ಉಕ್ಕರಿಸಿದೆ
ಹಿಟ್ಟು
ಮಿದುವಾಯಿತು
ಚೆನ್ನಾಗಿ ನಾದು
ಲಟ್ಟಿಸಿದೆ
ಹಪ್ಪಳವಾಯಿತು
ಲಟ್ಟಿಸಿದಂತೆ
ದಿಟ್ಟಿಸುತ
ತನಗೆ ತಾನೆ ಎಂಬಂತೆ
ಎಲ್ಲಿಂದ ಬಂದೆ?
ಎಂದು ಹಪ್ಪಳವೆ ಕೇಳಿತು
ಬೀಜ, ಸಸಿ, ತೆನೆ
ಕಾಳು, ಬೇಳೆ
ಬೆವರು ಹಸಿವು
ನೀರು ನೆಲ ಭೂಮಂಡಲ
ಉಂಡೆ ಉಂಡೆಯಾಗಿ
ಹಪ್ಪಳವೆ ತಾನಾಗಿ
ಕತೆ ಸಾಗಿತು
ಸೂರ್‍ಯ ಬೆಳಕು ಹಾಯಿಸಿ
ಹಪ್ಪಳವನ್ನೂ ನನ್ನನ್ನೂ
ಹದವಾಗಿ ಒಣಗಿಸಿದ
ಮಾತಾಡದೆ ಮುನ್ನಡೆದ
ಕಣ್ಣೆದುರೆ ಕರಗಿದ.
*****