ಹೇಗೆ ಸಹಿಸಲೇ ಇದರಾಟ
ತಾಳಲಾರೆ ತುಂಟನ ಕಾಟ
ಸಣ್ಣದಾದರೂ ಶುದ್ಧ ಕೋತಿ
ಸಾಕಮ್ಮ ಇದ ಸಾಕಾಟ!
ನೂರು ಇದ್ದರೂ ಸಾಲದು ಬಟ್ಟೆ
ನಿಮಿಷ ನಿಮಿಷಕೂ ಒದ್ದೆ!
ತೂಗೀ ತೂಗೀ ತೂಕಡಿಸುತ್ತಿರೆ
ನಗುವುದು ಬೆಣ್ಣೇ ಮುದ್ದೆ!
ಕೇಕೆ ಹೊಡೆವುದು ಕೋಗಿಲೆಯಂತೆ
ಗರ್ಜನೆಯಂತೂ ಹುಲಿಯೆ;
ಕಣ್ಣೀರಿಲ್ಲದೆ ಅಳುವುದು ಸುಳ್ಳೇ,
ಉಪಾಯದಲ್ಲಿದು ನರಿಯೇ!
ರಾಮನೆ ಮಗನಾಗಲಿ ಎಂದಿದ್ದೆ
ಬಂದುದೊ ರಾಮನ ಬಂಟ!
ಅಮ್ಮನೆ ಬೇಕು ಇಡಿದಿನ ಜೊತೆಗೆ,
ಅಪ್ಪನ ಥರವೇ ಇದರಾಟ!
*****
ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.