ಕಹಿ! ಕಹಿ! ಕಪ್ಪು ಕಪ್ಪು! ಉಪ್ಪುಪ್ಪು ನಿನ್ನ ನೀರು
ಓ! ಸಮುದ್ರ!
ನಿನ್ನ ನೀರು ಉಪ್ಪಾದುದೇಕೆ?
ಮೂರು ಲೋಕದ ನೀರು ಮುಪ್ಪುರಿಗೊಂಡು ಉಪ್ಪಾಯಿತೇನು!
ಮಾವಿನಕಾಯಿಯೊಲು ಮಾನವಜಾತಿಯ
ಭೂತಚೇಷ್ಟೆಗಳನು-ಪೂರ್ವೇತಿಹಾಸವನು-
ನೆಲದಣುಗರು ನೆನೆಯಲೆಂದು ಕಾಲಪುರುಷನು ಕಲಿಸಿಡಲು
ಬಿಟ್ಟ ರಸವೇನು ನಿನ್ನ ನೀರು, ಓ! ಸಮುದ್ರ!
ಅಗಸ್ತ್ಯಜನಲ್ಲ ನೀನು! ತಾನೆ ನಿರ್‍ಮಿಸಿದ ಚೆಲುವ
ಮಾನವನು ಹೋಮಿಸುವದ ಕಂಡು ಜಗದೊಡೆಯ
ಸುರಿಸಿದ ಕಣ್ಣೀರು ನಿನ್ನ ನೀರು,-
ಓ! ಸಮುದ್ರ!
ಇಳೆಯನೆಲ್ಲ ಸುತ್ತಿ ಭೋರ್ಗರೆದು
ಅಟ್ಟಹಾಸದಿ ನಗುವ ದುಃಖ ನೀನು!
ಆಪ್ತವಿುತ್ರರ ಕಳೆದುಕೊಂಡ ಮಾನವರು
ವರ್ಷಾನುವರ್ಷ ಹರಿಸಿದ ಕಣ್ಣೀರ ಕಾಲುವೆ ನೀನು!
ನಿನ್ನ ಉಪ್ಪುಂಡು ಬೆಳೆದರು ಕವಿಗಳು, ಓ! ಸಮುದ್ರ!
ಅಮರರಾದರು ನಿನ್ನಮೃತವನು ಸವಿದು;
ಉಪ್ಪಿಲ್ಲದೆ ಒಪ್ಪಿಲ್ಲವೆಂಬ ನಿನ್ನೀ ಭಾವ
ಸತ್ಯವದು,-ಚಿರಂತನ ಸತ್ಯವಹುದು!
*****


















