ವಿಧವೆಯೂ ಮತ್ತು ಘಟಶ್ರಾದ್ಧವೆಂಬ ಸಂಸ್ಕಾರವೂ

ವಿಧವೆಯೂ ಮತ್ತು ಘಟಶ್ರಾದ್ಧವೆಂಬ ಸಂಸ್ಕಾರವೂ

ಫೆಬ್ರುವರಿ ತಿಂಗಳ ಮಯೂರ ಪತ್ರಿಕೆಯಲ್ಲಿ ನಮ್ಮ ಉತ್ತರ ಕನ್ನಡದ ಹೆಮ್ಮೆ ಖ್ಯಾತ ಕಥೆಗಾರ ಶ್ರೀಧರ ಬಳಿಗಾರರು ನನ್ನ ಕಥಾ ಪ್ರಸಂಗ ಎಂಬ ಸ್ವ ಅನುಭವವನ್ನು ದಾಖಲಿಸಿದ್ದರು. ವಾಸ್ತವ ಮತ್ತು ಕಲ್ಪನೆಗಳ ನಡುವಿನ ವಿಚಿತ್ರವಾದ ಮನೋವ್ಯಾಪಾರದ ಕಣದಲ್ಲಿ ಅರೆಪ್ರಜ್ಞಾವಸ್ಥೆಯಲ್ಲಿ ಹುಟ್ಟುವ ಕಥೆ, ಆ ಸಂದರ್‍ಭ ಇತ್ಯಾದಿಯಾದಿ ಅವರ ರಸವತ್ತಾದ ಸಾರಪೂರ್‍ಣ ನಿರೂಪಣೆಯ ಜೊತೆಯಲ್ಲಿಯೇ ದೈನಂದಿನ ಬದುಕಿನ ಸಂಗತಿಗಳು ಅನುಭವಗಳು ಹೇಗೆ ಕಥಾ ಸ್ವರೂಪ ಪಡೆಯಬಲ್ಲವು ಎಂಬುದನ್ನು ವಿವರಿಸುತ್ತಾ ಅನಂತಮೂರ್‍ತಿಯವರ ಘಟಶ್ರಾದ್ಧದ ಕಥೆಯ ಉಲ್ಲೇಖಿಸಿ ತಮ್ಮ ಮನೆಯ ವಠಾರದಲ್ಲಿಯೇ ಇದ್ದ ವಿಧವೆಯೊಬ್ಬರ ಕುರಿತು ಉಲ್ಲೇಖಿಸಿದ್ದರು. ಆಕೆ ಘಟಶ್ರಾದ್ಧ ಮಾಡಿಸಿಕೊಂಡ ಬಗ್ಗೆ ಬರೆದಿದ್ದರು. ಆ ಸಂಸ್ಕಾರ ನನ್ನಲ್ಲಿ ಹಲವು ಪ್ರಶ್ನೆಗಳ ಮೂಡಿಸಿತ್ತು. ಘಟಶ್ರಾದ್ಧ ಈ ಶಬ್ದ ಕೇಳಿದ್ದೇನಾದರೂ ಈ ಬಗ್ಗೆ ಹೆಚ್ಚಿಗೆ ಮಾಹಿತಿ ಇರಲಿಲ್ಲ. ಶ್ರಾದ್ಧ ಸಂಪ್ರದಾಯದ ಸಹ ಸಂಪ್ರದಾಯವಿರಬಹುದೆಂದು ಕೊಂಡಿದ್ದೆ. ಅದರ ಕುರಿತು ಹೆಚ್ಚು ಕೆದಕುತ್ತಾ ಹೋದಂತೆ ಇದೊಂದು ಹಿಂದೂ ಸಂಪ್ರದಾಯವಾಗಿದ್ದು ಹೆಚ್ಚಾಗಿ ಬ್ರಾಹ್ಮಣ ಸಮುದಾಯದಲ್ಲಿ ಮಕ್ಕಳಿಲ್ಲದ ದಂಪತಿಗಳು ತಮ್ಮ ಜೀವಿತಾವಧಿಯಲ್ಲಿಯೇ ತಾನು ಬದುಕಿರುವಾಗಲೇ ತನ್ನ ಸಾವಿನ ನಂತರದ ಶ್ರಾದ್ಧ ಕರ್‍ಮಗಳ ಮಾಡಿಕೊಳ್ಳತಕ್ಕ ಒಂದು ಅಮಾನವೀಯ ತಿಥಿ ಕರ್‍ಮ ಇದೆಂದು ತಿಳಿದಾಗ ವಿಚಿತ್ರವೆನಿಸಿತು. ವ್ಯಕ್ತಿ ಬದುಕಿರುವಾಗಲೇ ತನ್ನ ಜೊತೆಗಿನ ಲೋಕದ ಭಾಂದವ್ಯಗಳ ತೊರೆಯುವುದು ಎಷ್ಟು ಸಮಂಜಸ. ಈ ಸಂಪ್ರದಾಯ ಎಂಬ ಕಪಿಮುಷ್ಟಿಯಲ್ಲಿ ಶತಶತಮಾನಗಳ ಪುಟಗಳಲ್ಲಿ ಎಷ್ಟೊಂದು ಜೀವಗಳು ನವೆದು ಹೋಗಿವೆಯೋ?

ಆದರೆ ಹಿಂದೆ ಈ ಸಂಪ್ರದಾಯದಿಂದ ದೌರ್‍ಜನ್ಯಕ್ಕೆ ಮಾನಸಿಕ ಕೀಳಿರಿಮೆಗೆ ಗಂಡಿಗಿಂತ ಹೆಣ್ಣು ಒಳಗಾದ ಸಂದರ್‍ಭಗಳೇ ಅಧಿಕ. ಯಾಕೆಂದರೆ ಆ ಕಾಲಕ್ಕೆಲ್ಲ ಗಂಡು ಪತ್ನಿಯಿಂದ ಪುತ್ರ ಸಂತಾನ ಸಿಗದ ಪಕ್ಷದಲ್ಲಿ ಇನ್ನೊಂದು ವಿವಾಹವಾಗುವ ಅವಕಾಶವಿದ್ದು, ಆತನಿಗೆ ಎಲ್ಲ ರೀತಿಯಲ್ಲೂ ಸಾಮಾಜಿಕ ಭದ್ರತೆ ಇತ್ತು. ಅಪುತ್ರಸ್ಯ ಗತಿರ್‍ನಾಸ್ತಿ ಎಂಬಂತೆ ಪುತ್ರ ಸಂತಾನ ಪಡೆವವರೆಗೂ ಮರುವಿವಾಹ ಮಾಡಿಕೊಂಡ ಅನೇಕ ಉದಾಹರಣೆಗಳು ಸಿಗುತ್ತವೆ. ಆಕಸ್ಮಾತ್ ಪತ್ನಿ ಮರಣ ಹೊಂದಿದರೆ ಎಲ್ಲ ಧಾರ್‍ಮಿಕ ವಿಧಿವಿಧಾನಗಳ ಪೂರೈಸಿ ಪುರುಷ ಕೆಲವೇ ದಿನಗಳಲ್ಲಿ ಮರುವಿವಾಹವಾಗುತ್ತಿದ್ದ. ಆದರೆ ಈ ಎರಡೂ ಸೌಲಭ್ಯಗಳು ಹೆಣ್ಣಿಗಿರಲಿಲ್ಲ. ಪತಿ ಮರಣಿಸಿದರೆ ಆಕೆಗಿದ್ದ ಪರ್‍ಯಾಯ ವ್ಯವಸ್ಥೆಗಳೆಂದರೆ ಆತನ ಚಿತೆಯೊಂದಿಗೆ ಏರಿ ಸಹಗಮನ ಮಾಡಿಕೊಳ್ಳುವುದು. ಇಲ್ಲದಿರೆ ಕೇಶಮುಂಡನ ಮಾಡಿಕೊಂಡು ಧರ್‍ಮನಿಬಂಧನೆಗೆಗಳಿಗೆ ತಲೆಬಾಗಿ ಬದುಕುವುದು. ಘಟಶ್ರಾದ್ಧದಂತಹ ಸಂಸ್ಕಾರಗಳನ್ನು ಮಾಡಿಕೊಂಡು ಶುಭಕಾರ್‍ಯಗಳಲ್ಲಿ ಭಾಗವಹಿಸಲಾಗದೇ ಇದ್ದು ಇಲ್ಲದಂತೆ ಜೀವಿಸುವುದು.

ಶಾಸ್ತ್ರ ಪಾರಂಗತ ವೈದಿಕ ಆಚರಣೆಗಳು ಮೇಲ್ನೋಟಕ್ಕೆ ಪ್ರತಿಯೊಂದು ವಿಚಾರಗಳಿಗೂ ತಮ್ಮದೇ ಆದ ಸಮರ್‍ಥನೆಯವನ್ನು ನೀಡಬಲ್ಲಷ್ಟು ಸಶಕ್ತವಾಗಿ ಸ್ಥಾಪಿಸಲ್ಪಟ್ಟಿವೆ. ಎಲ್ಲ ಮುಮ್ಮುಖ ಚಲನೆಗಳು ಪುರುಷ ಸಮವರ್‍ತಿತ ನಡಿಗೆಗಳಾಗಿ ಸ್ತ್ರೀ ಆ ಚಲನೆಯ ಚಕ್ರಕ್ಕೆ ಸಿಲುಕಿ ಘರ್‍ಷಿಸಲ್ಪಟ್ಟು ಅಪ್ಪಚ್ಚಿಯಾಗಿ ಮುದುಡಿ ಹೋಗಿದ್ದಾಳೆ. ಇದಕ್ಕೆ ಉದಾಹರಣೆಯಾಗಿ ಸಾಮಾಜಿಕ ಬಾಲ್ಯವಿವಾಹವನ್ನು ಪುಷ್ಟಿಕರಿಸಿದ ಪಿತೃಪ್ರಧಾನ ವ್ಯವಸ್ಥೆ. ಅದರ ಇನ್ನೊಂದು ಭೀಕರ ಪ್ರತಿಫಲವಾದ ಬಾಲವಿಧವೆಯರಿಗೆ ಜೀವಂತವಿರುವಾಗಲೇ ಮೃತ ಜೀವನದ ಆಚರಣೆಗಳನ್ನು ಹೇರಿದ ಅಮಾನವೀಯ ಕ್ರೌರ್‍ಯಕ್ಕೆ ಬೇರೆ ಸಮರ್‍ಥನೆಗಳು ಬೇಕೆ? ಸತ್ತ ನಂತರದ ಜೀವನವನ್ನು ಯಾರೊಬ್ಬರೂ ಕಾಣದೇ ಇರುವಾಗ ಮೋಕ್ಷದ ನೆಪದಲ್ಲಿ ಆಕೆಯನ್ನು ಮೃತಳನ್ನಾಗಿಸುವ ಆ ಮೂಲಕ ಆಕೆಯಲ್ಲಿ ಕೀಳಿರಿಮೆಯನ್ನು ತುಂಬುವ, ಹೆಣ್ಣಿನ ಜೀವನವೆಂದರೆ ಅದು ಪಶುಪಕ್ಷಿಗಿಂತಲೂ ಕಡೆ ಎಂಬಂತೆ ಬಿಂಬಿಸಲು ನಡೆಸಿದ ಇಂತಹ ಅದೆಷ್ಟು ಹುನ್ನಾರಗಳು ಇಲ್ಲಿಲ್ಲ.

ವಿಧವೆ ಮರಣಿಸಿದ ಪತಿಯೊಂದಿಗೆ ಸಹಗಮನಮಾಡಿಕೊಳ್ಳುವಂತೆ ವೇದಗಳಲ್ಲಿ ಉಲ್ಲೇಖಿಸಲ್ಪಟ್ಟಿಲ್ಲ. ಅಲ್ಲಿ ಮರುವಿವಾಹಕ್ಕೆ ಅನುಮತಿ ಇದೆ ಎಂದು ಓದಿದ ನೆನಪು. ವೇದಸೂಕ್ತಿಗಳಲ್ಲಿ ಇಲ್ಲದ ಈ ಆಚರಣೆಗಳು ಹಿಂದೆ ಚರಿತ್ರೆಯ ಪೂರ್‍ವದಲ್ಲಿ ಸ್ತ್ರೀ ಸ್ವ‌ಇಚ್ಛೆಯಿಂದ ಮಾಡಿಕೊಳ್ಳುತ್ತಿದ್ದ ಆಚಾರವಾಗಿತ್ತು. ಕ್ಷತ್ರಿಯ ರಜಪೂತ ಮಹಿಳೆಯರು ಯುದ್ಧದಲ್ಲಿ ಮರಣಹೊಂದಿದ ತಮ್ಮ ಪತಿಯ ಚಿತೆಯೊಂದಿಗೆ ಹಾರಿ ಪ್ರಾಣಾರ್‍ಪಣೆ ಮಾಡಿಕೊಳ್ಳುತ್ತಿದ್ದರಂತೆ. ಆದರೆ ಮಧ್ಯಯುಗೀನ ಕಾಲದಲ್ಲಿ ಸಾಹಿತ್ಯ ಶಾಸ್ತ್ರಗಳ ಆಚರಣೆಗಳ ಪಾರುಪತ್ಯ ಹಿಡಿದ ಪುರುಷ ಪ್ರಧಾನ ಸಂಹಿತೆಗಳೇ ಕಾರುಬಾರು ನಡಸುತ್ತಿದ್ದು, ಸ್ತ್ರೀ ಬದುಕಿನ ಸಂರಚನೆಗೆ ಸಂಪೂರ್‍ಣವಾಗಿ ಪುರುಷ ವಿರಚಿತ ಕಾನೂನು ಕಟ್ಟಳೆಗಳು ಭಾಷ್ಯ ಬರೆಯುತ್ತಿದ್ದವು. ಹೀಗಾಗಿ ಸಹಗಮನ ಕಡ್ಡಾಯ ಸ್ವರೂಪ ಪಡೆಯಿತು. ಸಹಗಮನ ಮಾಡಿಕೊಳ್ಳದ ಬ್ರಾಹಣ ವಿಧವೆಗೆ ಕೇಶಮುಂಡನ ಕಡ್ಡಾಯವಾಯಿತು.

ಘಟಶ್ರಾದ್ಧದಂತಹ ವಿಕ್ಷಿಪ್ತ ಆಚರಣೆಯನ್ನು ತಪ್ಪಲ್ಲ ಎಂದು ಸಮರ್‍ಥಿಸುವವರಿರಬಹುದು. ಯಾಕೆಂದರೆ ಪುತ್ರ ಸಂತಾನ ಪಡೆದ ವ್ಯಕ್ತಿಗಳು ಮರಣಾನಂತರ ತಮ್ಮ ಪುತ್ರನ ಕೈಯಿಂದ ಪಿಂಡಪ್ರಧಾನ ಮಾಡಿಸಿಕೊಂಡು ಸದ್ಗತಿ ಕಾಣಬಹುದು. ಆದರೆ ಪುತ್ರರಿಲ್ಲದ ದಂಪತಿಗಳು ಜೀವಂತ ಇರುವಾಗಲೇ ಮಾಡಿಕೊಂಡರೆ ತಪ್ಪೇನು? ಎಂಬ ಪ್ರಶ್ನೆಯೂ ಮೂಡಬಹುದಾದರೂ ಅತಿ ಹೆಚ್ಚು ಸಂಖ್ಯೆಯಲ್ಲಿ ಗಂಡು ಈ ಸಂಸ್ಕಾರ ಮಾಡಿಕೊಂಡ ಉದಾಹರಣೆಗಳಿಲ್ಲ. ಸ್ತ್ರೀ ಮಾತ್ರ ಇದರ ಬಲಿಪಶುವಾಗಿದ್ದು ಆಕೆಗೆ ದತ್ತು ಪಡೆವ ಅವಕಾಶವಿರಲಿಲ್ಲ. ಆಕೆ ದತ್ತು ಪಡೆದದ್ದೆ ಹೌದಾದರೆ ಆಕೆಯ ಕುಟುಂಬಸ್ಥರಿಗೆ ಆಕೆಯ ಆಸ್ತಿಯ ಕಬಳಿಸುವ ಅವಕಾಶ ತಪ್ಪಿಹೋಗುತ್ತಿರಬಹುದು. ಹೀಗೆ ಅನೇಕಾನೇಕ ಕಾರಣಗಳಿಂದ ಜೀವಂತವಿರುವಾಗಲೇ ಶ್ರಾದ್ಧದ ಕಲ್ಪನೆ ಹುಟ್ಟಿದ್ದು, ಬಹುಶಃ ಲೋಭ ಬುದ್ದಿಯ ಹುನ್ನಾರದಿಂದಲೆ ಇರಬಹುದು. ಅದಕ್ಕೆಲ್ಲ ಧರ್‍ಮ ಸಿಂಧು ನಿರ್‍ಣಯಗಳು ಜಾರಿಯಾಗಿಬಹುದು.

ಇಂದಿಗೆ ಈ ಆಚರಣೆಗಳು ಕಾಣುತ್ತಿಲ್ಲವಾದರೂ ಸಂಪೂರ್‍ಣವಾಗಿ ನಶಿಸಿಲ್ಲ. ಅಗೋಚರವಾಗಿಯೇ ಸಂಪ್ರದಾಯಸ್ಥ ಕುಟುಂಬಗಳಲ್ಲಿ ನಡೆದುಬರುತ್ತಿರಬಹುದು. ಸಂಪ್ರದಾಯದ ಕಟ್ಟಳೆಗಳನ್ನು ಮೀರಿ ನಿಲ್ಲಬೇಕಾದ ಕಾಲದಲ್ಲಿ ನಮ್ಮ ಸಂಸ್ಕೃತಿಯ ನೆಲೆಯಲ್ಲಿಯೇ ಬೆಳಗಬೇಕಾದ ಅಗತ್ಯತೆ ಇದೆ. ಹಾಗಾಗಿ ಶ್ರೀಮಂತ ಪರಂಪರೆಯ ಭಾರತೀಯತೆಯ ಉಳಿಸಿಕೊಳ್ಳಬೇಕಾದ ಅನಿವಾರ್‍ಯತೆಯೂ ಇದೆ.

ಪರಂಪರೆ ಮತ್ತು ಸಂಪ್ರದಾಯ ಎಂಬ ಪದಗಳು ಪರಸ್ಪರ ಸಮಾನಾರ್‍ಥಕ ಪದಗಳೆನ್ನಿಸುತ್ತವೆ. ಆದರೆ ಅದರ ಒಳನೋಟ ದಕ್ಕಿಸಿಕೊಂಡರೆ ಸಂಪ್ರದಾಯ ಸಂಕುಚಿತವಾದ ಅರ್‍ಥದಲ್ಲಿ ಪಡಿಮೂಡಿದರೆ ಪರಂಪರೆ ವಿಶಾಲ ವ್ಯಾಪ್ತಿಯಲ್ಲಿ ತೆರೆದುಕೊಳ್ಳುತ್ತದೆ. ಇವೆರಡರ ನಡುವೆ ನಿರ್‍ದಿಷ್ಟ ಭಿನ್ನತೆಗಳಿವೆ. ಹಿಂದೆ ನನ್ನಮ್ಮ ಮುತೈದೆಯ ಸಂಕೇತವೆಂದು ಕೈತುಂಬಾ ಹಸಿರುಬಳೆಗಳನ್ನೇ ದಿನನಿತ್ಯ ತೊಟ್ಟುಕೊಳ್ಳುತ್ತಿದ್ದರು. ಹಾಗೆಂದು ನಾನೂ ಅದನ್ನೆ ಚಾಚೂ ತಪ್ಪದೇ ಪಾಲಿಸಿದರೆ ಅದೊಂದು ಸಂಪ್ರದಾಯ. ಆ ಹಿಂದಿನ ಆಚರಣೆಯನ್ನೆ ಸಂಪ್ರದಾಯ ಪ್ರೀತಿಸುತ್ತದೆ. ಪೋಷಿಸುತ್ತದೆ. ಆದರೆ ಪರಂಪರೆ ಹಾಗಲ್ಲ. ಇಂದಿನ ಬದುಕಿನ ಬದಲಾವಣೆಗಳನ್ನು ತನ್ನೊಳಗೆ ಒಳಗೊಳ್ಳುತ್ತ ಸಾಗುತ್ತದೆ. ನಿಂತ ನೀರಾಗದೇ ಪ್ರಾಚೀನತೆಯಲ್ಲಿ ನವೀನತೆಯನ್ನು ಧರಿಸುತ್ತ ಆ ಹಳೆಯ ಹೊಸತರ ನಡುವೆ ಸಾಮರಸ್ಯವನ್ನು ಮೂಡಿಸುತ್ತ ಬೆಳೆಯುತ್ತದೆ ಪರಂಪರೆ. ನಾನಿಂದು ಹಸಿರು ಬಳೆಗಳ ನಿತ್ಯ ಧರಿಸುವುದಿಲ್ಲ. ನನ್ನ ಕೈಗಳಲ್ಲಿ ಅವು ನಿಲ್ಲುವುದಿಲ್ಲ. ಒಂದೆರಡು ಬಂಗಾರದ ಬಳೆಯೋ ಇಲ್ಲ ಕೃತಕ ಅಲಂಕಾರಿಕ ಬಳೆಗಳು ಕೈಯಲ್ಲಿರುತ್ತವೆ. ಇದು ಬದಲಾದ ರೂಪದಲ್ಲಿ ಕಾಣುವ ಪರಂಪರೆ. ಹಾಗಾಗಿ ಇಂತಹ ಆಚರಣೆಗಳೆಲ್ಲ ಗುಳೇ ಹೊರಟು ಸ್ವಸ್ಥ ಆರೋಗ್ಯಕರ ಆಚರಣೆಯ ಭಾರತ ಬೆಳಗಬೇಕಿದೆ. ಅಂತಹ ಪರಂಪರೆ ನಮ್ಮದಾಗಬೇಕಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಂಜೀ ಯೆಸರು
Next post ಕೌರವನೆದೆಯಲಿ ಕಮಲವು ಅರಳಲಿ

ಸಣ್ಣ ಕತೆ

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…