ಮುರಿದ ಮೀನಾರುಗಳು, ಕಡಿದ ಮಂದಿರಗಳು
ಹಾಳು ಗೋಡೆ ಅವಶೇಷ ಕೋಟೆ ಕೊತ್ತಳಗಳು
ಗತ ಮರೆತ ಇತಿಹಾಸದ ಪುಟಗಳು
ಸರಸ ಜನನ, ವಿರಸಮರಣವೆಂದೆ
ಸಮರಸವೇ ನಿನ್ನ ಬದುಕಾಯ್ತು ಗೆಳೆಯಾ!
ಲವಲವಿಕೆಯ ನಗುವಿನ ಒಡೆಯ ನೀನು
ಸುನೀಲಾಳ ಬದುಕಿಗೆ ಪ್ರೀತಿ ಸುರಿದಾತ
ಸಮನ್ವಯ ಸಂತನದು ಪ್ರೇಮ ಮಂತ್ರ
ಬದುಕೇ ಬಾನುಲಿ-ಬಾನುಲಿಯೇ ಬದುಕು
ಪ್ರೀತಿಸಿದವಳ ಕೈಬಿಡದ ನಂಟು
ನಿಷ್ಕಲ್ಮಶ ತರಂಗಗಳೆಬ್ಬಿಸಿದ ನಿನ್ನಾ ನಗು
ಜುಳು ಜುಳು ಹರಿವ ನದಿಯ ನೀರು!
ಮಂದಿರ ಮಸೀದಿಗಳೆಂದೂ ನಿನಗೆ ಕಾಡಲಿಲ್ಲ.
ನಿನಗೆ ಕಾಡದಿರುವುದೇ ಅವರ ಸಮಸ್ಯೆಯಾಗಿದೆ ನೋಡು.
ನೀನು ಮಸೀದಿ, ಅವಳು ಮಂದಿರ, ಮುಂದೆ
ನಿನ್ನಂಗಳದಲ್ಲಿ ಮೂರು ಹೂ ಅರಳಿ ನಿಂತವು ನೋಡು.
ಹೂಗಳ ಗಂಧ, ಸುಗಂಧ ಬೀಸೋ ಗಾಳಿಯಲಿ ಸೇರಿ
ಅದಕೆ ಯಾವ ಜಾತಿಯೆಂದು ಕರೆಯಲಿ ಹೇಳು?
ಗಾಳಿಗೆ, ಸುಗಂಧಕೆ ಜಾತಿಯುಂಟೆ ಗೆಳೆಯಾ!
ರಾಮ-ರಹೀಮರ ಸಾಮರಸ್ಯದ ಕುಡಿಯಾದೆ
ಎದೆ ತುಂಬಾ ಬೆಳಕು ಚೆಲ್ಲಿದೆ ನೋಡು
ಅಲ್ಲಾ-ಅಲ್ಲಮರ ಸ್ನೇಹಕ್ಕೆ ಸೇತುವೆಯಾದೆ.
ಸೌಹಾರ್‍ದ ಬದುಕಿಗೊಂದು ಮಾದರಿಯಾದೆ.
ಸಮನ್ವಯದ ಹಾಡಿಗೆ ಮುನ್ನುಡಿ ಬರೆದೆ
ಹೇಳು ಗೆಳೆಯಾ ಸುಗಂಧಕೆ, ಗಾಳಿಗೆ?
ಯಾವ ಜಾತಿ ಹಿಡಿದು ಕರೆಯಲಿ ಹೇಳು ಗೆಳೆಯಾ!
*****
(ಜಿ.ಎಂ.ಶಿರಹಟ್ಟಿಯವರ ಅಭಿನಂದನ ಗ್ರಂಥಕ್ಕಾಗಿ ಬರೆದ ಕವಿತೆ)