ಎಲ್ಲಿ? ಹೋದಳೆಲ್ಲಿ?
ಉದ್ದ ಜಡೆ, ಜರಿಲಂಗ
ಮೊಲ್ಲೆ ಮೊಗ್ಗಿನ ಜಡೆಯಾಕೆ
ಮಡಿಕೆ ಕುಡಿಕೆ ಇರಿಸಿ
ಅಡುಗೆಯಾಟ ಆಡಿ
ಗೊಂಬೆ ಮಗುವ
ತಟ್ಟಿ ಮಲಗಿಸಿ
ಅಮ್ಮನಾಟ ಆಡಿದಾಕೆ
ಎಲ್ಲಿ? ಹೋದಳೆಲ್ಲಿ?
ಹೊಸಿಲು ದಾಟದ
ಬೆಳಕು ಕಾಣದ
ಸಣ್ಣ ಹುಡುಗಿ
ಬಣ್ಣ ಬಣ್ಣದ
ಬಳೆಯ ತೊಟ್ಟ
ಬೆಳ್ಳಿಗೆಜ್ಜೆ ಹುಡುಗಿ
ಹೋದಳೆಲ್ಲಿ?
ಎಲ್ಲರೂಟದ
ಎಂಜಲೆತ್ತಿ
ಗೋಮೆ ಬಳಿದು
ಕೆಲಸ ಬೊಗೆಸೆ
ಕಲಿತ ಹುಡುಗಿ
ಧ್ವನಿ ಎತ್ತದ
ನಾಚಿಕೆಯ ಹುಡುಗಿ
ಎಲ್ಲಿ ಹೋದಳೆಲ್ಲಿ
ಮೈಗಂಟಿದ ಜೀನ್ಸ್
ತೋಳಿದಲ್ಲದ ಟಾಪ್
ಹೈಯೀಲ್ಡಿನ ಹುಡುಗಿ
ಇಲ್ಲಿದ್ದಾಳೆ, ಬಾಯ್
ಕಟ್‌ನ ಬೆಡಗಿ!
ಅದೆಷ್ಟೊ ಹೆಜ್ಜೆ ಇರಿಸಿ
ಕಡಲುಗಳ ದಾಟಿ
ಕಂದರವ ಹಾರಿ
ಇಲ್ಲಿ ಬಂದಿದ್ದಾಳೆ
ಅಮ್ಮನಾಟ
ಆಡಿದಾಕೆ
ಗೊಂಬೆ ಮಗುವ
ತಟ್ಟಿ ಮಲಗಿಸಿದಾಕೆ
ಮನೆಯದಾಟಿ
ಸೈಬರ್‌ಕೆಫೆ
ತಲುಪಿದ್ದಾಳೆ
ಬೆಳ್ಳಿಗೆಜ್ಜೆಯ
ಹುಡುಗಿ ಕೈನಿ ಏರಿದ್ದಾಳೆ
ಕಂಪ್ಯೂಟರ್‌ಗುಂಡಿ
ಒತ್ತುತ್ತಿದ್ದಾಳೆ
ಸಪ್ತಸಾಗರವ
ದಾಟಿ ತನ್ನ ಮಿತಿಯ
ವಿಸ್ತರಿಸಿ, ಎಲ್ಲರೂಟ
ದ ಎಂಜಲೆತ್ತಿ ಗೋಮೆ
ಬಳಿದ ಹುಡುಗಿ
ಬಾನಿನುದ್ದಕ್ಕೂ
ಹಾರಾಡುತ್ತಿದ್ದಾಳೆ
*****