೧
ಈ ಕದಡಿದ ಕೊಳ ತಿಳಿಯಾಗುವುದಿಲ್ಲ.
ಯಾಕೆಂದರೆ ಅದು ಸ್ಫಟಿಕಜಲದಾಗರವಲ್ಲ
ಕೆಂಪು ಕೆಂಪು ಓಕುಳಿಯ ಸುರಿಸುವ ಸಂತೆ
೨
ಬಿಳಿತೊಗಲಿನ ಗೋಡೆಯ ಮೇಲೆ
ಬೆಳೆಯುತ್ತಿದೆ ಊರು ನಗರ
ಕೆತ್ತಸಿಕೊಂಡ ಮುಖಗಳಲ್ಲಿ ಮಾರ್ದವತೆಯಿಲ್ಲ.
೩
ತರು ಲತೆಗಳು ಅಲ್ಲಿಲ್ಲಿ ಬೋಳಿಸಿಕೊಂಡ
ಸುಂದರಾಂಗಿಯರು, ಕಾರ್ಬನ್ನಿನ ಕ್ರೀಮಿಗೆ
ಕಪ್ಪುಂಡು ಅಮವಾಸ್ಯೆಯ ಬಣ್ಣ.
೪
ಶಾಂತಿಗಾಗಿ ಕ್ರಾಂತಿ ಎನ್ನುವ ಭ್ರಾಂತಿ.
ಜಾತಿಯಂತಕನ ನಾಲಿಗೆಗೆ
ಭಕ್ಷ ಭೋಜನ ರಕ್ತಸಿಂಚನ
ಆಂಧ್ರ ತೆಲಂಗಾಣ.
ಮರ್ಯಾದಾ ಹತ್ಯೆ ಬಾಣದ ಇನ್ನೊಂದು ತುದಿ.
೫
ನೆರಳಿನಲ್ಲಿ ನೇಗಿಲು ಕಟ್ಟುವ ಜನ
ಮಹಡಿಯ ಮನೆಗಳಲ್ಲಿ ಮಿಂಚುವ ಮೋಹನಾಂಗಿಯರು
ಪವಿತ್ರತೆಗೆ ಹಲಬುತ್ತ ಒಳಗೊಳಗೆ ಪುಡಿಪುಡಿ
೬
ಸಹನೆಗೆ ಉಪಸರ್ಗ ಬೆರೆಸಿ
ಬೆಳೆಸಿದ್ದೆ ತಪ್ಪಾಯ್ತೇ ಅಸಹನೆ ಈಗ
ವಿಷಯವ್ಯಾಪಿ. ವಿಶ್ವ ವ್ಯಾಪಿ.
೭.
ಅಲ್ಲಿ ಸಿಯಾಚಿನ್ನಲ್ಲಿ ಹೆತ್ತೊಡಲ ಮರೆತು
ಹೊತ್ತೊಡಲ ಋಣಹರಿಸಿ ಹುತಾತ್ಮರು
ಮಣ್ಣಬಯಕೆಗೆ ಹೊನ್ನಹೊದಿಕೆಗೆ
ಇಲ್ಲಿ ತಾಯ್ಗರ್ಭ ಸೀಳಿದರು.
೮
ಕಗ್ಗತ್ತಲ ಕ್ಷಣಗಳಲ್ಲೆ ರಕ್ತ ಬೀಜಾಸುರರ
ಚಿತ್ರಗಳು ರೂಪಗೊಳ್ಳುತ್ತವೆ.
ಮದಿರೆ, ಮಾನಿನಿ, ಮಣ್ಣು ಮೋಕ್ಷಗೊಳ್ಳದ
ಮಂತ್ರಗಳು ಪ್ರಳಯಕಾಲದವರೆಗೂ
೯
ಸರಕಾರಿಗಂಗಳದಿ ಉಣ್ಣುತ್ತಲೇ
ರಹಸ್ಯ ವರದಿ ಸರಕು ವ್ಯಾಪಾರ
ನೆರೆಮನೆಯ ದೊರೆಯಣ್ಣಗಳ ಮಾರುಕಟ್ಟೆಯಲ್ಲಿ ಬಿಸಿಬಿಸಿ
ಆದರೆ ಬಡಪಾಯಿ ವೇಮುಲಗೆ
ಕಟ್ಟಿದ್ದು ಬಹು ದೊಡ್ಡ ಪಟ್ಟ
೧೦
ಶತ ಶತಮಾನಗಳ ಚರಿತ್ರೆಯ ಚೀಲ
ತುಂಬಿಕೊಂಡಿದ್ದು ಬದಲಿಲ್ಲ.
ರಾಜಕಾರಣಕ್ಕೇನು? ಗೊತ್ತಿರುವುದಿಷ್ಟೇ
ತಮ್ಮವಾದದ ಶವಪೆಟ್ಟಿಗೆಗೆ ಹೆಣ ಯಾರದ್ದಾದರೇನು?
ಮೊಳೆ ಹೊಡೆದು ಸಿದ್ಧಮಾಡುವುದೇ ಪರಮಗುರಿ
*****