ಕಾಲಪುರುಷನ ಕ್ರೂರಹಸ್ತ ಹಳೆವೈಭವದ
ಭವ್ಯ ಸ್ಮೃತಿಗಳ ಗರ್ವಭಂಗ ಮಾಡಿದ್ದನ್ನು;
ಎತ್ತರದ ಸೌಧಗಳೆ ತತ್ತರಿಸಿ ನೆಲಕುರುಳಿ
ಮರ್ತ್ಯರೋಷಕ್ಕೆ ವಿಗ್ರಹಗಳಳಿದ್ದನ್ನು ;
ದಡದ ಮಡಿಲಿಗೆ ಬೆಳೆದ ಭಾರಿ ರಾಜ್ಯಗಳನ್ನೆ
ಹಸಿದ ಸಾಗರ ಉಕ್ಕಿ ನೆಕ್ಕಿ ತೇಗಿದ್ದನ್ನು;
ಗಟ್ಟಿ ಮಣ್ಣನು ಗೆದ್ದು ತಂದು ನೆರೆ ತನ್ನೊಡನೆ
ಕೊರತೆ ಸಮೃದ್ಧಿಗಳ ನೆಲೆ ಬದಲಿಸಿದ್ದನ್ನು-
ಎಲ್ಲವನು ಬಲ್ಲೆ. ಈ ಏರುಪೇರನ್ನು, ಘನ
ರಾಜ್ಯಗಳೆ ಮಣ್ಣಾದುದನ್ನು ನೋಡುತ ಹಾಗೇ
ನುಸುಳುವುದು ಏನೊ ಯೋಚನೆ ಮನಕೆ : ಒಂದುದಿನ
ಬಂದೊಯ್ಯುವನು ಕಾಲ ನನ್ನೊಲವನೂ ಹೀಗೆ !
ಈ ಚಿಂತೆಯೋ ಸಾವಿನಂತೆ. ಎಲ್ಲಿದೆ ಆಯ್ಕೆ
ಅಳುವುದಲ್ಲದೆ ಕಳೆಯಲೊಪ್ಪದುದ ಪಡೆದುದಕೆ ?
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 64
When I have seen by Time’s fell hand defaced