀರಿ.”

“ನಿನ್ನ ಮಾತೇ ಅಸಂಗತವಾಗಿದೆ.”

“ನಿಮ್ಮ ನಗರಸಭೆಯಲ್ಲಿ ಹತ್ತಾರು ವಿಭಾಗಗಳಿವೆ.  ಅಲ್ಲಿಂದ ಎಷ್ಟೋ ಕಾಗದ ಚೂರುಗಳು ಇಲ್ಲಿನ ಕಸದತೊಟ್ಟಿಗೆ ಬಂದು ಬೀಳುತ್ತವೆ.  ನನಗದು ಸಮೃದ್ಧ ಆಹಾರ.  ನಾನು ತೊಟ್ಟಿಯ ಬಳಿ ನಿಂತು ಹಾಳೆ ತಿನ್ನಬೇಕೆಂದರೆ ಗಾಳಿಯದೊಂದು ಕಿರಿಕಿರಿ.  ಹಾಳೆಗಳು ಆವರಣದ ತುಂಬಾ ಓಡಾಡುತ್ತವೆ.  ಕಾಗದದ ಬೆನ್ನು ಹತ್ತಿದಾಗಲೆಲ್ಲ ನಿಮ್ಮ ಜವಾನ ಕಲ್ಲು ಹಿಡಿದು ಓಡಿಸಲು ಬಂದೇಬಿಡುತ್ತಾನೆ.  ನಾನು ನಿಮ್ಮ ಆವರಣವನ್ನು ಸ್ವಚ್ಛವಾಗಿಡುತ್ತೇನೆ.  ಆದರೂ ನಾನೆಂದರೆ ನಿಮಗೆ ಸಿಟ್ಟು.”

“ಇಲ್ಲಿನ ಕೈತೋಟದ ಹುಲ್ಲು-ಗಿಡಗಳಿಗೆ ನಿನ್ನಿಂದ ಧಕ್ಕೆಯಾಗುವುದೆಂದು ಅಧ್ಯಕ್ಷರ ಮತ್ತು ಸದಸ್ಯರ ತಕರಾರು.”

“ನಾನು ಪರಿಸರ ಪ್ರೇಮಿ.  ಒಂದಿನವೂ ನಿಮ್ಮ ತೋಟದತ್ತ ಕಣ್ಣು ಹಾಕಿಲ್ಲ.  ಕಾಲೂ ಇಟ್ಟಿಲ್ಲ.”

“ನಿನಗೆ ಆವರಣದೊಳಗೆ ಬರಲು ಪರ್ಮಿಶನ್ ಇಲ್ಲ.”

“ಹಾಗೆ ಕಡ್ಡಿ ಮುರಿದಂತೆ ಮಾತನಾಡಬೇಡಿ ಸಾಹೇಬರೆ.  ನನ್ನಿಂದ ನಿಮಗೆ ಲಾಭವಿದೆ.”

“ಅದೇನು?”

“ನೀವು, ನಿಮ್ಮ ಕೈಕೆಳಗಿನವರು, ಅಧ್ಯಕ್ಷರು, ಸದಸ್ಯರು ಬಾರಾಭಾನಗಡಿ ಮಾಡಿದ ಕಾಗದಗಳನ್ನೆಲ್ಲ ನನ್ನ ಉದರಕ್ಕೆ ಸೇರಿಸಿಕೊಳ್ತೀನಿ.”

“ಭಾನಗಡಿ ಕಾಗದವೆ?”

“ಅದು ತಮಗೆ ತಿಳಿದುದೇ ಆಗಿರುವುದು ಸಾಹೇಬರೆ.  ಹಾಗೇಕೆ ಅರಿಯದವರಂತೆ ಪ್ರಶ್ನಿಸುತ್ತೀರಿ.  ಸಾಕಷ್ಟು ಅಮೇಧ್ಯ ತಿಂದು, ಖೊಟ್ಟಿ ಲೆಕ್ಕ-ಪತ್ರ ಬರೆದು, ಹರಿದು ಕಸದ ತೊಟ್ಟಿಗೆ ಹಾಕಿದ ನಿಮ್ಮ ಪಾಪದ ಹಾಳೆ ತಿಂದು ನಾನು ನಿಮ್ಮನ್ನು ಬಚಾವು ಮಾಡುತ್ತೇನೆ.  ಒಮ್ಮೊಮ್ಮೆ ನನ್ನ ಬಂಧುಗಳನ್ನು ಕರೆದುಕೊಂಡು ಬಂದು ನಿಮ್ಮ ಕರ್ಮಕಾಂಡದ ದಫ್ತರಗಳನ್ನೇ ನುಂಗಿದ್ದೇನೆ.  ಆ ಕಾಗದಗಳ ನಿಜ ಹಕೀಕತ್ತನ್ನು ಪ್ರಪಂಚಕ್ಕೆ ನಾನು ತಿಳಿಸಿದರೆ ನೀವು ಕಂಬಿ ಎಣಿಸಬೇಕಾಗುತ್ತದೆ.”

ಈ ಕತ್ತೆ ತನ್ನನ್ನು ಬ್ಲ್ಯಾಕ್‌ಮೇಲ್ ಮಾಡಲು ನೋಡುತ್ತಿರುವುದೆ?  ಎಂದು ಒಂದು ಕ್ಷಣ ಅನುಮಾನ ಕಾಡಿತು ಸಾಹೇಬರಿಗೆ.  ಅದೇ ನೋಟದಲ್ಲಿ ಅವರು ಕತ್ತೆಯನ್ನು ದಿಟ್ಟಿಸಿದರು.

ಝೀಂಕು… ಝೀಂಕು… ಝೀಂಕು… ಕತ್ತೆ ಒದರಿತು.

ಅದು ನಗರಸಭೆಯ ಭ್ರಷ್ಟಾಚಾರವನ್ನು ಸಾರುತ್ತಿರುವ ಧ್ವನಿಯೆಂಬ ಭ್ರಮೆಯಲ್ಲಿ ಬೆದರಿ ಬೆವರೊಡೆದ ಸಾಹೇಬರು ಅವಸರದಿಂದ ವಾಹನದೊಳಗೆ ಹೊಕ್ಕರು.

“ನನ್ನನ್ನು ಈ ಆವರಣದಿಂದ ಹೊರಗೆ ಹಾಕಲು ನಿಮ್ಮಿಂದ ಸಾಧ್ಯವಿಲ್ಲ ಸಾಹೇಬರೆ.  ನಾ ನಿನಗಾದರೆ, ನೀ ನನಗೆ ಎಂದು ಹಾಡು ಕೇಳಿಲ್ಲವೆ?”  ಕತ್ತೆ ಮುಖವೆತ್ತಿ ಹೇಳಿ ತನ್ನ ಬಾಲ ಬೀಸಿತು.  ಸಾಹೇಬರ ವಾಹನ ಭರ್‍ರೆಂದು ಓಡಿತು.

*****

Latest posts by ಅಬ್ಬಾಸ್ ಮೇಲಿನಮನಿ (see all)