ಎಲ್ಲಾದರು ಒಂದು ದಿನ ಎಂತಾದರು ಒಂದು ದಿನ
ಕಾಣದಿರುವೆನೇ ನಾ ನಿನ್ನನು
ಹಾಡುತಿರಬಹುದು ನೀ
ಮಾತಾಡುತಿರಬಹುದು ನೀ
ಸುಮ್ಮನೆ ಕುಳಿತಿರಬಹುದು ನೀ
ಕುಣಿಯುತಿರಬಹುದು ನೀ
ಬಸವಳಿದಿರಬಹುದು
ಮುತ್ತಿನಂಥ ಬೆವರ ಹನಿ ನಿನ್ನ
ಹಣೆ ಮೇಲಿರಬಹುದು-ಅಲ್ಲಿ
ಕುರುಳೊಂದು ಗಾಳಿಗೆ ಸುಮ್ಮನೆ ಸುಳಿಯುತಿರಬಹುದು
ತುಟಿಗಳ ಮೇಲೊಂದು
ಕಿರುನಗೆಯಿರಬಹುದು
ಅಥವಾ ಯಾವುದೊ ಮ್ಲಾನತೆ ಮುಖದಲಿ
ಮನೆ ಮಾಡಿರಬಹುದು
ಬೀದಿಯಲಿರಬಹುದು ನೀ
ಉದ್ಯಾನದಲಿರಬಹುದು
ನದೀ ತೀರದಲ್ಲಿರಬಹುದು ನೀ
ತೀರದ ಹಾದಿಯಲಿರಬಹುದು
ಒಬ್ಬಂಟಿಯಾಗಿರಬಹುದು ಇಲ್ಲವೆ
ಮಂದಿಯ ನಡುವಿರಬಹುದು
ನಾ ನಡೆದಷ್ಟೂ ನೀ ಮುಂದಿರಬಹುದು ಅಥವಾ
ಹಿಂದೆಯೆ ಉಳಿದಿರಬಹುದು
ಕಂಡೂ ಕಾಣದಂತಿರಬಹುದು
ಕಂಡರು ಗುರುತು ಸಿಗದಿರಬಹುದು
ಸಿಕ್ಕಿದರೂ ನುಡಿ ಗಂಟಲಲೇ ನಿಂತಿರಬಹುದು
ಮಾತಿಗಿಂತಲು ಮೌನವೆ ಸುಖವೆನಿಸಬಹುದು
ದೈವವೆ ಎದುರಿಗೆ ಬಂದಂತಿರಬಹುದು
ಚರಾಚರಗಳೊಂದು ಕ್ಷಣ ನಿಲ್ಲಬಹುದು
ಅಮರವೆನಿಸಬಹುದು ಜೀವನ
ಮಧುರ ಅನಿಸಬಹುದು ಮರಣ
*****
ಪರಿಣಾಮಕಾರಿಯಾದ ಕವನ.
ಪ್ರತಿ ನುಡಿಯ ಕೊನೆ ಸಾಲು ಬಹುದು ಎಂದು ಕೊನೆಗೊಳ್ಳುತ್ತಿದ್ದರೂ, ಸಂದೇಹಾಸ್ಪದ ಎನಿಸಿತ್ತಿದ್ದರೂ. ಅದ೪ಒಳಗಿನ ಆಶಾಭಾವನೆಯ ಗಮನಿಸಿ.
ಬೆಳೆಯುತ್ತ ಬೆಳೆಸುತ್ತಬಸಾಗುವ ಕವಿತೆ.🙏🙏