ಉತ್ತರಣ – ೧೦

ಉತ್ತರಣ – ೧೦

ಕಂದ ತಂದ ಆನಂದ-ಜಾಡಿಸಿ ಒದ್ದ ಹಿರಿಮಗ

ಇದಾದ ಮೂರನೇ ದಿನ ಅನುರಾಧಳಿಗೆ ನೋವು ಕಾಣಿಸಿಕೊಳ್ಳುತ್ತದೆ. ಆಗ ಎಲ್ಲರೂ ಬೇರೆ ಯೋಚನೆಗಳನ್ನು ಬಿಟ್ಟು ಭೂಮಿಗೆ ಇಳಿಯಲಿರುವ ಕಂದನ ನಿರೀಕ್ಷೆಗೊಳಗಾಗುತ್ತಾರೆ. ಅಚಲನನ್ನು ಎಲ್ಲರೂ ಮರೆಯುತ್ತಾರೆ.

ಮುದ್ದಾದ ಗಂಡುಮಗು ಹುಟ್ಟಿದಾಗ ಎಲ್ಲರಿಗಿಂತಲೂ ಹೆಚ್ಚಿನ ಸಂತಸದಿಂದ ಕುಣಿದಾಡಿದವನು ಅಚಲ, ಭಾವನಿಗೆ ತಂತಿ ಕಳುಹಿಸಿ ಶುಭ ಕೋರಿದವನೂ ಅವನೇ. ಆಸ್ಪತ್ರೆಯಿಂದ ಮನೆಗೆ ಓಡಿಯಾಡಿದವನೂ ಅವನೇ. ಸುಶೀಲಮ್ಮ ಹತ್ತು ವರುಷ ವಯಸ್ಸನ್ನು ಹಿಂದಕ್ಕೋಡಿಸಿ ಉತ್ಸಾಹದಿಂದ ಮೊಮ್ಮಗನ ಲಾಲನೆ ಪಾಲನೆಗೆ ಸೊಂಟಕಟ್ಟಿ ನಿಂತರು. ತಮ್ಮ ಕುಟುಂಬದ ಮುದ್ದು ಕುಡಿ ನೋಡಿದ ರಾಮಕೃಷ್ಣಯ್ಯನವರೂ ತಮ್ಮ ತೊಳಲಾಟಗಳನ್ನೆಲ್ಲಾ ಮರೆತು ಬಾಯಿ ತುಂಬಾ ಅಪರೂಪದ ನಗು ನಕ್ಕಿದ್ದರು. ಪೂರ್ಣಿಮಾ, ನಿರುಪಮಾರೂ ಗೆಲುವಾಗಿದ್ದರು. ಎಷ್ಟೋ ವರುಷದ ಮೇಲೆ ಆ ಮನೆಯಲ್ಲಿ ಮಗುವಿನ ಆಗಮನ, ಎಲ್ಲರ ಆಕರ್ಷಣೆಯ ಕೇಂದ್ರವಾಗಿತ್ತು.

ಹೊಸ ಜೀವವೊಂದು ಭೂಮಿಗೆ ಬಂದಾಗ ಎಲ್ಲರಿಗೂ ಸಂತೋಷವೇ. ಆ ಗಳಿಗೆಯಲ್ಲಿ ಯಾರೂ ಭವಿಷ್ಯದ ಯೋಚನೆ ಮಾಡೋದಿಲ್ಲ. ಎಲ್ಲರಿಗೂ ತಮ್ಮ ಮನೆಯ ಮಗು ಸಾಕ್ಷಾತ್ ಕೃಷ್ಣನೇ. ಮಗುವಿನ ಮುಖದಲ್ಲಿ ಪರಮಾತ್ಮನ ಕಳೆಯಿದೆ ಅನ್ನುವುದು ಉತ್ಪ್ರೇಕ್ಷೆಯಲ್ಲ. ಇಲ್ಲದಿದ್ದರೆ, ಎಲ್ಲರಿಗೂ ಚಿಕ್ಕ ಮಕ್ಕಳಲ್ಲಿ ಅಂಥಾ ಆಕರ್ಷಣೆ ಯಾಕೆ? ಅನುರಾಧಳ ಮಗು ಆ ಮನೆಯಿಡೀ ಸುಂದರವಾದ ಬೆಳಕನ್ನು ಹರಡಿಸಿತ್ತು.

ಆಸ್ಪತ್ರೆಯಿಂದ ಬಂದವಳೇ ಅನುರಾಧ ಚುರುಕಾದಳು. ತನ್ನ ಒಂದು ಭಾರ ಕಳೆಯಿತು ನಿಜ. ಮನದಲ್ಲಿ ಇರೋ ಭಾರ ಜರಗಿಸಬೇಕಿನ್ನು. ನಿಧಾನ ಮಾಡಿದರೆ ಆಗೋದಿಲ್ಲ. ದಿನಗಳು ಕ್ಷಣಗಳಾಗಿ ಓಡುತ್ತವೆ. ಶಂಕರ ಬಂದ ಮೇಲೆ ಹೋಗುವ ತಯಾರಿಯೂ ಆಗಬೇಕು. ಅದರ ಮೊದಲು ಶ್ರೀಕಾಂತನನ್ನು ತರಿಸಿ, ಈ ಮದುವೆಯನ್ನೊಂದು ನೆರವೇರಿಸಬೇಕು. ಅವನೊಡನೆ ಒಂದೆರೆಡು ಬಾರಿ ಪ್ರಸ್ತಾಪಿಸಿಯಾಗಿದೆ. ಹಾಗಾಗಿ ಕಾಗದ ಬರೆದರೆ ಬಾರದೇ ಇರಲಾರನೆಂದು ಅನುರಾಧ ಶ್ರೀಕಾಂತನಿಗೆ ಕಾಗದ ಬರೆದು ಹಾಕಿದಳು.

ಶ್ರೀಕಾಂತನಿಗೆ ಅತ್ತಿಗೆಯ ಮೇಲೆ ಅದರ ಅಭಿಮಾನ ಬಹಳವಿತ್ತು. ಖಂಡಿತಾ ಬರುವನೆಂದು ಧೈರ್ಯವಿದೆ ಅನುರಾಧಳಿಗೆ. ಅವನು ಬರುವ ಸಮಯಕ್ಕೆ ಸರಿಯಾಗಿ ಶಂಕರನು ಬಂದರೆ ಎಲ್ಲಾ ಕೆಲಸ ಸಾಂಗವಾಗಿ ನೆರವೇರಿಸಬಹುದು.

ಅವಳ ಎಣಿಕೆ ತಲೆ ಕೆಳಗಾಗಲಿಲ್ಲ. ಶ್ರೀಕಾಂತ ಬರಲೊಪ್ಪಿದ. ಅವನು ಬರುವಾಗಲೇ ಶಂಕರನೂ ಬಂದ, ಯಾವ ತಕರಾರಿಲ್ಲದೇ ಪೂರ್ಣಿಮಾಳನ್ನು ಒಪ್ಪಿದ. ಮದುವೆ ಬೇಗನೇ ಮುಗಿಸಬೇಕು. ಇನ್ನು ಎರಡು ತಿಂಗಳಲ್ಲಿ ಎರಡು ವರುಷದ ಮಟ್ಟಿಗೆ ತಾನು ಅಮೇರಿಕಕ್ಕೆ ಹೋಗಲಿದ್ದೇನೆ ಎಂದಾಗ ಶಂಕರ ಯಾವ ಯೋಚನೆಯೂ ಇಲ್ಲದೇ ಒಪ್ಪಿಕೊಂಡ.

ಮದುವೆಯನ್ನೆನೋ ಬೇಗ ಮುಗಿಸುವುದು ಸರಿಯೇ. ಆದರೆ ಖರ್ಚಿಗೆ ಹಣ! ಅಷ್ಟು ಬೇಗ ಒಟ್ಟುಗೂಡಿಸುವುದು ಎಲ್ಲಿಂದ? ವರದಕ್ಷಿಣೆ ಇಲ್ಲ ನಿಜ. ಆದರೆ ಹುಡುಗಿಗೆ ವಜ್ರದ ಬೆಂಡೋಲೆ ಹಾಕಬೇಕೆಂದು ಅವನ ತಾಯಿಯ ಅಭಿಪ್ರಾಯವಿದೆಯೆಂದು ತಿಳಿದಿದೆ. ಮತ್ತೆ ಸ್ವಲ್ಪ ಚಿನ್ನ, ಬಟ್ಟೆಬರೆ, ಮದುವೆಯ ಖರ್ಚು ಎಂದೆನ್ನುವಾಗ ಇಪ್ಪತ್ತೈದು ಮೂವತ್ತು ಸಾವಿರವಾದರೂ ಬೇಕು.

ರಾಮಕೃಷ್ಣಯ್ಯನವರು ಯೋಚಿಸಿ ಸುಸ್ತಾದಾಗ ಪರಿಹಾರ ಸೂಚಿಸಿದವನು ಅಚಲನೇ.

“ಅಪ್ಪಾ, ನೀವು ಈ ಮನೆಯ ಮೇಲೆ ಸಾಲ ತೆಗೆಯಿರಿ. ಮತ್ತೆ ನಾವು ತೀರಿಸುತ್ತೇವೆ. ಆನಂದಣ್ಣನಿಗೂ ಹೇಳಿದರಾಯಿತು. ಯಾರ ಯಾರ ಹತ್ತಿರ ಕೈಯೊಡ್ಡುವುದೇಕೆ? ಪೂರ್ಣಿಮಕ್ಕನ ಮದುವೆ ಆದರೆ ಮತ್ತೆ ನಿರೂಪಮಾಳ ಮದುವೆ ಮಾಡೋ ಜವಾಬ್ದಾರಿ ನನ್ನದು. ಅದಕ್ಕೆ ನೀವು ಯೋಚಿಸುವುದು ಬೇಡ.”

ಮಗನ ದೃಢವಾದ ಮಾತಿನ ಮುಂದೆ ತಂದೆ ಮೂಕರಾಗಿದ್ದರು.

ತಂದೆ ಮಗ ಇಬ್ಬರೂ ಬ್ಯಾಂಕಿಗೆ ಹೋಗಿ ಮೂವತ್ತು ಸಾವಿರ ಸಾಲ ಪಡೆದುಕೊಂಡು ಬಂದಾಗ ಪೂರ್ಣಿಮಾ ಏನೂ ಮಾಡಲಾಗದೆ ಅವಳಷ್ಟಕ್ಕೆ ಒದ್ದಾಡಿದ್ದಳು. ಬೇಡವೆಂದರೆ ತಾನು ಮದುವೆಯಾಗೋ ಯೋಚನೆಯನ್ನೇ ಬಿಡಬೇಕು. ಆ ಯೋಚನೆ ತನಗಿಲ್ಲ, ಇರಲಿ. ತಾನೂ ಈ ಸಾಲಕ್ಕೆ ಸ್ವಲ್ಪ ಸ್ವಲ್ಪ ಹಣ ಕಟ್ಟಿದರಾಯಿತು, ಎಂದು ಸಮಾಧಾನ ತಂದುಕೊಂಡಳು.

ಮದುವೆಯ ತಯಾರಿಯಲ್ಲಿ ಸಡಗರದಿಂದ ಸುತ್ತಾಡಿದವರು ಅಚಲ ಮತ್ತು ನಿರೂಪಮಾ. ಆನಂದ ಮದುವೆಯ ಮುನ್ನಾದಿನ ಸಂಸಾರ ಸಮೇತ ಬಂದಿಳಿದ, ಯಾರೂ ಯಾವ ಯೋಚನೆ, ತಿರಸ್ಕಾರ ಭಾವನೆಗಳಿಗೂ ಎಡೆಕೊಡದೆ ಆನಂದನನ್ನು ಆದರಿಸಿದರು. ನಿರ್ಮಲಾಗೆ ಮಾತ್ರ ಎಲ್ಲರೊಡನೆ ಒಮ್ಮನಸ್ಸಿನಿಂದ ಒಂದುಗೂಡಲು ಆಗಲಿಲ್ಲ. ಗದಗಕ್ಕೆ ಹೋದ ಮೇಲೆ ಗಂಡನ ಮನೆಯವರೆಲ್ಲಾ ಪರಕೀಯರಾಗಿದ್ದರು ಅವಳಿಗೆ.

ಮನೆಯ ಹಿರಿಯ ಮಗನೆಂದು ಆನಂದನೇನೂ ಕೈಯೆತ್ತಿ ತಂದೆಯ ಕೈಯಲ್ಲಿ ಮದುವೆಯ ಖರ್ಚಿಗೆಂದು ಒಂದೆರಡು ಸಾವಿರವಾದರೂ ಇಡಲಿಲ್ಲ. ಸುಶೀಲಮ್ಮ, ರಾಮಕೃಷ್ಣಯ್ಯನವರು ಮನದಲ್ಲೇ ಕೊರಗಿದರೂ ಬಾಯಿಬಿಟ್ಟು ಚಕಾರ ಶಬ್ದ ಎತ್ತಲಿಲ್ಲ.

ಮದುವೆ ಸಾಂಗವಾಗಿಯೇ ನೆರವೇರಿತು. ಪೂರ್ಣಿಮಾ ಗಂಡನ ಜತೆಗೆ ಅತ್ತೆ ಮನೆಗೆ ಹೋದ ಮೇಲೆ ರಾಮಕೃಷ್ಣಯ್ಯನವರು ಎಲ್ಲಾ ಮಕ್ಕಳನ್ನು ಹತ್ತಿರ ಕರೆದು, ಆನಂದನನ್ನೇ ಉದ್ದೇಶಿಸಿ ಹೇಳುವಂತೆ, “ಪೂರ್ಣಿಮಳ ಮದುವೆಯೇನೋ ಮುಗಿಯಿತು. ಆನಂದನನ್ನೊಬ್ಬನನ್ನುಳಿದು ಈ ಮದುವೆಗೆ ಹಣ ಎಲ್ಲಿಂದ ಒಟ್ಟಾಯಿತು ಎಂದು ತಿಳಿದಿದೆ. ಆನಂದ, ಈ ಮದುವೆಗಾಗಿ ಈ ಮನೆಯ ಮೇಲೆ ಮೂವತ್ತು ಸಾವಿರ ಸಾಲ ತೆಗೆದುಕೊಂಡಿದ್ದೇನೆ. ಇದನ್ನು ತೀರಿಸುವುದು ನನ್ನ ಶಕ್ತಿಗೆ ಮೀರಿದ್ದು ಎಂದು ನಿಮಗೆಲ್ಲರಿಗೂ ಗೊತ್ತಿದೆ, ಮನೆ ಎಂದಿದ್ದರೂ ನಿಮ್ಮದೇ, ಎಲ್ಲರೂ ಜತೆಗೂಡಿ ಸಾಲ ತೀರಿಸಿದರೆ ಸರಿ. ಮನೆ ಉಳಿಯುತ್ತದೆ.”

ಆನಂದನಿಂದ ಯಾವ ಪ್ರತಿಕ್ರಿಯೆಯೂ ಬಾರದಾಗ ಅಚಲ ದೃಢವಾಗಿ ನುಡಿಯುತ್ತಾನೆ. “ಅಪ್ಪಾ, ನೀವು ಈ ವಿಚಾರದಲ್ಲಿ ತಲೆ ಕೆಡಿಸಿಕೊಳ್ಳುವ ಅಗತ್ಯವೇ ಇಲ್ಲ. ನಾನು, ಅಣ್ಣ, ಈ ಸಾಲ ತೀರಿಸುತ್ತೇವೆ. ನಿರುಪಮಾಳ ಮದುವೆಯ ಸಂಪೂರ್ಣ ಜವಾಬ್ದಾರಿ ನನ್ನದೇ ಎಂದು ನಾನು ತಿಳಿದಿದ್ದೇನೆ, ಹಾಗಾಗಿ ನೀವು ಈ ವಿಚಾರದಲ್ಲಿ ಯೋಚಿಸಲೇ ಬೇಡಿ.”

ಅಚಲನ ಮಾತು ಕೇಳಿ ಸುಶೀಲಮ್ಮ, ಅನುರಾಧರ ಕಣ್ಣು ತುಂಬಿ ಬರುತ್ತದೆ. ಮನೆಯ ಹಿರಿಯ ಮಗನಾಗಿ ಒಂದು ಮಾತು ಹೇಳಬಾರದೇ ಅಣ್ಣ? ಆ ಹೆತ್ತ ಒಡಲಾದರೂ ಸಮಾಧಾನ ಪಡೆಯುತ್ತಿತ್ತಲ್ಲ, ಎಂದು ಅನುರಾಧ ಒದ್ದಾಡುತ್ತಾಳೆ.

ಒಮ್ಮೆಲೇ ಆನಂದ ಬುಸುಗುಟ್ಟುತ್ತಾನೆ. “ನನ್ನನ್ನು ಈ ವಿಚಾರಕ್ಕೆಲ್ಲಾ ಎಳೆಯಬೇಡಿ, ನನಗೆ ಮನೆಯ ಅಗತ್ಯವಿಲ್ಲ. ಯಾರಿಗೆ ಬೇಕೋ ಅವರು ಉಳಿಸಿಕೊಳ್ಳಲಿ. ಬೇಡದಿದ್ದರೆ ಮಾರಿ ಸಾಲ ತೀರಿಸಿ. ನನ್ನ ಹತ್ತಿರ ಕೇಳಿ ಸಾಲ ತೆಗೆಯಲಿಲ್ಲವಲ್ಲಾ!”

ಎಲ್ಲರಿಗೂ ಚಾಟಿಯೇಟು ತಿಂದ ಅನುಭವ! ತಲೆಯ ಮೇಲೆಲ್ಲಾ ಕಲ್ಲುಗಳು ಸುರಿದಂಥಾ ನೋವು! ಸುಶೀಲಮ್ಮನ ಸಹನೆ ಕಳೆಯುತ್ತದೆ. “ಏನು ಮಾತಿದು ಆನಂದ? ಮನೆಗೆ ಹಿರಿಯವನು ನೀನು. ನಿನ್ನಿಂದ ನಾವೇನೂ ಈತನಕ ಬೇಡಲಿಲ್ಲ. ಆದರೆ ಈ ಸಾಲ ತೆಗೆಯದಿದ್ದರೆ ಪೂರ್ಣಿಮಳ ಮದುವೆ ಹೇಗಾಗುತ್ತಿತ್ತು? ನಾವೇನು ನಿಮ್ಮಿಂದ ವಂಚಿಸಿ ಗಂಟು ಕಟ್ಟಿ ಇಟ್ಟಿದ್ದೇವೆಯೇ?”

ತಡೆಯಿಲ್ಲದೇ ಆನಂದ ಉತ್ತರಿಸುತ್ತಾನೆ. “ನಾನೇನು ಗಂಟುಕಟ್ಟಿ ಇಟ್ಟಿರುವೆನೇ ನೀವೆಲ್ಲಾ ಮಾಡಿದ ಸಾಲ ತೀರಿಸಲು?”

ರಾಮಕೃಷ್ಣಯ್ಯನವರಿಗೆ ಒಮ್ಮೆಲೇ ಹೃದಯವನ್ನು ಯಾರೋ ಚೂರಿಯಿಂದ ಕತ್ತರಿಸಿದ ಅನುಭವವಾಗುತ್ತದೆ. ಎಷ್ಟು ದೂರವಾದರೂ ಮಗ ಇಷ್ಟೊಂದು ಪರಕೀಯನಾಗುವನೆಂದು ಅವರೆಂದೂ ಊಹಿಸಿರಲಿಲ್ಲ. ಏನೋ, ಸಂಸಾರ ಮಕ್ಕಳು ಅಂದಾಗ ಹಣ ಕಳುಹಿಸುವುದು ಸಾಧ್ಯವಾಗದಿರಬಹುದು. ಏನು ಅಡಚಣೆಯೋ, ಎಂದು ಭಾವಿಸಿದ್ದರಲ್ಲದೆ ಈ ರೀತಿ ಜಾಡಿಸಿ ಒದೆಯುವನೆಂಬ ಯೋಚನೆಯೇ ಅವರಿಗೆ ಬಂದಿರಲಿಲ್ಲ. ಜೀವನದಲ್ಲಿ ಮಕ್ಕಳೇ ಈ ರೀತಿ ಪರಕೀಯರೆನಿಸುವರೆಂಬ ಯೋಚನೆ ಅವರಲ್ಲಿರಲೇ ಇಲ್ಲ. ಈ ಭಾವನೆ ಆವರಿಸಿ ಕೊಂಡಾಗ ರಾಮಕೃಷ್ಣಯ್ಯನವರಿಗೆ ಒಮ್ಮೆಲೇ ಸೋತ ನೋವುಂಟಾಗುತ್ತದೆ. ಜೀವನವೆನ್ನುವ ಪಂಥದ ಕಣದಲ್ಲಿ ಮೊದಲ ಬಾರಿಗೆ ಅವರು ಜೀವನವನ್ನೆದುರಿಸುವ ಛಲವನ್ನೆಲ್ಲಾ ಕಳೆದುಕೊಳ್ಳುತ್ತಾರೆ. ಏನಾದರೂ, ಅವರಲ್ಲಿ ಎದುರು ಬರುತ್ತಿರುವ ತೆರೆಗೆ ಎದುರಾಗಿ ಈಜುವ ಛಲವಿತ್ತು. ಶಕ್ತಿ ಕುಂದಿದ್ದರೂ ಆ ಹಟವಿತ್ತು.

ಅಣ್ಣನ ಮಾತಿನಿಂದ ಅನುರಾಧಳ ಸಿಟ್ಟು ಭುಗಿಲೆನ್ನುತ್ತದೆ, “ಅಣ್ಣ, ಅಪ್ಪ, ಅಮ್ಮ ನಿನಗಾಗಿ ಮಾಡಿರುವ ತ್ಯಾಗಕ್ಕೆ ನೀನು ಕಟ್ಟಿರುವ ಬೆಲೆ ಇಷ್ಟೇ ಏನು? ಹೋಗಲಿ ಬಿಡು, ಹಣ ಕೊಡುವುದು, ಬಿಡುವುದು ನಿನ್ನಿಷ್ಟ ಆದರೆ ಕೊನೇ ಪಕ್ಷ ತಂದೆ ತಾಯಿಯ ಹೃದಯವನ್ನು ಅರಿಯುವ ಪ್ರಯತ್ನ ಮಾಡು, ಆ ಹೃದಯಗಳನ್ನು ನೋಯಿಸಬೇಡ. ಅಮ್ಮನಿಗೆ ನಿನಗಿಂತ ಬೇರೆ ಮಕ್ಕಳಿಲ್ಲ. ಆ ಒಡಲಿಗೆ ಈ ರೀತಿ ಕೊಳ್ಳಿಯಿಡುವ ಕಠಿಣತೆ ಯಾಕೆ ನಿನಗೆ?”

“ನನಗೆ ನಿನ್ನ ಉಪದೇಶದ ಅಗತ್ಯವಿಲ್ಲ. ನೀನು ಎಂದೋ ಈ ಮನೆಯಿಂದ ಹೊರಗೆ ಹೋಗಿಯಾಗಿದೆ. ನಿನಗಿಲ್ಲೇನು ಕೆಲಸ. ನಿನ್ನ ಕೆಲಸ ನೀನು ನೋಡಿಕೋ. ಇಲ್ಲಿ ನಿನ್ನ ಇರುವು ಅಗತ್ಯವಿಲ್ಲದ್ದು, ಅಲ್ಲದೇ ಇದಕ್ಕೆಲ್ಲಾ ನೀನು ಬಾಯಿ ಹಾಕೋ ಅಗತ್ಯಾನೂ ಇಲ್ಲ.”

ಆನಂದನ ಮಾತು ಸುಶೀಲಮ್ಮನ ಸಿಟ್ಟನ್ನು ಇನ್ನೂ ಕೆರಳಿಸುತ್ತದೆ. “ಆನಂದ, ಅವಳು ಈ ಮನೆಯಿಂದ ಹೋದದ್ದಲ್ಲ. ನೀನು ಹೋದದ್ದು. ಅವಳಿಗೆ ಈ ಮನೆಯ ಮೇಲಿರುವ ಅಭಿಮಾನದ ಒಂದಂಶವಾದರೂ ನಿನಗಿರುತ್ತಿದ್ದರೆ ನೀನು ಹೀಗೆಲ್ಲಾ ಒದರುತ್ತಿರಲಿಲ್ಲ. ಅವಳಿಗೆ ಏನಾದರೂ ಹೇಳುವ ಹಕ್ಕು ಈ ಮನೆಯಲ್ಲಿ ಯಾರಿಗಾದರೂ ಇದ್ದರೆ ಅದು ತಂದೆಗೆ ಮಾತ್ರ ನನಗೂ ಇಲ್ಲ. ಅವಳು ಯಾವತ್ತಿಗೂ ಇಲ್ಲಿಯವಳೇ. ನೀನು ಅವಳ ಸುದ್ದಿ ಏನಾದರೂ ಅಂದಿಯಾದರೆ ಇಂದಿಗೇ ನಿನಗೂ ಈ ಮನೆಗೂ ಸಂಬಂಧ ಸಂಪೂರ್ಣ ಕಡಿಯಿತೆಂದೇ ತಿಳಿ, ಹೆತ್ತವರಿಗೆ ಬೇಕು ಮಕ್ಕಳ ಪ್ರೀತಿ. ನಿನ್ನಲ್ಲಿ ಅದೇ ಇಲ್ಲ. ಪ್ರೀತಿಯಿಲ್ಲದ ಮಕ್ಕಳು ಎಷ್ಟಿದ್ದರೇನು? ಮಕ್ಕಳಿಲ್ಲದವರಿಗಿಂತಲೂ ಹೀನ ಇಂಥಾ ಮಕ್ಕಳಿದ್ದವರ ಬಾಳು.”

ಅನುರಾಧಳ ಬಿಕ್ಕುವಿಕೆಯಿಂದ ರಾಮಕೃಷ್ಣಯ್ಯನವರು ಜಾಗ್ರತರಾಗುತ್ತಾರೆ. ಅವರ ಛಲ ಪುನಃ ಜೀವನಾಡಿಯಲ್ಲಿ ಹರಿಯುತ್ತದೆ. “ಅನು, ನೀನು ಏನೂ ಬೇಸರಿಸಬೇಡ. ಅವನೊಬ್ಬ ಹುಚ್ಚನೆಂದು ನನಗಿಂದೇ ತಿಳಿದದ್ದು. ಈತನಕ ಅವಿವೇಕಿ ಮಾತ್ರವೆಂದು ತಿಳಿದಿದ್ದೆ. ಹುಚ್ಚರ ಮಾತಿಗೇನಿದೆ ಬೆಲೆ?”

ಆನಂದ ಸಿಟ್ಟಿನಿಂದ ಎದ್ದು ಹೋದುದನ್ನು ಯಾರೂ ಗಮನಿಸಲಿಲ್ಲ. ಅಚಲನ ಮನಸ್ಸು ತುಂಬಾ ಖಿನ್ನವಾಗುತ್ತದೆ. ಅನುರಾಧಳೆಂದರೆ ಅವನ ಪ್ರೀತಿಯ ಅಕ್ಕ. ಆನಂದನೇನೂ ಅವನ ಪ್ರೀತಿಯ ಅಣ್ಣನಲ್ಲ. ಅಕ್ಕನ ಮನಸ್ಸಿಗೆ ನೋವಾದರೆ ಅವನಿಗೆ ತಡೆಯಲು ಕಷ್ಟ ಅಲ್ಲದೆ, ಭಾವ ಕೂಡಾ ಅಲ್ಲೇ ಕೂತು ನಮ್ಮ ಸಂಸಾರದ ಒಗ್ಗಟ್ಟಿನ ರೀತಿ ನೋಡುತ್ತಿದ್ದಾರೆ. ಛಿ! ತಲೆ ತಗ್ಗಿಸುವ ವಿಚಾರ ಇದು, ನಾಚಿಕೆಗೇಡು. ನಮ್ಮಲ್ಲಿ ಯಾಕೆ ಈ ಬಿಕ್ಕಟ್ಟು? ಮದುವೆಯಾದ ಮೇಲೆ ಎಲ್ಲಾ ಹುಡುಗರೂ ಹೀಗೆಯೇ? ಛಿ! ನಾನಂತೂ ಹೀಗಾಗಬಾರದು. ಹೀಗೆ ಆಗುವುದೆಂದಿದ್ದರೆ ಯಾರಿಗೆ ಬೇಕು ಈ ಮದುವೆ? ಯಾರೂ ಸಾಲ ತೀರಿಸದಿದ್ದರೆ ಬೇಡ, ನಾನೇ ತೀರಿಸುವೆ. ಮೂವತ್ತು ಸಾವಿರವೇನೂ ಭಾರೀ ಮೊತ್ತವಲ್ಲ. ಹೇಗಾದರೂ ತೀರಿಸಬಹುದು. ಯೋಚಿಸುತ್ತಲೇ ಎದ್ದು ಹೋಗುತ್ತಾನೆ ಅಚಲ.

ಈ ಘಟನೆಗೆ ಸಾಕ್ಷಿಯಾಗಿ ನಿಂತ ನಿರುಪಮಾ ಕಲ್ಲುಬೊಂಬೆಯಾಗಿರುತ್ತಾಳೆ. ಮೊದಲ ಬಾರಿಗೆ ಅವಳ ಹೃದಯ ತಟ್ಟಿದ್ದ ಘಟನೆಯಿದು. ಇದರಿಂದಾಗಿ ಅವಳಿಗೂ ತನ್ನ ಮನೆಯ ಒಳಗಿನ ಗಂಭೀರ ಸಮಸ್ಯೆಗಳು ಅರ್ಥವಾಗುತ್ತದೆ.

ರಾಮಕೃಷ್ಣಯ್ಯನವರ ಸೋಲಿನ ಸೌಧಕ್ಕೆ ಸೇರಿದ ಇನ್ನೊಂದು ಕಲ್ಲು ಈ ಘಟನೆ. ಯೋಚಿಸಿದ್ದು, ಬೋಧಿಸಿದ್ದು, ನಿರೀಕ್ಷಿಸಿದ್ದು ಎಲ್ಲಾ ಬುಡಮೇಲಾದ ಅನುಭವವಾಗಿ ಎದೆ, ಮನಸ್ಸು ಮಣಭಾರವಾಗುತ್ತದೆ. ತಲೆ ಕುಗ್ಗಿ ಬಾಗುತ್ತದೆ. ತಾನೀವರೆಗೆ ಎಷ್ಟೋ ಮಕ್ಕಳಲ್ಲಿ ಒಳ್ಳೆಯತನದ ಬೀಜ ಬಿತ್ತಿ ಬೆಳೆಸಿದ್ದೇನೆ. ಆದರೆ ನನ್ನ ಮಗನಲ್ಲಿ ಈ ಒಳ್ಳೆಯತನದ ಬೀಜ ಮೊಳಕೆಯೊಡೆದು ಮರವಾಗಲಿಲ್ಲ. ಯಾಕೆ? ಯಾವ ರೀತಿಯಲ್ಲಿ ನಾನು ಇವನನ್ನು ಬೆಳೆಸುವುದರಲ್ಲಿ ತಪ್ಪಿದ್ದೇನೆ? ಎಂಬ ಯೋಚನೆ ಮುತ್ತಿ ಬರುತ್ತದೆ.

ಇಂದಿಗೂ ರಾಮಕೃಷ್ಣಯ್ಯನವರ ಶಿಷ್ಯರು ಹುಡುಕಿಕೊಂಡು ಬಂದು ತಮ್ಮ ಸಾಧನೆಗಳ ಬಗ್ಗೆ ತಿಳಿಸಿ ಆಶೀರ್ವಾದ ಪಡೆದು ಹೋಗುವುದಿದೆ. ಆದರೆ ಅವರದ್ದೇ ಕರುಳಿನ ಕುಡಿ ಹೀಗೆ ಸಿಡಿದು ನಿಂತದ್ದು ಹೇಗೆ? ಲೋಕ ರೂಢಿಯೇ ಇದೇ ತಾನೇ? ಒಳ್ಳೆಯವರ ಮಕ್ಕಳು ಒಳ್ಳೆಯವರೇ ಆಗುವರೆಂದೇನು ಗ್ಯಾರಂಟಿ? ಹೆತ್ತ ಮಕ್ಕಳೆಲ್ಲಾ ತಂದೆ ತಾಯಿಗೆ ಒದಗಿ ಬರುವರೆಂದರೇನು ನಿಶ್ಚಿತ?

ಆನಂದ ಹೊರಟು ನಿಂತಾಗ ಯಾರಿಗೂ ಬೇಸರವೆನಿಸಲಿಲ್ಲ. ತಮ್ಮ ನಡುವೆ ಉರಿಯುತ್ತಿರುವ ಬೆಂಕಿಯೊಂದು ತೊಲಗಿ ಹೋದಂತೆ ಅನಿಸಿತ್ತು. ವಾತಾವರಣದಲ್ಲಿನ ಬಿಗಿತ ಸಡಿಲಗೊಂಡಿತ್ತು. ಪರಕೀಯನೊಬ್ಬ ಮನೆಗೆ ಬಂದು ಹೋದರೆ ಯಾವ ಅನುಭವ ಸಾಧ್ಯ? ಬಂಧನಗಳನ್ನು ಭದ್ರಗೊಳಿಸುವುದು ಪ್ರೀತಿಯೊಂದೇ, ಪ್ರೀತಿ ಮಾಯವಾದಾಗ ಇದ್ದ ಬಂಧನಗಳ ಕೊಂಡಿ ತನ್ನಿಂದ ತಾನೇ ಕಳಚಿಕೊಳ್ಳುವುದರಲ್ಲಿ ಆಶ್ಚರ್ಯವಿಲ್ಲ. ಸುಶೀಲಮ್ಮ ಮನಸ್ಸು ಗಟ್ಟಿ ಮಾಡಿಕೊಂಡರೂ, ತಾಯಿಯ ಒಡಲು ನೋವಿನಿಂದ ಒದ್ದಾಡಿತ್ತು.
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರೀತಿ
Next post ಕಾಲಪುರುಷನ ಕ್ರೂರಹಸ್ತ ಹಳೆವೈಭವದ

ಸಣ್ಣ ಕತೆ

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…