ಮೆಜೆಸ್ಟಿಕ್! ದಿಕ್ಕು ದಿಕ್ಕುಗಳಿಂದ ನೂರು ಕೆಲಸ ನೂರು ಕನಸು ಹೊತ್ತು ರಾಜಧಾನಿಗೆ ಬಂದವರು, ಮಹಾನಗರದ ಯಾವುದೋ ಮೂಲೆಯ ಸೇರಿಕೊಳ್ಳುವ ಧಾವಂತದವರು, ಗಾಜಿನ ಕೋಣೆಯೊಳಗೆ ನಿಂತ ಮಾಸದ ನಗೆಯ ಹುಡುಗಿ- ಕಾಂಕ್ರೀಟು ರಸ್ತೆಯ ಮೇಲೆ ಸರ್ರನೆ ಸರಿದಾಡುವ ಸಾವಿರಾರು ವಾಹನ, ಓಡು ನಡಗೆಯ ಆತುರದವರು, ಸಿನಿಮಾ ಪೋಸ್ಟರು ನೋಡುತ್ತ ಗಂಟೆಗಟ್ಟಲೆ ನಿಂತಲ್ಲಿಯೇ ನಿಲ್ಲುವವರು, ಟ್ರಾವೆಲ್ಸ್ ಏಜೆನ್ಸಿಯ ಹುಡುಗರು, ಸಾಲು ಸಿನಿಮಾ ಮಂದಿರಗಳು… ಇದು ಮೆಜೆಸ್ವಿಕ್! ಕರ್‍ನಾಟಕಕ್ಕೆ ಬೆಂಗಳೂರು ರಾಜಧಾನಿಯಾದರೆ, ಬೆಂಗಳೂರಿಗೆ ಮೆಜೆಸ್ಟಿಕ್ ರಾಜಧಾನಿ. ಈ ಮೆಜೆಸ್ಟಿಕ್‍ನ ಹೃದಯಭಾಗ ಸುಭಾಷ್‍ನಗರ ಬಸ್ ನಿಲ್ದಾಣ!

ಊರಿಗೆ ಬಂದವಳು ನೀರಿಗೆ ಬರುವಂತೆ ಬೆಂಗಳೂರಿಗೆ ಬಂದವರೆಲ್ಲ ಸುಭಾಷ್‌ ನಗರ ಬಸ್ ನಿಲ್ದಾಣಕ್ಕೆ ಬರಲೇಬೇಕು. ಮೆಜೆಸ್ಟಿಕ್ಕಿಗೆ ಬಂದವರು ಅಲ್ಲಿನ ಮೇಲುಸೇತುವೆಯ ಚಂದಕ್ಕೆ ಮರುಳಾಗದಿರುವುದು ಹೇಗೆ ಸಾಧ್ಯ!? ಆ ಸೇತುವೆಯ ಮೇಲೆ ನಿಂತು ಉರುಳುಗಾಲಿಗಳ ವೇಗವೈಭವಕ್ಕೆ ಕಣ್ಣು ಕೀಲಿಸಿ, ಕರ್ಚೀಪು- ಪೆನ್ನು ಪೇಪರ್ರು- ಜಿರಲೆ ಗುಳಿಗೆ- ಕಡಲೆಕಾಯಿ ಬೀಜ- ಪಾಪ್‌ಕಾರ್ನ್- ಇತ್ಯಾದಿಗಳ ಮಾರಾಟದ ಸಂತೆಯ ಗದ್ದಲಕ್ಕೆ ಕಿವಿಗಳ ಕೊಟ್ಟಿರುವಾಗ ಅದೆಲ್ಲಿಂದಲೋ ತೇಲಿಬರುತ್ತದೆ ಕೊಳಲು ದನಿ, ಅಲೆ ಅಲೆಯಾಗಿ. ಈ ಕಾಂಕ್ರೀಟ್ ಗೋಕುಲಕ್ಕೆ ಅದೆಲ್ಲಿಂದ ಬಂದ ಕೃಷ್ಣ!

ಆತ ಕೃಷ್ಣನಲ್ಲ; ಅಂದಾನಪ್ಪ.

ಕಪ್ಪು ಬಳಿದುಕೊಂಡ ರಸ್ತೆಯ ಮೇಲೆ ತಿರುಪತಿ ತಿಮ್ಮಪ್ಪ, ಗಣೇಶ, ಆಂಜನೇಯರ ಬೃಹತ್ ಚಿತ್ರ ಬಿಡಿಸುವ ಕಲಾವಿದ; ಯಾವ ಆಧುನಿಕ ಟ್ಯೂನ್ಗಳಿಗೂ ಸಾಟಿಯಾಗುವ ಮಾಂತ್ರಿಕ ರಾಗವೊಂದನ್ನು ಗುನುಗುತ್ತಾ ಸಾಗುವ ಜೋಗಿತಿ; ಆಕಾಶದ ಬಣ್ಣ ನೋಡಿ, ಹಕ್ಕಿಗಳ ಕಲರವ ಕೇಳಿ ಮಳೆಬೆಳೆಯ ಕಣಿ ನುಡಿವ ಮಣ್ಣಿನ ಮಗ- ಇವರೆಲ್ಲಾ ನಮ್ಮ ನಡುವಿನ ಅದ್ಭುತಗಳು. ಇಂಥದೊಂದು ಆದ್ಬುತ ಚೇತನ ಅಂದಾನಪ್ಪ. ಈತ ಮೆಜೆಸ್ಟಿಕ್ ಎಂಬ ಕಾಂಕ್ರೀಟ್ ಕಾಡಿನ ಹೂವು.

ಅಂದಾನಪ್ಪನ ಉಚ್ಛಾಸ ನಿಶ್ವಾಸಗಳಿಗೆ ಮರು ನುಡಿಯುತ್ತದೆ ಕೊಳಲು. ಮೊಣಕಾಲ ಸಂದಿಯ ತಾಳ ಲಯ ಕಟ್ಟುತ್ತದೆ. ಆ ಕ್ಷಣ ಸಂಗೀತದ ಲಹರಿ ಅಲೆಯಾಗುತ್ತದೆ. ಆ ನವಿರು ನಿಮಿಷಗಳಿಗೆ ಸಾಕ್ಷಿಯಾಗುತ್ತದೆ- ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಸುಭಾಷ್ ನಗರ ಬಸ್ ನಿಲ್ದಾಣದ ಮೇಲು ಸೇತುವೆ. ತಂತಮ್ಮ ತಾವ ಸೇರಿಕೊಳ್ಳುವ ಓಡು ನಡಗೆಯ ಆತುರದ ನಡುವೆಯೂ ನಗರವಾಸಿಗಳು, ದಿಕ್ಕು ದಿಕ್ಕುಗಳಿಂದ ರಾಜಧಾನಿಗೆ -ಬಂದವರು, ಕ್ಷಣ ನಿಂತು ನಾದದಲೆಗೆ ಕಿವಿಯೊಡ್ಡುತ್ತಾರೆ. ಮನಸ್ಸು ಬಂದರೆ ಪಾವಲಿಯೊ ಎಂಟಾಣೆಯೊ ಆಥವಾ ಗಾಲಿರುಪಾಯಿ ಬಿಲ್ಲೆಯೊ ಅಂದಾನಪ್ಪನ ಮುಂದಿನ ಹಾಸುಟವೆಲ್ಲಿಗೆ.

ಅಂದಾನಪ್ಪನಂತೆ ನೂರಾರು ಕಲಾವಿದರು ಕೊಳಲು ನುಡಿಸುತ್ತಾರೆ, ಅವರ ಉಸಿರೂ ತುಂಬುತ್ತದೆ ಕೊಳಲಿಗೆ ಉಸಿರು. ಆದರೆ ಇತರರು ಕೊಳಲು ನುಡಿಸುವುದಕ್ಕೂ, ಅಂದಾನಪ್ಪ ಕೊಳಲು ನುಡಿಸುವುದಕ್ಕೂ ವ್ಯತ್ಯಾಸವಿದೆ. ಇತರರ ಕೊಳಲುಗಳು ಅವರ ಬಾಯಿಗಳ ಉಸಿರಿನಿಂದ ಜೀವಂತವಾದರೆ, ಅಂದಾನಪ್ಪನ ಕೊಳಲು ಜೀವಂತವಾಗುವುದು ಅವನ ಮೂಗಿನ ಉಚ್ಛ್ವಾಸ ನಿಶ್ವಾಸಗಳಿಂದ. ಆ ಕಾರಣದಿಂದಲೇ ಅಂದಾನಪ್ಪನೊಳಗಿನ ಕಲಾವಿದ ಭಾವ ಹಾಗೂ ಬುದ್ಧಿಗೆ ಹೆಚ್ಚು ಹತ್ತಿರವಾಗುತ್ತಾನೆ.

ಅಂದಾನಪ್ಪ ದೃಷ್ಟಿಹೀನ. ಹದಿನೈದು ವರ್ಷದ ಬಾಲಕನಾಗಿದ್ದಾಗ ಕಾಡಿದ ‘ಅಮ್ಮ’ನಿಂದ ಅಂದಾನಪ್ಪನ ಕಣ್ಣುಗಳು ಕುರುಡಾಗಿವೆ. ಈ ಪರಿಯ ಅಂದಾನಪ್ಪನ ಸಹೃದತೆಯಿಂದ ಮಾತನಾಡಿಸಿ ನೋಡಿ. ಕೊಳಲು ಕೆಳಗಿಳಿಸಿ, ಉಸಿರೆಳೆದುಕೊಂಡು ತನ್ನ ಕಥೆ ಹೇಳತೊಡಗುತ್ತಾನೆ:

ಮಂಡ್ಯ ಜಿಲ್ಲೆಯ ಮದ್ದೂರಿನ ಬಳಿಯ ಚಿಕ್ಕೇನಹಳ್ಳಿ ಆತನ ಊರು. ಅಪ್ಪನಿಂದ ಬಂದ ಸೂರು ಅವನ ಏಕೈಕ ಆಸ್ತಿ. ಐದನೇ ತರಗತಿಗೇ ಓದಿಗೆ ನಮಸ್ಕಾರ ಹೇಳಿದ ಅಂದಾನಪ್ಪನಿಗೆ ಹತ್ತಿರವಾದದ್ದು ಕೊಳಲು, ತಬಲ, ಹಾರ್ಮೋನಿಯಂಗಳು. ಕಣ್ಣು ಹೋದಾಗ ಕುರುಡಾದೆನೆಂದು ಕೈ ಕಟ್ಟಿ ಕೂರುವಂತಿರಲಿಲ್ಲ. ಹೊಟ್ಟೆಯ ಹಸಿವೆಗೆ ಬೇರೆ ಆಸರೆಗಳು ಇಲ್ಲದ್ದರಿಂದ ಕಲೆಯೇ ಅನ್ನವಾಯಿತು. ಅಂದಾನಪ್ಪ ನಾಟಕಗಳಿಗೆ ವಾದ್ಯ ನುಡಿಸುತ್ತಾನೆ. ನಾಟಕಗಳು ಇಲ್ಲದ ದಿನಗಳಲ್ಲಿ ಬೆಂಗಳೂರಿನ ರಸ್ತೆಗಳಲ್ಲಿ ಕೊಳಲು ಬಾರಿಸಿತ್ತಾನೆ. ಹೊಟ್ಟೆಗಾಗಿ ಮೂಗಿನಿಂದ ಕೊಳಲಿಗೆ ಉಸಿರು ತುಂಬುವ ಅವನ ಕಂಡು ಮರುಕ ಉಕ್ಕಿದವರು ಜೇಬಲ್ಲಿನ ಚಿಲ್ಲರೆ ಎಸೆಯುತ್ತಾರೆ. ಆ ಚಿಲ್ಲರೆ ಕಾಸುಗಳು ಆತನ ಪಾಲಿಗೆ ಆಂದಿನ ಆನ್ನ.

ಅಂದಾನಪ್ಪ- ಲಕ್ಷ್ಮಮ್ಮ ದಂಪತಿಗೆ ಏಳು ಮಕ್ಕಳು. ತನ್ನ ದುಡಿಮೆಯಿಂದಲೇ ಅಂದಾನಪ್ಪ ಮಕ್ಕಳಿಗೆ ಮದುವೆ ಮಾಡಿದ್ದಾನೆ. ವೃದ್ಧಾಪ್ಯ ವೇತನದ ಹೊರತು ಸರ್ಕಾರದಿಂದ ಮತ್ತಾವ ಅನುಕೂಲವೂ ಅಂದಾನಪ್ಪನಿಗೆ ದೊರೆತಿಲ್ಲ. ನಿವೇಶನಕ್ಕಾಗಿ ಸರ್ಕಾರಕ್ಕೆ ಸಲ್ಲಿಸಿದ ಅರ್ಜಿ ದೂಳು ತಿನ್ನುತ್ತಿದೆ. ತಾನು ಜೀವಂತವಿರುವಾಗಲೇ ಅರ್ಜಿಗೆ ಜೀವ ಬರಬಹುದೆಂದು ಅಂದಾನಪ್ಪ ಕಾಯುತ್ತಿದ್ದಾನೆ.

ಮಾತು ಮುಗಿಸಿದ ಅಂದಾನಪ್ಪ ಮತ್ತೆ ಕೊಳಲು ಕೈಗೆತ್ತಿಕೊಳ್ಳುತ್ತಾನೆ. ಕೊಳಲ ದನಿ ಅಲೆ ಅಲೆಯಾಗುತ್ತದೆ. ಸೇತುವೆಯ ಕೆಳಗೆ ಬಸ್ಸುಗಳ ಭೋರ್ಗರೆತದ ಸದ್ದು ಮೊರೆಯುತ್ತದೆ.
* * *

ಮೇಲಿನ ಮಾತುಕತೆ ನಡೆದು ವರ್ಷಗಳೇ ಆಗಿದೆ. ಅಂದಾನಪ್ಪನೊಂದಿಗಿನ ಮಾತುಕತೆ ಹಾಗು ಕೊಳಲ ದನಿ ಮತ್ತೆ ಬಲವಾಗಿ ಕಾಡತೊಡಗಿದ್ದು ಮೊನ್ನೆ ‘ಎಕ್ಸ್ ಕ್ಯೂಸ್ ಮಿ’ ಸಿನಿಮಾ ನೋಡಿದಾಗಿನಿಂದ. ‘ಎಕ್ಸ್ ಕ್ಯೂಸ್ ಮಿ’ ಚಿತ್ರದ ಒಂದೇ ಒಂದು ದೃಶ್ಯದಲ್ಲಿ ಅಂದಾನಪ್ಪ ಕಾಣಿಸುತ್ತಾನೆ. ಯಥಾಪ್ರಕಾರ ಕೊಳಲ ಗಾನ. ನಾಯಕಿ ರಮ್ಯಳನ್ನು ಪರಿಚಯಿಸುವ, ದೃಶ್ಯವದು. ನಾಯಕಿ ಗೆಳತಿಯರೊಂದಿಗೆ ಪ್ರವಾಸ ಬಂದಿದ್ದಾಳೆ. ಇನ್ನೇನು ಬಸ್ಸು ಹೊರಡಬೇಕು. ಅಷ್ಟರಲ್ಲಿ ಕೊಳಲು ಜೀವತುಂಬಿಕೊಳ್ಳತೊಡಗುತ್ತದೆ. ಮರದಡಿ ಕುಳಿತ ಅಂದಾನಪ್ಪ ಕೊಳಲಲ್ಲಿ ಲೀನ. ಅಷ್ಟರಲ್ಲಿಯೇ ಧುತ್ತೆಂದು ಪ್ರತ್ಯಕ್ಷನಾಗುವ ನಾಯಕ ತನ್ನ ವಯಲಿನ್ ಕುಯ್ಯತೊಡಗುತ್ತಾನೆ. ವಯಲಿನ್ ಜೊತೆ ಅಂದಾನಪ್ಪನ ಕೊಳಲ ಪೋಟಿ. ಸಂಗೀತಪ್ರಿಯೆ ನಾಯಕಿಗೆ ಹಬ್ಬ. ಗೆಳತಿಯೊಬ್ಬಳು ನಾಯಕಿಯನ್ನು ಬಸ್ಸಿನೊಳಗೆ ಎಳೆದುಕೊಳ್ಳುವುದರೊಂದಿಗೆ ದೃಶ್ಯ ಕರಗಿಹೋಗುತ್ತದೆ.

ಪ್ರೇಮ್ ನಿರ್ದೇಶನದ ‘ಎಕ್ಸ್ ಕ್ಯೂಸ್ ಮಿ’ ಅಂಥಾ ಒಳ್ಳೆಯ ಚಿತ್ರವೇನಲ್ಲ. ಆದರೆ, ಚಿತ್ರದೊಳಗೆ ನಿರ್ದೇಶಕ ಪ್ರೇಮ್ ಕಟ್ಟಿಕೊಡುವ ಸಂಗೀತದಂಥ ಭಾವುಕ ದೃಶ್ಯಗಳು ಚಿತ್ರವನ್ನು ಆಪ್ತವಾಗಿಸುತ್ತವೆ.
*****