ಬಾರ ಬಾರ ದೇವ ಬಾರ
ತಾರ ತಾರ ಬೆಳಕ ತಾರ
ಬಾಳ ತಮವ ಕಳೆಯ ಬಾರ
ತಿಳಿವ ದೀಪ ಬೆಳಗು ಬಾರ || ಪ ||

ದೇಶದ ಮನೆ ಕಸುವು ತುಂಬಿ
ವಾಸನೆಯಲಿ ಮಲಿನ
ವಾಸ ಮಾಡುವಂತೆ ಮಾಡೊ
ಶುದ್ಧಗೊಳಿಸಿ ಜನಮನ || ೧ ||

ಅಂಧ ಶ್ರದ್ಧೆ ಕೂಪಗಳಲಿ
ಕೊಳೆಯುವವರ ನೋಡಿದೊ
ಮುಂದುಗಾಂಬ ತಿಳಿವನಿತ್ತು
ಮೇಲಕೆತ್ತು ಹೇ ಪ್ರಭೋ || ೨ ||

ಹದ್ದು ನಾಯಿನರಿಗಳೆಲ್ಲ
ಹಸುಗೂಸನು ತಿನ್ನುತಿಹವು
ಎದ್ದು ಬಾರೊ ತಾಯಿಯಂತೆ
ಅಜ್ಞ ಜನರ ಕಾಯಲು || ೩ ||

ಜಾತಿ ಮತದ ಗೋಡೆಗಳಲಿ
ಮೇಲುಕೀಳು ಜಗಳವಾಡಿ
ನೀತಿ ನ್ಯಾಯ ಕಳೆದ ಜನರ
ಕೋತಿ ಮನವ ತಿದ್ದಲು || ೪ ||
*****