ವಿಜಯ ವಿಲಾಸ – ಷಷ್ಠ ತರಂಗ

ವಿಜಯ ವಿಲಾಸ – ಷಷ್ಠ ತರಂಗ

ಈವರೆಗೆ ಅನೇಕ ಯಕ್ಷಿಣೀ ಮಾಯಾ ಮಂತ್ರ ತಂತ್ರಗಳನ್ನು ಗ್ರಹಿಸಿಕೊಂಡಿದ್ದ ವಿಜಯನು, ದೇವರು ತನ್ನನ್ನು ಕೈಬಿಡದೆ ಕಾಪಾಡುವನೆಂಬ ಧೈರ್ಯದಿಂದ ಹೊರಟು, ಸರೋಜಿನಿಯ ಮನೆಗೆ ಬಂದು, ನಡೆದ ಸಂಗತಿಯನ್ನಾಕೆಗೆ ತಿಳಿಸಿ, ತನ್ನ ಮಾಯಾತುರಗವನ್ನೇರಿ ದುರ್ಗಾವತಿಯನ್ನು ಕುರಿತು ಪ್ರಯಾಣಮಾಡಿದನು. ಅನಂತರ ವಾಯುವೇಗದಿಂದ ಕುದುರೆಯಮೇಲೆ ಹೋಗಿ, ಮಾರನೆಯ ದಿನ ಮಧ್ಯಾಹ್ನ ಕಾಲಕ್ಕೆ ದುರ್ಗಾವತಿಯ ಪ್ರಾಂತವನ್ನು ಸೇರಿದನು. ಅಗ್ನಿಶಿಖನು ಹೇಳಿದ್ದ ಪರ್ವತದ ಗವಿಗೆ ಹೋಗಿ ನೋಡಲು, ಅಲ್ಲಿ ವೀರಭೈರವನು ಚಂಡಭೈರವನಾಗಿ ಅಗ್ನಿಯ ಮುಂದೆ ಕುಳಿತು ಕೆಲವು ಮಂದಿ ಮಾನವರನ್ನು ಮಾರಣ ಮಾಡುವಷ್ಟರಲ್ಲಿದ್ದನು. ದುರ್ಗಾದೇವಿಯ ಮುಂದೆ ಇದ್ದ ವಧಸ್ತಂಭದ ಬಳಿಯಲ್ಲಿ ಎಂಟು ಮಂದಿ ತರುಣ ಮಾನವರು, ಯಮದೂತರಂತಹ ಭಯಂಕರ ರಾಕ್ಷಸರಿಂದ ಹಿಡಿಯಲ್ಪಟ್ಟು ವಧೆಗೆ ಸಿದ್ದರಾಗಿದ್ದರು. ದುರ್ಗಿಯ ಮುಂದೆ ರಕ್ತಪ್ರವಾಹವೂ ಮಾಂಸದ ರಾಶಿಗಳೂ ಭಯಂಕರವಾಗಿದ್ದುದಲ್ಲದೆ ನೂರಾರು ಕುರಿಕೋಣಗಳು ಹತವಾಗಿ ಬಿದ್ದಿದ್ದುವು. ಮನುಷ್ಯರ ತಲೆಬುರುಡೆಗಳ ಸಂಖ್ಯೆಗೆ ಪಾರವೇ ಇಲ್ಲ. ಇಂತಹ ಭೀಕರ ವಾದ ನೋಟದಿಂದ ವಿಜಯನ ಎದೆಯು, ಢಕ್ಕೆಂದರೂ, ಧೀರನಾದ ಅವನು ಮನಸ್ಸನ್ನು ಸ್ಥಿರಮಾಡಿಕೊಂಡು ಮುಂದೆ ನುಗ್ಗಿ ನಮಸ್ಕರಿಸಿ, ಅಗ್ನಿಶಿಖನು ಕೊಟ್ಟಿದ್ದ ಪತ್ರವನ್ನು ಅಲ್ಲಿದ್ದ ರಾಕ್ಷಸರ ಮೂಲಕ ವೀರಭೈರವನ ಕೈಗೆ ಕೊಟ್ಟು ತಾನು ಬಂದ ಕಾರ್‍ಯ ಗೌರವವನ್ನು ವಿಜ್ಞಾಪಿಸಿದನು. ಅದರಲ್ಲಿ ರಾಕ್ಷಸಲಿಪಿಯಿಂದ ಬರೆದಿದ್ದ ವಿಷಯವನ್ನು ವೀರ ಭೈರವನು ಓದಿಕೊಂಡು ಸಂತೋಷಪಟ್ಟು, ತಾನು, ಅದರಲ್ಲಿ ಬರೆದಿರುವ ಕಾರ್‍ಯವನ್ನು ಕೂಡಲೆ ನೆರವೇರಿಸುವಂತೆ ಪ್ರತ್ಯಕ್ಷವಾಗಿ ಹೇಳದೆ ಮತ್ತೊಂದು ಪತ್ರವನ್ನಾಗಿ ಬರೆದು, ಬಳಿಯಲ್ಲಿದ್ದ ರಕ್ತ ಮುಖನ ಕೈಗೆ ಕೊಟ್ಟನು. ರಕ್ತಮುಖನು ಅದನ್ನು ತನಗೆ ಬರೆದ ಪತ್ರವೆಂದರಿಯದೆ, ಈ ತರುಣನು ತಂದಿದ್ದ ಪತ್ರಕ್ಕೆ ಪ್ರತ್ಯುತ್ತರಪತ್ರವೆಂದು ತಿಳಿದು, ಎದ್ದು ಬಂದು ಅದನ್ನು ದೂರದಲ್ಲಿ ನಿಂತಿದ್ದ ವಿಜಯನ ಕೈಗೆ ಕೊಟ್ಟು ತಾನು ಕಾರ್‍ಯಾಂತರದಿಂದ ಹೊರಗೆ ಬಂದನು. ಅಗ್ನಿಯ ಮುಂದೆ ಇದ್ದ ವೀರಭೈರವನಿಗೆ ಇದು ಗೋಚರವಾಗಲಿಲ್ಲ. ಪತ್ರವನ್ನು ತೆಗೆದುಕೊಂಡು ವಿಜಯನು, ತಾನು ಇನ್ನು ಇಲ್ಲಿ ನಿಂತರೆ ಚಂದ್ರಲೇಖೆಯು ಹೇಳಿದ್ದಂತೆ ಅಪಾಯವೇನಾದರೂ ಸಂಭವಿಸೀತೆಂದು ಅಲ್ಲಿನ ದೃಶ್ಯದಿಂದ ಸಂದೇಹಪಟ್ಟು ಆ ಕೂಡಲೇ ಹೊರಡಲು ನಿಶ್ಚಯಿಸಿ, ಮುಂದೆ ಬಂದು ವೀರಭೈರವನಿಗೆ ಮತ್ತೆ ನಮಸ್ಕಾರ ಮಾಡಿ, ತನ್ನ ಪ್ರಯಾಣಕ್ಕೆ ಅಪ್ಪಣೆಯನ್ನು ಬೇಡಿದನು. “ನಮ್ಮ ರಕ್ತಮುಖನ ಜೊತೆಯಲ್ಲಿ ಹೋಗಿ ಅವನು ಹೇಳುವಂತೆ ಕೇಳು” ಎಂದು ಆಜ್ಞೆಯಾಯಿತು. ಅನಂತರ ಗವಿಯಿಂದ ಹೊರಗೆ ಬಂದಿದ್ದ ರಕ್ತಮುಖನನ್ನು ನೋಡಲು, ಆತನು, “ದಾನವೇಂದ್ರನು ಬರೆದ ಪ್ರತ್ಯುತ್ತರವನ್ನು ನಿನಗೆ ಕೊಟ್ಟಿರುವೆನಷ್ಟೆ! ಅದನ್ನು ನೀನು ಎಚ್ಚರಿಕೆಯಿಂದ ತೆಗೆದುಕೊಂಡು ಹೋಗಿ ಅಗ್ನಿಶಿಖ ರಾಕ್ಷಸೇಂದ್ರನಿಗೆ ಕೊಡಬೇಕು” ಎಂದು ಗರ್ಜಿಸಿ ಹೇಳಿದನು. ಅದನ್ನು ಕೇಳಿದ ಕೂಡಲೆ ಸದ್ಯಕ್ಕೆ ಬದುಕಿದೆನೆಂದು ವಿಜಯನು ಕುದುರೆಯನ್ನು ಹತ್ತಿ ಪ್ರಯಾಣ ಮಾಡಿದನು. ಅನಂತರ ರಕ್ತಮುಖನು ವೀರಭೈರವನ ಬಳಿಗೆ ಬಂದು ಪತ್ರವನ್ನು ಕೊಟ್ಟು ಕಳುಹಿಸಿದನೆಂದು ವಿಜ್ಞಾಪಿಸಿದನು. ಅದನ್ನು ಕೇಳಿದ ಕೂಡಲೇ ವೀರಭೈರವನ ಮುಖವು ಪ್ರಳಯಕಾಲ ಭೈರವನ ಮುಖದಂತಾಯಿತು. ಆಗ ಅವನು ಕಿಡಿಕಿಡಿಯಾಗಿ, “ಎಲವೋ ರಕ್ತಮುಖಾ, ಪತ್ರವನ್ನವನಿಗೇತಕ್ಕೆ ಕೊಟ್ಟೆ?” “ಅವನನ್ನು ಹಿಡಿದು, ದುರ್ಗಿಯ ಬಲಿಗಾಗಿ ನೆಲಮಾಳಿಗೆಯಲ್ಲಿ ಕೂಡಿರು” ಎಂದು ನಿನಗಲ್ಲವೇ ನಾನು ಪತ್ರವನ್ನು ಬರೆದುಕೊಟ್ಟುದು? ಅವನಿಗೆ ನನ್ನ ಮಾತು ಕೇಳಬಾರದೆಂದು ನಿನಗೆ ಪತ್ರದ ಮೂಲಕ ತಿಳಿಸಲು ಆ ರೀತಿ ಬರೆದು ಕೊಟ್ಟೆನು. ಛೇ! ಛೇ! ನೀನೆಂತಹ ಕೆಲಸಮಾಡಿದೆ! ಕೈಗೆ ಸುಲಭವಾಗಿ ಸಿಕ್ಕಿದ್ದ ಬಲಿಯನ್ನು ಬಿಟ್ಟು ಬಿಟ್ಟೆಯಲ್ಲಾ!” ಎಂದು ಕೈಕೈ ಹಿಸುಕಿಕೊಂಡು ಅಲ್ಲಿದ್ದ ರಾಕ್ಷಸರನ್ನು ನೋಡಿ, “ಎಲವೋ! ಓಡಿರಿ, ಬೇಗನೆ ಓಡಿರಿ, ಆ ಬಡಮಾನವನು ಇನ್ನೆಷ್ಟು ದೂರತಾನೆ ಹೋಗಿದ್ದಾನು! ಬೆನ್ನಟ್ಟಿ ಹೋಗಿ ಆ ನರಾಧಮನನ್ನು ಈಗಲೇ ಸೆಳೆದು ತನ್ನಿ, ಈ ಜನರಲ್ಲಿಯೆ ಬಿಡಿ, ನಾನಿವರನ್ನು ನೋಡಿಕೊಳ್ಳುವೆನು. ನೀವು ಮೊದಲು ಹೊರಡಿ” ಎಂದು ಕಾತುರನಾಗಿ ಗರ್ಜಿಸಿದನು. ಇದನ್ನು ಕೇಳಿದ ಕೂಡಲೇ ಆ ರಾಕ್ಷಸ ದೂತರು ತಾವು ಹಿಡಿದಿದ್ದ ಬಲಿಜನರನ್ನಲ್ಲಿಯೇ ಬಿಟ್ಟು ಓಡಿದರು. ರಕ್ತಮುಖನೂ ಓಡಿದನು. ವೀರಭೈರವನು ಕೈಗೆ ಸಿಕ್ಕಿದ್ದ ಬಲಿಯು ತಪ್ಪಿ ಹೋಯಿತಲ್ಲಾ! ಎಂದು ಆಗ್ರಹ ಕುತೂಹಲಗಳಿಂದ ತಾನು ಗವಿಯ ಬಾಗಿಲಿಗೆ ಬಂದು ಓಡುತ್ತಿದ್ದವರ ಮಾರ್ಗವನ್ನೇ ನೋಡುತ್ತ ನಿಂತನು. ಈ ವರೆಗೆ ವಿಜಯನು ಕುದುರೆಯ ಮೇಲೆ ವೇಗವಾಗಿ ಹೋಗುತ್ತಿದ್ದನು.

ಇತ್ತಲಾ ಗವಿಯಲ್ಲಿ ಬಲಿಗಾಗಿ ನಿಲ್ಲಿಸಲ್ಪಟ್ಟಿದ್ದ ತರುಣರು ಹೊರಗೆ ತಪ್ಪಿಸಿಕೊಂಡು ಹೋಗದಂತೆ ಭಯಂಕರಾಕಾರನಾದ ವೀರಭೈರವನು, ಗವಿಯ ಬಾಗಿಲಲ್ಲಿಯೇ ಕಾವಲಾಗಿ ನಿಂತಿದ್ದನಷ್ಟೆ! ಆಗ ಆ ಬಡಮಾನವರು ಪರಸ್ಪರ ಸಂಕೇತಗಳಿಂದ ಮುಖಗಳನ್ನು ನೋಡಿಕೊಂಡು ಮೆಲ್ಲನೆ ಒಟ್ಟಾಗಿ ಗವಿಯ ಬಾಗಿಲಿಗೆ ಬಂದರು. ವಿಜಯನ ಮತ್ತು ರಾಕ್ಷಸದೂತರ ಮಾರ್ಗವನ್ನೇ ನೋಡುತ್ತಿದ್ದ ವೀರಭೈರವನ ಗಮನವು ಗವಿಯಲ್ಲಿದ್ದ ಬಲಿಜನರ ಮೇಲೆ ಬೀಳಲಿಲ್ಲ. ಆಗ ಅವರೆಲ್ಲರೂ, ಹಿಂದು ಮುಂದಾಗಿ ಅಜಾಗರೂಕತೆಯಿಂದ ನಿಂತಿದ್ದ ಭೈರವನ ಹಿಂದೆ ಬಂದು ಫಕ್ಕನೆ ಅವನ ಭುಜಗಳನ್ನೂ ಕಾಲುಗಳನ್ನೂ ತಲೆಯನ್ನೂ ಹಿಡಿದು ಮರ್ದಿಸಲಾರಂಭಿಸಿದರು. ಸ್ವಭಾವ ಬಲಶಾಲಿಯಾದ ಅವನು ಅವರೊಡನೆ ಪ್ರಬಲವಾಗಿ ಹೋರಾಡಿ, ಮೈಮುರಿಯುವಂತೆ ಒದೆಗಳನ್ನು ತಿಂದು ಕಡೆಗೆ ಪ್ರಾಣವುಳಿದರೆ ಸಾಕೆಂದು, ಅವರಿಂದ ಬಿಡಿಸಿಕೊಂಡು ತನ್ನ ದೂತರು ಓಡುತ್ತಿದ್ದ ಮಾರ್ಗವನ್ನೇ ಅನುಸರಿಸಿ ತಾನೂ ವಿಜಯನನ್ನು ಬೆನ್ನಟ್ಟಿದನು. ಇತ್ತಲಾ ಎಂಟು ಮಂದಿಯೂ ಮೃತ್ಯುವಿನ ದವಡೆಗೆ ಸಿಕ್ಕಿ ತಪ್ಪಿ ಬಂದೆವೆಂದು ಸಂತೋಷದಿಂದ ತಮ್ಮ ಭಾಗದ ದೇವರಾಗಿ ಬಂದ ವಿಜಯನನ್ನು ಸ್ತೋತ್ರಮಾಡುತ್ತ ಓಡಿಹೋಗಿ ಪ್ರಾಣಗಳನ್ನು ಉಳಿಸಿಕೊಂಡರು.

ವಿಜಯನಾದರೋ ವಾಯುವೇಗದಿಂದ ಕುದುರೆಯಮೇಲೆ ಓಡುತ್ತಿದ್ದನು. ರಕ್ತಮುಖನೇ ಮೊದಲಾದ ರಾಕ್ಷಸರು ಕುದುರೆಗಿಂತಲೂ ವೇಗವಾಗಿ ಓಡುತ್ತ, ಕುದುರೆಗೆ ಕಲ್ಲುಗಳನ್ನು ಬೀರುತ್ತ ಬೆನ್ನಟ್ಟಿ ಬಹು ದೂರ ಹೋದರು. ಕಲ್ಲುಗಳು ಕಾಲುಗಳಿಗೆ ತಗುಲಿ ರಕ್ತ ಸುರಿಯುತ್ತಿ ದ್ದರೂ ಆ ಜಾತ್ಯಶ್ವವು ಸ್ವಲ್ಪವೂ ಶಕ್ತಿ ಕುಂದದೆ ಒಂದೇ ಸಮವಾದ ವೇಗದಿಂದ ಓಡುತ್ತಿತ್ತು. ಸ್ವಲ್ಪ ಹೊತ್ತಿನೊಳಗಾಗಿ ವೀರಭೈರವನೂ ಹಿಂದಣಿಂದ ಓಡಿಬಂದು ಈ ಗುಂಪನ್ನು ಸೇರಿದನು. ಇವರೆಲ್ಲರೂ ಕ್ಷಣಕ್ಷಣಕ್ಕೂ ಉಕ್ಕುವ ರೋಷಾವೇಶದಿಂದ ಓಡಿ ಕಟ್ಟಕಡೆಗೆ ವಿಜಯನ ಕುದುರೆಯನ್ನು ಅಡ್ಡಗಟ್ಟಿದರು. ವಿಜಯನು ಹೆದರದೆ ಕುದುರೆಯನ್ನು ಅವರ ಮೇಲೆ ಹಾರಿಸಿಕೊಂಡು ನಡೆದನು. ವಿಫಲರಾದ ಅವರ ರೋಷವು ಮತ್ತೆ ಮತ್ತೆ ಉಕ್ಕಿ ಬರುತ್ತಿದ್ದರೂ ವಿಜಯನನ್ನು ಹಿಡಿದು ನಿಲ್ಲಿಸಲು ಸಾಧ್ಯವಾಗಲಿಲ್ಲ. ಇದರಿಂದ ವೀರಭೈರವನು ಬಳಲಿ ಬೆಂಡಾಗಿ ಬೇಸತ್ತು ಕಡೆಗೆ ತನ್ನ ಮಂತ್ರ ಮಾಯಾಶಕ್ತಿಗಳನ್ನು ಪ್ರಯೋಗಿಸಲೇಬೇಕಾಗಿ ನಿರ್ಧರಿಸಿದನು. ತಕ್ಕ ಸಲಕರಣೆಗಳು ಯಾವುವೂ ತತ್ಕಾಲದಲ್ಲಿ ಬಳಿಯಲ್ಲಿರಲಿಲ್ಲ. ಆದರೂ ಮಾರ್ಗದಲ್ಲಿ ಬೆಳೆದಿದ್ದ ಮುಳ್ಳುಗಿಡವೊಂದನ್ನು ಕಿತ್ತು ಮಂತ್ರಿಸಿ ವಿಜಯನ ಕಡೆಗೆ ಎಸೆದನು. ಆ ಕೂಡಲೇ ಅವನ ಸುತ್ತಲೂ ಅಗಾಧವಾದ ಮುಳ್ಳುಗಿಡಗಳ ಪೊದೆಯು ಆವರಿಸಿ ಅವನನ್ನು ಮುಂದಕ್ಕೆ ಹೋಗದಂತೆ ಮಾಡಿತು. ವಿಜಯನು ದಿಕ್ಕು ತೋರದೆ ಸ್ವಲ್ಪ ನಿಲ್ಲುವಷ್ಟರಲ್ಲಿ ರಾಕ್ಷಸರು ಸಮೀಪಗತರಾದರು, ಆಗ ವಿಜಯನು ಸ್ವಲ್ಪ ಭಸ್ಮವನ್ನು ತೆಗೆದು ಮಂತ್ರಿಸಿ ಸುತ್ತಲೂ ಎರಚಿದನು. ಆ ಕ್ಷಣವೇ ಅದ್ಭುತವಾದ ಬೆಂಕಿಯು ಹುಟ್ಟಿ ಆ ಮುಳ್ಳು ಪೊದೆಗಳೆಲ್ಲವನ್ನೂ ಸುಟ್ಟು ಭಸ್ಮ ಮಾಡಿತು. ಈವರೆಗೆ ವಿಜಯನ ಸಮೀಪಕ್ಕೆ ಬರುತ್ತಿದ್ದ ರಾಕ್ಷಸರಲ್ಲಿ ಇಬ್ಬರು ಆ ಅಗ್ನಿಗೆ ಸಿಕ್ಕಿ ಭಸ್ಮವಾದರು. ಅನಂತರ ಕಲಶದ ನೀರನ್ನು ತೆಗೆದು ಒಂದು ಹನಿಯಷ್ಟನ್ನು ಮಂತ್ರಿಸಿ ಎರೆಚಿದ ಕೂಡಲೇ ಅದು ನೀರಿನ ಪ್ರವಾಹವಾಗಿ ಸುತ್ತಲೂ ಇದ್ದ ಬೆಂಕಿಯನ್ನಾರಿಸಿತು. ಆಗ ವಿಜಯನು ರತ್ನ ದ್ವೀಪದ ಮಾರ್ಗವನ್ನನುಸರಿಸಿ ವೇಗದಿಂದ ಪ್ರಯಾಣ ಮಾಡಿದನು. ಭೈರವಾದಿ ರಾಕ್ಷಸರು ತಮ್ಮ ಮಾಯಾಮಂತ್ರಗಳೂ ವಿಫಲವಾದುದನ್ನು ಕಂಡು ವಿಜಯನ ಮಂತ್ರಶಕ್ತಿಗೆ ಆಶ್ಚರ್ಯಪಟ್ಟರೂ ಅವನನ್ನು ಹೇಗಾದರೂ ಹಿಡಿದು ಬಲಿಯಿಕ್ಕಬೇಕೆಂದು ನಿರ್ಧರಮಾಡಿಕೊಂಡು ಮತ್ತೆ ಅವನನ್ನು ಬಿಡದೆ ಹಿಂಬಾಲಿಸುತ್ತಲೇ ಹೋದರು. ಕುದುರೆಯ ಕಾಲಿಗೆ ರಾಕ್ಷಸರ ಕಲ್ಲುಗಳ ಪೆಟ್ಟುಗಳು ಬಲವಾದುವು. ಇನ್ನೂ ಇವರ ಹಾವಳಿ ತಪ್ಪಲಿಲ್ಲವೆಂದು ವಿಜಯನು ಮತ್ತೆ ತನ್ನ ಕಲಶವನ್ನು ತೆಗೆದು ಒಂದು ಹಿಡಿಯಷ್ಟು ಜಲವನ್ನು ಮಂತ್ರಿಸಿ ಅವರ ಕಡೆಗೆ ಚೆಲ್ಲಿದನು. ಆ ಕೂಡಲೇ ಅದು ಸಮುದ್ರದಂತೆ ರಾಕ್ಷಸರ ಮುಂದೆ ನಿಂತಿತು. ಮಾಯಾ ವಿದ್ಯಾವಿಚಕ್ಷಣರಾದ ವೀರಭೈರವಾದಿಗಳಿಗೆ ಇವನ ಮಂತ್ರಶಕ್ತಿಯು ಮತ್ತಷ್ಟು ಕ್ರೋಧಾಸೂಯೆಗಳನ್ನೂ ಹಠವನ್ನೂ ಉಕ್ಕಿಸಿತು. ಅವರೆಲ್ಲರೂ ಆ ನೀರಿನಲ್ಲಿಯೇ ವೇಗವಾಗಿ ಈಜುತ್ತ ಸ್ವಲ್ಪ ದೂರ ಬಂದರು. ಅವನನ್ನು ಹಿಡಿಯಲು ಮಾತ್ರ ಸಾಧ್ಯವಾಗಲಿಲ್ಲ. ಕಡೆಗೆ ಆ ನೀರಿನಲ್ಲಿದ್ದ ಮೊಸಳೆಗಳನ್ನು ಹಿಡಿದು ತಮ್ಮ ಮಂತ್ರಶಕ್ತಿಯಿಂದ ಅವುಗಳನ್ನು ತಾವು ಹೇಳಿದಂತೆ ಕೇಳುವ ಹಾಗೆ ಮಾಡಿಕೊಂಡು ಎಲ್ಲರೂ ಅವುಗಳ ಮೇಲೆ ಕುಳಿತು ಮೊಸಳೆಗಳನ್ನು ವೇಗವಾಗಿ ಓಡಿಸುತ್ತ ಬಂದು ಸಮುದ್ರ ತೀರವನ್ನು ಸೇರಿದರು.

ಈವರೆಗೆ ಆಯಾಸಪಟ್ಟಿದ್ದ ವಿಜಯನು ಕುದುರೆಯ ವೇಗವನ್ನು ಕಡಿಮೆ ಮಾಡಿ, ಸ್ವಲ್ಪ ವಿರಾಮವು ಸಿಕ್ಕಿತೆಂದು ಒಂದು ಮರದ ಕೆಳಗೆ ಮಿಶ್ರಮಿಸಿಕೊಳ್ಳಬೇಕೆಂದಿರುವಷ್ಟರಲ್ಲಿ ರಾಕ್ಷಸರ ಗುಂಪು ಘೋರಾರ್ಭಟದಿಂದ ಸಮುದ್ರವನ್ನು ದಾಟಿ ಬರುತ್ತಿರುವುದು ಗೋಚರವಾಯಿತು. ಅವರನ್ನು ಮತ್ತೆ ನೋಡಿದೊಡನೆಯೇ ಅವನಿಗೆ ಅತ್ಯಾಶ್ಚರ್ಯವೂ ಭಯವೂ ಉಂಟಾದರೂ ಬೆದರಿದ್ದ ಮನವನ್ನು ಸ್ಥಿರಪಡಿಸಿಕೊಂಡು, ಎದೆಗುಂದದೆ ಕುದುರೆಯನ್ನು ಮತ್ತೆ ವೇಗವಾಗಿ ಓಡಿಸುತ್ತ ತನ್ನಲ್ಲಿದ್ದ ಕಲ್ಲುಗಳಲ್ಲಿ ಒಂದನ್ನು ತೆಗೆದು ಮಂತ್ರಿಸಿ ರಾಕ್ಷಸರ ಕಡೆಗೆ ಬೀಸಿ ಎಸೆದನು. ಆ ಕ್ಷಣವೇ ಅದು ದೊಡ್ಡ ಬೆಟ್ಟವಾಗಿ ರಾಕ್ಷಸರಿಗೆ ಅಡ್ಡಲಾಗಿ ನಿಂತಿತು. ಭೈರವನೂ ರಾಕ್ಷಸರೂ ಸಹ ಮಹಾಕ್ರ್‍ಓಧದಿಂದ ಅದನ್ನೂ ಹತ್ತಿ ಇಳಿಯುತ್ತ ಬಂದರು. ಮುಖ್ಯವಾಗಿ ನಾನಾ ಯಕ್ಷಣಿ ಮಂತ್ರ ಮಾಯೆಗಳನ್ನು ಬಲ್ಲ, ಇವನನ್ನು ಹಿಡಿದು ವಧಿಸದೆ ಬಿಟ್ಟರೆ ಮುಂದೆ ಇವನಿಂದ ತನ್ನ ತಮ್ಮನಾದ ಅಗ್ನಿಶಿಖನಿಗೂ ತನಗೂ ಅಪಾಯವೇ ಸಂಭವಿಸುವುದೆಂಬ ಸಂದೇಹವು ಪ್ರಬಲವಾದುದರಿಂದ, ಎಷ್ಟು ಕಷ್ಟ ಪಟ್ಟಾದರೂ ಅವನನ್ನು ಬಲಿದೆಗೆದುಕೊಳ್ಳಬೇಕೆಂದು ವೀರಭೈರವನು ಮನಸ್ಸಿನಲ್ಲಿ ಸ್ಥಿರಸಂಕಲ್ಪ ಮಾಡಿಕೊಂಡನು. ವಿಜಯನು ವಾಯುವೇಗದ ತುರಗದ ಮೇಲೆ ಓಡುತ್ತ ಹಿಂದಿರುಗಿ ನೋಡುವಲ್ಲಿ ಈ ಪಿಶಾಚ ಸಂಘವು ಬೆನ್ನಟ್ಟಿ ಬರುತ್ತಲೇ ಇತ್ತು. ಅವರು ಆ ಬೆಟ್ಟವನ್ನು ಇಳಿದು ಬರುವಷ್ಟರಲ್ಲಿ ಏಜಯನು ದಟ್ಟವಾದ ಒಂದು ಅರಣ್ಯಕ್ಕೆ ಬಂದು ಅವರ ಕಣ್ಣಿಗೆ ಮರೆಯಾದನು. ಇಷ್ಟು ಹೊತ್ತಿಗೆ ಅವನಿಗೆ ಆಯಾಸವೂ ಮಿತಿಮೀರಿತು. ವಿಶ್ರಮಿಸಿಕೊಳ್ಳಬೇಕೆಂದು ಕುದುರೆಯಿಂದಿಳಿದು ಒಂದು ಮರದ ಕೆಳಗೆ ಸ್ವಲ್ಪ ಕುಳಿತುಕೊಳ್ಳುವಷ್ಟರಲ್ಲಿ ಮೃತ್ಯು ದೇವತೆಗಳಂತೆ ರಾಕ್ಷಸರು ಅದ್ಭುತಾರ್ಭಟದಿಂದ ಸಾಮೀಪಗತರಾದರು. ಇನ್ನು ಬೇರೆ ಉಪಾಯವಿಲ್ಲವೆಂದಾಲೋಚಿಸಿ ಆ ಕ್ಷಣವೇ ಮತ್ತೆ ಕುದುರೆಯ ಮೇಲೆ ಹಾರಿ ಕುಳಿತು ತನ್ನ ಚೀಲದಲ್ಲಿದ್ದ ಬೂದಿಯಲ್ಲಿ ಒಂದು ಹಿಡಿಯಷ್ಟನ್ನು ತೆಗೆದು ಚಂದ್ರಲೇಖೆಯು ಹೇಳಿಕೊಟ್ಟಿದ್ದ ಆಗ್ನೇಯಾಸ್ತ್ರ ಮಂತ್ರದಿಂದಭಿಮಂತ್ರಿಸಿ ಅವರ ಕಡೆಗೆರಚಿದನು, ಆ ಕೂಡಲೇ ಆ ಅರಣ್ಯವೆಲ್ಲಕ್ಕೂ ಬೆಂಕಿ ಹತ್ತಿ ಪ್ರಳಯಾಗ್ನಿಯಂತೆ ಉರಿಯುತ್ತ ರಾಕ್ಷಸರ ಗುಂಪಿಗೆ ಅಡ್ಡವಾಯಿತು. ಭೈರವನು ಅಗ್ನಿ ಸ್ತಂಭನವನ್ನು ಬಲ್ಲವನಾದರೂ ತಕ್ಕ ಮಾಯಾಮಂತ್ರ ವಸ್ತುಗಳ ಸಹಾಯವಿಲ್ಲದೆ ಏನನ್ನೂ ಮಾಡಲಾರದೆ ಹೋದನು. ಇದರಿಂದ ವಿಜಯನನ್ನು ಹಿಡಿಯುವುದು ಅಸಾಧ್ಯವೆಂದೇ ಅವನ ಮನಸ್ಸಿಗೆ ತೋರಿತು. ಆದಕಾರಣ ಅಗ್ನಿಜ್ವಾಲೆಯನ್ನು ನಿವಾರಿಸಿ ಕೊಳ್ಳಲು ಸಾಧ್ಯವಿಲ್ಲದೆ ಕೈ ಕೈಗಳನ್ನು ಹಿಸಿಕಿಕೊಳ್ಳುತ್ತ ರಾಕ್ಷಸ ದೂತರೊಡನೆ ಜೋಲುಮುಖವನ್ನು ಹಾಕಿಕೊಂಡು ಹಿಂದಿರುಗಬೇಕಾಯಿತು. ಇಷ್ಟು ಹೊತ್ತಿಗೆ ವಿಜಯನು ಬಹುದೂರ ಪ್ರಯಾಣಮಾಡಿ ಸಂಧ್ಯಾ ಸಮಯಕ್ಕೆ ರತ್ನ ದ್ವೀಪದ ಎಲ್ಲೆಯನ್ನು ಸೇರಿದನು. ಕುದುರೆಯೂ ತಾನೂ ಬಹಳ ದಣಿದಿದ್ದ ಕಾರಣ ಸ್ವಲ್ಪ ವೇಗವನ್ನು ಕಡಿಮೆಮಾಡಿ ರತ್ನಾವತೀ ಪ್ರಾಂತವನ್ನು ಸೇರಲು, ಸೂರ್‍ಯನು ಅಸ್ತಂಗತನಾದನು. ವಿಜಯನು ಕತ್ತಲಾದಮೇಲೆ ನಗರವನ್ನು ಪ್ರವೇಶಿಸಿ ಗುಟ್ಟಾಗಿ ಸರೋಜಿನಿಯ ಮನೆಗೆ ಹೋಗಿ, ಆಕೆಗೆ ತನ್ನ ವೃತ್ತಾಂತವೆಲ್ಲವನ್ನೂ ತಿಳಿಸಿ ಆ ರಾತ್ರಿ ಅಲ್ಲಿ ವಿಶ್ರಮಿಸಿಕೊಂಡು ಮಾರ್ಗಾಯಾಸವನ್ನು ಪರಿಹರಿಸಿಕೊಂಡನು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಾಗುವುದೆಂದರೆ ಇದೇ ಇರಬೇಕು
Next post ಹಪ್ಪಳದ ಕತೆ

ಸಣ್ಣ ಕತೆ

 • ಇರುವುದೆಲ್ಲವ ಬಿಟ್ಟು

  ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

 • ಒಂಟಿ ತೆಪ್ಪ

  ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

 • ಆನುಗೋಲು

  ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

 • ಎರಡು ಪರಿವಾರಗಳು

  ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

 • ಸಾವು

  ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…