ಏನ ಮೋಹಿಸಲಿ ನಾನೇನ ಮೋಹಿಸಲಿ

ಹೂವ ಮೋಹಿಸಲೋ ಗಂಧವ ಮೋಹಿಸಲೋ
ಹೂಗಂಧ ಒಂದಾದ
ಬೆಡಗ ಮೋಹಿಸಲೋ

ಹೆಣ್ಣ ಮೋಹಿಸಲೋ ಸೌಂದರ್ಯ ಮೋಹಿಸಲೋ
ಹೆಣ್ಣು ಸೌಂದರ್ಯ ಒಂದಾದ
ಸೊಬಗ ಮೋಹಿಸಲೋ

ಭೃಂಗವ ಮೋಹಿಸಲೋ ನಾದವ ಮೋಹಿಸಲೋ
ಭೃಂಗನಾದ ಒಂದಾದ
ಸಂಗ ಮೋಹಿಸಲೋ

ನರ್ತಕಿಯ ಮೋಹಿಸಲೋ ನರ್ತನವ ಮೋಹಿಸಲೋ
ನರ್ತಕಿ ನರ್ತನ ಒಂದಾದ
ವರ್ತುಲ ಮೋಹಿಸಲೋ

ಗಾಯಕಿಯ ಮೋಹಿಸಲೋ ಗಾಯನವ ಮೋಹಿಸಲೋ
ಗಾಯಕಿ ಗಾಯನ ಒಂದಾದ
ತನ್ಮಯವ ಮೋಹಿಸಲೋ

ನಟಿಯ ಮೋಹಿಸಲೋ ನಟನೆಯ ಮೋಹಿಸಲೋ
ನಟಿ ನಟನೆ ಒಂದಾದ
ಮಾಯವ ಮೋಹಿಸಲೋ

ಹೆಗಲ ಮೋಹಿಸಲೋ ಇರುಳ ಮೋಹಿಸಲೋ
ಹಗಲಿರುಳು ಒಂದಾದ
ಸಂಧ್ಯೆಯ ಮೋಹಿಸಲೋ

ಶಿಲೆಯ ಮೋಹಿಸಲೋ ವಿಗ್ರಹವ ಮೋಹಿಸಲೋ
ಶಿಲಾ ವಿಗ್ರಹವು ಒಂದಾದ
ಶಿಲ್ಪ ದಿವ್ಯವ ಮೋಹಿಸಲೋ

ಕಾಯ ಮೋಹಿಸಲೋ ಜೀವ ಮೋಹಿಸಲೋ
ಕಾಯ ಜೀವಗಳು ಒಂದಾದ
ಚೈತನ್ಯವ ಮೋಹಿಸಲೋ
*****