ಬಾರೆಲೆ ಕೋಗಿಲೆಯುಲಿಯುತ ಬನದೊಳು
ತಾರೆಲೆ ಮೋದವ ಮೇದಿನಿಗೆ
ಹಾಡೆಲೆ ಬಹುವಿಧ ರಾಗದೆ ನರರನು
ತೇಲಿಸಿ ಕುಣಿಸೆಲೆ ಲೀಲೆಮಿಗೆ
ಕುಡಿಗೊನರೆಲ್ಲವು ಗಿಡಗಳ ಮಡಲೊಳು
ಬಿಡದಲೆ ಕಾಣುವೆ ಕೋಗಿಲೆಯೆ
ತಡವನು ಮಾಡದೆ ಒಡನೆಯೆ ನಯನುಡಿ
ಬೆಡಗನು ಬಿಡಿಸಲೆ ಬಿಂಕದಲಿ
ಬೇಸಿಗೆ ಕಾಲನು ನಲವಿಂದಿಡುತಿದೆ
ಮಾಗಿಯು ಮುಗ್ಗುತ ಮುಡಿಯುತಿದೆ
“ಕುವೋಽಕುವೋs” ಸವಿದನಿ ಸೊದೆಯನು
ಬೀರುತ ಬಾರೈ‌ ಕೋಗಿಲೆಯೆ
ಕೇಳಿದೆ ಕೇಳಿದೆ ಕೆಲಬಲಕುಲಿಯುವ
“ಕೂಽವೊ ಕೂಽವೊ” ಮೆಲುದನಿಯ
ವಸಂತ ಸಮಯನ್ನು ಸಮನಿಸಿದೊಸಗೆಯ
ವಸುಮತಿ ದಿಶೆಶೆಗುಸಿರುತಿದೆ
ಏನಿದು ಗಾನಮೊ ಸುಮನೋಹರಮೊ !
ರಸಋಷಿರಸನೆಯೊಳೊಸರುವರಸಮೊ !
ನಿಶೀಥ ಸಮಯದ ನಿಶಾಂತ ಸನಮೊ !
ವಸುಮತಿ ದೇವಿಯ ಸುಗ್ಗಿಯ ಸೊಗಮೊ !
ವಸಂತ ರಮಣಿಯ ನಿನದದ ನಯಮೊ !
ರತಿಯುತ ಸತಿಮಣಿ ಸುಸಿಲಿನ ಸನಮೊ !
ಪಸುಳೆಯ ಮುದ್ದಿನ ಮಾತಿನ ಮುದಮೊ !!
ಕಾಣುವೆ ಕೇಳುವೆ ಕೆಲಬಲದಲ್ಲಿ
ಕುಣಿಕುಣಿದಾಡುವ ತಣಿನೆಳಲಲ್ಲಿ
ಚಲುವಿನ ಮೃದುತಮ ಮನಸಿರಿಯಲ್ಲಿ
ಬಳಲಿಕೆ ಬಾರದ ತೊಲಿಕೆಯಲ್ಲಿ
ತಿಳಿಯದಲಂಪಿನ ಮೆಲುದನಿಯಲ್ಲಿ
ತಿಳಿಗೊಳದಲಂಪಿನ ಪರಿಮಳದಲ್ಲಿ
ಮುಳಗುವೆ ಸಂದದ ಸಂತಸದಲ್ಲಿ
ನುಡಿತಡೆಬಿಡುಗಡೆ ಪಡೆಯುವ ಸಮಯದೆ
ನುಡಿಯುವ ನುಡಿಯನುಕರಿಸದಿಹೆ
“ಕುವೊ ಕುವೊ ಕರ್ರೇ” ಎನ್ನುತ ಸಾರಲು
ನಾಡಿನ ಬಿಡುಗಡೆ ಕಾಣದಿಹೆ
ಕವಿಗಳ ಕಣ್ಣೊಳು ಕುಣಿಕುಣಿದಲೆಯುವ
ಮಾವಿನ ತಳಿರೊಳೆ ತಳ್ತಿರದೆ
ತರುಗಳ ಭೇದವ ಹೃದಯದೆ ತಾರದೆ
ಚಲುವಿನ ತಳಿರನು ಮೆಲುತಿರುವೆ
ಬೇವಿನ ಕಿಸಲಯ ಹಸುರೆಲೆ ಬೀಡೊಳು
ಮಂಚದ ಮೇಲೆ ಮಲಗಿರಲು
ಬೆಳಗಿನ ಗಳಿಗೆಯೊಳುಲಿಯುತ ಮೆಲುದನಿ
ತಲ್ಪದೆ ತಲೆಯನು ತೊನೆಸುತಿಹೆ
ಸವಿದನಿಯೆಸಕವನೊಸೆದೊಸೆದಾಲಿಸೆ
ಬಾಲ್ಯದೆ ತೇಲಿಸಿ ಕುಣಿಸುತಿಹೆ
ಶಿಶುತನದೊಸಗೆಯ ಹೊಸದಾಗೇಳಿಸಿ
ಬಿಸಿಬಿಸಿಯುಸಿರನು ಬಿಡಿಸುತಿಹೆ
೧೦
ತಾಯಿಯ ತಾಯ್ನುಡಿ ತಂದೆಯ ತನಿನುಡಿ
ಕೋಗಿಲೆ ಬಗ್ಗಣೆ ಹಾರೈಸಿ
ಕುಣಿಯುತ ಕುಲುಕುಲು ನಗುತಿಹ ದಿನಗಳ
ನೆನಪೇ ನೋವಿನ ಸೀಮೆಯಲೆ
೧೧
ದನಿಯನು ಬದಲಿಸಿ ಪದುಳದೆ ಪಾಡುವ
ಹದನವ ತಲೆಯಲಿ ತೂಗುತಿರೆ
ಚದುರನು ಜಗದೊಳು ಜನರುಚಿಯರಿಯುತ
ಬದಲಿಪ ನಡೆನುಡಿ ನಟಿಸುತಿಹೆ
೧೨
ಬಾನೊಳು ಮುನಿದಿರುವಿನಿಯಳ ಬೆನ್ನೊಳು
ಪ್ರಣಯದ ತನಿಸೊದೆ ಸೂಸುತಲಿ
ಓಪನು ಓಪಳ ಕಳೆಯನು ಕೇಳುತ
ತರುಗಳ ಬಳಸುತ ತೇಲುತಿರೆ
೧೩
ಸ್ಮೃತಿಪಥಕೇಳುವ ಮುನಿದಿಹ ನಲ್ಲೆಯ
ಚಿತ್ರವ ರೂಪಿಸಿ ನಲಿಸುತಿಹೆ
ನಲ್ಲನ ನಲ್ಲೆಯ ಲಲ್ಲೆಯ ಸೊಲ್ಲಿನ
ಮಲುದನಿ ಸೊಂಪನು ಸೂಸುತಿಹೆ
೧೪
ಕಾಡಿಗೆ ಕಪ್ಪಿನ ಮೋಡದ ಬಣ್ಣವ
ಬರಸೆಳೆದಾಡುವ ಒಡಲಿಂದೆ
ಮೂಡುವ ನಯನುಡಿ ಗಾಡಿಯ ನೋಡಲು
ಪೊಡವಿಯ ಮೌಢ್ಯದೆ ಕೆಡಹುತಿಹೆ
೧೫
ಪುಚ್ಚವನೇಳಿಸಿ ಬೀಳಿಸಿ ಕಲೆವುದ
ನೊಚ್ಚರೆಗಂಗಳು ನೋಡುತಿರೆ
ಒನಪಿನ ಉಯ್ಯಲೆಯಾಂತಿಹ ಭುವನದೆ
ಕುಳಿತಿಹ ದೇವನ ನಾದಮಿದೊ
೧೬
ಪೊಡವಿಯೊಳಡಗಿಹ ಶಕುನಿಯ ಸೃಷ್ಟಿಯ
ದಿಟ್ಟಿಸಿ ನೋಡಲು ನುಡಿಗಳನು
ತರತಮಭಾವದೆ ಕಾಲದೆ ಕಾಲದೆ
ಕಲೆಯುತ ಕೆಲಬಲ ಕಲೆತಿಹವು
೧೭
ನಾಕಾಧೀಶನ ಗಮನವನೆಣಿಸದೆ
ತುಂಬುರನೆಂಬುವ ಕಿನ್ನರನು
ವೀಣೆಯ ಗಾನದ ನಾದದೆ ನಾಂದಿರೆ
ಶಾಪವು ಪಿಕವನು ರೂಪಿಸಿತೊ
೧೮
ಶಾಪವಿಮೋಚನೆ ಯಾಚಿಸಿ ಕೇಳದೆ
ಶೋಕವ ಮಾಡದೆ ಭೂತಲದೆ
ಕೋಗಿಲೆಯಾಗಿರೆ ಮಾಗಿಯ ಬೇಟಿಗ
ನೀಗದ ನಿಡುಸರ ತುಡುಕಿಹನೊ
೧೯
ವರ್ಷಾಕಾಲದ ಸೆರೆ ಪಿರಿದಲ್ತೈ
ಎಂದಾದರು ಪದ ಪಾಡುತಿಹೆ
ಸಂದಿದ ಮಾತನು ಹೊಂದಿಸಿ ಹಂಬಲ
ಮಾಡುವವನುಚಿತವನ್ನುತಿಹೆ
೨೦
ಕಾರಿನ ಕಾಲದೆ ಕೋಗಿಲೆಯುಲಿಯನು
ಕೇಳುತ ಬಂದೆನು ಕೆಲವುಕಡೆ
ರಾಗದೆ ರಾಗವ ಕೂಗುತ ಕೂಗುವ
ವೇಗಕೆ ಬೀಗವು ಬೀಳುತಿದೆ
೨೧
ವಸಂತಸಮಯದ ಸವಿದನಿಯೆಸಕವ
ವಸುಮತಿಗೂಡಿಸಿ ನುಡಿಸದಿದೆ
ನಿಶೆಯೊಳು ದಿನದೊಳು ಕೇಳಿದ ಕಿವಿಯಾ
ಸುಖವದು ಸಾರಿತು ದೆಸೆದೆಸೆಗೆ
೨೨
ಕುಗ್ಗಿದ ಕಂಠದೆ “ಕುವೊ ಕುವೊ” ಎನ್ನುವ
ಹಿಗ್ಗದ ಕೂಗನು ಕೇಳುತಿಹೆ
ಸಗ್ಗದ ಸುಖದಾ ಸೊದೆಯನು ಸವಿದಿಹ
ಹಿಗ್ಗಿದ ಮನವದು ಮುದುಡುತಿದೆ
೨೩
ಜಗದೊಳು ಜೀವಿಗೆ ಸುಖದುಃಖಂಗಳು
ಬಿಡದಿಹ ಕರ್ಮವು ಎನುತಿರುವೆ
ಮಿಗೆ ಸಮ ಭಾವನ ತಳೆಯುತ ಕಳೆವುದು
ಲೋಕದೆ ಮೇಲೆಂದೆನುತಿರುವೆ
*****