ಬಿಟ್ಟರಾಯ್ತೆ ದಾಡಿ
ತಲೇಲಿರೋದು ರಾಡಿ
ಕವಿಯಂತೆ ಕವಿ
ಬೀದಿ ಸುತ್ತೋ ರೌಡಿ

ಎಂಥ ಕವಿ! ಎಂಥ ಕವಿ!
ಹಿಂಡಿರವನ ಕಿವಿ!

ಪದ್ಯವಂತೆ ಪದ್ಯ
ಬರಿಯೋದು ಬರೀ ಗದ್ಯ
ಮತ್ತಿನ್ನೇನು ಮಾಡ್ತಾನಪೋ
ತಲೆಗೇರಿದರೆ ಮದ್ಯ

ಎಂಥ ಪದ್ಯ! ಎಂಥ ಪದ್ಯ!
ನಾಚಿಕೆನಾದ್ರೂ ಇದ್ಯ!

ನಾಯಿ ಬೆಕ್ಕು ಇಲಿ ಮತ್ತು
ಪೆಂಟಯ್ಯನ ಬೇಸ್ತು
ಬರೀತಾರೇನ್ರಿ ಯಾವನೆ ಆದ್ರು
ಇವತ್ತು ಇಂಥ ವಸ್ತು

ಎಂಥ ವಸ್ತು! ಎಂಥ ವಸ್ತು!
ಹಿಸುಕಿರವನ ಕತ್ತು!

ಹೊಸ ಸಾರಿಗೆ ಹೊಸ ಕೋಳಿ
ಬೇಕೊ ಬೇಡವೊ ನೀವೆ ಹೇಳಿ
ಬೇಕಾದರೆ ಇವನ ತಳಿ
ಹೂಡಿ ನಮ್ಮ ಚಳುವಳಿ

ಎಂಥ ಕೋಳಿ! ಎಂಥ ಕೋಳಿ!
ಇದರ ಕೂಗು ಕೇಳಿ
*****