ಬಿಡುಗಡೆಯೆ! ದೇವರಿನಣಂ ಕಿರಿಯ ದೇವತೆಯೆ?
ಭಾರತಕ್ಕೆ ಬಾರ, ನರನೆರಡನೆಯ ತಾಯೆ!
ಋದ್ಧಿ ಬುದ್ಧಿಗಳಕ್ಕನೆಂದು ಸಂಭಾವಿತೆಯೆ,
ನೀನೆಲ್ಲಿ ಶಾಂತಿಯಲ್ಲಿದೆ ನಿನ್ನ ಛಾಯೆ!
ಯೂರೋಪದಾವ ಗುಣಕೊಲಿದಲ್ಲಿ ನೀ ನಿಂತು
ಮಿಕ್ಕಿಳೆಯನವರ ತುಳಿಗಾಲ್ಗೆ ಬಾಗಿಸಿದೆ?
ಆಶ್ಯದಾವವಗುಣಕೆ ಮುಳಿದಕಟ ನೀನಿಂತು
ತೊರೆದೆಮ್ಮ ಕೋಟಿ ನಡೆಗೊಂಬೆಯಾಗಿಸಿದೆ?
ಕಾಡುಬೇರೆಮಗೂಡು! ಮಾಡೆಮಗೆ ಗವಿ ಬೀಡು!
ನೀಡು ಬಿಲ್ಲಂಬುಗಳ ಬತ್ತಲೆಯ ಬಾಳು!
ನೀನಾದರೆಂದೆಂದು ಬಿಡದೆ ನನ್ನೊಡನಾಡು–
ನೀನಿಲ್ಲದಕಟ ಬಾಳಲ್ಲ, ಕಡುಗೋಳು!
ಬಾರಮ್ಮ, ಬಾರೊಮ್ಮೆ ಭಾರತಕೆ ಬಾರ!
ಕತ್ತಲಿಸಿದೆಮಗೆ ಕಂತದ ರವಿಯ ತಾರ!
*****