ದೇಸೀ ಕಿಟ್ಟೆಲ್

ದೇಸೀ ಕಿಟ್ಟೆಲ್

ಚಿತ್ರ: ಸಲ್ಲಾಪ.ಕಾಂ
ಚಿತ್ರ: ಸಲ್ಲಾಪ.ಕಾಂ

‘ಕನ್ನಡ ಸಾಹಿತ್ಯ ಚರಿತ್ರೆ’ ಎಂದರೆ ಮೊದಲು ನೆನಪಾಗುವುದು ರಂ.ಶ್ರೀ.ಮುಗಳಿ ಆವರ ‘ಕನ್ನಡ ಸಾಹಿತ್ಯ ಚರಿತ್ರೆ’. ಆನಂತರ ಪ್ರೊ ಎಂ. ಮರಿಯಪ್ಪ ಭಟ್ಟರ ‘ಸಂಕ್ಷಿಪ್ತ ಕನ್ನಡ ಸಾಹಿತ್ಯ ಚರಿತ್ರೆ’. ಮರಿಯಪ್ಪ ಭಟ್ಟರ ಕೃತಿ ಗಾತ್ರದಲ್ಲಿ ಚಿಕ್ಕದು; ಗುಣದಲ್ಲಿ ಮುಗಳಿ ಅವರ ಕೃತಿಯಷ್ಟು ಸಾಹಿತ್ಯ ವಿದ್ಯಾರ್ಥಿಗಳ ಗೌರವಕ್ಕೆ ಪಾತ್ರವಾಗಿದೆ.

‘ಸಂಕ್ಷಿಪ್ತ ಕನ್ನಡ ಸಾಹಿತ್ಯ ಚರಿತ್ರೆ’ ಯ ನಂತರ ಮತ್ತೇನು? ‘ನಿಘಂಟು ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರಂತೆ’ ಎನ್ನುವ ಒಂದು ಸಾಲಿನ ವಿನಃ ಮರಿಯಪ್ಪ ಭಟ್ಟರ ಬಗ್ಗೆ ಬೇರೇನೂ ಹೊಳೆಯುವುದಿಲ್ಲ. ಹೆಚ್ಚು ಕಾಲ ಮದರಾಸ್‍ನಲ್ಲಿಯೇ ಇದ್ದ ಮರಿಯಪ್ಪ ಭಟ್ಟರು ಕನ್ನಡಿಗರಿಗೆ ಹೊರನಾಡ ವಿದ್ವಾಂಸರಾಗಿಯೇ ಪರಿಚಿತರು. ತವರಿನ ಆಸ್ಥಾನ ವಿದ್ದಾಂಸರ ಪ್ರಭಾವಳಿಯಿಂದ ವಂಚಿತರಾದವರು.

ಪ್ರೊ. ಎಂ. ಮರಿಯಪ್ಪ ಭಟ್ಟರ ಸಾಧನೆಯ ಹಾದಿಯಲ್ಲಿ ‘ಸಂಕ್ಷಿಪ್ತ ಕನ್ನಡ ಸಾಹಿತ್ಯ ಚರಿತ್ರೆ’ ಒಂದು ಕಿಡಿ ಮಾತ್ರ. ಸಂಸ್ಕೃತಿ, ನಿಘಂಟು ರಚನೆ, ಗ್ರಂಥ ಸಂಶೋಧನೆ ಕ್ಷೇತ್ರಗಳಲ್ಲಿ ಅವರು ಮಾಡಿದ ಕೆಲಸ ಅಮೂಲ್ಯವಾದುದು. ನಿಘಂಟು ಎಂದೊಡನೆ ನೆನಪಾಗುವ ಫರ್ಡಿನೆಂಡ್ ಕಿಟ್ಟಿಲ್‌‍ರ ‘ಕಿಟ್ಟಿಲ್ ಕನ್ನಡ-ಇಂಗ್ಲಿಷ್ ಶಬ್ಬಕೋಶ’ವನ್ನು ಪರಿಷ್ಕರಿಸಿದ ಅಗ್ಗಳಿಕೆ ಆವರದು. ಲಿಪಿಯಿಲ್ಲದ ‘ಹವ್ಯಕ’ ಭಾಷಾ ಸಂಪತ್ತನ್ನು ನಿಘಂಟಿಗೆ ಹೊಂದಿಸಿದ ಹಿರಿಮೆಗೂ ಭಟ್ಟರು ಭಾಜನರು. ಈ ನಿಟ್ಟಿನಲ್ಲಿ ಅವರು ‘ದೇಸೀ ಕಿಟ್ಟಿಲ್’. ಸ್ಥಳೀಯ ಪದಗಳನ್ನು ಆಡು ಮಾತಿನಲ್ಲಿನ ಶಬ್ದಗಳನ್ನು ಹೆಕ್ಕಿ ಹವ್ಯಕ ನಿಘಂಟಿಗಾಗಿ ಸಂಗ್ರಹಿಸಿದ ಭಟ್ಟರು ಈ ಪದಗಳಿಗೆ ಸೋದರ ಭಾಷೆಗಳಲ್ಲಿನ ಪದ ಯಾವುದು ಎನ್ನುವುದನ್ನು ಸೂಚಿಸಿದ್ದಾರೆ. ಅಪಾರ ತಾಳ್ಮೆ ಹಾಗೂ ಬದ್ದತೆ ಬೇಡುವ ಕೆಲಸವಿದು.

ಡಾ. ಎ. ಶಂಕರ ಕೆದಿಲಾಯರ ಸಹಕಾರದೊಂದಿಗೆ ರಚಿಸಿದ ‘ತುಳು-ಇಂಗ್ಲಿಷ್’ ಶಬ್ಬಕೋಶ ಮರಿಯಪ್ಪ ಭಟ್ಟರ ವಿದ್ವತ್ತಿಗೆ ಮೇರು ನಿದರ್ಶನ. ಈ ಕೃತಿಗೆ ತುಳುವಿನ ಪ್ರಾತಿನಿಧಿಕ ನಿಘಂಟು ಎನ್ನುವ ಖ್ಯಾತಿಯಿದೆ. ಜರ್ಮನ್ ಮಿಶನರಿಗೆ ಸೇರಿದ ಮ್ಯಾನರ್ ರಚಿಸಿದ್ದ ನಿಘಂಟು ತುಳುವಿನ ಮೊದಲ ನಿಘಂಟು. ಇದರಲ್ಲಿನ ಕೊರತೆ, ದೋಷಗಳನ್ನು ಭಟ್ಟರು ತಮ್ಮ ನಿಘಂಟುವಿನಲ್ಲಿ ತುಂಬಿದರು. ತುಳುವರ ಕುಲನಾಮಗಳನ್ನು ಹಾಗೂ ತುಳುವಿಗೇ ವಿಶಿಷ್ಟವಾದ ವ್ಯಕ್ತಿನಾಮಗಳಿಗೆ ಶಬ್ಬಕೋಶದಲ್ಲಿ ಸ್ಥಾನ ದೊರಕಿಸಿದರು.

ಕನ್ನಡ ಸಾಹಿತ್ಯ ಪರಿಷತ್‌ನ ನಿಘಂಟು ಸಂಪಾದಕ ಮಂಡಳಿ ಅಧ್ಯಕ್ಷರಾಗಿಯೂ ಮರಿಯಪ್ಪ ಭಟ್ಟ ಕಾರ್ಯ ನಿರ್ವಹಿಸಿದ್ದಾರೆ. ಕನ್ನಡ ನಿಘಂಟುಕಾರರ ಪಂಕ್ತಿಯಲ್ಲಿ ಅವರಿಗೆ ಭದ್ರವಾದ ಸ್ಥಾನ.

ಪ್ರೊ. ಮುಂಗ್ಲಿಮನೆ ಮರಿಯಪ್ಪ ಭಟ್ಟ (ಜನನ: ೧೯೦೬ ರ ಜುಲೈ ೨೭ ಮರಣ: ೧೯೮೦ರ ಮಾರ್ಚ್ ೨೧) ತುಳುನಾಡಿನವರು. ದಕ್ಷಿಣ ಕನ್ನಡದ ಪುತ್ತೂರು ತಾಲ್ಲೂಕಿನ ಕಬಕ ಗ್ರಾಮದ ಮುಂಗ್ಲಿಮನೆ ಅವರ ಜನ್ಮಸ್ಥಳ. ಹವ್ಯಕ ಕನ್ನಡ ಅವರ ಮಾತೃಭಾಷೆ. ದಕ್ಷಿಣ ಕನ್ನಡ ಮದರಾಸು ಪ್ರಾಂತ್ಯಕ್ಕೆ ಸೇರಿದ್ದ ಕಾಲವದು. ಪುತ್ತೂರು, ಮಂಗಳೂರು, ಮದರಾಸುಗಳಲ್ಲಿ ಕಲಿತ ಭಟ್ಟರು ಇಂಗ್ಲೆಂಡ್‌ನಲ್ಲಿ ಭಾಷಾ ವಿಜ್ಞಾನದ ಬಗೆಗೆ ವಿಶೇಷ ಅಧ್ಯಯನ ನಡೆಸಿದರು. ನಿಘಂಟು ಶಾಸ್ತ್ರ ಭಾಷಾ ವಿಜ್ಞಾನದ ಕುರಿತ ಅವರಲ್ಲಿ ಆಸಕ್ತಿ ಕುದುರಿದ್ದು ಅಲ್ಲಿಯೇ. ಪಾಶ್ಚಾತ್ಯ ವಿದ್ದಾಂಸರೊಂದಿಗಿನ ಚರ್ಚೆ ಭಟ್ಟರ ತಿಳಿವಳಿಕೆಯನ್ನು ಹರಿತಗೊಳಿಸಿತು.

ನಿಘಂಟು ತಜ್ಞರಿಗೆ ಹೆಚ್ಚಿನ ಭಾಷೆಗಳ ಅರಿವು ಆಗತ್ಯ. ಮರಿಯಪ್ಪ ಭಟ್ಟರಿಗೆ ಕನ್ನಡದೊಂದಿಗೆ ತೆಲುಗು, ಮಲಯಾಳಂ, ತಮಿಳು ಹಾಗೂ ಇಂಗ್ಲಿಷ್‌ಗಳಲ್ಲಿ ಪರಿಶ್ರಮವಿತ್ತು. ತುಳು ಹಾಗೂ ಹವ್ಯಕ ಭಾಷೆಗಳನ್ನು ಅವರಿಗೆ ಪರಿಸರವೇ ಕಲಿಸಿಕೊಟ್ಟಿತ್ತು. ಮದರಾಸಿನ ‘ಓರಿಯಂಟಲ್ ರಿಸರ್ಚ್ ಇನ್‌ಸ್ಟಿಟ್ಯೂಟ್’ನಲ್ಲಿ ಕೆಲಸ ಮಾಡಿದುದರಿಂದ ದ್ರಾವಿಡ ಭಾಷೆಗಳ ಜ್ಞಾನವಿತ್ತು. ಅವರಿಗಿದ್ದುದು ಭಾಷೆಗಳ ಪರಿಚಯ ಮಾತ್ರವಲ್ಲ; ತಿಳಿವಳಿಕೆ, ಭಾಷೆಯ ಕಲಿಕೆ ಅವರ ಜೀವನಾಸಕ್ತಿಯ ಭಾಗದಂತಿತ್ತು. ‘ದಕ್ಷಿಣ ಕನ್ನಡ ಭಾಷೆಗಳ ಆಡುಂಬೋಲ. ಸ್ವಾರ್ಥ ದೃಷ್ಟಿಯಿಂದ ನೋಡಿದರೂ ಹೆಚ್ಚು ಭಾಷೆ ತಿಳಿಯುವುದರಿಂದ ಲಾಭ ಹೆಚ್ಚು. ಈ ರಹಸ್ಯವನ್ನು ದಕ್ಷಿಣ ಕನ್ನಡ ಜಿಲ್ಲೆಯವರು ತಿಳಿದುಕೊಂಡಂತಿದೆ. ಭಾಷೆಗಳನ್ನು ಕಲಿಯುವ ಗುಣ ಈ ಜನಕ್ಕೆ ರಕ್ತಗತವಾಗಿ ಬಂದಿರಬೇಕು’ ಎಂದು ಮರಿಯಪ್ಪ ಭಟ್ಟ ಒಂದೆಡೆ ಬರೆದಿದ್ದಾರೆ. ಅದು ಅವರ ಪಾಲಿಗೂ ಸತ್ಯ.

ಮದರಾಸು ಮರಿಯಪ್ಪ ಭಟ್ಟರ ಕರ್ಮಭೂಮಿ. ಅಲ್ಲಿನ ವಿಶ್ವ ವಿದ್ಯಾಲಯದ ಕನ್ನಡ ವಿಭಾಗದಲ್ಲಿ ಮೂರು ದಶಕಗಳಿಗೂ ಹೆಚ್ಚಿನ ಕಾಲ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ ಅವರು, ತಮಿಳುನಾಡಿನಲ್ಲಿ ಕನ್ನಡಕ್ಕೆ ನೆಲೆಬೆಲೆ ದೊರಕಿಸಿದವರು. ೧೯೬೦ರಲ್ಲಿ ಪ್ರಾರಂಭವಾದ ‘ಮದರಾಸು ಕನ್ನಡ ಬಳಗ’ದ ಹುಟ್ಟಿನಲ್ಲಿ ಭಟ್‌ರ ಸಲಹೆ-ಕಳಕಳಿಯಿತ್ತು .

‘ಸಂಕ್ಷಿಪ್ತ ಕನ್ನಡ ಸಾಹಿತ್ಯ ಚರಿತ್ರೆ’, ‘ಕನ್ನಡ ಸಂಸ್ಯತಿ’, ‘ಸಂತರ ಚರಿತೆ’, ’ಕೇಶಿರಾಜ’ ಭಟ್ಟರ ಕೃತಿಗಳು. `Dravidian Comparative Vocabulary’, `Tulu English Dictionary’ `A Havyaka English Dictionary’,  ಅವರ ಇಂಗ್ಲಿಷ್’ ಕೃತಿಗಳು. ಗುಣಚಂದ್ರನ ‘ಛಂದಸ್ಸಾರ’, ‘ಸಂಗೀತ ರತ್ನಾಕರ’, ಆಚಣ್ಣನ ‘ವರ್ಧಮಾನ ಪುರಾಣಂ’, ಶ್ರೀಧರಾಚಾರ್ಯನ ‘ಜಾತಕ ತಿಲಕಂ’, ರಾಜಾದಿತ್ಯನ ‘ವ್ಯವಹಾರ ಗಣಿತಂ’ ಅವರ ಸಂಪಾದಿತ ಗ್ರಂಥಗಳು.

ಕನ್ನಡದಲ್ಲಿ ಬದುಕಿದರೂ ಮರಿಯಪ್ಪ ಭಟ್ಟ ತನ್ನ ಪರಿಸರದ ತುಳು ಹಾಗೂ ಹವ್ಯಕ ಭಾಷೆಗಳ ಬೆಳವಣಿಗೆಗೂ ದುಡಿದದ್ದು ವಿಶೇಷ. ತಿರುವನಂತಪುರದ ‘ದ್ರಾವಿಡ ಭಾಷಾ ವಿಜ್ಞಾನ ಸಂಸ್ಥೆ’ಯಿಂದ ದೊರೆತ ‘ಸೋವಿಯತ್ ಫೆಲೋಶಿಪ್’ನ್ನು ತುಳು ಭಾಷೆಗೆ ಸಂಬಂಧಿಸಿದ ಅಧ್ಯಯನಕ್ಕಾಗಿಯೇ ಬಳಸಿದ್ದರು. ತುಳು ಸಂಸ್ಕೃತಿ ಬಗ್ಗೆ ಇಂಗ್ಲಿಷ್‌ನಲ್ಲಿ ಲೇಖನಗಳನ್ನು ಬರೆದರು. ತುಳು-ಹವ್ಯಕ ಭಾಷೆಗಳ ಕೆಲಸ ಕೂಡ ಕನ್ನಡ ಸಂಸ್ಕೃತಿಗೆ ಪೂರಕವಾದ ಕೆಲಸ ಎನ್ನುವುದು ಅವರ ನಂಬಿಕೆಯಾಗಿತ್ತು. ‘ದ.ಕ.ದವರು ಮಾಡಲೇಬೇಕಾದ ಕನ್ನಡ ಸಾಹಿತ್ಯ, ಭಾಷೆಗೆ ಪೂರಕವಾದ ಕೆಲಸ ತುಳು ಭಾಷಾಶಾಸ್ತ್ರ ಸಾಹಿತ್ಯಗಳ ವಿಷಯವಾದ ಅಧ್ಯಯನಗಳು’ ಎಂದು ೧೯೭೧ರಲ್ಲಿ ಕಾರ್ಕಳದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಅವರು ಹೇಳಿದ್ದರು. ಕರೆಯುವ ಹಸುವೆಂದು ಕನ್ನಡಕ್ಕೆ ಬೆನ್ನು ಮಾಡಿ ಇಂಗ್ಲಿಷ್‍ನ ಬೆನ್ನು ಬಿದ್ದಿರುವ ನಮಗೆ ಮೂರೂವರೆ ದಶಕಗಳ ಹಿಂದಿನ ಭಟ್ಟರ ಮಾತು ಅರ್ಥಹೀನ ಅನ್ನಿಸಬಹುದು. ಆದರೆ ಸಾವಧಾನದಿಂದ ಯೋಚಿಸಿದರೆ, ‘ಕನ್ನಡದ ಮೂಲಕ ಇಂಗ್ಲಿಷ್ ಗೆಲ್ಲಬೇಕು’ ಎನ್ನುವುದು ಭಟ್ಟರ ಮಾತಿನ ಭಾವವಾಗಿತ್ತು ಅನ್ನಿಸುವುದಿಲ್ಲವೇ? ಈ ದಾರಿ- ಬೇರು ಉಳಿಸಿಕೊಳ್ಳುವ, ಭವಿಷ್ಯ ಕಂಡುಕೊಳ್ಳುವ ಸವಾಲಿನಲ್ಲಿರುವ ನಮಗೆ ಮೋಕ್ಷ ಮಾರ್ಗದಂತೆ ಕಾಣುವುದಿಲ್ಲವೇ?

ಮರಿಯಪ್ಪ ಭಟ್ಟರಿಗೆ ಅವರ ಅಭಿಮಾನಿಗಳು ಅರ್ಪಿಸಿದ ಸಂಸ್ಮರಣ ಗ್ರಂಥದ ಶೀರ್ಷಿಕೆ ‘ಸಾರ್ಥಕ’. ಈ ಹೆಸರು ಅವರ ಬದುಕು-ಸಾಧನೆಗೂ ಅನ್ವರ್ಥ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹಬ್ಬಗಳು ೨
Next post ಹಬ್ಬ

ಸಣ್ಣ ಕತೆ

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…