ಸುಳ್ಳ ನರಿಯು
ಕಳ್ಳ ವೇಷ
ಹಾಕ ಬಯಸಿತು

ಮೋಸ ಮಾಡಿ
ಹೊಸ ಬೇಟೆ
ಹಿಡಿಯ ಹೊರಟಿತು

ಬಿಳಿಯ ಕೋಟ
ನ್ನೊಂದು ತಾನು
ಧರಿಸಿ ಬಂದಿತು

ಸ್ಟೆತಾ ಸ್ಕೋಪು
ಕೈಲಿ ಹಿಡಿದು
ನಲಿಯತೊಡಗಿತು

ನಾನು ವೈದ್ಯನಾದೆ
ಎಂದು ಹೇಳಿ
ಕೊಂಡಿತು

ಒಂಟಿ ಕುದುರೆ
ಗಂಟಲಲ್ಲಿ
ನೋವು ಎಂದಿತು

ಭಾರಿ ಗಂಟು
ಕೊಡುವೆ ಎಂದು
ಆಸೆ ತೋರಿತು

ಪುಟ್ಟ ಮೊಲವು
ಜ್ವರದ ತಾಪದಿಂದ
ಬಂದಿತು

ಪರೀಕ್ಷೆಗೆಂದು
ಒಳಗೆ ಕರೆದು
ಗುಳುಂ ಮಾಡಿತು

ದಷ್ಟಪುಷ್ಟ
ಜಿಂಕೆಯೊಂದು
ಭೇಟಿ ನೀಡಿತು

ಸ್ಟೆತಾಸ್ಕೋಪಿನಿಂದ
ಅದರ ಮೆಟ್ರೆ
ಹಿಸುಕಿತು

ಭಾರಿ ವೈದ್ಯನಂತೆ
ತಾನು ಪೋಸು
ಕೊಟ್ಟಿತು

ನರಿಯು ವೈದ್ಯನಾದ
ಸುದ್ದಿ ಹುಲಿಗೆ
ತಿಳಿಯಿತು

ಬಾಯಿ ಹುಣ್ಣು
ಹುಲಿಗೆ ಒಂದು
ನೆಪವದಾಯಿತು

ಹುಲಿಯ ಕಂಡು
ನರಿಯ ಎದೆಯು
ನಡುಗ ಹತ್ತಿತು

ನಡುಗುತ್ತಿದ್ದ
ನರಿಗೆ ಹುಲಿಯು
ಅಭಯ ನೀಡಿತು

ಬಾಯಿ ಒಳಗೆ
ತಲೆಯನಿಟ್ಟು
ನೋಡು ಎಂದಿತು

ಕಳ್ಳ ನರಿಯ
ಸಾವು ಹುಲಿಯ
ಬಾಯೊಳಿದ್ದಿತು

ರುಂಡವಿರದ
ನರಿಯ ದೇಹ
ಹೊರಗೆ ಬಂದಿತು

ಮೋಸಗಾರ
ನರಿಗೆ ತಕ್ಕ
ಪಾಠ ಕಲಿಸಿತು

ಜಗದಲಿರುವ
ನರಿಗಳೆಲ್ಲ
ವೇಷ ತೊರೆಯಲಿ

ಕಪಟ ವೇಷ
ಸುಳ್ಳು ಮೋಸ
ಅಳಿದು ಹೋಗಲಿ.
*****