“ಅಭಿ, ಏನೋ ಮಾತಾಡಬೇಕು ಅಂತಾ ಕರ್ಕೊಂಡು ಬಂದು, ಸುಮ್ನೆ ಕೂತ್ಕೊಂಡುಬಿಟ್ಟಿದ್ದೀರಲ್ಲಾ” ಅವನ ಒದ್ದಾಟ ನೋಡಲಾರದೆ ಅನು ಒತ್ತಾಯಿಸಿದಳು.
“ಅನು… ಅದು… ಅದು…” ಅವಳ ಮುಖ ನೋಡುತ್ತಾ, ಆ ಕಣ್ಣುಗಳಲ್ಲಿ ಯಾವ ಅರ್ಥವನ್ನೂ ಹುಡುಕಲಾರದೆ, ತನ್ನ ಪ್ರಯತ್ನದಲ್ಲಿ ಸೋಲೊಪ್ಟಿಕೊಳ್ಳುವಂತೆ ಮಾತು ನಿಲ್ಲಿಸಿಬಿಟ್ಟ.
“ಅಭಿ, ಪ್ಲೀಸ್ ಅದೇನು ಹೇಳಿ.”
ಉಗುಳು ನುಂಗುತ್ತಾ ಮಾತಿಗಾಗಿ ತಡಕಾಡಿದ. ಹುಂ ಹೂಂ ಅವನ ಬಾಯಿಂದ ಸ್ವರ ಹೂರಡಲೇ ಇಲ್ಲ.
ಅನು ಸಾಮಾನ್ಯವಾದ ಹುಡುಗಿಯಲ್ಲ. ಇಂತಹ ವಿಷಯಗಳನ್ನೆಲ್ಲ ಹೇಗೆ ಹೇಳಲಿ. ಆಳವಾದ ಸಮುದ್ರದ ಶಾಂತತೆ ಇರುವ ಆ ಕಣ್ಣುಗಳು ಒಮ್ಮೆಯಾದರೂ ಭೋರ್ಗರೆದದ್ದನ್ನು ಕಂಡೇ ಇಲ್ಲದ ಅಭಿ, ಅವಳ ಗಂಭೀರತೆಗೆ ಹೆದರಿದ.
ವಾತಾವರಣ ತಿಳಿಗೊಳಿಸಿ ಅಭಿಯನ್ನು ಸಹಜತೆಗೆ ತಿರುಗಿಸಲು ಅನು “ಅಭಿ ನೀವು ಇಷ್ಟೊಂದು ಅಂಜುಕುಳಿ ಅಂತ ಅಂದ್ಕೊಂಡಿರಲಿಲ್ಲ. ನಮ್ಮ ಅಭಿ ಕೆಚ್ಚೆದೆಯ ವೀರ ಅಂದುಕೊಂಡಿದ್ದೆ . ಛೇ ಛೇ ನನ್ನ ಅನಿಸಿಕೆಗಳಲ್ಲಾ ಸುಳ್ಳಾಗಿ ಹೋಯ್ತು” ನಯವಾಗಿ ರೇಗಿಸುತ್ತಾ ಛೇಡಿಸಿದಳು.
“ಅನು ಹ್ಯಾಗೆ ಹೇಳಬೇಕು ಅಂತಾ ತಿಳಿತಾ ಇಲ್ಲ. ನಾ ಹೇಳಿಬಿಟ್ರೆ ನೀವೆಲ್ಲಿ ತಪ್ಪಾರ್ಥ ಮಾಡಿಕೊಳ್ಳುತ್ತೀರೋ ಅಂತಾ ಭಯ.”
“ಭಯ ಪಡೋಕೆ ನಾನೇನು ಹುಲಿಯಾ, ಲುಕ್ ಅಭಿ, ನೀವೇನು ಹೇಳಬೇಕು ಅಂತಾ ಇದ್ದೀರೋ ಅದನ್ನು ನಾನು ಹೇಳಲಾ” ತುಂಟತನದಿಂದ ಕೇಳಿದಳು.
“ನೀವು ಹೇಳ್ತೀರಾ” ಸೋಜಿಗದಿಂದ ನುಡಿದ.
“ಹೌದು ನಾನೇ ಹೇಳ್ತೀನಿ ಕೇಳಿ, ಅನು ನಿಮ್ಮನ್ನ ಕಂಡ್ರೆ ನನಗೆ ತುಂಬಾ ಇಷ್ಟ. ನಿಮ್ಮನ್ನ ಮದ್ವೆ ಮಾಡ್ಕೊಬೇಕು ಅಂತಾ ಇದ್ದೀನಿ, ಇದೇ ಅಲ್ವ ನೀವು ಹೇಳೋಕೆ ಹೊರಟಿರುವುದು. ಅದನ್ನ ಹೇಳೋಕೆ ಇಷ್ಟೊಂದು ಹೆದರಿಕೆನಾ. ಇವತ್ತು ಹೈಸ್ಕೂಲ್ ಓದೋ ಹುಡುಗನೇ ತನ್ನ ಗೆಳತಿಗೆ ಐ ಲವ್ ಯೂ ಅಂತಾ ಒಂದೇ ದಿನದ ಪರಿಚಯದಲ್ಲಿ ಹೇಳಿಬಿಡ್ತಾನೆ. ಆದ್ರೆ ನೀವು” ಪಕ ಪಕನೆ ನಕ್ಕಳು.
ಸಡಗರ, ಸಂತೋಷ, ನಿಶ್ಚಿಂತೆ, ನಿರೀಕ್ಷೆ ಎಲ್ಲಾ ಭಾವನೆಗಳೂ ಒಟ್ಟಿಗೇ ಮೇಳೈಸಿ ಅಭಿಯ ಮುಖ ಸಾವಿರ ಕ್ಯಾಂಡಲಿನ ಬಲ್ಬಿನಂತೆ ಮಿನುಗಿತು.
ಅವನ ಮೊಗದ ಪ್ರಖರತೆ ಕಂಡು ಅನು ಕೊಂಚ ಗಂಭೀರ ತಾಳಿದಳು.
“ಅಭಿ, ನೀವು ನನ್ನ ಇಷ್ಟಪಟ್ಟಿರುವುದಾಗಲಿ, ಮದ್ವೆ ಆಗಬೇಕು ಅನ್ನೋ ನಿರ್ಧಾರ ಮಾಡಿರುವುದಾಗಲಿ ತಪ್ಪಲ್ಲ. ಇದು ಸಹಜ. ಆದ್ರೆ, ಈ ಭಾವನೆಗಳು ಏಕಮುಖವಾಗಬಾರದು ಅಲ್ವಾ.”
“ಅಂದ್ರೆ” ತಟ್ಟನೆ ಕಳಾಹೀನವಾದವು ಕಣ್ಣುಗಳು.
“ನಿಮಗೆ ಅನಿಸಿದ ಭಾವನೆಗಳು ನನಗೂ ಅನ್ನಿಸಿದಾಗ ಮಾತ್ರ ತಾನೇ ಈ ಪ್ರೇಮ, ಮದುವೆ ಅನ್ನೋದು ಸಾಧ್ಯ” ಅವನತ್ತ ನೋಡುವ ಧೈರ್ಯ ಸಾಲದೆ ಅನು ಎತ್ತಲೋ ನೋಡುತ್ತಾ,
“ಅಭಿ, ಮದುವೆ ಜನ್ಮ ಜನ್ಯಾಂತರದ ಅನುಬಂಧ ಅನ್ನುತ್ತಾರೆ. ಆದ್ರೆ ಈ ಬಗ್ಗೆ ನನಗ್ಯಾವ ನಂಬಿಕೆನೂ ಇಲ್ಲ. ಮೊದಲನೆಯದಾಗಿ ನನಗೆ ಈ ವ್ಯವಸ್ಥೆ ಬಗ್ಗೆಯೇ ಉದಾಸೀನ. ಗಂಡಸರು ಅಂದರೆ ತಾತ್ಸಾರ, ಜುಗುಪ್ಸೆ. ಯಾಕೆ ಅಂತಾ ಕೇಳಬೇಡಿ. ಅದನ್ನೆಲ್ಲ ಹೇಳೋ ಮನಸ್ಥಿತಿಯಲ್ಲಿ ನಾನಿಲ್ಲ. ನೀವೇ ಅಲ್ಲಾ ಪ್ರಪಂಚದ ಯಾವ ಗಂಡು ಬಂದ್ರೂ ಕೂಡ ಹೃದಯದಲ್ಲಿ ಭಾವನೆಗಳ ಅಲೆ ಏಳುವುದಿಲ್ಲ. ಪ್ರಕೃತಿಗೆ ಸಹಜವಾದ ಬಯಕೆ ಮಧುರ ಭಾವ ಇವಾವುದೂ ನನ್ನಲ್ಲಿಲ್ಲ. ನಾನು ಒಂದು ತರ ಫ್ರಿಜಿಡ್. ನನ್ನಂತ ಹೆಣ್ಣು ಯಾರನ್ನೂ ಮದುವೆ ಆಗಬಾರದು, ನನ್ನ ಭಾವನೆಗಳನ್ನು ಕದಲಿಸೊ ಗಂಡು ಇದುವರೆಗೂ ನನಗೆ ಸಿಕ್ಕಿಲ್ಲ. ಮುಂದೆ ಕೂಡ ಸಿಗಲಾರರು” ನಿಲ್ಲಿಸಿದಳು.
“ನನ್ನನ್ನು ಮರೆತುಬಿಡಿ. ನಿಮ್ಮ ದೃಷ್ಟಿನಾ ಬದಲಾಯಿಸಿಕೊಳ್ಳಿ. ನಿಮಗೊಂದು ಸಲಹೆ ಕೊಡಬಲ್ಲೆ. ಸುಶ್ಮಿತಾ ನಿಮ್ಮನ್ನ ಮನಸಾರೆ ಇಷ್ಟಪಡ್ತಾ ಇದ್ದಾಳೆ. ನಿಮ್ಮ ಒಲವು ನನ್ನ ಕಡೆ ಅನ್ನೋದು ಗೊತ್ತಿದ್ರೂ ಮೌನವಾಗಿ ಆರಾಧಿಸುತ್ತಿದ್ದಾಳೆ. ಜಾಣೆ, ನನಗಿಂತ ಚೆನ್ನಾಗಿದ್ದಾಳೆ. ನಿಮಗೆ ಒಳ್ಳೆ ಸಂಗಾತಿ ಆಗಬಲ್ಲಳು. ನೀವು ಈಗ ಹೋಗಿ ಕೇಳಿದ್ರೂ, ನೀವು ನನ್ನನ್ನ ಬಯಸಿದ್ರಿ ಅಂತಾ ಗೊತ್ತಿದ್ರೂ ನಿಮ್ಮನ್ನ ಸ್ವೀಕರಿಸೋ ದೊಡ್ಡತನ ಅವಳಲ್ಲಿದೆ. ಪ್ಲೀಸ್ ಅಭಿ ನಿಮ್ಮ ಒಲವನ್ನು ಅವಳೆಡೆ ತಿರುಗಿಸಿ. ನಾನು ನಿಮ್ಮಿಬ್ಬರ ಗೆಳತಿಯಾಗಿ ಉಳಿಯೋಕೆ ಬಯಸುತ್ತೇನೆ” ದೀರ್ಘವಾಗಿ ನುಡಿದು ಅವನೆಡೆ ನೋಟ ಹರಿಸಿದಳು.
ನಿರಾಶೆ ಮೆತ್ತಿದ ಮುಖ ನೋಡಲಾಗಲಿಲ್ಲ ಅವಳಿಗೆ.
“ಹೋಗ್ಲಿ ಬಿಡಿ, ನಂಗೆ ಅದೃಷ್ಟವಿಲ್ಲ. ಆದ್ರೆ ಆ ಆದೃಷ್ಟನ ಬೇರೆ ಯಾರಿಗಾದರೂ ಕೊಡೋ ಪ್ರಯತ್ನ ಮಾಡಿ. ನಿಮ್ಮ ಬದುಕು ಕಾಡ ಬೆಳದಿಂಗಳಾಗಬಾರದು. ನಂದನವನವಾಗಬೇಕು. ಅದೇ ಈ ಗೆಳೆಯ ಕೇಳೊ ಉಡುಗೊರೆ ನಿಮ್ಮಿಂದ” ಕಣ್ತುಂಬಿದ ಹನಿಯನ್ನು ಎಡಗೈಲಿ ಒರೆಸಿ ನಗಲು ಯತ್ನಿಸಿದ.
“ನಾನು ಸುಶ್ಮಿತಳ ಬಗ್ಗೆ ತಿಳಿಸಿದ್ದರೆ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಲೇ ಇಲ್ಲವಲ್ಲ ಅಭಿ.”
ಮೌನವಾಗಿ ಕೆಲಹೊತ್ತು ಹಾಗೆಯೇ ಕುಳಿತುಬಿಟ್ಟ. ಹೃದಯದ ತುಂಬಾ ಮನಸ್ಸಿನ ತುಂಬಾ ಅನುವೇ ತುಂಬಿದ್ದಾಳೆ. ಈಗ ಅವಳನ್ನು ಕಿತ್ತು ಹಾಕಿ ಸುಶ್ಮಿತಳನ್ನು ಪ್ರತಿಷ್ಠಾಪಿಸುವುದು ಸುಲಭವೇ.
“ಅಭಿ, ನಿಮ್ಮ ಭಾವನೆ ನಂಗೆ ಅರ್ಥವಾಗುತ್ತೆ. ಆದ್ರೆ ಹಿಂದಿನಿಂದಲೂ ಒಂದು ಮಾತು ಪ್ರತೀತಿಯಲ್ಲಿದೆ ಗೊತ್ತಾ ಅಭಿ. ಯಾರೇ ಆದ್ರೂ ನಾವು ಪ್ರೀತಿಸಿದವರ ಜೊತೆಗಿಂತ, ತಮ್ಮನ್ನು ಪ್ರೀತಿಸಿದವರ ಜೊತೆ ಸುಖವಾಗಿರಬಲ್ಲರಂತೆ. ಸುಶ್ಮಿತಾ ನಿಮ್ಮನ್ನು ತುಂಬಾ ಪ್ರೀತಿಸ್ತಾ ಇದ್ದಾಳೆ. ಕೈಗೆ ಎಟಕುವುದಿಲ್ಲ ಅನ್ನೋ ಭಾವನೆಯಿಂದ ನಿರಾಶಳಾಗಿದ್ದಾಳೆ. ಅವಳಂತಹ ಹುಡುಗಿಯ ಪ್ರೇಮ ನಿಮ್ಗೆ ಸಿಕ್ತಾ ಇರೋದು ನಿಮ್ಮ ಪುಣ್ಯ. ಹೂಂ ಅನ್ನಿ ಅಭಿ. ಒಂದೆರಡು ದಿನ ಅಷ್ಟೆ. ಈ ಅನುವಿನ ಆಕರ್ಷಣೆಯಿಂದ ಹೊರ ಬಂದುಬಿಡ್ತಿರಾ. ಸುಶ್ಮಿತಾಳಂತ ಹುಡುಗಿ ಸಿಗೋದು ಅದೃಷ್ಟ. ನೀವು ಹೀಗೆ ನಿಧಾನ ಮಾಡಿದ್ರೆ ಬೇರೆಯವರ ಪಾಲಾಗಿಬಿಡ್ತಾಳೆ” ಅಭಿಯ ಮನಸ್ಸಿಗೆ ನಾಟುವಂತೆ.
ಅಭಿಯ ಮನಸ್ಸಿನಲ್ಲಿ ಯೋಚನೆಗಳ ಮಂಥನ. ಅನು ಖಡಾಖಂಡಿತವಾಗಿ ತನ್ನ ಒಲವನ್ನು ಒದ್ದುಬಿಟ್ಟಿದ್ದಾಳೆ. ನಿರೀಕ್ಷೆಯ ಎಳೆಗಳನ್ನು ತಾನು ಹಿಡಿದಿಡುವಂತಿಲ್ಲ. ಅನು ತನ್ನ ಪಾಲಿಗೆ ಮುಗಿದ ಅಧ್ಯಾಯ. ಸುಶ್ಮಿತಾ ತನ್ನ ಮುಂದೆ ಆರಂಭವಾಗಬೇಕಿರುವ ಅಧ್ಯಾಯ. ಯಾರನ್ನಾದರೂ ತನ್ನ ಬಾಳಿನಲ್ಲಿ ಪ್ರವೇಶಿಸಲು ಅನುವು ಮಾಡಿಕೊಡಲೇ ಬೇಕು. ಅದು ಅನುವಿನಾಸೆಯಂತೆಯೇ ಆದರೇನು ಅಡ್ಡಿ. ಸುಶ್ಮಿತಾ ಕೂಡ ತನ್ನ ಗೆಳೆತಿಯೇ. ಗೆಳೆತನವನ್ನು ವೈವಾಹಿಕ ಬದುಕಿನಲ್ಲಿ ತಿರುಗಿಸುವುದೇ ವಾಸ್ತವವಲ್ಲವೇ, ಚೆನ್ನಾಗಿ ಯೋಚಿಸಿದ.
“ನಿಮ್ಮಿಷ್ಟ, ಅನು. ನಿಮ್ಮಾಸೆ ನಿರಾಕರಿಸುವ ಧೈರ್ಯ ನನಗಿಲ್ಲ. ಆದ್ರೆ ಸುಶ್ಮಿತಳನ್ನು ಕೇಳುವ ಜವಾಬ್ದಾರಿ ನಿಮ್ಮದೇ.” ಎಲ್ಲಾ ಜವಾಬ್ದಾರಿಯನ್ನು ಅನುವಿನ ಮೇಲೆ ಹೊರಿಸಿ ತನಗಾದ ನಿರಾಶೆಯನ್ನು ಹತ್ತಿಕ್ಕುವಲ್ಲಿ ಸಫಲನಾದ.
“ಸುಶ್ಮಿತಾ, ಒಂದು ಗುಡ್ ನ್ಯೂಸ್. ಗೆಸ್ ಮಾಡು ನೋಡೋಣ” ಮಧ್ಯಾಹ್ನ ಊಟಕ್ಕೆ ಕುಳಿತಾಗ ಅನು ಸುಶ್ಮಿತಾಳಿಗೆ ಕೇಳಿದಳು.
“ಗುಡ್‌ನ್ಯೂಸಾ, ಏನಪ್ಪ ಅದು. ಲಾಟರಿ ಹೊಡಿತಾ. ಉಹುಂ. ನೀನು ಲಾಟರಿ ಟಿಕೇಟನ್ನು ತೆಗೆದುಕೊಳ್ಳಲ್ಲ. ಫಾರಿನ್‌ಗೆ ಹೋಗೋ ಛಾನ್ಸ್ ಸಿಕ್ತಾ ಅದೂ ಅಲ್ಲ. ನಿಮ್ಮಮ್ಮನ ಬಿಟ್ಟು ನೀನು ಹೋಗಲ್ಲ. ಮತ್ತೆ ಏನಿರಬಹುದು. ಸೋತೆ ಹೇಳಿ ಬಿಡಮ್ಮ” ಸೋಲೊಪ್ಟಿಕೊಂಡು ಬಿಟ್ಟಳು.
“ಆಹಾ ಹೇಳಿ ಬಿಡ್ತೀನಾ, ಸಸ್ಪೆನ್ಸ್. ಸಂಜೆವರೆಗೂ ಯೋಚ್ನೆ ಮಾಡು. ಅಲ್ಲೀವರೆಗೂ ಟೈಂ ಕೊಡ್ತಿನಿ. ಸಂಜೆ ಹೇಳ್ತೀನಿ.”
“ಲೇ ಬೇಡಾ ಕಣೆ, ಅಷ್ಟು ಹೊತ್ತು ಕಾಯೋಕೆ ಆಗಲ್ಲ. ಪ್ಲೀಸ್ ಹೇಳಮ್ಮ.”
“ಉಹೂಂ. ನೀನು ಎಷ್ಟೇ ಬೇಡಿಕೊಂಡರೂ ಹೇಳಲ್ಲ” ಹುಡುಗಾಟವಾಡಿದಳು.
ಸಂಜೆಯಾಗುವುದನ್ನೇ ಜಾತಕ ಪಕ್ಷಿಯಂತೆ ಕಾಯುತ್ತಿದ್ದವಳು ಓಡೋಡಿ ಬಂದು “ಹೇಳಮ್ಮ ಸಂಜೆ ಆಯ್ತಲ್ಲ” ಪೀಡಿಸಿದಳು.
“ಇಲ್ಲೆಲ್ಲಾ ಹೇಳೋ ವಿಷಯ ಅಲ್ಲಾ. ಸ್ಟೇಡಿಯಂ ಹತ್ರ ಹೋಗಿ ಚರುಮುರಿ ತಿನ್ತಾ ಹೇಳ್ತೀನಿ ಬಾ” ಗಂಭೀರತೆ ನಟಿಸುತ್ತಾ ಹೊರಬಿದ್ದಳು.
“ಹಾಳಾದೋಳೇ ಸತಾಯಿಸುತ್ತಿಯಾ, ಮಾಡ್ತಿನಿ, ನಂಗೂ ಟೈಂ ಬರುತ್ತೆ” ಗೊಣಗಿಕೊಂಡು ಅನುವನ್ನು ಹಿಂಬಾಲಿಸಿದಳು ಸುಶ್ಮಿತಾ.
ಸುಶ್ಮಿತಾ ಮುಖ ಊದಿಸಿಕೊಂಡು ಕುಳಿತುಬಿಟ್ಟದ್ದಾಳೆ. ಅವಳ ಮುನಿಸನ್ನು ಕಿರುಗಣ್ಣಿನಲ್ಲಿ ಗಮನಿಸುತ್ತಾ ಮನದೊಳಗೆ ನಗುತ್ತಾ ಚರುಮುರಿ ಕಟ್ಟಿಸಿಕೊಂಡು ಪಕ್ಕದಲ್ಲಿ ಕುಳಿತು ಅವಳ ಕೈಗೊಂದು ಪೊಟ್ಟಣ ವರ್ಗಾಯಿಸಿ ಅತ್ಯಂತ ಆಸಕ್ತಿಯಿಂದ ತಿನ್ನತೊಡಗಿದಳು ಅನು.
“ಎಷ್ಟೊಂದು ದಿನ ಆಗಿತ್ತು ಅಲ್ವಾ, ಇಲ್ಲಿಗೆ ಬಂದು ಚುರುಮುರಿ ತಿನ್ನದೆ. ಇವತ್ತು ಅವಕಾಶ ಆಯ್ತು ನೋಡು, ಚೆನ್ನಾಗಿದೆ ಆಲ್ವೇನೇ. ಇನ್ನೊಂದು ಕಟ್ಟಸಿಕೊಂಡು ಬರ್‍ಲಾ.”
ದುರುದುರನೇ ನೋಡಿದ ಸುಶ್ಮಿತಾ “ಈಗ ಅದೇನು ಗುಡ್ ನ್ಯೂಸ್ ಹೇಳ್ತೀಯೋ, ಇಲ್ಲಾ ನಿನ್ನ ಕೆಳಗೆ ತಳ್ಳಿ ಬಿಡಲಾ.”
“ಅಯ್ಯೋ ಅಯ್ಯೋ ಬೇಡ ಕಣೆ, ಹೇಳಿ ಬಿಡ್ತಿನಿ. ನಮ್ಮ ಅಭಿಗೆ ಮಧ್ವೆ ಗೊತ್ತಾಯ್ತು” ಸಿಡುಕಿನಿಂದ ಕೂಡಿದ್ದ ಮೊಗ ಮಂಕಾಯಿತು. ತಟ್ಟನೆ ಸಾವರಿಸಿಕೊಂಡು
“ನಿಜಾನಾ, ಯಾರೇ ಹುಡುಗಿ, ಎಲ್ಲಿದ್ದಾಳೆ.”
“ನಮ್ಮ ಅಫೀಸಿನಲ್ಲಿಯೇ ಇದ್ದಾಳೆ” ಅಲಕ್ಷ್ಯದಿಂದ ನುಡಿದ ಅನುವಿನ ಬೆನ್ನ ಮೇಲೆ ಹೊಡೆದು
“ಥೂ ಕಳ್ಳಿ, ಹೇಗೆ ಹೇಳ್ತಾ ಇದ್ದೀಯಾ ನೋಡು, ಯಾರು ಹುಡುಗಿ ನಿಜಾ ಹೇಳು.”
“ಇಲ್ಲೇ ಕೂತಿದ್ದಾಳೆ” ಇನ್ನೊಂದು ಕಟ್ಟಿಸ್ಕೊಂಡು ಬರ್ತಿನಿ ತಾಳು, ಏಳಹೋದವಳನ್ನು ಕೈಹಿಡಿದು ಕುಕ್ಕರಿಸಿ,
“ಅನು ಇಂಥ ಸಂತೋಷದ ಸುದ್ದಿನಾ ಹೀಗಾ ಹೇಳೋದು. ನಂಗೆ ಗೊತ್ತಿತ್ತು ನೀನು ಬದಲಾಗ್ತಿಯಾ, ಅಭಿ ನಿನ್ನ ಬದಲಾಯಿಸುತ್ತಾನೆ ಅಂತಾ.”
“ನಿಂಗೆ ಸಂತೋಷನಾ” ಒತ್ತಿ ಕೇಳಿದಳು ಅನು.
“ಸಂತೋಷನಾ, ತುಂಬಾ ಸಂತೋಷನೇ ಕಣೇ. ಅಭಿಯಂತ ಒಳ್ಳೆ ಹುಡುಗ ನಿಂಗೆ ಸಿಕ್ತಾ ಇರೋದು. ಅಲ್ಲಾಲ್ಲಾ ನಿನ್ನಂತ ಒಳ್ಳೆ ಹುಡ್ಗಿ ಅಭಿಗೆ ಸಿಗ್ತಾ ಇರೋದು ಪುಣ್ಯ ಕಣೆ, ಯಾವಾಗ ಮದ್ವೆ” ನಿಜವಾದ ಸಂತೋಷದಲ್ಲಿ ನುಡಿದಳು.
“ನಿಂಗೆ ಬೇಸರ ಇಲ್ವಾ ಸುಶೀ.”
ತಟ್ಟನೆ ಅವಳ ನೋಟ ತಪ್ಟಿಸಿದ ಸುಶ್ಮಿತಾ “ನಂಗ್ಯಾಕೆ ಬೇಸರ, ನೀನು ಮದ್ವೆ ಆಗ್ತಿನಿ ಅನ್ನೋದೆ ದೊಡ್ದ ಮಿರಾಕಲ್. ಅಂತಹುದರಲ್ಲಿ ನಂಗೆ ಬೇಸರ ಅಗುತ್ತಾ.”
“ಸುಶೀ ನೀನು ಇಷ್ಟೊಂದು ಒಳ್ಳೆಯವಳು ಅಗಬೇಡ ಕಣೆ, ನಿನ್ನ ಹೃದಯ ಎಷ್ಟು ದೊಡ್ಡದು ಅಂತಾ ನಂಗೊತ್ತು ಕಣೆ. ನಿಜಕ್ಕೂ ಈಗ ನಾನು ಸಂತೋಷ ಪಡ್ತಾ ಇದ್ದೀನಿ.
ನಿನ್ನಂತ ಗೆಳತಿ ನನಗಿದಾಳಲ್ಲ ಅಂತಾ. ನಿನ್ನಂತ ಒಳ್ಳೆ ಹುಡುಗಿಗೆ ಆ ದೇವ್ರೂ ಕೂಡ ಮೋಸ ಮಾಡಲ್ಲ ಕಣೆ, ಅಭಿ ಮದ್ವೆ ಆಗ್ತಾ ಇರೋ ಹುಡ್ಗಿ ನೀನು, ನಾನಲ್ಲ. ನಾನು ಯಾವತ್ತೂ ಬದಲಾಗಲ್ಲ ಕಣೆ” ಭಾವ ತುಂಬಿ ನುಡಿದಳು.
“ಏನ್ ಹೇಳ್ತಾ ಇದ್ದಿಯಾ ಅನು, ಅಭಿ ಪ್ರೀತಿಸಿದ್ದು ನಿನ್ನ, ಬಯಸಿದ್ದು ನಿನ್ನ. ನನ್ನನ್ನ ಹೇಗೆ ಮದ್ವೆ ಅಗೋಕೆ ಸಾಧ್ಯ” ಗೊಂದಲದಲ್ಲಿ ಬಿದ್ದಳು.
“ಆದ್ರೆ ನೀನು ಒಪ್ಪಿದ್ದು, ಇಷ್ಪಪಟ್ಟಿದ್ದು ಬಯಸಿದ್ದು ಅಭಿಯನ್ನು. ಈ ಸತ್ಯ ಅವನಿಗೆ ಗೊತ್ತಾಯಿತು. ನಿನ್ನಂತ ಮುದ್ದು ಹುಡ್ಗಿನಾ ಬಿಡೋಕೆ ಅವನೇನು ಮೂರ್ಖನಾ. ಈಗಾಗ್ಲೆ ನಿಮ್ಮ ಮನೆಯಲ್ಲಿ ಅಭಿ ಮಾತಾಡ್ತಿದಾನೆ. ಅದಕ್ಕೆ ನಿನ್ನ ನಾನು ಇಲ್ಲಿಗೆ ಕರ್ಕೊಂಡು ಬಂದೆ. ಹುಡುಗ ಒಪ್ಟಿಗೆನಾ” ಕೆನ್ನೆ ಹಿಂಡಿದಳು.
“ಅನು. ಇದು ತಪ್ಪು ಕಣೆ, ಅಭಿ ಮನಸ್ಸಲ್ಲಿ ನೀನಿದ್ದೀಯಾ. ಅಲ್ಲಿ ಬೇರೆ ಯಾವುದೇ ಹೆಣ್ಣಿಗೆ ಜಾಗ ಇಲ್ಲ ಕಣೆ. ಬಾಗಿಲಿಗೆ ಬಂದ ಅವಕಾಶವನ್ನ ಕಾಲಲ್ಲಿ ಒದಿಯೋ ಮೂರ್ಖತನ ಮಾಡ್ತ ಇದ್ದೀಯ. ನಾನು ಬೇಕಾದರೆ ಅಭಿಯನ್ನ ಮರೆಯಬಲ್ಲೆ, ಅವನಷ್ಟೇ ಚೆನ್ನಾಗಿರೋ ಇನ್ನೊಬ್ಬ ಹುಡುಗ ಸಿಕ್ಕಿದರೆ ಅಭಿಯನ್ನ ದೂರ ಮಾಡಬಲ್ಲೆ. ಆದರೆ ಅಭಿ ಹಾಗಲ್ಲ, ನಿನ್ನ ಮನಸಾರೆ ಪ್ರೀತಿಸ್ತಾ ಇದ್ದಾರೆ. ನಿನ್ನ ಬಗ್ಗೆ ಸಾವಿರ ಕನಸು ಕಟ್ಟಿದ್ದಾರೆ. ಮದ್ವೆ ಆದ್ರೆ ನಿನ್ನನ್ನ ಅಂತ ನಿರ್ಧಾರ ಮಾಡಿದ್ದಾರೆ.” ಪದಗಳನ್ನು ತೂಗಿ ತೂಗಿ ಆಡಿದಳು.
“ಅದು ನೆನ್ನವರೆಗೂ ಸುಶೀ, ಯಾವಾಗ ತಮ್ಮ ಭಾವನೆಗಳೆಲ್ಲ ಏಕಮುಖ ಅಂತ ಗೊತ್ತಾಯಿತೋ, ಯಾವಾಗ ತಮ್ಮ ಪ್ರೀತಿ ಕನಸು, ಒನ್ ವೇ ಅಂತ ತಿಳೀತೋ ಆಗಲೇ ಈ ಅನು ಅಭಿಯ ಹೃದಯದಿಂದ ಈಚೆ ಬಂದುಬಿಟ್ಟಳು. ತನಗಾಗಿ ಒಂದು ಹೃದಯ ಮಿಡೀತಾ ಇದೆ, ತನ್ನ ಆಸೆ, ಕನಸು, ಪ್ರೀತಿಯನ್ನು ಹಂಚಿಕೊಳ್ಳೋಕೆ ಕಾಯ್ತಾ ಇದೆ ಅಂತಾ ಗೊತ್ತಾದ ಕೂಡಲೇ ಆ ಖಾಲಿಯಾದ ಜಾಗದಲ್ಲಿ ಆ ಹುಡುಗೀನ ಪ್ರತಿಷ್ಠಾಪಿಸಿಬಿಟ್ಟ ಅಭಿ. ಆ ಹುಡುಗಿನೇ ನೀನು. ನೀನು ಯಾವುದರಲ್ಲಿ ಕಡ್ಮೆ ಆಗಿದ್ದೀಯ ಸುಶೀ. ನಿನ್ನಂಥ ಸುಂದರವಾದ ಅದಕ್ಕಿಂತ ಹೆಚ್ಚಾಗಿ ಸುಂದರವಾದ ಮನಸ್ಸಿರೋ ಹುಡುಗಿ ಸಿಗೋಕೆ ಅಭಿ ಪುಣ್ಯ ಮಾಡಿದ್ದ. ಅದಕ್ಕೆ ಸಿಕ್ಕಿದ್ದೇ ಚಾನ್ಸ್ ಅಂತ ಗಬಕ್ಕನೇ ಹಿಡ್ಕೊಂಡುಬಿಟ್ಟಿದ್ದಾನೆ. ನಿನ್ನ ಪರವಾಗಿ ಅವನಿಗೆ ಒಪ್ಪಿಗೆ ತಿಳಿಸಿಬಿಟ್ಟಿದ್ದೀನಿ. ನಿನ್ನನ್ನ ಕೇಳದೆ ಹೀಗೆ ಹೇಳಿದೆ ಅಂತಾ ಬಯ್ಕೋಬೇಡ.”
ಅನುವಿನ ಕೈಹಿಡಿದು ಕಣ್ಣಿಗೊತ್ತಿಕೊಂಡ ಸುಶ್ಮಿತಾ ಬಾಯಲ್ಲಿ ಹೇಳಲಾರದ ನೂರು ಮಾತುಗಳನ್ನು ಕಣ್ಣಿನಲ್ಲಿಯೇ ತಿಳಿಸಿದಳು. ಮನಸ್ಸು ತುಂಬಿ ಬಂದು ಮಾತು ಹೊರಡದಾಗಿತ್ತು. ಅಭಿ ಅವಳ ಹೃದಯವನ್ನು ಕದ್ದು ಬಿಟ್ಟಿದ್ದ. ಆದರೆ ಅವನ ಒಲವು ಅನುವಿನೆಡೆ ಎಂದು ತಿಳಿದಾಗ ನಿರಾಶೆಯಿಂದಲೇ ಮನಸ್ಸನ್ನು ಗಟ್ಟಿ ಮಾಡಿಕೊಂಡಿದ್ದಳು. ಈಗ ಅಭಿ ತನ್ನವನು ಅಂತಾ ತಿಳಿದಾಗ ಅವಳ ಹೃದಯ ಸಂತಸದಿಂದ ಮೂಕವಾಗಿತ್ತು.
******