ಮಣ್ಣಿನ ಮಡಿಕೆ ಕುಡಿಕೆ
ಕಲಾಯಿ ಇಲ್ಲದೇ ಅಟ್ಟಕ್ಕೇರಿದ
ಹಿತ್ತಾಳೆ ತಾಮ್ರದ ಪಾತ್ರೆ

ಮುತ್ತಜ್ಜ ಅಜ್ಜ ಅಪ್ಪ
ಮತ್ತಿನ್ಯಾರೋ ಮಲಗೆದ್ದ
ತೊಟ್ಟಿಲು ಉಯ್ಯಾಲೆ
ಭೂತಾಕಾರದ ಮಂಚ
ಮೂಲೆಯಲಿ ತೂಗುವ ಕಂದೀಲು,
ಮುಖ ಕಾಣದ ಕನ್ನಡಿ
ಪ್ರಾಚ್ಯ ವಸ್ತು ಸಂಗ್ರಹದ ಸರಕು
ತಲೆತಲಾಂತರದಿಂದ ಬಂದ ಮುರುಕು
ಉಪಯೋಗಕ್ಕೆ ಬರುವಂತಿಲ್ಲ
ಉಪಯೋಗಿಸದೇ ಇರುವಂತಿಲ್ಲ.

ಅಪ್ಪ? ಅಲ್ಲಲ್ಲ ಅಜ್ಜ? ಅಲ್ಲ
ಮುತ್ತಜ್ಜ ಅಥವ ಅವನಜ್ಜ ನೆಟ್ಟ ಆಲ
ದಪ್ಪ ಬಿಳಲುಗಳಾಗಿ ಭೂಮಿ ಕೊರೆದು
ಈಗ ಬೇರಾವುದೋ ಬಿಳಲಾವುದೋ
ಎಲ್ಲ ಅಯೋಮಯ

ಒಂದೊಂದು ವಸ್ತುವಿನೊಂದಿಗೂ
ಒಂದೊಂದು ಹಳೆಮುಖಗಳು
ತಳುಕು ಹಾಕಿಕೊಂಡು ಎಲ್ಲಾ
ಸಿಕ್ಕಷ್ಟಕ್ಕೇ ಸೀದು
ಕೈ ತೊಳೆಯೋಣವೆಂದರೆ
ಕಳೆದುಹೋದ ಆತ್ಮಗಳು
ಕಣ್ಮುಂದೆ ಸುಳಿದು
ವೈಭವದ ಗತ ಇತಿಹಾಸ ಸಾರುತ್ತಾ
ಗಿರ್‍ರನೆ ರಾಟವಾಳ ಸುತ್ತಿದಂತೆ
ಮನಮಂದಿರದಲ್ಲಿ ನೆನಪುಗಳ ಸರಮಾಲೆ
ಹಳೆಬೇರು ಕಿತ್ತರೆ? ಹೊಸಚಿಗುರು ನೆಟ್ಟರೆ?
ತುಮುಲಗಳ ಒಡಲೊಳಗೆ
ಹಳೆಪಳೆ ಮುರುಕುಗಳೊಳಗೆ
ನನ್ನದೇ ಪ್ರತಿರೂಪ
ಥಟ್ಟನೆ ಕಂಡಂತಾಗಿ,

ಬಹುಶಃ ಹಿರಿಯ ಆತ್ಮಗಳು ಆಲನೆಟ್ಟಿದ್ದು
ನೇಣಿಗಲ್ಲ ಉಯ್ಯಾಲೆ ಜೀಕಲು
ಬೇಕೆಂದರೆ ಎಲ್ಲಾ ಬೇಕು
ಬೇಡೆಂದರೆ ಏನೂ ಬೇಡ!

ನೆನ್ನೆಯವರಿಗೆ ರಸ,
ಇಂದಿಗೆ ಕಸ
ಇಂದಿನ ನಮ್ಮ ಹಾಸು
ನಾಳಿನವರಿಗೆ ಕಾಲೊರೆಸು!
*****