ಮುಸ್ಸ೦ಜೆಯ ಹೊತ್ತಿನಲಿ
ಗೂಡು ಸೇರುವ ತವಕದಲಿ
ಗುಂಪಾಗಿ ಹಾರುವ ಹಕ್ಕಿಗಳು,
ಮಧ್ಯಾಹ್ನ ನೆರಳಾಗಿದ್ದ ಮರಗಳ
ಬರಬರುತ್ತ ಕಡುಕಪ್ಪು ನೆರಳು
ಗಡುಸಾಗಿ ನಿಶ್ಚಲವಾಗಿ
ನೆಲ ಮುಗಿಲು ಒಂದಾಗಿ ಕ್ಷಿತಿಜದಲಿ
ಸಂಧಿಸುವ ರೇಖೆಯಲಿ ಒಂದಾದ
ಆಕಾಶ ಭೂಮಿಗಳ
ಸುಂದರ ಸಮ್ಮಿಲನ.
ಲೋಕದ ಜೀವರಾಶಿಗಳು
ಮೆಲ್ಲ ಮೆಲ್ಲನೆ ಕತ್ತಲೆಯ
ಮಡಿಲಿಗೆ ಶರಣಾಗತ
ಸದ್ದು ಗದ್ದಲ ಕೇಳಿಸದು,
ಮನಃಪಟಲದ ಮೇಲೆ
ಯಾವ ಚಿತ್ರವೂ ಕಾಣದು,
ಎಲ್ಲವೂ ಮಸು ಮಸುಕು
ಮೋಡಗಳಲ್ಲಿ ಮರೆಯಾಗುತ್ತ
ಹೊರಗೆ ಮತ್ತೆ ಇಣುಕುತ್ತ
ತನ್ನ ಮುಖದ ಮೇಲಿನ
ಕಲೆಗಳನ್ನು ಮುಚ್ಚಿಕೊಳ್ಳುತ್ತ
ನಾಚುತ್ತ ನಾಚುತ್ತ
ಮೆಲ್ಲಗೆ ಹೊರಬರುವ ಚ೦ದ್ರ
ಕಣ್ಣು ಮಿಟುಕಿಸುವ ತಾರೆಗಳ
ಕಂಡು ಗಲಿಬಿಲಿಗೊಂಡನು-
ಮೋಡಗಳ ಮರೆಯಲ್ಲಿ
ಮುಖ ಮುಚ್ಚಿಕೊಂಡನು.
*****