ಅವಿದ್ಯೆಯ ‘ಆವರಣ’

ಅವಿದ್ಯೆಯ ‘ಆವರಣ’

ಒತ್ತಿ ಹಣ್ಣು ಮಾಡಿದೊಡೆ
ಆದೆತ್ತಣ ರುಚಿಯಪ್ಪುದೋ
– ಅಲ್ಲಮ

‘ಆವರಣ’ ಕಾದಂಬರಿ ಬರುತ್ತಿರುವುದು ಗ್ರಾಹಕ ಸಂಸ್ಕೃತಿಯ ಕಾಲದಲ್ಲಿ. ಅದರ ಮಾರಾಟ, ಮರುಮುದ್ರಣಗಳೆಲ್ಲ ಭರದಿಂದ ಸಾಗುತ್ತಿದ್ದು, ಅದರ ಮೇಲಿನ ಚರ್ಚೆಗಳು ಖಂಡನೆಗಳು, ಭಜನೆಗಳು- ಎಲ್ಲವೂ ಕೃತಿಯ ಮಾರಾಟಕ್ಕೆ ಅನುಕೂಲಕರವಾಗಿ ಪರಿಣಮಿಸುತ್ತಿವೆ. ಇದು ಪ್ರಚಾರತಂತ್ರದ ಕಾಲವೂ ಹೌದು; ಪ್ರಚಾರವಿಲ್ಲದೆ ಯಾವೊಂದು ವಸ್ತುವೂ ಗಮನ ಸೆಳೆಯದೆಂದು ಇಂದಿನ ಗ್ರಾಹಕ ಸಮಾಜದ ನಂಬಿಕೆ. ಇದು ಮಾಯೆ, ಭ್ರಾಂತಿಯ ಸ್ವರೂಪ.

ಹಾಗೆ ನೋಡಿದರೆ ಭೈರಪ್ಪನವರ ಸಾಹಿತ್ಯ ಜನಪ್ರಿಯತೆಯ ಶೈಲಿಯಲ್ಲೇ ಸಾಗುವ ತರ್ಕ ಮತ್ತು ತತ್ತ್ವಗಳನ್ನೊಳಗೊಂಡಿದೆ. ಭೈರಪ್ಪನವರ ತರ್ಕ ಶೈಲಿಯನ್ನು ಮೆಚ್ಚುವ ಎಷ್ಟೋ ಓದುಗರಿದ್ದಾರೆ. ಅವರ ಬಹಳ ಕೃತಿಗಳು ಮರುಮುದ್ರಣ ಗೊಂಡಿವೆ. ಈ ಬಾರಿಯೂ ಒಂದು ತರ್ಕವನ್ನು ರೂಪಿಸುವ ಭೈರಪ್ಪ, ಅದನ್ನು ರೋಚಕವಾಗಿ ನಿರೂಪಿಸುವ ಪ್ರಯತ್ನ ಮಾಡಿದ್ದಾರೆ. ಆ ಕಾರಣಕ್ಕಾಗಿ ‘ಆವರಣ’ ಬಿಡುಗಡೆಯಾಗಿ ಅಲ್ಪ ದಿನಗಳ ಆಂತರದಲ್ಲೇ ನಾಲ್ಕೈದು ಮರುಮುದ್ರಣಗಳನ್ನು ಕಂಡಿದೆ. ಕಾದಂಬರಿಯ ಆರಂಭದಲ್ಲಿ “ಅವಿದ್ಯೆಯು ತಮೋರೂಪಿ, ಅವರಿಸುವಂಥದ್ದು. ಸತ್ಯವನ್ನು ತದ್ವಿರುದ್ಧವಾಗಿ ತಿಳಿಸುವುದಲ್ಲದೆ ಸಂದೇಹಕಾರಿ ಕೂಡ. ಇದು ವಸ್ತುಸ್ಥಿತಿಯನ್ನು ಗ್ರಹಿಸಲಾರದು”, (ಶಂಕರಗೀತಾಭಾಷ್ಯ) ಎನ್ನುವ ಉಲ್ಲೇಖವನ್ನು ಮಾಡಲಾಗಿದೆ. ಇತಿಹಾಸ ಮತ್ತು ಸತ್ಯದ ಶೋಧಗಳು ವಸ್ತುನಿಷ್ಟತೆಯಿಂದ ಕೂಡಿರಬೇಕೆನ್ನುವ ನಿಲುವಿನಿಂದ ಹೊರಡುವ ಕಾದಂಬರಿ ಸ್ವಯಂ ಅವಿದ್ಯೆಗೆ ತುತ್ತಾಗಿ, ಆವರಣಗಳನ್ನು ದಾಟಲಾರದೆ ಹೋಗುವುದು ಒಂದು ಸಾಂದರ್ಭಿಕ ವ್ಯಂಗ್ಯ.

ಭೈರಪ್ಪನವರ ಪ್ರಕಾರ ಇತಿಹಾಸದ ಸುತ್ತ ಮಾಯೆಯ ಜಾಲ ಹರಡಿದೆ. ಮುಸ್ಲಿಮರನ್ನು ಅನಾವಶ್ಶಕವಾಗಿ ‘ದಾಳಿಕೋರ’ ಎಂಬ ಪಟ್ಟಿಯಿಂದ ತೆಗೆಯಲಾಗಿದ್ದು, ಹಿಂದೂ ಧರ್ಮವನ್ನು ಛೇಡನೆ ಮಾಡುವ ಗುಂಪು ತನ್ನನ್ನು ತಾನು ‘ಪ್ರಗತಿಶೀಲ’ ಎಂದು ಹಣೆಪಟ್ಟಿ ಹಚ್ಚಿಕೊಳ್ಳುತ್ತಿದೆ- ಎಂಬುದು ಅವರ ಆರೋಪ. ಇದನ್ನು ಆಕ್ರಮಣಕಾರಿಯಾಗಿ ನಿರೂಪಿಸುತ್ತಾ ‘ಧರ್ಮಶ್ರೀ’ ಕಾದಂಬರಿಯಲ್ಲಿನ ನಿಲುವನ್ನು ಇನ್ನಷ್ಟು ಉಗ್ರವಾಗಿ ಪ್ರತಿಪಾದಿಸಲು ಯತ್ನಿಸಿದ್ದಾರೆ. ‘ಧರ್ಮಶ್ರೀ’ ಕಾದಂಬರಿ ಕಡೇ ಪಕ್ಷ ಕಥಾಹಂದರ ವನ್ನಾದರೂ ಹೊಂದಿತ್ತು. ಆದರೆ ‘ಆವರಣ’ಕ್ಕೆ ಒಂದು ಕಥಾ ಹಂದರ ಇಲ್ಲ. ಇರುವ ನಾಲ್ಕೈದು ಪಾತ್ರಗಳು ಕಪ್ಪು, ಬಿಳುಪಾಗಿ ಇತಿಹಾಸದ ಬಗ್ಗೆ ಕಾದಂಬರಿಕಾರ ತಮ್ಮಬಾಯಲ್ಲಿ ಹೇಳಿಸಿದುದನ್ನು ನುಡಿಯುತ್ತವೆ. ಕೋರ್ಟ್‍ನಲ್ಲಿ ನಿಂತು ಒಬ್ಬರ ಪರವಾಗಿ ವಾದಿಸುವ ವಕೀಲರ ದನಿಗಳಂತೆ ಅವು ಕೇಳುತ್ತವೆ. ಇವೆಲ್ಲವು ಭೈರಪ್ಪನವರನ್ನು ಆವರಿಸುವ ಅವಿದ್ಯೆ ಎನ್ನಿಸಿಬಿಡುತ್ತದೆ.

‘ಆವರಣ’ವು ಭೈರಪ್ಪನವರ ಎರಡನೆಯ ಐತಿಹಾಸಿಕ ಕಾದಂಬರಿ ಎನ್ನಲಾಗಿದೆ. ಮೊದಲನೆಯದು ‘ಸಾರ್ಥ’. ಅದಕ್ಕೂ ಇದಕ್ಕೂ ಏನಾದರೂ ವ್ಯತ್ಯಾಸವಿದೆಯೇ ಎಂದು ಹುಡುಕಿದರೆ ಏನೂ ಇಲ್ಲ! ‘ಸಾರ್ಥ’ವು ಬೌದ್ಧರನ್ನು ಹೀನಾಯವಾಗಿ ಕಾಣುವಂತೆ ಮಾಡಿದರೆ, ‘ಆವರಣ’ವು ಮುಸ್ಲಿಮರ ಮೇಲೆ ಕಿಡಿ ಕಾರಿದೆ.

‘ಸಾರ್ಥ’ದ ನಾಯಕ ಶ್ರಮಣರ ವಿಧಿವಿಧಾನಗಳನ್ನು ವಿದ್ಯೆಯೆನ್ನು ಕಲಿಯಲೋಸುಗ ಅವರಲ್ಲಿ ಬಂದು ಸೇರಿಕೊಳ್ಳುತ್ತಾನೆ. ಅವರ ಆಚಾರ ವಿಚಾರಗಳನ್ನೆಲ್ಲ ಕಲಿತ ಮೇಲೆ ಆವನಿಗೆ ಅದರಲ್ಲಿ ಸಾಮರಸ್ಯವುಂಟಾಗುವುದಿಲ್ಲ. ಹಿಂದೂ ಧರ್ಮಕ್ಕೆ ಮರಳುವ ಸೂಚನೆಯೊಂದಿಗೆ ಕಾದಂಬರಿ ಮುಗಿಯುತ್ತದೆ. ‘ಆವರಣ’ ಕಾದಂಬರಿಯಲ್ಲಿ ಲಕ್ಷ್ಮಿ ಎನ್ನುವ ಹಿಂದೂ ವಿಚಾರವಾದಿ ಹೆಣ್ಣು ಅಮೀರ ಎಂಬ ಮುಸ್ಲಿಮನನ್ನು ಮದುವೆಯಾಗಿ ರಜಿಯಾ ಕುರೈಶಿ ಆಗುತ್ತಾಳೆ. ಇಸ್ಲಾಮಿನ ರೀತಿ, ರಿವಾಜು ಎಲ್ಲ ಕಂಡ ಮೇಲೆ ಅವಳಿಗೆ ಆ ಧರ್ಮ ಬೇಸರ ಬರುತ್ತದೆ. ಅಷ್ಟು ಹೊತ್ತಿಗೆ ಗಾಂಧೀವಾದಿ ತಂದೆ (ಗಾಂಧೀವಾದಿಯೆಂದರೂ ಅವರು ಹಿಂದೂ ವಾದಕ್ಕೆ ಹೆಚ್ಚು ಹತ್ತಿರವಿದ್ದುದು ತಿಳಿಯುತ್ತದೆ) ಸತ್ತು, ಅವರು ಮಾಡಿಕೊಂಡ ಇತಿಹಾಸದ ಪುಸ್ತಕಗಳ ಬಗೆಗಿನ ಟಿಪ್ಪಣಿಗಳು, ಸಂಗ್ರಹಿಸಿದ ಪುಸ್ತಕಗಳಿಗೆ ಮಾರುಹೋದ ರಜಿಯಾ ಅಪ್ಪನ ಮನೆಯಲ್ಲೇ ಉಳಿದು ಹಿಂದೂ ಧರ್ಮದಲ್ಲಿ ಉಳಿಯುವ ಮನಸು ಮಾಡುತ್ತಾಳೆ. ‘ಸಾರ್ಥ’ದಲ್ಲಿ ಶಂಕರಾರ್ಚಾಯರ ಕಥೆ ಉಪಕಥೆಯಾಗಿ ಬಂದರೆ, ಇಲ್ಲಿ ಹಿಂದೂ ರಾಜ ಮುಸ್ಲಿಮರ ಕೈಗೆ ಸೆರೆ ಸಿಕ್ಕು ನಪುಂಸಕನಾಗುವ ಕಥ ಉಪಕಥೆಯಾಗಿ ಬಳಕೆಯಾಗಿದೆ.

ಕಥಾಹಂದರ, ಪಾತ್ರಸೃಷ್ಟಿ, ತತ್ವ ಎಲ್ಲದರಲ್ಲೂ, ಒಂದೇ ಎನಿಸುವ ಈ ಎರಡೂ ಕಾದಂಬರಿಗಳು ಇತಿಹಾಸದ ಕಾಣ್ಕೆಗಿಂತ, ಕೃತಿಯ ಕರ್ತೃವಿನ ದೃಷ್ಟಿಕೋನವನ್ನೇ ಬಯಲು ಮಾಡುವಂತಿದೆ.

ಐತಿಹಾಸಿಕ ಕಾದಂಬರಿಗಳಲ್ಲಿ ವಿಶದಪಡಿಸಬೇಕಾದ ಸತ್ಯದ ಬಗ್ಗೆ ಭೈರಪ್ಪನವರು ದನಿ ಎತ್ತಿದ್ದಾರೆ. ಸತ್ಯವು, ಅವರ ಪ್ರಕಾರ, ಮಾಯೆ ಕವಿದ ಕಣ್ಣಿಗೆ ಗೋಚರಿಸುವುದಿಲ್ಲ : ‘ಸಿದ್ಧಾಂತ, ಚಳವಳಿ, ಆದರ್ಶಗಳಿಂದ ಬಿಡಿಸಿಕೊಂಡು ಭೂತದ ಘಟನೆಗಳನ್ನು ವಸ್ತುನಿಷ್ಠವಾಗಿ ನೋಡುವುದೇ ಇತಿಹಾಸವೆಂದು ಈಗ ಅನಿಸುತ್ತಿದೆ. ವರ್ತಮಾನದ ಆಲೋಚನೆಗಳು ಸೃಷ್ಟಿಸಿರುವ ಭ್ರಾಂತಿಗಳಿಂದ ಬಿಡಿಸಿಕೊಳ್ಳದೆ ಭೂತವು ಆರ್ಥವಾಗುವುದು ಹೇಗೆ? ಭೂತವು ತನ್ನ ಸತ್ಯವನ್ನು ಅದೆಷ್ಟು ಅಕ್ಷರಗಳಲ್ಲಿ, ಗ್ರಂಥಗಳಲ್ಲಿ, ಕುರುಹುಗಳಲ್ಲಿ, ಭಗ್ನಾವಶೇಷಗಳಲ್ಲಿ ಸ್ಪಷ್ಟವಾಗಿ ತೋರಿಸುತ್ತಿದೆ! ಆದರೆ ವರ್ತಮಾನವು ನಮ್ಮ ಕಣ್ಣುಗಳಿಗೆ ಕಾಮಾಲೆ ಬಡಿಸಿರುವಾಗ ಅವೆಲ್ಲ ತಿರುಚಿಕೊಂಡಿರುತ್ತವೆ. ಪ್ರಸಕ್ತ ಕಾಲದಲ್ಲಂತೂ ಇತಿಹಾಸಕಾರರು ಇತಿಹಾಸದ ವಸ್ತುವಿಗಿಂತ ಹೆಚ್ಚಾಗಿ ಪ್ರತಿಸ್ಪರ್ಧಿ ಇತಿಹಾಸಕಾರರೊಂದಿಗೆ ಹೋರಾಡಬೇಕಾಗಿದೆ” (ಪು. ೭೧-೭೨).

ಈ ಮಾತುಗಳನ್ನು ಸರಿಯಾಗಿ ಗಮನಿಸಬೇಕು. ಇಲ್ಲಿ ವಸ್ತುನಿಷ್ಠತೆಯ ಬಗ್ಗೆ, ಆಕರಗಳ ಬಗ್ಗೆ ಮಾತನಾಡುತ್ತಾರೆ. ಸತ್ಯ ಎನ್ನುವುದು ಆಧ್ಯಾತ್ಮಿಕ ನೆಲೆಗಟ್ಟಿನಲ್ಲಿ ನೋಡಲಾಗಿದ್ದು, ಭೌತವಾದಿ ದೃಷ್ಟಿಕೋನವನ್ನೂ ಪ್ರಸ್ತಾಪಿಸುತ್ತ ಆಕರಗಳ ಬಗ್ಗೆ ಹೇಳುವುದು ಗೊಂದಲ ಮೂಡಿಸುತ್ತದೆ. ಭೌತ ನಿಯಮಗಳ ಪ್ರಕಾರ ಸತ್ಯ ಸಾಪೇಕ್ಷ ವಾದುದು. ಕಾಲ ದೇಶಗಳಿಗೆ ತಕ್ಕುದಾಗಿ ಪುನರ್ ನಿರ್ಧರಣಗೊಳ್ಳುವ ಸಾಧ್ಯತೆಗಳಿರುವಂತದ್ದು. ಇತಿಹಾಸಕಾರ ಪ್ರೊ.ಎಸ್.ಶೆಟ್ಟರ್ ಆವರು ಸಂದರ್ಶನ ವೊಂದರಲ್ಲಿ ಹೇಳಿದಂತೆ, “ದಾಖಲೆಗಳೇ ಚರಿತ್ರೆಯಲ್ಲ, ವ್ಯಾಖ್ಯಾನಿಸಿದಾಗ ಮಾತ್ರ ಇತಿಹಾಸ ರೂಪು ಗೊಳ್ಳುವುದು. ಆಂದರೆ ದಾಖಲೆ ಮತ್ತು ಇತಿಹಾಸದ ನಡುವೆ ವ್ಯಾಖ್ಯಾನಕಾರನೊಬ್ಬನಿರುವನು ಎಂದರ್ಥ. ಇವನ ಮನಮೂಸೆಯಿಂದ ಹೊರಹೊಮ್ಮುವ ದಾಖಲೆಯು ಇತಿಹಾಸದಲ್ಲಿ ಹೊಸ ಸ್ವರೂಪವನ್ನು ಪಡೆದುಕೊಳ್ಳುವುದು. ಇದರಿಂದಾಗಿ ಇತಿಹಾಸದ ನಿರ್ಣಯಗಳು ವಿವಾದಾತ್ಮಕವಾಗುವುವು”. ಹೀಗಿರುವಾಗ ಇತಿಹಾಸ ಏಕರೂಪ ಶಿಲೆಯಲ್ಲ, ಅದಕ್ಕೆ ಬೇರೆ ಬೇರೆ ವ್ಯಾಖ್ಯಾನಗಳು ಸಾಧ್ಯವಿದೆ ಎಂದಾಗುತ್ತದೆ. ಅದು ತಾಳೆಗರಿ, ಶಾಸನ, ಪುಸ್ತಕಗಳಲ್ಲಿ ಅಡಗಿರುವ ದಾಖಲೆಗಳ ವಿವರ ಮಾತ್ರ ಅಲ್ಲ. ಅವೆಲ್ಲವನ್ನು ಓದುವವನ ಕಾಲ ದೇಶಗಳ ಪರಿಮಿತಿಗೆ, ಪ್ರಭಾವಕ್ಕೆ ಒಳಪಡುವ ಸಾಧ್ಯತೆಗಳಿವೆ. ಹೀಗಾಗಿ ಚರಿತ್ರೆ ಎನ್ನುವುದು ‘ಕಟ್ಟುವಿಕೆ’; ರಚನೆಯಾಗುತ್ತಲೇ ಇರುವ ಸಂಗತಿ. ಇವನ್ನು ‘ಸತ್ಯ’ ಎನ್ನುವುದಾಗಲಿ, ಆತ್ಯಂತಿಕ ದರ್‍ಶನವೆಂದಾಗಲಿ ಕರೆಯಲಾಗದು. ವೈಜ್ಞಾನಿಕ ದೃಷ್ಟಿಕೋನದ ಸಾಧ್ಯತೆಯೇ ಇಲ್ಲಿ ಇಲ್ಲವಾಗುತ್ತದೆ. ಭೈರಪ್ಪನವರಿಗೆ ಇತಿಹಾಸ ಅನಾದಿಯಾಗಿ ತೋರುತ್ತದೆಯೇ ಹೊರತು, ಅದರ ಗತಿಶೀಲತೆ ಕಾಣುವುದಿಲ್ಲ.

ಭಾರತದ ಚರಿತ್ರೆಯನ್ನು ಅವಲೋಕಿಸಿದಾಗ ಬ್ರಿಟಿಷ್ ವಸಾಹತುಶಾಹಿಯ ದೃಷ್ಟಿಕೋನದಿಂದ ಚರಿತ್ರೆಯು ರಚನೆಯಾಗಿದ್ದು ಎಂದು ತಿಳಿಯುತ್ತದೆ. ನಂತರ ಇತಿಹಾಸದ ಪುನರ್ರಚನೆಯ ಸಂದರ್ಭವೂ ಬಂದಿತು. ವಸಾಹತುಶಾಹೀ ದೃಷ್ಟಿಕೋನಗಳಿಂದ ಬಿಡಿಸಿಕೊಂಡು ಚರಿತ್ರೆಯನ್ನು ಕಟ್ಟಬೇಕಾದ ತುರ್ತು ಸಮಕಾಲೀನ ಸಮಾಜಕ್ಕೆ ಆಗತ್ಯವೆನಿಸಿತು. ವಸಾಹತುಶಾಹಿ ನೋಡುವ ಕ್ರಮದಲ್ಲಿ ತೆಗಳಿಕೆ, ಹೊಗಳಿಕೆಗೆ ಅಂತಹ ವ್ಯತ್ಯಾಸಗಳೇನು ಇಲ್ಲ. ಇದರಿಂದ ಮುಕ್ತವಾಗಿ ಚರಿತ್ರೆ ಕಟ್ಟಬೇಕಾದ ಜವಾಬ್ದಾರಿ ಇದ್ದಿತು. ಅಂಬೇಡ್ಕರ್‌ರಂತಹ ಚಿಂತಕರು ಇತಿಹಾಸದ ಆಕರಗಳನ್ನು ಶೋಧಿಸಿ ಸಂವಿಧಾನದ ಚೌಕಟ್ಟುಗಳನ್ನು ರೂಪಿಸಬೇಕಾಯಿತು. ಆದರೆ ಹಿಂದೂವಾದವು ಉತ್ಕರ್ಷಗೊಳ್ಳುತ್ತ ಬಂದಂತೆಲ್ಲ ಆಕಾಡೆಮಿಕ್ ದೃಷ್ಟಿಕೋನವನ್ನು ಬದಿಗೊತ್ತಿ ಹಿಂದುತ್ವದ ಆಧಾರದ ಮೇಲೆ ಚರಿತ್ರೆಯನ್ನು ಕಟ್ಟಬಯಸಿತು. ಅದರಲ್ಲೂ ಗಾಂಧೀ ಪತನಾನಂತರ ಬೆಳೆಯುತ್ತ ಬಂದಂತ ಹಿಂದುತ್ವವಾದವು ಇತ್ತೀಚಿನ ದಿನಗಳಲ್ಲಿ ಜನಮಾನ್ಯತೆಯನ್ನು ಪಡೆಯುವ ಆಕಾಂಕ್ಷೆಯಲ್ಲಿ ಇತಿಹಾಸದ ರಚನೆ ಮಾಡತೊಡಗಿತು. ಜನಾಂಗೀಯವಾದವನ್ನು ಪ್ರತಿಪಾದಿಸುತ್ತ, ದ್ವೇಷವನ್ನು ತತ್ವವಾಗಿಸಿಕೊಂಡ ಹಿಟ್ಲರ್‌ನ ನಾಜೀ ಪಂಥದಂತೆ ರಾಜಕೀಯ ಸ್ವರೂಪವೂ ಹಿಂದುತ್ವಕ್ಕೆ ಲಭಿಸತೊಡಗಿದಾಗ, ಇತಿಹಾಸವೇ ಪ್ರಭುತ್ವದ ನಿರ್ಮಾಣ ಶಕ್ತಿಯಾಯಿತು. ಆರ್ಯರು ಆಕ್ರಮಣಕಾರರು ಎಂಬುದನ್ನು ಮರೆಸಿ, ಹತ್ತನೆಯ ಶತಮಾನದ ನಂತರ ಬಂದ ಮುಸ್ಲಿಮರು ಮಾತ್ರ ಆಕ್ರಮಣಕಾರರು ಎಂಬಂತೆ ಅನ್ಯಗೊಳಿಸುವ ಪ್ರಕ್ರಿಯೆ ಶುರುವಾಯಿತು. ಭೈರಪ್ಪನವರ ‘ಆವರಣ’ವು ಚರ್ಚಿಸುವುದು ಇದನ್ನೇ : “ತಮ್ಮ ಸಾಮ್ರಾಜ್ಯವನ್ನು ಸಮರ್‍ಥಿಸಿಕೊಳ್ಳಲು ಆರ್ಯರೂ ದಾಳಿಕೋರರೇ ಎಂಬ ಸಿದ್ದಾಂತವನ್ನು ಬ್ರಿಟಿಷರು ಆರಂಭಿಸಿದರು. ಆರ್ಯರದು ದ್ರಾವಿಡರದು ಎಂದು ಪ್ರತ್ಯೇಕದಾಗಿ ವಿಂಗಡಿಸಬಹುದಾದ ನಾಗರಿಕತೆಯು ಭಾರತದಲ್ಲಿಲ್ಲ” (ಪು. ೨೩೫)”. “… ಧರ್‍ಮಶಾಸ್ತ್ರಕಾರರನ್ನು ಅತಿ ಪ್ರಾಚೀನ ಕಾಲದ ವೇದೋಪನಿಷತ್ತುಗಳನ್ನು ಬೈಯುವ ಸುಳ್ಳು ಇತಿಹಾಸವನ್ನು ಪ್ರಚಾರ ಮಾಡುವ ಬದಲು ಒಂದು ಸಾವಿರ ವರ್‍ಷದಿಂದ ಈ ದೇಶವನ್ನು ನಿರ್ವೀರ್ಯಗೊಳಿಸುತ್ತ ಬಂದವರನ್ನೇಕೆ ಹೆಸರಿಸುವುದಿಲ್ಲ?” (ಪು. ೨೩೪) ಇವನ್ನು ಇಲ್ಲಿ ಗಮನಿಸಬಹುದು.

ಇಲ್ಲಿ ಇತಿಹಾಸಜ್ಞ ರಾಜಾರಾಂ ಹೆಗಡೆಯವರು ‘ಹಿಸ್ಟರಿ’ಯ ಬಗ್ಗೆ ಕೊಡುವ ವ್ಯಾಖ್ಯಾನವನ್ನು ಗಮನಿಸುವುದಾದರೆ, “ವಸಾಹತುಶಾಹಿಯ ನಂತರ ನಾವು ಅಳವಡಿಸಿಕೊಂಡ ಪಾಶ್ಚಾತ್ಯ ‘ಹಿಸ್ಟರಿ’ ಸಂಪ್ರದಾಯದಲ್ಲಿ ‘ಹಿಸ್ಟರಿ’ ಎನ್ನುವುದು ವರ್ತಮಾನದ ಕಾರ್ಯಕ್ರಮವಾಗಿ ವಸಾಹತುಗಳಲ್ಲಿ ಅಸ್ತಿತ್ವಕ್ಕೆ ಬಂದಿದೆ. ಇತಿಹಾಸ ಕಾಲದಲ್ಲಿ ಮನುಷ್ಯನ ವಿಕಾಸದ ವಿಭಿನ್ನ ಹಂತಗಳಿದ್ದು ವರ್ತಮಾನದಲ್ಲಿ ನಿಂತು ನೋಡಿದಾಗ ಅವೆಲ್ಲ ತಿದ್ದುಪಡಿಯಾದ, ಆಗಬೇಕಾದ ಕಚ್ಚಾಪ್ರತಿಗಳು ಎಂಬ ಗ್ರಹಿಕೆ ಈ ‘ಹಿಸ್ಟರಿ’ಗೆ ಇದೆ. ವಸಾಹತು ಭಾರತವೇ ಈ ರೀತಿ ತಿದ್ದುಪಡಿಗೆ ಕಾಯುತ್ತಿರುವ ಗತಕಾಲವಾಗಿ ಕೂಡ ಪಾಶ್ಚಾತ್ಯರಲ್ಲಿ ಒಂದು ಸಂಪ್ರದಾಯದ ಇತಿಹಾಸಕಾರರಿಗೆ ಕಂಡಿದೆ…. ಇವೆಲ್ಲ ಗ್ರಹಿಕೆಗಳು ರಾಜಕೀಯದ ಕಾರ್ಯಕ್ರಮಗಳಾಗುತ್ತವೆ. ಹಾಗೂ ಪ್ರಭುತ್ವವನ್ನು ನಿರ್‍ಮಾಣ ಮಾಡುವ ಶಕ್ತಿಯಾಗುತ್ತವೆ.” ಪುನರ್ವಿಂಗಡನೆಯು ಹೀಗೆ ಪ್ರಭುತ್ವದ ನಿರ್ಮಾಣ ಹಂತದಲ್ಲಿ ಬಲವಾಗುವ ಪ್ರಕ್ರಿಯೆಯಲ್ಲಿ ತೊಡಗಿರುವುದನ್ನು ಹಿಂದುತ್ವವಾದವು ತೋರುತ್ತಿದೆ. ಆದ್ದರಿಂದಲೇ ಭೈರಪ್ಪ ಇತಿಹಾಸದ ‘ದರ್ಶನ’ಕ್ಕೆ ಹಂಬಲಿಸುವುದು. ಇಲ್ಲಿ ಪ್ರಜಾಪ್ರಭುತ್ವದ ಅಂಶಗಳೇ ಕಾಣೆಯಾಗುತ್ತವೆ. ಏಕಮುಖ ನಿಷ್ಠೆ ತತ್ವಕ್ಕೆ ಬದ್ಧರಾಗಿರುವುದನ್ನು ಸೂಚಿಸುತ್ತ ಬೇರೆ ದೃಷ್ಟಿಕೋನಗಳ ಬಗ್ಗೆ ಕುರುಡಾಗಿ ಮಾಡುತ್ತದೆ. ಸಮಕಾಲೀನ ಉದಾಹರಣೆಯನ್ನು ತೆಗೆದುಕೊಳ್ಳುವುದಾದರೆ, ಹಳೆಯ ಮಾತೃಭೂಮಿಗೆ ಆಶಿಸಿ, ವಾಪಾಸು ಬಂದ ಇಸ್ರೇಲಿಗಳು ದೇಶ ಕಟ್ಟಿದ ಮೇಲೆ ನಡೆದ ಜನಾಂಗೀಯ ಕಲಹಗಳಲ್ಲಿ ತೊಡಗಿಕೊಂಡು ತಮ್ಮ ಹಳೆಯ ‘ಭೂತ’ವನ್ನು ಸರಿಪಡಿಸಿಕೊಳ್ಳುವ ಸಾಹಸದಲ್ಲಿದ್ದಾರೆ. ‘ಆವರಣ’ದಲ್ಲಿ ಭೈರಪ್ಪ ಅನುಸರಿಸಲೆತ್ನಿಸುವುದು ಇದೇ ತಂತ್ರ : ಇತಿಹಾಸವನ್ನು ‘ಹಿಸ್ಟರಿ’ಯಾಗಿ ರೂಪಿಸಿಕೊಳ್ಳುವ ತಂತ್ರ. ಅಂದು ಆದ ಅನ್ಯಾಯಗಳಿಗೆ ಇಂದು ನ್ಯಾಯ ಕೇಳುವ ತೋಳ ಕುರಿಮರಿಯ ಜಾಣ್ಮೆಯ ತಂತ್ರ.

‘ಆವರಣ’ದಲ್ಲಿ ಮುಸ್ಲಿಮರು ಈ ದೇಶಕ್ಕೆ ಮಾಡಿರುವ ಅನ್ಯಾಯಗಳು ರೋಚಕವಾಗಿ ವಿವರಿಸಲಾಗಿದೆ. ಅವರು ವಿಗ್ರಹಭಂಜಕರು, ಕ್ರೂರಿಗಳು, ಲೈಂಗಿಕ ವಿಕೃತಿಗಳಲ್ಲಿ ನಿರತರಾದವರು ಎಂಬಂತೆ ಅವರನ್ನು ಚಿತ್ರಿಸಲಾಗಿದೆ. ಲಕ್ಷ್ಮಿ ಅಮೀರನನ್ನು ಮದುವೆಯಾಗುವುದಾಗಿ ಹೇಳಿದಾಗ, ಅವಳ ತಂದೆ ಹೇಳುವ ಮಾತು ನೋಡಬೇಕು : “… ನಿನ್ನ ಹೊಟ್ಟೇಲಿ ಹುಟ್ಟುವ ಮಗುವೋ ಅವರ ಮಗುವೋ ಯಾವುದೋ ಒಂದು ತಲೆಮಾರಿನ ಮಗುವು ನಮ್ಮ ದೇವಸ್ಥಾನಗಳನ್ನು ಒಡೆದು ನಾಶ ಮಾಡುತ್ತೆ. ಅದರ ಪಾಪ ನಿನಗೆ ತಟ್ಟುತ್ತೆ… ಒಡೆಯಬೇಕು ಎನ್ನುವಂತೆ ಅವರ ಧರ್ಮವೇ ಹೇಳುವಾಗ ಅವರು ಅದರಂತೆ ನಡೆಯಲೇಬೇಕಲ್ಲವೆ? ಆ ಧರ್ಮ ಇವತ್ತಿಗೂ ಬದಲಾಗಿಲ್ಲ…..” (ಪು. ೧೯).

ಇನ್ನು ಲಕ್ಷ್ಮಿ ತನ್ನ ಆಪ್ಪ ಮಾಡಿಕೊಂಡ ಇತಿಹಾಸದ ಟಿಪ್ಪಣಿಗಳನ್ನು ನೋಡಿ, ಅವರು ಸಂಗ್ರಹಿಸಿದ ಇತಿಹಾಸದ ಪುಸ್ತಕಗಳನ್ನು ಓದಿ ಅಧ್ಯಯನ ಮಾಡುತ್ತ ಅದೇ ಸತ್ಯ ಎನ್ನುವ ತೀರ್ಮಾನಕ್ಕೆ ಬರುತ್ತಾಳೆ. ಕಾಶಿಗೆ ಬಂದಾಗ ಇಡೀ ಇತಿಹಾಸವೇ ಭಿನ್ನವಾಗಿದ್ದಂತೆ ಕಾಣುತ್ತದೆ. ಒಬ್ಬ ಬ್ರಾಹ್ಮಣನನ್ನು ಮಾತನಾಡಿಸಿದರೆ, ಆವನು ಮುಸ್ಲಿಮರು ಬಾಯಲ್ಲಿ ಎಂಜಲು ಹಾಕಿ ಜಾತಿ ಕೆಡಿಸುತ್ತಿದ್ದ ಸಂಗತಿ ಹೇಳುತ್ತಾನೆ. ಇಂತಹ ದನಿಗಳನ್ನು ಗುರುತಿಸುವ ಪ್ರಮೇಯವೂ ಇತಿಹಾಸಕ್ಕಿದೆ ಎಂದು ಅವಳು ತೀರ್ಮಾನಿಸುತ್ತಾಳೆ.

ಬೇರೆ ಎಲ್ಲ ರಾಜರಂತೆ ಮುಸ್ಲಿಂ ದೊರೆಗಳಿಗೂ ಧರ್ಮವು ರಾಜಕಾರಣದ ಭಾಗವಾಗಿರಬಹುದು. ಗೆದ್ದ ರಾಜರ ಧರ್ಮವು ತನ್ನಿಂತಾನೇ ಸೋತವರ ಮೇಲೆ ಹೇರಲ್ಪಡುತ್ತಿದ್ದುದು ಇತಿಹಾಸದಲ್ಲಿ ಕಾಣುತ್ತೇವೆ. ಇದು ಲೌಕಿಕ ಅನುಕೂಲಗಳ ಪ್ರಶ್ನೆಯೇ ಹೊರತಾಗಿ ಅಲೌಕಿಕ ಧರ್ಮದ್ದಲ್ಲ. ರಾಜಾರಾಂ ಹೆಗಡೆ ಪ್ರತಿಪಾದಿಸುವ ಲೌಕಿಕ ರಾಜಕಾರಣದ ನಿಯಮ ಇದೇ ಆಗಿದೆ. ಮತಧರ್ಮಗಳ ‘ಥಿಯೋಕ್ರಾಟಿಕ್’ ಪ್ರಭುತ್ವ ಭಾರತದಂತಹ ಧಾರ್‍ಮಿಕ ಬಹುತ್ವ, ಜಾತಿ ಪದ್ದತಿಗಳೆಲ್ಲ ಒಟ್ಟಾಗಿ ಕೆಲಸ ಮಾಡುವ ದೇಶಕ್ಕೆ ಸಾಧ್ಯವಿಲ್ಲ. ಒಮ್ಮತದ ಧಾರ್‍ಮಿಕ ನೀತಿ ಸಾಧ್ಯವಿಲ್ಲದ ಕಾರಣ, ಆಯಾ ಸಂದರ್ಭಕ್ಕನುಗುಣವಾಗಿ ರಾಜಕಾರಣದ ನೀತಿಯಾಗಿ ಅದು ಕಾಣಿಸಿಕೊಳ್ಳುತ್ತಿತ್ತು. ರಾಣಿ ಎಲಿಜಬೆತ್ ಕಾಲದ ಇಂಗ್ಲೆಂಡಿನಲ್ಲಿ ಕ್ಯಾಥೋಲಿಕ್ ಮತ್ತು ಪ್ರಾಟಸ್ಟಂಟ್‍ರಿಗು ಅಂತರ್‌ಕಲಹ ಇತ್ತು. ರಾಣಿ ಯಾರ ಪರವನ್ನೂ ವಹಿಸದೆ, ಯಾರ ವಿರೋಧವನ್ನೂ ಕಟ್ಟಿಕೊಳ್ಳದೆ ಉಳಿದಿದ್ದರಿಂದ ಸುಭಿಕ್ಷವಾಗಿ ದೇಶ ಆಳಿದಳು. ಇಲ್ಲಿ ಮಾಸ್ತಿಯವರ ‘ಪಂಡಿತನ ಮರಣಶಾಸನ’ ಕತೆಯನ್ನು ನೆನಪು ಮಾಡಿಕೊಳ್ಳುವುದಾದರೆ, ಒಡೆಯರ್ ಕಾಲದಲ್ಲಿ ನಡೆದ ವ್ಯಾಜ್ಯವೊಂದನ್ನು ಮಾಸ್ತಿ ಬಗೆಹರಿಸುದ ರೀತಿ ಪ್ರಜ್ಞಾವಂತಿಕೆಯಿಂದ ಕೂಡಿದೆ ಎನ್ನಬಹುದು. ಘೋರಿ, ಘಜ್ನಿಗಳ ಕಾಲದಲ್ಲಿ ಲೂಟಿಯ ಉದ್ದೇಶವಿತ್ತು. ಅನಂತರ ಇಲ್ಲೇನೆಲೆಯೂರಿದ ಮುಸ್ಲಿಂ ದೊರೆಗಳು ತಮ್ಮ ಲೌಕಿಕ ರಾಜಕಾರಣದ ಜೊತೆಗೆ ಧರ್ಮದ ಪ್ರಚಾರವನ್ನೂ ಮಾಡಿಕೊಂಡಿದ್ದರು. ಮುಂದೆ ಈ ರೀತಿಯನ್ನೇ, ಬ್ರಿಟಿಷ್ ಸಾಮ್ರಾಜ್ಯಶಾಹಿಯೂ ಅನುಸರಿಸಿತು.

ಕಾದಂಬರಿಯಲ್ಲಿ ಮುಸ್ಲಿಂ ಸೈನಿಕರ ಲೈಂಗಿಕ ವಿಕೃತಿಗಳ ಬಗ್ಗೆ ಬೆಳಕು ಚೆಲ್ಲಲು ಹಿಂದೂ ರಾಜಕುಮಾರನ ಉಪಕಥೆಯನ್ನು ಪೋಣಿಸಲಾಗಿದೆ. ಸಲಿಂಗಕಾಮ, ಲೈಂಗಿಕ ವಿಕೃತಿಗಳು, ಹಿಂದೂ ರಾಜರನ್ನು ನಪುಂಸಕರನ್ನಾಗಿಸುವ ಕ್ರಿಯೆಗಳು ಇವೆಲ್ಲವನ್ನು ವಿವರವಾಗಿ ಬರೆಯಲಾಗಿದೆ. ಆದರೆ ಚರಿತ್ರೆಯ ಅವಲೋಕನ ಮಾಡಿದರೆ ಸೈನಿಕರ ಲೈಂಗಿಕ ವಿಕೃತಿಗಳು ಸರ್ವೇಸಾಮಾನ್ಯ ಎನ್ನುವಂತಿದೆ. ಲೋಹಿಯಾ ಸೆರೆಮನೆಯಲ್ಲಿದ್ದಾಗ ಕಾಣುವಂತೆ, ಸೈನಿಕರು ಎಳೆಜಿಂಕೆಗಳನ್ನು ಲೈಂಗಿಕ ತೃಷೆಗೆ ಬಳಸಿಕೂಳ್ಳುತ್ತಿದ್ದರಂತೆ. ಇತ್ತೀಚಿನ ಸಂಗತಿಗಳನ್ನು ಇಲ್ಲಿ ಪ್ರಸ್ತಾಪಿಸುವುದಾದರೆ, ಮಣಿಪುರಿ ಹೆಂಗಸರ ಮೇಲಿನ ಸಾಲು ಆತ್ಯಾಚಾರ, ವೀರಪ್ಪನ್ ಹಿಡಿಯಲು ಬಂದ ಸೈನಿಕರು ನಡೆಸಿದ ಅತ್ಯಾಚಾರಗಳು ಲೈಂಗಿಕ ವಿಕೃತಿಗೆ ಉದಾಹರಣೆಗಳು. ಭೈರಪ್ಪನವರು ನೋಡುವಂತೆ ಅದು ಒಂದು ಸಮುದಾಯದ ಸೈನಿಕರ ಕೃತ್ಯಗಳು ಮಾತ್ರವಲ್ಲ.

ಪ್ರಗತಿಪರತೆಯೆನ್ನುವುದು ಏನು ಎಂಬುದನ್ನು ಭೈರಪ್ಪ ಪ್ರಶ್ನಿಸುವ ಮೂಲಕ ಒಂದು ಗುಂಪಿನ ದೃಷ್ಟಿಕೋನವನ್ನು ಇನ್ನಷ್ಟು ಪ್ರಜ್ವಲಿಸುವಂತೆ ಮಾಡುತ್ತಾರೆ. ಇದೂ ಒಂದು ಅವಿದ್ಯೆಯೆನ್ನಬಹುದು. ಪಾತ್ರಗಳು ಅಣಕು ಪಾತ್ರಗಳಾಗಿಸುವ ಮೂಲಕ ಪ್ರಗತಿಪರತೆ ಎನ್ನುವುದು ಸುಳ್ಳಿನ ಮೇಲೆ ನಿಂತಿದೆ ಎಂದು ತೋರಿಸಲು ಹೊರಡುತ್ತಾರೆ.

ಲಕ್ಷ್ಮಿ ಈ ಕಾದಂಬರಿಯ ನಾಯಕಿ ಅಂತರಧರ್ಮೀಯ ಮದುವೆ ಮಾಡಿಕೊಂಡು ಸಫಲಗೊಳ್ಳದೇ ವಾಪಸು ಇಂದೂ ಧರ್ಮಕ್ಕೆ ಹೋಗುತ್ತಾಳೆ. ಶಾಸ್ತ್ರೀಯ ಪಾತ್ರವೂ ಅಷ್ಟೇ. ಅಂತರ್ಧಮೀಯ ಮದುವೆಯಾಗಿ ಹಿಪಾಕ್ರಸಿಯಲ್ಲಿ ಬದುಕುವ ಪಾತ್ರ ಅದು. ಶಾಸ್ತ್ರಿಯ ತಾಯಿ ಸತ್ತಾಗ ತಲೆ ಬೋಳಿಸಿಕೊಂಡು, ಆದಕ್ಕೆ ಬೇರೆ ಸುಳ್ಳು ಹೇಳುವ ಶಾಸ್ತ್ರಿ ಪೂರ್ಣ ಪ್ರಮಾಣದ ವಿಚಾರವಾದಿ ಅಲ್ಲ ಎನ್ನುವುದು ವಿಶದಗೊಳ್ಳುತ್ತದೆ. ಆದರೆ ಭೈರಪ್ಪ ಇವರನ್ನು ಹುಸಿ ಎಂದು ತೊರಿಸುವಲ್ಲಿ ಯಶಸ್ವಿಯಾದರೂ, ಅವರು ಒಪ್ಪುವ ಹಿಂದೂ ಧರ್ಮದಲ್ಲಿ ಕೆಲವು ಜಾತೀಯ ಆಚರಣೆಗಳಿವೆ. ವರ್ಣಾಶ್ರಮ, ವರ್ಗಗಳ ತಾರತಮ್ಯ ಹಿಂದೂ ಧರ್ಮ ಮುಕ್ತವಾಗಿಲ್ಲ ಎನ್ನುವುದು ಲಕ್ಷ್ಮಿಯ ಮನೆಯ ಕೆಲಸದವರು ಅವಳನ್ನು ಹಿಂದೂ ಆದ ಮೇಲೆ ಸ್ವೀಕರಿಸುವುದರಿಂದ ತಿಳಿಯುತ್ತದೆ. ಶಾಸ್ತ್ರಿಗಳ ಶುದ್ಧಿ, ಪ್ರಾಯಶ್ಚಿತ್ತ ಕಾರ್ಯಕ್ರಮಗಳನ್ನು ಕಾದಂಬರಿಯ ಆವರಣದಲ್ಲಿ ಅಷ್ಟು ಸುಲಭವಾಗಿ ಒಪ್ಪಿಕೊಳ್ಳಲಾಗುವುದಿಲ್ಲ. ಹೀಗೆ ಹಿಂದೂತ್ವದ ಮಾಯೆ ಭೈರಪ್ಪನವರನ್ನು ಆವರಿಸುವುದರಿಂದ ಅವರು ಪ್ರಗತಿಶೀಲತೆಯನ್ನು ಅವಿದ್ಯೆ ಎಂದು ಕರೆಯುತ್ತಾರೆ ಎಂದು ತಿಳಿಯಬೇಕಾಗಿದೆ.

ಕಲಾಕೃತಿಯೊಂದು ಬಹುಮುಖಿಯಾದ ಚರ್ಚೆಗೆ ತೆರೆದುಕೊಳ್ಳುವಂತಿರಬೇಕು. ಅದು ನಮ್ಮನ್ನು ರಂಜಿಸುತ್ತಲೇ, ಸೂಕ್ಷ್ಮವಾಗಿ ಸಂವೇದನೆಗಳನ್ನು ಜಾಗೃತಗೊಳಿಸಬೇಕು. ‘ಆವರಣ’ವು ಅಗ್ಗದ ರಂಜನೆಯನ್ನೇ ಪ್ರಧಾನವಾಗಿರಿಸಿಕೊಂಡಿದೆ. ಈ ಕಾದಂಬರಿಗೊಂದು ನಿರ್ದಿಷ್ಟ ‘ಪ್ಲಾಟ್’ ಎಂಬುದಿಲ್ಲ. ಸಡಿಲ ನಿರೂಪಣೆ, ಉದ್ದುದ್ದ ಭಾಷಣಗಳು, ಅಣಕಗೊಂಡ ಪಾತ್ರಗಳು, ಕಪ್ಪುಬಿಳುಪಿನಂತೆ ಇತಿಹಾಸವನ್ನು ವಿವೇಚಿಸುವ ಕ್ರಮ, ಲೈಂಗಿಕ ವಿಕೃತಿಗಳನ್ನು ವರ್ಣಿಸುವ ಮೂಲಕ ಕೀಳು ಆಭಿರುಚಿಯ ಪುಸ್ತಕವನ್ನು ಭೈರಪ್ಪನವರಿಂದ ನಿರೀಕ್ಷಿಸಿದಂತಾಗಿದೆ. ಇದೊಂದು `tract’ ಧಾರ್‍ಮಿಕ ಪ್ರಚಾರ ಕೃತಿ) ಆಗಿದ್ದು, ಸಮಕಾಲೀನ ಯುಗದಲ್ಲಿ ಅಭಿರುಚಿ ಹೀನತೆಯನ್ನು ಕೆಡಿಸುವಂಥದ್ದಾಗಿದೆ. ಅತ್ತ ಸಾಹಿತ್ಯವೂ ಅಲ್ಲ, ಇತ್ತ ಇತಿಹಾಸವೂ ಅಲ್ಲ ಎಂಬಂತಾಗಿ, ಪೂರ್ವಾಗ್ರಹ ಮತ್ತು ವಿಕೃತಿಗಳೇ ಇಲ್ಲಿ ಮೆರೆದಿವೆ.
(ಸಂಕಲನ)
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಾರ ಬಾರ ದೇವ
Next post ಮಾದಿಗರ ಹುಡುಗಿ

ಸಣ್ಣ ಕತೆ

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

cheap jordans|wholesale air max|wholesale jordans|wholesale jewelry|wholesale jerseys