ರಾಷ್ಟ್ರೀಯತೆಯಲ್ಲಿ ಕುರುಡಾಗದ ಕವಿ

ರಾಷ್ಟ್ರೀಯತೆಯಲ್ಲಿ ಕುರುಡಾಗದ ಕವಿ

ಅಡಿಗರು ಎಂದೆಂದಿಗೂ ಚಡಪಡಿಕೆಯ ಕವಿ. ಅವರು ತಮ್ಮ ಸಮಾಧಾನ, ತೃಪ್ತಿಗಳನ್ನು ಸದಾ ಪರೀಕ್ಷಿಸಿ ನೋಡುವ ಮನೋಭಾವದವರು. ಈ ಲೆಕ್ಕಕ್ಕೆ ಅವರು ಅಲ್ಲಮನ ಮಠದವರು! ಅರಿವಿನ ಅಲುಗಿನಲ್ಲಿ ಅನುಕ್ಷಣವೂ ಮಸೆದು ನೋಡಬೇಕು; ನಿಜವನ್ನೇ ಶೋಧಿಸಿ ಎದೆಗಿಟ್ಟುಕೊಳ್ಳಬೇಕು ಎನ್ನುವವರು. ಅಡಿಗರಲ್ಲಿ ತೀಕ್ಷ್ಣವೆನ್ನಿಸುವ ಆತ್ಮ ನಿರೀಕ್ಷಣೆಯ ಗುಣವಿದ್ದು ಅದು ನಿಜ ಅದರ ಸ್ವರೂಪವನ್ನು ತಿಳಿದುಕೊಳ್ಳುವ ಮೆಟಫಿಸಿಕಲ್ ಧೋರಣೆಗೆ ಹತ್ತಿರವಿದೆ. ಕವಿಗೆ ಆತ್ಮ ನಿರೀಕ್ಷಣೆ ತುಂಬಾ ಅಗತ್ಯವೆಂದೇ ಅಡಿಗರು ನಂಬಿದ್ದಾರೆ. ಅದು ಏಕೆ ಬೇಕೆಂದರೆ ಕವಿಯನ್ನು ಭೋಳೆತನದಿಂದ ಮತ್ತು ಹುಸಿ ಗೌರವಗಳ ಮುಸುಕನ್ನು ಅದು ತೊಡೆದು ಹಾಕುತ್ತದೆ ಎಂದು. ಆದುದರಿಂದ ಅಡಿಗರ ಕಾವ್ಯದಲ್ಲಿ ಒಂದು ಬಗೆಯ ವಿಮುಖತೆ ಕಾಣುತ್ತದೆ. ಇದನ್ನು ಅವರು ಅನುಭವಿಸುವುದರಿಂದಲೇ ಆಧ್ಯಾತ್ಮಿಕವಾದ ಎಚ್ಚರ ಮತ್ತು ಸದಾ ನಿರಚನೆಗೆ ಒಳಗಾಗುವ ಮತ್ತು ಒಳಪಡಿಸುವ ಸಮಯ ಪರೀಕ್ಷೆಗಳು ಅವರ ಮೂಲ ಧಾತುವಾಗಿ ಬಿಡುತ್ತದೆ.

ಅಡಿಗರ ಕಾವ್ಯಕ್ಕೆ ಇನ್ನೊಂದು ಸಾಧಾರಣವಾದ ಗುಣ ಎಂದರೆ ವ್ಯಷ್ಟಿ ಮತ್ತು ಸಮಷ್ಟಿಗಳು ಮೇಳವಿಸಿದ ಆತ್ಮ ಪ್ರತ್ಯಯವನ್ನು ಮುಂದಿಡುತ್ತದೆ. ಒಂದು ರೀತಿಯ ಸಾರ್ವತ್ರಿಕತೆಯನ್ನು ಗಳಿಸಿಕೊಡುವ ಈ ಗುಣ ಅಡಿಗರ ನಾನು ಮತ್ತು ನಾವು – ಎಂಬ ಶೋಧಗಳನ್ನು ವೈಯಕ್ತಿಕ ಸಾಮಾಜಿಕ ಎಂದೆಲ್ಲಾ ವಿಭಜಿಸಲು ಅವಕಾಶ ನೀಡುವುದಿಲ್ಲ.

ಅಡಿಗರನ್ನು ರಾಷ್ಟ್ರೀಯತೆಯ ಸಂದರ್‍ಭದಲ್ಲಿಟ್ಟು ನೋಡುವಾಗ ಒಂದು ಅಂತಿಮ ತೀರ್‍ಪಿನ ಆಧಾರದ ಮೇಲೆಯೇ ಅವರನ್ನು ವಿಮರ್‍ಶೆ ಮಾಡಲಾಗುತ್ತದೆ. ಅದೆಂದರೆ ಅಡಿಗರು ವೈದಿಕವಾದ ಪ್ರತಿಮೆಗಳನ್ನು ಉಪಯೋಗಿಸಿದರು; ಜನಸಂಘದ ಚುನಾವಣೆಗೆ ನಿಂತರು ಎಂಬ ಕಾರಣಗಳನ್ನು ಒಡ್ಡುತ್ತಾ ಅವರನ್ನು ರಾಷ್ಟ್ರೀಯ ಪುನರುತ್ಥಾನವಾದಿಗಳ ಶುದ್ಧ ಹಿಂದೂ ರಾಷ್ಟ್ರದ ಕಲ್ಪನೆಯುಳ್ಳವರಾಗಿ ನೋಡುವುದು. ಅಡಿಗರು ವೈದಿಕ ಹಿನ್ನೆಲೆಯ ಪ್ರತಿಮೆಗಳನ್ನು ಬಳಸಿದ್ದು ದಿಟವೇ. ಆದರೆ ಅದನ್ನು ಅವರು ಆತ್ಯಂತಿಕವಾಗಿ ಬಳಸಿದರೆ ಎಂಬುದನ್ನು ಪರಿಶೀಲಿಸಲು ಅವಕಾಶವಿದೆ. ಅಡಿಗರನ್ನು ಓದುವಾಗ ಆಧುನಿಕತೆಯ ಪರಿಭಾಷೆಯಲ್ಲಿ ಚರ್ರ್‍ಎ ಮಾಡುವುದು ಸಾಮಾನ್ಯ. ನವ್ಯ ಎಂದರೆ ಆಧುನಿಕತೆ ಎನ್ನುವ ಸಮೀಕರಣದಿಂದಾಗಿ ಅಡಿಗರನ್ನು ಸೀಮಿತಗೊಳಿಸಲಾಯಿತೆ ಎನ್ನುವ ಪ್ರಶ್ನೆ ಇಲ್ಲಿ ಹುಟ್ಟುತ್ತದೆ. ಅಡಿಗರನ್ನು ರಾಷ್ಟ್ರೀಯತೆಯ ಸಂದರ್‍ಭದಲ್ಲಿ ವಿವರಿಸಿಕೊಳ್ಳಬೇಕಾದ ಅಗತ್ಯವನ್ನು ಮರು ಪರಿಶೀಲಿಸಿದರೆ ಒಂದು ಹೊರಳು ಕಾಣುತ್ತದೆ. ಅಡಿಗರಲ್ಲಿ ಇರುವ ಸ್ವಾತಂತ್ರ್ಯದ ಕುರಿತಾದ ಪದ್ಯಗಳನ್ನು ಒಮ್ಮೆ ಗಮನಿಸಿದರೆ ಅವರು ಒಂದು ನ್ಯಾಷನಲ್ ಅಲಿಗರಿಯನ್ನು ಸೃಷ್ಟಿಸುತ್ತಿದ್ದ ಸಂದರ್‍ಭವನ್ನು ಅವರ ಕವನಗಳು ಹೇಗೆ ನಿರಚನೆ ಮಾಡುತ್ತವೆ ಎನ್ನುವುದು ಕುತೂಹಲಕಾರಿಯಾಗಿದೆ. ರಾಷ್ಟ್ರೀಯತೆಯ ಮೌಲ್ಯಗಳನ್ನು ತಮ್ಮ ಶ್ರದ್ಧಾಕೇಂದ್ರವನ್ನಾಗಿ ಮಾಡಿಕೊಂಡು ಅತ್ಯುತ್ಸಾಹದಿಂದ ರಾಷ್ಟ್ರ ರಚನೆಗೆ ಪ್ರತಿಕ್ರಿಯಿಸಿದ ಏರುಗಾಲದಲ್ಲೇ ಅಡಿಗರು ಆತ್ಮ ನಿರೀಕ್ಷಣೆಗೆ ಹೊರಳಿಕೊಂಡರು. ರಾಷ್ಟ್ರೀಯತೆಯ ಪ್ಯಾರಾಡಿಮ್‌ಗಳನ್ನೇ ಪುನಾ ಪರಿಶೀಲಿಸಬೇಕಾದ ತುರ್‍ತನ್ನು ಭಾವಿಸಿದರು.

ಸ್ವಾತಂತ್ರ್ಯ ಸಂಗ್ರಾಮ ಎಂದೇ ಹೆಸರಾದ ಯುದ್ಧವು ತನ್ನ ಶತ್ರುವಾದ ವಸಾಹತುಶಾಹಿಯನ್ನು ಮಣಿಸಿದೆಯಾದರೂ ಯುದ್ಧವಿನ್ನೂ ಮುಗಿದಿಲ್ಲ. ಅದು ಆಗಷ್ಟೇ ಆರಂಭವಾಗಿದೆ. ಏಕೆಂದರೆ ವಸಾಹತುಶಾಹಿ ಮುಗಿದರೂ ಅದರ ಸಂರಚನೆಗಳು ಹಾಗೆಯೇ ಉಳಿದು ಕೊಳ್ಳುತ್ತವೆ. ಇವುಗಳ ಮೇಲೆ ಬೆಳೆವ ಹೊಸ ಸಮಾಜ ಪುನಃ ಇವನ್ನೇ ಆಧರಿಸಿ ಬೆಳೆಯ ಬೇಕಾಗುತ್ತದೆ ಎನ್ನುವ ವಿಷಾದ ಅಡಿಗರ ಅನೇಕ ಕವಿತೆಗಳಲ್ಲಿ ಇಣುಕುತ್ತದೆ. ಇಂದಿನ ವಸಾಹತೋತ್ತರ ಚಿಂತಕರು ವ್ಯಕ್ತ ಪಡಿಸುವ ಅನೇಕ ಚಿಂತನೆಗಳು ಆಗಲೇ ಅಡಿಗರಲ್ಲಿ ಮೈದಾಳಿದ್ದವು ಎನ್ನುವುದು ವಿಶೇಷ. ನಿರ್‍ವಸಾಹತೀಕರಣ ಎನ್ನುವುದು ರಾಜಕೀಯ ಹಸ್ತಾಂತರದೊಂದಿಗೆ ಮುಗಿಯುವುದಲ್ಲ. ವಾಸ್ತವವಾಗಿ ಆ ಪ್ರಕ್ರಿಯೆ ಆರಂಭವಾಗುವುದೇ ಅಲ್ಲಿಂದ ವಸಾಹತೀಕರಣಕ್ಕೆ ಒಳಗಾದ ದೇಶಿಗರು ವಸಾಹತು ಮಾದರಿಯ ದಬ್ಬಾಳಿಕೆಯನ್ನೇ ಮೈಗೂಡಿಸಿಕೊಂಡು ಹೊಸ ವಸಾಹತೀಕರಣಕ್ಕೆ ಬುನಾದಿ ಹಾಕುತ್ತಾರೆ. ಈ ಕ್ರಿಯೆಯು ಪುರಾವೆಗಳೇ ಇಲ್ಲದ ಒಳಗಾಯಗಳು. ಇಷ್ಟನ್ನು ಕಲ್ಪಿಸದೆ ಸ್ವಾತಂತ್ರ್ಯವನ್ನು ಮಾತ್ರ ಆಚರಿಸುವುದು ಅನರ್‍ಥವಾದೀತು ಎಂಬ ಎಚ್ಚರಿಕೆ ಇಲ್ಲಿ ಹೊಳೆಯುತ್ತದೆ. ಅಲ್ಲದೆ ವಸಾಹತುಶಾಹಿಯು ನವವಸಾಹತೀಕರಣಕ್ಕೆ, ಸಾಮ್ರಾಜ್ಯಶಾಹಿಯು ನವಸಾಮ್ರಾಜ್ಯಶಾಹಿಗೆ ದಾರಿ ಮಾಡಿಕೊಡುವ ಸರಪಳಿ ದುರಂತ ಸ್ವಾತಂತ್ರ್ಯದ ಕಾಲದಲ್ಲೇ ಅಡಿಗರಿಗೆ ವಿಷಾದವನ್ನುಂಟು ಮಾಡಿದೆ.

ಈ ನಡುವೆ ಉಪರಾಷ್ಟ್ರೀಯತೆಯ ಪ್ರಶ್ನೆಗಳು ಅಡಿಗರನ್ನು ಕಾಡದೇ ವಸಾಹತೋತ್ತರ ಸಮಾಜವನ್ನು ಮುಂದಿಟ್ಟುಕೊಂಡೇ ಕೆಲವು ಭಿನ್ನ ಸಮುದಾಯಗಳನ್ನು ಮುಖಾಮುಖಿಯಾಗುತ್ತಾರೆ. ಆದ್ದರಿಂದಲೇ ಅಂಬೇಡ್ಕರ್ ಅವರ ಮೇಲೆ ಬಂದ ಪದ್ಯಗಳು ಆತ್ಮಸಾಕ್ಷಿಯನ್ನು ಪರೀಕ್ಷಿಸಿಕೊಳ್ಳುವಂತಿವೆ.

ಸ್ವಾತಂತ್ರೋತ್ತರ ಕಾಲದಲ್ಲಿ ತಮ್ಮದನ್ನು ಅನ್ಯವನ್ನು ಪರೀಕ್ಷಿಸಿಕೊಳ್ಳುವ ಸಮಯ. ಅದನ್ನು ಅಡಿಗರ ಪದ್ಯಗಳು ಚೆನ್ನಾಗಿಯೇ ಮಾಡುತ್ತವೆ. ಈ ನಿಜದ ನೆಲೆಯನ್ನು ಅರಿಯ ಹೊರಡುವ ಕವಿಗೆ ಸೋಗು ಶತ್ರು. ಏಕೆಂದರೆ ಅರಿವಿನ ಒಳಗಣ್ಣನ್ನು ಮುಚ್ಚಿಕೊಂಡು ಬಲವನ್ನೆ ನಂಬಿದಂತೆ ಕಾಣುವ(‘ಬಲವೆ ನ್ಯಾಯವೇನೊ’) ನಡೆಗಳು ಆಧ್ಯಾತ್ಮಿಕ ಸೋಲಷ್ಟೆ ಅಲ್ಲ ರಾಜಕೀಯವಾದ ಸೋಲು ಕೂಡ ‘ಯುದ್ಧ ಮುಗಿಯುವುದಿಲ್ಲ’ ಎಂಬ ಅವರ ಪದ್ಯ ಭಾವತರಂಗದಲ್ಲಿ ಬರೆದಾಗ ಅಡಿಗರು ಎತ್ತಿಕೊಳ್ಳುವ ಪ್ರಶ್ನೆಯನ್ನು ಅವರೇ ಬರೆದ ಗಾಂಧಿ ಅಂಬೇಡ್ಕರ್ ಮೇಲಿನ ಪದ್ಯಗಳು ಹೋರಾಟದಲ್ಲಿ ಕೆಡುಕಿನ ಕಷಾಯಗಳನ್ನೇ ತೀವ್ರ ವಿಷಾದದಿಂದ ಧ್ಯಾನಿಸುವಂತಿವೆ.

ಅಡಿಗರ ಕಾವ್ಯವು ನವ್ಯಕಾಲದ ಸಂವೇದನೆಯನ್ನೇ ತಿದ್ದಿತು. ‘ಒಂದು ಜನಾಂಗದ ಕಣ್ಣು ತೆರೆಸಿದ ಕವಿ’ ಎಂಬ ಹೆಗ್ಗಳಿಕೆಗೆ ಪಾತ್ರರಾದ ಈ ಕವಿ ಎತ್ತಿಕೊಂಡ ರಾಷ್ಟ್ರೀಯತೆಯ ಪ್ರಶ್ನೆ ಹಿನ್ನೆಲೆಗೆ ಸರಿದು ಅಸ್ತಿತ್ವವಾದೀ ನೆಲೆಯ ಪದ್ಯಗಳಿಗೆ ಹೆಚ್ಚಿನ ಆದ್ಯತೆ ಸಿಕ್ಕಿತು. ನವೋದಯದ ಚರ್‍ವಿತ ಚರ್‍ವಣ ರಾಷ್ಟ್ರೀಯತೆಯ ಸೆಂಟಿಮೆಂಟು, ಭಾವಾವೇಶ ನವ್ಯರನ್ನು ಆ ಪ್ರಶ್ನೆಯಿಂದ ದೂರ ಉಳಿಯುವಂತೆ ಮಾಡಿರಬೇಕು. ಆದರೆ ಅಡಿಗರಂತಹ ಕವಿ ರಾಷ್ಟ್ರೀಯತೆಯ ಪ್ರಶ್ನೆಯನ್ನು ಇನ್ನಷ್ಟು ಮುಂದುವರೆಸಿದರಲ್ಲದೆ ವಸಾಹತೋತ್ತರ ದುಃಸ್ವಪ್ನಗಳನ್ನೂ ಸರ್‍ವಾಧಿಕಾರ ಸ್ವದೇಶಿಯರಲ್ಲೇ ತಲೆಯೆತ್ತುತಿರುವುದನ್ನೂ ವ್ಯಂಗ್ಯ, ವಿಡಂಬನೆಗಳ ಮೂಲಕ ಎತ್ತಿ ತೋರಿಸಿದರು.

ಅದೇನೇ ಇರಲಿ ಅಡಿಗರ ಸಂಕಲನಗಳನ್ನು ಅನುಕ್ರಮವಾಗಿ ಗಮನಿಸಿದರೆ ಗಾಂಧಿ ಮೇಲೆ ಅವರು ಸಾಕಷ್ಟು ಕವಿತೆಗಳನ್ನು ಬರೆದಿದ್ದಾರೆ. ಈ ಪದ್ಯಗಳನ್ನು ಒಂದು ಅನುಕ್ರಮದಲ್ಲಿ ಓದಿದರೆ ಅಡಿಗರ ರಾಷ್ಟ್ರೀಯತೆಯ ವ್ಯಾಖ್ಯಾನಕ್ಕೆ ಹೊಸ ಆಯಾಮ ಸಿಗುತ್ತದೆಂದು ನನ್ನ ನಂಬಿಕೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯೆಂಡ ಕುಡಿಯೋರ್ ನಾವು
Next post ಬೆಳಗು

ಸಣ್ಣ ಕತೆ

 • ಲೋಕೋಪಕಾರ!

  ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

 • ಗಿಣಿಯ ಸಾಕ್ಷಿ

  ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

 • ಮೌನರಾಗ

  ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

 • ಗೋಪಿ

  ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

 • ಹೃದಯ ವೀಣೆ ಮಿಡಿಯೆ….

  ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

cheap jordans|wholesale air max|wholesale jordans|wholesale jewelry|wholesale jerseys