ಕುಸಿತ ತಡೆದ ಮಹಾತ್ಮ ಪಿಕ್ಚರ್‍ಸ್

ಕುಸಿತ ತಡೆದ ಮಹಾತ್ಮ ಪಿಕ್ಚರ್‍ಸ್

ಅಧ್ಯಾಯ ಐದು

ಕುಸಿತ ತಡೆದ ಮಹಾತ್ಮ ಪಿಕ್ಚರ್‍ಸ್

ಕನ್ನಡ ಚಿತ್ರರಂಗವೇನೋ ಪ್ರಾರಂಭವಾಯಿತು. ಪ್ರಯೋಗಗಳೂ ನಡೆದವು. ಆದರೆ ವೇಗವನ್ನು ಗಳಿಸಿಕೊಳ್ಳಲಿಲ್ಲ. ಇತರ ಭಾಷೆಗಳಲ್ಲಿ- ಮುಖ್ಯವಾಗಿ ಹಿಂದಿ, ತೆಲುಗು ಮತ್ತು ತಮಿಳು ಚಿತ್ರರಂಗ- ಕಂಡುಬಂದ ಚಿತ್ರ ನಿರ್ಮಾಣ ಸಾಹಸಿಗಳು ಇಲ್ಲಿ ಹುಟ್ಟಿಕೊಳ್ಳಲಿಲ್ಲ. ಗುಬ್ಬಿ ಕಂಪನಿ ಮತು ಶ್ರೀ ಸಾಹಿತ್ಯ ಸಮ್ರಾಜ್ಯ ಮಂಡಳಿಯ ಒಡೆಯರನ್ನು ಬಿಟ್ಟರೆ, ಕನ್ನಡ ಚಿತ್ರೋದ್ಯಮಕ್ಕೆ ನಿರ್ಮಾಪಕರಾಗಿ ಬಂದವರು ಬಹುಪಾಲು ಕನ್ನಡೇತರರೇ! ಕನ್ನಡದ ಮಾರುಕಟ್ಟೆ ಮಿತಿಗೊಳಪಟ್ಟಿತ್ತು. ಪ್ರೇಕ್ಷಕರ ಕೊರತೆಯಿತ್ತು. ಇತರ ಭಾಷೆಯ ಚಿತ್ರಗಳನ್ನು ಮೆಚ್ಚಿ ನೋಡುತ್ತಿದ್ದ ನಗರ, ಪಟ್ಟಣದ ಪ್ರೇಕ್ಷಕರಿಗೆ ಕನ್ನಡ ಚಿತ್ರಗಳ ಬಗ್ಗೆ ಉಪೇಕ್ಷೆಯಿತ್ತು. ಹಳ್ಳಿಯ ಕನ್ನಡಿಗರಿಗೆ ಕನ್ನಡ ಚಿತ್ರಗಳನ್ನು ಮುಟ್ಟಿಸುವ ಸೌಲಭ್ಯವಿರಲಿಲ್ಲ. ನಿಜವಾದ ಕನ್ನಡ ಪ್ರೇಕ್ಷಕರು ಇನ್ನೂ ತಯಾರಾಗಿರಲಿಲ್ಲ. ಇಂಥ ಚಿತ್ರರಂಗವನ್ನು ಆರಂಭದಲ್ಲಿ ದೊಡ್ಡ ಮಟ್ಟದಲ್ಲಿ ಮುನ್ನಡೆಸಿ ಕುಸಿತದಿಂದ ಪಾರು ಮಾಡಿದ್ದು ‘ಮಹಾತ್ಮ ಪಿಕ್ಚರ್‍ಸ್’ ಎಂಬ ಸಂಸ್ಥೆ.

ಕನ್ನಡ ಚಿತ್ರೋದ್ಯಮ ಅನೇಕ ವಿಧದಲ್ಲಿ ‘ಮಹಾತ್ಮ ಪಿಕ್ಚರ್ಸ್’ಗೆ ಋಣಿಯಾಗಿದೆ. ಅದು ಕುಸಿಯುತ್ತಿದ್ದ ಕನ್ನಡ ಚಿತ್ರೋದ್ಯಮಕ್ಕೆ ಪ್ರಾಣವಾಯು ತುಂಬಿದ ಸಂಸ್ಥೆ. ನಮ್ಮ ಸೀಮಿತ ಮಾರುಕಟ್ಟೆಗೆ ಅನುಗುಣವಾಗಿ ಮಿತವ್ಯಯದಲ್ಲಿ ಚಿತ್ರ ನಿರ್ಮಿಸುವ ಶಿಸ್ತನ್ನು ಅದು ರೂಢಿಸಿತು. ಕನ್ನಡ ನಾಡಿನಲ್ಲೇ ಚಲನಚಿತ್ರೋದ್ಯಮವನ್ನು ನೆಲೆಗೊಳಿಸಲು ಪ್ರಯತ್ನಿಸಿತು. ಲಾಭ ನಷ್ಟಗಳ ತಃಖ್ತೆ ನೋಡದೆ ನಿಯತವಾಗಿ ಚಿತ್ರಗಳನ್ನು ನಿರ್ಮಿಸಿ ಬಿಡುಗಡೆಗೆ ಹೊಸ ಮಾರ್ಗಗಳನ್ನು ಅನ್ವೇಷಿಸಿತು. ಯುಗಧರ್ಮದ ಜನಪ್ರಿಯ ಅಂಶಗಳನ್ನು ಸಿದ್ಧ ಸೂತ್ರದಲ್ಲಿ ಅಳವಡಿಸಿದರೂ, ಪ್ರಯೋಗ ನಡೆಸಲು ಹಿಂಜರಿಯಲಿಲ್ಲ. ಇಂದಿನ ತಲೆಮಾರಿನ ಜನರಿಗೆ ಮರೆತೇ ಹೋಗಿರುವ ‘ಮಹಾತ್ಮ ಪಿಕ್ಚರ್‍ಸ್’ ಕನ್ನಡ ಚಿತ್ರೋದ್ಯಮದ ಪಾಲಿಗೆ ಪ್ರಾತಃಸ್ಮರಣೀಯ ಸಂಸ್ಥೆ.

ಈ ಸಂಸ್ಥೆ ಚಲನಚಿತ್ರ ನಿರ್ಮಾಣಕ್ಕೆ ಇಳಿದದ್ದೇ ಆಕಸ್ಮಿಕವಾಗಿ. ಅರಸೀಕೆರೆಯಲ್ಲಿ ‘ಮಹಾತ್ಮಾ ಟೂರಿಂಗ್ ಟಾಕೀಸ್’ ಮತ್ತು ‘ಜವಾಹರ್ ಟೂರಿಂಗ್ ಟಾಕೀಸ್’ ಎಂಬ ಸಂಚಾರಿ ಚಿತ್ರಮಂದಿರಗಳನ್ನು ಪಾಲುದಾರಿಕೆಯಲ್ಲಿ ಹಲವರು ನಿರ್ವಹಿಸುತ್ತಿದ್ದರು. ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಡಿ.ಶಂಕರ್‌ಸಿಂಗ್ ಆ ಚಿತ್ರಮಂದಿರಗಳ ಪಾಲುದಾರರಲ್ಲೊಬ್ಬರು. ಅದಕ್ಕೆಂದೇ ಅವರು ಚಿತ್ರಮಂದಿರಗಳಿಗೆ ರಾಷ್ಟ್ರನಾಯಕರ ಹೆಸರಿಟ್ಟಿದ್ದರು. ಬಿ.ವಿಠಲಾಚಾರ್ಯ ಮತ್ತು ಜಿ.ಎನ್.ವಿಶ್ವನಾಥಶೆಟ್ಟಿ ಎಂಬುವರು ಇತರ ಪಾಲುದಾರರು. ಆ ವೇಳೆಗೆ ತಯಾರಾಗಿದ್ದ ‘ಸುಭದ್ರ’, ‘ಸದಾರಮೆ, ‘ರಾಧಾರಮಣ’, ‘ಕೃಷ್ಣಸುಧಾಮ’ ಮುಂತಾದ ಚಿತ್ರಗಳು ‘ಫೇಲ್ಯೂರ್’ ಹಣೆಪಟ್ಟಿ ಪಡೆದಿದ್ದವು. ಈ ಸೋತ ಚಿತ್ರಗಳನ್ನು ಕಡಿಮೆ ಬಾಡಿಗೆಗೆ ತಂದು ಪ್ರದರ್ಶಿಸುತ್ತಿದ್ದರು. ದಿನಕ್ಕೆ ಐವತ್ತು ರೂಪಾಯಿ ಬಾಡಿಗೆಗೆ ಪಡೆದ ಚಿತ್ರಗಳು ಒಂದು ದಿನದ ಪ್ರದರ್ಶನದಲ್ಲಿ ಮುನ್ನೂರು ರೂಪಾಯಿ ಗಳಿಸಿಕೊಡುತ್ತಿದ್ದವು. ಹೀಗೆ ಸೋತ ಚಿತ್ರಗಳ ಪ್ರದರ್ಶನದ ಮೂಲಕ ಪಾಲುದಾರರು ಲಾಭ ಮಾಡಿದರು.

ಹೀಗಿರುವಾಗ ೧೯೪೩ರಲ್ಲಿ ಬೆಂಗಳೂರಿನ ಪ್ರಭಾತ್ ಟಾಕೀಸ್ ಮಾರಾಟಕ್ಕೆ ಬಂತು. ಪಾಲುದಾರರು ಅದನ್ನು ಖರೀದಿಸಲು ಬೆಂಗಳೂರಿಗೆ ರೈಲಿನಲ್ಲಿ ಹೊರಟರು. ದಾರಿ ಮಧ್ಯದಲ್ಲಿ ಚಿತ್ರ ನಿರ್ದೇಶಕ ಸಿ.ವಿ.ರಾಜು ಅವರ ಪರಿಚಯವಾಯಿತು. ಅದಾಗಲೇ ಅವರು ‘ಕೃಷ್ಣಲೀಲಾ’ ಚಿತ್ರ ನಿರ್ಮಾಣಕ್ಕೆ ಇಳಿದಿದ್ದರು. ಕನ್ನಾಂಬ, ಬಳ್ಳಾರಿ ಬಸಪ್ಪ, ಕೆಂಪರಾಜ ಅರಸು ಅವರ ತಾರಾಗಣದ ಚಿತ್ರ. ಆ ಚಿತ್ರಕ್ಕೆ ಎಪ್ಪತ್ತೈದು ಸಾವಿರ ತೊಡಗಿಸಿದರೆ ಹಕ್ಕುಗಳನ್ನು ಬಿಟ್ಟುಕೊಡುವುದಾಗಿ ಸಿ.ವಿ.ರಾಜು ಪ್ರಸ್ತಾಪಿಸಿದರು. ಚಿತ್ರ ನಿರ್ಮಾಣದ ಅನುಭವವಿರಲಿಲ್ಲ. ಆದರೂ ಶಂಕರ್‌ಸಿಂಗ್, ವಿಠಲಾಚಾರ್ಯ ಚಿತ್ರ ನಿರ್ಮಾಣಕ್ಕೆ ಇಳಿದರು. ಚಿತ್ರ ಪೂರ್ಣಗೊಳ್ಳುವ ಮೊದಲೇ ನಿಗದಿಪಡಿಸಿದ ಹಣಕ್ಕಿಂತ ಮೂರುಪಟ್ಟು ಹಣ ವೆಚ್ಚವಾದಾಗ ಚಿತ್ರನಿರ್ಮಾಣದಲ್ಲಿ ತಮಗಿದ್ದ ಅನುಭವದ ಕೊರತೆಯನ್ನೆ ಅವರು ಬಂಡವಾಳ ಮಾಡಿಕೊಂಡರು. ಅಂದರೆ ಕನ್ನಡ ಚಿತ್ರಗಳಿಗಿರುವ ಚಿಕ್ಕ ಮಾರುಕಟ್ಟೆಗೆ ತಕ್ಕ ವೆಚ್ಚದಲ್ಲಿ ಚಿತ್ರವನ್ನು ನಿರ್ಮಿಸುವ ಹಾಗೂ ಪ್ರೇಕ್ಷಕರನ್ನು ಸೆಳೆಯುವ ಕಥೆಗಳನ್ನು ಆರಿಸಿಕೊಳ್ಳುವ ನಿಟ್ಟಿನಲ್ಲಿ ಅವರು ಯೋಚಿಸಿ ಚಿತ್ರ ನಿರ್ಮಾಣಕ್ಕಿಳಿದರು. ಮಹಾತ್ಮಾ ಪಿಕ್ಚರ್ಸ್ ಲಾಂಛನದಡಿ ತಯಾರಿಸಿದ ‘ಕೃಷ್ಣಲೀಲಾ’ (೧೯೪೭) ಭಾರಿ ತಾರಾಗಣದ ನಡುವೆಯೂ ನೆಲಕಚ್ಚಿತು.

ಚಿತ್ರ ನಿರ್ಮಾಣ ಕ್ಷೇತ್ರಕ್ಕೆ ಬಂದಾಯಿತು: ಕಳೆದುಕೊಂಡ ಕ್ಷೇತ್ರದಲ್ಲಿ ಮತ್ತೆ ಗಳಿಸುವ ಹಠದೊಡನೆ ಪಾಲುದಾರರು ಮೈಸೂರಿನಲ್ಲಿ ನೆಲೆಯಾದರು. ನವಜ್ಯೋತಿ ಸ್ಟುಡಿಯೋ ಖಾಯಂ ಚಿತ್ರ ನಿರ್ಮಾಣ ಕೇಂದ್ರವಾಯಿತು.

ಮುಂದಿನ ಪ್ರಯತ್ನವಾಗಿ ಡಿ.ಕೆಂಪರಾಜ ಅರಸು ಅವರನ್ನು ನಿರ್ದೇಶಕ, ನಾಯಕರನ್ನಾಗಿಸಿ ‘ಭಕ್ತ ರಾಮದಾಸ’ ತಯಾರಿಸಿದರು. ೧೯೪೮ರಲ್ಲಿ ಬಿಡುಗಡೆಯಾದ ಏಕೈಕ ಚಿತ್ರ ಅದು. ಆದರೂ ಸೋಲುಕಂಡಿತು.

ಎರಡು ಸೋಲಿನಿಂದ ಎದೆಗುಂದದ ಅವರು ಕನ್ನಡದ ಮೊದಲ ಜಾನಪದ ಚಿತ್ರವಾದ ‘ನಾಗಕನ್ನಿಕಾ’ (೧೯೪೯) ತಯಾರಿಸಿದರು. ಚಿತ್ರ ಪ್ರಚಂಡ ಯಶಸ್ಸು ಗಳಿಸಿತು. ಮುಂದೆ ವಾತ್ಸಲ್ಯಮಯಿ ತಾಯಂದಿರ ಪಾತ್ರಗಳಲ್ಲಿ, ಪೋಷೆಕಪಾತ್ರಗಳಲ್ಲಿ ಜನಪ್ರಿಯವಾದ ಜಯಶ್ರೀ ಅವರ ಮೈಮಾಟ ಪ್ರದರ್ಶನ ಚಿತ್ರದ ಹೈಲೈಟ್. ಆ ಕಾಲದ ಪ್ರೇಕ್ಷಕರ ಮೈ ಮನವನ್ನು ಬೆಚ್ಚಗಾಗಿಸಿದ ‘ನಾಗಕನ್ನಿಕಾ’ ಪ್ರಯೋಗವು ಚಿತ್ರವೊಂದರ ಯಶಸ್ಸಿಗೆ ಬೇಕಾದ ‘ಅಂಶ’ವೊಂದನ್ನು ಅನಾವರಣಗೊಳಿಸಿತು.

೧೯೫೦ರಲ್ಲಿ ಯಾವ ಚಿತ್ರವೂ ಬಿಡುಗಡೆಯಾಗಲಿಲ್ಲ. ಆದರೆ ಹಿಂದಿನ ಚಿತ್ರದ ಯಶಸ್ಸಿನ ಎಳೆಯನ್ನೇ ಬಂಡವಾಳ ಮಾಡಿಕೊಂಡ ಮಹಾತ್ಮ ಪಿಕ್ಚರ್‍ಸ್ ‘ಜಗನ್ಮೋಹಿನಿ’ ಚಿತ್ರವನ್ನು ನಿರ್ಮಿಸಿತು. ಈ ಬಾರಿ ಪಾಲುದಾರರಲ್ಲೊಬ್ಬರಾದ ಡಿ.ಶಂಕರ್‌ಸಿಂಗ್ ಪಾಲಿಗೆ ನಿರ್ದೇಶನದ ಹೊಣೆ. ಮದರಾಸಿನಲ್ಲಿ ನಾಟಕ, ಚಿತ್ರಗಳಲ್ಲಿ ಅಭಿನಯಿಸುತ್ತಿದ್ದ ಉಡುಪಿ ಮೂಲದ ಹರಿಣಿ ಚಿತ್ರದ ನಾಯಕಿ. ಬಿಳಿಯುಡುಗೆಯುಟ್ಟು, ನೀರಿನಲ್ಲಿ ನೆನೆದು ಅಂಗಾಂಗ ಪ್ರದರ್ಶನ ಮಾಡಿದ ಹರಿಣಿಯವರ ಮಾದಕತೆಗೆ ಪ್ರೇಕ್ಷಕ ಸಮೂಹ ಹುಚ್ಚೆದ್ದಿತು. ಅದರಿಂದಾಗಿಯೇ ದಾವಣಗೆರೆ ಹಾಗೂ ಉತ್ತರಕರ್ನಾಟಕದ ಕೇಂದ್ರವೊಂದರಲ್ಲಿ ಅದಕ್ಕೆ ಬೆಳ್ಳಿ ಹಬ್ಬದ ಭಾಗ್ಯ. ಮಹಾತ್ಮ ಪಿಕ್ಚರ್ಸ್‌ಗೆ ಆರ್ಥಿಕ ಬಲವನ್ನು ಈ ಎರಡೂ ಚಿತ್ರಗಳು ನೀಡಿದ್ದರಿಂದ ಮುಂದೆ ಸಾಲು ಸಾಲೇ ಚಿತ್ರ ನಿರ್ಮಾಣಗೊಂಡವು. ಬಿ.ವಿಠಲಾಚಾರ್ಯ ಮತ್ತು ಶಂಕರ್‌ಸಿಂಗ್‌ರವರು ಸರದಿಯ ಮೇಲೆ ಚಿತ್ರ ನಿರ್ದೇಶಿಸತೊಡಗಿದರು.

೧೯೫೨ರಲ್ಲಿ ಬಿ.ವಿಠಲಾಚಾರ್ಯ ನಿರ್ದೇಶನದಲ್ಲಿ ‘ಶ್ರೀನಿವಾಸ ಕಲ್ಯಾಣ’ ಚಿತ್ರ ತೆರೆಕಂಡಿತು. ಆ ವರ್‍ಷ ತೆರೆಕಂಡ ಏಕೈಕ ಚಿತ್ರವದು. ೧೯೫೩ರಲ್ಲಿ ತೆರೆಕಂಡ ಒಟ್ಟು ಆರು ಚಿತ್ರಗಳಲ್ಲಿ ಮಹಾತ್ಮಾ ಪಿಕ್ಚರ್ಸ್ ಮೂರು ಚಿತ್ರಗಳನ್ನು ನಿರ್ಮಿಸಿತು.

ವಿಠಲಾಚಾರ್ಯ ನಿರ್ದೇಶನದ ‘ಸೌಭಾಗ್ಯಲಕ್ಷ್ಮಿ’ (೧೯೫೩) ಮತ್ತು ಶಂಕರ್‌ಸಿಂಗ್ ನಿರ್ದೇಶನದ ‘ದಳ್ಳಾಳಿ’ (೧೯೫೩) ಯಶಸ್ಸು ಕಂಡರೆ ‘ಚಂಚಲಕುಮಾರಿ’ ಸೋಲುಂಡಿತು. ಕೊನೆಯ ಚಿತ್ರದ ನಿರ್ಮಾಣದ ಸಮಯದಲ್ಲಿ ಬಿ.ವಿಠಲಾಚಾರ್ಯ ಮತ್ತು ಶಂಕರ್‌ಸಿಂಗ್ ಬೇರೆಬೇರೆಯಾದರು. ಮಹಾತ್ಮ ಪಿಕ್ಚರ್ಸ್ ಮುನ್ನಡೆಸುವ ಹೊಣೆ ಶಂಕರ್‌ಸಿಂಗ್ ಅವರ ಪಾಲಿಗೆ ಬಂತು.

ಮಹಾತ್ಮಾ ಪಿಕ್ಚರ್ಸ್ ತೊರೆದ ನಂತರ ವಿಠಲಾಚಾರ್ಯ ಅವರು ವಿಠಲ್ ಮೂವೀಸ್ ಸಂಸ್ಥೆ ಹುಟ್ಟು ಹಾಕಿ ‘ಕನ್ಯಾದಾನ’ ಮತ್ತು ‘ರಾಜಲಕ್ಷ್ಮಿ’ (೧೯೫೪) ನಿರ್ಮಿಸಿ ನಿರ್ದೇಶಿಸಿ ಯಶಸ್ಸು ಕಂಡರು. ಅನಂತರ ‘ಮುತ್ತೈದೆ ಭಾಗ್ಯ’ (೧೯೫೬), ‘ಮನೆಗೆ ಬಂದ ಮಹಾಲಕ್ಷ್ಮಿ’ (೧೯೫೯) ನಿರ್ಮಿಸಿ ನಿರ್ದೇಶಿಸಿದರು. ಆ ವೇಳೆಗೆ ತೆಲುಗು ಚಿತ್ರರಂಗದಲ್ಲಿ ನೆಲೆಯನ್ನು ಕಂಡುಕೊಂಡ ವಿಠಲಾಚಾರ್ಯರವರು ೧೯೬೨ರಲ್ಲಿ ನಿರ್ದೇಶಿಸಿದ ರಾಜ್ ತಾರಾಗಣದಲ್ಲಿದ್ದ ‘ವೀರಕೇಸರಿ’ ಅಭೂತಪೂರ್ವ ಜನಪ್ರಿಯತೆ ಪಡೆಯಿತು. ಅನಂತರ ಅವರು ಸುಮಾರು ನಾಲ್ಕು ದಶಕಗಳ ಕಾಲ ಕನ್ನಡ ಚಿತ್ರರಂಗದತ್ತ ತಲೆಹಾಕಲಿಲ್ಲ.

ಇತ್ತ ಡಿ.ಶಂಕರ್‌ಸಿಂಗ್‌ರವರು ಚಿತ್ರ ನಿರ್ಮಾಣವನ್ನು ಮುಂದುವರೆಸಿದರು. ಅವರು ಕನ್ನಡ ಚಿತ್ರೋದ್ಯಮಕ್ಕೆ ಅಪೂರ್ವ ಶಿಸ್ತು ತಂದವರು. ಚಿತ್ರೋದ್ಯಮ ನಮ್ಮ ನಾಡಿನಲ್ಲೇ ನೆಲೆಗೊಳ್ಳಲು ಬೀಜ ಹಾಕಿದ ಮಹಾನುಭಾವರು. ಸ್ಥಳೀಯ ಕಲಾವಿದರು, ತಂತ್ರಜ್ಞರನ್ನು ಬಳಸಿ ಮತ್ತು ಸ್ಥಳೀಯ ಲೊಕೇಷೆನ್‌ಗಳಲ್ಲೇ ಚಿತ್ರ ನಿರ್ಮಿಸಿದರು. ಮೈಸೂರಿನ ನವಜ್ಯೋತಿ ಸ್ಟುಡಿಯೋ ಮುಚ್ಚಿದಾಗ ಚಿತ್ರ ನಿರ್ಮಾಣವನ್ನು ಪ್ರಿಮಿಯರ್ ಸ್ಟುಡಿಯೋಸ್‌ಗೆ ವರ್ಗಾಯಿಸಿದರು. ಚಿತ್ರೋದ್ಯಮ ಇಲ್ಲಿಯೇ ನೆಲೆಯೂರಲು ಪ್ರೋತ್ಸಾಹಧನ ನೀಡುವ ಯೋಜನೆಗೆ ಸರ್ಕಾರಕ್ಕೆ ಸಲಹೆ ನೀಡಿದವರಲ್ಲಿ ಅವರು ಪ್ರಮುಖರು.

ಚಲನಚಿತ್ರರಂಗಕ್ಕೆ ಅಪರಿಚಿತರಾಗಿಯೇ ಬಂದರೂ ಶಂಕರ್ ಸಿಂಗ್‌ರವರು ಕ್ರಮೇಣ ಚಿತ್ರಕತೆ ರಚನೆ, ಚಿತ್ರೀಕರಣ, ಮಿಕ್ಸಿಂಗ್, ಎಡಿಟಿಂಗ್, ಸಂಗೀತ ಅಳವಡಿಕೆಯ ಕೌಶಲ್ಯಗಳನ್ನು ಕಲಿತು ಕರಗತ ಮಾಡಿಕೊಂಡರು. ಆ ಅನುಭವದ ಹಿನ್ನೆಲೆಯಲ್ಲಿ ಮಿತವ್ಯಯದ ಚಿತ್ರಗಳನ್ನು ತಯಾರಿಸುವ ನೈಪುಣ್ಯ ದಕ್ಕಿಸಿಕೊಂಡರು. ಹೊರಾಂಗಣಕ್ಕೆ ಕರ್ನಾಟಕದ ಉತ್ತಮ ಪರಿಸರಗಳನ್ನು ಹುಡುಕಿದರು. ಮೈಸೂರು, ತಲಕಾಡು, ಗೋಕರ್ಣ, ಕಾರವಾರದ ಪರಿಸರಗಳು ಥಿಯೇಟರ್‌ನಲ್ಲಿ ಕಾಣಿಸಿಕೊಂಡಾಗ ಪ್ರೇಕ್ಷಕರಿಗೆ ರೋಮಾಂಚನ! ಒಂದು ಬಗೆಯ ‘ಸ್ಥಳೀಯತೆ ಅವರ ಚಿತ್ರಗಳಲ್ಲಿತ್ತು. ಅಲ್ಪ ಹಣದಲ್ಲೇ ಸಾಲುಸಾಲು ಚಿತ್ರ ನಿರ್ಮಿಸುತ್ತಿದ್ದ ಶಂಕರ್‌ಸಿಂಗ್‌ರವರನ್ನು ಉದ್ಯಮದ ಜನ ‘ಶಂಕರ್‌ಸಿಂಗ್ ಟೆಕ್ನಿಕ್’, ‘ಮೈಸೂರಿನ ಎಂ.ಜಿ.ಎಂ’ ಎಂದು ಹಾಸ್ಯ ಮಾಡುತ್ತಿದ್ದರಂತೆ!

ಕನ್ನಡ ಚಿತ್ರರಂಗದ ಮಾರುಕಟ್ಟೆಯ ಮಿತಿಯನ್ನು ಬಲ್ಲ ಡಿ.ಶಂಕರ್‌ಸಿಂಗ್‌ರವರಿಗೆ ಅಪಾರವಾದ ವ್ಯಾವಹಾರಿಕ ಜ್ಞಾನ ಮತ್ತು ವಾಸ್ತವದ ಅರಿವಿತ್ತು. ಹಾಗೆ ನೋಡಿದರೆ ತಮ್ಮ ಪಾಲುದಾರ ಬಿ.ವಿಠಲಾಚಾರ್ಯ ಅವರು ಪ್ರತ್ಯೇಕವಾದರೂ ಡಿ.ಶಂಕರ್‌ಸಿಂಗ್ ಅವರು ಒಟ್ಟು ೪೮ ಚಿತ್ರಗಳ ನಿರ್ಮಾಣಗಳಲ್ಲಿ ತೊಡಗಿಸಿಕೊಂಡಿದ್ದರೆಂದು ಅವರ ಪುತ್ರ ಎಸ್.ವಿ.ರಾಜೇಂದ್ರಸಿಂಗ್ (ಬಾಬು) ಒಂದೆಡೆ ದಾಖಲಿಸಿದ್ದಾರೆ.

ಡಿ.ಶಂಕರ್‌ಸಿಂಗ್‌ರವರು ತಮ್ಮ ಮತ್ತೊಬ್ಬ ಪುತ್ರ ಸಂಗ್ರಾಮ್ ಅವರನ್ನು ನಾಯಕನನ್ನಾಗಿಸಿ ತೆಗೆದ ‘ಬಂಗಾರದ ಕಳ್ಳ’ (೧೯೭೩) ಅವರ ನಿರ್ದೇಶನದ ಕೊನೆಯ ಚಿತ್ರ. ೧೯೭೫ರಲ್ಲಿ ಬಿಡುಗಡೆಯಾದ ಎಸ್.ವಿ.ರಾಜೇಂದ್ರಸಿಂಗ್ ನಿರ್ದೇಶನದ ‘ನಾಗಕನ್ಯಾ’ (೧೯೭೫) ಮಹಾತ್ಮಾ ಪಿಕ್ಚರ್ಸ್ ಲಾಂಛನದಡಿ ತಯಾರಾದ ಕೊನೆಯ ಚಿತ್ರ. ವಿಷ್ಣುವರ್ಧನ್, ಭವಾನಿ ಅಭಿನಯದ ಈ ಚಿತ್ರ ಹಿಂದಿನ ಅವರ ‘ನಾಗಕನ್ನಿಕ’ ಚಿತ್ರದ ಮರುರೂಪ.

ಶಂಕರ್‌ಸಿಂಗ್-ವಿಠಲಾಚಾರ್ಯ ಜೋಡಿ ಚಲನಚಿತ್ರಗಳಿಗೆ ಗಳಿಕೆಯ ದೃಷ್ಟಿಯಿಂದ ‘ಗ್ಲಾಮರ್’ ಪರಿಚಯಿಸಿದ್ದು ಮಾತ್ರವಲ್ಲ ಪ್ರೇಕ್ಷಕರಿಗೆ ಸಾಮಾಜಿಕ ಅನಿಷ್ಟಗಳ ಬಗ್ಗೆ ‘ತಿಳಿ’ ಹೇಳುವ ಚಿತ್ರಗಳನ್ನೂ ನಿರ್ಮಿಸಿದ್ದು ವಿಶೇಷ. ಸಾಮಾಜಿಕ ಚಿತ್ರಗಳಲ್ಲಿ ಒಂದು ಸಂದೇಶ ಇರಬೇಕಾದದ್ದು ಅನಿವಾರ್ಯ ಎಂಬಂತೆ ಅದನ್ನು ಪಾಲಿಸಿದ್ದರು. ಆದರೆ ಅದು ಹೆಚ್ಚು ವಾಚಾಳಿಯಾಗಿರುತ್ತಿತ್ತು. ಶಂಕರ್‌ಸಿಂಗ್ ನಿರ್ದೇಶಿಸಿದ ಚಂಚಲ ಕುಮಾರಿ, ದಳ್ಳಾಳಿ (೧೯೫೩), ಮುಟ್ಟಿದ್ದೆಲ್ಲ ಚಿನ್ನ, ಮಾಡಿದ್ದುಣ್ಣೋ ಮಹರಾಯ (೧೯೫೪) ಹಾಗೂ ಆಷಾಡ ಭೂತಿ ಕ್ರಮವಾಗಿ ಹೆಣ್ಣಿನ ಶೀಲ, ಭ್ರಷ್ಟಾಚಾರ, ಹಣದ ಮಹತ್ವ, ಅನೀತಿ ತರುವ ಅನಿಷ್ಟ, ಕಳ್ಳತನದ ಕುರೂಪ ಮತ್ತು ವರದಕ್ಷಿಣೆ ಪಿಡುಗನ್ನು ಕುರಿತ ಚಿತ್ರಗಳು. ಬಿ. ವಿಠಲಾಚಾರ್ಯ ಅವರೂ ಸೌಭಾಗ್ಯಲಕ್ಷ್ಮಿ, ಕನ್ಯಾದಾನ, ಮುತ್ತೈದೆ ಭಾಗ್ಯ ಮುಂತಾದ ಚಿತ್ರಗಳಲ್ಲೂ ಇದೇ ಸಾಮಾಜಿಕ ನೀತಿಯನ್ನು ಮಂಡಿಸಿದರು. ಆದರೆ ಇವರಿಬ್ಬರ ಎಲ್ಲಾ ಚಿತ್ರಗಳಿಗಿಂತಲೂ ‘ಭಕ್ತಚೇತ’ ನಿರೂಪಣೆಯಲ್ಲಿ ಭಿನ್ನವಾದ ಚಿತ್ರ. ಭಕ್ತಿಪ್ರಧಾನವಾದ ಬೇಡರ ಕಣ್ಣಪ್ಪ, ಭಕ್ತ ಕನಕದಾಸ ಚಿತ್ರಗಳಷ್ಟೆ ಸೂಕ್ಷ್ಮವಲ್ಲದಿದ್ದರೂ ಭಕ್ತಚೇತ ಅಸ್ಪೃಶ್ಯತೆಯನ್ನು ಕುರಿತ ಮೊದಲ ಪ್ರಧಾನ ಚಿತ್ರವಾಗಿ ಗಮನ ಸೆಳೆಯುತ್ತದೆ. ಜೊತೆಗೆ ಅದರ ಮಹತ್ತ್ವಕ್ಕೂ ಒಂದು ಹಿನ್ನೆಲೆಯಿದೆ.

ಚಲನಚಿತ್ರಗಳನ್ನು ಸಾಮಾಜಿಕ ಪ್ರತಿಭಟನೆಯ ಅಸ್ತ್ರವಾಗಿ ಮತ್ತು ಸಾಮಾಜಿಕ ಪರಿವರ್ತನೆಯ ಮಾಧ್ಯಮವಾಗಿ ಮೊದಲು ಬಳಕೆಗೆ ತಂದವರು ತಮಿಳು ನಿರ್ಮಾಪಕ ಕೆ. ಸುಬ್ರಮಣಿಯಂ ಅವರು. ೧೯೩೦ ಮತ್ತು ೪೦ರ ದಶಕದಲ್ಲೇ ಅವರು ಸಾಮಾಜಿಕ ಅನಿಷ್ಟಗಳ ವಿರುದ್ಧ ಸಮರ ಸಾರಿದ್ದರು. ಅವರು ನಿರ್ಮಿಸಿದ ಬಾಲಯೋಗಿನಿ (೧೯೩೬) ಬಾಲವಿಧವೆಯ ಬದುಕು ಮತ್ತು ಪುನರ್‌ವಿವಾಹವನ್ನು ಪ್ರಚಾರಪಡಿಸುವ ಚಿತ್ರವಾದರೆ ಭಕ್ತಚೇತ (೧೯೩೮) ಅಸ್ಪೃಶ್ಯತೆಯನ್ನು ಖಂಡಿಸುವ ಶಕ್ತಿಶಾಲಿ ಚಿತ್ರವೆನಿಸಿತ್ತು. ಸಂಪ್ರದಾಯನಿಷ್ಟರು ತಮಿಳು ‘ಭಕ್ತಚೇತ’ ಚಿತ್ರದ ನಿಷೇಧಕ್ಕೆ ಮಧುರೈ ನ್ಯಾಯಾಲಯವನ್ನು ಮೊರೆ ಹೊಕ್ಕಿದ್ದರು. ತ್ಯಾಗಭೂಮಿ ಮತ್ತು ಕಚದೇವಯಾನಿ (೧೯೩೯) ಚಿತ್ರಗಳು ಮಹಿಳಾ ಹಕ್ಕುಗಳು ಹಾಗೂ ಅವರ ಸ್ವಾವಲಂಬನೆಯನ್ನು ಕುರಿತ ಪ್ರಯೋಗಗಳಾಗಿದ್ದವು.

‘ಭಕ್ತಚೇತ’ ಸಂಪ್ರದಾಯ ವಿರೋಧಿ ಚಿತ್ರವೆಂದು ಖ್ಯಾತವಾಗಿದ್ದರೂ ಶಂಕರ್‌ಸಿಂಗ್ ಅದನ್ನು ವೆಂಕಟೇಶ್ವರ ಪ್ರೊಡಕ್ಷನ್ಸ್ ಲಾಂಛನದಡಿ ನಿರ್ಮಿಸಿದರು. ನಿರ್ದೇಶನದ ಹೊಣೆ ಹೊತ್ತವರು ಎಂ.ಬಿ. ಗಣೇಶ್‌ಸಿಂಗ್ (ಇವರ ಬಗ್ಗೆ ಹೆಚ್ಚಿನ ಮಾಹಿತಿ ದೊರೆಯದು). ಚಪ್ಪಲಿ ಹೊಲೆಯುವ ಕಾಯಕದ ಚೇತನೆಂಬ ಹರಿಭಕ್ತನೊಬ್ಬನು ಮಾನವ ನಿರ್ಮಿತ ಕಟ್ಟುಪಾಡುಗಳು ತಂದೊಡ್ಡುವ ಸಮಸ್ಯೆಗಳಿಗೆ ಸಿಲುಕಿ ಕೊನೆಗೆ ಹರಿಯ ಕರುಣೆಯಿಂದ ಲೋಕ ಮನ್ನಣೆ ಗಳಿಸಿಕೊಳ್ಳುವುದೇ ಚಿತ್ರದ ಕಥಾವಸ್ತು.

ಸಂಭಾಷೆಣೆ ಬರೆದಿರುವ ಹುಣಸೂರು ಕೃಷ್ಣಮೂರ್ತಿಗಳು ಚೇತನನ್ನು ಸಾಮಾಜಿಕ ಅನಿಷ್ಟಗಳನ್ನು ಹಾಗೆಯೇ ಸ್ವೀಕರಿಸಿ ಮನಗೆಲ್ಲುವ ಭಕ್ತನಂತೆ ರೂಪಿಸಿಲ್ಲ. ತನ್ನ ಸಹನೆ ಮುಗಿದ ನಂತರ ಆತ ಪ್ರಭುತ್ವಕ್ಕೆ ಸವಾಲೆಸೆಯುತ್ತಾನೆ. ಬ್ರಾಹ್ಮಣ್ಯ ಮತ್ತು ಪ್ರಭುತ್ವ ಹೇರಿರುವ ಸಂಕಲೆಗಳ ಬಗ್ಗೆ ಸ್ಪಷ್ಟ ಮಾತಿನಲ್ಲೇ ಪ್ರತಿಭಟಿಸುತ್ತಾನೆ. ಸಂಪ್ರದಾಯ ಉಲ್ಲಂಘನೆಯು ನೀಡುವ ಶಿಕ್ಷೆಯ ಅರಿವಿದ್ದೂ ಚೇತ ಸ್ಫೋಟಿಸುತ್ತಾನೆ. ಚಿತ್ರದ ಕೊನೆಯ ಭಾಗವಂತೂ ಚೇತನ ಬಂಡಾಯಕ್ಕೆ ಸಂಬಂಧಿಸಿದ್ದಾಗಿದೆ. ಆರಂಭದಲ್ಲಿ ಮುಟ್ಟಬೇಡಿ, ನಾನು ಹೊಲೆಯ ಎಂದು ತಾನೇ ದೂರ ಸರಿಯುವ ಚೇತ ಕೊನೆಯಲ್ಲಿ (ನಾನು) ಕೀಳು ಕುಲದವನಲ್ಲವೇ? ಭಗವಂತನ ಅನುಗ್ರಹವನ್ನು ಮೇಲ್ಜಾತಿಯವರು ಸಹಿಸಲಾರರು ಎಂದು ಕಪಾಳಕ್ಕೆ ಹೊಡೆಯುವಂತೆ ತಿರುಗೇಟು ನೀಡುತ್ತಾನೆ. ಹೀನ ಜಾತಿಯಲ್ಲಿ ಹುಟ್ಟಿದ ಮಾತ್ರಕ್ಕೆ ಉತ್ತಮನಾಗಲು ಯತ್ನಿಸಬಾರದೆ? ಎಂದು ಸಾಮಾಜಿಕ ಕಟ್ಟುಪಾಡುಗಳನ್ನು ಪ್ರಶ್ನಿಸುತ್ತಾನೆ. ಇದಲ್ಲದೆ ಚೇತನ ಹೆಂಡತಿಯೂ ರಾಜ ಮತ್ತು ಪುರೋಹಿತರ ವಿರುದ್ಧ ದನಿಯೆತ್ತುತ್ತಾಳೆ. ನಿರಪರಾಧಿಗೆ ಶಿಕ್ಷೆ ವಿಧಿಸುವ ರಾಜನನ್ನು ದೊರೆಯೆನ್ನಬೇಕೋ? ಭೂಮಿಗೆ ಹೊರೆಯೆನ್ನ ಬೇಕೋ? ಎಂದು ಸಿಡಿದು ನಿಲ್ಲುತ್ತಾಳೆ. ಮುಖ್ಯವಾಗಿ ಹೀನ ಜಾತಿಯವರು ಉತ್ತಮ ಜಾತಿಯವರ ಕಟ್ಟಳೆಗಳನ್ನು ಅನುಸರಿಸಿದರೆ ಅದು ಪ್ರಭುತ್ವ ಮತ್ತು ಪುರೋಹಿತಶಾಹಿಯ ವಿರುದ್ಧದ ವಿಪ್ಲವವೆಂದು ಸಂಪ್ರದಾಯ ಸಮಾಜ ಪರಿಭಾವಿಸಿದ್ದನ್ನು ಈ ಚಿತ್ರ ಸೂಚ್ಯವಾಗಿ ಹೇಳಲು ಪ್ರಯತ್ನಿಸಿದೆ. ಅಂಥ ವಿಪ್ಲವ ಅಗ್ನಿಯು ಕಿಡಿಯಾಗಿರುವಾಗಲೇ ನಂದಿಸುವುದು ರಾಜನ ಕರ್ತವ್ಯವೆಂಬಂತೆ ಪುರೋಹಿತಶಾಹಿ ಹೀನಕುಲದ ಭಕ್ತನ ವಿಕಾಸವನ್ನು ತಡೆಯಲೆತ್ನಿಸುತ್ತದೆ. ಹಾಗಾಗಿ ಡಿ.ಶಂಕರ್‌ಸಿಂಗ್ ಅವರು ತೊಡಗಿಸಿಕೊಂಡ ಚಿತ್ರಗಳಲ್ಲೇ ಇದು ತುಸು ಭಿನ್ನವಾಗಿ ಗಮನಸೆಳೆಯುತ್ತದೆ.

ಕನ್ನಡ ಚಿತ್ರರಂಗಕ್ಕೆ ಆರಂಭದ ದಿನಗಳಲ್ಲಿ ಒಳಬಲವನ್ನು ತಂದುಕೊಟ್ಟ ಮಹಾತ್ಮಾ ಪಿಕ್ಚರ್ಸ್ ಕಾಲಧರ್ಮಕ್ಕನುಗುಣವಾಗಿ ನೇಪಥ್ಯಕ್ಕೆ ಸರಿದರೂ, ಅವರ ಕುಟುಂಬದ ಅನೇಕ ಶಾಖೆಗಳು ಇಂದಿಗೂ ಚಿತ್ರರಂಗದಲ್ಲಿ ಸಕ್ರಿಯವಾಗಿವೆ. ಎಲ್ಲಕ್ಕಿಂತಲೂ ಮುಖ್ಯವಾಗಿ ಮಹಾತ್ಮ ಪಿಕ್ಚರ್ಸ್ ಸಂಸ್ಥೆಯು ಪರಿಚಯಿಸಿದಷ್ಟು ಕಲಾವಿದರು, ತಂತ್ರಜ್ಞರು, ಸಾಹಿತಿಗಳು ಮತ್ತೆ ಯಾವ ಸಂಸ್ಥೆಗೂ ಆ ಮಟ್ಟದಲ್ಲಿ ಸಾಧ್ಯವಾಗಲಿಲ್ಲವೆನ್ನುವುದು ದಾಖಲಾಗಬೇಕಾದ ಸಂಗತಿ. (ಸೈಡ್ ರೀಲ್ ನೋಡಿ).

ಸೈಡ್ ರೀಲ್

ಮಹಾತ್ಮಾ ಪಿಕ್ಚರ್ಸ್ ಅನೇಕ ಸ್ವಾರಸ್ಯಕರ ಕತೆಗಳನ್ನು ತನ್ನ ಒಡಲಲ್ಲಿಟ್ಟುಕೊಂಡಿದೆ. ಶಂಕರಸಿಂಗ್ ಮತ್ತು ಬಿ. ವಿಠಲಾಚಾರ್ಯ ಜೋಡಿಯು ಅನೇಕ ಕಲಾವಿದ ತಂತ್ರಜ್ಞರನ್ನು ಚಲನಚಿತ್ರ ರಂಗಕ್ಕೆ ಪರಿಚಯಿಸಿತು. ಕೆಲವು ವಿಶಿಷ್ಟ ಚಾರಿತ್ರಿಕ ಘಟನೆಗಳಿಗೂ ಸಾಕ್ಷಿಯಾಯಿತು.

* ‘ಬೇಡರ ಕಣ್ಣಪ್ಪ’ ಚಿತ್ರದ ಮೂಲಕ ರಾಜ್‌ರವರು ನಾಯಕನಟರಾಗಿ ಪರಿಚಯವಾದದ್ದು ನಿಜ. ಆದರೂ ಅವರು ಮೊದಲು ಕ್ಯಾಮೆರಾ ಎದುರಿಸಿದ್ದು ೧೯೫೨ರಲ್ಲಿ ತಯಾರಾದ ‘ಶ್ರೀ ಶ್ರೀನಿವಾಸ ಕಲ್ಯಾಣ’ದಲ್ಲಿ. ಅದರಲ್ಲಿ ಅವರದು ಒಂದು ಪುಟ್ಟ ಪಾತ್ರ. ಏಳು ಜನ ಋಷಿಕುಮಾರರಲ್ಲೊಬ್ಬರು. ಹಾಸ್ಯನಟಿ ಎಂ.ಎನ್.ಲಕ್ಷ್ಮಿದೇವಿ ಅವರೂ ಚಿತ್ರರಂಗ ಪ್ರವೇಶ ಮಾಡಿದ್ದು ಇದೇ ಚಿತ್ರದಲ್ಲಿ.

* ರಾಜ್‌ರವರಿಗಿಂತಲೂ ಮೊದಲು ಅವರ ಪ್ರೀತಿಯ ಸೋದರ ಎಸ್.ಪಿ. ವರದರಾಜ್ ಮತ್ತು ಸಹೋದರಿ ಶಾರದಮ್ಮ ಮಹಾತ್ಮಾ ಪಿಕ್ಚರ್ಸ್‌ನ ಚೊಚ್ಚಲ ಚಿತ್ರ ‘ಕೃಷ್ಣಲೀಲಾ’ (೧೯೪೭) ಚಿತ್ರದಲ್ಲಿ ಅಭಿನಯಿಸಿದ್ದರು. ಇದೇ ಚಿತ್ರದ ಮೂಲಕ ಹುಣಸೂರು ಕೃಷ್ಣಮೂರ್ತಿ ಅವರು ಪೂರ್ಣ ಪ್ರಮಾಣದಲ್ಲಿ ಕತೆ, ಚಿತ್ರಕತೆ, ಸಂಭಾಷಣೆಕಾರರಾಗಿ ಹೊಮ್ಮಿದರೆ, ಕಣಗಾಲ್ ಪ್ರಭಾಕರ್‌ಶಾಸ್ತ್ರಿ ಅವರು ಗೀತರಚನಕಾರರಾಗಿ ಚಿತ್ರರಂಗಕ್ಕೆ ಪರಿಚಯವಾದರು. ಹಾಗೆಯೇ ದೊರೈ-ಭಗವಾನ್ ಜೋಡಿಯ ದೊರೈರವರಿಗೂ ‘ಕೃಷ್ಣ ಲೀಲಾ’ ಚಿತ್ರಕ್ಕೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದ ಮೊದಲ ಚಿತ್ರವಾಗಿತ್ತು.

* ‘ದಳ್ಳಾಳಿ’ ಚಿತ್ರದ ಮೂಲಕ ಮೇಕಪ್ ಕಲಾವಿದ ಎಂ.ಎಸ್.ಸುಬ್ಬಣ್ಣ ನಾಯಕರಾಗಿ ಮತ್ತು ಪೋಷಕ ನಟರಾಗಿ ಪ್ರಖ್ಯಾತರಾದ ಸಂಪತ್ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು.

* ‘ಶಿವಶರಣೆ ನಂಬಿಯಕ್ಕ’ ಚಿತ್ರದ ಮೂಲಕ ಎಂ.ನರೇಂದ್ರಬಾಬು ಸಂಭಾಷಣೆ-ಗೀತರಚನೆಕಾರರಾಗಿ ಪರಿಚಯವಾದರು.

* ರಾಜೇಂದ್ರಸಿಂಗ್ ಬಾಲನಟರಾಗಿ ‘ಚಂಚಲ ಕುಮಾರಿ’, ‘ಭಕ್ತ ಚೇತ’ ಚಿತ್ರದಲ್ಲಿ ಅಭಿನಯಿಸಿದರೆ, ಹುಣಸೂರು ಕೃಷ್ಣಮೂರ್ತಿಯವರು ಮಾಡಿದ್ದುಣ್ಣೋ ಮಹರಾಯ ಚಿತ್ರದಲ್ಲಿ ನಾಯಕ ನಟರಾಗಿ ಅಭಿನಯಿಸಿದ್ದರು. ಅದೇ ಚಿತ್ರದ ಮೂಲಕ ಪಿ. ಸುಶೀಲಾ ಗಾಯಕಿಯಾಗಿ ಕನ್ನಡ ಚಿತ್ರರಂಗವನ್ನು ಪ್ರವೇಶಿಸಿದರು.

* ಬಿ. ಸರೋಜಾದೇವಿ ಮತ್ತು ರಾಜಾಶಂಕರ್ ಅವರು ಮಹಾತ್ಮ ಪಿಕ್ಚರ್ಸ್‌ರವರ ‘ಆಷಾಢಭೂತಿ’ ಚಿತ್ರದಲ್ಲಿ ಸಣ್ಣ ಪಾತ್ರಗಳ ಮೂಲಕ ಚಲನಚಿತ್ರರಂಗಕ್ಕೆ ಆಗಮಿಸಿದರು.

* ಭಕ್ತ ರಾ ಮದಾಸ (೧೯೪೮) ಚಿತ್ರಕ್ಕೆ ಸಂಭಾಷಣೆ ರಚಿಸಿದ ಸಾಹಿತಿ ‘ಚದುರಂಗ’ (ಸುಬ್ರಹ್ಮಣ್ಯರಾಜೇ ಅರಸು) ಅವರು ಚಿತ್ರದಲ್ಲಿ ಪಾತ್ರವನ್ನೂ ವಹಿಸಿದ್ದರು. ಇದರಲ್ಲಿ ವರಕವಿ ದ.ರಾ. ಬೇಂದ್ರೆ ಅವರ ಪದ್ಯಗಳೂ ಬಳಕೆಯಾಗಿವೆ.

* ಶಂಕರ್‌ಸಿಂಗ್-ವಿಠಲಾಚಾರ್ಯ ಜೋಡಿ ಅಂದಿನ ಜನಪ್ರಿಯ ಹಿಂದೀ ಗೀತೆಗಳ ರಾಗಗಳನ್ನು ಯಥಾವತ್ತಾಗಿ ಕನ್ನಡಕ್ಕೆ ಅನೇಕ ಚಿತ್ರಗಳಲ್ಲಿ ಧಾರಾಳವಾಗಿ ಅಳವಡಿಸಿದೆ. ಜಗನ್ಮೋಹಿನಿಯ ಎಂದೋ ‘ಎಂದೋ… ಎಂದೋ… ನಿನ್ನಯ ದರುಶನ ಎಂದೋ’ (‘ಮಹಲ್’ನ ಆಯೇಗಾ… ಆಯೇಗಾ… ಹಾಡಿನ ರಾಗ) ಹಾಗೂ ‘ವರದಕ್ಷಿಣೆ’ಯ ಎಲ್ಲ ಹಾಡುಗಳೂ ಹಿಂದಿಯ ಅನೇಕ ಗೀತೆಗಳ ನಕಲುಗಳೇ!

* ಸಂಗೀತ ವೃಂದದಲ್ಲಿದ್ದ ಪಿ.ಶಾಮಣ್ಣನವರನ್ನು ‘ಜಗನ್ಮೋಹಿನಿ’ ಮೂಲಕ ಸಂಗೀತ ನಿರ್ದೇಶಕರನ್ನಾಗಿಸಿದ ಶಂಕರ್‌ಸಿಂಗ್ ಮುಂದೆ ಮಹಾತ್ಮಾ ಪಿಕ್ಚರ್ಸ್‌ನ ಅನೇಕ ಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿದರು.

* ಶಂಕರ್‌ಸಿಂಗ್‌ರವರು ತಮ್ಮ ಮಹಾತ್ಮಾ ಪಿಕ್ಚರ್ಸ್ ಲಾಂಛನದಡಿ ಮಾತ್ರವಲ್ಲದೆ ವೆಂಕಟೇಶ್ವರ ಪ್ರೊಡಕ್ಷನ್ಸ್ ಲಾಂಛನದಡಿ ವರದಕ್ಷಿಣೆ, ಮಂಗಳಸೂತ್ರ, ಶಿವಲಿಂಗಸಾಕ್ಷಿ, ಭಕ್ತಚೇತ ಮೊದಲಾದ ಚಿತ್ರಗಳನ್ನು ನಿರ್ಮಿಸಿದ್ದಾರೆ. ಈ ಪಟ್ಟಿಯ ಮೊದಲ ಮೂರು ಚಿತ್ರಗಳನ್ನು ಶಂಕರ್‌ಸಿಂಗ್‌ರವರು ಚಂದ್ರಮೋಹನ್ ಹೆಸರಿನಲ್ಲಿ ನಿರ್ದೇಶಿಸಿದ್ದರೆ ಕೊನೆಯ ಚಿತ್ರವನ್ನು ಎಂ.ಬಿ. ಗಣೇಶ್‌ಸಿಂಗ್ ಹೆಸರಿನವರು ನಿರ್ದೇಶಿಸಿದ್ದಾರೆ. ಹಾಗೆಯೇ ಪ್ರೀಮಿಯರ್ ಸ್ಟುಡಿಯೋಸ್ ಸಂಸ್ಥೆ ನಿರ್ಮಿಸಿದ ಪಾಲಿಗೆ ಬಂದದ್ದೇ ಪಂಚಾಮೃತ (೧೯೬೩) ಚಿತ್ರವನ್ನು ಶಂಕರ್‌ಸಿಂಗ್ ನಿರ್ದೇಶಿಸಿದ್ದರು. ಪಾದುಕೇಶ್ವರ ಪಿಕ್ಚರ್ಸ್ ಲಾಂಛನದಡಿ ಪ್ರಭುಲಿಂಗ ಲೀಲೆ (೧೯೫೭) ನಿರ್ಮಿಸಿದ್ದರು. ಅದು ಅಲ್ಲಮನ ಬದುಕನ್ನು ಕುರಿತು ಕನ್ನಡದಲ್ಲಿ ಬಂದಿರುವ ಏಕೈಕ ಚಿತ್ರ.

* ಅಂಬರೀಷ್‍ರವರು ಪುಟ್ಟಣ್ಣ ಕಣಗಾಲರ ಶೋಧ ಎಂಬುದು ಸ್ವೀಕೃತ ಅಭಿಪ್ರಾಯ. ಆದರೆ ಶಂಕರ್‌ಸಿಂಗ್ ಕುಟುಂಬದ ನಿಕಟವರ್ತಿಯಾಗಿದ್ದ ಅಂಬರೀಷ್ ಮೇಕಪ್ ಹಚ್ಚಿದ್ದು ಅವರ ‘ಬಂಗಾರದ ಕಳ್ಳ’ (೧೯೭೩) ಚಿತ್ರದಲ್ಲಿ. ಎಸ್.ವಿ.ರಾಜೇಂದ್ರಸಿಂಗ್ ಅವರ ಸೋದರ ಸಂಗ್ರಾಮಸಿಂಗ್ ನಾಯಕ. ‘ಬಂಗಾರದ ಕಳ್ಳ’ ೧೯೭೩ರಲ್ಲಿ ವರ್‍ಷದ ಎರಡನೆಯ ಚಿತ್ರವಾಗಿ ಬಿಡುಗಡೆಯಾದರೆ, ೧೯೭೨ನೇ ವರ್‍ಷದ ಕೊನೆಯ ಚಿತ್ರವಾಗಿ ‘ನಾಗರಹಾವು’ ತೆರೆಕಂಡಿತ್ತು. ಮುಂದೆ ‘ನಾಗರಹೊಳೆ’ ಚಿತ್ರದಲ್ಲಿ ಡ್ರೈವರ್‌ನ ವಿಶಿಷ್ಟಪಾತ್ರ ಹಾಗೂ ‘ಅಂತ’ದ ಕನ್ವರ್‌ಲಾಲ್ ಮತ್ತು ಇನ್ಸ್‌ಪೆಕ್ಟರ್ ಸುಶೀಲ್‌ಕುಮಾರ್ ಪಾತ್ರ ನೀಡಿ ನಿರ್ದೇಶಿಸಿದ ರಾಜೇಂದ್ರಸಿಂಗ್ ಅವರು ಅಂಬರೀಷರ ವೃತ್ತಿ ಬದುಕನ್ನು ಉಜ್ವಲಗೊಳಿಸಿದರು.

* ಡಿ.ಶಂಕರ್‌ಸಿಂಗ್‌ರವರ ಕುಟುಂಬದ ಸಿನಿಮಾನಂಟು ವಿಸ್ತಾರವಾದುದು. ಅವರ ಪತ್ನಿ ಪ್ರತಿಮಾದೇವಿ ಹಲವಾರು ಚಿತ್ರಗಳ ನಾಯಕಿ. ‘ಭಕ್ತಚೇತ’ ಚಿತ್ರದಲ್ಲಿ ಅವರು ರಾಜ್‌ರವರಿಗೆ ನಾಯಕಿ.

* ಬಾಬು ಅವರು ಬಾಲನಟರಾಗಿ ಅನೇಕ ಚಿತ್ರಗಳಲ್ಲಿ ಅಭಿನಯಿಸಿದರೂ ಒಲಿದದ್ದು ನಿರ್ದೇಶನಕ್ಕೆ. ಮಿತವ್ಯಯದ ಚಿತ್ರಗಳಿಂದ ಕನ್ನಡ ಚಿತ್ರೋದ್ಯಮಕ್ಕೆ ಶಂಕರ್‌ಸಿಂಗ್‌ರವರು ಒಳಬಲ ನೀಡಿದರೆ, ಬಾಬುರವರು ದುಬಾರಿ ಚಿತ್ರಗಳಿಂದ ಅದ್ಧೂರಿತನ ತಂದುಕೊಟ್ಟರು. ತಂದೆಯಂತೆ ಅನೇಕ ಪ್ರಯೋಗ ಕೈಗೊಂಡರು. ಬಾಬು ಅವರ ಮಗ ಸಹ ಚಿತ್ರ ನಿರ್ಮಾಣ, ನಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ.

* ಬಾಬು ಸೋದರ ಸಂಗ್ರಾಮಸಿಂಗ್ ಒಂದೇ ಚಿತ್ರದ ನಾಯಕನಾಗಿ ಮರೆಯಾದರೆ, ಸೋದರಿ ವಿಜಯಲಕ್ಷ್ಮಿ ಸಿಂಗ್ ಅವರು ಬಾಲ ನಟಿಯಾಗಿ ಗಾಂಧೀ ತಾತನ ಸನ್ನಿಧಿಗೊಂದು ಬಾಲಕಿ ಬರೆದ ವಿನಂತಿ (ಒಂದೇ ಕುಲ ಒಂದೇ ದೈವ) ಹಾಡಿನ ಮೂಲಕ ಕನ್ನಡಿಗರ ಗಮನ ಸೆಳೆದರು. ಎಂ.ಪಿ.ಶಂಕರ್ ನಿರ್ಮಿಸಿದ ‘ಶ್ರೀಮಾನ್’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ ನಂತರ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದರೂ ಅವರು ನಟನೆಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಜೈಜಗದೀಶ್‌ರವರ ಕೈಹಿಡಿದ ಅವರು ನಿರ್ಮಾಣದಲ್ಲಿ ತೊಡಗಿಸಿಕೊಂಡು ‘ಈ ಬಂಧನ’ ಮೂಲಕ ನಿರ್ದೇಶಕಿಯಾಗಿ ಕನ್ನಡದಲ್ಲಿರುವ ಮಹಿಳಾ ನಿರ್ದೇಶಕಿಯರ ಕೊರತೆಯನ್ನು ತುಂಬಿದ್ದಾರೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತಪ್ಪು
Next post ವಿಮರ್ಶಕನಾಗಿ ನಾಯಕ

ಸಣ್ಣ ಕತೆ

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…