ಮೂಲ: ಟಿ ಎಸ್ ಎಲಿಯಟ್
ವಿಶಾಲಬೆನ್ನಿನ ಒಡ್ಡು ಹಿಪೋಪೊಟಮಸ್ ಮೃಗ
ಹೊಟ್ಟೆಯೂರಿ ನಿಲ್ಲುತ್ತದೆ ಕೆಸರಲ್ಲಿ;
ನೋಡಲು ಹೊರಕ್ಕೆ ಅಗಾಧ ಕಂಡರೂ ಕೂಡ
ರಕ್ತಮಾಂಸಗಳಷ್ಟೆ ಮೈಯಲ್ಲಿ
ಬರೀ ರಕ್ತಮಾಂಸ ಶಕ್ತಿಹೀನತೆ ಗುರುತು,
ನರದ ಆಘಾತದ ಅಪಾಯ;
ಚರ್ಚಿನ ಸ್ವಾಸ್ಥ್ಯವೊ ಮಿಸುಕುವಂಥದ್ದಲ್ಲ
ಭಾರಿ ಬಂಡೆಯೆ ಅದರ ಪಾಯ೧
ಅಭದ್ರ ಹೆಜ್ಜೆ ಊರಿ ಆಹಾರಕ್ಕೆ ತಡಕುವಾಗ
ಹಿಪ್ಪೋ ನಡಿಗೆ ತಪ್ಪಬಹುದು,
ಚರ್ಚು ಮಾತ್ರ ಎಲ್ಲೂ ಚಲಿಸಬೇಕಾದ್ದೇ ಇಲ್ಲ
ಇದ್ದಲ್ಲೇ ಬರುತ್ತದೆ ಕಾಣಿಕೆ ಹರಿದು.
ಗಿಡ್ಡ ಮಾವಿನ ಮರದ ತಗ್ಗಿನ ಹಣ್ಣಿಗೂ ಪಾಪ
ತಲುಪಲಾರದು ಹಿಪ್ಪೋ ಬಾಯಿ;
ಚರ್ಚಿನ ವಿಷಯ ಬಿಡಿ ತಾನಾಗಿ ಬರುತ್ತದೆ
ದೇಶ ವಿದೇಶದ ಹಣ್ಣು ಮಿಠಾಯಿ.
ಕೂಡುವಾಗ ಹಿಪ್ಪೋ ರಾಡಿದನಿಯಲ್ಲಿ ಅರಚಿ
ಖುಷಿಗೆ ಬೀಗುತ್ತದೆ ಕಾಮವದನ,
ಚರ್ಚೋ ಕುಕಿಲುತ್ತದೆ ಪ್ರತಿ ವಾರ ಇಂಪಾಗಿ
ತನ್ನ ದೈವದ ಆತ್ಮಮಿಲನ.
ಇಡೀ ಹಗಲು ‘ಪೊಟಮಸ್’ ನಿದ್ದೆ ಹೊಡೆಯುತ್ತದೆ
ರಾತ್ರಿಯೇ ಸರಿ ಅದರ ಬೇಟೆಗೆ,೨
ದೇವರ ಮಹಿಮೆಯ ಆಳ ಪಾಮರರು ಬಲ್ಲೆವೆ?೩
ನಿದ್ದೆ ದುಡಿಮೆ ಚರ್ಚಿಗೆ ಒಟ್ಟಿಗೇ!
ಕೆಸರಲ್ಲಿ ಕಾಲುಗಳು ಹೂತಿದ್ದ ಹಿಪ್ಪೋಗೆ
ರೆಕ್ಕೆ ಬೆಳೆದು ಆಕಾಶಕ್ಕೇರಿ,
ದೇವತೆಗಳೆಲ್ಲ ಅದನ್ನು ಮುತ್ತಿ ಉಪಚರಿಸುತ್ತ
ದೇವರ ಹೊಗಳಿದ್ದನ್ನು ನೋಡಿದೆ.
ಮೇಕೆಯ ರಕ್ತ ಅದರ ಪಾಪವನ್ನೆಲ್ಲ ತೊಳೆದು
ತಬ್ಬಿಕೊಳ್ಳುತ್ತದೆ ಸ್ವರ್ಗದ ತೋಳು,೪
ದೇವರ ಕರುಣೆಯ ಹಾಡಿ ಮರೆಯುವ ಸಂತರ ನಡುವೆ
ನುಡಿಸುತ್ತದೆ ಹಿಪ್ಪೋ ತನ್ನ ಹಾಡು.
ಪವಿತ್ರ ದೇವಕನ್ಯೆಯರು ಮುತ್ತಿನ ಮಳೆ ಕರೆದು
ಬೆಳಗುತ್ತದೆ ಹಿಪ್ಪೋ ಹಿಮದ ಹಾಗೆ೫
ಬಂಡೆಪಾಯದ ಚರ್ಚು ಮಬ್ಬು ಬೆಳಕಲ್ಲಿ ಇಲ್ಲೇ
ಉಳಿಯುತ್ತದೆ ಆಚಂದ್ರಾರ್ಕ ಹೀಗೇ.
*****
೧೯೧೭
Hippopotamus ಶಬ್ದಕ್ಕೆ ಹಿಪೋಪಾಟಮಸ್ ಎಂಬ ಉಚ್ಚಾರಣೆ ಇದ್ದರೂ ನಮ್ಮಲ್ಲಿ ರೂಢಿಯಲ್ಲಿರುವ ಹಿಪೋಪೊಟಮಸ್ ಎಂಬ ರೂಪವನ್ನೇ ಇಲ್ಲಿ ಇಟ್ಟುಕೊಂಡಿದೆ.
ಈ ಕವನ ೧೯೧೭ರಲ್ಲಿ ರಚನೆಯಾದದ್ದು. ಎಜ್ರಾಪೌಂಡ್ ಆಗ ‘ಲಿಟ್ಲ್ ರೆವ್ಯೂ’ ಪತ್ರಿಕೆಗೆ ವಿದೇಶೀ ಸಂಪಾದಕನಾಗಿದ್ದ. ಅವನೇ ಕಾರಣವಾಗಿ ‘ಹಿಪೋಪೋಟಮಸ್’ ಕವನ ಆ ಪತ್ರಿಕೆಯಲ್ಲಿ ಪ್ರಕಟವಾಯಿತು.
ಒಂದು ರೀತಿಯಲ್ಲಿ ಈ ಕವನ ಫ್ರೆಂಚ್ ಕವಿ ಗೋತಿಯೆ (Gautier) ಆ ಮುಂಚೆಯೇ ಬರೆದಿದ್ದ L’ Hippopotamus ಕವನದ ಒಂದು ಅಣಕು ಕವಿತೆ, ಅದರಲ್ಲಿ ಬಳಸಿರುವ ಚೌಪದಿ ರೂಪ ಮತ್ತು abab ಪ್ರಾಸಕ್ರಮವನ್ನೇ ಇಲ್ಲಿಯೂ ಬಳಸಿದೆ.
ಕವನದಲ್ಲಿ ಎಲಿಯಟ್ ತನ್ನ ಬಗ್ಗೆಯೇ ಹಾಸ್ಯಪೂರ್ಣವಾಗಿ ಹೇಳಿಕೊಂಡಂತೆ ಒಂದು ಧ್ವನಿ ಇದೆ. ಅವನು ಈ ಪದ್ಯ ಬರೆದದ್ದು ೧೯೧೭ರಲ್ಲಿ, ಅವನು ಲಂಡನ್ನಿನ ಲಾಯ್ಡ್ ಬ್ಯಾಂಕಿನಲ್ಲಿ ಕೆಲಸಕ್ಕೆ ಸೇರಿದ್ದು ಕೂಡ ಅದೇ ವರ್ಷವೇ. ಎಲಿಯಟ್ ಬ್ಯಾಂಕಿಗೆ ಹೋಗಿಬರುತ್ತಿದ್ದದ್ದು ಬಸ್ಸಿನಲ್ಲಿ, ಲೀವಿಸ್ ಕೆರೋಲ್ ಬರೆದ ‘ಸಿಲ್ವಿ ಅಂಡ್ ಬ್ರುನೊ’ ಕಾದಂಬರಿಯ (೧೮೮೯) ಒಂದು ಹಾಡಿನಲ್ಲಿ ಹಿಪೊಪೊಟಮಸ್ಸನ್ನು ಬ್ಯಾಂಕ್ ಕ್ಲರ್ಕಿಗೆ ಸಮೀಕರಿಸಿ ಬರೆದ ಒಂದು ಹಾಸ್ಯದ ಪ್ರಸಂಗ ಬರುತ್ತದೆ.
He thought he saw a Banker’s Clerk
Descending from the Bus :
He looked again, and found it was
A Hippopotamus :
“If this should stay to dine” he said
There won’t be much for us!”
೧ ಚರ್ಚಿನ ಸ್ವಾಸ್ಥ್ಯ… ಅದರ ಪಾಯ : ರೋಮನ್ ಕ್ಯಾಥೊಲಿಕ್ ಚರ್ಚ್ ತನಗೆ ಸೇಂಟ್ ಪೀಟರ್ ಮೂಲ ಎಂದು ಘೋಷಿಸಿಕೊಂಡಿದೆ. ‘ಭಾರಿ ಬಂಡೆಯೆ ಅದರ ಪಾಯ’ ಎಂಬ ಸಾಲು ಏಸುಕ್ರಿಸ್ತ ಪೀಟರ್‌ಗೆ ಹೇಳಿದ ಮುಂದಿನ ಮಾತನ್ನು ನೆನಪಿಸುತ್ತದೆ. “……thou art Peter, and upon this rock I will build my Church (ಮ್ಯಾಥ್ಯೂ XVI, ೧೮).
೨ ಇಡೀ ಹಗಲು…. ಅದರ ಬೇಟೆಗೆ : ಎಲಿಯಟ್‌ನ ಪ್ರಕೃತಿಚರಿತ್ರೆ ಮತ್ತು ಪ್ರಾಣಿಜೀವನ ಚರಿತ್ರೆಗಳ ತಿಳಿವಳಿಕೆ ಅಷ್ಟು ಕರಾರುವಕ್ಕಾದದ್ದೇನೂ ಅಲ್ಲ! ಹಿಪೋಪೋಟಮಸ್ ಹುಲ್ಲು ತಿನ್ನುವ ಪ್ರಾಣಿಯಾಗಿದ್ದು, ಅದು ಬೇಟೆಯಾಡುತ್ತದೆ ಎನ್ನುವುದು ಸರಿಯಲ್ಲ. ಹಾಗೆಯೇ ‘ಕೂಡುವಾಗ ಹಿಪ್ಪೋ ರಾಡಿದನಿಯಲ್ಲಿ ಅರಚಿ ಖುಷಿಗೆ ಬೀಗುವ’ ವಿಷಯ ಪ್ರಾಣಿಶಾಸ್ತ್ರಜ್ಞರಿಗೆ ತಿಳಿಯದ್ದು!
೩ ದೇವರ ಮಹಿಮೆಯ ಆಳ ಪಾಮರರು ಬಲ್ಲವೆ ? : ವಿಲಿಯಮ್ ಕೂಪರ್
(೧೭೩೧-೧೮೦೦) ಬರೆದ Light Shining out of Darkness ಪದ್ಯದ God moves in a mysterious way / His wonders to perform ಎಂಬ ಮೊದಲ ಸಾಲುಗಳು God Works in a mysterious way / The church can sleep and feed at once ಎಂಬ ಈ ಪದ್ಯದ (ಇಂಗ್ಲಿಷ್ ಮೂಲದ) ಸಾಲುಗಳ ಹಿನ್ನೆಲೆಗಿವೆ. ಕೇವಲ ಸಂದರ್ಭದ ಬಲದಿಂದ ಆ ಸಾಲುಗಳನ್ನು ಕವಿ ತೀಕ್ಷ್ಣ ವಿಡಂಬನೆಗೆ ಹೊರಳಿಸಿಬಿಟ್ಟಿದ್ದಾನೆ!
೪ ಮೇಕೆಯ ರಕ್ತ… ತಬ್ಬಿಕೊಳ್ಳುತ್ತದೆ ಸ್ವರ್ಗದ ತೋಳು : ಕ್ರಿಸ್ತನ ಸಾವನ್ನು ಒಂದು ಬಲಿದಾನದ ರೂಪಕವಾಗಿ ಸ್ವೀಕರಿಸಲಾಗಿದೆ. ಬಲಿಯಾದ ಮೇಕೆಯ ರಕ್ತ ಮನುಷ್ಯನ ಪಾಪಗಳನ್ನೆಲ್ಲ ತೊಳೆದು ಅವನನ್ನು ಶುದ್ಧನನ್ನಾಗಿಸುತ್ತದೆ. ಮೇಲಿನ ರೂಪಕಕ್ಕೆ ಈ ಮಾತು ಆಧಾರ. Behold the lamb of God, which taketh away the sin of the world ಜಾನ್-೧.೨೯). ಹಾಗೆಯೇ ಈ ಮಾತೂ ಕೂಡ. “ಭಗವಂತ ಆರಿಸಿದ ಜನರು ಮೇಕೆಯ ರಕ್ತದಿಂದ ಶುಭ್ರವಾಗುತ್ತಾರೆ” (ರೆವೆಲೇಷನ್ VII-೧೪).
೫ ಪವಿತ್ರ ದೇವಕನ್ಯೆಯರು…. ಹಿಪ್ಪೋ ಹಿಮದ ಹಾಗೆ : ಧರ್ಮಶ್ರದ್ಧೆಯಿಂದ ಅವಿವಾಹಿತರಾಗಿ ಬಾಳಿದ ಸ್ತ್ರೀಯರನ್ನು ಅವರ ಧಾರ್ಮಿಕ ನಡತೆಗಾಗಿ ಶ್ರೇಷ್ಠ ಮಹಿಳೆಯರೆಂದು ಹಿಂದೆ ಚರ್ಚ್ ಪರಿಗಣಿಸುತ್ತಿತ್ತು. ಸೇಂಟ್ ಕ್ಯಾಥರೀನ್ ಮತ್ತು ಸೇಂಟ್ ಆರ್ಸುಲಾ ಅಂಥವರು.