ಹರಿಯುವ ಹೊಳೆಗಳ ಜುಳುಜುಳು ರವದಲಿ
ಕನ್ನಡವಿದೆ ಸಿರಿಗನ್ನಡವು
ತುಳುಕುವ ಕಡಲಿನ ಅಲೆ ಮೊರೆತದಲಿ
ಕನ್ನಡವಿದೆ ನುಡಿಗನ್ನಡವು
ಹಾಡುವ ಕೋಗಿಲೆ ಗಾನದ ಇಂಪಲಿ
ಕನ್ನಡವಡಗಿದೆ ಕನ್ನಡವು
ಕೂಗುವ ಕಾಜಾಣದ ಮಾಧುರ್‍ಯದಿ
ಕನ್ನಡ ತುಂಬಿದೆ ಕನ್ನಡವು
ಅಂಬಾ ಎನ್ನುವ ಕರುವಿನ ದನಿಯಲಿ
ಕನ್ನಡ ಸೊಗಡಿದೆ ಕನ್ನಡವು
ಅಮ್ಮಾ ಎನ್ನುವ ಮಗುವಿನ ಕರೆಯಲಿ
ಕನ್ನಡ ಬೆಡಗಿದೆ ಕನ್ನಡವು
ಚಿಲಿಪಿಲಿ ಎನುತ ಹಾಡುವ ಹಕ್ಕಿಯ
ಕೊರಳಲಿ ತುಂಬಿದೆ ಕನ್ನಡವು
ಝೇಂಕರಿಸುತ ಹಾರಾಡುವ ಭೃಂಗದ
ಸ್ವರದಲಿ ಕೇಳಿದೆ ಕನ್ನಡವು
ಸುಯ್ಯನೆ ಬೀಸುವ ತಂಗಾಳಿಯಲಿ
ಕನ್ನಡ ಮಟ್ಟಿದೆ ಕನ್ನಡವು
ಗಿರಿಶೃಂಗಗಳ ಮೌನದ ತಪದಲೂ
ಕನ್ನಡ ಉಸಿರಿದೆ ಕನ್ನಡವು
*****