ನಾ ಕಂಡ ಜೀವಿಯನು ಭೂಖಂಡವೆಲ್ಲ
ನೂಕೆಂದು ನುಡಿಯುತಿದೆ ಯಾಕೆಂದು ಕಾಣೆ
ಬಾಲ್ಯದಲಿ ಪಶುಗಳನು ಸಲಹುತ್ತ ಬೆಳೆದೆ
ಬಳಿಕೆಯಾಗಿಹ ಪ್ರಾಣಿಒಳಗಂಗಳರಿದೆ
ವನಮೃಗಖಗಂಗಳನು ನೋಡುತ್ತ ನಲಿದೆ
ಜನಪದಂಗಳನೆಲ್ಲ ಬಳಸುತ್ತ ತಿಳಿದೆ
ನಾ ಕಂಡ ಜೀವಿಯನು ಭೂಖಂಡವೆಲ್ಲ
ನೂಕೆಂದು ನುಡಿಯುತ್ತಿದೆ ಯಾಕಂದು ಕಾಣೆ
ಬೇಡಾದ ವಸ್ತುಗಳ ಮೆಲುತಿರುವ ಪ್ರಾಣಿ
ಬೇಕಾದ ಗೆಯ್ಮೆಗಳ ಗೆಯ್ಯುತಿಹ ತ್ರಾಣಿ
ಕಡಿದಾದ ಗುಡ್ಡದಲಿ ನಿಡಿದಾಗಿ ನಡೆವ
ಬಿರುಸಾದ ಮರಳಲ್ಲಿ ಸುಖವಾಗಿ ಸುಳಿವ
ನಾ ಕಂಡ ಜೀವಿಯನು ಭೂಖಂಡವೆಲ್ಲ
ನೂಕೆಂದು ನುಡಿಯುತಿದೆ ಯಾಕೆಂದು ಕಾಣೆ
ಇರುಕಾದ ಸರುವಿನೊಳು ಸರಸಾಗಿ ಸಾಗಿ
ಎರೆಯಂಗೆ ತೋಷವನು ಬೀರುತ್ತ ಸಾರಿ
ಪರಿಚರ್ಯೆಕೈಕೊಂಬ ಪರಿಯನ್ನು ಕಳೆದು
ನಿಷ್ಕಾಮ ಕರ್ಮವನು ಮನದಿಂದ ಮಾಳ್ಪ
ನಾ ಕ೦ದ ಜೀವಿಯನು ಭೂಖಂಡವೆಲ್ಲ
ನೂಕೆಂದು ನುಡಿಯುತಿದೆ ಯಾಕೆಂದು ಕಾಣೆ
ಹೊರೆಯನ್ನು ಹೇರಿರುವ ಪರಿಯನ್ನು ತಿಳಿದು
ಕೊರಗುತ್ತ ಕರಗದಲೆ ಮನವನ್ನು ಬಿಗಿದು
ಎರೆಯಂಗೆ ಎರೆಯಳಿಗೆ ಹರುಷವನು ತರುವ
ಕಷ್ಟದಿಂ ಕಾಯವನು ನೂಕುತ್ತ ನಡೆವ
ನಾ ಕಂಡ ಜೀವಿಯನ್ನು ಭೂಖಂಡವೆಲ್ಲ
ನೂಕೆಂದು ನುಡಿಯುತಿದೆ ಯಾಕಂದು ಕಾಣೆ
ಕಲ್ಲನ್ನು ಕಾಳನ್ನು ಕಟ್ಟಿಗೆಯ ಹೊರೆಯ
ಮಣ್ಣನ್ನು ಮುಂತಾಗಿ ಒಯ್ಯುತಿಹ ಪರಿಯ
ಕಾಸನ್ನು ಕಳೆಯದಲೆ ಸಾಕುತಿಹ ಬಗೆಯ
ಪಶುಜೀವ ಕೋಟಿಯಲಿ ಬಡಜನರ ಸಿರಿಯ
ನಾ ಕ೦ಡ ಜೀವಿಯನು ಭೂಖಂಡವೆಲ್ಲ
ನೂಕೆಂದು ನುಡಿಯುತಿದೆ ಯಾಕೆಂದು ಕಾಣೆ
ಗುಜರಾತ ನಾಡಿನಲಿ ಜನರಾಡಿಕೊಳುವ
“ರಾವಣನ ಗಡಿಯಾಳ” ಬಿರುದಾಗಿ ಮೆರೆವ
ಪ್ರತಿ ಮೂರು ತಾಸಿನಲಿ ಪರಮನನು ಸ್ಮರಿಸಿ
ಧರೆಗೊಂದು ಗಡಿಯಾಳ ತೆರನಾಗಿ ಮೆರೆವ
ನಾ ಕಂಡ ಜೀವಿಯನು ಭೂಖಂಡವೆಲ್ಲ
ನೂಕೆಂದು ನುಡಿಯುತಿದೆ ಯಾಕೆಂದು ಕಾಣೆ
ಸ್ವರವನ್ನು ಕರ್ಕಶದ ಕಣಿಯೆಂದು ಬಗೆವ
ಮರವೆಯನು ಬಡಪಾಯಿ ಮತಿಯಂದು ತಿಳಿವ
ಗುರುತರದ್ರೋಹವನ್ನೆಸಗುತ್ತ ನರರು
ಮನಬಂದ ತೆರದಲ್ಲಿ ದೂರುತ್ತಲಿರುವ
ನಾ ಕಂಡ ಜೀವಿಯನು ಭೂಖಂಡವೆಲ್ಲ
ನೂಕೆ೦ದು ನುಡಿಯುತಿದೆ ಯಾಕೆಂದು ಕಾಣೆ
ಆರಯ್ಯೆ ಹಾಲುಂಡಪರಿಯಿಂದ ತಿಳಿದು
ಮೀರಿರ್ದ ಬಾಲಗ್ರಹಂಗಳನು ತರಿದು
ಸೇರಿರ್ದ ಕಾಲನುರು ಸಂಕಲೆಯ ಕಡಿದು
ಸೆಟೆದಿರ್ದ ಶಿಶುವನ್ನು ಸುಖವಾಗಿ ನಗೆಪ
ನಾ ಕಂಡ ಜೀವಿಯನು ಭೂಖಂಡವೆಲ್ಲ
ನೂಕೆಂದು ನುಡಿಯುತಿದೆ ಯಾಕೆ೦ದು ಕಾಣೆ
ಕಿವಿನೆಟ್ಟಗಿಟ್ಟಿರುವ ಮುಖವನ್ನು ನೋಡಿ
ಬೆರಗಾಗಿ ಮನದಲ್ಲಿ ಮುದದಿಂದ ಕೂಡಿ
ಮೂಡಿರ್ದ ಬಾಳೆಗಳ ಗೊನೆಯಂತೆ ಕಾ೦ಬ
ತುಂಬಿರ್ದ ಸರಳತೆಯು ತುಳುಕುತ್ತಲಿರುವ
ನಾ ಕಂಡ ಜೀವಿಯನು ಭೂಖಂಡವೆಲ್ಲ
ನೂಕೆಂದು ನುಡಿಯುತಿದೆ ಯಾಕೆ೦ದು ಕಾಣೆ
೧೦
ಮಹಾತ್ಮಾ ಯೇಸುವನು ಹೊರೆಯಾಗಿಹೊತ್ತ
ಪಿರಿದಾದ ಸೈರಣೆಗೆ ನೆಲೆಯಾಗಿ ನಿಂತ
ಗಂಗಾತರಂಗಗಳ ತಟಗಳಲಿ ಮಿಂದು
ಕಂಗೊಳಿಪ ಹಿಮಗಿರಿಯ ದರಿಗಳಲಿ ನಿಂದು
ನಾ ಕಂಡ ಜೀವಿಯನು ಭೂಖಂಡವೆಲ್ಲ
ನೂಕೆಂದು ನುಡಿಯುತಿದೆ ಯಾಕೆಂದು ಕಾಣೆ
೧೧
ತಿಪ್ಪೆಯುಪ್ಪರಿಗೆಗಳ ಹೊಲಬನ್ನು ತಿಳಿದು
ಬಡವಂಗೆ ನೆರೆಕಾಮಧೇನುವಾಗಿರುವ
ನಿಷ್ಕಾಮ ಕರ್ಮವನು ಕಲಿಸುತಿಹ ಋಷಿಯ
ಸತ್ಕಾರ್ಯ ಮಹಿಮೆಯನು ಸಾರುತಿಹ ಸಿರಿಯ
ನಾ ಕಂಡ ಜೀವಿಯನ್ನು ಭೂಖಂಡವೆಲ್ಲ
ನೂಕೆಂದು ನುಡಿಯುತಿದೆ ಯಾಕೆಂದು ಕಾಣೆ
*****