ಮುಂಬೆಳಗ ಮಂಜಿಗೆ ತೆರೆದ
ಪುಟ್ಟ ಕಣ್ಣುಗಳು ರಣ ಮಧ್ಯಾಹ್ನದ ಝಳಕ್ಕೆ
ಕರಗಲಿಲ್ಲವೆ?
ಮಾನವನ ಕಣ್ಣುಗಳಿಗೆ ಹೆಚ್ಚು
ಬೆಳಕು ತಾಳುವ ಶಕ್ತಿಯಿಲ್ಲ ಎಂದೆ?
ಕತ್ತಲೆಯಿಂದ ಬಂದೆ
ವಾಸ್ತವತೆಗೆ
ಅದ್ಭುತದಿಂದ ಸಾಮಾನ್ಯಕ್ಕೆ
ಸೌಂದರ್ಯದಿಂದ ಆಕಾರಕ್ಕೆ
ತುಟಿಗೆ ತುಟಿ ಸೇರಿಸಿ ಬಂದ ವಾಸನೆಯಲ್ಲಿ
ರಹಸ್ಯದ ಗರ್ಭಸ್ರಾವ!
ತಾಯ ಮೊಲೆ ಹಾಲಿನಲಿ ಫ್ರಾಯ್ಡನ ಜೀವ!
ನನ್ನ ಒಂದಿಂಚು ಜೀವನದ ನಿರರ್ಥಕೆತೆಯನ್ನು
ಜಗತ್ತಿನ ಘೋರ ನಿರರ್ಥಕತೆಗೆ ಸೇರಿಸಿ
ಸೊನ್ನೆಗೆ ಸೊನ್ನೆ ಕೂಡಿಸುವುದೆಂದು ಬಲ್ಲೆ.
ಕೆಲವೊಮ್ಮೆ ಮೈಜಾಡಿಸಿ ಕೇಳುತ್ತೇನೆ.
ಮರೆತಿರುವೆನೋ ಅಲ್ಲ
ಅರಿತಿರುವೆನೋ
ಇರುವೆನೋ?
*****