– ಪಲ್ಲವಿ –

ಕರೆಯಿತು ಜಾಗೃತ ವಿಹಗಕುಲ….
ನೆರೆಯಿತು ರಾಗದಿ ಗಗನತಲ !


ಇಳೆಯನು ಬಳಸಿದ ತಾಮಸ ಜಾಲ….
ಕಳೆಯಲು ಮೂಡಿತು ಕಾಂತಿಯ ಮೂಲ !
ಕಳಕಳ ನಗುತಿದೆ ಅರಳಿದ ಕಮಲ….
ಅಳಿವೃಂದವು ಗುಂಜಾರವಲೋಲ-
ಕರೆಯಿತು ಜಾಗೃತ ವಿಹಗಕುಲ!


ಮಿಸುನಿರಸದ ತೊರೆ ಮೀರಿತು ತೀರ,
ಬಾನಿಂದಿಳಿಯಿತು ಭುವನಕೆ ಪೂರ;
ಕಣ್ಣೆದೆ ಸೆಳೆವುದು ಶುಭಶೃಂಗಾರ
ಜೀವನ ಕಾವ್ಯದ ನವರಸಸಾರ….
ಕರೆಯಿತು ಜಾಗೃತ ವಿಹಗಕುಲ !


ಎಲ್ಲಿ ಅಡಗಿತೋ ನಿದ್ರೆಯ ಭೂತ !
ಎಲ್ಲೆಡೆ ಕಾಣ್ಬಳು ಪೃಥಿವಿ ಜಾಗೃತ –
ಉಲ್ಲಸ ಹರಡಿದೆ ಉದಯದ ಗೀತ –
ಮೆಲ್ಲಗೆ ಮೊಗದೋರಿದ ದಿನನಾಧ !
ಕರೆಯಿತು ಜಾಗೃತ ವಿಹಗಕುಲ !
*****