ಭೋರ್ ಎಂದು ಮಳೆ ಸುರಿಯುತ್ತಿತ್ತು. ಎಲೆ ಎಲೆಯು ಮಳೆಹನಿಯ ಉದಿರಿಸಿ ಮಳೆಹನಿಯೊಂದಿಗೆ ತಾಳ ಹಾಕುತ್ತಿತ್ತು. ವೃಕ್ಷದ ಕೆಳಗೆ ಇದ್ದ ಬುದ್ಧನ ವಿಗ್ರಹ ಮರದ ಬುಡದಲ್ಲಿ ನೆನೆಯದೇ ಧ್ಯಾನಾವಸ್ಥೆಯಲ್ಲಿ ಸ್ಥಿತಪ್ರಜ್ಞವಾಗಿತ್ತು. ಮಳೆಯ ಬಡಿತ ತಾಳಲಾರದೆ ಆಶ್ರಯ ಹುಡುಕಿ ಬಂದ ಒಂದು ಜೀರುಂಡೆ ವಿಗ್ರಹದ ಕೊಂಕುಳಲ್ಲಿ ಆಶ್ರಯ ಪಡೆಯಿತು. ಆಶ್ರಯವಿತ್ತ ಬುದ್ಧನಿಗೆ ಭಕ್ತಿಯಿಂದ ಜೀ ಎಂದು ಶೃತಿಯಲ್ಲಿ ಹಾಡಿ ಕೃತಜ್ಞತೆ ಸಲ್ಲಿಸಿತ್ತು. ಒದ್ದೆ ರೆಕ್ಕೆ ಒದರುತ್ತಾ ಬಂದ ಹಕ್ಕಿ ಬುದ್ಧನ ಒಂದು ಭುಜದ ಮೇಲೆ ಆಸೀನವಾಗಿ ಚಿಲಿಪಿಲಿಗುಟ್ಟಿ ಧನ್ಯತೆಯ ತೋರಿತು. ಮಳೆಯಲ್ಲಿ ತೊಯ್ದು ಬಂದ ಮನುಷ್ಯ ನೋರ್ವ ಹಕ್ಕಿಯನ್ನು ಓಡಿಸಿ, ಜೀರುಂಡೆಯನ್ನು ಒದರಿ ಬುದ್ಧನ ಬೆನ್ನಿಗೆ ಆತು ನಿಂತ. ಸ್ವಾರ್ಥಿ ಮಾನವನನ್ನು ನೋಡಿ ಧ್ಯಾನಸ್ಥಿತ ಬುದ್ಧ ಮುಗುಳು ನಗುತ್ತಲೇ ಇದ್ದ.
*****