ದೇವರುಗಳ ನಡುವಿನ ಮನುಷ್ಯ

ದೇವರುಗಳ ನಡುವಿನ ಮನುಷ್ಯ

ಚಿತ್ರ: ಚಿತ್ರಲೋಕ.ಕಾಂ
ಚಿತ್ರ: ಚಿತ್ರಲೋಕ.ಕಾಂ

ಅಪ್ಪನಿಗೆ ಹುಷಾರಿಲ್ಲ ಎನ್ನುವ ದೂರವಾಣಿ ಕರೆಯ ಬೆನ್ನೇರಿ ಆಸ್ಪತ್ರೆ ತಲುಪುವ ವೇಳೆಗಾಗಲೇ ಅಪ್ಪ ಮಾತನಾಡುವ ಶಕ್ತಿ ಕಳೆದುಕೊಂಡಿದ್ದರು. ಅದಾದ ಮೂರೇ ದಿನಗಳಲ್ಲಿ ನಮ್ಮ ಪಾಲಿಗೆ ನೆನಪಾಗಿಹೋದರು. ಅಪ್ಪನ ಅಂತ್ಯಕ್ರಿಯೆ ಸಂದರ್ಭದಲ್ಲಿ ಎದೆಯನ್ನು ಯಾರೋ ಒತ್ತಿಹಿಡಿದಂತೆ ಕಸಿವಿಸಿ. ಅಳಬೇಕೆಂದರೂ ಕಣ್ಣು ಒದ್ದೆಯಾಗುತ್ತಿಲ್ಲ ನಡೆಯುತ್ತಿರುವುದು ಯಾರದೋ ಅಂತ್ಯಸಂಸ್ಕಾರ ಈ ಸಂಸ್ಕಾರ ಕಾರ್ಯಕ್ಕೆ ಬರಲು ಅಪ್ಪ ಯಾಕೆ ತಡಮಾಡುತ್ತಿದ್ದಾರೆ ಅನ್ನಿಸುತ್ತಿತ್ತು. ಅಪ್ಪನನ್ನು ಮಣ್ಣು ಮಾಡಿ ಬಂದ ಕೆಲವೇ ದಿನಗಳಲ್ಲಿ ರಾಜಕುಮಾರ್ ನಿಧನರಾದರು.

ರಾಜಕುಮಾರ್ ದೇಹವನ್ನು ತಡವುತ್ತ ಪಾರ್ವತಮ್ಮನವರು ರೋದಿಸುತ್ತಿರುವ ದೃಶ್ಯವನ್ನು ಟಿವಿಯಲ್ಲಿ ಕಂಡಾಗ ಕಣ್ಣು ಮಂಜುಮಂಜು. ಕಚೇರಿಯಲ್ಲಿ ಸಹೋದ್ಯೋಗಿಗಳ ಎದುರು ಅಳುವುದು ಹೇಗೆ? ಕೂಡಲೇ ಟಾಯ್ಲೆಟ್‌ಗೆ ಓಡಿದೆ.

ಅಪ್ಪನ ಸಾವಿಗಿಂತಲೂ ರಾಜಕುಮಾರ್ ಸಾವು ನನಗೆ ಹೆಚ್ಚು ದುಃಖ ಉಂಟುಮಾಡಿತೆ? ರಾಜ್ ಎಂದರೆ ನನಗೆ ಅಭಿಮಾನವಿತ್ತು; ಕೊಂಚ ಮಟ್ಟಿಗಿನ ಆರಾಧನೆಯೂ. ಆದರೆ ಅಪ್ಪನಿಗಿಂತಲೂ ರಾಜ್ ಮುಖ್ಯ ಎನ್ನುವುದನ್ನು ಕಲ್ಪಿಸಿಕೊಳ್ಳುವುದೂ ಸಾಧ್ಯವಿಲ್ಲ ಆದುದಿಷ್ಟೇ; ರಾಜ್ ಸಾವು ನನಗೆ ಅಪ್ಪನ ನೆನಪು ತಂದಿತ್ತು.  ಪಾವರ್ತಮ್ಮನವರರೋದನ ಅಮ್ಮನನ್ನು ನೆನಪಿಸಿತ್ತು.  ನನ್ನ ದುಃಖ ಪ್ರಕಟಗೊಳ್ಳಲು ರಾಜ್ ಸಾವು ಒಂದು ನೆಪವಾಗಿ ಒದಗಿಬಂದಿತ್ತು. ಈ ಮಾತು ತರ್ಕದ ಚೌಕಟ್ಟಿನಲ್ಲಿ ತೀರಾ ಭಾವುಕ, ಬಾಲಿಶ ಅಥವಾ ಅವಾಸ್ತವಿಕ ಅನ್ನಿಸಬಹುದು. ಆದರೆ ಭಾವನೆಗಳು ಬಹುತೇಕ ಸಂದರ್ಭಗಳಲ್ಲಿ ತರ್ಕಾತೀತ. ನನ್ನಂಥ  ಸಾವಿರಾರು ಜನರ ನೋವು ನಲಿವುಗಳ ವ್ಯಕ್ತರೂಪವಾಗಿ ರಾಜ್ ಐದು ದಶಕಗಳಿಂದ ಒದಗಿಬರುತ್ತಿದ್ದುದನ್ನು ಅಲ್ಲಗಳೆಯುವುದು ಹೇಗೆ?

ರಾಜ್ ಕೊನೆಯ ಚಿತ್ರಗಳಲ್ಲೊಂದಾದ ‘ಜೀವನ ಚೈತ್ರ’ವನ್ನು ಅಪ್ಪ ಅಮ್ಮನೊಂದಿಗೆ ನೋಡಿದಾಗಲೂ ಕಣ್ಣುತೇವವಾಗಿದ್ದವು. ಸಿನಿಮಾದಲ್ಲಿನ ನಾಯಕ ಆದರ್ಶಗಳನ್ನು ನೆಚ್ಚಿದ ವ್ಯಕ್ತಿ. ಆತನಿಗೆ ಮೂವರು ಗಂಡುಮಕ್ಕಳು. ಒಳ್ಳೆಯತನ ಹಾಗೂ ದುಷ್ಟತನದ ನಡುವಣ ಸಂಘರ್ಷ ಹಾಗೂ ಸಂಬಂಧಗಳ ಉತ್ಕರ್ಷದ ಚಿತ್ರಣ ಅಪ್ಪನನ್ನು ಕಲಕಿತ್ತು. ಸಿನಿಮಾ ನೋಡಿದ ಅಪ್ಪನ ಕಣ್ಣುಗಳು ಒದ್ದೆಯಾಗಿದ್ದವಾ? ‘ಈ ಸಿನಿಮಾ ಒಂದು  ಪಾಠವಿದ್ದಂತೆ…’ ಎಂದು ಸಿನಿಮಾ ನೋಡಿದ ಒಂದೆರಡು ದಿನಗಳ ನಂತರ ಅಪ್ಪ ಹೇಳಿದ್ದರು. ಆಗ ಅವರ ಧ್ವನಿ ಆರ್ದ್ರವಾಗಿತ್ತು (ಸೊಸೆಯಂದಿರು ಬಂದ ನಂತರದ ಮನೆಯನ್ನು ಅವರು ಊಹಿಸಿಕೊಂಡಿರಬೇಕು). ಇದೇ ‘ಜೀವನ ಚೈತ್ರ’ ಸಿನಿಮಾ ಕೆಲವು ಊರುಗಳಲ್ಲಿ ಸಾರಾಯಿ ಅಂಗಡಿಗಳನ್ನು ಮುಚ್ಚಿಸಲು ಮಹಿಳೆಯರು ಮುಂದಾಗಲು ಕಾರಣವಾಯಿತು. ಕುಡಿತದ ಚಟದಿಂದ ಹೊರಬರಲು ಕೆಲವರಿಗಾದರೂ ಪ್ರೇರಣೆ ಒದಗಿಸಿತು.

ರಾಜಕುಮಾರ್ ಅವರನ್ನು ಅಪ್ಪನೊಂದಿಗೆ ನೆನಪಿಸಿಕೊಳ್ಳಲಿಕ್ಕೆ ಇಬ್ಬರ ಸಾವೂ ಕೆಲವೇ ದಿನಗಳ ಅಂತರದಲ್ಲಿ ಸಂಭವಿಸಿದ್ದು ಕಾರಣವಲ್ಲ; ಅಪ್ಪನ ಮೂಲಕ ರಾಜಕುಮಾರ್ ಅರ್ಥವಾಗಿದ್ದು ಕಾರಣ. ಬಹುಶಃ ಹಳೆಯ ತಲೆಮಾರಿನ ಅನೇಕ ಅಪ್ಪಂದಿರು ತಮ್ಮ ಮಕ್ಕಳಿಗೆ ರಾಜ್ ವ್ಯಕ್ತಿತ್ವ ಹಾಗೂ ಅವರ ಚಿತ್ರಗಳ ಮೂಲಕ ಪಾಠ ಹೇಳಿದ್ದಾರೆ. ರಾಜ್ ಸಿನಿಮಾಗಳ ಪಾತ್ರಗಳು ಅನೇಕರ ಬದುಕಿನ ಲಯ ಬದಲಿಸಿವೆ. ಕೆಲವು ಕುಟುಂಬಗಳಲ್ಲಿನ ಅಪಸ್ವರವನ್ನಾದರೂ ನೀಗಿಸಿವೆ.
*   *   *

ರಾಜಕುಮಾರ್ ಅಂದರೆ ಏನು? ಇದು ಬಾಲಿಶ ಪ್ರಶ್ನೆಯಾಗಿರುವಂತೆಯೇ ಸಂಕೀರ್ಣ ಪ್ರಶ್ನೆಯೂ ಹೌದು. ಅಭಿಮಾನಿಗಳನ್ನು ಕೇಳಿ: ಅಣ್ಣಾವ್ರು, ವರನಟ, ರಸಿಕರ ರಾಜ, ಕನ್ನಡ ಕಂಠೀರವ, ಗಾನ ಗಂಧರ್ವ, ನಟಸಾರ್ವಭೌಮ..  ಮುಂತಾಗಿ ದಶಾವತಾರ ವರ್ಣನೆಯಲ್ಲಿ ಮುಳುಗಿಬಿಡುತ್ತಾರೆ. ‘ರಾಜ್ ನಮ್ಮ ಆಸ್ತಿ, ನಮ್ಮ ಸಂಸ್ಕೃತಿ’ ಎನ್ನುತ್ತಾರೆ ಇನ್ನೊಬ್ಬರು. ‘ರಾಜ್ ಎಂದರೆ ಕನ್ನಡ ಚಿತ್ರೋದ್ಯಮ ಕಂಡ ಸಾರ್ವಕಾಲಿಕ ಶ್ರೇಷ್ಠ ಕಲಾವಿದ’ ಎನ್ನುವವರೂ ಇದ್ದಾರೆ. ಹೌದಾ? ರಾಜ್ ಎಂದರೆ ಇವೆಲ್ಲವೂ ನಿಜವೇನಾ? ಅಥವಾ ಇವುಗಳ ನಡುವೆ ನಿಜವಾದ ರಾಜ್ ಕಳೆದುಹೋಗಿದ್ದಾರಾ?

ರಾಜ್ ಎಂದರೆ ಏನು ಎನ್ನುವ ಪ್ರಶ್ನೆಗೆ ಸ್ವತಃ ರಾಜ್ ‘ನಾನು ತೃಣ, ಅಭಿಮಾನಿಗಳ ಕುಮಾರ’ ಎನ್ನುತ್ತಿದ್ದರು. ‘ನನ್ನ ಸಾಧನೆ ಎನ್ನುವುದೇನಿಲ್ಲ ಎಲ್ಲವೂ  ಕನ್ನಡಿಗರ ದಯೆ ಎಂದು ವಿನೀತರಾಗಿ ಹೇಳುತ್ತಿದ್ದರು. ‘ಅಭಿಮಾನಿಗಳು’ ಎಂದು ಕೂಡ ಅವರು ಹೇಳುತ್ತಿರಲಿಲ್ಲ ‘ಅಭಿಮಾನಿ ದೇವರುಗಳು’ ಎನ್ನುತ್ತಿದ್ದರು. ಜನರ  ರೂಪದಲ್ಲಿ ಲಕ್ಷಾಂತರ ದೇವರುಗಳನ್ನು ಕಾಣುತ್ತಿದ್ದರು. ಹಾಗಾಗಿ, ಅವರು ‘ದೇವತಾ ಮನುಷ್ಯ’ ಅಲ್ಲ; ‘ದೇವರುಗಳ ನಡುವಿನ ಮನುಷ್ಯ’

ರಾಜ್ ಕೂಡ ಒಬ್ಬ ಮನುಷ್ಯ ಅಂದರೆ ಕೆಲವು ದೇವರುಗಳು ಸಿಟ್ಟಾಗಬಹುದು. ಆದರೆ, ಆದರ್ಶ ಪುರುಷರೆಂದು ನಾವು ಆರಾಧಿಸುವ, ಮೆಚ್ಚುವ ನಾಯಕರುಗಳೆಲ್ಲ ಮನುಷ್ಯರೇ ಆಗಿದ್ದರು. ಬೇಕಿದ್ದರೆ ಶಾಪಗ್ರಸ್ತರು ಅನ್ನಿ ರಾಮ, ಕೃಷ್ಣ, ಶಿವ ಇವರುಗಳಲ್ಲಿ ಯಾರಿಗೆ ತಟ್ಟಿಲ್ಲ ಹೇಳಿ ಶಾಪದ ತಾಪ. ಇವರೆಲ್ಲ ಮನುಷ್ಯರಾಗಿಯೇ ತಾನೆ ಜನ್ಮ ಸಾರ್ಥಕ ಪಡಿಸಿಕೊಂಡದ್ದು. ರಾಜ್ ಕೂಡ ಇಂಥ ಓರ್ವ ಶಾಪಗ್ರಸ್ಥ ಗಂಧರ್ವ. ನಮ್ಮಂತೆಯೇ ರಾಜ್ ಕೂಡ ರಾಗದ್ವೇಷಗಳನ್ನು ಹೊಂದಿದ್ದರು. ಆದರೆ ಅವರ ಸಜ್ಜನಿಕೆ ಉಳಿದೆಲ್ಲ ಅವಗುಣಗಳನ್ನು ಮರೆಸಿಬಿಡುವಷ್ಟು ದೊಡ್ಡದಾಗಿತ್ತು.

ಹದಿನೈದು ವರ್ಷಗಳ ಹಿಂದಿನ ಮಾತು. ಬೆಂಗಳೂರಿನ ‘ಮಲ್ಲಿಗೆ’ ಆಸ್ಪತ್ರೆಯಲ್ಲಿ ನಡೆದ ಘಟನೆ. ವೈದ್ಯರಿಗಾಗಿ ಕಾಯುತ್ತಾ ನಿಂತಿದ್ದಾಗ ‘ರಾಜಕುಮಾರ್  ರಾಜಕುಮಾರ್’ ಎಂದು ಚುರುಕು ಕಂಗಳ ಅಣ್ಣ ಕೂಗಿದ. ನಾನು ನೋಡುವಷ್ಟರಲ್ಲಿ ರಾಜ್ ಆಸ್ಪತ್ರೆಯ ಹೊಸ್ತಿಲು ದಾಟಿದ್ದರು. ನಾನು ಆಸ್ಪತ್ರೆಯ ಮುಂಬಾಗಿಲು ದಾಟಿ ಕೊನೆಯ  ಮೆಟ್ಟಿಲು ಇಳಿಯುವ ವೇಳೆಗಾಗಲೇ ರಾಜ್ ಕುಳಿತ ಕಾರು ನಿಧಾನಕ್ಕೆ ಓಟ ಪ್ರಾರಂಭಿಸಿತ್ತು. ಕಾರಿನೊಳಗೆ ಕುಳಿತವರು ಹೊರಗಿನವರಿಗೆ ಕಾಣುತ್ತಿರಲಿಲ್ಲ  ಅಪ್ರಜ್ಞಾಪೂರ್ವಕವಾಗಿ ಗುರಿಯಿಲ್ಲದೇ ಕೈಬೀಸಿದೆ. ಆಶ್ಚರ್ಯ, ಕಾರು ಹಿಮ್ಮುಖವಾಗಿ ಚಲಿಸಿತು. ಇಳಿದ ಗಾಜಿನ ಬದಿಯಲ್ಲಿ ರಾಜ್ ಕಂಡರು. ಅವರು ಕೈಮುಗಿದರು. ಪ್ರತಿಯಾಗಿ ನಮಸ್ಕರಿಸಬೇಕು ಎನ್ನುವುದು ಅರ್ಥವಾಗುವಷ್ಟರಲ್ಲಿ ಕಾರು ಮತ್ತೆ ಮುಂದಕ್ಕೆ ಹೋಯಿತು. ಕೆಲವೇ ಕ್ಷಣಗಳಲ್ಲಿ ಕನಸಿನಂತೆ ನಡೆದ ಘಟನೆ ನೆನಪಿನ ಪುಟಗಳಲ್ಲಿ ಅಚ್ಚಾಗಿದೆ.  ಜನರಿಂದ ತಲೆ ಮರೆಸಿಕೊಳ್ಳುವ ನಟರೇ ಹೆಚ್ಚಾಗಿರುವಾಗ ಜನಪ್ರಿಯ ನಟನೊಬ್ಬ ತಾನೆಂದೂ ಕಾಣದ ಹುಡುಗನೊಬ್ಬನಿಗೆ ಸ್ಪಂದಿಸಿದ, ಮರು ವಂದಿಸಿದ ಈ ಘಟನೆ ನೆನಪಾದಾಗಲೆಲ್ಲ ‘ಮನುಷ್ಯ ಹೀಗೂ ಇರಬಹುದಲ್ಲವಾ’ ಅನ್ನಿಸುತ್ತದೆ.

ಪ್ರಭಾವಳಿಗಳ ಚೌಕಟ್ಟಿನಲ್ಲಿ ಕೂರಿಸಿದಂತೆಲ್ಲ ರಾಜ್ ಹೆಚ್ಚು ಹೆಚ್ಚು ಆಕರ್ಷಕವಾಗಿ ಕಾಣುತ್ತಾರೆ. ಆದರೆ ಇದೇ ಕಾಲದಲ್ಲಿ ಅವರು ನಮ್ಮಿಂದ ದೂರವಾಗಿ  ನಿಲ್ಲುತ್ತಾರೆ. ಯಾವುದೇ ವಿಷೇಷಣಗಳ ಹಂಗಿಲ್ಲದ ರಾಜ್ ಅವರನ್ನು ನಮ್ಮಂತೆಯೇ ಒಬ್ಬ ಮನುಷ್ಯ ಅಂದುಕೊಂಡಾಗ, ನೆರೆಮನೆಯ ಹಿರೀಕ ಎಂದು ಭಾವಿಸಿದಾಗ ಅವರು ಮನಸ್ಸಿಗೆ ಹತ್ತಿರವೆನ್ನಿಸುತ್ತಾರೆ. ಜನಸಾಮಾನ್ಯರಂತೆಯೇ ರಾಜ್ ಕೂಡ ಹೊಗಳಿಕೆಗೆ ಹಿಗುತ್ತಿದ್ದರು. ಬಹಳಷ್ಟು ಸಂದರ್ಭಗಳಲ್ಲಿ ಅದು ಮಗುವಿನ ಹಿಗ್ಗಾಗಿರುತ್ತಿತ್ತು.  ನಮ್ಮಂತೆಯೇ ರಾಗದ್ವೇಷಗಳನ್ನು ಸಣ್ಣಪುಟ್ಟ ಚಪಲಗಳನ್ನು ಅವರು ಹೊಂದಿದ್ದರು.  ಕೋಳಿ ಸಾರಿಗೆ ಮೂಗರಳಿಸುತ್ತಿದ್ದರು. ಹದಿನಾರಾಣೆ ಮನುಷ್ಯರಾಗಿದ್ದರು.

ರಾಜ್ ಅವರ ಖ್ಯಾತಿಗೆ ಅವರ ನಟನೆ ಕಾರಣವಾದಷ್ಟೇ, ‘ಅವರು ನಮ್ಮವರು’ ಎಂದು ಜನರಿಗನ್ನಿಸಿದ್ದೂ ಕಾರಣ. ಇದಕ್ಕೆ ರಾಜ್ ಅಭಿನಯಿಸಿದ ಪಾತ್ರಗಳ  ವೈವಿಧ್ಯವೂ ಕಾರಣವಿರಬಹುದು. ರಾಮ, ರಾವಣ, ಕೃಷ್ಣದೇವರಾಯ, ಹರಿಶ್ಚಂದ್ರ, ಪುಲಿಕೇಶಿ, ಕಂಠೀರವ, ಮಯೂರ, ಕುಂಬಾರ, ಕನಕದಾಸ, ‘ಬಂಗಾರದ ಮನುಷ್ಯ’ನ ರಾಜೀವ, ‘ಸಂಪತ್ತಿಗೆ ಸವಾಲ್’ನ ಭದ್ರ. ‘ಕಸ್ತೂರಿ ನಿವಾಸ’ದ ತ್ಯಾಗಮಯಿ ನಾಯಕ- ಇವೆಲ್ಲವೂ ನಮ್ಮೊಳಗಿನ ಪಾತ್ರಗಳೇ ಅಲ್ಲವೇ? ಒಂದಂತೂ ನಿಜ, ರಾಜ್ ನಮ್ಮ ನಡುವೆಯೇ ಇದ್ದು ಬಹು ಎತ್ತರಕ್ಕೆ ಬೆಳೆದವರು; ಬೆಳೆದ ನಂತರವೂ ನಮ್ಮೊಂದಿಗೇ ಉಳಿದವರು.

ವನವಾಸದ ಅಧ್ಯಾಯ ಕೂಡ ರಾಜ್ ಅವರೊಬ್ಬ ಸಾಧಾರಣ ಮನುಷ್ಯ ಎನ್ನುವುದನ್ನು ರುಜುವಾತು ಮಾಡಲಿಕ್ಕಾಗಿಯೇ ನಡೆದ ಪ್ರಸಂಗದಂತೆ ಕಾಣುತ್ತದೆ. ವೀರಪ್ಪನ್ ಒತ್ತೆಯಾಳಾಗಿದ್ದ ಸಂದರ್ಭ ಹಾಗೂ ಕಾಡಿನಿಂದ ನಾಡಿಗೆ ಬಂದ ಪ್ರಸಂಗ ನೆನಪಿಸಿಕೊಳ್ಳಿ. ಕಾಡಿನಲ್ಲಿದ್ದಾಗ ರಾಜ್ ತಮ್ಮ ಬಿಡುಗಡೆಗಾಗಿ ಬೇಡಿಕೊಂಡರು. ನಾಡಿಗೆ  ಬಂದಾಗ, ತನ್ನ ಬಿಡುಗಡೆಗೆ ಕಾರಣರಾದವರನ್ನು ಸ್ಮರಿಸಿಕೊಂಡರು. ವೀರಪ್ಪನ್ನಲ್ಲಿನ ಆಕರ್ಷಕ ಗುಣಗಳನ್ನೂ ಮೆಚ್ಚಿಕೊಂಡರು. ಅವರ ಮಾತುಗಳಲ್ಲಿ  ವೀರಾವೇಶವಾಗಲೀ, ಅಪ್ರಾಮಾಣಿಕತೆಯಾಗಲೀ, ಯಾರನ್ನೋ ಮೆಚ್ಚಿಸುವ ಉಮೇದಾಗಲೀ ಇರಲಿಲ್ಲ. ರಾಜ್ ಮನುಷ್ಯರಾಗಿಯೇ ಉಳಿದಿದ್ದರು. ಇದರಿಂದಾಗಿ, ರಾಜ್ ಅವರನ್ನು ದೇವರ ಪಟ್ಟಕ್ಕೇರಿಸುವ, ಅವರಿಗೆ ಕನ್ನಡ ಕಲಿಯ ಪೋಷಾಕು ತೊಡಿಸುವ ಪ್ರಯತ್ನದಲ್ಲಿದ್ದ ಕೆಲವರಿಗೆ ನಿರಾಶೆಯಾದದ್ದು ನಿಜ. ಸದ್ಯ, ರಾಜ್ ದೇವರಾಗಲಿಲ್ಲ. ಇನ್ನು ರಾಜ್ ಕಾಡಿನಲ್ಲಿದ್ದಾಗ ನಾಡಿನಲ್ಲಿ ನಡೆದ ಅಬ್ಬರ ಅಚ್ಚರಿ ಹುಟ್ಟಿಸುವಂತಹದ್ದು. ರಾಜ್ಯದ ಮುಖ್ಯಮಂತ್ರಿಯಿಂದ ಹಿಡಿದು ಜನಸಾಮಾನ್ಯರವರೆಗೆ, ಹಳ್ಳಿಯಿಂದ ಸಿಲಿಕಾನ್ ಕಣಿವೆಯವರೆಗೆ- ರಾಜ್ ಬಿಡುಗಡೆಗಾಗಿ ಪ್ರಾರ್ಥನೆ ನಡೆಯಿತು. ರಾಜ್ಯದ ಅನೇಕ ಭಾಗಗಳಲ್ಲಿ ಅಹೋರಾತ್ರಿ ಭಜನೆ ನಡೆಯಿತು. ದುರ್ಗಾ ಹೋಮ ನಡೆಸಲು ಸರ್ಕಾರ ಆದೇಶ ಹೊರಡಿಸಿತು. ಸಿನಿಮಾ ನಟಿಯರು ಉರುಳುಸೇವೆ ನಡೆಸಿದರು. ವಚನಗಳ ಗಾಯನ, ದೇಗುಲಗಳಲ್ಲಿ ಹೋಮ ಹವನ, ಸರದಿ ಉಪವಾಸ, ಉರುಳು ಸೇವೆಯ ಆವೇಶ- ಚರ್ಚು, ಮಸೀದಿ, ದೇಗುಲ, ಬಯಲುಗಳಲ್ಲಿ ತುಂಬಿಕೊಂಡವು.  ಇಡೀ ರಾಜ್ಯದಲ್ಲಿ ಅವರ್ಣನೀಯ ವೇದನೆಯೊಂದು ತುಂಬಿಕೊಂಡಿತು. ಯಾಕಾಗಿ? ರಾಜ್ ಎಂಬ ವ್ಯಕ್ತಿಯ ಅಪಹರಣವಷ್ಟೇ ಈ ನೋವಿಗೆ ಕಾರಣವಲ್ಲ ರಾಜ್ ಹೆಸರಿನಲ್ಲಿ ನಾವು ಕಲ್ಪಿಸಿಕೊಂಡಿದ್ದ ಆದರ್ಶ, ಭರವಸೆಯ ರೂಪಕವೊಂದು ಕಾಡುಪಾಲಾದ ಅಳಲದು. ಪುರಾಣದ ಹರಿಶ್ಚಂದ್ರ ಮಹಾರಾಜ ರಾಜ್ಯತ್ಯಾಗ ಮಾಡಿ ಕಾಡಿಗೆ ಹೊರಟಾಗ ‘ಪುರದ ಪುಣ್ಯ ಪುರುಷ ರೂಪಿಂದ ಪೋಗುತಿದೆ’ ಎಂದು ಜನ ಮರುಗಿದಂತೆ ರಾಜ್ ಅಪಹರಣ ಸಂದರ್ಭದಲ್ಲಿ ಜನ ಮರುಗಿದ್ದರು.

ರಾಜ್ ಬಗ್ಗೆ ಮಾತನಾಡುವಾಗಲೆಲ್ಲ ಅವರನ್ನು ಮುಗ್ಧ ಎನ್ನುತ್ತೇವೆ. ಇದಕ್ಕೆ ಸರಿಯಾಗಿ ಅವರ ವೇಷಭೂಷಣ ಹಾಗೂ ಮಾತುಗಳಿದ್ದವು. ಆದರೆ, ಐವತ್ತು ವರ್ಷಗಳ ಕಾಲದ ಬಣ್ಣದ ಬದುಕಿನಲ್ಲಿ ಏಗಿದ ನಂತರವೂ ಮುಗ್ಧರಾಗಿ ಉಳಿಯುವುದು ಸಾಧ್ಯವೇ? ರಾಜ್ ಓರ್ವ ಸಜ್ಜನ; ಸಾತ್ವಿಕ ವ್ಯಕ್ತಿ, ಅಷ್ಟೇ. ಈ ಸಜ್ಜನಿಕೆ, ಸಾತ್ವಿಕ ಮನೋಭಾವ ಮುಗ್ಧತೆಯಾಗಿ ಕಾಣುತ್ತದೆ. ಪ್ರತಿಯೊಂದನ್ನೂ ಹಣದಿಂದ ಅಳೆಯುವ ಕಾಲದಲ್ಲಿ ಒಳ್ಳೆಯತನ ಕೂಡ ಅವಾಸ್ತವಿಕವಾಗಿ ಕಾಣುತ್ತದೆ. ಮನುಷ್ಯರಾಗಿಯೇ ಇದ್ದು ಎತ್ತರಕ್ಕೆ ಬೆಳೆದ ಬುದ್ಧ, ಬಸವ, ಮಹಾವೀರ, ಗಾಂಧಿ ಮುಂತಾದ ಯಾವುದೇ ನಾಯಕರನ್ನು ನೋಡಿದರೂ ಅವರ ಮುಖದಲ್ಲೊಂದು ಮಗುತನ ಇರುವುದು ಎದ್ದುಕಾಣುತ್ತದೆ. ಪಟಗಳಲ್ಲಿನ ದೇವರುಗಳ ಮುಖದಲ್ಲೂ ಮಗುತನ ಇದೆ. ಇದೇ ಭಾವ ರಾಜ್ ಮುಖದಲ್ಲೂ ಇದೆ.  ರಾಜ್ ನಟಿಸಿರುವ ಪಾತ್ರ ಪ್ರಪಂಚವನ್ನೇ ನೋಡಿ. ಅವರು ಎಚ್ಚರಿಕೆಯಿಂದ ಪಾತ್ರಗಳನ್ನು ಆರಿಸಿಕೊಂಡಿರುವುದು, ಆರಿಸಿಕೊಂಡ ಪಾತ್ರಗಳನ್ನು ಅರಗಿಸಿಕೊಂಡಿರುವುದು ಮೊದಲ ನೋಟಕ್ಕೇ ಎದ್ದು ಕಾಣುತ್ತದೆ. ರಾಜ್ ಅವರ ವಿವೇಕಕ್ಕೆ ಇದೊಂದು ಉದಾಹರಣೆ ಮಾತ್ರ. ಕಲಾವಿದನ ಮಿತಿಯನ್ನು ಅರ್ಥ ಮಾಡಿಕೊಂಡಿದ್ದು ಒತ್ತಡ ಆಮಿಷಗಳ  ನಡುವೆಯೂ ರಾಜಕೀಯದಿಂದ ದೂರ ಉಳಿದದ್ದು ಅವರ ವಿವೇಕಕ್ಕೆ ಇನ್ನೊಂದು ನಿದರ್ಶನ.

ರಾಮಾಯಣದ ಆಂಜನೇಯನಂತೆ ರಾಜ್ ಒಂದು ಶಕ್ತಿಯಾಗಿದ್ದರು. ವಿಪರ್ಯಾಸವೆಂದರೆ, ಆ ಶಕ್ತಿಯನ್ನು ಪ್ರಯೋಗಿಸುವ ಸಮರ್ಥ ರಾಮನ ‘ಕೈ’ ಒದಗಲೇ ಇಲ್ಲ. ರಾಜ್ ಸುತ್ತಮುತ್ತಲಿನ ಜನ ಅವರ ಆರಾಧನೆಯಲ್ಲೇ ಮುಳುಗಿಹೋದರು. ಉಳಿದವರು ಗೋಡೆಗಳನ್ನು ಕಟ್ಟುವ ಕೆಲಸದಲ್ಲಿತೊಡಗಿದರು. ಬಹುಶಃ ಈ ನಿಟ್ಟಿನಲ್ಲೇ  ಇರಬೇಕು-‘ಜನರ ಅಭಿಮಾನದ ಶ್ರೀಮಂತಿಕೆ ಪಡೆದ ಈ ನಟ ನಾಡಿಗೆ ಕೊಟ್ಟಿದ್ದಾದರೂ ಏನು’ ಎನ್ನುವ ತಕರಾರು ಆಗಾಗ ಕೇಳಿಸುತ್ತದೆ. ಈ ತಕರಾರಿನಲ್ಲಿ ಕೊಂಚ ಹುರುಳಿದೆ. ಆದರೆ ವ್ಯಕ್ತಿಯೊಬ್ಬನ ಕೊಡುಗೆಯನ್ನು ಆತನ ಕ್ಷೇತ್ರದಲ್ಲೇ ಹುಡುಕಬೇಕಲ್ಲವೇ? ರಾಜ್ ಹೇಳಿಕೇಳಿ ಒಬ್ಬ ಕಲಾವಿದ. ಚೆಂದಾದ ಪಾತ್ರ ಮಾಡುವುದು ತಾನೇ ಕಲಾವಿದನ ಕೆಲಸ. ಆ ಕೆಲಸವನ್ನು ರಾಜ್ ಅಚ್ಚುಕಟ್ಟಾಗಿ ಮಾಡಿದ್ದಾರೆ. ನಾಡಿಗೆ ಏನಾದರೂ ಮಾಡಬೇಕಾದ ರಾಜಕಾರಣಿಗಳು ಮಾತ್ರ ನಟಿಸುತ್ತಲೇ ಇದ್ದಾರೆ. ಈ ಸೂಕ್ಷ್ಮ ಅರ್ಥವಾದರೆ, ರಾಜ್ ಕೂಡ ಒಬ್ಬ ಮನುಷ್ಯ ಎನ್ನುವುದು ಮನದಟ್ಟಾದರೆ, ರಾಜ್ ಕೊಡುಗೆಯ ಬಗ್ಗೆ  ಪ್ರಶ್ನೆಗಳು ಏಳುವುದಿಲ್ಲ.

ಕಮರ್ಷಿಯಲ್ ಸಿನಿಮಾಗಳ ಜೊತೆಯಲ್ಲೇ ರಾಜ್ ನಟಿಸಿದ ಚಾರಿತ್ರಿಕ ಚಿತ್ರಗಳು ಕನ್ನಡ ಸಾಂಸ್ಕೃತಿಕ ಲೋಕಕ್ಕೆ ಅಪೂರ್ವ ಕೊಡುಗೆಗಳಾಗಿವೆ.  ಆಧುನಿಕತೆಯ ಹುಚ್ಚುಹೊಳೆಯಲ್ಲಿ ಬೇರುಗಳನ್ನು ಆಕಾಶದಲ್ಲಿ ಬಿಡುತ್ತಿರುವವರು ನಾವು. ಇಂಥ ಗಾಳಿಗಾಲದಲ್ಲಿ ‘ಮಯೂರ’, ‘ಶ್ರೀಕ್ಟಷ್ಣ ದೇವರಾಯ’, ‘ಇಮ್ಮಡಿ  ಪುಲಿಕೇಶಿ’, ‘ಭಕ್ತ ಕನಕದಾಸ’ ಗಳಂಥ ಸಿನಿಮಾಗಳು ಇಲ್ಲದಿದ್ದರೆ ಜನಸಾಮಾನ್ಯರ ನೆನಪಿನಲ್ಲಿ‌ಈ ಐತಿಹಾಸಿಕ ನಾಯಕರುಗಳು ಅಚ್ಚಳಿಯದೆ ಅಚ್ಚಾಗುತ್ತಿದ್ದರಾ? ಹೂಂ ಎನ್ನುವುದು ಕಷ್ಟ.  ರಾಜ್ ಆವರು ಸಿನಿಮಾಗಳ ಮೂಲಕ ಐತಿಹಾಸಿಕ- ಪೌರಾಣಿಕ ರಾಯಭಾರಿಯಾಗಿ ಮಾಡಿರುವ ಕೆಲಸ ಮಹತ್ತರವಾದದ್ದು ಆದರೆ ಅವರು ನಿರ್ವಹಿಸಬೇಕಾದ ರಾಯಭಾರ ಇನ್ನೂ ಇತ್ತು. ಇನ್ನಷ್ಟು ಚಾರಿತ್ರಿಕ ಪಾತ್ರಗಳಲ್ಲಿ ನಟಿಸುವ ಮೂಲಕ ರಾಜ್ ಜನಸಾಮಾನ್ಯರಿಗೆ ಇತಿಹಾಸದ ಪಾಠ ಹೇಳುವ ಅವಕಾಶವಿತ್ತು. ಕುಮಾರರಾಮ, ಅಶೋಕ, ಬುದ್ಧ ಮದಕರಿ ನಾಯಕ- ಮುಂತಾದ ಪಾತ್ರಗಳನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಸೋಲಿನ ಭಯವಿಲ್ಲದ ರಾಜ್‌ಗೆ ಈ ಪಾತ್ರಗಳ ಪೋಷಣೆ ಸುಲಭವಾಗಿತ್ತು- ರಾಜ್ ನಟಿಸಿದ/  ನಟಿಸಬಹುದಾಗಿದ್ದ ಪಾತ್ರಗಳಲ್ಲಿ ಕಲ್ಪಿಸಿಕೊಳ್ಳಬಹುದಾದ ನಟರೊಬ್ಬರೂ ನಮ್ಮ ನಡುವೆ ಇಲ್ಲ  ಎನ್ನುವ ಆತಂಕ, ‘ರಾಜ್ ಇನ್ನೂ ನಟಿಸಬೇಕಿತ್ತು’ ಎನ್ನುವ ಕೊರತೆಯ ದೊಡ್ಡದಾಗಿಸುತ್ತದೆ.  ಆ ಕೊರಗನ್ನು ಬದಿಗಿಟ್ಟು ಸಾಮಾಜಿಕ ಚಿತ್ರಗಳ ಮಾತಿಗೆ ಬರೋಣ. ‘ಚಂದವಳ್ಳಿಯ ತೋಟ’, ‘ಕರುಣೆಯೇ ಕುಟುಂಬದ ಕಣ್ಣು’, ‘ನಾಂದಿ’, ‘ಸಂಪತ್ತಿಗೆ ಸವಾಲ್’ಗಳಂಥ ಹಳೆಯ ಚಿತ್ರಗಳ ಮಾತು ಬಿಡಿ; ಈಚಿನ ಚಿತ್ರಗಳಾದ ‘ಜೀವನ ಚೈತ್ರ’, ‘ಆಕಸ್ಮಿಕ’, ‘ಒಡಹುಟ್ಟಿದವರು’ ಚಿತ್ರಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳೋಣ. ಈ ಚಿತ್ರಗಳ ಕಾರಣವಾಗಿ, ಯಾವುದೋ ಊರಿನ ಒಡೆದ ಅಣ್ಣತಮ್ಮಂದಿರ ಮನಸ್ಸುಗಳು ಒಂದಾಗಿವೆ. ವೃದ್ಧ ತಾಯಿಗೆ ಮಕ್ಕಳ ಪ್ರೀತಿ ಮರಳಿ ದೊರಕಿದೆ. ಕುಟುಂಬದ ಹಿರೀಕ ಸಾರಾಯಿ ಪಾಕೀಟು ಬಿಸಾಕಿ ಕುಟುಂಬದ ನೊಗಕ್ಕೆ ಹೆಗಲು ಕೊಟ್ಟಿದ್ದಾನೆ. ಸಿನಿಮಾ ಅಷ್ಟೇ ಅಲ್ಲ.  ಗೋಕಾಕ್ ಚಳುವಳಿಯಿಂದ ಹಿಡಿದು, ‘ಕನ್ನಡ ಸಿನಿಮಾ ಉಳಿಸಿ’ ಚಳುವಳಿಯವರೆಗೆ ರಾಜ್ ಕನ್ನಡದ ಹೆಸರಿನಲ್ಲಿ ಅನೇಕ ಬಾರಿ ಬೀದಿಗಿಳಿದಿದ್ದಾರೆ. ಅವರು ಬಯಲಿಗೆ ಬಂದಾಗಲೆಲ್ಲ ಸಾವಿರಾರು ಜನ ಅವರ ಬೆನ್ನಿಗೆ ನಿಂತಿದ್ದಾರೆ.

ಸಿನಿಮಾ ಮೂಲಕ ಕನ್ನಡ ಪ್ರಜ್ಞೆಯ ತಿದಿ ಒತ್ತುವಲ್ಲಿ ರಾಜ್ ಅವರದ್ದು ಮೇಷ್ಟ್ರು ಕೆಲಸ. ತಮ್ಮ ಸ್ವಚ್ಚ ಕನ್ನಡ ಉಚ್ಛಾರದ ಮೂಲಕ ಸಾವಿರಾರು ಅಭಿಮಾನಿಗಳ ನಾಲಗೆ ತಿದ್ದಿದವರು ಅವರು ‘ಇಗೋ ಕನ್ನಡದ’ದ ಪ್ರೊ.ವೆಂಕಟ್ಟಸುಬ್ಬಯ್ಯನವರು ಪ್ರಜ್ಞಾಪೂರ್ವಕ ಮಾಡುತ್ತಿರುವ ನುಡಿ ಹದಗೊಳಿಸುವ ಕೆಲಸವನ್ನು ರಾಚ್  ಅಪ್ರಜ್ಞಾಪೂರ್ವಕವಾಗಿ ಮಾಡಿದ್ದಾರೆ.

ಕನ್ನಡೇತರ ಸಿನಿಮಾಗಳಲ್ಲಿ ನಟಿಸದ ಅವರ ನಿರ್ಧಾರ, ಅಶ್ಲೀಲ ಹಾಗೂ ಹಿಂಸೆಯ ದೃಶ್ಯಗಳಲ್ಲಿ ನಟಿಸದ ಅವರ ಬದ್ದತೆ ಕೂಡ ಆಧುನಿಕ ಸಂದರ್ಭದಲ್ಲಿ ಅವಾಸ್ತವಿಕವಾಗಿಯೇ ಕಾಣುತ್ತದೆ. ಕನ್ನಡ ಚಿತ್ರಗಳಿಗೆ ಸೀಮಿತವಾದ ರಾಜ್ ನಿಲುವು ಕನ್ನಡ ಚಿತ್ರದ ಮಾರುಕಟ್ಟೆ ವಿಸ್ತರಿಸಿತು. ನಟನೆಯ ಕುರಿತ ಅವರ ಬದ್ದತೆ ಸಿನಿಮಾ ಹಾಗೂ ಸಮಾಜದ ಆದರ್ಶಗಳ ನಡುವಣ ಗೆರೆಯನ್ನು ಕಡಿಮೆ ಮಾಡಿತು. ರಾಜಕುಮಾರನಂಥ ಮಗನಿರಲಿ, ಸಂಗಾತಿಯಿರಲಿ, ಸಖನಿರಲಿ ಎಂದು ಅನೇಕರು ಹಂಬಲಿಸಿದ್ದಲ್ಲಿ ಅದಕ್ಕೆ ಈ ಬದ್ದತೆಯೇ ಕಾರಣ.

ಮತ್ತೆ ಅಪ್ಪ ನೆನಪಾಗುತ್ತಾರೆ. ರಾಜಕುಮಾರ್ ಮೂಲಕ ಅಪ್ಪ ತನ್ನ ಮಕ್ಕಳಿಗೆ ಪಾಠ ಹೇಳಿದರು. ನಮಗೆ ಅಂಥ ಅವಕಾಶ ಎಲ್ಲಿದೆ? ‘ಇವರನ್ನು ನೋಡಿ  ಕಲಿಯಿರಿ’ ಎಂದು ಮಕ್ಕಳಿಗೆ ಯಾವ ಕಲಾವಿದರನ್ನು ತೋರುವುದು? ಕಾಲ ಕೆಟ್ಟು ಹೋಯಿತು ಎನ್ನುವ ಅಳಲು ನೂರಕ್ಕೆ ನೂರು ಕ್ಲೀಷೆಯಲ್ಲ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕನಸು
Next post ಮಿಲನ

ಸಣ್ಣ ಕತೆ

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

cheap jordans|wholesale air max|wholesale jordans|wholesale jewelry|wholesale jerseys