ತರಂಗಾಂತರ – ೮

ತರಂಗಾಂತರ – ೮

ಹೆಸರು ಬಂಗಾರು ಚೆಟ್ಟಿ, ಆದರೆ ಆತ ಬಂಗಾರ ಮಾರುತ್ತಿರಲಿಲ್ಲ. ಬಂಗಾರದ ಬಿಸ್ಕತ್ತುಗಳನ್ನು ಕೊಂಡು ಯಾರಿಗೂ ಗೊತ್ತಾಗದ ಜಾಗದಲ್ಲಿ ಹೂತುಹಾಕುತ್ತಿದ್ದ. ಬಂಗಾರು ಚೆಟ್ಟಿ ಜಿಪುಣ. ಮೊದಲು ಅಲ್ಯುಮಿನಿಯಮ್ ಪಾತ್ರೆ ಪಗಡೆಗಳನ್ನು ಮಾರಿ ಜೀವಿಸುತ್ತಿದ್ದವನು ಸ್ಟೇನ್ ಲೆಸ್ ಸ್ಟೀಲಿನ ಕ್ರಾಂತಿ ಆರಂಭಿಸಿದೊಡನೆ ಅಂಗಡಿ ವಿಸ್ತರಿಸಿದ. ಅಲ್ಯೂಮಿನಿಯಮಿಗೆ ಬದಲು ಸ್ಟೀಲಿನ ಆರಂಭಿಸಿದೊಡನೆ ಅಂಗಡಿ ವಿಸ್ತರಿಸಿದ. ಅಲ್ಯೂಮಿನಿಯಮಿಗೆ ಬದಲು ಸ್ಟೀಲಿನ ಸಕಲ ಸಾಮಗ್ರಿಗಳನ್ನು ಮಾರತೊಡಗಿದ. ಅಂಗಡಿಯ ಹೆಸರನ್ನು ಸ್ಟೀಲ್ ಪ್ಯಾಲೇಸು ಎಂದು ಮಾರ್ಪಡಿಸಿಕೊಂಡ. ಮುಂಬಯಿ, ಅಹಮದಾಬಾದು ಗಳಿಂದ ಪಾತ್ರೆಗಳನ್ನ ನೇರವಾಗಿ ತರಿಸಿ ಅಪಾರ ಲಾಭ ಗಳಿಸತೊಡಗಿದ. ಹಲವಾರು ಸ್ಕೀಮುಗಳನ್ನು ಆರಂಭಿಸಿ ಗಿರಾಕಿಗಳು ತಾವಾಗಿಯೆ ತಮ್ಮ ತಲೆಗಳನ್ನು ಅವನ ಕೌಂಟರಿಗೆ ಅರ್ಪಿಸುವಂತೆ ಉಪಾಯ ಹೂಡಿದ. ದೊಡ್ಡ ಹುಡುಗನೊಬ್ಬನನ್ನು ಸ್ಕೂಲಿನಿಂದ ಬಿಡಿಸಿ ಪಕ್ಕದಲ್ಲೆ ಇನ್ನೊಂದು ವಸ್ತ್ರದ ಮಳಿಗೆ ತೆಗೆದ. ಅದರಲ್ಲಿ ಬರುವ ಲಾಭ ಸಾಕಾಗುವುದಿಲ್ಲವೆಂದು ರೆಡಿಮೇಡ್ ಬಟ್ಟೇ ಬರೆಗಳ ಅಂಗಡಿಯನ್ನಾಗಿ ಪರಿವರ್ತಿಸಿ ಇಮ್ಮಡಿ ಲಾಭ ಗಳಿಸತೊಡಗಿದ. ಸ್ವಂತ ಮನೆ, ಸ್ಕೂಟರು, ಫೋನು ಇತ್ಯಾದಿ ಅನುಕೂಲತೆಗಳನ್ನು ಹೆಚ್ಚಿಸಿಕೊಂಡ. ಬರುವ ಲಾಭದಲ್ಲಿ ಚಿಕ್ಕದೊಂದು ಅಂಶವನ್ನು ತಿರುಪತಿಗೆ ಸಮರ್ಪಿಸಿ ದೇವರನ್ನು ತನ್ನ ಪರವಾಗಿ ಇರಿಸಿಕೊಳ್ಳಲು ಅವನು ಮರೆಯಲಿಲ್ಲ.

ಏನಿದ್ದರೂ ಹಣದ ಆಸೆಗೆ ಮಿತಿಯಿಲ್ಲ. ಹನಿಗೆ ಹನಿ ಸೇರಿ ಹಳ್ಳವಾಗುವುದೆಂಬುದು ಬಂಗಾರು ಚೆಟ್ಟಿಗೆ ಗೊತ್ತು. ಈಗಾಗಲೆ ಆಗಿದ್ದ ಹಳ್ಳಕ್ಕೆ ಇನ್ನಷ್ಟು ಹನಿಗಳನ್ನು ಹೀಗೆ ಸೇರಿಸಲಿ ಎನ್ನುವುದೇ ಅವನ ಯೋಚನೆ ಯಾಗಿತ್ತು. ಮನೆಯ ಮೇಲಂತಸ್ತನ್ನು ಬೇಂಕಿನ ಮ್ಯಾನೇಜರರೊಬ್ಬರಿಗೆ ಬಾಡಿಗಿಗೆ ಕೊಟ್ಟಿದ್ದ. ಕಾಂಪೌಂಡಿನ ಬದಿಗೆ ಸೇರಿಸಿ ಎರಡು ಮೂರು ಔಟ್ ಹೌಸುಗಳನ್ನು ಕಟ್ಟಿಸಿ ಅವನ್ನು ಬಾಡಿಗಿಗೆ ಕೊಟ್ಟ. ಇಂಥ ಪರಿಸ್ಥಿತಿಯಲ್ಲೇ ಶಂಕರ ದೀಕ್ಷಿತ ವಸತಿ ಹುಡುಕುತ್ತ ಆ ಕಡೆ ಬಂದುದು. ತನ್ನ ಖಾಸಗಿ ಅಧ್ಯಯನಕ್ಕೆ ಒಂದು ರೂಮು, ಕಿಚನ್, ಬಾತ್ ರೂಮ್ ಕೊಡಿಸಿದರೆ ಸಾಕೆಂದು ಹೇಳಿದ. ವಿದ್ಯಾರ್ಥಿ, ಒಂಟಿಜೀವಿ, ಯಾವ ತಕರಾರೂ ಇರುವುದಿಲ್ಲ. ಬಂಗಾರು ಚೆಟ್ಟಿ ಯೋಚಿಸಿದ : ಮನೆಯ ಒಂದು ಕೊನೆಯನ್ನೇ ತೆರವು, ಮಾಡಿ ಈತನಿಗೆ ಕೊಟ್ಟರೆ ಹೇಗೆ? ಪಕ್ಕದ ದೊಡ್ಡದೊಂದು ಕೋಣೆಯನ್ನು ವಿಭಜಿಸಿ ಚಿಕ್ಕ ಅಡುಗೆ ಕೋಣೇ, ಬಾತ್ ರೂಮ್ ಕಟ್ಟಿಸಿದ. ಕಿಟಿಕಿಯೊಂದನ್ನು ವಿಸ್ತರಿಸಿ ಬಾಗಿಲ ಮಾಡಿಸಿದ. ಹೀಗೆ ಅಲ್ಲಿಗೆ ಶಂಕರ ದೀಕ್ಷಿತನ ಆಗಮನವಾದ್ದು.

ಐದಾರು ತಿಂಗಳ ಕಾಲ ಎಲ್ಲವೂ ಸರಿಯಾಯಿತು. ದೀಕ್ಷಿತ ಪ್ರತಿ ತಿಂಗಳ ಕೊನೆ ದಿನ ಬಾಡಿಗೆ ಹಣ ಕೊಟ್ಟು ಬಿಡುತ್ತಿದ್ದ. ಅವನಿಂದ ಯಾರಿಗೂ ಯಾವ ತರದ ತೊಂದರೆಯೂ ಇರುತ್ತಿರಲಿಲ್ಲ. ಆದರೆ ಚೆಟ್ಟಿಯ ಧನದಾಹ ದಿನೇ ದಿನೇ ಏರುತ್ತಲೇ ಇತ್ತು. ಒಮ್ಮಿಂದೊಮ್ಮೆಲೆ ಕೇಂದ್ರ ಹಾಗೂ ರಾಜ್ಯದ ಸರಕಾರಿ ನೌಕರರ ಪಗಾರ ಇಮ್ಮಡಿಸಿದ್ದನ್ನು ಅವನು ಗಮನಿಸಿದ. ಜನರ ಕೈಯಲ್ಲಿ ಹಣದ ಓಡಾಟ ಜಾಸ್ತಿಯಾಯಿತು. ಪ್ರತಿಯೊಂದು ವಸ್ತುವಿನ ಬೆಲೆಯೂ ಒಂದೂವರೆ, ಎರಡು ಪಾಟಿ ಹೆಚ್ಚಿತು. ಚೆಟ್ಟಿ ಸ್ಕೂಲು ಕಾಲೇಜುಗಳಿಗೆ ಹೋದವನಲ್ಲ ; ಆದರೂ ದುಡ್ಡಿನ ಲೆಕ್ಕ ಸರಿಯಾಗಿ ಬರುತ್ತಿತ್ತು. ತನ್ನ ಬಾಡಿಗೆದಾರರು ಪ್ರತಿಯೊಬ್ಬರೂ ಒಂದೂವರೆ ಪಟ್ಟು ಜಾಸ್ತಿ ಬಾಡಿಗೆ ಸಲ್ಲಿಸಬೇಕೆಂದು ಅಪ್ಪಣೆ ಕೊಡಿಸಿದ. ಯಾರೂ ವಿರೋಧಿಸಲಿಲ್ಲ. ಯಾಕೆಂದರೆ, ಅವರ ಹೆಚ್ಚಾರ್ಯೆ ಕೂಡ ಮೇಲಕ್ಕೇರಿತ್ತು. ಸರಕಾರದ ಹಣ, ಯಾರಿಗೂ ಏನೂ ನಷ್ಟವಿಲ್ಲ. ವಿರೋಧಿಸಿದವನು ಶಂಕರ ದೀಕ್ಷಿತ ಒಬ್ಬನೇ. ಮನೆ ಹಿಡಿದು ಇನ್ನೂ ಅರ್ಧವರ್ಷ ದಾಟಿಲ್ಲ. ಹೆಚ್ಚು ಬಾಡಿಗೆ ಕೊಡಲಾರೆ ಎಂದ. ಕೊಡಲಾರದಿದ್ದರೆ ದಯವಿಟ್ಟು ಖಾಲಿಮಾಡು ಎಂದ ಚೆಟ್ಟಿ. ಖಾಲಿ ಮಾಡುವ ಪ್ರಶ್ನೆಯೇ ಇಲ್ಲ ಎಂದ ದೀಕ್ಷಿತ. ಕೋಣೆಯನ್ನು ಕಿಚನ್ ಇತ್ಯಾದಿಗಳೊಂದಿಗೆ ಮನೆಯಾಗಿ ಪರಿವರ್ತಿಸಿದ ಚೆಟ್ಟಿಗೆ, ದೀಕ್ಷಿತನನ್ನು ಹೇಗಾದರೂ ಸಾಗ ಹಾಕಿ, ಒಂದು ಜೊತೆ ನವ ದಂಪತಿಗೆ ಕೊಟ್ಟರೆ ಇಮ್ಮಡಿ ಆದಾಯ ಬರುತ್ತದೆ ಅನ್ನಿಸಿತ್ತು. ಸರಿ, ವಿಚಾರ ತಲೆಯೊಳಗೆ ಹೊಕ್ಕರೆ ಹುಳದ ಹಾಗೆ ಕೆರೆಯುತ್ತಲೇ ಇರುತ್ತದೆ. ಚೆಟ್ಟಿ ರಮಿಸಿ ನೋಡಿದ, ಉಪಾಯದಿಂದ ಇತರರ ಮೂಲಕ ಹೇಳಿಸಿದ. ಬೆದರಿಕೆ ನೀಡಿದ. ದೀಕ್ಷಿತನ ಹಿಂದೆ ಗೂಂಡಾಗಳನ್ನು ಬಿಟ್ಟ. ಯಾವುದಕ್ಕೂ ದೀಕ್ಷಿತ ಜಗ್ಗದೆ ಸ್ಥಿತಪ್ರಜ್ಞನಂತೆ ಕುಳಿತೇ ಇದ್ದ. ದೀಕ್ಷಿತನ ಕೋಣೆ ಮತ್ತು ಮನೆಯ ಮುಖ್ಯಭಾಗದ ಮಧ್ಯೆ ಒಂದು ಮರದ ಬಾಗಿಲಿವಿತ್ತು. ಇದನ್ನು ಎರಡೂ ಬದಿಯಿಂದ ಹಾಕಿತ್ತು. ಚೆಟ್ಟಿಯ ಮಕ್ಕಳು ಹಗಲು ರಾತ್ರಿಯೆಂದಿಲ್ಲದೆ ಇದನ್ನು ಬಡಿದು ಸದ್ದು ಮಾಡುವವರು. ದೀಕ್ಷಿತ ತಾನೂ ಒಂದೆರಡು ಬಾರಿ ಇಂಥದೇ ಸದ್ದನ್ನು ಮಾಡಿದ ಮೇಲೆ ಈ ಉಪಟಳ ನಿಂತಿತು. ಆದರೂ ಅವನ ಮೇಲೆ ಸುಮ್ಮನೆ ಚೆಂಡೆಸೆಯುವುದು, ಮನೆ ಮುಂದೆ ಕಸ ಚೆಲ್ಲುವುದು, ಕೇಳಿಸುವಂತೆ ಬಯ್ಯುವುದು ನಡೆಯುತ್ತಲೇ ಇತ್ತು.

ಹೆಚ್ಚು ತಕರಾರು ಮಾಡಿದರೆ ತಾನು ರೆಂಟ್ ಕಂಟ್ರೋಲರಿಗೆ ಬರೆಯುವನೆಂದೂ, ಮನೆಯೊಳಗೆ ಚಿನ್ನದ ಗಟ್ಟಿಗಳನ್ನು ಹುಗಿದಿಟ್ಟ ರಹಸ್ಯವನ್ನು ಆದಾಯ ತೆರಿಗೆ ಇಲಾಖೆಯವರಿಗೆ ತಿಳಿಸುವೆನೆಂದೂ, ತನ್ನ ಕಾಲೇಜು ಗೆಳೆಯರನ್ನು ಕರೆತಂದು ಅಂಗಡಿಯನ್ನು ನಾಶಗೊಳಿಸುವೆನೆಂದೂ ದೀಕ್ಷಿತ ಮರು ಬೆದರಿಕೆ ಹಾಕಿದ ಮೇಲೆ ಬಂಗಾರು ಚೆಟ್ಟಿ ಸುಮ್ಮನಾದ. ಆದರೂ, ರಾತ್ರಿಯ ನಿದ್ದೆ ಕೆಡಿಸುವುದಕ್ಕೆ ಅವನಿಗೆ ಇದೊಂದೇ ಸಾಕಾಯಿತು. ತನ್ನ ಮನೆಯೊಳಗೇ ಬಂದು ನೆಲೆಬಿಟ್ಟಿರುವ ಈ ದೀಕ್ಷಿತನೆಂಬ ತಗಣೆಯನ್ನು ಏನು ಮಾಡಲಿ?

ಕಿತ್ತು ಬಿಸಾಡಲು ಯತ್ನಿಸಿದರೆ ಮಾಂಸವೇ ಬರುವ ಹಾಗಿದೆ! ಅಂತೂ ಅಂದಿನಿಂದ ದೀಕ್ಷಿತನ ಇರವು ಚೆಟ್ಟಿಗೊಂದು ಮಾನಸಿಕ ಹಿಂಸೆಯಾಯಿತು. ಅವನ ರಕ್ತದೊತ್ತಡ ಹೆಚ್ಚತೊಡಗಿತು. ಡಾಕ್ಟರರಲ್ಲಿಗೆ ಹೋಗಿ ಬಂದ. ವಿಶ್ರಾಂತಿ ತಗೋ ಮನೆಯಲ್ಲಿ ಎಂದರು ಡಾಕ್ಟರು. “ಇಂಟ್ಲೋ ಶನಿ ಕೂಚುನ್ನದಿ. ಸಾರ್” ಎಂದ ಚೆಟ್ಟಿ. “ಹಾಗಿದ್ರೆ ಏನಾದರೂ ಪೂಜೆ, ಶಾಂತಿ ಮಾಡಿಸು.” ಎಂದರು ಅವರು. ಇದು ಪೂಜೆಗೀಜಿಗೆಲ್ಲ ಹೋಗುವಂಥದಲ್ಲ ಎಂದು ಚೆಟ್ಟಿ ಗೊಣಗಿಕೊಂಡ.

ಮುಂದಿನ ಬೇಸಿಗೆ ರಜೆಯಲ್ಲಿ ಬಹುಶಃ ಪರೀಕ್ಷೆ ಮುಗಿಸಿ ಈತ ಸ್ಥಳ ಖಾಲಿ ಮಾಡಬಹುದು ಎಂದು ಚೆಟ್ಟಿ ಅಂದುಕೊಂಡದ್ದೇ ಬಂತು. ದೀಕ್ಷಿತ ಬೇಸಿಗೆ ರಜೇನಲ್ಲೂ ಅಲ್ಲೇ ಇದ್ದು ಬಿಟ್ಟ. ಮನೆ ಮುಂದೊಂದು ಸಸಿ ನಟ್ಟ. ಚೆಟ್ಟಿಯ ಹೆಂಡತಿ ಅದನ್ನು ಕಿತ್ತು ಹಾಕಿದಳು. ಪ್ರತಿಯಾಗಿ ದೀಕ್ಷಿತ ಆಕೆ ಬೆಳೆಸಿದ್ದ ಬಾಳೆಗಿಡವೊಂದನ್ನು ಕತ್ತಿರಿಸಿ ಉರುಳಿಸಿದ. ಸಸಿಗಳ ಯುದ್ಧಕ್ಕೆ ತನ್ನಿಂತಾನೆ ವಿರಾಮ ಬಂತು. ಆದರೆ ಈಗ ರಕ್ತದೊತ್ತಡ ಚೆಟ್ಟಿಯ ಹೆಂಡತಿಗೂ ರವಾನೆಯಾಯಿತು. ದೀಕ್ಷಿತನನ್ನು ಮನೆಯಿಂದೋಡಿಸುವುದು ಹೇಗೆ ಎನ್ನುವುದೇ ಗಂಡ ಹೆಂಡತಿಯರ ದಿನನಿತ್ಯದ ಮಾತುಕತೆಯಾಯಿತು. ಪೋಲೀಸರಲ್ಲಿ ಹೋಗಿ ದೂರು ಕೂಡಿ ಎಂದಳು ಹೆಂಡತಿ. ಪೋಲೀಸರಲ್ಲಿಗೆ ಹೋಗುವುದೆ? ಅಪಾಯ! ಎಂದ ಚೆಟ್ಟಿ ಏನಾದರೊ ಸ್ವಲ್ಪ ತಿನ್ನಿಸಿ. ಪೋಲೀಸರಿರೋದು ಮತ್ತೆ ಯಾತಕ್ಕೆ, ಎಂದಳವಳು. ಆದರೂ ಪೋಲೀಸರೆಂದರೆ ಚೆಟ್ಟಿಗೆ ಭಯ. ಅವರ ಹಿಂದೆ ದಿನಾ ಅಲೆಯಬೇಕಾಗುತ್ತದೆ. ಆಮೇಲೆ ತಪ್ಪು ತಮ್ಮ ಮೇಲೆ ಅವರು ಹೊರಿಸಿದರೂ ಹೊರಿಸಬಹುದು ಎಂದು ಆತಂಕ. ಚೆಟ್ಟಿ ಮೀನ ಮೇಷ ಎಣಿಸಿದ. ತುಸು ವಿದ್ಯಾಭ್ಯಾಸವಿರುವ ತನ್ನ ಜನರನ್ನು ಹೋಗಿ ಕಂಡು ಅವರ ಸಲಹೆ ಕೇಳಿದ. ಪೋಲೀಸರಲ್ಲಿಗೆ ಹೋಗುವುದೇ ಸರಿ ಎಂದು ಅವರು ಹೇಳಿದರು. ಒಂದು ಅರ್ಜಿಯನ್ನೂ ಬರೆದುಕೊಟ್ಟರು.

ಸಾಕಷ್ಟು ಹೊಸ ನೋಟುಗಳನ್ನು ಜೇಬಿನಲ್ಲಿರಿಸಿಕೊಂಡು, ಒಂದು ದಿನ ಧೈರ್ಯಮಾಡಿ ಚೆಟ್ಟಿ ಸಮೀಪದ ಆರಕ್ಷಕ ಠಾಣೆಗೆ ಹೋದ. ಸ್ಕೂಟರು ಪಾರ್ಕು ಮಾಡುವಲ್ಲೇ ಅವನಿಗೆ ಅಧಿಕಾರದ ಬಿಸಿ ತಾಕಿತು. ಸಿಬ್ಬಂದಿ ಪಾರ್ಕು ಮಾಡುವಲ್ಲಿ ಸ್ಕೂಟರು ನಿಲ್ಲಿಸಿದ್ದಕ್ಕೆ ಒಬ್ಬ ಪೀಸೀ ಅವನನ್ನು ಗದ್ದರಿಸಿದ. ಚೆಟ್ಟಿ ಸ್ಕೂಟರನ್ನು ದೂಡಿಕೊಂಡು ಹೋಗಿ ಒಂದು ಹುಣಸೆ ಮರದ ಕೆಳಗೆ ನಿಲ್ಲಿಸಿ ಬಂದು ಕೈ ಮುಗಿದ. ಎಸ್ಸಯ್ ಇದ್ದಾರೆಯೆ, ಕಾಣಬೇಕಿತ್ತು ಎಂದ. ಸ್ವಲ್ಪ ನಿಲ್ಲುವಂತೆ ಅಪ್ಪಣೆಯಾಯಿತು. ನಿಂತ. ಕಾಲು ಗಂಟೆ ನಿಂತ ಮೇಲೆ ಒಳಗೆ ಬರುವಂತೆ ಸೂಚನೆ ಬಂತು. ಬಂಗಾರು ಚೆಟ್ಟಿ ವಿನಯವನ್ನು ನಟಿಸುವ ಅಗತ್ಯನೇ ಇರಲಿಲ್ಲ. ಪೋಲೀಸು ಠಾಣೆಯ ಪರಿಸರವೇ ಅವನನ್ನು ಅಧೈರ್ಯದ ಬಾವಿಗೆ ತಳ್ಳಿತು. ಎಸ್ಸಯ್ ನ ಮುಂದೆ ಹೋಗಿ ಕೈ ಮುಗಿದು ನಿಂತ. ಕೂತುಕೊಳ್ಳಿ ಎಂದರು ಎಸ್ಸಯ್. ಇಲ್ಲ, ತಾನು ನಿಂತೇ ಇರುವೆ ಎಂದ ಬಂಗಾರು ಚೆಟ್ಟಿ. ಆಯ್ತು, ಏನು ಕೆಲಸ ಎಂದು ಎಸ್ಸಯ್ ವಿಚಾರಿಸಿದರು. ಈತ ಜೇಬಿನಿಂದ ತನ್ನ ಫಿರ್ಯಾದನ್ನು ತೆಗೆದು ಮೇಜಿನ ಮೇಲಿರಿಸಿದ. ಜತೆಯಲ್ಲೇ ಕೈಗೆ ಬಂದ ಹೊಸ ನೋಟುಗಳ ಪ್ಯಾಕೆಟನ್ನು ಹಿಡಿದುಕೊಂಡ. ಕೂತುಕೊಳ್ಳುವಂತೆ ಮತ್ತೆ ಸೂಚನೆಯಾಯಿತು. ಚೆಟ್ಟಿ ಕುರ್ಚಿಯನ್ನು ತುಸು ಪಕ್ಕಕ್ಕೆ ಸರಿಸಿ ಅರ್ಧಕುಂಡೆಯಲ್ಲಿ ಕೂತು ಶಂಕರ ದೀಕ್ಷಿತನೆಂಬ ಶನಿಯ ಬಗ್ಗೆ ವಿಸ್ತಾರವಾಗಿ ನಿವೇದಿಸಿಕೊಂಡ. ಸಮಸ್ತವನ್ನೂ ಕೇಳಿಸಿಕೊಂಡ ಎಸ್ಸಯ್ ಕೊನೆಗೆ, “ಇದು ಕ್ರಿಮಿನಲ್ ಕೇಸೇ ಅಲ್ಲ, ಸಿವಿಲ್ ಮೊಕದ್ದಮ ಹಾಕಿ, ಅಥವಾ ಪಂಚಾಯತಿ ಮಾಡಿ, ನಾನಂತೂ ಇದರಲ್ಲಿ ಪ್ರವೇಶಿಸುವಂತೆಯೇ ಇಲ್ಲ! ” ಎಂದು ಕಾಗದದ ಹಾಳೆಗಳನ್ನು ವಾಪಸು ಮಾಡಿಬಿಟ್ಟರು.

“ತಮ್ಮ ಬುದ್ಧಿಗೆ ಹೊಳಿಯದ್ದೇನಿದೆ, ಸಾರ್? ಹೇಗಾದರೂ ಮಾಡಿ ಈ ಶನಿಯಿಂದ ನನ್ನನು ಪಾರು ಮಾಡಿ!”ಎಂದು ಚೆಟ್ಟಿ ಗೋಗರೆಯ ತೊಡಗಿದ.

“ಹೇಳಿದ್ನೆಲ್ಲ ಶೆಟ್ರೆ ಇದು ಕ್ರಿಮಿನಲ್ ಕೇಸಲ್ಲಾಂತ, ನೀವು ಸುಮ್ಮಗೇ ನನ್ನ ಸಮಯ ಹಾಳು ಮಾಡ್ತ ಇದೀರಿ!” ಎಂದರು ಎಸ್ಸಯ್.

“ನೀವು ಕೇಸು ಗೀಸು ಏನೂ ಮಾಡಬೇಕಿಲ್ಲ ಸರ್. ಎರಡು ಪೇದೆಗಳನ್ನ ಅವನ ಹಿಂದೆ ಬಿಟ್ಟರೆ ಸಾಕು.”

ಸ್ಟೂಡೆಂಟ್ಸನ್ನ ಹಾಗೆಲ್ಲ ಮಾಡೋಕಾಗಲ್ಲ ಶೆಟ್ಟರೆ. ಇದು ತುಂಬ ಸೆನ್ಸಿಟಿವ್ ಸಂಗತಿ. ನಾವೇನಾದರೂ ಮಾಡಿದರೆ ನಾಳೆ ಗೀಜಗನ ಹುಳಗಳ ಹಾಗಾಗೆ ಬಂದು ಮುತ್ತಿಗೆ ಹಾಕ್ತವೆ. ಅವನೇನು ಫ಼ೈನಲ್ ಈಯರಿನಲ್ಲಿ ಇದ್ದಾನಂತಲ್ಲ. ಸ್ವಲ್ಪ ತಾಳ್ಮೆ ವಹಿಸಿ, ತನ್ನಿಂತಾನೆ ಹೋಗ್ತಾನೆ ಪರೀಕ್ಷೆ ಮುಗಿಸ್ಕೊಂಡು.”

ಬಂಗಾರು ಚೆಟ್ಟಿ ತೀರ ಹತಾಶನಾದ. ಕೊನೇ ದಾರಿಯೂ ಇಲ್ಲಿಗೆ ಮುಗಿದಂತಾಯಿತಲ್ಲ ಎಂದು ಮರುಗಿದ. ಏನೋ ಹೊಳೆಯಿತು. ಇದು ತನಕ ಕೈಯಲ್ಲಿ ಭದ್ರವಾಗಿ ಹಿಡಿದಿದ್ದ ಪ್ಯಾಕೆಟನ್ನು ಕಂಡೂ ಕಾಣದ ಹಾಗೆ ಮೇಜಿನ ಮೇಲಿರಿಸಿ ಹೇಳಿದ :

“ಅವ ನಿಜವಾಗ್ಲೂ ಓದೋಕೆ ಬಂದಿಲ್ಲ, ಸಾರ್. ಅವನ ಚಟುವಟಿಕೆ ಗಮನಿಸಿದ್ರೆ ಕಮ್ಯೂನಿಸ್ಟನ ಹಾಗಿದ್ದಾನೆ. ನಕ್ಸಲೈಟಿದ್ದರೂ ಇರಬಹುದೂಂತ ನನ್ನ ಗುಮಾನಿ. ಯಾರು ಯಾರೋ ಹೊತ್ತಲ್ಲದ ಹೊತ್ತಿಗೆ ಅವನ ಭೇಟಿಗೆ ಬರ್ತಾರೆ. ರೂಮ್ನಲ್ಲಿಡೀ ರಶಿಯಾ ಚೈನಾ ಫೋಟೋ ಇಟ್ಟುಗೊಂಡಿದ್ದಾನೆ. ಇಲ್ಲಿ ನೋಡಿ, ಸಾರ್. ಈ ನೋಟೀಸು ಮಾಡಿ ಹಂಚ್ತಿದಾನೆ.

ಚೆಟ್ಟಿ ಬೇಕಿದ್ದರೆ ಇರಲಿ ಎಂದು ಜತೆಯಲ್ಲಿ ತಂದಿದ್ದ ಒಂದು ಚಿಕ್ಕ ಪ್ರಕಟನೆಯನ್ನು ಎಸ್ಸಾಯ್ ಕೈಗಿತ್ತ. “ಭಾರತೀಯ ಸಮಗ್ರ ಕ್ರಾಂತಿ : ಪ್ರಕಟಣೆ 12 ” ಎಂಬ ಶೀರ್ಷಿಕೆಯಿತ್ತು. ಎಸ್ಸಯ್ ಕುತೂಹಲದಿಂದ ಅದರ ಮೇಲೆ ಕಣ್ಣಾಡಿಸಿದರು. “ಇದು ಅವನೇ ಬರೆದಿದ್ದಾನೆ ಅನ್ನೋದು ಹೇಗೆ?” ಎಂದು ಕೇಳಿದರು.

“ಪ್ರತೀ ತಿಂಗಳು ಅವನಿಗೆ ಇದೇ ಕೆಲ್ಸ ಸಾರ್, ಅವನ ರೂಮ್ನಲ್ಲಿ ಇಂಥಾವು ಇನ್ನೂ ಅವೆ. ಇದೊಂದನ್ನ ಕಿಟಿಕೀ ಬದಿಯಿಂದ ಕಿತ್ಕೊಂಡು ಬಂದೆ.”

“ಹಾಗೆ ಅವನ ರೂಮಿನಿಂದ ಕಿತ್ತುಕೊಂಡು ಬರೋದು ತಪ್ಪಲ್ವೆ?”

ಎಲಾ ಎನಿಸಿತು ಚೆಟ್ಟಿಗೆ. ನಾನಂದುಕೊಂಡ ಹಾಗೇ ಆಯ್ತೆ. ಆರೋಪ ನನ್ನ ಮೇಲೆ ತಿರುಗಿಸಿ ಬಿಟ್ಟನೆ.

“ಇದ್ನ ಎಲ್ರಿಗೂ ಹಂಚ್ತಾ ಇದಾನೆ, ಸಾರ್. ನನ್ನ ಮೇಲೆ ಸಿಟ್ಟಾದ್ರಿಂದ ನನಗೆ ಕೊಡ್ತಾ ಇಲ್ಲ ಅಷ್ಟೆ.”

ಎಸ್ಸಾಯ್ ಏನೂ ಹೇಳಲಿಲ್ಲ. ದೀರ್ಘ ಯೋಚನೆಯಲ್ಲಿ ಬಿದ್ದ ಹಾಗನಿಸಿತು. ಇದೀಗ ಶುಭ ಸೂಚನೆ. ಎಂದರೆ, ಎಸ್ಸಯ್ ಚಿಂತಿಸೋ ಅಂಥಾದ್ದೇನೋ ಇದೆ. ನನ್ನ ಸಮಯ ಹಾಳುಮಾಡ್ತಾ ಇದೀಯ ಎಂದವನು ಈಗ ತಾನೇ ಸುಮ್ಗೆ ಕೂತು ಯೋಚ್ನೆ ಮಾಡ್ತಿದಾನೆ. ಮಾತಿನ ಗೊಬ್ಬರ ಕೊಡಬೇಕೆ ಬೇಡವೆ ಎಂದು ತಿಳಿಯದೆ ಚೆಟ್ಟಿ ಮೌನ ವಹಿಸಿದ.

“ಎಲ್ಲಿ ನಿಮ್ಮ ವಿಳಾಸ ಹೇಳಿ,” ಎಸ್ಸಾಯ್ ಎಂದರು.

“ಈ ಅರ್ಜೀನಲ್ಲಿ ಎಲ್ಲಾ ಇದೆ ಸಾರ್.”

ಎಂದು ಬಂಗಾರು ಚೆಟ್ಟಿ ಮತ್ತೆ ಅರ್ಜಿಯನ್ನು ಮುಂದೆ ಮಾಡಿದ. ಅರ್ಜಿಯನ್ನು ಸ್ವೀಕರಿಸಿದ ಎಸ್ಸಾಯ್.

“ನೀವೀಗ ಮನೆಗೆ ಹೋಗಿ. ಏನು ಮಾಡೋದು ಸಾಧ್ಯವೋ ಅದನ್ನ ಮಾಡ್ತೇನೆ. ಆದ್ರೆ ಈ ವಿಷಯ ಯಾರ ಜತೆ ಪ್ರಸ್ತಾಪಾನೂ ಬೇಡ ತಿಳೀತೇ?”

“ತಿಳೀತು ಸಾರ್. ನಾನು ಮತ್ತೆ ಬರಬೇಕೆ?”

“ಬೇಡ”

ಬಂಗಾರು ಚೆಟ್ಟಿ ನಮಸ್ಕರಿಸಿ ಹೊರಬಂದ. ಮೇಜಿನ ಮೇಲಿರಿಸಿದ ಪ್ಯಾಕೆಟಿನ ವಿಚಾರ ಮಾತುಕತೆಯಲ್ಲಿ ಬಂದೇ ಇರಲಿಲ್ಲ. ಇದು ಹೀಗೆಯೇ ಪದ್ಧತಿ ಎಂಬುದನ್ನು ಅವನು ತಿಳಿದುಕೊಂಡಿದ್ದ.

ಚೆಟ್ಟಿಯ ಸ್ಕೂಟರು ಚಾಲೂ ಆದಮೇಲೆ ಎಸ್ಸಾಯ್ ತನ್ನ ಭಾವ ಮೈದುನನಿಗೆ ಫೋನ್ ಮಾಡಿದ. ಆತ ಕೂಡ ಪೋಲೀಸು ಖಾತೆಯಲ್ಲಿದ್ದವನೇ. ಬಹಳ ಎಫ಼ೀಶಿಯಂಟ್ ಆಫ಼ೀಸರ್ ಎಂದು ಭಡ್ತಿ ಕೊಟ್ಟು ಈಗ ಸ್ಪೆಶಲ್ ಸೆಲ್ನಲ್ಲಿ ಹಾಕಿದ್ದರು.

ಸಾಹೇಬರು ಮೀಟಿಂಗ್ ನಲ್ಲಿದ್ದಾರೆ ಎಂಬ ಉತ್ತರ ಬಂತು.

“ಮೀಟಿಂಗ್ ಮುಗಿದ ತಕ್ಷಣ ನನಗೆ ಫೋನ್ ಮಾಡುವಂತೆ ಹೇಳಿ, ಮರೀಬಾರ್ದು.”

ಎಂದು ನುಡಿದು ಎಸ್ಸಾಯ್ ರಿಸೀವರನ್ನು ಕೆಳಗಿಟ್ಟರು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದೋಣಿ
Next post ಆಶಾಕಿರಣ

ಸಣ್ಣ ಕತೆ

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…