ಒಂದೂರಿನಲ್ಲಿ ಒಬ್ಬ ಗೃಹಿಣಿಯಿದ್ದಳು. ಆಕೆಗೆ ಒಂದು ಕಥೆ ಗೊತ್ತಿತ್ತು.  ಒಂದು ಹಾಡು ಬರುತ್ತಿತ್ತು. ಆದರೆ ಅವಳು ತನಗೆ ಗೊತ್ತಿದ್ದ ಕಥೆಯನ್ನು
ಯಾರಮುಂದೆಯೂ ಹೇಳಿದವಳಲ್ಲ. ತಾನು ಕಲಿತ ಹಾಡನ್ನು ಯಾರಮುಂದೆಯೂ ಹಾಡಿದವಳಲ್ಲ.

ಆಕೆಯ ಮನಸ್ಸಿನಲ್ಲಿ ಸೆರೆಸಿಕ್ಕಿ ಆ ಕಥೆ ಆ ಹಾಡು ಅಲ್ಲಿಂದ ಕಾಲ್ತೆಗೆದು ಓಡಿ ಹೋಗಬೇಕೆಂದು ಮಾಡಿದವು. ಅಲ್ಲಿ ನಿಲ್ಲುವುದೇ ಬೇಡವಾಗಿತ್ತು ಅವುಗಳಿಗೆ. ಯಾವ ಬಗೆಯಿಂದ ಹೊರಬೀಳಬೇಕು – ಎಂದು ಯೋಚಿಸಿ ಕಡೆಗೆ ಕಥೆಯು ಹೊರಬಿದ್ದು ಅಂಗಳದಲ್ಲಿ ಎರಡು ಬೂಟುಗಳಾಗಿ ಕುಳಿತಿತು. ಹಾಡು ಒಂದು ಕೋಟು ಆಗಿ ಗೂಟಿಗೆ ನೇತು ಬಿದ್ದಿತು.

ಆ ಗೃಹಿಣಿಯ ಪತಿಯು ಮನೆಗೆ ಬಂದಾಗ ಅಂಗಳದೊಳಗಿನ ಬೂಟುಗಳನ್ನೂ ಗೂಟಕ್ಕೆ ತೂಗಬಿದ್ದ ಕೋಟನ್ನೂ ಕಂಡು ಹೆಂಡತಿಗೆ ಕೇಳಿದನು – “ಯಾರು ಬಂದಿದ್ದಾರೆ ಮನೆಗೆ?”

“ಯಾರೂ ಬಂದಿಲ್ಲವಲ್ಲ!” ಎಂದಳು ಹೆಂಡತಿ.

“ಹಾಗಾದರೆ ಈ ಬೂಟು ಈ ಕೋಟು ಯಾರವು?” ಪತಿಯ ಪ್ರಶ್ನೆ.

“ನನಗೂ ತಿಳಿಯದು” ಎಂದು ಸತಿ ಹೇಳಿದ ಉತ್ತರದಿಂದ ಗಂಡನಿಗೆ ಸಮಾಧಾನವೆನಿಸಲಿಲ್ಲ. ಸಂಶಯವೇ ಹುಟ್ಟಿಕೊಂಡಿತು. ಅದರಿಂದ ಅವರ ಮಾತುಕತೆಗಳಲ್ಲಿ ವಿರಸವು ಮೊಳೆಯಿತು. ವಿರಸವು ಕದನವಾಗಿ ಪರಿಣಮಿಸಿತು.  ಗಂಡನು ಹೆಂಡತಿಯ ಮೇಲೆ ಮುನಿಸಾಗಿ, ತನ್ನ ಕಂಬಳಿಯನ್ನು ತೆಗೆದುಕೊಂಡವನೇ ಹೊರಬಿದ್ದು ಹನುಮಂತ ದೇವರ ಗುಡಿಗೆ ಮಲಗಲು ಹೋದನು.

ಗೃಹಿಣಿಗೇನೂ ತಿಳಿಯಲಿಲ್ಲ. ಮನೆಯಲ್ಲಿ ಒಬ್ಬಳೇ ಅಡ್ಡಾದಳು. ನಿದ್ರೆಯೇ ಬರಲೊಲ್ಲದು. ಅದೇ ಚಿಂತೆ; ಅದೇ ವಿಚಾರ, ತಿರುತಿರುಗಿ ಬಂದು ನಿಲ್ಲುವದು. ಆ ಬೂಟು ಆ ಕೋಟು ಯಾರವು ? ಬಹಳ ಹೊತ್ತಿನ ಮೇಲೆ ಬೇಸತ್ತು ದೀಪವನ್ನಾರಿಸಿ ಮಲಗಿಕೊಂಡಳು.

ಆ ಊರೊಳಗಿನ ಹಣತಿಗಳೆಲ್ಲ ರಾತ್ರಿಯನ್ನು ಕಳೆಯಲು ಹನುಮಂತ ದೇವರ ಗುಡಿಗೆ ತೆರಳುವುದು ವಾಡಿಕೆಯಾಗಿತ್ತು. ಎಲ್ಲ ಮನೆಗಳಿಂದ ಹಣತಿಗಳು ಬಂದು ಬಂದು ನೆರೆದವು. ಬಹಳ ತಡಮಾಡಿ ಒಂದು ಹಣತಿ ಬಂದಿತು.  ಅದಕ್ಕೆ ಉಳಿದ ಹಣತಿಗಳೆಲ್ಲ ಕೇಳಿದವು – “ಇಷ್ಟೇಕೆ ತಡ ಬರಲಿಕ್ಕೆ ?”

“ನಮ್ಮ ಮನೆಯಲ್ಲಿ ಗಂಡಹೆಂಡರು ಜಗಳಾಡುತ್ತ ಕುಳಿತಿದ್ದರಿಂದ ರಾತ್ರಿಯಾಯಿತು” ಎಂದಿತು ಆ ಹಣತಿ.

“ಏಕೆ ಜಗಳಾಡಿದರು ಆ ಗಂಡಹೆಂಡಿರು ?”

“ಗಂಡನಿಲ್ಲದಾಗ ಅವರ ಮನೆಯಂಗಳಕ್ಕೆ ಜೋಡು ಬೂಟುಗಳು ಪಡಸಾಲೆಯ ಗೂಟಿಗೆ ಒಂದು ಕೋಟು ಬಂದಿದ್ದವು. ಅವು ಯಾರವು ಎಂದು ಗಂಡ ಕೇಳಿದರೆ, ನನಗೆ ಗೊತ್ತಿಲ್ಲವೆಂದು ಹೆಂಡತಿ ಹೇಳಿದಳು. ಅದಕ್ಕಾಗಿ ಜಗಳಾಡಿದರು” ಎಂದಿತು ಹಣತಿ.

“ಹಾಗಾದರೆ ಆ ಬೂಟು ಕೋಟು ಎಲ್ಲಿಂದ ಬಂದವು ?”

“ನಮ್ಮ ಮನೆಯೊಡತಿಗೆ ಒಂದು ಕಥೆ, ಒಂದು ಹಾಡು ಗೊತ್ತಿದೆ. ಎಷ್ಟು ಚಾಲುವರೆದರೂ ತಾನು ಕಲಿತ ಕಥೆ ಹೇಳಿದವಳಲ್ಲ.  ತನ್ನ ಹಾಡು ಅಂದು ತೋರಿಸಿದವಳಲ್ಲ. ಸೆರೆಸಿಕ್ಕ ಆ ಕಥೆ ಹಾಡುಗಳು ಬೂಟುಕೋಟುಗಳಾಗಿ ಹೊರಬಿದ್ದಿವೆ. ಅದು ಆಕೆಗೆ ಗೊತ್ತಾಗಿಲ್ಲ.”

ಆ ಹಣತಿಯ ವಿವರಣೆಯನ್ನೆಲ್ಲ ಕಂಬಳಿ ಮುಸುಕಿನಲ್ಲಿಯೇ ಕೇಳಿದ ಆ ಗಂಡನ ಸಂಶಯವೆಲ್ಲ ನಿವಾರಣೆ ಆಯ್ತು.  ನಿಶ್ಚಿಂತೆಯಿಂದ ಮಲಗಿ ನಿದ್ದೆಮಾಡಿ ಮುಂಜಾನೆ ಮನೆಗೆ ಹೋದನು. ಕಥೆ ಹಾಡಿನ ಸುದ್ದಿ ತೆಗೆದು ಹೆಂಡತಿಗೆ ಮಾತಾಡಿಸಿ ನೋಡಿದನು. ಆದರೆ ಆಕೆಗೆ ಬರುತ್ತಿದ್ದ ಕಥೆ ಹಾಡು ಎರಡೂ ಮರೆತುಹೋದವೆಂದು ತಿಳಿಯಿತು.
*****

ಪುಸ್ತಕ: ಉತ್ತರ ಕರ್ನಾಟಕದ ಜನಪದ ಕಥೆಗಳು

ಸಿಂಪಿ ಲಿಂಗಣ್ಣ
Latest posts by ಸಿಂಪಿ ಲಿಂಗಣ್ಣ (see all)