ನೀನು ಯೌವನದೊಡನೆ ಕೂಡಿಕೊಂಡಿರುವಾಗ
ಕನ್ನಡಿಯು ನನ್ನ ವಯಸ್ಸನ್ನೆ ತೋರಿಸದು,
ಆದರೀ ನಿನ್ನ ಹಣೆಯೊಳು ನೆರಿಗೆ ಕಂಡಾಗ
ಇನ್ನು ಮುಗಿಯಿತು ನನ್ನ ಕಾಲ ಎನಿಸುವುದು
ನಾ ನಿನ್ನೊಳಿರುವಂತೆ ನೀನಿರುವೆ ನನ್ನೊಳಗೆ,
ನಿನ್ನ ಮೈಚೆಲುವೆಲ್ಲ ನನ್ನ ಆತ್ಮದ ತೊಡಿಗೆ,
ಹೀಗಿರುತ ನಾನು ನಿನಗಿಂತ ಹಿರಿಯನು ಹೇಗೆ ?
ಒಲವೆ ಎಚ್ಚರವಹಿಸು ನೀ ನಿನ್ನ ಬಗೆಗೆ.
ಲಕ್ಷ್ಯ ನೀಡುವೆ ನಾನು ಕೂಡ ನಿನಗಾಗೇ
ನನಗಾಗಿ ಅಲ್ಲ, ನನ್ನೊಳಗಿರುವ ನಿನಗಾಗಿ,
ದಾದಿ ಜೋಪಾನದಲಿ ಕೇಡು ಬಾರದ ಹಾಗೆ
ಎಚ್ಚರ ತಳೆವ ರೀತಿ ಮಡಿಲ ಎಳೆಮಗುಗಾಗಿ.
ನಾನಳಿವೆ, ಹೃದಯ ಹಿಂದಕ್ಕೆ ಕೇಳಲು ಸಲ್ಲ,
ನೀನು ನನಗದನು ಕೊಟ್ಟದ್ದು ಮರಳಿಸಲಿಲ್ಲ
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 22
My glass shall not persuade me I am old