ಮೇಲೇರಬೇಕು
ಮೇಲೆ ಬರಲೇ ಬೇಕು
ಮೇಲೇರಿ ಬರುವುದು
ಯಾರೊಬ್ಬನ ಸ್ವತ್ತಲ್ಲ
ಎಲ್ಲರ ಜನ್ಮಸಿದ್ಧ ಹಕ್ಕು.
ಇರುವುದೊಂದೇ ಏಣಿ
ಹತ್ತುವವರೋ ಅಸಂಖ್ಯ
ಗುಂಪು ಗುಂಪು ಮಂದಿ
ಅನೇಕರಿಗೆ ಏಣಿಯ
ಹತ್ತಿರವೂ ಹೋಗಲಾಗುತ್ತಿಲ್ಲ.
ತಾಕತ್ತಿದ್ದವ ನುಗ್ಗಿದ
ಅವನೊಂದಿಗೆ ನೂರಾರು ಜನ
ನುಗ್ಗಿಯೇ ನುಗ್ಗಿದರು.
ಕಾಲ್ಹಿಡಿದು ಜಗ್ಗಿದರು
ಮುಂದೆ ಹೋದವನ ಹಿಂದಕ್ಕೆ
ತಳುತ್ತಾ ಮೇಲೇರೇ ಏರಿದರು.
ಹಿಂದಿದ್ದವರಾರೋ ಮುಂದಿದ್ದವರಾರೋ?
ಸಿಕ್ಕಿದವರಿಗೆ ಸೀರುಂಡೆ.
ಮೇಲೇರಿದಂತೆಲ್ಲಾ ಗುಂಪೇ ಇಲ್ಲ!
ದಾರಿ ಸುಗಮ. ಆದರೆ
ತೀರಾ ಮೇಲೇರಿದಾಗ ತಿಳಿಯಿತು
ಏಣಿಗೆ ಆಧಾರವೇ ಇಲ್ಲ!
ಅದು ನಿಂತಿರುವುದು ಕೆಳಗೆ
ನಿಂತವರ ತಲೆಯ ಮೇಲೆ!
ಮೇಲೇರಿದವ ಇಳಿಯುವಂತಿಲ್ಲ.
ಮತ್ತೆಏಳಲು ಸ್ಥಳವೇ ಇಲ್ಲ.
ಏರಿದ್ದಂತು ಆಯತು… ಆದರೆ
ಸಾಧಿಸಿದ್ದಾದರೂ ಏನು?
ಏರದಿದ್ದರೆ ಏನೂ
ಮುಳುಗಿ ಹೋಗುತ್ತಿರಲಿಲ್ಲ.
ಏರಿದಷ್ಟೇ ಬಂತು. ಕೆಳಗೆ?
ಗುಂಪು ಗುಂಪು ಜನ
ಮೇಲೇರಲು ತವಕಿಸುತ್ತಿರುವ
ಏರುವವನ ಕಾಲೆಳೆವ
ಏರಲಾರದೆ ಒದ್ದಾಡುತ್ತಿರುವ
ಜನ… ಜನ… ಜನ…
*****
೦೬-೦೭-೧೯೮೮