ಕಳೆದ ಯುಗಾದಿಯಂತಲ್ಲ ಈ ಸಲದ ಯುಗಾದಿ
ಕಳೆದ ಯುಗಾದಿ ಹುಸಿಮಳೆಯಂತೆ ಮಿಂಚಿ ಗುಡುಗಿ
ಹೊರಟು ಹೋಯಿತು ನೆಲವನ್ನು ತೊಯ್ಯದೆ

ಈ ಸಲದ ಯುಗಾದಿ ನಿಜಕ್ಕೂ ಹೊಸ ಯುಗವನ್ನು
ತೆರೆಯುವುದು-ಎಂತಲೇ ಹೊಸ ತೀರ್ಮಾನಗಳ
ಮಾಡೋಣವೆಂದು ಕುಳಿತರೆ ಸಾಕು ಆಕ್ರಮಿಸುತ್ತವೆ

ಸೊಳ್ಳೆಗಳು! ಈ ಯುಗದ ಆದಿಯಲ್ಲಿ ನೀನು,
ಕೊನೆಯಲ್ಲಿ ನಾವು ಎಂದು ಹಾಡುತ್ತವೆ. ಹೆದರಲಾರೆ
ಕೊಂಡು ತಂದಿರುವೆ ಹೊಸತೊಂದು ಸೊಳ್ಳೆ ಪರದೆ

ಕಳೆದ ಯುಗಾದಿಯಂತಲ್ಲ ಈ ಯುಗಾದಿಯೆಂಬು-
ದೀ ಕ್ರಿಮಿಕೀಟಗಳಿಗೇನು ಗೊತ್ತು? ಕಳೆದ ಯುಗಾದಿಗೆ
ಗಸಗಸೆ ಪಾಯಸ, ಸೀಕರಣೆ, ಹೊಸ ಬಟ್ಟೆ ಬರೆ

ಸಿನೆಮ, ಸ್ತ್ರೀಸಂಗ, ಬಹಳ ಮಜವಿತ್ತು ನಿಜ; ಈ ಬಾರಿ
ಇವೊಂದೂ ಇಲ್ಲ. ನೆನಪುಗಳಷ್ಟೆ ಇವೆ. ಕಾರಣ
ವಾಸ್ತವಕ್ಕಿಂತ ಅದರ ನೆನಪೇ ಹೆಚ್ಚು ಸವಿಯೆಂದು

ಸವಿಯುವೆನು ಗಾಳಿಯನು, ಗಾಳಿಯಲಿ ತೇಲಿ ಬರುವ
ನೆರೆಮನೆಯ ಸುಂದರಿಯ ಅಡುಗೆಯ ಸುವಾಸವನು!
ಈ ಸಲದ ಯುಗಾದಿಗೆ ಗ್ರೀಕರ ನಾಟಕಗಳು

ಅಯನೆಸ್ಕೊ ಕಥೆಗಳು, ಅನಂತಮೂರ್ತಿಯ ‘ಅವಸ್ಥೆ’
ಸಾಕಲ್ಲ ಒಬ್ಬ ಲೇಖಕನಿಗಿನ್ನೇನು ಬೇಕು?
ಅಲ್ಲದೆ ನನ್ನದೂ ಕೆಲವು ತುಣುಕುಗಳಿವೆ ಬಿಡಿಯಾಗಿ

ಗಾಳಿಯಲ್ಲಿ ಹಾರಿಹೋಗದಂತೆ ಹರಿದ್ವಾರದಿಂದ ತರಿಸಿದ
ಕಲ್ಲೊಂದನಿರಿಸಿರುವೆ. ಎಷ್ಟೋ ಸಾವಿರ ವರುಷ
ಗಂಗೆಯಲಿ ಮೈ ತೊಳೆದು ನುಣುಪಾದ ದುಂಡುಕಲ್ಲು

ಕುಳಿತಿದೆ ನಿಜಕ್ಕೂ ನನ್ನ ಮನಸ್ಸಾಕ್ಷಿಯ ಮೇಲೆ
ನನ್ನ ವಾಗರ್ಥಗಳ ಪಾಪವನ್ನು ತನ್ನೊಳಗೆ ಹೀರುತ್ತ
ನಿಮಿಷ ನಿಮಿಷವೂ ಅದರ ಭಾರ ಹೆಚ್ಚುತ್ತ
****

Latest posts by ತಿರುಮಲೇಶ್ ಕೆ ವಿ (see all)