ಮೊದಲ ಸಾಮಾಜಿಕ ಚಿತ್ರ ‘ಸಂಸಾರ ನೌಕ’

ಮೊದಲ ಸಾಮಾಜಿಕ ಚಿತ್ರ ‘ಸಂಸಾರ ನೌಕ’

ಅಧ್ಯಾಯ ಮೂರು

ಭಾರತೀಯ ಚಲನಚಿತ್ರೋದ್ಯಮವು ತನ್ನ ಆರಂಭದ ದಿನಗಳಲ್ಲಿ ಕಥಾವಸ್ತುವಿಗೆ ಸಂಪೂರ್ಣವಾಗಿ ತನ್ನ ಸಂಸ್ಕೃತಿಯಲ್ಲಿ ಸಂಪದ್ಭರಿತವಾಗಿದ್ದ ಪುರಾಣದ ಕತೆಗಳು, ಚಾರಿತ್ರಿಕ ಘಟನೆಗಳು ಮತ್ತು ಜಾನಪದದ ರಮ್ಯಲೋಕವನ್ನೇ ನೆಚ್ಚಿಕೊಂಡಿತ್ತು. ಎಷ್ಟೇ ಆಗಲಿ, ಭಾರತೀಯ ಚಲನಚಿತ್ರರಂಗವು ಆರಂಭದಲ್ಲಿ ನಾಟಕದ ವಿಸ್ತರಣೆಯಾಗಿತ್ತಲ್ಲವೇ?! ಭಾರತೀಯ ಪ್ರೇಕ್ಷಕನ ಮನಸ್ಸು ತನ್ನ ಪರಂಪರೆಯ ಪೌರಾಣಿಕ ಕತೆಗಳಿಗೆ, ಜಾನಪದ ಲೋಕಕ್ಕೆ ಮತ್ತು ಚಾರಿತ್ರಿಕ ಸನ್ನಿವೇಶಗಳಿಗೆ ಮತ್ತೆ ಮತ್ತೆ ಹಿಂದಿರುಗಿ ಆನಂದ ಪಡೆಯುವ ಉಪಾಧಿಗೆ ಒಗ್ಗಿಕೊಂಡಿತ್ತು. ಚಿತ್ರ ನಿರ್ಮಾಪಕರು-ನಿರ್ದೇಶಕರು ಪ್ರೇಕ್ಷಕನ ಅಂತರಂಗವನ್ನು ಬಂಡವಾಳ ಮಾಡಿಕೊಂಡು ಪುರಾಣೇತಿಹಾಸದ ಕತೆಗಳನ್ನೇ ಚಿತ್ರ ಮಾಡಿದರು ಎನ್ನುವುದಕ್ಕಿಂತ ರಿಸ್ಕ್ ತೆಗೆದುಕೊಳ್ಳಲು ಬಯಸದೆ ಸುಲಭವಾದ ಸಿದ್ಧ ಶೈಲಿಯ ನಾಟಕಗಳ ಕತೆಗಳನ್ನು ಸೆಲ್ಯುಲಾಯ್ಡ್‌ಗೆ ಅಳವಡಿಸಿದರು ಎನ್ನುವುದೇ ಸೂಕ್ತ. ರಂಗಭೂಮಿಯು ಪುರಾಣೇತಿಹಾಸ, ಜಾನಪದ ಕತೆಗಳನ್ನು ಅತಿರಂಜಿತಗೊಳಿಸಿ, ಭ್ರಮಾಲೋಕ ಸೃಷ್ಟಿಸಿ ಪ್ರೇಕ್ಷಕನನ್ನು ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಎರಡೇ ಆಯಾಮದ ತೆರೆಯ ಮೇಲೆ ಮೂರು ಆಯಾಮದ ದೃಶ್ಯಾವಳಿಗಳನ್ನು ಸೃಜಿಸಬಲ್ಲ ಸಿನೆಮಾ ಎಂಬ ಅದ್ಭುತ ಮಾಧ್ಯಮವು ರಂಗಭೂಮಿಗಿದ್ದ ಕ್ರಿಯಾಶೀಲತೆಯನ್ನು ಮತ್ತಷ್ಟು ಹಿಗ್ಗಿಸಿತು. ಪರಿಣಾಮ- ಸಿನಿಮಾ ಮಾಧ್ಯಮವು ರಂಗಭೂಮಿಗಿಂತ ಬಹುದೊಡ್ಡ ಭ್ರಮಾಲೋಕವನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಯಿತು. ಭಯ ಹುಟ್ಟಿಸುವ ಪುರಾಣದ ರಾಕ್ಷಸ ಪಾತ್ರಗಳು, ಅವು ಗದೆಯನ್ನು ತಿರುಗಿಸುವ, ಕತ್ತಿಯನ್ನು ಸೆಳೆಯುವ ವೈಖರಿ, ಪೊದೆಪೊದೆಯಾದ ಮೀಸೆ-ಹುಬ್ಬು, ಕೆಂಡದುಂಡೆಗಳನ್ನು ಎಸೆಯುವ ಉರಿಯುವ ಕಣ್ಣುಗಳು, ಮಿಂಚುವ ಕಿರೀಟ, ಭುಜಕೀರ್ತಿ, ಕರ್ಣಕುಂಡಲ, ಅಲಂಕಾರಿಕ ಪೀಠಗಳು, ವಿಪರೀತವಾದ ಪ್ರಸಾಧನ, ಕಣ್ಸೆಳೆವ ವಸ್ತ್ರಗಳು, ಕಿರುಚುವಿಕೆಗೆ ಸಮೀಪವಾದ ಸಂಭಾಷಣಾ ವೈಖರಿ, ಮಾರುದ್ದದ ಡೈಲಾಗುಗಳು, ನಾಟಕೀಯ ಆಂಗಿಕ ಅಭಿನಯದ ಜೊತೆಗೆ ಮೈನವಿರೇಳಿಸುವ ಯುದ್ಧದ ದೃಶ್ಯಾವಳಿ, ಕತ್ತಿವರಸೆ, ಗದಾಯುದ್ಧಗಳ ದೃಶ್ಯ ವೈಭವ ಮುಂತಾದವುಗಳು ರಂಗಭೂಮಿಯಲ್ಲಿ ಕಾಣುವ, ಕೇಳುವ ಪ್ರಮಾಣಕ್ಕಿಂತಲೂ ಅತಿಯಾಗಿ ಸಿನಿಮಾದಲ್ಲಿ ಮೂಡತೊಡಗಿದವು. ರಂಗಭೂಮಿಗೆ ಇಲ್ಲದ ಕ್ಲೋಸ್‌ಅಪ್ ಷಾಟ್‌ಗಳು, ವಿವಿಧ ಕೋನಗಳ ಚಿತ್ರೀಕರಣ, ಹೊರಾಂಗಣದ ಅವಕಾಶ, ಪರಿಪೂರ್ಣತೆಯನ್ನು ಸಾಧಿಸಲು ರೀಟೇಕ್, ಸಂಕಲನ, ಸಂಸ್ಕರಣಗಳ ಸಾಧ್ಯತೆಗಳು ಸಿನಿಮಾಕ್ಕೆ ದಕ್ಕಿದ್ದು ಅದರ ಸಾಮರ್ಥ್ಯ ಹೆಚ್ಚಳಕ್ಕೆ ಕಾರಣ. ನಾಟಕ, ಸಿನಿಮಾಗಳಿಗೆ ಒಂದೇ ಕತೆ ಆಧಾರವಾದರೂ ಪರಿಣಾಮಗಳಲ್ಲಿ ವಿಭಿನ್ನವಾಗಿರುತ್ತವೆ. ವಿಭಿನ್ನ ಅನುಭವಲೋಕವನ್ನು ಸೃಜಿಸುತ್ತವೆ. ಹಾಗಾಗಿ ಆರಂಭದ ಸಿನಿಮಾಗಳು ಪುರಾಣ, ಇತಿಹಾಸ, ಜಾನಪದ ಲೋಕದ ಪರಿಚಿತ ಕತೆಗಳನ್ನೇ ಆಧರಿಸಿರುತ್ತಿದ್ದವು.

ಇಂಥ ಸನ್ನಿವೇಶದಲ್ಲಿ ನೀರಸವಾದ ಸಾಮಾನ್ಯ ಜನರ ಬದುಕನ್ನು ಚಿತ್ರ ಮಾಡುವ ಎದೆಗಾರಿಕೆಗೆ ಕೊರೆತೆಯಿತ್ತು. ಪೌರಾಣಿಕ ನಾಟಕಗಳ ಸಂಭಾಷಣಾ ಚಾತುರ್ಯಕ್ಕಾಗಲೀ, ಆಡಂಬರದ ಪ್ರಸಾಧನ, ವಸ್ತ್ರವಿನ್ಯಾಸ, ಅರಮನೆ, ಗುರುಮನೆಯ ದೃಶ್ಯ ವೈಭವ ನಿರ್ಮಾಣಕ್ಕಾಗಲೀ ಸಾಮಾಜಿಕ ಕತೆಗಳಲ್ಲಿ ಅವಕಾಶವಿರುತ್ತಿರಲಿಲ್ಲ. ಪೊದೆಯಾದ ಗಡ್ಡ, ಮೀಸೆಯಿಲ್ಲದ ಅಥವಾ ಪೆನ್ಸಿಲ್ ರೇಖೆಯಂತಹ ಮೀಸೆಯಿಟ್ಟುಕೊಂಡು ಅಂಗಿ, ಧೋತಿ, ಸೀರೆ-ಕುಪ್ಪಸದ, ನೀರಸ ಮಾತಿನ ಸಾಮಾನ್ಯ ಜೀವನದ ಪಾತ್ರಗಳು ಪ್ರೇಕ್ಷಕನನ್ನು ಭಾವಾವೇಶಕ್ಕೆ ಒಳಗಾಗಿಸುವುದು ದುಸ್ಸಾಧ್ಯವೆಂಬ ನಂಬಿಕೆಯಿತ್ತು. ಸಾಮಾಜಿಕ ಚಿತ್ರ ನಿರ್ಮಾಣ ಜೂಜಾಟದಂತೆ ಎಂದು ಭಾವಿಸಿದ್ದ ಕಾಲವದು.

ಆದರೆ ಇಂಥ ಗಾಢ ನಂಬಿಕೆಯನ್ನು ಬುಡಮೇಲು ಮಾಡಿದ ಯಶಸ್ಸು ಕನ್ನಡ ಚಲನಚಿತ್ರವೊಂದಕ್ಕೆ ಸಲ್ಲುತ್ತದೆ. ಸಶಕ್ತವಾದ ಕತೆ, ಸರಳವಾದ ನಿರೂಪಣೆ ಮತ್ತು ಕಲಾವಿದರ ಭಾವ ತುಂಬಿದ ಅಭಿನಯದಿಂದ ಅದು ಭಾರತದಲ್ಲಿ ಸಾಮಾಜಿಕ ಚಿತ್ರಗಳ ಶಕೆಯನ್ನು ಉದ್ಘಾಟಿಸಿತು. ಅಷ್ಟೇ ಅಲ್ಲ ಪ್ರಚಂಡ ಯಶಸ್ಸಿನಿಂದ ನಿರ್ಮಾಪಕರಿಗೆ ಅಪಾರ ಲಾಭ ತಂದುಕೊಟ್ಟಿತು. ಇತರ ಭಾರತೀಯರಲ್ಲೂ ಸಾಮಾಜಿಕ ಚಿತ್ರಗಳನ್ನು ತಯಾರಿಸಲು ಸ್ಫೂರ್ತಿ ನೀಡಿತು. ಈ ಚಿತ್ರ ಬಿಡುಗಡೆಯ ನಂತರ ಕಿರೀಟ, ಗದೆಗಳು ಮಂಕಾಗತೊಡಗಿದವು. ಒರೆಯಿಂದ ಸೆಳೆಯುತ್ತಿದ್ದ ಕತ್ತಿಗಳಿಗೆ ತುಕ್ಕು ಹಿಡಿಯಲಾರಂಭಿಸಿತು. ಪುಟಗಟ್ಟಲೇ ಇರುತ್ತಿದ್ದ ಸಂಭಾಷಣೆಗಳಿಗೆ ಕತ್ತರಿಬಿತ್ತು. ಮಾತೆತ್ತಿದರೆ ಶಾಪ ನೀಡುವ ಋಷಿಮುನಿಗಳ, ಆಜ್ಞೆ ನೀಡುವ ಮಹಾರಾಜರುಗಳ, ಕುಟಿಲ ಮಂತ್ರಿಗಳ, ರಂಗುರಂಗಿನ ಪೋಷಾಕುಗಳ ಸ್ಥಾನವನ್ನು ನಮ್ಮ ನಿಮ್ಮಂತೆ ಕಾಣುವ ಮನುಷ್ಯರು, ಅಸಹಾಯಕರು, ಮನೆಮುರುಕರು, ಜೊತೆಗೆ ಸಾಮಾನ್ಯ ಅಂಗಿ, ಧೋತಿ, ಸೀರೆ, ಲಂಗದಾವಣಿ, ಚಣ್ಣಗಳು ಆಕ್ರಮಿಸಿಕೊಳ್ಳಲಾರಂಭಿಸಿದವು.

ಸಂಸಾರ ನೌಕ ಚಿತ್ರದ ವಿವಿಧ ದೃಶ್ಯಗಳು

ಈ ಯುಗಪರಿವರ್ತನೆಗೆ ನಾಂದಿ ಹಾಡಿದ ಚಿತ್ರವೇ ‘ಸಂಸಾರ ನೌಕ’. ಕೇವಲ ಎರಡು ವರ್‍ಷದ ವಾಕ್ಚಿತ್ರ ಇತಿಹಾಸವಿದ್ದ ಕನ್ನಡ ಚಲನಚಿತ್ರರಂಗ ಇಂಥದೊಂದು ಪ್ರಯತ್ನಕ್ಕೆ ಕೈಹಾಕಿ ಯಶಸ್ಸು ಕಂಡಿತು. ಆವರೆವಿಗೂ ಸತಿಸುಲೋಚನ, ಭಕ್ತಧ್ರುವ ಮತ್ತು ಸದಾರಮೆ ಚಿತ್ರಗಳು ಮಾತ್ರ ತೆರೆಕಂಡಿದ್ದವು. ನಾಲ್ಕನೆಯ ಪ್ರಯತ್ನವೇ ಸಂಸಾರ ನೌಕ. ಆ ಕಾಲಕ್ಕೆ ಅದೊಂದು ದೊಡ್ಡ ಸಾಹಸ. ಈ ಚಿತ್ರ ನಿರ್ಮಾಣದ ಹಿನ್ನೆಲೆಯೂ ಅಷ್ಟೇ ಕುತೂಹಲಕಾರಿ.

ರಂಗಭೂಮಿ ಕಲಾವಿದ ಪೀರ್‌ಸಾಹೇಬರಿಗಾಗಿ ಎಚ್.ಎಲ್.ಎನ್.ಸಿಂಹ ಅವರು ‘ಸಂಸಾರ ನೌಕ’ ನಾಟಕವನ್ನು ೧೯೩೧ರಲ್ಲಿ ರಚಿಸಿದ್ದರು. ಈ ಕೌಟುಂಬಿಕ ನಾಟಕದ ಹೃದಯಸ್ಪರ್ಶಿ ಕತೆ ಪ್ರೇಕ್ಷಕರನ್ನು ಸೆಳೆದಿತ್ತು. ೧೯೩೫ರಲ್ಲಿ ಇದೇ ನಾಟಕ ಮದರಾಸಿನ ಸೌಂದರ್ಯಮಹಲ್‌ನಲ್ಲಿ ಪ್ರದರ್ಶನವಾಗುತ್ತಿತ್ತು. ಈ ನಾಟಕವನ್ನು ನೋಡಿದ ಪ್ರೇಕ್ಷಕರು ಪ್ರತಿ ಸನ್ನಿವೇಶದಲ್ಲಿ ಚಪ್ಪಾಳೆ, ಕಣ್ಣೀರು, ನಗೆಯ ಮೂಲಕ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದರು. ಹಾಗೆ ನಾಟಕವನ್ನು ನೋಡಿ ಮೆಚ್ಚಿದವರಲ್ಲಿ ‘ನಾರದರ್’ ಶ್ರೀನಿವಾಸರಾವ್ ಸಹ ಒಬ್ಬರು. ಅವರು ಮೂಲತಃ ಕನ್ನಡಿಗರು. ಆದರೆ ತಮಿಳು ಪತ್ರಕರ್ತರಾಗಿ ಹೆಸರು ಗಳಿಸಿದ್ದರು. ಅವರು ತಮಗೆ ಪರಿಚಿತರಾಗಿದ್ದ ಉದ್ಯಮಿ ಕೆ. ನಂಜಪ್ಪ ಚೆಟ್ಟಿಯಾರ್ ಮತ್ತು ಅವರ ಕುಟುಂಬವನ್ನು ಕರೆದುಕೊಂಡು ಹೋಗಿ ನಾಟಕ ತೋರಿಸಿದರು. ಅವರಿಗೂ ನಾಟಕ ಹಿಡಿಸಿತು. ಈ ನಾಟಕವನ್ನು ಸೆಲ್ಯುಲಾಯ್ಡ್‌ಗೆ ತರುವ ಬಗ್ಗೆ ನೀಡಿದ ಸಲಹೆಯನ್ನು ಒಪ್ಪಿದ ಕೆ.ನಂಜಪ್ಪ ಚೆಟ್ಟಿ ಮತ್ತು ಸೋದರ ಕೆ.ರಾಜಗೋಪಾಲಚೆಟ್ಟಿ ತಮ್ಮ ‘ದೇವಿ ಫಿಲಂಸ್’ ಲಾಂಛನದಡಿಯಲ್ಲಿ ಅದನ್ನು ನಿರ್ಮಿಸಲು ಒಪ್ಪಿದರು.

ಜನಪ್ರಿಯವಾಗಿದ್ದ ‘ಸಂಸಾರ ನೌಕ’ ನಾಟಕವು ಸಮಕಾಲೀನ ಸಮಾಜದ ವ್ಯಾಖ್ಯಾನವೆಂದೇ ಪರಿಗಣಿತವಾಗಿತ್ತು. ಚೆಟ್ಟಿಯಾರ್ ಸೋದರರು ಸಿನಿಮಾ ಕ್ಷೇತ್ರದ ಅಂತರಂಗವನ್ನು ಬಲ್ಲ ನಾಟಕಕಾರ ಎಚ್.ಎಲ್.ಎನ್. ಸಿಂಹ ಅವರಿಗೇ ನಿರ್ದೇಶನದ ಹೊಣೆ ಒಪ್ಪಿಸಿದರು. ಮದರಾಸಿನಲ್ಲಿ ಪ್ರದರ್ಶನ ನೀಡುತ್ತಿದ್ದ ಕಲಾವಿದರ ತಂಡವನ್ನೆ ಸಿಂಹ ಅವರು ಉಳಿಸಿಕೊಂಡರು. ಮೂವತ್ತೈದು ಸಾವಿರ ರೂ. ವೆಚ್ಚದಲ್ಲಿ ಆರು ತಿಂಗಳ ನಿರ್ಮಾಣದ ನಂತರ ಬಿಡುಗಡೆಯಾದ ಚಿತ್ರ ಎರಡೂವರೆ ಲಕ್ಷ ರೂಪಾಯಿ ಗಳಿಸಿತೆಂಬ ವರದಿಯಿದೆ.

‘ಸಂಸಾರ ನೌಕ’ ಚಿತ್ರವು ಶ್ರೀಮಂತ ಜಮೀನುದಾರ (ಎಚ್.ರಾಘವೇಂದ್ರರಾವ್)ನ ಮೊಮ್ಮಗನಾದ ಸುಂದರ(ಬಿ.ಆರ್.ಪಂತುಲು)ನ ಬದುಕಿನ ಏಳು ಬೀಳಿನ ಕಥಾನಕ. ತಾತ ಸಾಕಿದ್ದ ಸುಶೀಲೆ (ಎಸ್.ಕೆ.ಪದ್ಮಾ) ಯನ್ನು ಮದುವೆಯಾಗಲು ನಿರಾಕರಿಸಿ ಮನೆಯಿಂದ ಹೊರ ಬಂದ ಆತ ತಾನು ಪ್ರೀತಿಸಿದ ಸರಳೆ (ಎಂ.ವಿ.ರಾಜಮ್ಮ) ಯನ್ನು ಮದುವೆಯಾಗುತ್ತಾನೆ. ಸುಂದರವಾಗಿದ್ದ ಅವನ ಬದುಕು ಅನೇಕ ಒತ್ತಡಗಳಿಂದ ಛಿದ್ರವಾಗುತ್ತದೆ. ಹೆಂಡತಿ ಮತ್ತು ಮಗು ಅಗಲುತ್ತಾರೆ. ದಲಿತೋದ್ಧಾರ ಕಾರ್ಯದಲ್ಲಿ ತೊಡಗಿಸಿಕೊಂಡ ಸುಂದರ ಅನೇಕ ಸಂಕಷ್ಟಗಳಿಗೆ ಈಡಾಗುತ್ತಾನೆ. ಇತ್ತ ತನ್ನ ಇನ್ನೊಬ್ಬ ಮೊಮ್ಮಗ ಮಾಧವ(ಎಂ.ಎನ್.ಮಾಧವರಾವ್)ನಿಗೆ ಅವನ ತಾತ ಸುಶೀಲೆಯನ್ನು ಮದುವೆ ಮಾಡುತ್ತಾನೆ. ಮೊಮ್ಮಗ ಮಾಧವ ದುಷ್ಟ ದೀಕ್ಷಿತ ಅಲಿಯಾಸ್ ಡಿಕ್ಕಿ(ಎಂ.ಮಾಧವರಾವ್)ಯ ಕೈಗೊಂಬೆಯಾಗುತ್ತಾನೆ. ಸುಂದರನ ಮೇಲೆ ಅಪಾರ ಪ್ರೀತಿಯಿಟ್ಟುಕೊಂಡಿದ್ದ ಸುಶೀಲೆಯು ಗಂಡ ಮತ್ತು ಡಿಕ್ಕಿ ನೀಡುವ ಕಿರುಕುಳಗಳಲ್ಲಿ ಬದುಕು ಸವೆಸುತ್ತಾಳೆ. ಡಿಕ್ಕಿಯ ಕುಟಿಲತನದಿಂದ ಸುಶೀಲೆ ಕೊಲೆಯಾಗುತ್ತಾಳೆ. ಕೊಲೆಯ ಅಪವಾದ ಹೊತ್ತು ಸುಂದರ ಜೈಲು ಸೇರುತ್ತಾನೆ. ಅನಂತರ ಸುಂದರ ನಿರಪರಾಧಿ ಎಂಬುದು ಸಾಬೀತಾಗಿ ಜೈಲಿನಿಂದ ಹೊರಬರುತ್ತಾನೆ. ಹೀಗೆ ಬದುಕಿನ ಚಿತ್ರ ಒಂದು ಸುತ್ತು ಬಂದಿದೆ. ಸುಂದರ-ಸರಳೆಯರ ಬಾಳು ಮತ್ತೆ ಆರಂಭವಾಗುತ್ತದೆ.


ಸಂಸಾರ ನೌಕ -ನಾಯಕ ಬಿ.ಆರ್.ಪಂತುಲು, ನಾಯಕಿ ಎಂ.ವಿ.ರಾಜಮ್ಮ, ನಿರ್ಮಾಪಕ ರಾಜಗೋಪಾಲ್ ಚೆಟ್ಟಿಯಾರ್, ನಿರ್ದೇಶಕ ಎಚ್.ಎಲ್.ಎನ್.ಸಿಂಹ

‘ಸಂಸಾರ ನೌಕ’ ಚಿತ್ರದ ವೈಶಿಷ್ಟ್ಯಗಳು ಅನೇಕ. ಅದು ಸಾಮಾಜಿಕ ಚಿತ್ರ ಸರಣಿಯನ್ನು ಉದ್ಘಾಟಿಸಿದ ಹೆಗ್ಗಳಿಕೆಗೆ ಪಾತ್ರವಾಯಿತು. ಅದರ ಜೊತೆಗೆ ಮಾನವನ ಸಂಕಷ್ಟಗಳನ್ನು ವಾಸ್ತವ ಶೈಲಿಯಲ್ಲಿ ದಾಖಲಿಸಿದ ಮೊದಲ ಚಿತ್ರವೆನಿಸಿತು. ಸರಳವಾದ ನಿರೂಪಣೆ, ಹೃದಯಸ್ಪರ್ಶಿ ಸನ್ನಿವೇಶಗಳು, ಮಾನವನ ಕುಟಿಲತೆ, ಕೌಟುಂಬಿಕ ಬದುಕಿನ ವಿವರಗಳು ಇತ್ಯಾದಿಗಳ ಮೂಲಕ ಚಿತ್ರರಂಗಕ್ಕೆ ಹೊಸ ಬಗೆಯ ಸಿನಿಮಾ ವ್ಯಾಕರಣವನ್ನು ಅದು ಪ್ರಸ್ತುತಪಡಿಸಿತು.

ಪಾರ್‍ಸಿ ನಾಟಕವನ್ನು ಆಧರಿಸಿದ ‘ಅಲಂ ಅರಾ’ ಚಿತ್ರ ಬಿಡುಗಡೆಯಾದ ವರ್‍ಷವೇ (೧೯೩೧) ಬಂಗಾಳ ಭಾಷೆಯಲ್ಲಿ ರವೀಂದ್ರನಾಥ್ ಠಾಕೂರ್ ಅವರ ಕತೆಯನ್ನು ಆಧರಿಸಿದ್ದ ‘ದೇನಾ ಪಾವೋನಾ’ ಎಂಬ ಸಾಮಾಜಿಕ ಕತೆಯಿದ್ದ ಚಿತ್ರವೊಂದು ತೆರೆಕಂಡಿತು. ಆದರೆ ಅದು ಸುಮಾರು ಒಂದು ಗಂಟೆ ಅವಧಿಯ ಚಿತ್ರವಾದ ಕಾರಣ ಪೂರ್ಣ ಕಥಾಚಿತ್ರವೆಂದು ಪರಿಗಣಿಸಲಾಗದು.
***

‘ಬೇಡರ ಕಣ್ಣಪ್ಪ’ ಮೂಲಕ ಕನ್ನಡ ಚಿತ್ರರಂಗಕ್ಕೆ ದೊಡ್ಡ ತಿರುವನ್ನು ನೀಡಿದ ಎಚ್.ಎಲ್.ಎನ್. ಸಿಂಹ ಅವರು ಕನ್ನಡ ರಂಗಭೂಮಿ ಮತ್ತು ಚಿತ್ರರಂಗದ ಅಪ್ರತಿಮ ಪ್ರತಿಭೆ. ಮಳವಳ್ಳಿಯಲ್ಲಿ ಜನಿಸಿದ (೧೯೦೪) ಎಚ್. ಲಕ್ಷ್ಮೀನರಸಿಂಹ ಅವರಿಗೆ ಬಾಲ್ಯದಿಂದಲೂ ನಾಟಕದ ಬಗ್ಗೆ ಒಲವಿತ್ತು. ತಂದೆ ಸರ್ಕಾರಿ ಉದ್ಯೋಗಸ್ಥರು. ಹಾಗಾಗಿ ಮೈಸೂರಿನಲ್ಲಿ ವಿದ್ಯಾಭ್ಯಾಸ ದೊರೆಯಿತು. ಇಂಗ್ಲಿಷ್ ಸಾಹಿತ್ಯದಿಂದ ಪ್ರಭಾವಿತರಾಗಿದ್ದರು. (ಆ ಪ್ರಭಾವ ತಮ್ಮ ದೀರ್ಘ ಹೆಸರನ್ನು ಎಚ್.ಎಲ್.ಎನ್. ಸಿಂಹ ಎಂದು ಮೊಟಕುಗೊಳಿಸುವಲ್ಲಿಯೂ ಕಾರ್ಯನಿರ್ವಹಿಸಿದೆ. ಮುಂದೆ ಹೆಸರನ್ನು ಮೊಟುಕುಗೊಳಿಸುವುದೇ ಒಂದು ಟ್ರೆಂಡ್ ಆಯಿತು) ಮೈಸೂರಿನ ಮೆಥಾಡಿಸ್ಟ್ ಮಿಷನ್ ಹೈಸ್ಕೂಲಿನಲ್ಲಿ ವ್ಯಾಸಂಗ ಮಾಡುತ್ತಿರುವಾಗ ನಾಟಕದಲ್ಲಿ ಅಭಿನಯಿಸಲು ನಿರಾಕರಿಸಿದ ಕಾರಣಕ್ಕೆ ಒಂದೇ ದಿನದಲ್ಲಿ ‘ಡೆಸ್ಟಿನಿ ರೂಲ್ಸ್ ಹ್ಯೂಮಾನಿಟಿ’ ಎಂಬ ೨೦ ನಿಮಿಷಗಳ ನಾಟಕ ಬರೆದು ಅಭ್ಯಾಸ ಮಾಡಿದ ಸಾಹಸಿ. ಅವರ ಸಹಪಾಠಿ ಮತ್ತೋರ್ವ ಪ್ರತಿಭಾವಂತ ಕಲಾವಿದ ಮಹಮದ್ ಪೀರ್. ಚನ್ನಪಟ್ಟಣದ ಭಾರತ ಮನೋಲ್ಲಾಸಿನಿ ಸಭಾ ಎಂಬ ನಾಟಕ ಸಂಸ್ಥೆಯನ್ನು ಮೊದಲು ಪೀರ್ ಸಾಹೇಬರು ಸೇರಿಕೊಂಡರೆ ಸಿಂಹ ಅವರನ್ನು ಬಳಿಕ ಹಿಂಬಾಲಿಸಿದರು. ಅನಂತರ ಸಿ.ಬಿ. ಮಲ್ಲಪ್ಪ ಹಾಗೂ ಗುಬ್ಬಿ ಕಂಪನಿಯಲ್ಲಿ ತಮ್ಮ ನಟನಾ ವೃತ್ತಿಯನ್ನು ಮುಂದುವರೆಸಿದರು.

ರಾತ್ರಿಯಿಡಿ ನಡೆಯುವ ದೀರ್ಘ ಪೌರಾಣಿಕ ನಾಟಕಗಳಿಂದ ಬೇಸತ್ತ ಸಿಂಹ ಅವರು ಸಾಮಾಜಿಕ ನಾಟಕವನ್ನು ಬರೆಯಲು ನಿರ್ಧರಿಸಿದರು. ಪೀರ್ ಸಾಹೇಬರು ಕಟ್ಟಿದ್ದ ಸ್ವಂತ ಕಂಪನಿ ಚಂದ್ರಕಲಾ ನಾಟಕ ಮಂಡಲಿಗೆ ಸೇರಿದ ಸಿಂಹ ಅವರು ಮೂರುವರೆ ಗಂಟೆ ಅವಧಿಯ ಸಂಸಾರ ನೌಕ (೧೯೩೧) ನಾಟಕವನ್ನು ಬರೆದರು. ಸಂಗೀತದ ಭಾರವನ್ನು ಗದ್ಯನಾಟಕಗಳ ಕಡೆ ರಂಗಭೂಮಿ ಹೊರಳುವಂತೆ ಮಾಡಿದ ನಾಟಕವಿದು. ನಷ್ಟದಲ್ಲಿದ್ದ ಚಂದ್ರಕಲಾ ಮಂಡಲಿಗೆ ಈ ನಾಟಕವು ಪ್ರಾಣವಾಯು ತುಂಬಿತು. ನಾಟಕದ ನಾಯಕ ಸುಂದರನ ಪಾತ್ರದಲ್ಲಿ ಪೀರ್ ಸಾಹೇಬರು ಮತ್ತು ಮಾಧುವಾಗಿ ಸಿಂಹ ಅವರು ಅಭಿನಯಿಸುತ್ತಿದ್ದರು. ಸಂಸಾರ ನೌಕವು ರಂಗಭೂಮಿಯಲ್ಲಿ ಕಂಡ ಯಶಸ್ಸನ್ನು ಸಿನಿಮಾ ಅವತರಣಿಕೆಯಲ್ಲಿ ಪುನರಾವರ್ತಿಸಿತು. ನಾಟಕವು ತಮಿಳಿಗೂ ಭಾಷಾಂತರಗೊಂಡು ನೂರಾರು ಪ್ರದರ್ಶನ ಕಂಡಿತು. ಚಿತ್ರದ ತಮಿಳು ಅವತರಣಿಕೆ ೧೯೪೭ರಲ್ಲಿ ತಯಾರಾಯಿತು.

 

ಎಚ್.ಎಲ್.ಎನ್.ಸಿಂಹ ನಾಟಕ ಬರೆದು ನಿರ್ದೇಶಿಸಿದ ಅಬ್ಬಾ ಆ ಹುಡುಗಿ ಚಿತ್ರದಲ್ಲಿ ರಾಜ್, ಮೈನಾವತಿ; ಗುಣಸಾಗರಿ -ಪಂಡರೀಬಾಯಿ, ಬಿ. ಜಯಮ್ಮ

ಕೈಲಾಸಂ ಅವರು ಸಿಂಹ ಅವರಿಗಿಂತ ಮೊದಲೇ ಸಾಮಾಜಿಕ ನಾಟಕಗಳನ್ನು ರಚಿಸಿದ್ದರು. ಆದರೂ ರಂಗದ ಮೇಲೆ ಯಶಸ್ಸು ಕಂಡ ಮೊದಲ ಸಾಮಾಜಿಕ ನಾಟಕ ಪ್ರಾಯಶಃ ‘ಸಂಸಾರ ನೌಕ’ವೇ ಇರಬೇಕು. ಈ ಹಿಂದೆ ಪೀರ್ ಸಾಹೇಬರವರ ಕಂಪನಿಗಾಗಿ ಗೌತಮಬುದ್ಧ, ಶಹಜಹಾನ್ ನಾಟಕಗಳನ್ನು ಬರೆದು ಅವುಗಳಲ್ಲಿ ಕ್ರಮವಾಗಿ ಚನ್ನ ಮತ್ತು ಶಹಜಹಾನ್ ಪಾತ್ರಗಳಲ್ಲಿ ಸಿಂಹ ಅಭಿನಯಿಸುತ್ತಿದ್ದರು. ಶಹಜಹಾನ್ ಪಾತ್ರ ಅವರಿಗೆ ಅಪಾರ ಜನಮನ್ನಣೆ ಗಳಿಸಿಕೊಟ್ಟಿತ್ತು. ಆ ಪಾತ್ರವನ್ನು ಸಿಂಹ ಬಿಟ್ಟರೆ ಬೇರೆಯವರಿಗೆ ನಿರ್ವಹಿಸಲು ಸಾಧ್ಯವಾಗದೆಂಬಷ್ಟೇ ಜನಪ್ರಿಯವಾಗಿತ್ತು.

ಗುಬ್ಬಿ ಕಂಪನಿಯಲ್ಲಿರುವಾಗಲೇ ಆ ಸಂಸ್ಥೆ ತಯಾರಿಸಿದ ‘ಹಿಸ್ ಲವ್ ಅಫೇರ್’ ಮತ್ತು ‘ಸಾಂಗ್ ಆಫ್ ಲೈಫ್’ ಮೂಕಿ ಚಿತ್ರಗಳಲ್ಲಿ ಸಹ ನಿರ್ದೇಶಕರಾಗಿ, ನಟರಾಗಿ ಚಲನಚಿತ್ರರಂಗದ ಅನುಭವ ಗಳಿಸಿಕೊಂಡ ಸಿಂಹ ಅವರು ಅದಕ್ಕೂ ಮೊದಲು ಗುಬ್ಬಿ ವೀರಣ್ಣನವರ ಸಲಹೆಯಂತೆ ಮುಂಬೈನಲ್ಲಿ ಚಲನಚಿತ್ರಗಳ ಚಿತ್ರೀಕರಣ, ನಿರ್ದೇಶನವನ್ನು ಕಲಿತು ಬಂದರು.

೧೯೩೬ರಲ್ಲಿ ಬಿಡುಗಡೆಯಾದ ಅವರ ನಿರ್ದೇಶನದ ಸಂಸಾರ ನೌಕ ಚಿತ್ರವು ಸಿಂಹರವರಿಗೆ ಮಾಧ್ಯಮದ ಮೇಲಿದ್ದ ಹಿಡಿತವನ್ನು ಸಾಬೀತುಪಡಿಸಿತು. ಬಳಿಕ ಗುಬ್ಬಿ ಕಂಪನಿಯವರಿಗಾಗಿ ನಿರ್ದೇಶಿಸಿದ ಗುಣಸಾಗರಿ ಸಾಮಾಜಿಕ ಚಿತ್ರ ಮತ್ತೆ ಯಶಸ್ಸು ಕಂಡಿತ್ತು. ಅದು ಪಂಡರೀಬಾಯಿಯವರ ಅಭಿನಯದ ಮೊದಲ ಚಿತ್ರ. ಚಿತ್ರವನ್ನು ತಮಿಳು ಭಾಷೆಯಲ್ಲಿ ಸತ್ಯ ಶೋಧನೈ (೧೯೫೮) ಹೆಸರಿನಲ್ಲಿ ಅವರೇ ನಿರ್ದೇಶಿಸಿದರು. ಗುಬ್ಬಿ ಸಂಸ್ಥೆಯು ಎವಿ‌ಎಂರವರೊಡಗೂಡಿ ಸಿಂಹ ಅವರ ನಿರ್ದೇಶನದಲ್ಲಿ ತಯಾರಿಸಿದ ಬೇಡರ ಕಣ್ಣಪ್ಪ ಅಭೂತಪೂರ್ವ ಯಶಸ್ಸು ಕಂಡಿತು. ತೆಲುಗು ಆವೃತ್ತಿ ಕಾಳಹಸ್ತಿ ಮಹಾತ್ಮ್ಯಂ ಚಿತ್ರದಲ್ಲಿ ರಾಜ್‌ರವರನ್ನೇ ನಾಯಕನನ್ನಾಗಿ ಮಾಡಿ ಮತ್ತೆ ಸಿಂಹ ಅವರೇ ನಿರ್ದೇಶಿಸಿದರು. ಇದಲ್ಲದೆ ಎವಿ‌ಎಂರವರು ತಯಾರಿಸಿದ ಆರೆನ್ನಾರ್-ಜಮುನಾ ಪ್ರಧಾನ ಭೂಮಿಕೆಯಲ್ಲಿದ್ದ ‘ಆದರ್ಶ ಸತಿ’ (೧೯೫೫) ಚಿತ್ರಕ್ಕೆ ಚಿತ್ರಕಥೆ ಮತ್ತು ಸಂಭಾಷಣೆಯನ್ನೂ ಸಹ ರಚಿಸಿದ್ದರು. ಷ್ಟೇಕ್ಸ್‌ಪಿಯರ್‌ನ ‘ದಿ ಟೇಮಿಂಗ್ ಆಫ್ ದಿ ಶ್ರೂ’ ನಾಟಕವನ್ನು ಆಧರಿಸಿ ತಾವೇ ಬರೆದ ನಾಟಕ ‘ಅಬ್ಬಾ ಆ ಹುಡುಗಿ’(೧೯೫೯)ಯನ್ನು ಚಿತ್ರರೂಪಕ್ಕೆ ತಂದ ಸಿಂಹ ಅವರು ನಿರ್ದೇಶಿಸಿದ ಇತರ ಚಿತ್ರಗಳು ಪಂಡರೀಬಾಯಿಯವರು ನಿರ್ಮಿಸಿದ ‘ತೇಜಸ್ವಿನಿ’ (೧೯೬೨) ಮತ್ತು ಆರತಿಯವರು ಮೊದಲ ಬಾರಿಗೆ ನಾಯಕಿಯಾಗಿ ನಟಿಸಿದ ಅನುಗ್ರಹ (೧೯೭೧).

ಬಿ.ಆರ್. ಪಂತುಲು, ಎಂ.ವಿ. ರಾಜಮ್ಮ, ಹುಣಸೂರು ಕೃಷ್ಣಮೂರ್ತಿ, ಪಂಡರೀಬಾಯಿ, ಢಿಕ್ಕಿ ಮಾಧವರಾವ್, ರಾಜ್‌ಕುಮಾರ್, ನರಸಿಂಹರಾಜು, ಮೊದಲಾದವರು ಚಿತ್ರರಂಗ ಪ್ರವೇಶಿಸಲು ಅವಕಾಶ ಕಲ್ಪಿಸಿದವರು ಸಿಂಹ. ಹೊಸಬರನ್ನು ಸದಾ ಪ್ರೋತ್ಸಾಹಿಸುತ್ತಿದ್ದರು. ಅನುಗ್ರಹ ಚಿತ್ರದ ನಂತರ ರಾಜ್‌ರವರ ಭೂಮಿಕೆಯಲ್ಲಿ ಚಿತ್ರವೊಂದನ್ನು ನಿರ್ಮಿಸುವ ಸಿದ್ಧತೆಯಲ್ಲಿದ್ದಾಗಲೇ ಸಿಂಹರ ಆರೋಗ್ಯ ಹದಗೆಟ್ಟಿತು. ಮದುವೆ ಸಮಾರಂಭವೊಂದರಲ್ಲಿ ಭಾಗವಹಿಸಿದ ಅವರು ಹೃದಯಾಘಾತದಿಂದ ವಿಧಿವಶರಾದರು (೧೯೭೨).

ರಂಗಭೂಮಿಯಲ್ಲಿ ಹೊಸತನವನ್ನು ಹುಡುಕುತ್ತ, ಮೊದಲ ಸಾಮಾಜಿಕ ಚಿತ್ರವನ್ನು ತೆರೆಗೆ ತಂದ, ಮುಂದೆ ಬೇಡರ ಕಣ್ಣಪ್ಪ ಮೂಲಕ ಕನ್ನಡ ಚಿತ್ರರಂಗದ ಗತಿಯನ್ನೇ ಬದಲಿಸಿದ ಎಚ್.ಎಲ್.ಎನ್. ಸಿಂಹ ಅವರು ಕನ್ನಡ ಚಿತ್ರರಂಗದ ಪ್ರಾತಃಸ್ಮರಣೀಯರಲ್ಲಿ ಒಬ್ಬರಾಗಿ ಉಳಿದಿದ್ದಾರೆ.

ಸೈಡ್ ರೀಲ್

ಭಕ್ತ ಧ್ರುವ ಚಿತ್ರದ ಧ್ರುವನ ಪಾತ್ರದಲ್ಲಿ ರಂಗಕಲಾವಿದ ವರದಾಚಾರ್ ಅವರ ಮೊಮ್ಮಗ ಎಂ.ಮುತ್ತು ಹಾಗೂ ಕನಕಲಕ್ಷ್ಮಮ್ಮ

* ಕನ್ನಡದಲ್ಲಿ ಮೊದಲು ಬಿಡುಗಡೆಯಾದ ‘ಸತಿ ಸುಲೋಚನಾ’ ಚಿತ್ರವು ದೂರದ ಕೊಲ್ಹಾಪುರದಲ್ಲಿ ನಿರ್ಮಾಣಗೊಂಡಿದ್ದರೆ, ಮೊದಲು ಸೆಟ್ಟೇರಿದ ‘ಭಕ್ತ ಧ್ರುವ’ ಮುಂಬೈಯಲ್ಲಿ ತಯಾರಾಯಿತು. ಮೊದಲ ಸಾಮಾಜಿಕ ಚಿತ್ರ ‘ಸಂಸಾರ ನೌಕ’ ದಕ್ಷಿಣದ ಮದರಾಸಿನಲ್ಲಿ ನಿರ್ಮಾಣಗೊಂಡಿತು. ಹೀಗೆ ಆರಂಭದ ಚಿತ್ರಗಳು ಕರ್ನಾಟಕದ ನೆಲದಿಂದ ದೂರದ ನಾಡಿನ ವಿವಿಧ ಪ್ರದೇಶಗಳಲ್ಲಿ ಅಂಕುರಿಸಿದವು.

* ‘ಸಂಸಾರ ನೌಕ’ ಚಿತ್ರದ ಮೂಲಕ ನಾಯಕ ನಟರಾದ ಬಿ.ಆರ್. ಪಂತುಲು ಮತ್ತು ನಾಯಕಿಯಾದ ಎಂ.ವಿ. ರಾಜಮ್ಮ ಮುಂದೆ ಚಿತ್ರನಿರ್ಮಾಪಕರಾದರು. ಪದ್ಮಿನಿ ಪಿಕ್ಚರ್ಸ್ ಸಂಸ್ಥೆಯನ್ನು ಹುಟ್ಟುಹಾಕಿದ ಪಂತುಲು ತಾವು ತಯಾರಿಸಿದ ಅದ್ಧೂರಿ ಚಿತ್ರಗಳಿಂದಾಗಿ ಭಾರತದ ಸಿಸಿಲ್ ಡೀ ಮಿಲೆ ಎನಿಸಿಕೊಂಡು ಅದ್ದೂರಿ ಐತಿಹಾಸಿಕ ಪೌರಾಣಿಕ ಚಿತ್ರಗಳ ನಿರ್ಮಾಣಕ್ಕೆ ಹೆಸರುವಾಸಿಯಾದರು. ಪಂತುಲು ಮತ್ತು ರಾಜಮ್ಮ ಅವರು ಪದ್ಮಿನಿ ಪಿಕ್ಚರ್ಸ್‌ನ ಎಲ್ಲ ಚಿತ್ರಗಳಲ್ಲೂ ಅಭಿನಯಿಸಿರುವುದು ವಿಶೇಷ. (ಬೀದಿ ಬಸವಣ್ಣ ಹೊರತುಪಡಿಸಿ).

* ಚಿತ್ರದ ಅಥವಾ ವಹಿಸಿದ ಪಾತ್ರದ ಹೆಸರು ಕಲಾವಿದರ ಹೆಸರಿನ ಜೊತೆಗೆ ಅಂಟಿಕೊಳ್ಳುವ ರೂಢಿ ‘ಸಂಸಾರನೌಕ’ದಿಂದಲೇ ಆರಂಭವಾಯಿತೆನ್ನಬಹುದು. ಈ ಚಿತ್ರದಲ್ಲಿ ಖಳನಾಯಕ ದೀಕ್ಷಿತ ಅಥವಾ ಡಿಕ್ಕಿಯ ಪಾತ್ರ ವಹಿಸಿದ್ದ ಎಂ.ಮಾಧವರಾವ್ ಮುಂದೆ ಢಿಕ್ಕಿ ಮಾಧವರಾವ್ ಎಂದೇ ಪ್ರಸಿದ್ಧಿಯಾದರು. ಅವರು ಪದ್ಮಿನಿ ಪಿಚ್ಚರ್ಸ್ ಮತ್ತು ಮಹಾತ್ಮ ಪಿಕ್ಚರ್ಸ್ ಸಂಸ್ಥೆಯು ನಿರ್ಮಿಸಿದ ಚಿತ್ರಗಳ ಖಾಯಂ ನಟರಾಗಿದ್ದರು. ಢಿಕ್ಕಿ ಮಾಧವರಾವ್‌ರಂತೆಯೇ ಚಿತ್ರಗಳ ಹೆಸರಿನಿಂದ ಖ್ಯಾತರಾದವರು ತೂಗುದೀಪ ಶ್ರೀನಿವಾಸ್, ಶರಪಂಜರ ಶಿವರಾಮ್ ಮುಂತಾದವರು. ‘ಕರಗ ಶಕ್ತಿ’ ಎಂಬ ಹೆಸರಿನ ಪೂರ್ಣವಾಗದ ಚಿತ್ರದಲ್ಲಿ ನಟಿಸಿದ ಪ್ರಸಾದ್ ಅವರು ಮುಂದೆ ಶಕ್ತಿ ಪ್ರಸಾದ್ ಎಂಬ ಹೆಸರಿನಿಂದಲೇ ಕನ್ನಡಿಗರಿಗೆ ಪರಿಚಿತರದರು. ಇವೆಲ್ಲಕ್ಕೂ ಕಳಶವಿಟ್ಟಂತೆ ತಾವು ಅಭಿನಯಿಸಿದ ಪಾತ್ರದ ಹೆಸರಿನ ಜೊತೆ ಚಿರಪರಿಚಿತರಾದವರು ವಿ.ಸಿ.ಗಣೇಶನ್. ಛತ್ರಪತಿ ನಾಟಕದಲ್ಲಿ ಶಿವಾಜಿಯಾಗಿ ವಿಜೃಂಭಿಸುತ್ತಿದ್ದ ಅವರನ್ನು ಕಂಡು ದ್ರಾವಿಡ ಚಳವಳಿಯ ನೇತಾರ ಪೆರಿಯಾರ್ ಅವರಿಗೆ ಶಿವಾಜಿ ಗಣೇಶನ್ ಎಂದು ಮಾಡಿದ ನಾಮಕರಣದಿಂದಲೇ ಅವರು ಚಿತ್ರಜಗತ್ತಿಗೆ ಪರಿಚಿತರಾದರು. ಅಭಿನಯಿಸಿದ ಮೊದಲ ಚಿತ್ರ ‘ಪರಾಸಕ್ತಿ’(೧೯೫೨)ಯಿಂದಲೇ ಶಿವಾಜಿ ಗಣೇಶನ್ ಹೆಸರಿನ ಮೂಲಕ ಅವರು ಚಿತ್ರರಂಗ ಪ್ರವೇಶಿಸಿದರು.

 

ಚಿತ್ರ ಮತ್ತು ಪಾತ್ರಗಳ ಹೆಸರುಗಳ ಮೂಲಕ ಪ್ರಸಿದ್ಧರಾದವರು ‘ಶಿವಾಜಿ’ ಗಣೇಶನ್, ‘ತೂಗುದೀಪ’ ಶ್ರೀನಿವಾಸ್, ‘ಶಕ್ತಿ’ ಪ್ರಸಾದ್, ‘ಡಿಕ್ಕಿ’ ಮಾಧವರಾವ್
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೀಗಾಯಿತು
Next post ಈ ಸಲದ ಯುಗಾದಿ

ಸಣ್ಣ ಕತೆ

 • ಕಳ್ಳನ ಹೃದಯಸ್ಪಂದನ

  ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

 • ಎದಗೆ ಬಿದ್ದ ಕತೆ

  ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

 • ಮಾದಿತನ

  ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

 • ಕೂನನ ಮಗಳು ಕೆಂಚಿಯೂ….

  ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

 • ಮುದುಕನ ಮದುವೆ

  ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

cheap jordans|wholesale air max|wholesale jordans|wholesale jewelry|wholesale jerseys