ಪುಂಸ್ತ್ರೀ – ೩

ಪುಂಸ್ತ್ರೀ – ೩

ಶೌರ್ಯದಲಿ ಗೆದ್ದವನ ವಧುಗಳು

ಕಾಶಿ ಮತ್ತು ಅಯೋಧ್ಯೆಗಳ ನಡುವಣ ಪುಟ್ಟ ಪಟ್ಟಣ ರಜತನಗರಿಯ ಛತ್ರದಲ್ಲಿ ರಾತ್ರಿ ತಂಗುವಾಗ ರಾಜಕುವರಿಯರಿಗೆ ಪ್ರತ್ಯೇಕ ಕೊಠಡಿಯೊಂದು ಸಿಗುವಂತೆ ಭೀಷ್ಮರು ಏರ್ಪಾಡು ಮಾಡಿದ್ದರು. ಮರುದಿನ ಅಯೋಧ್ಯೆಯಲ್ಲಿ ತಂಗಬೇಕಾಯಿತು. ರಥಕ್ಕೆ ಕಟ್ಟಿದ್ದ ಕುದುರೆಗಳನ್ನು ಅಲ್ಲಿ ಬದಲಾಯಿಸಿ ಮತ್ತೆ ಹಸ್ತಿನಾವತಿಯತ್ತ ಪಯಣದ ಹಾದಿಯಲ್ಲಿ ಲೋಹಿತ ನಗರಿಯಲ್ಲಿ ಮತ್ತೊಂದು ರಾತ್ರಿ ತಂಗಿ ಅಲ್ಲಿನ ಲಾಯಾಧಿಕಾರಿಯ ಕುದುರೆಗಳನ್ನು ಅವನಿಗೇ ಕೊಟ್ಟು, ಹಸ್ತಿನಾವತಿಯ ಕುದುರೆಗಳನ್ನು ರಥಕ್ಕೆ ಹೂಡಿ ನಾಲ್ಕನೆಯ ದಿನ ರಾಜಧಾನಿಗೆ ಮುಟ್ಟಿದ ಮೇಲೆ ಭೀಷ್ಮರು ನಿರಾಳವಾಗಿ ಉಸಿರಾಡಿದರು.

ಕಾಶಿಯಿಂದ ಹಸ್ತಿನಾವತಿಯವರೆಗಿನ ಸುದೀರ್ಘ ಪ್ರಯಾಣದುದ್ದಕ್ಕೂ ರಾಜಕುವರಿಯರು ತಮ್ಮ ತಮ್ಮೊಳಗೆ ಪಿಸಿಪಿಸಿ ಮಾತಾಡುತ್ತಿದ್ದರು. ಭೀಷ್ಮರಲ್ಲಿ ಮಾತಾಡುವ ಸಲಿಗೆ ತೋರಿರಲಿಲ್ಲ. ಭೀಷ್ಮರೂ ಔಪಚಾರಿಕವಾಗಿ ಒಂದೆರಡು ಮಾತನ್ನು ಬಿಟ್ಟರೆ ಬೇರೇನನ್ನೂ ಆಡಿರಲಿಲ್ಲ. ತಾನೇ ಸಾರಥಿಯಾಗಿ ರಥ ಓಡಿಸುವಾಗ ಮಾತಾಡಲು ಅವಕಾಶವೂ ಸಿಕ್ಕಿರಲಿಲ್ಲ. ರಾಜಕುವರಿಯರ ಮನಸ್ಸಿನಲ್ಲಿ ಏನಿದೆಯೆಂದು ತಿಳಿದುಕೊಳ್ಳುವ ಅಗತ್ಯವೂ ಅವರಿಗಿರಲಿಲ್ಲ. ತನ್ನದೇನಿದ್ದರೂ ರಾಜಮಾತೆಯ ಆದೇಶವನ್ನು ಪರಿಪಾಲಿಸುವ ಕೆಲಸ. ಅದು ಸುಸೂತ್ರವಾಗಿ ಸಾಗಿದರೆ ಸಾಕು ಎಂದು ಅವರಂದುಕೊಂಡಿದ್ದರು.

ಹಸ್ತಿನಾವತಿಯನ್ನು ಬಿಟ್ಟವರಿಗೆ ಮತ್ತೆ ಹಸ್ತಿನಾವತಿಯನ್ನು ಸೇರಲು ಒಂದುವಾರ ಬೇಕಾಯಿತು. ಕಾಶಿಯು ಕುರುಸಾಮ್ರಾಜ್ಯದ ಒಂದು ಭಾಗವಾಗಿ ಬಿಟ್ಟರೆ ಅದರ ಆಡಳಿತ ಅಷ್ಟು ಸುಲಭದ್ದಲ್ಲ ಎಂಬ ಸತ್ಯ ಆಗ ಭೀಷ್ಮರಿಗೆ ಮನವರಿಕೆಯಾಯಿತು. ಬಳಲಿಕೆಯಲ್ಲೂ ಒಂದು ಸಂತೋಷ. ರಾಜಮಾತೆಯ ಆದೇಶವನ್ನು ಯಶಸ್ವಿಯಾಗಿ ಪಾಲಿಸಿದ ಸಂತೋಷ ಅದು. ಸ್ವತಃ ರಾಜಮಾತೆಯೇ ರಾಜಕುವರಿಯರನ್ನು ಪ್ರೀತಿಯಿಂದ ಮಂಗಳ ವಾದ್ಯಗಳೊಂದಿಗೆ ಸ್ವಾಗತಿಸಿದಳು. ಪಟ್ಟದಾನೆಯಿಂದ ಮಂದಾರ ಪುಷ್ಪಮಾಲಿಕೆಯನ್ನು ಹಾಕಿಸಿ, ಆರತಿ ಬೆಳಗಿ ಸಂಭ್ರಮಿಸಿದಳು. ವೈಭವಪೂರ್ಣವಾದ ಅತಿಥಿ ಗೃಹವೊಂದರಲ್ಲಿ ಅವರಿಗೆ ತಂಗಲು ವ್ಯವಸ್ಥೆ ಮಾಡಿದಳು. ತನ್ನ ಮಗ ವಿಚಿತ್ರವೀರ್ಯನಿಗೆ ತುಂಬು ತಾರುಣ್ಯದ ಮೂವರು ಅಮಿತ ಚೆಲುವೆಯರು ಮಡದಿಯರಾಗುತ್ತಾರೆನ್ನುವುದು ಅವಳಲ್ಲಿ ಅಪರಿಮಿತ ಆನಂದವನ್ನು ಉಂಟು ಮಾಡಿತ್ತು. ಅದರೊಂದಿಗೆ ಹಸ್ತಿನಾವತಿಯನ್ನು ಉಪೇಕ್ಷಿಸಿದರೆ ಏನಾಗುತ್ತದೆಂಬುದನ್ನು ಸಮಸ್ತ ಆರ್ಯಾವರ್ತಕ್ಕೆ ತೋರಿಸಲು ಸಾಧ್ಯವಾದ ಸಂತೃಪ್ತಿಯೂ ಸೇರಿಕೊಂಡಿತ್ತು.

ಮೂರನೆಯ ದಿನ ರಾಜಮಾತೆ ಸತ್ಯವತಿ ಭೀಷ್ಮರಿಗೆ ಕರೆ ಕಳುಹಿಸಿದಳು. ವಿಚಿತ್ರವೀರ್ಯನ ವಿವಾಹ ಮಹೋತ್ಸವವನ್ನು ನಾಳೆ ನೆರವೇರಿಸಿಬಿಡಲು ತಾನು ನಿಶ್ಚಯಿಸಿದ್ದಾಗಿ ತಿಳಿಸಿದಳು. ವಿಚಿತ್ರವೀರ್ಯ ಗಾಂಭೀರ್ಯದಿಂದ ಕುಳಿತು ಎಲ್ಲವನ್ನೂ ಕೇಳಿಸಿಕೊಳ್ಳುತ್ತಿದ್ದ. ಅಷ್ಟು ಹೊತ್ತಿಗೆ ರಾಜಮಾತೆಯ ಆದೇಶದಂತೆ ಕಾಶೀ ರಾಜಕುವರಿಯರು ಅಲ್ಲಿಗೆ ಬಂದವರು ಅವಳಿಗೆ ವಂದಿಸಿ ಆಸನಗಳಲ್ಲಿ ಮಂಡಿಸಿದರು.

ರಾಜಮಾತೆ ಅವರ ಬಳಿಗೆ ಹೋಗಿ ಆಪ್ತತೆಯಿಂದ ತಲೆಸವರಿ ಆರೋಗ್ಯ ವಿಚಾರಿಸಿ ಅವರನ್ನು ಕರೆಸಿದ ಕಾರಣವನ್ನು ತಿಳಿಸಿದಳು: “ಕಾಶೀ ರಾಜಕುವರಿಯರಾದ ನೀವು ಮೂವರನ್ನು ಹಸ್ತಿನಾವತಿಯ ಸೊಸೆಯಂದಿರನ್ನಾಗಿ ಸ್ವೀಕರಿಸಲು ರಾಜಮಾತೆಯಾಗಿ ನಾನು ಹರ್ಷಪಡುತ್ತೇನೆ. ಹಸ್ತಿನಾವತಿಯ ಸಿಂಹಾಸನಾಧೀಶ ವಿಚಿತ್ರವೀರ್ಯನ ಮಕ್ಕಳ ತಾಯಂದಿರಾಗಿ ನೀವು ಚಂದ್ರವಂಶವನ್ನು ಬೆಳಗಬೇಕು. ನಿಮ್ಮನ್ನು ನಾನು ನನ್ನ ಮಕ್ಕಳೆಂದೇ ಭಾವಿಸಿದ್ದೇನೆ. ಆಚಾರ್ಯ ಭೀಷ್ಮರು ನಿಮಗೆ ಗುರು ಸಮಾನರು. ನಾಳೆ ಶುಭದಿನ. ಅದಕ್ಕೆಂದೇ ವಿವಾಹಮಹೋತ್ಸವವನ್ನು ನಾಳೆಗೆ ಇರಿಸಿಕೊಳ್ಳಲಾಗಿದೆ. ನಿಮಗೇನಾದರೂ ಹೇಳಬೇಕೆಂದಿದ್ದರೆ ಧಾರಾಳವಾಗಿ ನಿಮ್ಮ ಅಭಿಪ್ರಾಯಗಳನ್ನು ಮಂಡಿಸಬಹುದು. ಏನೂ ಹೇಳಲಿಕ್ಕಿಲ್ಲವೆಂದಾದರೆ ದಾಸಿಯರು ನಿಮ್ಮನ್ನು ಮತ್ತೆ ಅತಿಥಿಗೃಹಕ್ಕೆ ಕರೆದೊಯ್ಯುತ್ತಾರೆ. ನಿಮಗೆ ಬೇಕಾಗುವ ಸಮಸ್ತ ವಸ್ತ್ರಾಭರಣಗಳನ್ನು ಈಗಾಗಲೇ ಅತಿಥಿಗೃಹಕ್ಕೆ ಕಳುಹಿಸಿಕೊಡಲಾಗಿದೆ. ಹಸ್ತಿನಾವತಿಯನ್ನು ಕಾಶಿ ಎಂದೇ ತಿಳಿದುಕೊಳ್ಳಿ.

ರಾಜಕುವರಿಯರು ಮೊದಲ ಬಾರಿಗೆ ವಿಚಿತ್ರವೀರ್ಯನನ್ನು ಆಪಾದಮಸ್ತಕ ದಿಟ್ಟಿಸಿ ನೋಡಿದರು. ಅವರ ಮುಖದ ಬಣ್ಣ ಬದಲಾಯಿತು. ನಿರಾಶೆಯ ಮತ್ತು ನೋವಿನ ಭಾವ ಕಾಣಿಸಿಕೊಂಡಿತು. ಅವರಲ್ಲಿ ಅತ್ಯಂತ ಚೆಲುವೆಯಾಗಿ ಕಾಣಿಸುವವಳು ಎದ್ದು ನಿಂತು ಮೌನವನ್ನು ಮುರಿದಳು : “ನಾನು ಅಂಬೆ. ಕಾಶೀರಾಜನ ಹಿರಿಗುವರಿ. ನನ್ನ ತಂಗಿಯಂದಿರ ನಿರ್ಧಾರವೇನೆಂದು ನನಗೆ ತಿಳಿಯದು. ನನ್ನ ಅಭಿಪ್ರಾಯವನ್ನಷ್ಟೇ ನಾನು ಹೇಳುತ್ತಿರುವುದು. ಇದನ್ನು ಉಧ್ಧಟತನವೆಂದು ಸರ್ವಥಾ ಭಾವಿಸಬಾರದು.”

“ಭಾವಿಸುವುದಿಲ್ಲ, ಹೇಳಮ್ಮ.” ರಾಜಮಾತೆ ಧೈರ್ಯ ತುಂಬಿದಳು.

ಅಂಬೆ ಮುಂದುವರಿಸಿದಳು: “ಕಾಶೀ ರಾಜಕುವರಿಯರ ಸ್ವಯಂವರಕ್ಕೆ ವಿಕ್ರಮವೇ ಪಣವಾಗಿತ್ತು. ಪಣದಲ್ಲಿ ಗೆದ್ದವನು ಸಾಲ್ವಭೂಪತಿ. ಅವನನ್ನು ಸೋಲಿಸಿ ಆಚಾರ್ಯರು ನಮ್ಮನ್ನು ಇಲ್ಲಿಗೆ ಕರೆತಂದಿದ್ದಾರೆ. ಹಸ್ತಿನಾವತಿಯ ರಥವೇರುವಾಗ ಆಚಾರ್ಯರೇ ನಮ್ಮ ಪತಿಯಾಗಲಿರುವವರು ಎಂದು ನಾನು ಭಾವಿಸಿದ್ದೆ. ಈಗ ನೀವು ವಿಚಿತ್ರವೀರ್ಯನನ್ನು ಮದುವೆಯಾಗಲು ಹೇಳುತ್ತಿದ್ದೀರಿ. ಪಣವನ್ನು ಗೆದ್ದವರನ್ನು ನಾವು ವಿವಾಹವಾಗಬೇಕಲ್ಲದೆ ನೀವು ತೋರಿಸಿದವರನ್ನಲ್ಲ. ವಿಚಿತ್ರವೀರ್ಯನನ್ನು ನಾವು ಮದುವೆಯಾಗುವುದು ಸ್ವಯಂವರದ ಪಣಕ್ಕೆ ವಿರುಧ್ಧವಾಗುವುದರಿಂದ ಧರ್ಮಬಾಹಿರ ಕೃತ್ಯವಾಗುತ್ತದೆ.”

ಅಂಬೆಯ ಜಾಣತನ ಮತ್ತು ಧೈರ್ಯ ಭೀಷ್ಮರಿಗೆ ಮೆಚ್ಚುಗೆಯಾದವು. ಅಳೆದೂ ತೂಗಿ ಧರ್ಮಸೂಕ್ಷ್ಮದ ಪ್ರಶ್ನೆಯೆತ್ತಿದ ಅವಳ ವಿಧಾನಕ್ಕೆ ರಾಜಮಾತೆ ತಲೆದೂಗಿದಳು. ಇದು ಜಾಣತನ ದಿಂದ ಬಗೆಹರಿಸಬೇಕಾದ ಪ್ರಶ್ನೆಯೆಂದುಕೊಂಡು ಭೀಷ್ಮರೆಂದರು.

ಅಮ್ಮ ಅಂಬೇ, ನೀನು ನಿನ್ನ ಅಭಿಪ್ರಾಯವನ್ನು ಮುಚ್ಚು ಮರೆಯಿಲ್ಲದೆ ತಿಳಿಸಿದ್ದಿ. ಅದು ನಿನ್ನ ಒಳ್ಳೆಯತನಕ್ಕೆ ಸಾಕ್ಷಿ. ನಾನು ನಿಮ್ಮನ್ನು ಗೆದ್ದು ತಂದದ್ದು ನಿಜ. ಆದರೆ ನಿಮ್ಮನ್ನು ನಾನು ವಿವಾಹವಾಗುತ್ತೇನೆಂದು ಎಲ್ಲಾದರೂ ಹೇಳಿದ್ದೇನೆಯೆ? ಕಾಶೀ ರಾಜನಲ್ಲಿ ನಾನು ನಿನ್ನ ಕುವರಿಯರು ಹಸ್ತಿನಾವತಿಯ ರಾಣಿಯರಾಗುತ್ತಾರೆಂದಿದ್ದೇನೆ. ಭೀಷ್ಮನ ರಾಣಿಯರಾಗುತ್ತಾರೆಂದಲ್ಲ. ಹಸ್ತಿನಾವತಿಯ ಸಿಂಹಾಸನದ ರಕ್ಷಣೆಗಾಗಿ ಆಜೀವ ಪರ್ಯಂತ ಬ್ರಹ್ಮಚರ್ಯದ ದೀಕ್ಷೆಯನ್ನು ಕೈಗೊಂಡವನು ನಾನು. ವಿಚಿತ್ರವೀರ್ಯನಿಗಾಗಿ ನಿಮ್ಮನ್ನು ಗೆದ್ದು ತರಲು ನನಗೆ ಆಜ್ಞಾಪಿಸಿದವರು ಸತ್ಯವತೀ ದೇವಿಯವರು. ಸಿಂಹಾಸನಕ್ಕೆ ನಿಷ್ಠನಾಗಿ ರಾಜಮಾತೆಯ ಆದೇಶವನ್ನು ಪಾಲಿಸಿದ್ದೇನೆ. ನಾನು ದೀಕ್ಷೆಯನ್ನು ಬಿಟ್ಟು ಬಿಡುವ ಮಾತೇ ಇಲ್ಲ. ಬರಿದೆ ಆಗದ ಹೋಗದ ಒಣ ಚರ್ಚೆಗಳೇಕೆ? ವಿಚಿತ್ರವೀರ್ಯನ ಪಟ್ಟಮಹಿಷಿಯಾಗಿ ಮುಂದೊಂದು ದಿನ ರಾಜಮಾತೆಯಾಗು.”

ಅಂಬೆ ಅವರನ್ನೇ ದಿಟ್ಟಿಸಿ ನೋಡಿದಳು : “ಆಚಾರ್ಯರೇ, ನಿಮಗೆ ನಿಮ್ಮ ದೀಕ್ಷೆ ಮುಖ್ಯವಾದರೆ, ಕ್ಷತ್ರಿಯಾಣಿಯಾಗಿ ನನಗೆ ಅಪ್ಪನ ಪಣ ಮುಖ್ಯವಾಗುತ್ತದೆ. ಈಗ ನಮ್ಮನ್ನು ವಿಚಿತ್ರವೀರ್ಯನ ಅರಸಿಯರಾಗಲು ಹೇಳುತ್ತಿದ್ದೀರಿ. ಶೌರ್ಯವೇ ಪಣವಾಗಿದ್ದ ಸ್ವಯಂವರ ಮಂಟಪವದು. ಅಲ್ಲಿ ಈ ವಿಚಿತ್ರವೀರ್ಯನ ಶೌರ್ಯ ಪರೀಕ್ಷಯಾಗಲಿಲ್ಲ. ನಿಮ್ಮ ಶೌರ್ಯದ ಪರೀಕ್ಷೆಯಾಯಿತು. ನೀವು ಪಣವನ್ನು ಗೆದ್ದುದಕ್ಕೆ ಫಲರೂಪವಾಗಿ ದೊರೆತವರು ನಾವು. ಶೌರ್ಯಕ್ಕೆ ಪ್ರತಿಫಲವಾಗಿ ಸಿಕ್ಕ ಕನ್ಯಾರತ್ನಗಳನ್ನು ಅನ್ಯರಿಗೆ ಯಾವ ಗಂಡು ನೀಡಿಯಾನು?
ನಮ್ಮನ್ನು ಸೊತ್ತುಗಳಂತೆ ನಡೆಸಿಕೊಳ್ಳಬೇಡಿ. ನಾವು ಹೃದಯವುಳ್ಳ ಮಾನವರು. ನಿಮ್ಮದು ಆಜೀವ ಬ್ರಹ್ಮಚಾರಿತ್ವ ವ್ರತವಾಗಿದ್ದರೆ ಸ್ವಯಂವರ ಮಂಟಪಕ್ಕೆ ನೀವು ಬಂದದ್ದೇ ತಪು- ಅಪ್ಪನ ಪಣದ ಹೊರತಾಗಿಯೂ, ನನ್ನ ಪತಿ ಅತ್ಯಂತ ಶೌರ್ಯವಂತನಾಗಿರಬೇಕೆಂದು ಬಯಸುವವಳು ನಾನು. ವಿಚಿತ್ರವೀರ್ಯನೇ ನಮ್ಮನ್ನು ಗೆದ್ದು ತರುತ್ತಿದ್ದರೆ ಯಾವುದೇ ಸಮಸ್ಯೆ ಉದ್ಭವಿಸುತ್ತಿರಲಿಲ್ಲ. ನೀವು ಗೆದ್ದು ತಂದಿದ್ದೀರಿ. ನೀವೇ ನಮ್ಮ ಪತಿಯೆಂದು ನಂಬಿ ಬಂದವರು ನಾವು. ಈಗ ನಮ್ಮನ್ನು ಅನ್ಯರಿಗೊಪ್ಪಿಸುವ ಮಾತು ಬೇಡ. ಕ್ಷತ್ರಿಯ ಧರ್ಮಾನುಸಾರ ನಮ್ಮನ್ನು ವಿವಾಹವಾಗಿ ನಮಗೆ ಬದುಕು ಕೊಡಿ.”

ಭೀಷ್ಮರಿಗೆ ತಕ್ಷಣ ಏನುತ್ತರಿಸಬೇಕೆಂದು ತಿಳಿಯಲಿಲ್ಲ. ಅಂಬೆ ಧರ್ಮಬದ್ಧವಾದ ಮಾತುಗಳನ್ನಾಡುತ್ತಿದ್ದಾಳೆ. ತಪ್ಪು ಯಾರದು? ಸಿಂಹಾಸನದ ರಕ್ಷಕನಾಗಿ ರಾಜಮಾತೆಯ ಆದೇಶಕ್ಕೆ ಬದ್ಧನಾಗಿ ಸ್ವಯಂವರ ಮಂಟಪಕ್ಕೆ ಹೋದದ್ದು ತಪ್ಪು ಹೇಗಾಗುತ್ತದೆ? ಅಂಬೆಯೆಂದಂತೆ ವಿಚಿತ್ರವೀರ್ಯನನ್ನು ಸ್ವಯಂವರ ಮಂಟಪಕ್ಕೆ ಕಳುಹಿಸಲು ಎಲ್ಲಿ ಸಾಧ್ಯವಿತ್ತು? ಹೋಗೆಂದರೂ ಅವನು ಹೋಗುತ್ತಿರಲಿಲ್ಲ. ಹೋಗುತ್ತಿದ್ದರೂ ಸಾಲ್ವಭೂಪತಿಯನ್ನು ಇವನಿಂದ ಗೆಲ್ಲಲಾಗುತ್ತಿರಲಿಲ್ಲ. ವಿಚಿತ್ರವೀರ್ಯ ಶೌರ್ಯವಂತನಾಗಿರುತ್ತಿದ್ದರೆ ಈ ಬಿಕ್ಕಟ್ಟೇ ಉದ್ಭವಿಸುತ್ತಿರಲಿಲ್ಲ. ಇವಳು, ಈ ಎಳೆಯ ಪ್ರಾಯದ ಅಂಬೆ, ಆಡಿದ ಮಾತುಗಳನ್ನು ಭವಿಷ್ಯದ ನೆಲೆಯಲ್ಲಿ ನೋಡಬೇಕು. ವೀರ್ಯವಂತರು ಗೆದ್ದು ತರುವ ಹೆಣ್ಣುಗಳು ಶೌರ್ಯಹೀನರ ಭೋಗದ ತೊತ್ತಾಗುವ ಅಪಾಯವನ್ನು ಇವಳು ಕಂಡುಕೊಂಡಿದ್ದಾಳೆ. ಇವಳು ಹಸ್ತಿನಾವತಿಯ ಸಮ್ರಾಜ್ಞಿಯಾಗುವ ಅರ್ಹತೆಯುಳ್ಳವಳು. ಆದರೆ ಇವಳನ್ನು ಒಡಂಬಡಿಸುವುದು ಹೇಗೆ?

ಅನುನಯದ ಸ್ವರದಲ್ಲಿ ಭೀಷ್ಮರೆಂದರು : “ಅಮ್ಮಾ ಅಂಬೇ, ಲೋಕದ ಸಮಸ್ತ ಹೆಣ್ಣುಗಳನ್ನು ಮಾತೃಸ್ಥಾನದಲ್ಲಿ ಇರಿಸಿ ಗೌರವಿಸುವವ ನಾನು. ಪಿತನಿಗಾಗಿ, ಹಸ್ತಿನಾವತಿಯ ಸಿಂಹಾಸನಕ್ಕಾಗಿ ಮಾಡಿದ ಪ್ರತಿಜ್ಞೆಯನ್ನು ಮುರಿಯುವ ಮಾತೇ ಇಲ್ಲ. ನಿಮ್ಮನ್ನು ಕಾಶೀರಾಜನ ಪಣಕ್ಕನುಗುಣವಾಗಿ ಗೆದ್ದು ತಂದವನಲ್ಲ. ಕಾಶೀರಾಜ ನಮಗೆ ಆಮಂತ್ರಣವನ್ನೇ ಕಳುಹಿಸಲಿಲ್ಲವೆಂದಾದ ಮೇಲೆ ಅವನ ಪಣ ನನಗನ್ವಯವಾಗುವುದಿಲ್ಲ. ನಾನು ಹಸ್ತಿನಾವತಿಯ ಸಮ್ರಾಟನ ಆಜ್ಞಾಪಾಲಕ. ಸಮ್ರಾಟನನ್ನು ಒಬ್ಬ ರಾಜ ಅಪಮಾನಿಸುತ್ತಾನೆಂದಾದರೆ ಸಾಮ್ರಾಜ್ಯದ ಸಂರಕ್ಷಕ ಸುಮ್ಮನಿರಲು ಸಾಧ್ಯವಾಗುವುದಿಲ್ಲ. ಸಮ್ರಾಟನಿಗಾಗಿ ರಾಜಮಾತೆಯಿಂದ ಆಜ್ಞಪ್ತನಾಗಿ ನಿಮ್ಮನ್ನು ಇಲ್ಲಿಗೆ ಕರೆತಂದಿದ್ದೇನೆ. ನೀವು ಬರಲೊಪ್ಪದಿರುತ್ತಿದ್ದರೆ ಬಲಾತ್ಕಾರದಿಂದ ಕರೆತರಬೇಕಾಗುತ್ತಿತ್ತು. ಅದಕ್ಕೆ ನೀವು ಆಸ್ಪದ ನೀಡದೆ ಒಳ್ಳೆಯ ಕೆಲಸ ಮಾಡಿದಿರಿ.”

ಒಂದು ಕ್ಷಣ ತಡೆದು ಭೀಷ್ಮರೆಂದರು : “ಅಮ್ಮಾ ಅಂಬೇ, ಸಮಷ್ಟಿಯಾಗಿ ಯೋಚಿಸಿದರೆ ಒಟ್ಟು ಪ್ರಕರಣದಲ್ಲಿ ನನ್ನ ತಪ್ಪಿಲ್ಲವೆನ್ನುವುದು ನಿನಗೇ ಅರಿವಾಗುತ್ತದೆ. ಈಗಲೂ ನಾನು ನಿಮ್ಮನ್ನು ಬಲಾತ್ಕರಿಸುತ್ತಿಲ್ಲ. ಆಯ್ಕೆಯ ಸ್ವಾತಂತ್ರ್ಯವನ್ನು ನಿಮಗೇ ನೀಡುತ್ತಿದ್ದೇನೆ. ಇಷ್ಟವಿದ್ದರೆ ನೀವು ಸಮ್ರಾಟ ವಿಚಿತ್ರವೀರ್ಯನ ಅರಸಿಯರಾಗಿ ಹಸ್ತಿನಾವತಿಯನ್ನು ನಿಮ್ಮ ಇಚ್ಚಾನುಸಾರ ಆಳಬಹುದು. ನಿಮ್ಮ ಕಾಶಿಯೂ ಆಗ ಹಸ್ತಿನಾವತಿಯ ಒಂದು ಭಾಗವಾಗಿರುತ್ತದೆ. ನಿಮಗಿದು ಇಷ್ಟವಿಲ್ಲವೆಂದಾದರೆ ನಿಮ್ಮನ್ನು ಅತ್ಯಂತ ಗೌರವದಿಂದ ಕಾಶಿಗೆ ಕಳುಹಿಸಿಕೊಡುವ ವ್ಯವಸ್ಥೆ ಮಾಡುತ್ತೇನೆ. ಹೇಳಿ, ಏನು ಮಾಡುತ್ತೀರಿ?”

ಅಂಬಿಕೆ ಮತ್ತು ಅಂಬಾಲಿಕೆಯರು ಎದ್ದು ನಿಂತು ರಾಜಮಾತೆಗೆ ವಂದಿಸಿ ದಾಸಿಯರೊಡನೆ ಅತಿಥಿಗೃಹಕ್ಕೆ ಹಿಂದಿರುಗಿದರು. ವಿಚಿತ್ರವೀರ್ಯನೂ ಎದ್ದು ಒಳ ನಡೆದ. ಅಲ್ಲಿ ಮೂವರೇ ಉಳಿದರು. ಅಂಬೆ ಅಚಲವಾಗಿ ಕೂತಿದ್ದವಳು ಭೀಷ್ಮರನ್ನು ನೋಡಿ ಹೇಳಿದಳು : “ಆಚಾರ್ಯರೇ, ನೀವು ಕಾಶಿಗೆ ನಮ್ಮನ್ನು ಕಳುಹಿಸಿಕೊಡುವ ಮಾತಾಡುತ್ತಿದ್ದೀರಿ. ನಮಗೆ ಸ್ವಾತಂತ್ರ್ಯ ನೀಡುವುದು ನಿಮ್ಮ ಉದ್ದೇಶವಾಗಿದ್ದರೆ, ಕಾಶಿಯಲ್ಲಿ ನಿಮ್ಮ ರಥಕ್ಕೆ ಏರುವ ಮುನ್ನ ನಮಗೊಂದು ಮಾತು ಹೇಳಬಹುದಾಗಿತ್ತು, ತಮ್ಮ ವಿಚಿತ್ರವೀರ್ಯನಿಗಾಗಿ ಸ್ವಯಂವರ ಮಂಟಪಕ್ಕೆ ಬಂದವರೆಂದು. ಅಲ್ಲೇ ನಮಗೆ ಸ್ವಾತಂತ್ರ್ಯ ಕೊಡುತ್ತಿದ್ದರೆ ನಾನು ನಿಮ್ಮೊಡನೆ ಹಸ್ತಿನಾವತಿಗೆ ಬರುತ್ತಲೇ ಇರಲಿಲ್ಲ. ಇಲ್ಲಿ ಈಗ ಸ್ವಾತಂತ್ರ್ಯ ನೀಡುವ ಮಾತಾಡುತ್ತಿದ್ದೀರಿ. ಅದು ಅಂತರಾಳದ ಮಾತಾಗಿರಲಾರದು. ಇನ್ನು ನಾವು ಕಾಶಿಗೆ ಹೋದರೆ ಆರ್ಯಾವರ್ತದ ಕ್ಷತ್ರಿಯರು ಏನೆಂದುಕೊಳ್ಳುತ್ತಾರೆಂದು ಒಂದು ಕ್ಷಣ ಯೋಚಿಸಿ. ಅಪ್ಪನೂ ನಮ್ಮನ್ನು ಸ್ವೀಕರಿಸಲಾರ. ನಾವು ಉಭಯಭ್ರಷ್ಟರಾಗುತ್ತೇವೆ. ತಂಗಿಯಂದಿರು ಅವರ ದಾರಿಯನ್ನು ಕಂಡುಕೊಂಡರು. ಏನಾದರೂ ನಾನು ಈ ಮಾತ್ರ ವಿಚಿತ್ರ ವೀರ್ಯನನ್ನು ವಿವಾಹವಾಗಲಾರೆ. ನೀವೇ ನನ್ನ ಪತಿಯಾಗಿ ನಿಮ್ಮಿಂದಾಗಿರುವ ಮಹಾ ಪ್ರಮಾದವನ್ನು ಸರಿಪಡಿಸಬೇಕು.”

ಭೀಷ್ಮರು ರಾಜಮಾತೆಯನ್ನೊಮ್ಮೆ ನೋಡಿದರು. ರಾಜಮಾತೆ ಸತ್ಯವತೀದೇವಿ ಅಂಬೆಯ ಬಳಿಗೆ ಹೋಗಿ ವಾತ್ಸಲ್ಯದಿಂದ ತಲೆನೇವರಿಸಿ ಹೇಳಿದಳು : “ಮಗಳೇ, ಆಚಾರ್ಯರು ಆಜೀವ ಬ್ರಹ್ಮಚಾರಿಯಾಗಿರುತ್ತೇನೆಂದು ಪ್ರತಿಜ್ಞಾಬದ್ಧರಾದವರು. ಅದಕ್ಕೊಂದು ಹಿನ್ನೆಲೆಯಿದೆ. ಆಚಾರ್ಯರ ತಾಯಿ ಗಂಗಾದೇವಿ ಎಳವೆಯಲ್ಲೇ ಶಂತನು ಚಕ್ರವರ್ತಿಗಳನ್ನು, ಮಗು ದೇವವ್ರತನನ್ನು, ತ್ಯಜಿಸಿ ವಿರಕ್ತಳಾಗಿ ಹಿಮಾಲಯದತ್ತ ಹೋದಳು. ಚಕ್ರವರ್ತಿಗಳು ವಿರಹಪೀಡಿತರಾಗಿ ಕಾಡು, ಗುಡ್ಡ, ನದೀತೀರಗಳಲ್ಲಿ ಅಲೆದಾಡುತ್ತಿದ್ದವರ ದೃಷ್ಟಿಗೆ ನಾನು ಬಿದ್ದೆ. ನಮ್ಮದು ಮತ್ಸ್ಯಕುಲ. ನನ್ನಪ್ಪ ದಾಶರಾಜನೊಡನೆ ಚಕ್ರವರ್ತಿಗಳು ತಮ್ಮ ಮನದಿಂಗಿತವನ್ನು ವ್ಯಕ್ತಪಡಿಸಿದಾಗ, ಮಗಳ ಉದರದಲ್ಲಿ ಜನಿಸುವವನಿಗೆ ಹಸ್ತಿನಾವತಿಯ ಸಿಂಹಾಸನ ದೊರೆಯುವುದಾದರೆ ಮಾತ್ರ ವಿವಾಹಕ್ಕೆ ಸಮ್ಮತಿ ಈಯುವುದಾಗಿ ಹೇಳಿಬಿಟ್ಟ. ಚಕ್ರವರ್ತಿಗಳಿಗದು ಇಷ್ಟವಾಗಲಿಲ್ಲ. ಹಸ್ತಿನಾವತಿಗೆ ಮರಳಿದವರು ನಿದ್ರಾಹಾರ ಬಿಟ್ಟು ತೊಳಲಾಡಿದರು. ದೇವವ್ರತನಿಗೆ ವಿಷಯ ಗೊತ್ತಾಗಿ ಅವನು ನೇರವಾಗಿ ದಾಶರಾಜನಲ್ಲಿಗೆ ಬಂದ. ತಾನು ಯಾವಜ್ಜೀವ ಪರ್ಯಂತ ಬ್ರಹ್ಮಚಾರಿಯಾಗಿ ಹಸ್ತಿನಾವತಿಯ ಸಿಂಹಾಸನದ ರಕ್ಷಕನಾಗಿರುತ್ತೇನೆಂದು ನಮ್ಮ ಸಮುದಾಯದ ಹತ್ತು ಸಮಸ್ತರ ಮುಂದೆ ಪ್ರತಿಜ್ಞಾಬದ್ಧನಾಗಿ ಭೀಷ್ಮ ಎನಿಸಿಕೊಂಡ. ದೇವವ್ರತನೆಂಬ ನಿಜ ನಾಮಧೇಯ ಬಹುಶಃ ಅವನಿಗೇ ಮರೆತು ಹೋಗಿರಬೇಕು.”

ರಾಜಮಾತೆ ಇಳಿದನಿಯಲ್ಲಿ ಮಾತು ಮುಂದುವರಿಸಿದಳು : “ನನ್ನ ಅಪ್ಪ ದಾಶರಾಜ ಈ ದೇವವ್ರತನ ಪ್ರತಿಜ್ಞೆಯಿಂದ ಸಂತಸಗೊಂಡು ನನ್ನನ್ನು ಹಸ್ತಿನಾವತಿಯ ಸಾಮ್ರಾಜ್ಞಿಯಾಗಲು ಕಳುಹಿಸಿಕೊಟ್ಟರು. ನನ್ನ ಇಚ್ಚೆಯೇನೆಂದು ಯಾರೂ ಕೇಳಿದವರಿಲ್ಲ. ನನ್ನ ಅನುಭವದಿಂದ ಹೇಳುತ್ತಿದ್ದೇನೆ ಮಗಳೇ, ಜೀವನವನ್ನು ಬಂದ ಹಾಗೆ ಸ್ವೀಕರಿಸಬೇಕಾಗುತ್ತದಮ್ಮಾ. ನನ್ನ ಮೊದಲ ಮಗ ಚಿತ್ರಾಂಗದ ಸಾಮರ್‍ಥ್ಯಶಾಲಿಯಾಗಿದ್ದ. ಸುಮ್ಮನೆ ಗಂಧರ್ವರೊಡನೆ ಕಾಲು ಕೆದರಿ ಕದನ ಮಾಡಿ ಹತನಾದ. ಆಗ ಈ ಸಿಂಹಾಸನವೇರೆಂದು ಭೀಷ್ಮನನ್ನು ಬೇಡಿಕೊಂಡವಳು ನಾನು. ಈತನನ್ನು ಸಂಸಾರಸುಖದಿಂದ ವಂಚಿತಳನ್ನಾಗಿ ಮಾಡಿದ ಪಾಪಪ್ರಜ್ಞೆಯಿಂದ ವಿಮುಕ್ತಿ ಸಿಗಬೇಕಾದರೆ ಭೀಷ್ಮ ವಿವಾಹವಾಗಬೇಕಿತ್ತು; ಹಸ್ತಿನಾವತಿಯ ಸಿಂಹಾಸನಕ್ಕೆ ಸಮರ್ಥ ಉತ್ತರಾಧಿಕಾರಿಯನ್ನು ಕೊಡಬೇಕಿತ್ತು ಎಂದು ನನಗೆ ಅದೆಷ್ಟೋ ಬಾರಿ ಅನ್ನಿಸಿದ್ದಿದೆ. ಭೀಷ್ಮನಲ್ಲಿ ನಾನಿದನ್ನು ಹೇಳಿದ್ದೂ ಇದೆ.

ತಕ್ಷಣ ಅಂಬೆಯೆಂದಳು : “ರಾಜಮಾತೆಯ ಆದೇಶದಂತೆ ನಮ್ಮನ್ನು ಹಸ್ತಿನಾವತಿಗೆ ತಂದವರು ಇದನ್ನು ರಾಜಮಾತೆಯ ಆದೇಶ ಎಂದೇಕೆ ಭಾವಿಸುತ್ತಿಲ್ಲ? ಸಿಂಹಾಸನಕ್ಕೆ ನಿಷ್ಠರಾದರೆ ಈ ಆದೇಶವನ್ನು ಆಚಾರ್ಯರು ಪಾಲಿಸಲಿ. ಆಚಾರ್ಯರು ಮಾತಿನಿಂದ ನನ್ನನ್ನು ಸೋಲಿಸಬಹುದು. ಆದರೆ ಅವರು ನನ್ನನ್ನು ನನಗಿಷ್ಟವಿಲ್ಲದ ಅನ್ಯರಿಗೆ ಒಪ್ಪಿಸುವ ಮಾತಾಡುವುದು ಅಧರ್ಮವಾಗುತ್ತದೆ. ಹಸ್ತಿನಾವತಿಯ ಸಿಂಹಾಸನ ಅಧರ್ಮವನ್ನು ಧರ್ಮವೆಂದು ಭಾವಿಸಿಕೊಂಡರೆ ಮುಂದೆ ಅನರ್ಥ ಪರಂಪರೆಗಳು ಸಂಭವಿಸಬಹುದು. ಆಚಾರ್ಯರು ತಮ್ಮ ದ್ವಿಮುಖ ನೀತಿಯನ್ನು ಕೈಬಿಟ್ಟು ನನ್ನನ್ನು ವಿವಾಹವಾಗಲಿ.”

ಭೀಷ್ಮರು ಅಂತರ್ಮುಖಿಯಾದರು. ಶಂತನು ಚಕ್ರವರ್ತಿಗಳು ತಂದೆಯಾಗಿ, ತಾಯಿಯಾಗಿ ಅತೀವ ವಾತ್ಸಲ್ಯದಿಂದ ನೋಡಿಕೊಂಡ ಆ ದಿನಗಳು ಅವರಿಗೆ ನೆನಪಾದವು. ಚಕ್ರವರ್ತಿಗಳಿಗೆ ಸ್ತ್ರೀವ್ಯಾಮೋಹವಿರುತ್ತಿದ್ದರೆ ಅವರು ಅಷ್ಟು ದಿವಸ ಕಾಯುತ್ತಿದ್ದರೆ? ಸತ್ಯವತೀ ದೇವಿಯನ್ನು ಕಂಡಾಗ ಅವರ ಸಂಯಮ ಉಳಿಯಲಿಲ್ಲ. ದಾಶರಾಜನ ಹಟದಿಂದಾಗಿ ದೇವವ್ರತ ಭೀಷ್ಮನಾದ. ಚಕ್ರವರ್ತಿಗಳಿಗೆ ಭೀಷ್ಮಪ್ರತಿಜ್ಞೆಯ ವಿಷಯ ಆರಂಭದಲ್ಲಿ ಗೊತ್ತಿರಲೇ ಇಲ್ಲ. ಗೊತ್ತಾದಾಗ ಅವರು ಪರಿತಪಿಸಿದ್ದರು. ದೇವವ್ರತಾ, ಅದು ಅರ್ಥವಿಲ್ಲದ ಪ್ರತಿಜ್ಞೆ. ನೀನು ನನ್ನ ಹಿರಿಯ ಮಗ. ಈ ಸಿಂಹಾಸನಕ್ಕೆ ಉತ್ತರಾಧಿಕಾರಿ. ನೀನಲ್ಲದೆ ಬೇರೆಯವರಾಗುವುದು ಅಧರ್ಮವಾಗುತ್ತದೆ, ಅನ್ಯಾಯವಾಗುತ್ತದೆ. ನಿನಗಿಂತ ನನಗೆ ಸತ್ಯವತಿ ದೊಡ್ಡವಳಲ್ಲ. ಪ್ರತಿಜ್ಞಾಪೂರ್ವದಲ್ಲಿ ನನ್ನನ್ನಾಗಲೀ, ಸತ್ಯವತಿಯನ್ನಾಗಲೀ ಒಂದು ಮಾತು ನೀನು ಕೇಳಲಿಲ್ಲ. ನಮ್ಮಿಬ್ಬರ ಆದೇಶವಿದೆಂದು ತಿಳಿದುಕೋ. ನಿನಗಿಷ್ಟವಾದವಳನ್ನು ವಿವಾಹವಾಗಿ ಹಸ್ತಿನಾವತಿಗೊಬ್ಬ ಉತ್ತರಾಧಿಕಾರಿಯನ್ನು ಪಡೆ.”

ಯೋಚನಾಲಹರಿಯನ್ನು ಅಲ್ಲಿಗೆ ನಿಲ್ಲಿಸಿ ಭೀಷ್ಮರೆಂದರು : “ಅಂಬೇ, ವಿವಾಹಕ್ಕೆ ವಯಸ್ಸು ಎಷ್ಟು ಮುಖ್ಯವೋ, ಮನಸ್ಸೂ ಅಷ್ಟೇ ಮುಖ್ಯ. ನನಗೀಗ ಅವೆರಡೂ ಇಲ್ಲ. ನಾನು ಪ್ರತಿಜ್ಞೆ ಕೈಗೊಂಡದ್ದು ಸಮಷ್ಟಿಯ ಹಿತದೃಷ್ಟಿಯಿಂದ. ಸೂರ್ಯವಂಶದ ರಾಮಚಂದ್ರನ ಬಗ್ಗೆ ಕೇಳಿರಬಹುದು ನೀನು. ತಂದೆಗಾಗಿ ಹದಿನಾಲ್ಕು ವರ್ಷ ವನವಾಸ ಕೈಗೊಂಡ ಪುರುಷೋತ್ತಮನಾತ. ನಾನು ಚಂದ್ರವಂಶೀಯನೆಂಬ ಹಮ್ಮಿನಿಂದ ಪ್ರತಿಜ್ಞೆ ಕೈಗೊಂಡದ್ದಲ್ಲ. ನಾಡನ್ನು ಆಳುವವರು ಮಕ್ಕಳನ್ನು ಪಡೆಯದಿದ್ದರೂ ಚಿಂತಿಲ್ಲ, ಮೌಲ್ಯಗಳನ್ನು ಸೃಷ್ಟಿಸಬೇಕು. ಅವನ್ನು ಉಳಿಸಬೇಕು. ಅಪುತ್ರಸ್ಯ ಗತಿರ್ನಾಸ್ತಿಯೆಂದು ಭಾವಿಸುವವರೇ ತುಂಬಿಕೊಂಡಿರುವಲ್ಲಿ ಅಪ್ಪನಿಗಾಗಿ ಬ್ರಹ್ಮಚಾರಿಯಾಗಿದ್ದು ಬಿಡುತ್ತೇನೆಂದು ಪ್ರತಿಜ್ಞಾಬದ್ಧನಾಗುವುದು ಎಂತಹ ಮೌಲ್ಯವಾಗುತ್ತದೆಂಬುದನ್ನು ಯೋಚಿಸಿ ನೋಡು. ಹರೆಯದ ಕಾಲದಲ್ಲಿ ಚಂಚಲವಾಗುತ್ತಿದ್ದ ಚಿತ್ತವನ್ನು ಆಧ್ಯಾತ್ಮದತ್ತ ತಿರುಗಿಸಲು ನಾನು ಕಷ್ಟಪಟ್ಟಿದ್ದೇನೆ. ಹುಟ್ಟಿನ ಬಗ್ಗೆ, ಬದುಕಿನ ಬಗ್ಗೆ, ಸಾವಿನ ಬಗ್ಗೆ, ಸತ್ತ ಬಳಿಕದ ಸ್ಥತಿಯ ಬಗ್ಗೆ ಓದಿ, ಜಿಜ್ಞಾಸೆ ನಡೆಸಿ, ದರ್ಶನವೊಂದನ್ನು ರೂಪಿಸಿಕೊಂಡಿದ್ದೇನೆ. ಪ್ರತಿಜ್ಞೆಯನ್ನು ಎಂದಿಗೂ ಮುರಿಯಬಾರದು ಎಂಬ ದೃಢ ನಿರ್ಧಾರ ತಾಳಿದ್ದೇನೆ. ಸಮಸ್ತ ಭೂಮಂಡಲದ ಹೆಣ್ಣುಗಳನ್ನು ಮಾತೆಯರು ಎಂದುಕೊಂಡಿದ್ದೇನೆ. ಭೀಷ್ಮ ತನ್ನ ಪ್ರತಿಜ್ಞೆಗಾಗಿ ಪ್ರಾಣತ್ಯಾಗ ಮಾಡಲು ಹಿಂಜರಿಯುವವನಲ್ಲ. ಸುಮ್ಮನೆ ವಾದ ಮಾಡದೆ ರಾಜಮಾತೆಯೆಂದಂತೆ ಕೇಳು. ಅದರಲ್ಲಿ ಸಮಷ್ಟಿಯ ಸುಖ ಅಡಗಿದೆ.

ರಾಜಮಾತೆ ವಾತ್ಸಲ್ಯಪೂರಿತ ದನಿಯಲ್ಲೆಂದಳು : ಮಗಳೇ, ಭೀಷ್ಮ ಲೋಕ ಒಪ್ಪುವ ಮಾತಾಡಿದ್ದಾನಮ್ಮ. ನಿನ್ನ ತಂದೆ ಪ್ರತಾಪಸೇನ ಮಹಾರಾಜರು ಸ್ವಯಂವರವನ್ನು ಮಾತ್ರ ನಿಶ್ಚಯಿಸಿದರು, ವರನನ್ನಲ್ಲ. ವಿಚಿತ್ರವೀರ್ಯ ಸ್ವಲ್ಪ ಅಂತರ್ಮುಖಿ. ಆದರೆ ತುಂಬಾ ಒಳ್ಳೆಯವನು. ನಿನ್ನ ಮಾತೆಯ ಸ್ಥಾನದಲ್ಲಿ ನಿಂತು ಹೇಳುತ್ತಿದ್ದೇನೆ. ವಿಚಿತ್ರವೀರ್ಯನ ಕೈಹಿಡಿದು ಪಟ್ಟಮಹಿಷಿಯಾಗು. ನೀನು ಧೈರ್ಯವಂತೆ, ಬುದ್ಧಿವಂತೆ ಮತ್ತು ಛಲವಂತೆ. ನಿನ್ನಿಂದ ಚಂದ್ರವಂಶ ಬೆಳಗಬೇಕು.

ಅಂಬೆ ಸುಮ್ಮನಿರುವುದನ್ನು ಕಂಡು ಭೀಷ್ಮರೆಂದರು : ಅಂಬೇ, ರಾಜಮಾತೆಯ ಮಾತುಗಳ ಅಂತರಾರ್ಥವನ್ನು ತಿಳಿದುಕೊಳ್ಳಲಾಗದಷ್ಟು ಮುಗ್ಧಿಯಲ್ಲ ನೀನು. ನಿನ್ನ ಅಪ್ಪ ಹಸ್ತಿನಾವತಿಗೊಂದು ಆಮಂತ್ರಣವನ್ನೂ ಕಳುಹಿಸದೆ ಅಪಮಾನಿಸಿದನಲ್ಲಾ? ತಪ್ಪು ಅವನದು. ಮೂವರು ಅರಗುವರಿಯನ್ನು ಅತ್ಯಂತ ಹೆಚ್ಚು ತೋಳ್ಬಲದ ಒಬ್ಬ ಕ್ಷತ್ರಿಯನಿಗೆ ಕೊಟ್ಟು ವಿವಾಹ ಮಾಡಿಸ ಹೊರಟನಲ್ಲಾ ಅವನು? ಅವನಿಗೆ ನಿಮ್ಮ ಸುಖಕ್ಕಿಂತ ಅವನ ರಾಜಕಾರಣ ಮುಖ್ಯವಾಯಿತು. ನಮ್ಮ ವಿಚಿತ್ರವೀರ್ಯ ಸ್ವಯಂವರ ಮಂಟಪಕ್ಕೆ ಬಂದು ತನ್ನ ಶೌರ್ಯವನ್ನು ಪಣಕ್ಕೊಡ್ಡಲಿಲ್ಲ. ಅದು ನಿಜ. ಆದರೆ ಸುಖ ಸಂಸಾರ ಸಾಗಿಸಲು ತೋಳ್ಬಲವೇ ಏಕೈಕ ಅರ್ಹತೆಯೆಂದು ನೀನು ಭಾವಿಸಲಾರೆ ಎಂದುಕೊಂಡಿದ್ದೇನೆ. ನಿನ್ನ ತಂಗಿಯಂದಿರು ಅವನನ್ನು ಒಪ್ಪಿಕೊಂಡಿದ್ದಾರೆ. ನೀನು ಅನಗತ್ಯ ಸಮಸ್ಯೆಗಳನ್ನು ಸೃಷ್ಟಿಸುತ್ತಿರುವೆ. ಈಗಲೂ ನಿನ್ನನ್ನು ಬಲಾತ್ಕಾರವಾಗಿ ವಿಚಿತ್ರವೀರ್ಯನಿಗೆ ಮದುವೆ ಮಾಡಿಸಿಬಿಡಬಹುದು. ಈ ಆರ್ಯಾವರ್ತದಲ್ಲಿ ಅದೆಷ್ಟು ರಾಕ್ಷಸ ವಿವಾಹಗಳು ನಡೆಯುತ್ತಿಲ್ಲ? ನೀನು ನಮ್ಮ ಒಳ್ಳೆಯತನವನ್ನು ಅರ್ಥಮಾಡಿಕೊಳ್ಳಬೇಕು.”

ಅಂಬೆ ದಢಕ್ಕನೆ ಎದ್ದು ನಿಂತಳು. ಅವಳ ಮುಖ ಸಿಟ್ಟಿನಿಂದ ಕೆಂಪು ಕೆಂಪಾಗಿತ್ತು: “ಆಚಾರ್ಯರಿಂದ ರಾಕ್ಷಸ ವಿವಾಹದ ಸಮರ್ಥನೆಯೆ? ನೀವು ನಿಮ್ಮ ಪ್ರತಿಜ್ಞೆಯನ್ನು ಉಳಿಸಲು ಪ್ರಾಣತ್ಯಾಗಕ್ಕೆ ಸಿದ್ಧರಾಗಿರುವವರು. ಈ ಅಂಬೆಯನ್ನು ಏನೆಂದುಕೊಂಡಿದ್ದೀರಿ? ಬಲಾತ್ಕಾರದ ವಿವಾಹಕ್ಕಿಂತ ಪ್ರಾಣತ್ಯಾಗವೇ ಲೇಸು. ನೀವು ಮೌಲ್ಯಗಳ ಬಗ್ಗೆ ಮಾತಾಡುವ ಬದಲು ಹೃದಯದ ಬಗ್ಗೆ ಮಾತಾಡಿ. ರಾಕ್ಷಸ ವಿವಾಹವನ್ನು ಸಮರ್ಥಿಸುವ ನೀವು, ಅಂದು ಪ್ರತಿಜ್ಞಾಬದ್ದರಾಗುವ ಬದಲು, ಸಮಷ್ಟಿಯ ಹಿತದೃಷ್ಟಿಯಿಂದ, ಸತ್ಯವತೀ ದೇವಿಯವರನ್ನು ಬಲಾತ್ಕಾರದಿಂದ ಕರಗೊಂಡು ಬರುತ್ತಿದ್ದರೆ ಆ ದಾಶರಾಜನಿಂದ ಏನು ಮಾಡಲಾಗುತ್ತಿತ್ತು? ಮತ್ತೊಮ್ಮೆ ಅದೇ ಮಾತನ್ನು ಹೇಳುತ್ತಿದ್ದೇನೆ. ವರ ಯಾರೆಂಬುದು ಸ್ವಯಂವರ ಮಂಟಪದಲ್ಲೇ ಗೊತ್ತಾಗುತ್ತಿದ್ದರೆ ನಾನು ನಿಮ್ಮ ರಥವೇರುವ ಪ್ರಸಂಗವೇ ಉದ್ಭವಿಸುತ್ತಿರಲಿಲ್ಲ. ನಿಮ್ಮಂತಹ ಆಚಾರ್ಯರುಗಳೇ ಅಲ್ಲವೇ ನಸ್ತ್ರೀ ಸ್ವಾತಂತ್ರ್ಯ ಮರ್ಹತಿ ಎಂದದ್ದು? ನೀವು ನನ್ನನ್ನು ವರಿಸಬೇಕೆಂದು ನಾನು ಹೇಳುತ್ತಿರುವುದು ನಿಮ್ಮ ಸೌಂದರ್ಯಕ್ಕೋ, ಸಾಹಸಕ್ಕೋ ಮನಸೋತಲ್ಲ. ನನ್ನದು ಧರ್ಮಸಮ್ಮತ ನಿಲುವು. ನಿಮ್ಮದು ಅನುಕೂಲಶಾಸ್ತ್ರದ ಪ್ರತಿಪಾದನೆ. ನಿಮ್ಮಂಥವರು ಹೀಗೆ ಮಾಡಬಾರದಿತ್ತು.”

ಅಂಬೆ ಮತ್ತೆ ಆಸನದಲ್ಲಿ ಕೂತಳು : “ಆಚಾರ್ಯರೇ, ನಾವು ಹಸ್ತಿನಾವತಿಯ ಸೊಸೆಯರಾಗುವುದು ಅಪ್ಪನಿಗೆ ಇಷ್ಟವಿರಲಿಲ್ಲ. ಇರುತ್ತಿದ್ದರೆ ನಿಮಗೂ ಆಮಂತ್ರಣ ಬರುತ್ತಿತ್ತು. ನೀವದನ್ನು ಪ್ರತಿಷ್ಟೆಯ ಪ್ರಶ್ನೆಯಾಗಿಸಿಕೊಂಡಿರಿ. ಆಮಂತ್ರಣವಿಲ್ಲದಿದ್ದರೂ ಸ್ವಯಂವರ ಮಂಟಪಕ್ಕೆ ಬಂದಿರಿ. ಆಗ ತಾನೇ ಸಾಲ್ವಭೂಪತಿ ಪಣವನ್ನು ಗೆದ್ದಿದ್ದ. ಸಾಲ್ವಭೂಪತಿಯ ಅರಸಿಯರಾಗ ಬೇಕಿದ್ದ ನಮಗೆ ನಿಮ್ಮ ಪ್ರವೇಶ ಅನೂಹ್ಯವಾಗಿತ್ತು. ನೀವು ಸಾಲ್ವಭೂಪತಿಯನ್ನು ಗೆದ್ದಿರಿ. ನಿರ್ವಾಹವಿಲ್ಲದೆ ನಿಮ್ಮ ರಥವೇರಬೇಕಾಯಿತು ನಾವು. ನಮ್ಮ ಪತಿಯಾಗಲಿರುವವ ವಿಚಿತ್ರವೀರ್ಯ ನೆನ್ನುವುದು ಗೊತ್ತಾಗುತ್ತಿದ್ದರೆ ನಾನು ನಿಮ್ಮ ರಥವೇರುತ್ತಿರಲಿಲ್ಲ. ಪಣದಲ್ಲಿ ನಮ್ಮನ್ನು ಗೆಲ್ಲಲಾಗದ ವಿಚಿತ್ರವೀರ್ಯನ ಅರಸಿಯಾಗುವುದು ಅನಿವಾರ್ಯವೆನ್ನುವ ಸಂದರ್ಭವನ್ನು ಈಗ ಸೃಷ್ಟಿಸುತ್ತಿದ್ದೀರಿ. ನಿಮ್ಮಿಂದಾಗಿ ಹಾಳಾಗುತ್ತಿರುವ ಹೆಣ್ಣೊಬ್ಬಳ ಬಾಳನ್ನು ಸರಿಪಡಿಸಲು ನಿಮಗೆ ನಿಮ್ಮ ಪ್ರತಿಜ್ಞೆ ಅಡ್ಡಬರುತ್ತಿದೆ. ನಿಮ್ಮ ತಪ್ಪನ್ನು ಮೌಲ್ಯದ ಉಳಿವು ಎಂದು ವೈಭವೀಕರಿಸುತ್ತೀರಿ. ಇಷ್ಟವಾಗದವನನ್ನು ಕಟ್ಟಿಕೊಂಡು ಜೀವನವಿಡೀ ಸಂಕಟಪಡುವುದು ಯಾವ ಮೌಲ್ಯ? ನೀವೇ ಹೇಳಿ.”

ಈ ಪ್ರಶ್ನೆಗೆ ಉತ್ತರಿಸಲಾಗದೆ ಭೀಷ್ಮರು ಅಸಹಾಯಕರಾಗಿ ರಾಜಮಾತೆಯ ಮುಖ ನೋಡಿದರು. ರಾಜಮಾತೆಯ ಮುಖದಲ್ಲಿ ಗಾಢವಾದ ಚಿಂತೆಯಿತ್ತು. ಏನಾದರೂ ಅಶುಭವನ್ನು ಶಂಕಿಸಿದಳೆ? ಅವಳಿಗೊಂದು ತೀರ್ಮಾನಕ್ಕೆ ಬರಲು ಸ್ವಲ್ಪ ಹೊತ್ತು ಹಿಡಿಯಿತು. ಏನೋ ನಿಶ್ಚಯಿಸಿದವಳಂತೆ ಅವಳೆಂದಳು.

ಮಗೂ ಭೀಷ್ಮಾ, ಅಂಬೆ ಹೇಳುತ್ತಿರುವುದು ಸರಿ. ನೀನು ಕಾಶೀರಾಜ್ಯಕ್ಕೆ ಹೋದದ್ದು, ವಿಚಿತ್ರವೀರ್ಯನಿಗಾಗಿ ಇವರನ್ನು ಕರೆತಂದದ್ದು ನನ್ನ ಮಾತಿಗೆ ಬೆಲೆಗೊಟ್ಟು. ಇಡೀ ಪ್ರಕರಣದ ತಪ್ಪು ಒಪ್ಪುಗಳಿಗೆ ನಾನು ಬಾಧ್ಯಳು. ನಿನ್ನ ತ್ಯಾಗ ದೊಡ್ಡದು. ನನ್ನ ತಂದೆ ದಾಶರಾಜನ ಮಾತು ಕೇಳಿ ಅಂದು ನೀನು ಪ್ರತಿಜ್ಞಾಬ್ಧನಾದೆ. ನನ್ನ ಮಗನೇ ಹಸ್ತಿನಾವತಿಯ ಸಿಂಹಾಸನದಲ್ಲಿ ರಾರಾಜಿಸಬೇಕೆಂದು ನಾನು ಆಸೆಪಟ್ಟವಳಲ್ಲ. ಧರ್ಮಪ್ರಕಾರವಾಗಿ ಹಸ್ತಿನಾವತಿಯ ಸಿಂಹಾಸನ ನಿನಗೆ ಸೇರಬೇಕಾದದ್ದು. ಒಮ್ಮೊಮ್ಮೆ ಏನೇನೋ ಯೋಚನೆಗಳು ಬೇಡವೆಂದರೂ ಅವುಗಳ ಪಾಡಿಗೆ ಮೂಡಿ ಮರೆಯಾಗುತ್ತವೆ. ಚಿತ್ರಾಂಗದ ಬದುಕಿರುತ್ತಿದ್ದರೆ ಅವನು ಇವರನ್ನು ಗೆದ್ದು ತರುತ್ತಿದ್ದ. ಈಗ ಚಿತ್ರಾಂಗದನ ಸ್ಥಾನದಲ್ಲಿ ನೀನಿದ್ದಿ. ಅಂಬಿಕೆ, ಅಂಬಾಲಿಕೆಯರು ವಿಚಿತ್ರ ವೀರ್ಯನನ್ನು ಒಪ್ಪಿಕೊಂಡಿದ್ದಾರೆ. ಅಂಬೆಗೊಂದು ಭದ್ರನೆಲೆಯನ್ನು ಅವಳಿಚ್ಚೆಯಂತೆ ಕಲ್ಪಿಸ ಬೇಕಾದದ್ದು ನಮ್ಮ ಧರ್ಮ. ನೀನು ಯಾರಿಗಾಗಿ ಯಾರೆದುರು ನಿಂತು ಪ್ರತಿಜ್ಞೆ ಮಾಡಿದ್ದಿಯೋ ಅವರಿಬ್ಬರೂ ಬದುಕಿಲ್ಲ. ವರ್ತಮಾನ ಮತ್ತು ಭವಿಷ್ಯ ಒಳ್ಳೆಯದಾಗುತ್ತದೆಂದಾದರೆ ಭೂತಕಾಲದಲ್ಲಿ ಯಾವುದೋ ಅನಿವಾರ್ಯತೆಯಲ್ಲಿ ಮಾಡಿದ ಪ್ರತಿಜ್ಞೆಯನ್ನು ಮುರಿದರೆ ಅದು ಅಧರ್ಮವಾಗುವುದಿಲ್ಲವೆಂದು ನನಗನಿಸುತ್ತದೆ. ಸದ್ಯಕ್ಕೆ ನನಗೆ ಕಾಣುತ್ತಿರುವುದು ಇದೊಂದೇ ಪರಿಹಾರ. ನೀನು ಈ ಅಂಬೆಯನ್ನು ವಿವಾಹವಾಗು. ನಿಮ್ಮಿಬ್ಬರ ಸಂಯೋಗದಿಂದ ಕುರುವಂಶಕ್ಕೆ ಅದೆಂತಹ ಸಂತಾನ ಲಭ್ಯವಾದೀತು ಎಂಬ ಯೋಚನೆಯೇ ನನ್ನನ್ನು ಪುಳಕಿತಳನ್ನಾಗಿಸುತ್ತದೆ.”

ಭೀಷ್ಮರು ಅಪ್ರತಿಭರಾದರು. ರಾಜಮಾತೆಯ ಆದೇಶದಂತೆ ಕಾಶೀರಾಜಕುವರಿಯರನ್ನು ಕರೆತಂದದ್ದು ಈ ರೀತಿಯ ತಿರುವುಗಳನ್ನು ಪಡೆದುಕೊಳ್ಳಬಹುದೆಂದು ಅವರು ಯೋಚಿಸಿರಲಿಲ್ಲ. ಹಾಗಾದರೆ ಕಾಶಿಗೆ ಹೋದದ್ದೇ ತಪ್ಪೆ? ಮದುವೆ, ಸಂಸಾರವೆಂಬ ಭಾವಗಳು ಕನಸಲ್ಲೂ ಮೂಡದೆ ಅದೆಷ್ಟು ವರ್ಷಗಳು ಸಂದು ಹೋದವೊ? ಈ ಅಂಬೆ ಸುಂದರಿಯೂ ಹೌದು, ಬುದ್ಧಿವಂತೆಯೂ ಹೌದು. ಸುಂದರಿಯರು ಬುದ್ಧಿವಂತರಾಗಿರುವುದು ತೀರಾ ಅಪೂರ್ವ. ಹಾಗಂತ ವಚನಭ್ರಷ್ಟನಾಗಿ ಇವಳನ್ನು ವಿವಾಹವಾಗುವುದೇ? ಒಬ್ಬಳು ಹೆಣ್ಣಿಗಾಗಿ ತಾನು ನಂಬಿದ ಮೌಲ್ಯವನ್ನು ಬಲಿ ಗೊಡುವುದೆ? ರಾಜಾ ಕಾಲಸ್ಯ ಕಾರಣಂ. ಪ್ರತಿಜ್ಞೆಯಿಂದಾಗಿ ಭೀಷ್ಮನಾದವನು ವಚನಭ್ರಷ್ಟನಾಗಿ ಮತ್ತೆ ದೇವವ್ರತನಾಗುವುದೆ?

ಭೀಷ್ಮರು ತಲೆಕೊಡವಿಕೊಂಡರು : “ರಾಜಮಾತೆ, ಇದೊಂದು ಸಂಕೀರ್ಣ ಸಮಸ್ಯೆ. ನೀವು ಅಂಬೆಯೊಬ್ಬಳನ್ನು ಗಮನದಲ್ಲಿಟ್ಟುಕೊಂಡು ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಯತ್ನಿಸುತ್ತಿದ್ದೀರಿ. ಸಮಸ್ತ ಭರತಖಂಡಕ್ಕೊಂದು ಆದರ್ಶವನ್ನು ಹಾಕಿಕೊಡಬೇಕಾದ ಭೀಷ್ಮನೇ ವಚನಭ್ರಷ್ಟನಾದರೆ ಅದು ಸಮುದಾಯಕ್ಕೆ ಎಂತಹ ಸಂದೇಶವನ್ನು ನೀಡುತ್ತದೆಂಬುದನ್ನು ಒಂದು ಕ್ಷಣ ಯೋಚಿಸಿ ನೋಡಿ. ವಚನಪಾಲನೆಗಿಂತ ದೊಡ್ಡ ಮೌಲ್ಯವಿರಲು ಸಾಧ್ಯವಿಲ್ಲ. ರಾಜಮಾತೆ, ದಯವಿಟ್ಟು ಕ್ಷಮಿಸಿ. ನನ್ನ ಪ್ರಾಣ ಬೇಕಾದರೆ ಕೊಟ್ಟೇನು. ವಚನ ಭ್ರಷ್ಟನಾಗಲಾರೆ.”

ರಾಜಮಾತೆ ತಲೆದೂಗಿದಳು : “ನೀನು ವಚನಭ್ರಷ್ಟನಾಗಲಾರೆಯೆಂದು ನನಗೆ ಗೊತ್ತಿತ್ತು ಮಗೂ. ಅಂಬೆಗೊಂದು ನೆಲೆ ಕಲ್ಪಿಸುವ ಬಾಧ್ಯತೆ ನನ್ನದು ಮಾತ್ರವಲ್ಲ, ಹಸ್ತಿನಾವತಿಯ ಸಿಂಹಾಸನದ ರಕ್ಷಕನಾಗಿ ನಿನ್ನದೂ ಕೂಡಾ. ಹೇಳು ಮಗೂ, ಅಂಬೆಯ ಸಮಸ್ಯೆಗೆ ನಿನಗೇನಾದರೂ ಪರಿಹಾರ ಹೊಳೆಯುತ್ತಿದೆಯೆ?

ಭೀಷ್ಮರು ಯೋಚಿಸತೊಡಗಿದರು. ವ್ಯಕ್ತಿಯ ಜೀವನದಲ್ಲಿ ಮದುವೆ ಕಡ್ಡಾಯವಾಗ ಬೇಕೇಕೆ? ಮದುವೆಯಾಗದೆ ಬದುಕಲು ಸಾಧ್ಯವಿಲ್ಲವೆ? ಗುರುಗಳಾದ ಪರಶುರಾಮರು ಮದುವೆ ಯಾಗದೆ ಬದುಕಿ ತೋರಿಸಿದರಲ್ಲಾ? ಅವರೆಂದೇನು? ಈ ಆರ್ಯಾವರ್ತದುದ್ದಕ್ಕೆ ಅದೆಷ್ಟು ಋಷಿ ಮುನಿಗಳು ಮದುವೆಯಾಗದೆ ಉಳಿದುಬಿಟ್ಟರು! ಬ್ರಹ್ಮಚಾರಿತ್ವವನ್ನು ಒಂದು ಮೌಲ್ಯವಾಗಿ ಪರಿವರ್ತಿಸಲು ತನಗೆ ಸಾಧ್ಯವಾದುದರ ಬಗ್ಗೆ ಅವರಿಗೆ ಹೆಮ್ಮೆಯಿತ್ತು. ಆದರೆ ಹಾಗೆ ಮದುವೆಯಾಗದೆ ಉಳಿದವರಲ್ಲಿ ಹೆಣ್ಣುಗಳು ಯಾರಿದ್ದಾರೆ? ಏರು ಯವ್ವನದ ಈ ಸುರಸುಂದರಿಗೆ ಕಡ್ಡಾಯ ಬ್ರಹ್ಮಚರ್ಯದ ಶಿಕ್ಷೆ ನೀಡುವುದು ಅಧರ್ಮವಾಗುತ್ತದೆ. ಬ್ರಹ್ಮಚಾರಿಣಿಯಾಗಿ ಅಂಬೆ ಜೀವನ ಸವೆಸಬೇಕೆಂದು ಯೋಚಿಸುವುದೂ ಸ್ವಾರ್ಥವಾಗುತ್ತದೆ. ಇಷ್ಟಕ್ಕೂ ಇವಳು ಬ್ರಹ್ಮಚಾರಿಣಿಯಾಗಿ ಜೀವನ ಸವೆಸುವ ಅಗತ್ಯವೇನಿದೆ? ರೂಪ, ಗುಣ, ಆರೋಗ್ಯ, ಬುದ್ಧಿ, ಸಿದ್ಧಿ, ಸಾಧನೆ ಏನೇನೂ ಇಲ್ಲದವರೂ ಪಿತೃ‌ಋಣವೆಂದು ಸಂತಾನೋತ್ಪತ್ತಿ ಮಾಡುತ್ತಾರೆ. ಈಕೆಯಲ್ಲಿ ಜನಿಸುವ ಮಕ್ಕಳು ಆರೋಗ್ಯವಂತರಾಗಿರುತ್ತಾರೆ, ಬುದ್ಧಿವಂತರಾಗಿರುತ್ತಾರೆ, ಶೌರ್ಯವಂತರಾಗಿರುತ್ತಾರೆ. ಆದುದರಿಂದ ಇವಳಿಗೀಗ ಏನಾದರೂ ದಾರಿ ತೋರಿಸಲೇಬೇಕು.

ದನಿತಗ್ಗಿಸಿ ಭೀಷ್ಮರೆಂದರು : “ಎರಡು ಪರಿಹಾರಗಳು ಹೊಳೆಯುತ್ತಿವೆ. ಇವಳು ಕಾಶಿಗೆ ಹೋಗುವುದಾದರೆ ಕಳುಹಿಸಿಕೊಡಬಹುದು. ಅದು ಬೇಡವೆಂದಾದರೆ ಇವಳಿಗೆ ಯಾರು ಇಷ್ಟವೋ ಅವರೊಡನೆ ವಿವಾಹವನ್ನು ಏರ್ಪಡಿಸಬಹುದು. ಇವೆರಡನ್ನು ಬಿಟ್ಟರೆ ಬೇರಾವುದೇ ಪರಿಹಾರ ಮಾರ್ಗ ನನಗೆ ತೋಚುತ್ತಿಲ್ಲ.”

ದೀರ್ಘಾಲೋಚನೆಯಲ್ಲಿ ಮುಳುಗಿದ್ದ ಅಂಬೆಯೇ ಪರಿಹಾರ ಸೂಚಿಸಿದಳು : “ನೀವು ಅದೇನನ್ನೂ ಮಾಡುವುದು ಬೇಡ. ಆಚಾರ್ಯರು ಕಾಶಿಗೆ ಬಾರದಿರುತ್ತಿದ್ದರೆ ನಾನು ಸಾಲ್ವಭೂಪತಿಯ ಮಡದಿಯಾಗುತ್ತಿದ್ದೆ. ಆಚಾರ್ಯರು ಆಜೀವ ಬ್ರಹ್ಮಚಾರಿಯೆನ್ನುವುದು ಸಾಲ್ವನಿಗೆ ಗೊತ್ತಿರಬಹುದು. ಇಲ್ಲದಿದ್ದರೆ ಮನವರಿಕೆ ಮಾಡಿಕೊಡಬಹುದು. ಆಗ ಅವನು ನನ್ನನ್ನು ವಿವಾಹವಾಗುವುದು ಧರ್ಮಬದ್ಧವಾಗುತ್ತದೆ. ಅವನು ಪರಿಸ್ಥತಿಯನ್ನು ಅರ್ಥಮಾಡಿಕೊಂಡು ನನ್ನನ್ನು ಧರ್ಮಪತ್ನಿಯಾಗಿ ಸ್ವೀಕರಿಸಬಹುದೆಂದು ನನಗನ್ನಿಸುತ್ತದೆ.”

ರಾಜಮಾತೆಗೆ ಅಂಬೆಯ ಮಾತಿನಿಂದ ತುಂಬಾ ಆಶ್ಚರ್ಯವಾಯಿತು : “ಮಗಳೇ, ನೀನು ಈ ಮಾತುಗಳನ್ನು ಆಡುವಾಗ ಸಾಕಷ್ಟು ಯೋಚಿಸಿದ್ದೀಯಾ? ಭೀಷ್ಮನೊಡನೆ ಹಸ್ತಿನಾವತಿಗೆ ಬಂದ ನಿನ್ನನ್ನು ಸಾಲ್ವಭೂಪತಿ ಅದು ಹೇಗೆ ತಾನೇ ಸ್ವೀಕರಿಸಿಯಾನು? ಸಮಸ್ಯೆಗೆ ಪರಿಹಾರವೆಂದು ನೀನು ಭಾವಿಸಿರುವುದು ಹೊಸ ಸಮಸ್ಯೆಗೆ ಕಾರಣವಾಗಲಾರದಷ್ಟೇ?”

ಅಂಬೆಯೆಂದಳು : “ಆಗಲಾರದು ಎಂದುಕೊಂಡಿದ್ದೇನೆ. ಸಾಲ್ವಭೂಪತಿಗೂ ಅಪ್ಪ ಆಮಂತ್ರಣ ಕಳುಹಿಸಿರಲಿಲ್ಲ. ಸ್ವಯಂವರದ ಮುನ್ನಾದಿನ ಅವನು ಕಾಶಿಗೆ ಬಂದ. ತೀರಾ ಆಕಸ್ಮಿಕವಾಗಿ ಕಾಶಿಯ ಉಪವನದಲ್ಲಿ ಅವನಿಗೆ ನಾನು ಕಾಣಸಿಕ್ಕಿದೆ. ನಾನೊಪ್ಪಿದರೆ ಅಲ್ಲಿಂದಲೇ ಸೌಭಕ್ಕೆ ಕರೆದೊಯ್ದು ಪಟ್ಟಮಹಿಷಿಯನ್ನಾಗಿ ಮಾಡುತ್ತೇನೆಂದು ಹೇಳಿದ. ನಿನ್ನ ಶೌರ್ಯವನ್ನು ನಾಳೆ ಸ್ವಯಂವರ ಮಂಟಪದಲ್ಲಿ ತೋರಿಸೆಂದು ಅವನ ಕೋರಿಕೆಯನ್ನು ನಿರಾಕರಿಸಿದೆ. ಮರುದಿನ ಸ್ವಯಂವರ ಮಂಟಪದಲ್ಲಿ ಅವನು ತಾನೇ ತಾನಾಗಿ ಎಲ್ಲರನ್ನು ಸೋಲಿಸಿ ವಿಜೃಂಭಿಸಿದ. ಆಚಾರ್ಯರು ಬರುವುದು ಎರಡು ನಿಮಿಷ ತಡವಾಗಿರುತ್ತಿದ್ದರೆ ನಾನು ಅವನ ಕೊರಳಿಗೆ ಹಾರ ಹಾಕಿ ಆಗುತ್ತಿತ್ತು. ಅವನಿಗೆ ನನ್ನಲ್ಲಿ ಅನುರಾಗ ಮೂಡದಿರುತ್ತಿದ್ದರೆ ಹಿಂದಿನ ದಿನ ಉಪವನದಲ್ಲಿ ಆ ಮಾತುಗಳನ್ನು ಆಡುತ್ತಿರಲಿಲ್ಲ. ಒಮ್ಮೆ ಅನುರಾಗ ಮೂಡಿದರೆ ಅದು ಬಹಳ ಬೇಗ ಮಾಯವಾಗಲಿಕ್ಕಿಲ್ಲ.”

ಅಂಬೆಯ ವಾದ ಬಹಳ ದುರ್ಬಲವಾದುದೆಂದು ಭೀಷ್ಮರಿಗನ್ನಿಸಿತು. ಸಾಲ್ವಭೂಪತಿ ಅಂಬೆಯನ್ನು ಸ್ವೀಕರಿಸಿಯಾನೆ? ಕೇವಲ ಒಮ್ಮೆ ಮಾತ್ರ ಭೇಟಿಯಾಗಿ ನಡೆದ ಮಾತುಕತೆಯನ್ನು ಅನುರಾಗವೆಂದು ಭಾವನಾತ್ಮಕತೆಯಿಂದ ನೆನಪಿಟ್ಟುಕೊಳ್ಳಲು ಅವನೇನು ಕವಿಯೇ, ಕಲಾವಿದನೆ? ಅವನು ವೀರ್ಯವನ್ನು ಪಣವಾಗಿ ಸ್ವೀಕರಿಸಿದ ಒಬ್ಬ ರಾಜ. ಜನ್ಮತಾಃ ದಸ್ಯುವಾದರೂ ಗುಣ ಕರ್ಮಾನುಸಾರ ಕ್ಷತ್ರಿಯನೆ. ಸ್ವಯಂವರ ಮಂಟಪದಿಂದ ಸೋತು ಹೊರನಡೆಯುವಾಗ ಅವನು ಅಸಹಾಯಕತೆಯಿಂದ ಅಂಬೆಯತ್ತ ಆರ್‍ದ್ರನೋಟವೊಂದನ್ನು ಹರಿಸಿದ್ದು ಭೀಷ್ಮರಿಗೆ ನೆನಪಾಯಿತು. ಹಾಗೆ ಶಾಶ್ವತ ವಿದಾಯದ ನೋಟವನ್ನು ಹರಿಸಿದವನು ಇನ್ನು ಇವಳನ್ನು ಸ್ವೀಕರಿಸುತ್ತಾನೆಯೆ? ಸ್ವೀಕರಿಸಿದರೆ ಹಸ್ತಿನಾವತಿಯ ಸಮಸ್ಯೆಯೊಂದು ಬಗೆಹರಿಯುತ್ತದೆ. ಇಲ್ಲದಿದ್ದರೆ ಸಮಸ್ಯೆ ಹೆಚ್ಚಾಗುತ್ತದೆ. ಸ್ವಯಂವರ ಮಂಟಪದಲ್ಲಿ ಸೋತ ಸಾಲ್ವಭೂಪತಿ ಹಸ್ತಿನಾವತಿಯ ಮಿತ್ರನಾಗಿ ಉಳಿಯಲು ಸಾಧ್ಯವಿಲ್ಲ. ಅವನು ಇವಳನ್ನು ಒಪ್ಪಿಕೊಂಡರೆ ಬೆಂಕಿಯೊಡನೆ ಗಾಳಿ ಸೇರಿಕೊಂಡಂತಾಗುತ್ತದೆ.

ಭೀಷ್ಮರಿಗೆ ತಾನು ಋಣಾತ್ಮಕವಾಗಿ ಯೋಚಿಸುತ್ತಿದ್ದೇನೆನಿಸಿತು. ಸ್ವಯಂವರ ಮಂಟಪದ ಪ್ರಕರಣವನ್ನು ಸಾಲ್ವಭೂಪತಿ ಮರೆಯಬೇಕಾಗುತ್ತದೆ. ಅಲ್ಲಿ ವಿಕ್ರಮವೇ ಪಣವಾಗಿದ್ದುದರಿಂದ ಅವನು ಹಸ್ತಿನಾವತಿಯ ಮೇಲೆ ಸೇಡು ಇಟ್ಟುಕೊಳ್ಳುವುದು ನ್ಯಾಯವೂ ಅಲ್ಲ, ಧರ್ಮವೂ ಅಲ್ಲ. ಸೋಲನ್ನು ಮರೆತು ಮಾನವೀಯ ಅನುಕಂಪದಿಂದಲೋ, ಸಹಜ ಪ್ರೀತಿಯಿಂದಲೋ ಅವನು ಅಂಬೆಯನ್ನು ಸ್ವೀಕರಿಸಿದರೆ ಅವನೊಂದು ಹೊಸ ಮೌಲ್ಯವನ್ನು ಸೃಷ್ಟಿಸಿದಂತಾಗುತ್ತದೆ. ಅಂತಹ ಉದಾರತೆ ಅವನಲ್ಲಿರಲಿ. ಈ ಅಂಬೆಯ ಸಮಸ್ಯೆ ಒಮ್ಮೆ ಬಗೆಹರಿಯಲಿ.

ಕೊನೆಗೆ ಭೀಷ್ಮರೆಂದರು : “ಅಂಬೇ, ನಿನ್ನಿಷ್ಟದಂತಾಗಲಿ. ನಿನ್ನ ಯತ್ನದಲ್ಲಿ ನಿನಗೆ ಜಯಸಿಗಲಿ. ನಿನ್ನನ್ನು ಸಾಲ್ವಭೂಪತಿಯಲ್ಲಿಗೆ ಕಳುಹಿಸಿಕೊಡುವ ಏರ್ಪಾಡುಮಾಡುತ್ತೇನೆ. ಸ್ವಯಂವರ ಮಂಟಪದಲ್ಲಾದ ಮುಖಭಂಗದಿಂದಾಗಿ ಸಾಲ್ವಭೂಪತಿಗೆ ನನ್ನಲ್ಲಿ ಸಿಟ್ಟಿರಬಹುದು. ನಿನ್ನನ್ನು ನಮ್ಮ ರಥ ಸೌಭದ ಗಡಿಯವರೆಗೆ ಒಯ್ಯುತ್ತದೆ. ಇಂದಿನ ಪರಿಸ್ಥತಿಯಲ್ಲಿ ರಥ ಗಡಿ ದಾಟಿದರೆ ಅಪಾಯ ಸಂಭವಿಸಬಹುದು. ನಿನ್ನಿಂದಾಗಿ ಅವನ ಕ್ರರೋಧ ಶಮನವಾಗಲಿ. ನಿನ್ನೊಡನೆ ವೇದವಿಶಾದರಾದ ಆಸ್ಥಾನ ಪಂಡಿತರೊಬ್ಬರನ್ನು ಕಳುಹಿಸುತ್ತೇನೆ. ನಿಶ್ಚಿಂತೆಯಿಂದ, ನಿರ್ಭಯಳಾಗಿ ನೀನು ಸಾಲ್ವ ಭೂಪತಿಯಲ್ಲಿಗೆ ಹೋಗು. ಅವನು ನಿನ್ನನ್ನು ಪ್ರೀತಿಯಿಂದ ಸ್ವೀಕರಿಸಿ ಸೌಭ ದೇಶದ ಪಟ್ಟ ಮಹಿಷಿಯನ್ನಾಗಿ ಮಾಡಲಿ.”
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೆಂಡತಿ – ಮಿತ್ರ
Next post ನೀನು ಯೌವನದೊಡನೆ ಕೂಡಿಕೊಂಡಿರುವಾಗ

ಸಣ್ಣ ಕತೆ

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

cheap jordans|wholesale air max|wholesale jordans|wholesale jewelry|wholesale jerseys