ಬೋಧಿವೃಕ್ಷದ ಕೆಳಗೆ ಕುಳಿತ
ಬೋಧಿಸತ್ವ ಕೇಳುತಾನೆ
ತತ್ವಪದಗಳ

ಹಾಡುತಾಳೆ ಹರಿಣಿ
ಅತಿಶ್ರುತಿ ಮಾಡದಿರು ವಾದ್ಯದ ತಂತಿಗಳ
ಅತಿಶ್ರುತಿ ಮಾಡಿದರವು ತುಂಡರಿಸಿ ಬೀಳುವುವು
ಆಮೇಲವು ನುಡಿಯವೇನೂ
ಓ ಬೋಧಿಸತ್ವ

ಸಡಿಲಾಗಿಸದಿರು ವಾದ್ಯದ ತಂತಿಗಳ
ಸಡಿಲಾಗಿಸಿದರವು ಅಳುಕಿ ಬೀಳುವುವು
ಆಮೇಲವು ನುಡಿಯವೇನೂ
ಓ ಬೋಧಿಸತ್ವ

ಹದವಾಗಿ ಶ್ರುತಿ ಮಾಡಿದರೆ ಓ ಬೋಧಿಸತ್ವ
ತಂತಿಗಳು ನುಡಿಸುವುವು ಮಧುರ ಸಂಗೀತವ

ಉಪವಾಸವಿಡದಿರು ಅತಿಯಾಗಿ ದಣಿಸದಿರು
ದೇಹವ ಕಡೆಗಣಿಸದಿರು
ಪದಾರ್‍ಥವಿಲ್ಲದರ್‍ಥವಿಲ್ಲ
ಅರ್‍ಥವಿಲ್ಲದೆ ಪರಮಾರ್‍ಥವಿಲ್ಲ
ಓ ಬೋಧಿಸತ್ವ

ಧಾವಿಸಿ ನಡೆಯದಿರು ನೀ ತೆರಳುವ ಮಾರ್‍ಗವ
ಧಾವಿಸಿ ನಡೆದರೆ ನಿನಗೇನೊಂದೂ ಕಾಣಿಸದಯ್ಯಾ
ಹೊಲ ಗಿಡ ಮನೆ ಗುಡಿಸಲು
ಬೀದಿಯಲಾಡುವ ಮಕ್ಕಳು
ನೀರಿಗೆ ಹೋಗುವ ನೀರೆಯರು
ಯಾರೊಬ್ಬರು ಕಾಣಿಸರು
ಜೀವನವೇ ಮರೆಯಾಗುವುದು

ಸಾವಧಾನದಿಂದ ನಡೆ
ಸಮಾಧಾನ ಚಿತ್ತದಿಂದ ನಡೆ
ಇದೆ ಧ್ಯಾನ ಇದೆ ಬೋಧಿ
ಓ ಬೋಧಿಸತ್ವ
ಇದೇ ಮಧ್ಯಮ ಮಾರ್‍ಗ ಇದೇ ಉತ್ತಮ ಮಾರ್‍ಗ
*****